ಪರಮಾಣು ಸಿದ್ಧಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂದಿನ ಅಣುಸಿದ್ಧಾಂತ

ಜಾನ್‍ ಡಾಲ್ಟನ್‍ನ ಪರಮಾಣುವಾದದ[೧] ಪ್ರಕಾರ ಪ್ರತಿಯೊಂದು ಪದಾರ್ಥವೂ ಅತಿಸೂಕ್ಷ್ಮವಾದ ಮತ್ತು ಅಭೇದ್ಯವಾದ ಪರಮಾಣುಗಳೆಂಬ ಕಣಗಳಿಂದ ಆಗಿವೆ ; ಪ್ರತಿಯೊಂದು ಪದಾರ್ಥದ (ಅದು ರಾಸಾಯನಿಕ ಧಾತುವಾಗಿರಲಿ, ಸಂಯುಕ್ತವಾಗಿರಲಿ) ಪರಮಾಣುವೂ ಅದಕ್ಕೆ ವಿಶಿಷ್ಟವಾದ ಗಾತ್ರ, ತೂಕ, ಮುಂತಾದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಡಾಲ್ಟನ್ನನ ಈ ಪರಮಾಣುವಿನ ಕಲ್ಪನೆಯನ್ನು ಕೆಲಕಾಲಾನಂತರ ಬದಲಾಯಿಸಬೇಕಾಗಿ ಬಂತು. ಅನಿಲಗಳು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುವಾಗ ಪಾಲಿಸುವ ನಿಯಮಗಳನ್ನು ಡಾಲ್ಟನ್ನನ ಪರಮಾಣು ವಾದದ ಆಧಾರದ ಮೇಲೆ ಅರ್ಥಪೂರ್ಣವಾಗಿ ವಿವರಿಸುವುದು ಸಾಧ್ಯವಾಗದೆ ಹೋಯಿತು. ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲು ಅಣುವಿನ ಕಲ್ಪನೆ ಅವಶ್ಯವಾಯಿತು. ಈ ಅಣುಸಿದ್ಧಾಂತವನ್ನು (ಮೊಲೆಕ್ಯೂಲರ್ ಥಿಯೊರಿ) ಪ್ರತಿಪಾದಿಸಿದವನು ಇಟಲಿಯ ಅಮಿಡಿಯೊ ಅವೊಗ್ಯಾಡ್ರೊ.

ವಿವಿಧ ಅಣು ಮತ್ತು ಪರಮಾಣುಗಳು ಜಾನ್‍ ಡಾಲ್ಟನ್‍ನ ಹೊಸ ರಾಸಾಯನ ಸಿದ್ಧಾಂತದಲ್ಲಿ (೧೮೦೮

ಸಿದ್ಧಾಂತಗಳು[ಬದಲಾಯಿಸಿ]

ಅಣುಸಿದ್ಧಾಂತದ ಪ್ರಕಾರ ಒಂದು ಪದಾರ್ಥ ಅನಿಲಸ್ಥಿತಿಯಲ್ಲಿದ್ದಾಗ, ಇಲ್ಲವೇ ಒಂದು ದ್ರವದಲ್ಲಿ ವಿಲೀನವಾಗಿ ದ್ರಾವಣರೂಪದಲ್ಲಿದ್ದಾಗ ಆ ಪದಾರ್ಥದ ರಾಸಾಯನಿಕ ಸಂಯೋಜನೆ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಮತ್ತು ಸ್ವತಂತ್ರವಾಗಿ ಇರುವ ಅದರ ಅತಿ ಚಿಕ್ಕ ಕಣವನ್ನು ಅಣು (ಮಾಲಿಕ್ಯೂಲ್) ಎಂದು ಕರೆಯಲಾಗುವುದು. ಈ ಅಣುವಿನಲ್ಲಿ ರಾಸಾಯನಿಕ ಧಾತುಗಳ ಪರಮಾಣುಗಳು ಹಲವಾರು ಇರಬಹುದು. ಜಲಜನಕ (ಹೈಡ್ರೊಜನ್), ಆಮ್ಲಜನಕ (ಆಕ್ಸಿಜನ್), ಕ್ಲೋರಿನ್-ಮುಂತಾದ ಧಾತುಗಳ ಅಣುಗಳಲ್ಲಿ ಆಯಾ ಧಾತುವಿನ ಪರಮಾಣುಗಳು ಮಾತ್ರ ಇರುತ್ತವೆ. ನೀರು, ಅಮೋನಿಯ-ಮುಂತಾದ ಸಂಯುಕ್ತಗಳ ಅಣುಗಳಲ್ಲಿ ಬೇರೆ ಬೇರೆ ಧಾತುಗಳ ಪರಮಾಣುಗಳು ಒಂದು ನಿರ್ದಿಷ್ಟ ಸಂಖ್ಯೆಯಲ್ಲಿರುತ್ತವೆ. ಹೀಲಿಯಮ್, ಆರ್ಗಾನ್ ಮುಂತಾದ ಅನಿಲ ಧಾತುಗಳಲ್ಲಿರುವ ಅಣುಗಳೂ ಏಕ ಪರಮಾಣ್ವಕ ಅಣುಗಳು. ಅಂದರೆ, ಅವುಗಳ ಬಿಡಿ ಪರಮಾಣುಗಳೇ ಅವುಗಳ ಅಣುಗಳು.ಈ ಅಣುಗಳೇ ವಸ್ತುವಿನ ಚಲನಸಿದ್ಧಾಂತದಲ್ಲಿ (ಅಣುಚಲನವಾದ ; ಕೈನೆಟಿಕ್ ಥಿಯೊರಿ ಆಫ್ ಮ್ಯಾಟರ್) ಪ್ರಸ್ತಾಪಿಸಲಾಗಿರುವ ಅಣುಗಳು. ಅನಿಲಗಳಲ್ಲಿಯೇ ಆಗಲಿ ದ್ರಾವಣಗಳಲ್ಲಿಯೇ ಆಗಲಿ ವಿವಿಧ ದಿಕ್ಕುಗಳಲ್ಲಿ ಮತ್ತು ವಿವಿಧ ವೇಗಗಳಿಂದ ಸದಾ ಚಲಿಸುತ್ತಿರುತ್ತವೆ.

ಸ್ಥಿತಿ[ಬದಲಾಯಿಸಿ]

ಅಣುವಿನ ಕಲ್ಪನೆ ಅನಿಲ ಮತ್ತು ದ್ರವಸ್ಥಿತಿಗಳಿಗೆ ಸೀಮಿತವಾಗಿರದೆ ಘನಸ್ಥಿತಿಗೂ ಅನ್ವಯಿಸುವಂತಾಗಬೇಕಾದರೆ ಮೇಲೆ ಕೊಟ್ಟಿರುವ ಲಕ್ಷಣ ನಿರೂಪಣೆಯನ್ನು ಕೊಡಬೇಕಾಗುತ್ತದೆ. ಯಾವುದೇ ವಸ್ತುವಿನಲ್ಲಿ ಹಲಕೆಲವು ಪರಮಾಣಗಳು ಪ್ರಬಲವಾದ ಪರಸ್ಪರ ಆಕರ್ಷಣ ಬಲಗಳಿಂದ ಒಂದುಗೂಡಿ [[ಪರಮಾಣುಪುಂಜಗಳಾಗಿದ್ದು ಅವು ಅಂಥದೇ ಆದ ಇತರ ಪರಮಾಣುಪುಂಜಗಳಿಂದ ಪ್ರತ್ಯೇಕವಾದ ಘಟಕಗಳಾಗಿದ್ದರೆ ಅಂತ ಪರಮಾಣುಪುಂಜಗಳೇ ಅಣುಗಳು. ಈ ಲಕ್ಷಣನಿರೂಪಣೆ ಅನಿಲ ಮತ್ತು ದ್ರವಗಳಿಗೆ ಅನ್ವಯಿಸುವುದು ಮಾತ್ರವಲ್ಲದೆ ಘನಪದಾರ್ಥಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ಸಾಮಾನ್ಯ ಸಕ್ಕರೆಯಲ್ಲಿ 12 ಇಂಗಾಲ ಪರಮಾಣುಗಳು, 22 ಜಲಜನಕ ಪರಮಾಣುಗಳೂ ಮತ್ತು 11 ಆಮ್ಲಜನಕ ಪರಮಾಣುಗಳು ಪರಸ್ಪರ ಪ್ರಬಲ ಆಕರ್ಷಣಬಲಗಳಿಂದ ಒತ್ತಾಗಿ ಗುಂಪುಕೂಡಿಕೊಂಡಿದ್ದು, ಅಂಥ ಪರಮಾಣುಪುಂಜಗಳು ಒಂದರಿಂದ ಒಂದು ಸ್ವಲ್ಪ ಸ್ವಲ್ಪ ದೂರದಲ್ಲಿ ಹಂಚಿಕೊಂಡಿರುತ್ತವೆ. ಒಂದೊಂದು ಪುಂಜವೂ ಒಂದೊಂದು ಅಣು. ಕೆಲವು ಘನಪದಾರ್ಥಗಳಿಗೆ ಅಣು ಶಬ್ದ ಅನ್ವಯವಾಗುವುದಿಲ್ಲ. ಉದಾಹರಣೆಗೆ, ಸಾಮಾನ್ಯ ಉಪ್ಪಿನಲ್ಲಿ ಸೋಡಿಯಮ್ ಮತ್ತು ಕ್ಲೋರೈಡ್ ಅಯಾನುಗಳೂ (ಧನ ಮತ್ತು ಋಣ ವಿದ್ಯುದಂಶ ಹೊತ್ತಿರುವ ಸೋಡಿಯಮ್ ಮತ್ತು ಕ್ಲೋರೀನ್ ಪರಮಾಣುಗಳು) ಉಪ್ಪಿನ ಹರಳಿನಲ್ಲಿ ಎಲ್ಲೆಡೆಯಲ್ಲಿಯೂ ಸಮಾಂತರವಾಗಿ ಹಂಚಿಕೊಂಡಿರುತ್ತವೆ. ಪ್ರತಿ ಸೋಡಿಯಮ್ ಅಯಾನಿನ ಸುತ್ತಲೂ ಆರು ದಿಕ್ಕುಗಳಲ್ಲಿ ಆರು ಕ್ಲೋರೈಡ್ ಅಯಾನುಗಳು, ಹಾಗೆಯೇ ಪ್ರತಿ ಕ್ಲೋರೈಡು ಅಯಾನಿನ ಸುತ್ತಲೂ ಆರು ಸೋಡಿಯಮ್ ಅಯಾನುಗಳು ಹಂಚಿಕೊಳ್ಳುತ್ತಾ ಹೋಗಿ ಹರಳು ಬೆಳೆದಿರುತ್ತದೆ. ಅಂಥ ಹರಳಿನಲ್ಲಿ ಅಣು ಎಂಬ ಶಬ್ದಕ್ಕೆ ಅರ್ಥವಿಲ್ಲ. ಸಾಮಾನ್ಯವಾಗಿ ಸರಳ ಅಣುಗಳ ಗಾತ್ರ ಸೆಂ.ಮೀ. ನಿಂದ ಸೆಂ.ಮೀ. ವರೆಗೂ ಇದ್ದು ಅವುಗಳ ತೂಕ ಗ್ರಾಂ. ನಿಂದ ವರೆಗೂ ಇರುತ್ತದೆ. ಆದರೆ ಪ್ರೋಟೀನುಗಳು, ನ್ಯೂಕ್ಲಿಯಿಕ್ ಆಮ್ಲಗಳು, ಸೆಲ್ಯುಲೋಸ್, ಪಿಷ್ಟ, ರಬ್ಬರ್ ಮುಂತಾದ ಪದಾರ್ಥಗಳ ಅಣುಗಳು ಸಾವಿರಾರು ಪರಮಾಣುಗಳಿಂದ ಕೂಡಿದ್ದು, ದೈತ್ಯಾಣುಗಳೆನಿಸಿಕೊಂಡಿವೆ. ಅವುಗಳ ತೂಕ, ಗಾತ್ರಗಳು, ಬಹು ಹೆಚ್ಚಾಗಿದ್ದು ಅವುಗಳನ್ನು ಅತಿಸೂಕ್ಷ್ಮದರ್ಶಕದ (ಅಲ್ಟ್ರ ಮೈಕ್ರೊಸ್ಕೋಪ್) ಸಹಾಯದಿಂದ ನೋಡಲೂಬಹುದು. ಈ ದೈತ್ಯಾಣುಗಳಲ್ಲಿ ಕೆಲವು ನಿರ್ದಿಷ್ಟ ಪರಮಾಣುಗುಂಪುಗಳು ಅಣುವಿನುದ್ದಕ್ಕೂ ಪುನರಾವರ್ತಿಸುತ್ತಾ ಹೋಗಿ ಅಣು ಅಗಾಧಗಾತ್ರಕ್ಕೆ ಬೆಳೆಯುತ್ತದೆ. ಪ್ರಕೃತಿಯಲ್ಲಿ ಕಂಡುಬರುವ ಈ ಚಮತ್ಕಾರವನ್ನು ಮಾನವ ಅನುಕರಿಸಿ ಕೆಲವು ನಿರ್ದಿಷ್ಟ ಪರಮಾಣು ಗುಂಪುಗಳನ್ನು ಪುನರಾವರ್ತಿಸಿ ಕೃತಕವಾಗಿ ಅನೇಕಬಗೆಯ ದೈತ್ಯಾಣುಗಳನ್ನು ನಿರ್ಮಿಸಿದ್ದಾನೆ. ಅವೇ ಆಧುನಿಕ ಪ್ಲಾಸ್ಟಿಕ್‍ಗಳು


ಉಲ್ಲೇಖ[ಬದಲಾಯಿಸಿ]

http://web.lemoyne.edu/~giunta/avogadro.html

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: