ಫ್ರೆಂಚ್ ನ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರೆಂಚ್ ನ್ಯಾಯ - ಫ್ರಾನ್ಸ್ ದೇಶದ ನ್ಯಾಯ ಪದ್ಧತಿಯಾಗಿದ್ದು 19ನೆಯ ಶತಮಾನದ ಆರಂಭದಲ್ಲಿ ಚಕ್ರವರ್ತಿ ನೆಪೋಲಿಯನ್ ಜಾರಿಗೆ ತಂದ ಹಲವಾರು ಸಂಹಿತೆಗಳನ್ನು ಇದು ಆಧರಿಸಿದೆ. ಇವುಗಳಿಗೆ ಆಧಾರವಾಗಿದ್ದ ಹಿಂದಿನ ನ್ಯಾಯಿಕ ಅನುಭವ ಎರಡು ಬಗೆಯದು: 1 ಪ್ರಾಚೀನ ಆಳ್ವಿಕೆಯ ಸಂಪ್ರದಾಯಗಳು. 2 ಫ್ರೆಂಚ್ ಕ್ರಾಂತಿಯ ಸಾಧನೆಗಳು. ದಿವಾಣೀ ಸಂಹಿತೆಯನ್ನು (ಕೋಡ್ ಸಿವಿಲ್) ರಚಿಸಿದಾತ ಇವೆರಡರ ಉತ್ತಮ ಲಕ್ಷಣಗಳನ್ನು ಉಳಿಸಿಕೊಳ್ಳಲು ಯತ್ನಿಸಿದ.

1789ರ ಫ್ರೆಂಚ್ ಕ್ರಾಂತಿಪೂರ್ವದ ಫ್ರೆಂಚ್ ನ್ಯಾಯ ಬಹಳ ಮಟ್ಟಿಗೆ ಆಕ್ರಮಣಕಾರಿ ಶಕ್ತಿಗಳ ನ್ಯಾಯದಿಂದ-ಎಂದರೆ ರೋಮನ್ ನ್ಯಾಯ, ಜರ್ಮನ್ ನ್ಯಾಯ ಮುಂತಾದವುಗಳಿಂದ ಪ್ರಭಾವಿತವಾಗಿತ್ತು. 5ನೆಯ ಶತಮಾನದಲ್ಲಿ ಗಾಲ್‍ದೇಶ ಜರ್ಮನಿಕ್ ಜನರ ಹಲವಾರು ಅಲೆ ಅಲೆ ಆಕ್ರಮಣಗಳಿಗೆ ಈಡಾದಾಗ ಆದಿಮವೂ ಕುಲ ಕೇಂದ್ರಿತವೂ ಆದ ಇವರ ನ್ಯಾಯಕ್ಕೂ ಕಡಮೆ ಆಚಾರಭೂಯಿಷ್ಠವಾಗಿದ್ದ ರೋಮನ್ ಪದ್ಧತಿಗೂ ನಡುವೆ ಘರ್ಷಣೆಯಾಗಿ ಹೆಚ್ಚಿನ ವ್ಯಕ್ತಿಸ್ವಾತಂತ್ರ್ಯದ ದಿಕ್ಕಿನಲ್ಲಿ ವಿಕಾಸ ಹೊಂದಿತು. ಅದಾಗ್ಯೂ 8ನೆಯ ಶತಮಾನದ ವೇಳೆಗೆ ದೊರೆಗಳ ಅಥವಾ ಚಕ್ರವರ್ತಿಗಳ ಕ್ರೈಸ್ತ ದೇವಾಲಯಸಭಾಮುಖ್ಯರು ಹೆಚ್ಚು ಪ್ರಬಲರಾಗಿದ್ದರು. ತನ್ನ ಸಮುದಾಯದ ನ್ಯಾಯವನ್ನು ಅನುಸರಿಸುತ್ತಿದ್ದ ವ್ಯಕ್ತಿಯ ಮೇಲೆ ಹೆಚ್ಚು ಪ್ರಭಾವ ಹೊಂದಿದರು. ಅಲ್ಲದೆ ನೈತಿಕ ವಿಚಾರಗಳಲ್ಲಿ ಚರ್ಚಿನ ಅಧಿಕಾರ ನಿರ್ವಿವಾದದ್ದಾಗಿತ್ತು. ಕ್ರಮೇಣ ಎಲ್ಲ ನ್ಯಾಯ ಕ್ಷೇತ್ರಗಳ ಮೇಲೂ ಕ್ರೈಸ್ತ ವಿಧಿಗಳ ಪ್ರಭಾವ ಬೆಳೆಯಿತು.

ಇತಿಹಾಸ[ಬದಲಾಯಿಸಿ]

10ನೆಯ ಶತಮಾನದ ಕೊನೆಯ ವೇಳೆಗೆ ವಿವಿಧ ಜನಗಳ ಮಿಶ್ರಣದಿಂದಾಗಿ ನ್ಯಾಯಪದ್ಧತಿಯಲ್ಲಿ ಮಹಾ ಪರಿವರ್ತನೆಯಾಗಿತ್ತು. ಅಲ್ಲದೆ ಸ್ಥಳೀಯ ರೂಢಿಗಳು ಪ್ರಬಲವಾದವು ಕೂಡ. ಎರಡು ಶತಮಾನಗಳ ಕಾಲ ರಾಜನ ಅಧಿಕಾರ ದೃಶ್ಯವಾಗಿದ್ದಾಗ ಅದರ ಸ್ಥಾನವನ್ನು ಊಳಿಗಮಾನ್ಯ ಪದ್ಧತಿ ಆಕ್ರಮಿಸಿಕೊಂಡಿತು. ಆದರ ಸಹಚರಿಯಾದ ಭೂಪದ್ಧತಿ ಬಂತು. ಸಮಾಜ ವ್ಯವಸ್ಥೆ ಹಾಗೂ ನೆಲದ ಹಕ್ಕುಗಳಿಗೆ ಸಂಬಂಧಿಸಿದಂತೆ ಫ್ರಾನ್ಸಿನ ಹಳೆಯ ಕಾನೂನಿನ ಮೇಲೆ ಊಳಿಗಮಾನ್ಯ ಪದ್ದತಿ ತೀವ್ರ ಪರಿಣಾಮ ಬೀರಿತು. ಕುಟುಂಬಕ್ಕೆ ಸಂಬಂಧಿಸಿದ ಕಾನೂನಿನ ಮೇಲೆ ಕ್ರೈಸ್ತಮತೀಯ ವಿಧಿಗಳ ಪ್ರಭಾವ ವಿಶೇಷವಾಗಿತ್ತು.

ಹನ್ನೆರಡನೆಯ ಶತಮಾನದ ಆರಂಭದಲ್ಲಿ ದಕ್ಷಿಣ ಫ್ರಾನ್ಸ್ ರೋಮನ್ ನ್ಯಾಯದ ಪ್ರಭಾವಕ್ಕೆ ಒಳಗಾಗಿತ್ತು. ಅ ಶತಮಾನದ ಮಧ್ಯದ ಅನಂತರದ ದೊರೆ ತನ್ನ ಅಧಿಕಾರ ಚಲಾಯಿಸುವುದರಲ್ಲಿ ಯಶಸ್ವಿಯಾದ. ಆದರೆ ದಿವಾಣಿ ವಿಚಾರಗಳನ್ನು ಸಂಪ್ರದಾಯ ನ್ಯಾಯಕ್ಕೆ ಬಿಟ್ಟ. ಪೋಪರ ಪ್ರಭಾವದ ಅಡಿಯಲ್ಲಿ ಮತೀಯ ನ್ಯಾಯ ವಿಕಾಸಹೊಂದಿತು. 12ನೆಯ ಶತಮಾನದಲ್ಲಿ ರೋಮನ್ ನ್ಯಾಯ ಬರುವ ತನಕ ಅದನ್ನು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತಿತ್ತು.

ನೂರು ವರ್ಷಗಳ ಯುದ್ದದ ಅನಂತರ ರಾಜನ ನಿರಂಕುಶ ಅಧಿಕಾರ ಹೊಮ್ಮಿತು. ಹೊಸ ಅವಧಿಯೊಂದು ಆರಂಭವಾಯಿತು. ನ್ಯಾಯದ ಬೆಳವಣಿಗೆಗೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿ ಒಡ್ಡುತ್ತಿದ್ದರೆಂದು ನ್ಯಾಯವಿಕಾಸ ನಿಧಾನವಾಗಿತ್ತು. ಇದೇ ಅವಧಿಯಲ್ಲಿ ಪದ್ಧತಿಗಳನ್ನು ಕ್ರೋಢೀಕರಿಸಿ ಪರಿಷ್ಕರಿಸಲಾಯಿತು. ಈ ಎಲ್ಲ ಪದ್ಧತಿಗಳಲ್ಲಿ ಫ್ರಾನ್ಸಿನ ಸಂಪ್ರದಾಯ ನ್ಯಾಯ (ವ್ಯವಹಾರ ನ್ಯಾಯ) ಪ್ರತಿಷ್ಠಿತವಾಗಿತ್ತೆಂಬ ಭಾವನೆ ಕ್ರಮೇಣ. 1650ರ ಅನಂತರ, ಬೆಳೆಯಿತು.

ದೇಶದಲ್ಲಿ ಇನ್ನೂ ರೋಮನ್ ನ್ಯಾಯದ ಪ್ರಭಾವವಿತ್ತು. ಪುನರುಜ್ಜೀವನ ಕಾಲದಲ್ಲಿ ರೋಮನ್ ನ್ಯಾಯದ ಬೋಧನೆಯನ್ನು ನವೀಕರಿಸಲಾಯಿತು, ಸಂಪ್ರದಾಯ ನ್ಯಾಯ ಕ್ರೈಸ್ತ ಪುರೋಹಿತ ವರ್ಗಕ್ಕೂ ವಿವಾಹ ವ್ಯವಹಾರಕ್ಕೂ ಅನ್ವಯವಾಗುತ್ತಿತ್ತು. ಆದಾಗ್ಯೂ, ಕ್ಯಾಥೋಲಿಕ್ ಚರ್ಚಿನ ಪ್ರಭಾವ ತಗ್ಗುತ್ತಿತ್ತು. ಪ್ರಕ್ರಿಯಾ ಕಾನೂನು, ಅಪರಾಧಿಕ ಕಾನೂನು, ವಾಣಿಜ್ಯಕಾನೂನು, ನೌಕಾಬಲಾಧಿಪತ್ಯ ಮತ್ತು ಇತರ ಗಣ ವಿಷಯಗಳನ್ನು 15ನೆಯ ಲೂಯಿಯ ಅಧ್ಯಾದೇಶಗಳು ಪುರ್ನರೂಪಿಸಿದುವು. ಫ್ರಾನ್ಸಿನ ವಿಷ್ಲವಪೂರ್ವ ಕಾಲದ ಅಂತ್ಯದ ವೇಳೆಗಿನ ನ್ಯಾಯದಲ್ಲಿ ನೆಲವನ್ನು ಕುರಿತ ಊಳಿಗಮಾನ್ಯ ಹಕ್ಕುಗಳ ಪದ್ಧತಿ ಉಳಿದಿತ್ತು. ಕುಟುಂಬದ ನ್ಯಾಯ ಬಹಳ ಮಟ್ಟಿಗೆ ಮತೀಯ ನ್ಯಾಯದ ನಿಯಂತ್ರಣಕ್ಕೆ ಒಳಪಟ್ಟಿತ್ತು. ಆಸ್ತಿ ಸಂಬಂಧಗಳು ರೂಢಿಗತ ನಿಯಮಗಳಿಗೆ ಅನುಗುಣವಾಗಿದ್ದುವು. ಉತ್ತರಾಧಿಕಾರ ಹಾಗೂ ಉಯಿಲುಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ರೂಢಿಗತ ನ್ಯಾಯದ ಸೀಮೆಗಳಿಗೂ ಲಿಖಿತ ನ್ಯಾಯದ ಸೀಮೆಗಳಿಗೂ ವ್ಯತ್ಯಾಸಗಳಿದ್ದವು. ಕರಾರು ಕಾನೂನು ರೋಮನ್ ನ್ಯಾಯದ ತಂತ್ರಕ್ಕೆ ಅನುಗುಣವಾಗಿತ್ತು. ಕ್ರೈಸ್ತ ತತ್ತ್ವಗಳಿಂದ, ಅವುಗಳಲ್ಲೂ ಸದ್ಬಾವ ತತ್ತ್ವದಿಂದ, ಪ್ರಭಾವಿತವಾಗಿತ್ತು. ಕ್ರ್ರಾಂತಿಯಿಂದಾಗಿ ವಿಧಾಯಕ ಕಲಾಪದಲ್ಲಿ ಮಹಾ ಬದಲಾವಣೆಗಳಾದುವು. ಕಾಸೂನಿನ ಆಕರವಾಗಿ ಲಿಖಿತ ಶಾಸಸ ಹೆಚ್ಚು ಪ್ರಮುಖವೆಂದು ಪರಿಗಣಿಸಲಾಯಿತು. 1790ರಲ್ಲಿ ಪ್ರಜಾಪ್ರತಿನಿಧಿ ಸಭೆಗಳು ರದ್ದಾಗುವ ತನಕ ಸಂಪ್ರದಾಯಗಳು ಸ್ಥಾನದಲ್ಲಿ ನ್ಯಾಯಾಲಯಗಳ ಏಕೀಕೃತ ವ್ಯವಸ್ಥೆ ಬಂತು. ನ್ಯಾಯಾಲಯಗಳು ನ್ಯಾಯವನ್ನು ಅನ್ವಯಿಸಬಹುದಿತ್ತೆ ಹೊರತು ಸಾಮಾನ್ಯ ನಿಬಂಧನೆಗಳನ್ನು ಕೂಡ ವಿಧಿಸುವಂತಿರಲಿಲ್ಲ. ಕ್ರಾಂತಿಕಾರಿ ಶಾಸನ ನಿರ್ಮಾಣಕ್ಕೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಘೋಷಣೆಯೇ ಸ್ಫೂರ್ತಿಯಾಗಿತ್ತು, ಊಳಿಗಮಾನ್ಯ ಪದ್ಧತಿಯನ್ನು ರದ್ದುಮಾಡಲಾಯಿತು. ವಿಶ್ವವಿದ್ಯಾಲಯಗಳನ್ನು ಧರ್ಮ ನಿರಪೇಕ್ಷವಾಗಿ ಮಾಡಲಾಯಿತು. ಮದುವೆಗಳನ್ನು ವ್ಯವಸ್ಥೆಗೊಳಿಸಲಾಯಿತು. ವಿವಾಹ ವಿಚ್ಛೇದಕ್ಕೆ ಅನುಮತಿ ನೀಡಲಾಯಿತು. ಉತ್ತರಾಧಿಕಾರವನ್ನು ವ್ಯಾಖ್ಯಿಸಲಾಯಿತು. ಹೀಗೆ ನೆಪೋಲಿಯನ್ ಸಂಹಿತೆಗಳಿಗೆ ದಾರಿ ಸಿದ್ದವಾಯಿತು.

ನೆಪೋಲಿಯನ್ ಬೋನಪಾರ್ಟೆ 1800ರಷ್ಟು ಹಿಂದೆಯೇ ಕಾನೂನಿನ ಕ್ರೋಢೀಕರಣ ಕಾರ್ಯ ಕೈಗೆತ್ತಿಕೊಂಡ. ಯುಕ್ತ ಸಮಿತಿಗಳಿಂದ ಕರಡುಗಳನ್ನು ತಯಾರುಮಾಡಿಸಿದ. ಟೀಕೆಗಳಿಗಾಗಿ ಅವನ್ನು ನ್ಯಾಯಾಲಯಗಳಿಗೆ ಕಳುಹಿಸಿದ. ವಿಧಾನ ಆಯೋಗಗಳಲ್ಲಿ ಚರ್ಚಿ ನಡೆಸಿದ ಕೂಡ. ಸಂಹಿತೆಗಳು ಫ್ರೆಂಚ್‍ನ್ಯಾಯಕ್ಕೆ ಏಕರೂಪತೆ ತಂದವು. ಪ್ರತಿಯೊಬ್ಬ ಪ್ರಜೆಗೂ ಸುಲಭವಾಗಿ ನಿಲುಕುವಂತೆ ನ್ಯಾಯವನ್ನು ಸ್ಪಷ್ಟ ಭಾಷೆಯಲ್ಲಿ ಬರೆಯಬೇಕೆಂಬುದು ಆಗಿದ್ದ ನಂಬಿಕೆ. ಅವನ ದಿವಾಣಿ ಸಂಹಿತೆಯನ್ನು ಇಡಿಯಾಗಿ 1804ರಲ್ಲಿ ಜಾರಿಗೆ ತರಲಾಯಿತು. ಪ್ರಕ್ರಿಯಾಸಂಹಿತೆ 1806ರಲ್ಲೂ ವಾಣಿಜ್ಯ ಸಂಹಿತೆ 1807ರಲ್ಲೂ ಅಪರಾಧ ಪ್ರಕ್ರಿಯಾ ಸಂಹಿತೆ 1808ರಲ್ಲೂ ದಂಡಸಂಹಿತೆ 1810ರಲ್ಲೂ ಜಾರಿಗೆ ಬಂದುವು.

ನೆಪೋಲಿಯನ್ ಸಂಹಿತೆಯನ್ನು ದಿವಾಣಿ ಸಂಹಿತೆ ನಿಬಂಧನೆಗಳು ಎನ್ನುವುದಕ್ಕಿಂತ ಮೂಲತತ್ತ್ವಗಳ ಸಮಗ್ರ ವೈಧಾನಿಕ ಅಧಿನಿಯಮಿತಿಯೆಂದೂ ಹೊಸ ಮತ್ತು ಉತ್ತಮ ಸಮಾಜದ ಆದರ್ಶಕ್ಕೆ ಅನುಗುಣವಾಗಿ ನ್ಯಾಯವನ್ನು ಪುನಾರೂಪಿಸುವುದಕ್ಕೆ ಮಾಡಲಾದ ನೈಜ ಕ್ರ್ರಾಂತಿಕಾರಿ ಅಧಿನಿಯಮಿತಿಯೆಂದೂ ಕಲ್ಪಿಸಿಕೊಳ್ಳಲಾಯಿತು. ನ್ಯಾಯಿಕ ಪ್ರಕ್ರಿಯೆಯಲ್ಲಿ ವಿವೇಚನೆ ಮತ್ತು ತರ್ಕಗಳು ಮುಖ್ಯ ಅಂಶಗಳೆಂದು ಪರಿಗಣಿಸಿ, ಅವನ್ನು ಅವಲಂಬಿಸಿ ಮಾಡಲಾದ ವಿವೇಚನಪೂರ್ಣ ಶಾಸನನಿರ್ಮಾಣದ ಫಲವೇ ಸಂಹಿತೆ ಎಂಬುದು ಅದರ ಅತ್ಯಂತ ಮುಖ್ಯ ಲಕ್ಷಣಗಳಲ್ಲಿ ಒಂದಾಗಿತ್ತು. ಸಂಹಿತೆಯ ಅಡಿಯಲ್ಲಿ ಎಲ್ಲರೂ ಸಮಾನರು. ಜ್ಯೇಷ್ಠಾಧಿಕಾರ, ವಂಶಪಾರಂಪರ್ಯ ಶ್ರೀಮಂತಿಗೆ ಮತ್ತು ವರ್ಗ ಹಕ್ಕುಗಳು ಇದನ್ನು ರದ್ದು ಪಡಿಸಲಾಯಿತು. ನಾಗರಿಕ ಸಂಸ್ಥೆಗಳನ್ನು ಚರ್ಚಿನ ಹಿಡಿತದಿಂದ ಮುಕ್ತಗೊಳಿಸಲಾಯಿತು. ಪರರ ಆಸ್ತಿ ಹಕ್ಕನ್ನು ಉಲ್ಲಂಘಿಸದಿರುವಿಕೆ, ವ್ಯಕ್ತಿಸ್ವಾತಂತ್ರ್ಯ. ಕರಾರುಮಾಡಿಕೊಳ್ಳುವ ಸ್ವಾತಂತ್ರ್ಯ, ಖಾಸಗಿ ಸ್ವತ್ತಿನ ಅಲಂಘ್ಯತೆ ಇವು ಮೂಲಹಕ್ಕುಗಳೆನಿಸಿದುವು. ಆದಾಗ್ಯೂ ಇದರ ಉಪಬಂಧಗಳು ಕ್ರಾಂತಿಕಾರಿ ಸಾಧನೆಗಳತ್ತ ಅತಿಯಾಗಿ ಮುನ್ನಡೆಯುವ ಬದಲು ವಿವೇಕಯುತ ಉದಾರವಾದ ಮತ್ತು ಪ್ರಬುದ್ಧ ಸಂಪ್ರದಾಯವಾದಗಳ ನಡುವೆ ಯಶಸ್ವಿ ಸಮತೋಲವನ್ನು ಸಾಧಿಸಿವೆ. ಕ್ರಾಂತಿಕಾರಿ ಹಾಗೂ ಪಾರಂಪರಿಕ ದೃಷ್ಟಿ ಹಳತು ಮತ್ತು ಹೊಸದು ಇವನ್ನು ಹಿತಮಿತ ಧೋರಣೆಯಿಂದ ಸುಸಂಬದ್ಧವಾಗಿಯೂ ಸಮಗ್ರವಾಗಿಯೂ ಹೊಂದಿಸಲಾಗಿದೆ.

ದಿವಾಣಿ ಸಂಹಿತೆ 2281 ಚಿಕ್ಕ ಅನುಚ್ಛೇದಗಳಲ್ಲಿ ವ್ಯಾಪಿಸಿದೆ. ಇದರಲ್ಲಿ ಪ್ರಥಮತಃ ನ್ಯಾಯದ ಕೆಲವು ಮೂಲತತ್ತ್ವಗಳು ಮತ್ತು ಅವುಗಳ ಅನ್ವಯ ಕುರಿತ ಪೀಠಿಕಾ ರೂಪದ ಕೆಲವು ಅನುಚ್ಛೇದಗಳು ಇವೆ. ಮುಂದೆ ಅದನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ವ್ಯಕ್ತಿಗಳಿಗೆ ಸಂಬಂಧಿಸಿದ್ದು. ಎರಡನೆಯದು ಸ್ವತ್ತುಗಳನ್ನು ಕುರಿತದ್ದು. ಪೃಥಕ್ಕಾಗಿ ಅವನ್ನಿಲ್ಲಿ ಪರಿಗಣಿಸಲಾಗಿದೆ. ಹುಟ್ಟಿನಿಂದ, ಉತ್ತರಾಧಿಕಾರದಿಂದ ದಾನದಿಂದ ಕರಾರಿನ ಮುಖಾಂತರ ಇಲ್ಲವೇ ವಿವಾಹ ಒಡಂಬಡಿಕೆಯಿಂದ-ಹೀಗೆ ಸ್ವತ್ತುಗಳ ಮೇಲೆ ಹಕ್ಕು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ್ದು. ಮೂರನೆಯ ಭಾಗ ಖಾಸಗಿ ತಕ್ಸೀರುಗಳು ಮತ್ತು ಅರೆಕರಾರುಗಳು ಕೆಲವು ಅನುಚ್ಛೇದಗಳ ವಸ್ತು, ಕೊನೆಯ ಭಾಗದ ಅಂತ್ಯದಲ್ಲಿ ವೈಧಿಕ ಹಾಗೂ ಸಾಂಕೇತ ಅಡಮಾನಗಳು ಹಾಗೂ ಅಂತಿಮವಾಗಿ ಕಾಲಾವಧಿಗಳನ್ನು ಕುರಿತ ವಿಚಾರಗಳು ಇವೆ.

ಜನನ, ವಿವಾಹ, ವಿವಾಹ ವಿಚ್ಛೇದ, ಮರಣ ಇವುಗಳ ನೊಂದಾವಣೆಯ ವ್ಯವಸ್ಥೆಯ ಮೂಲಕ ಪ್ರತಿ ನಗರ ಸಭಾಧ್ಯಕ್ಷ ಅಥವಾ ಅವನ ಸಹಾಯಕರು ಅಧಿಕೃತ ಪುರಾವೆಗಳನ್ನು ಇಡುತ್ತಿದ್ದರು. ಹಿಂದಿನ ಅನುಭವಗಳ ಮತ್ತು ದೇಶದಲ್ಲಿಯ ವಿವಿಧ ಮತೀಯ ಧೋರಣೆಗಳ ಹಿನ್ನೆಲೆಯಲ್ಲಿ ಅವರು, ಧರ್ಮನಿರಪೇಕ್ಷ ಅಧಿಕಾರಿಗಳ ಸಮ್ಮುಖದಲ್ಲಿ ಆಚರಿಸಲಾದ ವಿವಾಹಗಳು ಮಾತ್ರ ಊರ್ಜಿತವೆಂದು ತೀರ್ಮಾನಿಸಿದರು, ತಂದೆ ತಾಯಿಯರ ಸ್ವಲ್ಪ ಮಟ್ಟಿನ ನಿಯಂತ್ರಣವನ್ನು ಅವರು ಮಾನ್ಯ ಮಾಡಿದರು. ಅದಾಗ್ಯೂ ಪತಿಗೆ ಪತ್ನಿಯರ ಮಧ್ಯೆ ಸ್ವತ್ತಿನ ಸಂಬಂಧವನ್ನು ಸ್ಪಷ್ಟವಾಗಿ ವ್ಯಾಖ್ಯಿಸಲಾಗಿತ್ತು. ವಿವಾಹ ವಿಚ್ಛೇದವನ್ನು ಪರಸ್ಪರ ಒಡಂಬಡಿಕೆಯಿಂದ ಕೂಡ ಸುಲಭವಾಗಿ ಪಡೆಯಬಹುದಾಗಿತ್ತು. ಸ್ವತ್ತಿನ ಹಕ್ಕುಗಳನ್ನು ಕುರಿತ ಕ್ರಾಂತಿಯ ಮೂಲಕ ಊಳಿಗಮಾನ್ಯ ಪದ್ಧತಿಯನ್ನು ತಳ್ಳಿ ಹಾಕಿದ್ದನ್ನು ಎತ್ತಿ ಹಿಡಿಯಲಾಯಿತು.

ವ್ಯಕ್ತಿಗಳ ಮತ್ತು ವಸ್ತುಗಳ ನಡುವಿನ ಪ್ರಸಾಮಾನ್ಯ ಸಂಬಂಧ ಒಡೆತನ ಇದನ್ನು ಸಂಪೂರ್ಣ ನಿರುಪಾಧಿಕ ಮುಕ್ತ ಮತ್ತು ಸರಳ ಹಕ್ಕು ಎಂದು ವ್ಯಾಖ್ಯಿಸಲಾಗಿದೆ, ಕೇವಲ ಫಲಾನುಭವ ಅನುಭೋಗದ ಹಕ್ಕು ಸಾಧ್ಯ, ಆದರೆ ಅದು ವೈಯಕ್ತಿಕ ಕರ್ತವ್ಯವನ್ನು ಒಳಮಾಡಲಾರದು. ಉತ್ತರಾಧಿಕಾರ ಮತ್ತು ಕೊಡುಗೆಗಳ ಬಗ್ಗೆ ಕ್ರಾಂತಿಯ ವಿಚಾರಗಳನ್ನೇ ಸಂಹಿತೆಯಲ್ಲಿ ಗಣನೀಯವಾಗಿ ಸ್ವೀಕರಿಸಲಾಯಿತು. ಪ್ರಾಚೀನ ಪ್ರಭುತ್ವದ ಕೆಲವು ಭಾವನೆಗಳನ್ನೂ ಸ್ವೀಕರಿಸಲಾಯಿತು: 1 ಮೃತನ ಅಸ್ತಿಪಾಸ್ತಿಗಳೊಳಗೆ ಯಾವ ತಾರತಮ್ಯವನ್ನೂ ಮಾಡಲಾಗದು; ಭೂ ಮತ್ತು ಎಲ್ಲ ಚರಾಸ್ತಿಯನ್ನು ಏಕರೀತಿಯಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಭೂ ಆಸ್ತಿಯ ಉಗಮವನ್ನು ಪ್ರಶ್ನಿಸುತ್ತಿರಲಿಲ್ಲ. 2 ಬಂಧು ವರ್ಗದ ಒಂದೇ ಸ್ತರದ ಎಲ್ಲ ಉತ್ತರಾಧಿಕಾರಿಗಳಿಗೆ ಸಮ ಪಾಲುಗಳನ್ನು ನೀಡತಕ್ಕದ್ದು. ಮಕ್ಕಳು ಮತ್ತು ಇತರ ಅವಲಂಬಿತರು ತಂದೆ, ತಾಯಿ, ಅಜ್ಜ ಅಜ್ಜಿ ಇವರೆಲ್ಲರ ಹಿತರಕ್ಷಣೆಗಾಗಿ ಉಯಿಲು ಅಥವಾ ದಾನದ ಮೂಲಕ ಸ್ವತ್ತಿನ ವಿಲೇವಾರಿಗೆ ಮಿತಿಹಾಕಲಾಯಿತು. ಕರಾರು, ಅರೆಕರಾರು ಮತ್ತು ಖಾಸಗಿ ತಕ್ಸೀರು ಕುರಿತ ನ್ಯಾಯವನ್ನು ಮತ್ತೆ ನಿರೂಪಿಸಲಾಯಿತು. ಅಸ್ತಿತ್ವದಲ್ಲಿದ್ದ ನ್ಯಾಯದಲ್ಲಿ ಯಾವ ಗಮನಾರ್ಹ ಬದಲಾವಣೆಯೂ ಅಗಲಿಲ್ಲ.

ಸರ್ವಜನ ಮತಾಧಿಕಾರದಿಂದಾಗಿ ಕಾರ್ಮಿಕ ವರ್ಗಕ್ಕೆ ಶಾಸನ ರಚನೆಯ ಮೇಲೆ ಪ್ರಭಾವ ಬೀರುವ ಅವಕಾಶ ದೊರೆತಾಗ, ತೃತೀಯ ಗಣರಾಜ್ಯ ಕಾಲದಲ್ಲಿ ಸಾಮಾಜಿಕ ವಾತಾವರಣ ಬದಲಾಯಿತು. ದುರ್ಬಲರ ರಕ್ಷಣೆಗಾಗಿ ರಾಜ್ಯ ಮಧ್ಯ ಪ್ರವೇಶ ಮಾಡತೊಡಗಿತು. ಪರಿನಿಯಮಗಳ ಸಂಖ್ಯೆ ನಿಧಾನವಾಗಿ ಬೆಳೆಯಿತು. ಹೆಚ್ಚಿನ ವ್ಯಕ್ತಿ ಪ್ರಾಮುಖ್ಯ, ಸಾಮಾಜಿಕ ಹಿತರಕ್ಷಣೆಗಾಗಿ ವ್ಯಕ್ತಿ ಹಕ್ಕುಗಳಿಗೆ ನಿಬಂಧನ ಇವು ಸಂಹಿತೆಯ ಅನಂತರದ ತಿದ್ದುಪಡಿಗಳಲ್ಲಿ ಕಂಡು ಬಂದುವು. ಪತಿಯ ಅಧಿಕಾರ ಕಡಿಮೆಯಾಯಿತು. ತಂದೆ ತಾಯಿಯರ ಅಧಿಕಾರದ ಮೇಲಿನ ಹತೋಟಿ ಹೆಚ್ಚಿತು. ಸ್ವತ್ತಿನ ಮೇಲೆ ವ್ಯಕ್ತಿಯ ಒಡೆತನದ ನಿರುಪಾಧಿಕ ಹಕ್ಕುಗಳನ್ನು ಮೊಟಕು ಮಾಡಲಾಯಿತು. ಕರಾರಿನ ಸ್ವಾತಂತ್ರ್ಯವನ್ನೂ ನಿಬಂಧನೆಗಳ ಮೂಲಕ ಕಡಿಮೆ ಮಾಡಲಾಯಿತು.

ಪರಿವೃತ್ತಿಸಿದ ಮಿತಿಗಳೊಳಗೆ, ಆಧುನಿಕ ಪರಿಸ್ಥಿತಿಗಳಿಗೆ ತಕ್ಕಂತೆ ಕಾನೂನನ್ನು ಹೊಂದಿಸಿಕೊಳ್ಳಲು ನ್ಯಾಯಾಲಯಗಳಿಗೆ ಅವಕಾಶ ದೊರಕಿತು. ಈ ನಿಟ್ಟಿನಲ್ಲಿ ಶಾಸನದ ಪ್ರಾಥಮಿಕ ಹೊಣೆಯ ಮನವರಿಕೆ ಇದಕ್ಕೆ ಕಾರಣ. ಸಂಹಿತೆಯನ್ನು ಪರಿಷ್ಕರಿಸುವ ಕೆಲಸವನ್ನು ಆಯೋಗಗಳಿಗೆ ವಹಿಸಲಾಯಿತು (1945). ಅನೇಕ ಮುಖ್ಯ ಸುಧಾರಣೆಗಳು, ಪ್ರಧಾನವಾಗಿ ಕುಟುಂಬ ನ್ಯಾಯ ಕ್ಷೇತ್ರದಲ್ಲಿ ಆಗಿವೆ. ಆಧುನಿಕ ಐರೋಪ್ಯ ಅಪರಾಧಿಕ ನ್ಯಾಯದ ಇತಿಹಾಸದಲ್ಲಿಯ ಮುಖ್ಯ ಅಧಿನಿಯಮ ಮಿತಿಗಳೆಂದರೆ ಎರಡು ನೆಪೋಲಿಯಾನಿಕ್ ಸಂಹಿತೆಗಳು_1808ರ ಇನ್‍ಸ್ಟ್ರಕ್ಷನ್ ಕ್ರಿಮಿನಲ್ ಸಂಹಿತೆ ಮತ್ತು 1810ರ ದಂಡ ಸಂಹಿತೆ. ಇವುಗಳ ಪೈಕಿ ಮೊದಲನೆಯದನ್ನು ತೆಗೆದು ಆದರ ಸ್ಥಾನದಲ್ಲಿ 1958ರಲ್ಲಿ ಕೋಡ್ ಡಿ ಪ್ರೊಸೀಜರ್ ಕ್ರಿಮಿನಲನ್ನು (ದಂಡಪ್ರಕ್ರಿಯಾ ಸಂಹಿತೆ) ತರಲಾಯಿತು. ಆದರೆ ಎರಡನೆಯದನ್ನು 1832 ಮತ್ತು 1863ರಲ್ಲಿ ಗಣನೀಯವಾಗಿ ಪರಿಷ್ಕರಿಸಲಾಯಿತಾದರೂ ಹಲವು ಸಲ ಆದನ್ನು ಪದೇ ಪದೇ ತಿದ್ದುಪಡಿ ಮಾಡಲಾಯಿತಾದರೂ ಆದನ್ನು ಎಂದೂ ರದ್ದುಗೊಳಿಸಲಿಲ್ಲ. ದಂಡ ಸಂಹಿತೆ 19ನೆಯ ಶತಮಾನದ ಪ್ರಥಮಾರ್ಧ ಪೂರ್ತಿ ಐರೋಪ್ಯ ಅಪರಾಧಿಕ ಕಾನೂನು ರಚನೆಗೆ ಪ್ರಮುಖ ಮಾದರಿಯಾಗಿತ್ತು.

ನಿಗಮಗಳ ಕಾನೂನು ಸೇರಿದಂತೆ ವಾಣಿಜ್ಯ ನ್ಯಾಯ ಹಾಗೂ ಪ್ರಕ್ರಿಯಾ ನ್ಯಾಯ ಹಲವು ಬದಲಾವಣೆಗಳಿಗೆ ಒಳಗಾಗಿವೆ. ಐರೋಪ್ಯ ಸಂಸ್ಥೆಗಳ ಹಾಗೂ ಅಂತರ್‍ರಾಷ್ಟ್ರೀಯ ವ್ಯವಹಾರ ಸಂಬಂಧಗಳ ವಿಕಾಸ ವಾಣಿಜ್ಯ ಸಂಬಂಧಿ ವಿಷಯಗಳನ್ನು ಕುರಿತಂತೆ ಇನ್ನಷ್ಟು ಮರುಹೊಂದಾವಣೆಗಳಿಗೆ ಕಾರಣವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: