ಗಮಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಗಮಕ ಕಲೆ


ಪೀಠಿಕೆ[ಬದಲಾಯಿಸಿ]


  • ಗಮಕ ಕಲೆ - ಪೀಠಿಕೆ:
  • ಗಮಕ ಕಲೆ ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿತ್ತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಯು ಲವ ಕುಶರಿಂದ ರಾಮಾಯಣ ಕಾವ್ಯವನ್ನು ಗಮಕ ಶೈಲಿಯಲ್ಲಿ ಹೇಳಿಸಿದನೆಂದು ಅದೇ ಕಾವ್ಯದಲ್ಲಿ ಹೇಳಿದೆ. ಈಗ ಸಂಸ್ಕೃತ ಕಾವ್ಯಗಳನ್ನು ಆಯಾ ಛಂದಸ್ಸಿನ ಮಟ್ಟಿನಲ್ಲಿ ಓದುವ / ಹೇಳುವ ಪದ್ಧತಿ ಇದೆ. ರಾಗ ಸಂಯೋಜನೆ ಮಾಡಿಹೇಳುವ ಪದ್ಧತಿಯೂ ಇದೆ. ಆದರೆ ತಾಳಬದ್ಧವಾಗಿ ಹೇಳುವ ಕ್ರಮ ಇರುವುದಿಲ್ಲ. ಈ ಗಮಕ ವಾಚನ ಕ್ರಮ ಅಥವಾ ಕಾವ್ಯಗಳನ್ನು, ರಾಗ, ಶ್ರುತಿ ಬದ್ಧವಾಗಿ ತಾಳದ ಹಂಗಿಲ್ಲದೆ ಹಾಡುವ ಪದ್ಧತಿ ಕನ್ನಡಕ್ಕೆ ಮಾತ್ರ ವಿಶಿಷ್ಟವಾದುದು. ಬೇರೆ ಯಾವ ಭಾರತೀಯ ಭಾಷೆಗಳಲ್ಲೂ ಇದ್ದಂತೆ ಕಾಣುವುದಿಲ್ಲ. .

ಗಮಕ ಕಲೆ ಎಂದರೇನು ?[ಬದಲಾಯಿಸಿ]


  • ಗಮಕ ಅಥವಾ ಗಮಕ ಕಲೆ ಎಂದರೆ ಪದ್ಯ ಮತ್ತು ಚಂಪೂ ಕಾವ್ಯವನ್ನು ರಾಗ ಬದ್ಧವಾಗಿ ಓದುವ ಒಂದು ವಿಶಿಷ್ಟ ಪದ್ಧತಿ. ಓದುವಾಗ ಸಂಗೀತದ ರಾಗಗಳನ್ನು ಬಳಸಿದರೂ, ಜಾನಪದ ಶೈಲಿಯನ್ನು ಬಳಸಿದರೂ ಕಾವ್ಯದ ಅರ್ಥ, ಭಾವ, ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು, ರಸ ಭಾವ ಕೆಡದಂತೆ ಕವಿ ಬಳಸಿದ ಛಂದಸ್ಸು, ಯತಿಗಳು ಕೆಡದಂತೆ ರಾಗ ಮತ್ತು ಶ್ರುತಿ ಬದ್ಧವಾಗಿ ಕಾವ್ಯವನ್ನು ಓದುವುದನ್ನು - ಗಮಕ - ಗಮಕ ಕಲೆ ಎಂದು ಹೇಳಬಹುದು.
  • ಹಿಂದೆ ಮನೆ ಮನೆಗಳಲ್ಲಿ ಕಾವ್ಯದ ಛಂದಸ್ಸಿಗೆ ಅನುಗುಣವಾಗಿ ವಾಡಿಕೆಯಲ್ಲಿದ್ದ ಮಟ್ಟಿನಲ್ಲಿ ಭಾವರಸಕ್ಕೆ ತಕ್ಕಂತೆ ಕಾವ್ಯವನ್ನು ಓದುತ್ತಿದ್ದರು/ಹಾಡುತ್ತಿದ್ದರು. ಆಗ ಸಾಮಾನ್ಯರೂ ಸಂಗೀತ ಕಲಿಯದವರೂ ಕಾವ್ಯಗಳನ್ನು ಓದುವ ರೂಢಿ ಇತ್ತು. ಹೆಣ್ಣು ಮಕ್ಕಳು ಬೆಳಗಿನ ಝಾವ ಎದ್ದವರು ಕೆಲಸ ಮಾಡುತ್ತಾ ನೀತಿಶತಕ, ಹರಿಭಕ್ತಿಸಾರ, ಮೊದಲಾದ ಕಾವ್ಯಗಳನ್ನು ಒಂದು ಮಟ್ಟಿನಲ್ಲಿ (ಹೆಚ್ಚಾಗಿ ಬಿಲಹರಿಯನ್ನು ಹೋಲುವ ರಾಗದಲ್ಲಿ ) ಹಾಡುತ್ತಿದ್ದರು, ಅದು ಉದಯರಾಗವೆಂದು ಕರೆಯಲ್ಪಡುತ್ತಿತ್ತು. ಹೀಗೆ ಕಾವ್ಯಗಳು ಬಾಯಿಂದ ಬಾಯಿಗೆ ಕಲಿತು ಜನಪ್ರಿಯವಾಗಿತ್ತು. ಆಧುನಿಕ ಯುಗದ ಪ್ರಭಾವ ಬಂದಮೇಲೆ, ಈ ಪದ್ಧತಿ ಮರೆಯಾಗಿ ಕಾವ್ಯದ ಪದ್ಯಗಳಿಗೆ ಶಾಸ್ತ್ರೀಯ ರಾಗಗಳನ್ನು ಹಾಕಿ, ರಸ, ಭಾವಕ್ಕೆ ಅನುಗುಣವಾಗಿ ಹೇಳುವ ರೂಢಿ ಬಂದಿತು. ಇದರ ಜೊತೆಗೆ ಜನರಲ್ಲಿ ಭಾಷಾಶಕ್ತಿ ಕುಗ್ಗಿದುದು, ಹೊಸಗನ್ನಡ / ನವ್ಯ / ನವೋದಯ ಸಾಹಿತ್ಯದ ಹುಟ್ಟು, ಸಿನಿಮಾ ಸಂಗೀತ, ಭಾವಗೀತೆಯ ಪ್ರಕಾರ ಇವೆಲ್ಲವೂ ಜನಸಾಮಾನ್ಯರಲ್ಲಿ ಹೆಚ್ಚು ಸುಲಭಗ್ರಾಹ್ಯವೂ ಲಘುಮನರಂಜನೆಯೂ ಆಗಿ ದೊರೆಯಿತು. ಜನಪ್ರಿಯ ಕಾವ್ಯಗಳು, ಅದರ ವಾಚನ, ಸಾಮಾನ್ಯ ಜನಪದದಿಂದ ದೂರವಾಗಿ ಓದುವಿಕೆ ಅಥವಾ ಹಾಡುವಿಕೆ ಶಾಸ್ತ್ರೀಯ ರೂಪ ಪಡೆದಿದ್ದರಿಂದ ಗಮಕ ವಿದ್ವಾಂಸರು ಮಾತ್ರ ಕಾವ್ಯವನ್ನು ಓದುವಂತಾಯಿತು.

ಗಮಕ ಕಲೆ ಮತ್ತು ಕವಿಗಳ ವಚನ:[ಬದಲಾಯಿಸಿ]


  • ಕವಿ ತನ್ನ ಭಾಷಾ ಪ್ರೌಡಿಮೆಯಿಂದ ಛಂದಸ್ಸು ಅಲಂಕಾರ ಉಪಮೆಗಳಿಂದ ಕಾವ್ಯವನ್ನು ಬರೆದಿರುತ್ತಾನೆ. ಅದನ್ನು ಎಲ್ಲರಿಗೂ ಓದಲೂ ಕಷ್ಟ. ಇಂತಹ ಕಾವ್ಯ ಎಲ್ಲಾ ಮಟ್ಟದ ಓದುಗರಿಗೂ ಅರ್ಥವಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಸೂಕ್ತ ರಾಗ, ಧ್ವನಿಯ ಮೂಲಕ ಶಬ್ದಗಳನ್ನು ಸರಿಯಾಗಿ ಉಚ್ಛರಿಸುತ್ತಾ, ವಾಕ್ಯಗಳನ್ನು - ಸಂಧಿಗಳನ್ನು ಬೇಕಿರುವಲ್ಲಿ ಒಡೆದು ಅರ್ಥ ಹೊರ ಹೊಮ್ಮುವಂತೆ ಓದಿ ಸಹೃದಯರಿಗೆ ತಲುಪಿಸಬೇಕಾಗುತ್ತದೆ. ಎಡವದೆ, ತಡವರಿಸದೆ, ತಲೆಕೊಡಹದೆ, ಕರ್ಕಶವಾಗಿ ಹೇಳದೆ, ಎಲ್ಲರಮನಸ್ಸಿಗೂ ತಾಗುವಂತೆ ಕಾವ್ಯ ವಾಚನ ಮಾಡುವುದೇ ಗಮಕ, ಹಾಗೆ ಓದುವವನೇ ಗಮಕಿ ಎಂದು ಹೇಳುತ್ತದೆ ನೀತಿ ಸಾರ.
  • ಕವಿ ರಾಘವಾಂಕನ ಹೇಳಿಕೆ - ಕಾವ್ಯ ಕನ್ನಿಕೆಗೆ ರಸವೇ ಜೀವನ; ಭಾವವೇ ಶರೀರ; ಅರ್ಥಗಳೇ ಅಂಗಗಳು; ಶಬ್ದ ಸಮೂಹಗಳೇ ಮಾತು, ಕಾವ್ಯಾಲಂಕಾರಗಳೇ ಆಭರಣ; ಪದಗಳ ಗಮನವೇ ನಡೆ; ಆನಂದ ವಾಸಿಸುವ ಮನೆ: ಆದ್ದರಿಂದ ಗಮಕಿಯಾದವನಿಗೆ ಸಂಗೀತದ ಜ್ಞಾನ ವಿರುವುದರ ಜೊತೆಗೆ ಕಾವ್ಯದ ಅರ್ಥ ಮತ್ತು ಲಕ್ಷಣಗಳೂ ಗೊತ್ತಿರಬೇಕು; ಅವಕ್ಕೆ ಚ್ಯುತಿಬಾರದಂತೆ ಕಾವ್ಯವನ್ನು ಓದುವವನೇ ಉತ್ತಮ ಗಮಕಿ .
  • ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರು, ಗದ್ಯ ರೂಪದ, ಯತಿಯಿಂದ ಕೂಡಿದ ವಚನ ಸಾಹಿತ್ಯಕ್ಕೂ ಸಂಗೀತ ಜೋಡಿಸಿ ಹಾಡುವುದಕ್ಕೆ ಆರಂಭಿಸಿದ ಮೇಲೆ, ವಚನಗಳನ್ನೂ ಗಮಕದಲ್ಲಿ ಹಾಡಲು ಕರ್ನಾಟಕ ಗಮಕ ಕಲಾ ಪರಿಷತ್ತು ಪ್ರೋತ್ಸಾಹ ನೀಡಿತು. ಗಮಕ ಕ್ಷೇತ್ರದಲ್ಲಿ ವಚನ ಗಾಯನವೂ ಒಂದು ಅಂಗವಾಯಿತು.
  • ಅಭಿಪ್ರಾಯ
  • ಪ್ರಸಿದ್ಧ ಗಮಕ ವಾಚನ-ವ್ಯಾಖ್ಯಾನಕಾರರೂ, ಯಕ್ಷಗಾನ (ಜಾಗರಣ ಬ್ಶೆಠಕ್) ಅರ್ಥಧಾರಿಗಳೂ ಆದ ಶ್ರೀ ಅಮಚಿ ಎಂ.ಆರ್. ಲಕ್ಷ್ಮಿನಾರಾಯಣ ಅವರು ಮನೆಘಟ್ಟದ ಶ್ರೀ ಸುಬ್ಬರಾಯರ ವಾಚನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೊಡುತ್ತಾ ಹೀಗೆ ದಾಖಲಿಸಿದ್ದಾರೆ.
  • ಕೆಲವು ಗಮಕಿಗಳು (ವಾಚನ ಮಾಡುವಾಗ ಪದ್ಯ ಇದ್ದಂತೆಯೇ ಓದದೆ) ಪದ್ಯದಲ್ಲಿನ, ಕರ್ತೃ, ಕರ್ಮ, ಕ್ರಿಯಾಪದಗಳನ್ನು ಸರಿಯಾಗಿ ಹೊಂದಿಸಿ ಕೆಲವು ಸಾಲುಗಳನ್ನು ಹಿಂದೆ ಮುಂದೆ ಮಾಡಿ ಪದ್ಯದಲ್ಲೇ ಇರದ ಬೇರೆ ಪದಗಳನ್ನು ತೂರಿಸಿ ತಮ್ಮ ಪರಾಕ್ರಮವನ್ನು ಮೆರೆಸುತ್ತಾರೆ. ಈ ಕಸರತ್ತು ಮಾಡುವಾಗ ಪದ್ಯದ ಛಂದೋಭಂಗವಾಗುತ್ತದೆ. ಕ್ರಮ ಪ್ರಕಾರ ಇರುವ ಮಾತ್ರಾಗಣಗಳ ಗುಚ್ಛ ಕಲಸುಮೇಲೋಗರವಾಗುತ್ತದೆ. ವ್ಯಾಖ್ಯಾನಕಾರರು ಇಲ್ಲದಿರುವಾಗ ಇದೆಲ್ಲಾ ಬೇಕಾಗಬಹುದು. ವ್ಯಾಖ್ಯಾನಕ್ಕೆ ಮತ್ತೊಬ್ಬರಿರುವಾಗ ಛಂದೋಭಂಗವಾಗದಂತೆ, ರಸ ಭಾವಗಳಿಗೆ ತಕ್ಕ ರಾಗದಲ್ಲಿ ಲಯಬದ್ಧವಾಗಿ ಹಾಡುವುದು ಮಾತ್ರಾ ವಾಚನಕಾರರ ಕರ್ತವ್ಯ.
  • ಈ ಕರ್ತವ್ಯಪಾಲನೆಯನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮನೆಘಟ್ಟದ ಟಿ.ಸುಬ್ಬರಾಯರು ಚಂದವಾಗಿ ಮಾಡುತ್ತಿದ್ದರು. ಭಾಮಿನಿ - ವಾರ್ಧಕ ಷಟ್ಪದಿಗಳಾಗಲಿ, ಕಂದ ಪದ್ಯವಾಗಲಿ, ವೃತ್ತ ರಗಳೆಯಾಗಿರಲಿ, ಅದನ್ನು ಮೊದಲಿಂದ ಕೊನೆಯವರೆಗೆ ಛಂದಸ್ಸು ವ್ಯತ್ಯಯವಾಗದಂತೆ ನಿರ್ದಿಷ್ಟಪಡಿಸಿಕೊಂಡ ರಾಗದಲ್ಲಿ ಒಮ್ಮೆ ಹಾಡಿ ಮುಗಿಸುತ್ತಿದ್ದರು. ಮಾತ್ರಾಗಣಗಳು ಪಲ್ಲಟವಾಗದಂತೆ 'ಗುರು-ಲಘು'ಗಳ ಉಚ್ಚಾರ-ಕಾಲ ಹೆಚ್ಚು ಕಡಿಮೆಯಾಗದಂತೆ ಸಾಹಿತ್ಯ ತಿಳಿಯುವಂತೆ ರಾಗ ತಪ್ಪದಂತೆ ಒಂದು ಪದ್ಯವನ್ನು ಸಾರೋದ್ಧಾರವಾಗಿ ಹಾಡುತ್ತಿದ್ದರು. ತೀರಾ ಕ್ಲಿಷ್ಟವಾದ ಪದಸಮುಚ್ಚಯಗಳಿದ್ದು ರೂಪಕ, ಶ್ಲೇಷ, ವ್ಯಂಗ್ಯ, ಒಗಟುಗಳಿದ್ದು ಗೂಢಾರ್ಥಗಳಿಂದ ಕೂಡಿದ ಪದ್ಯವಾದರೆ, ಅವು ಸ್ಪಷ್ಟವಾಗುವ ಹಾಗೆ ಎರಡನೇ ಬಾರಿ ಬಿಡಿಸಿ ಬಿಡಿಸಿ ಹಾಡುವ ಕ್ರಮವೂ ಇತ್ತು. ಅಂಥಹ ಸನ್ನಿವೇಶ ತೀರಾ ಕಡಿಮೆ. ವೀರ, ರೌದ್ರ, ಭಯಾನಕ ರಸಗಳಿಗೆ ಇವರ ಪುರುಷ ಗಂಭೀರ ಕಂಠ ಕೊಡುತ್ತಿದ್ದ ಅದ್ಭುತ ಪೋಷಣೆ ಹಾಗೂ ಔನ್ನತ್ಯ ಗಮನಾರ್ಹವಾದುದು.[೧][೨]

ಗಮಕ ಕಲೆ ಮತ್ತು ಕರ್ನಾಟಕ ಸರ್ಕಾರ :[ಬದಲಾಯಿಸಿ]


  • ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹನುಮಂತಯ್ಯನವರು ಸಂಸ್ಸೃತಿ ಪ್ರಸಾರ ಯೋಜನೆಯ ಅಡಿಯಲ್ಲಿ ಗಮಕ ವಾಚನಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದರು. ಪ್ರಾಚೀನ ಕಾವ್ಯಗಳನ್ನು ಕಡಿಮೆ ಬೆಲೆಯಲ್ಲಿ ಮುದ್ರಿಸಿ ಅವುಗಳನ್ನು ನಗರ, ಗ್ರಾಮ, ಹಳ್ಳಿ ಹಳ್ಳಿಗಳಲ್ಲಿ ಗಮಕಿಗಳು ಹೋಗಿ ಗಮಕ -ವಾಚನ ಮಾಡಲು ಗಮಕಿಗಳಿಗೆ ಸಾಕಷ್ಟು ಸಂಭಾವನೆ ಕೊಟ್ಟು ವ್ಯವಸ್ಥೆ ಮಾಡಿದ್ದರು. ಸುಮಾರು ೬೨೪( ಡೆಮ್ಮಿ ೪ರ) ಪುಟದ ಕುಮಾರವ್ಯಾಸ ರಚಿತ ಕರ್ಣಾಟ ಭಾರತ ಕಥಾಮಂಜರಿ (ಗದುಗಿನ ಭಾರತ) ಗ್ರಂಥವನ್ನು ಕೇವಲ ರೂ. ೨/- ಕ್ಕೆ ಜನರಿಗೆ ಸಿಗುವಂತೆ ಮಾಡಿದ್ದರು.
  • ಕನ್ನಡ ಸಾಹಿತ್ಯ ಪರಿಷತ್ತು ಗಮಕ ಕಲೆಯ ಪ್ರಸಾರಕ್ಕೆ ತೊಡಗಿಕೊಳ್ಳುವಂತೆ ಅದಕ್ಕೆ ಪ್ರೋತ್ಸಾಹಧನ ನೀಡುವ ಯೋಜನೆಯೂ ಆರಂಭವಾಯಿತು. ಅನಂತರ, ಕರ್ನಾಟಕ ಗಮಕ ಕಲಾ ಪರಿಷತ್ತು ಆರಂಭವಾದ ಮೇಲೆ ಅದು ಗಮಕ ತರಗತಿಗಳನ್ನು ನಡೆಸಿ ಗಮಕ ಶಿಕ್ಷಕರಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತಂದಿತು. ಈಗಲೂ ಕರ್ನಾಟಕ ಸರ್ಕಾರವು ಗಮಕ ಕಾರ್ಯಕ್ರಮಗಳಿಗೆ ಮತ್ತು ಕಾರ್ಯಕ್ರಮ ಕೊಡುವ ಗಮಕಿಗಳಿಗೆ ಪ್ರೋತ್ಸಾಹಧನ ನೀಡುತ್ತಿದೆ. ಉತ್ತಮ ಗಮಕಿಗಳಿಗೆ ರಾಜ್ಯ ಪ್ರಶಸ್ತಿಗಳನ್ನೂ ನೀಡುತ್ತಿದೆ.

ಕರ್ನಾಟಕ ಗಮಕ ಕಲಾ ಪರಿಷತ್ತು :[ಬದಲಾಯಿಸಿ]


  • ಬೆಂಗಳೂರಿನಲ್ಲಿ ಅಕ್ಟೋಬರ್ ೦೨, ೧೯೮೨ ರಂದು ಕರ್ನಾಟಕ ಗಮಕ ಕಲಾ ಪರಿಷತ್ತು ಎಂಬ ಸಂಸ್ಥೆಯು ಸ್ಥಾಪಿಸಲ್ಪಟ್ಟು ಅದಕ್ಕೆ ಮಾನ್ಯ ಶ್ರೀ ಜಿ. ನಾರಾಯಣ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಸುಮಾರು ೨೦ ವರ್ಷಗಳಕಾಲ ಅವರೇ ಅಧ್ಯಕ್ಷರಾಗಿ ಗಮಕ ಕಲೆಯು ಕರ್ನಾಟಕದಲ್ಲಿ ಪ್ರಸಾರವಾಗಲು ಶ್ರಮಿಸಿದರು. ಅವರ ಬಳಿಕ ಗಮಕಿ ಶ್ರೀ ಎಂ.ರಾಘವೇಂದ್ರರಾಯರು ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದರು. ಈಗಲೂ ಸರ್ಕಾರದ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ವರ್ಷಕ್ಕೊಮ್ಮೆ ಗಮಕ ಸಮ್ಮೇಳನ ನಡೆಯುವುದು.
ಮತ್ತೂರು ಶಿವಮೊಗ್ಗ ಜಿಲ್ಲೆ
ಮತ್ತೂರು ಶಿವಮೊಗ್ಗ ಜಿಲ್ಲೆಯಲ್ಲಿದ್ದು ಅಲ್ಲಿನ ಗಮಕ ಕಾರ್ಯಕ್ರಮದ ಚಟುವಟಿಕೆಯಿಂದ "ಗಮಕಗ್ರಾಮ"ವೆನಿಸಿದೆ. ಶ್ರೀ ಎಚ್.ಆರ್. ಕೇಶವಮೂರ್ತಿ, ಶ್ರೀ ಮತ್ತೂರು ಕೃಷ್ಣಮೂರ್ತಿ, ಮಾರ್ಕಂಡೇಯ ಅವಧಾನಿ ಇವರು ಗಮಕ ಕಲೆಗೆ ಮಾಡಿದ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಸಾಗರ - ಶಿವಮೊಗ್ಗ ಜಿಲ್ಲೆ
ಶಿವಮೊಗ್ಗಾ ಜಿಲ್ಲೆಯ ಸಾಗರ ನಗರದಲ್ಲಿ ೧೯೮೨ ರಿಂದಲೂ ಸತತವಾಗಿ ಗಮಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರಸಿದ್ಧ ಗಮಕಿ ಹೊಸಬಾಳೆ ಸೀತಾರಾಮರಾಯರು ೨೫ ವರ್ಷ ಅದ್ಯಕ್ಷರಾಗಿ ಅದನ್ನು ನಡೆಸಿ, ಈಗ ಗೌರವಾಧ್ಯಕ್ಷರಾಗಿದ್ದಾರೆ (೨೦೦೯ರಿಂದ). ಶ್ರೀ ಕೆ. ಕೃಷ್ಣಯ್ಯ, ನಿವೃತ್ತ ಪ್ರಿನ್ಸಿಪಾಲರು ಅಧ್ಯಕ್ಷರಾಗಿ ಸಂಫೂರ್ಣ ಗದುಗಿನ ಭಾರತ, ತೊರವೆ ರಾಮಾಯಣ. ಜೈಮಿನಿ ಭಾರತ, ಕನ್ನಡ ಭಾಗವತ ಇವುಗಳನ್ನು ಸಮಗ್ರವಾಗಿ ವಾಚನ-ವ್ಯಾಖ್ಯಾನ ಏರ್ಪಡಿಸಿ, ಗಮಕ ಕಲೆಯ ಪ್ರಸಾರ ಮಾಡುತ್ತಿದ್ದಾರೆ (೨೦೦೯ ರಿಂದ) ಅವರಿಗೆ ಒತ್ತಾಸೆಯಾಗಿ ಕಾರ್ಯದರ್ಶಿ ಶ್ರೀ ಕೆ.ಎಮ್. ರವೀಂದ್ರ, ಕೋಶಾಧ್ಯಕ್ಷರಾದ ಶ್ರೀ ಬಿ.ಎಸ್. ಚಂದ್ರಶೇಖರ ಇವರೂ ಇತರ ಸಮಿತಿ ಸದಸ್ಯರೂ ಸಹಕಾರ ನೀಡುತ್ತಿದ್ದಾರೆ. ಹೀಗೆ ಪ್ರಾಚೀನ ಕನ್ನಡ ಕಾವ್ಯಗಳ ಪರಿಚಯವನ್ನು ಜನರಿಗೆ ಗಮಕದ ಮೂಲಕ ತಲುಪಿಸಲಾಗುತ್ತಿದೆ.

ಗಮಕ ಕಲಾ ವೇದಿಕೆ - ಉತ್ತರ ಅಮೇರಿಕಾ :[ಬದಲಾಯಿಸಿ]

೧೧ ಆಗಸ್ಟ್ ೨೦೨೦ ರಂದು ಸ್ಥಾಪನೆಯಾದ ವೇದಿಕೆ ೨೦ ಡಿಸೆಂಬರ್ ೨೦೨೦ರಲ್ಲಿ ಉದ್ಘಾಟನೆಗೊಂಡು ಕಾರ್ಯ ನಿರ್ವಹಿಸುತ್ತಿದೆ. ೧೩ ಮೇ ೨೦೧೮ರಲ್ಲಿ ಸ್ಥಾಪನೆಯಾದ ಗಮಕ ವೇದಿಕೆ ಕೆನಡಾವು ಇದರಲ್ಲಿ ವಿಲೀನಗೊಂಡು ಒಂದಾಗಿದೆ. ಉತ್ತರ ಅಮೇರಿಕಾದ ಗಮಕಿಗಳು ಭಾರತದ ಗಮಕಿಗಳ ಸಹಕಾರದೊಂದಿದೆ ಕಾವ್ಯ ವಾಚನವನ್ನು ವಿದೇಶದಲ್ಲಿ ಬೆಳೆಸುವ ಉಳಿಸುವ ಕೆಲಸ ಮಾಡುತ್ತಿದೆ.

ಕರ್ನಾಟಕ ರಾಜ್ಯದ ಉತ್ತಮ ಗಮಕಿಗಳು :[ಬದಲಾಯಿಸಿ]


  • ಹತ್ತೊಂಭತ್ತನೇ ಶತಮಾನದ ಅಂಚಿನಲ್ಲಿದ್ದವರು: ಬಸಪ್ಪ ಶಾಸ್ತ್ರಿಗಳು ಮೈಸೂರು; ಗೌರೀ ದೇವುಡು ನರಸಿಂಹ ಶಾಸ್ತ್ರೀ ಮೈಸೂರು; ಸಂಗೋ ಬಿಂದೂರಾಯರು ಚಿತ್ರದುರ್ಗ; ಆಸೂರಿ ರಾಮಸ್ವಾಮಿ ಐಯಂಗಾರರು, ಮೈಸೂರು; ತಲಕಾಡು ಮಾಯೀಗೌಡರು, ಮುಳಿಯ ತಿಮ್ಮಪ್ಪಯ್ಯ; ಬಾಳಮ್ಮ ಪಾಟೀಲ್, ರಾಯಚೂರು; ಕೃಷ್ಣಗಿರಿ ಕೃಷ್ೞರಾವ್; ರಾಮಕೃಷ್ೞರಾವ್, ಬೆಂಗಳೂರು; ಹಾಡಿನ ನಾಗಮ್ಮ ಬೆಂಗಳೂರು; ದಿ. ಬಸವಾರಾಧ್ಯ, ಬೂದಿಕುಪ್ಪೆ; ಘನಪಾಠಿ ನಾರಾಯಣ ಎಸ್. ಮೈಸೂರು; ಎನ್ ಸೀತಾರಾಮ ಶಾಸ್ತ್ರೀ, ಚಳ್ಳಕೆರೆ; ಮಿರ್ಲೆ ಸುಬ್ರಹ್ಮಣ್ಯ ಶಾಸ್ತ್ರೀ; ಮಂಜೇಶ್ವರ ರಮಾಬಾಯಿ;
  • ೨೦ನೇ ಶತಮಾನದಲ್ಲಿ ಪ್ರಸಿದ್ಧರಾದವರು: ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರೀ, ಬೆಂಗಳೂರು; ಮೈ.ಶೇ. ಅನಂತಪದ್ಮನಾಭರಾವ್; ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರೀ, ಶಿವಮೊಗ್ಗ; ಹು.ಮ. ರಾಮಾರಾಧ್ಯ, ಬೆಂಗಳೂರು; ಎಂ. ರಾಘವೇಂದ್ರ ರಾವ್ ಬೆಂಗಳೂರು ; ಮಾಲೂರು ಗುಂಡಪ್ಪ ವೆಂಕಟೇಶಯ್ಯ;
  • ಈ ಎರಡನೇ ತಲೆಮಾರಿನ ಗಮಕಿಗಳು ಶಿಷ್ಯರನ್ನು ತಯಾರುಮಾಡಿದರು. ಗಮಕಕ್ಕೆ ಒಂದು ಪಠ್ಯ ಕ್ರಮ ಯೋಜಿಸಿ, ಕನ್ನಡ ಸಾಹಿತ್ಯ ಪರಿಷತ್ತು ಗಮಕ ಪರೀಕ್ಷೆಗಳನ್ನು ನಡೆಸಿತು, ಬಳಿಕ ಈ ಹೊಣೆಯನ್ನು ಅನಂತರ ಆರಂಭವಾದ ಗಮಕ ಕಲಾ ಪರಿಷತ್ತು ತೆಗೆದುಕೊಂಡು ಈಗಲೂ ಗಮಕ ಪರೀಕ್ಷೆಗಳನ್ನು ನಡೆಸುತ್ತಿದೆ.[೩]

ನಂತರದ ಪ್ರಸಿದ್ಧ ಗಮಕಿಗಳು[ಬದಲಾಯಿಸಿ]


  • ಶ್ರೀ ಎನ್. ಚನ್ನಬಸಪ್ಪ (೧೯೧೦--) ಬೆಂಗಳೂರು, ತಂದೆ ಶ್ರೀ ನಂಜುಂಡಪ್ಪನ್ವರು, ಬೆಂಗಳೂರು
  • ಶ್ರೀಮತಿ ಶಕುಂತಲಾಬಾಯಿ ಪಾಂಡುರಂಗರಾವ್ (೧೯೨೨--) "ಗಮಕ ಶಾರದೆ' ಅಭಿನಂದನ ಗ್ರಂಥ; ಕೃತಿ - ಗಮಕ ರಸಾಯನ, ಗಮಕ ಕಲೆ ಮತ್ತು ಮಹಿಳೆ; ಬೆಂಗಳೂರು
  • ಶ್ರೀಮತಿ ಗೌರಮ್ಮ ನಾಗರಾಜ್, (೧೯೩೪ --) ತಂದೆ ಸಂಸ್ಕೃತ ಮತ್ತು ಪಿಟೀಲು ವಿದ್ವಾಂಸ ಶ್ರೀ ಕೃಷ್ಣಸ್ವಾಮಿ, ಅರಕಲಗೂಡು
  • ಡಾ|| ವಿಜಯಮಾಲಾ ರಂಗನಾಥ್, ಬೆಂಗಳೂರು "ಕನ್ನಡದಲ್ಲಿ ಗಮಕ ಕಲೆ ಮತ್ತು ಸಾಹಿತ್ಯ ಒಂದು ಅಧ್ಯಯನ" - ಈ ಪ್ರೌಢ ಪ್ರಬಂಧಕ್ಕೆ ಪಿ.ಎಚ್.ಡಿ. ಪಡೆದಿರುತ್ತಾರೆ.
  • ಶ್ರೀ ಎಚ್. ಶೇಷಗಿರಿರಾವ್, ಮಂಡ್ಯ, ಹರಿಕಥಾ ವಿದ್ವಾಂಸರು - ಕೃತಿಕಾರರು; ಗಮಕ ಕಲಾರತ್ನ, ಕೀರ್ತನ ಕೇಸರಿ, "ಕರ್ಣಾಟಕ ಕಲಾತಿಲಕ" ಬಿರುದುಗಳು ಬಂದಿವೆ.
  • ಶ್ರೀ ಎಸ್. ನಾಗೇಶರಾವ್, ಶಿವಮೊಗ್ಗ (೧೯೧೨); ಮೈಸೂರು ವಾಸ; ಭಾವಪೂರ್ಣ ಶೈಲಿಯ ವಾಚನ ಮತ್ತು ರಂಗಾಭಿನಯದಲ್ಲಿ ಪ್ರಸಿದ್ಧರು, ೧೯೮೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದಿರುತ್ತಾರೆ.
  • ಶ್ರೀ ದಿ. ಟಿ. ರಾಮಾಶಾಸ್ತ್ರಿ, ಮತ್ತೂರು; ಶ್ರೀ ದಿ.ಕೆ.ಎನ್. ವೆಂಕಟೇಶಯ್ಯನವರು
  • ಶ್ರೀ ದಿ. ತಿರುಮಲ ಅವಧಾನಿಗಳು ಮತ್ತೂರು ; ಶ್ರೀ ದಿ. ಗುಡದಪ್ಪ ಚನ್ನಗಿರಿ ಗಮಕಿ, ಸಾಹಿತ್ಯ ಕೃತಿಕಾರರು
  • ಶ್ರೀ ಮತ್ತೂರು ಕೃಷ್ಣಮೂರ್ತಿ ವ್ಯಾಖ್ಯಾನಕಾರರು. ಶ್ರೀ ಎಸ್.ಆರ್. ರಾಮಾಶಾಸ್ರಿಗಳು ಹೊಸಹಳ್ಳಿ ; ಶ್ರೀ ಎಂ.ಎಲ್.ರಘುಪತಿಶಾಸ್ತ್ರಿ, ಮತ್ತೂರು, ವ್ಯಾಖ್ಯಾನಕಾರರು
  • ಶ್ರೀ ಮನೆಘಟ್ಟದ ಟಿ. ಸುಬ್ಬರಾಯರು ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರು.
  • ಶ್ರೀ ಹೊಸಬಾಳೆ ಸೀತಾರಾಮರಾಯರು ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರು.
  • ಶ್ರೀ ಎಚ್.ಆರ್. ಕೇಶವ ಮೂರ್ತಿಗಳು ಹೊಸಹಳ್ಳಿ, ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರು, ಕುಮಾರವ್ಯಾಸ ಪ್ರಶಸ್ತಿಪಡೆದವರು.
  • ಶ್ರೀ ಎಂ.ಆರ್. ಕೇಶವಮೂರ್ತಿ, ಮತ್ತೂರು
  • ಶ್ರೀ ಕೆ.ವಿ. ನರಹರಿಶರ್ಮಾ, ಕೆರೆಕೊಪ್ಪ, ಸೊರಬ ತಾ||
  • ಶ್ರೀ ಎಂ.ಎಸ್.ನಾಗರಾಜ, ಮನೆಘಟ್ಟ
  • ಶ್ರೀಮತಿ ಸಮುದ್ಯತಾ ವೆಂಕಟರಾಮು, ಶೆಡ್ತಿಕೆರೆ, ಸಾಗರ
  • ಶ್ರೀಮತಿ ಸುಕನ್ಯಾ ಗಜಾನನ ಭಟ್, ಸಾಗರ
  • ಶ್ರೀಮತಿ ಸೀತಾ ಬಾಪಟ್, ಸಾಗರ
  • ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ವಾಚನ-ವ್ಯಾಖ್ಯಾನ ವಿದುಷಿ, ಬೆಂಗಳೂರು
  • ಪ್ರೊ. ಕೆ.ಆರ್. ಕೃಷ್ಣಯ್ಯ ವ್ಯಾಖ್ಯಾನಕಾರರು, ಸಾಗರ[೪][೫]
  • ಶ್ರೀಮತಿ ನಿರ್ಮಲಾ ಪ್ರಸನ್ನ, ಬೆಂಗಳೂರು ("ಕರ್ನಾಟಕ ಕಲಾಶ್ರೀ" ಪುರಸ್ಕೃತರು)
  • ಡಾ. ಎ.ವಿ.ಪ್ರಸನ್ನ, ಬೆಂಗಳೂರು - ವ್ಯಾಖ್ಯಾನಕಾರರು ("ಕುಮಾರವ್ಯಾಸನ ಕಾವ್ಯಚಿತ್ರಗಳು: ಒಂದು ಅಧ್ಯಯನ" ಎಂಬ ಪ್ರೌಢ ಪ್ರಬಂಧಕ್ಕೆ D.Litt. ಪದವಿಯನ್ನು ಪಡೆದವರು)

ನೋಡಿ[ಬದಲಾಯಿಸಿ]

ಪೂರಕ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ರನ್ನನ ಗದಾಯುದ್ಧಂ - ಪಠ್ಯದ ಪಯಣದ ಹೆಜ್ಜೆ ಗುರುತುಗಳು;ಕನ್ನಡ ಅಧ್ಯಯನ ಪೀಠ;ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ;ಪುರುಷೋತ್ತಮ ಬಿಳಿಮಲೆ;ಪ್ರಾಧ್ಯಾಪಕ,;ಕನ್ನಡ ಅಧ್ಯಯನ ಪೀಠ,ಜೆ ಎನ್ ಯು
  2. ಮನೆಘಟ್ಟದ ಟಿ.ಸುಬ್ಬರಾಯರು- ಪರಿಚಯ ಗ್ರಂಥ
  3. 'ಗಮಕ ಸಾಗರ' ೨೦೦೬:ಮಲೆನಾಡು ಗಮಕ ಕಲಾ ಸಂಘ ಸಾಗರ ದ ರಜತೋತ್ಸವ ಸ್ಮರಣ ಸಂಚಿಕೆ ಮತ್ತು ಇತರೆ ಲೇಖನಗಳು
  4. 'ಗಮಕ ಸಿರಿ' ನಾಲ್ಕನೇ ಗಮಕಸಮ್ಮೇಳನ ಪತ್ರಿಕೆ - ೧೯೯೭
  5. ಧರ್ಮ ಬಾರತಿ - ಮಾಸಿಕ ಜನವರಿ ೨೦೧೩
"https://kn.wikipedia.org/w/index.php?title=ಗಮಕ&oldid=1163419" ಇಂದ ಪಡೆಯಲ್ಪಟ್ಟಿದೆ