ಪಿತ್ತಕೋಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿತ್ತಕೋಶವು ಯಕೃತ್ತಿನ (ಪಿತ್ತಜನಕಾಂಗ, ಲಿವರ್) ಸ್ರಾವವಾದ ಪಿತ್ತ (ಬೈಲ್) ಸಂಗ್ರಹವಾಗುವ ಚೀಲ (ಗಾಲ್ ಬ್ಲ್ಯಾಡರ್). ಇದು ಯಕೃತ್ತಿನ ಬಲಸಂಪುಟದ ಕೆಳಭಾಗದಲ್ಲಿದೆ. ಆಕಾರ ಶಂಖದಂತೆ. ಯಕೃತ್ತಿನಲ್ಲಿ ಉತ್ಪನ್ನವಾಗುವ ಪಿತ್ತ ಅದರ ಎರಡೂ ಸಂಪುಟಗಳಿಂದ ಪ್ರತ್ಯೇಕ ನಳಿಗೆಗಳ ಮೂಲಕ ಹರಿಯುತ್ತದೆ. ಇವೆರಡೂ ಸಂಗಮಿಸಿ ಯಕೃತ್ ಪ್ರಣಾಲಿ (ಕಾಮನ್ ಹೆಪಟೈಟ್ ಡಕ್ಟ್) ಆಗುತ್ತದೆ. ಪಿತ್ತಕೋಶದ ನಳಿಗೆ ಯಕೃತ್ ಪ್ರಣಾಲಿಯನ್ನು ಸೇರಿ ಪಿತ್ತನಾಳ (ಬೈಲ್ ಡಕ್ಟ್) ಆಗುತ್ತದೆ. ಪಿತ್ತಕೋಶದ ಉದ್ದ 7-10 ಸೆಂ.ಮೀ.; ಮೊಂಡಾದ ಅದರ ತುದಿಯ ಕಡೆ ಅಗಲ ಸುಮಾರು 3 ಸೆಂ.ಮೀ. ಇದರಲ್ಲಿ ಸುಮಾರು 30-50 ಘನ ಸೆಂ.ಮೀ. ಪಿತ್ತರಸ ಹಿಡಿಯುತ್ತದೆ. ಪಿತ್ತಕೋಶದ ಮೇಲಿನ ಹೊರಮೈ ಯಕೃತ್ತಿನ ಬಲಸಂಪುಟದ ಕೆಳಗಡೆ ಇರುವ ಕೂಪದಲ್ಲಿ ಬಂಧಿತವಾಗಿದೆ. ಮೊಂಡಾದ ತುದಿ ಯಕೃತ್ತಿನ ಕೆಳಗಿನ ಅಂಚಿನಿಂದ ಮುಂದಕ್ಕೆ ಸ್ವಲ್ಪಮಟ್ಟಿಗೆ ಚಾಚಿಕೊಂಡು ಉದರ ಫಲಕವನ್ನು (ಆಬ್ಡೊಮಿನಲ್ ವಾಲ್) ಸ್ಪರ್ಶಿಸುತ್ತದೆ. ಪಿತ್ತಕೋಶದ ಕೆಳಗಿನ ಹೊರಮೈ ಮುಂಭಾಗದಲ್ಲಿ ತಿರ್ಯಕ್ ಸ್ಥೂಲಾಂತ್ರಕ್ಕೂ (ಟ್ರಾನ್ಸ್‍ವರ್ಸ್ ಕೊಲಾನ್) ಹಿಂಭಾಗದಲ್ಲಿ ಗೃಹಿಣೀ (ಸುಶ್ರುತ) ಡುಯೋಡೀನಮ್ಮಿಗೂ ಬಂಧಿತವಾಗಿದೆ. ಪಿತ್ತಕೋಶ ನಳಿಗೆಯ ಮೂಲಕ ಪಿತ್ತ, ಪಿತ್ತಕೋಶವನ್ನು ಸೇರಿ ನೀರಿನಂಶವನ್ನು ಬಲುಮಟ್ಟಿಗೆ ಕಳೆದುಕೊಂಡು ಮಂದವಾಗುತ್ತದೆ. ಜೀರ್ಣಕಾಲದಲ್ಲಿ ಪಿತ್ತಕೋಶ ಸಂಕೋಚಿಸುತ್ತದೆ. ಆಗ ಪಿತ್ತ ಅದೇ ನಳಿಗೆ ಮೂಲಕ ಪಿತ್ತನಾಳಕ್ಕೆ ಹರಿದು ತನ್ಮೂಲಕ ಗ್ರಹಣೀ ಡುಯೋಡೀನಮ್ಮನ್ನು ಸೇರುತ್ತದೆ.

ಕೆಲವು ಪ್ರಾಣಿಗಳಿಗೆ (ಕುದುರೆ) ಪಿತ್ತಕೋಶ ಇರುವುದಿಲ್ಲ. ಒಮ್ಮೊಮ್ಮೆ ಮನುಷ್ಯನ ಪಿತ್ತಕೋಶದಲ್ಲಿ ಪಿತ್ತಶೋಷಣೆಯಿಂದ ಪಿತ್ತಾಶ್ಮಗಳು (ಗಾಲ್ ಸ್ಟೋನ್ಸ್) ಉಂಟಾಗಬಹುದು. ಆಗ ಶಸ್ತ್ರಚಿಕಿತ್ಸೆಯ ಮೂಲಕ ಪಿತ್ತಕೋಶವನ್ನೇ ತೆಗೆದುಹಾಕಬೇಕಾಗಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: