ಔಷಧಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಔಷಧವಾಗಿ ಬಳಸಬಹುದಾದ ಇಲ್ಲ ವಸ್ತುಗಳ ಗುಣ, ತಯಾರಿಕೆ, ವರ್ತನೆ, ಪ್ರಭಾವಗಳೇ ಮುಂತಾದ ವಿಷಯಗಳನ್ನು ಕುರಿತ ವಿಜ್ಞಾನ (ಫಾರ್ಮಕಾಲಜಿ).


ಇತಿಹಾಸ[ಬದಲಾಯಿಸಿ]

ಮದ್ದುಗಳ ವಿಷಯವಾಗಿ ಎಲ್ಲ ತೆರನ ತಿಳಿವಳಿಕೆಗಳನ್ನೂ ಒದಗಿಸುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಾಣವಿರುವ ಎಲ್ಲ ಬಗೆಗಳ ಜೀವಿಗಳ ಮೇಲೂ ರಾಸಾಯನಿಕ ವಸ್ತುಗಳ ಪ್ರಭಾವವನ್ನು ತಿಳಿಸುವ ವಿಜ್ಞಾನ ಎನ್ನಬಹುದು. ಕೆಲವೇಳೆ ಮದ್ದುಗಳ ಕೇವಲ ಮೈಯಲ್ಲಿನ ವರ್ತನೆಗೆ ಅಂದರೆ ಅವುಗಳ ಪ್ರಭಾವಗಳ ತಿಳಿವಳಿಕೆಗೆ ಇದನ್ನು ಮಿತಿಗೊಳಿಸುವುದುಂಟು. ಇದರಿಂದಲೇ ವೈದ್ಯವಿಜ್ಞಾನದಲ್ಲಿ ಇದರ ಹಿರಿಯ ಪಾತ್ರ ಗೊತ್ತಾಗುವುದು. ಬಳಸುವ ರೂಪದಲ್ಲಿ ಮದ್ದುಗಳನ್ನು ಒದಗಿಸುವು ಔಷಧಗಾರಿಕೆ (ಫಾರ್ಮಸಿ) ಔಷಧವಿಜ್ಞಾನದ ಒಂದು ವಿಭಾಗ. ಅಷ್ಟೇ ಅಲ್ಲದೆ, ಇದರಲ್ಲಿ ರೋಗಚಿಕಿತ್ಸೆವಿಜ್ಞಾನ (ತೆರಪ್ಯುಟಿಕ್ಸ್‌), ವಿಷವಿಜ್ಞಾನ (ಟಾಕ್ಸಿಕಾಲಜಿ) ಸೇರಿವೆ. ಒಂದು ರೀತಿಯಲ್ಲಿ ಪ್ರಯೋಗಾಲಯದಲ್ಲಿ ಪ್ರಾಣಿಗಳ ಮೇಲೆ ಪರೀಕ್ಷಿಸಿ ಮದ್ದುಗಳನ್ನು ಚಿಕಿತ್ಸೆಗಾಗಿ ಸೂಚಿಸುವ ವಿಜ್ಞಾನ ಎನ್ನಲೂಬಹುದು. ಹುಟ್ಟು, ಮೂಲ: ರೋಗ ನಿವಾರಣಿಗಾಗಿನ ಚಿಕಿತ್ಸೆ ಮಾನವನ ಆದಿಯಿಂದಲೇ ಹುಟ್ಟಿರಬಹುದಾದರೂ ವಿಜ್ಞಾನದ ಅರಿವು ಹೆಚ್ಚಿ ಬಂದ ಕಳೆದ ಶತಮಾನದ ತನಕ ಬಹುಮಟ್ಟಿಗೆ ಕುರುಡು ನಂಬಿಕೆ. ಮಂತ್ರ, ತಂತ್ರ, ಧರ್ಮಗಳನ್ನು ನೆಚ್ಚಿಕೊಂಡಿದ್ದು, ಕೇವಲ ಮದ್ದನ್ನು ಸುಮ್ಮನೆ ಕೊಟ್ಟು ಒಪ್ಪುತಪ್ಪು ನೋಡುವುದರ ಮೇಲಿತ್ತು. ಯುರೋಪಿನಲ್ಲಿ ಪುರಾತನ ಗ್ರೀಕರಿಗಂತೂ ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಗ್ಯಾಲೆನನ (131-20) ತತ್ತ್ವಗಳೇ ವೇದವಾಕ್ಯಗಳಾಗಿದ್ದುವು. ಅವನ ನೂರಾರು ಬರೆಹಗಳಲ್ಲೂ ಅವನವೇ ಕಣ್ಣರಿಕೆಗಳೊಂದಿಗೆ ಎಷ್ಟೊ ಮದ್ದುಗಳನ್ನು ಸೂಚಿಸಿರುವುದರೊಂದಿಗೆ ಅವನ ಮೊಂಡು ವಾದಗಳೂ ತುಂಬಿದ್ದುವು. ಈ ಬರೆಹಗಳನ್ನು ಸಾವಿರಾರು ವರ್ಷಗಳ ತನಕ ಯಾರೂ ಎದುರಿಸಲಾರದೆ ಅವು ಅಧಿಕೃತಗೊಂಡು ಯಾರಾದರೂ ಪ್ರಯೋಗ ನಡೆಸಲೂ ಕಂಡದ್ದನ್ನು ಕಂಡಹಾಗೇ ಹೇಳಲೂ ಹಿಂಜರಿಯುತ್ತಿದ್ದರು. ಆದರೆ ಗ್ಯಾಲೆನನ ಯುಗದ ಎದುರು ಮೊದಲು ಎದೆಗಾರಿಕೆ ತೋರಿ ಕಟುವಾಗಿ ಟೀಕಿಸಿದವ ಪ್ಯಾರಸೆಲ್ಸಸ್ (1493-1541). ಉತ್ತರ ಯುರೋಪಿನಲ್ಲಿ ಅಲೆದಾಡುತ್ತಿದ್ದ ಈ ಬಾಯಿಬಡಕ ಅಲ್ಲಲ್ಲಿ ಕೀಟಲೆ ಎಬ್ಬಿಸಿ ತೊಡರುತ್ತಿದ್ದರೂ ತನ್ನ ಸಫಲ ಮದ್ದುಗಾರಿಕೆಯ ಕಾರಣದಿಂದ ಪಾರಾಗುತ್ತಿದ್ದ. ಮಿಶ್ರಣಗಳಲ್ಲಿ ಹತ್ತಾರು ಮದ್ದುಗಳನ್ನು ಗ್ಯಾಲೆನ್ ಬೆರೆಸುತ್ತಿದ್ದೆಡೆಯಲ್ಲಿ ಇವನು ಕೆಲವೇ ಕೆಲವು ಹೊಸವನ್ನು ಹಾಕಿ ಪರಿಣಾಮಕಾರಿ ಆಗುವುದನ್ನು ತೋರಿಸಿಕೊಟ್ಟ.

ಫಾರ್ಮಕಾಲಜಿ[ಬದಲಾಯಿಸಿ]

ಆರೋಗ್ಯದಲ್ಲೂ ರೋಗಗಳಲ್ಲೂ ಮೈ ಅಂಗರಚನೆ, ನಿಜಗೆಲಸಗಳ ತಿಳಿವಳಿಕೆ ಮುಂದಿನ 3 ಶತಮಾನಗಳಲ್ಲಿ ಕೂಡಿಬಂದಿತಾದರೂ ರೋಗಚಿಕಿತ್ಸೆ ಮಾತ್ರ ಒಂದು ಕಲೆಯಾಗಿತ್ತೇ ಹೊರತು ವಿಜ್ಞಾನ್ರವಾಗಿರಲಿಲ್ಲ. ವೈದ್ಯದಲ್ಲಿ ಬಳಸುವ ಮದ್ದುಗಳಿಗೇ ಡೇಲ್ (1692) ಫಾರ್ಮಕಾಲಜಿ (ಔಷಧವಿಜ್ಞಾನ) ಪದವನ್ನು ಮೊದಲು ಬಳಸಿದ್ದ. ಆಗಿನ ಕಾಲದಲ್ಲಿ ಒಣಗಿಸಿದ ಕರಿನಾಗರ, ನರಿಗಳ ಪುಪ್ಪುಸ, ಗಲ್ಲಿಗೇರಿದವರ ತಲೆ ಸುಂಡುಗಳ ಜೊತೆಗೆ ಕೆಲವು ಗುಣಕಾರಿ ಮದ್ದುಗಳೂ ವೈದ್ಯದಲ್ಲಿ ಬಳಕೆಯಲ್ಲಿದ್ದುವು. 1850ರ ಸುಮಾರಿನಲ್ಲಿ ಫ್ರೆಂಚ್ ಅಂಗಕೆಲಸ ವಿಜ್ಞಾನಿ ಫ್ರಾಂಕಾಯ್ಸ್‌ ಮೆಜೆಂಡಿ ತೋರಿಸಿಕೊಡುವ ತನಕ ಮದ್ದುಗಳ ವರ್ತನೆಯನ್ನು ತಿಳಿಯಲು ಪ್ರಯೋಗಾಲಯದ ಶೋಧನೆಗಳ ಸುಳಿವೇ ಇರಲಿಲ್ಲ. ಮೈಯಲ್ಲಿ ನಡೆಯುತ್ತಿರುವ ನಿಜಗೆಲಸಗಳಲ್ಲಿನ ಬದಲಾವಣೆಗಳನ್ನು ಗುರುತಿಸಿ ಅಳೆಯುವಂಥ ವಿಧಾನಗಳನ್ನು ಹೊಸ ಅಂಗ ಕೆಲಸ ವಿಜ್ಞಾನಿಗಳು ಹೊರತಂದ ಮೇಲೆ ರಾಸಾಯಾನಿಕ ವಸ್ತುಗಳ ಮೈಮೇಲಿನ ಪ್ರಭಾವಗಳನ್ನು ಗುರುತಿಸುವಂತಾಯಿತು. ಇದಕ್ಕೂ ಹೆಚ್ಚಿನದಾಗಿ, ರಸಾಯನ ವಿಜ್ಞಾನದಲ್ಲಿ ಬಹಳ ಮುನ್ನಡೆಯಾಗಿತ್ತು. ಒಂದೊಂದೂ ಒಂದೊಂದು ತೆರೆನಾಗಿದ್ದುದರಿಂದ ಕಚ್ಚುಮದ್ದು, ಮೂಲಿಕೆಗಳ ಕಷಾಯಗಳಿಂದ ಪ್ರಯೋಗ ಈಡೇರುತ್ತಿರಲಿಲ್ಲ. 19ನೆಯ ಶತಮಾನದ ಮೊದಲಲ್ಲಿ ಫ್ರಾನ್ಸ್‌, ಜರ್ಮನಿಗಳ ರಸಾಯನ ವಿಜ್ಞಾನಿಗಳು ಗಿಡಮರಗಳಿಂದ ಚೊಕ್ಕ ರೂಪದಲ್ಲಿ ಕ್ವೀನೀನು, ಮಾರ್ಫೀಯ, ಸ್ಟಿಕ್ನೀನು, ಅಟ್ರೋಪೀನುಗಳೇ ಮುಂತಾದುವನ್ನು ಬೇರ್ಪಡಿಸಿದಾಗ ಸ್ಥಿತಿ ಉತ್ತಮವಾಯಿತು.

ಚೊಕ್ಕ ರೂಪದಲ್ಲಿ ಮದ್ದುಗಳು ದೊರಕುವಂತಾಯಿತು. ಜರ್ಮನಿಯಲ್ಲಿ ಮುಖ್ಯವಾಗಿ ಬಣ್ಣವಸ್ತುಗಳ ತಯಾರಿಕೆಯಲ್ಲಿ ಉಪಉತ್ಪನ್ನಗಳಾಗಿ ಬಂದವೇ ಹೊಸ ಮದ್ದುಗಳ ವಿಕಾಸಕ್ಕೆ ಮೂಲವಾದುವು. ಗುಂಡಿಗೆಯ ಬಡಿತ ವೇಗ, ಉಸಿರಾಟದ ಕ್ರಮ, ಮೂತ್ರಸುರಿಕೆ, ಜೊಲ್ಲು ಸುರಿತವೇ ಮುಂತಾದ ಅಂಗಕೆಲಸಗಳ ಮೇಲೆ ಈ ಹೊಸ ರಾಸಾಯನಿಕಗಳ ಪ್ರಭಾವ ಕಂಡ, ಇಲ್ಲವೇ ಅಂಗಕೆಲಸಗಳನ್ನು ಶೋದಿಸುವುದರಲ್ಲಿ ಇವನ್ನು ಮೊದಮೊದಲಲ್ಲಿ ಬಳಸಿದ ಜನರೇ ಅಂದಿನ ಔಷಧ ವಿಜ್ಞಾನಿಗಳಾಗಿದ್ದರು. ಹೀಗಿರುವಾಗ ಔಷಧವಿಜ್ಞಾನದಲ್ಲೇ ಪ್ರಯೋಗಗಳನ್ನು ನಡೆಸಲೆಂದೇ ಡೊಪಾರ್ಟಿನಲ್ಲಿ ಮೊದಲು ಕಾಲಿಟ್ಟ ಬುಖೀಂ (1847-47) ಮೈಯಲ್ಲಿ ಮದ್ದುಗಳ ಪ್ರಭಾವವನ್ನು ಸುಮ್ಮನೆ ವಿವರಿಸಿವುದೇ ಅಲ್ಲದೆ ಅರ್ಥವನ್ನೂ ಹೇಳಬೇಕೆಂದ. ತನ್ನ ಕಾಲಿನ ಮೇಲೇ ತಾನು ನಿಂತ ಪ್ರಯೋಗವಿಜ್ಞಾನವಾಗಿ ಔಷಧವಿಜ್ಞಾನವನ್ನು ನೆಲೆಗೊಳಿಸಿದವ ಜರ್ಮನಿಯ ಮಹಾವಿಜ್ಞಾನಿ ಅಸ್ವಾಲ್ಡ್‌ ಸ್ಮೀಡರ್ಬರ್ಗ್, ಆಹಾರ ವಸ್ತುಗಳನ್ನು ಬಿಟ್ಟರೆ ಮೈಮೇಲೆ ರಾಸಾಯನಿಕಗಳಿಂದಾಗುವ ಕೆಡುಕನ್ನು ತಿಳಿವುದೇ ಇದರ ಉದ್ದೇಶವೆಂದು ವಿವರಿಸಿದ. ಔಷಧವಿಜ್ಞಾನದ ಮೊಟ್ಟಮೊದಲ ಪಠ್ಯಪುಸ್ತಕವನ್ನು ಬರೆದವನೂ ಇವನೇ. ಔಷಧವಿಜ್ಞಾನದಲ್ಲಿನ ಪ್ರಯೋಗಗಳ ವರದಿಗಳಿಗೇ ಮೀಸಲಾದ ಮೊದಲ ಪತ್ರಿಕೆ ಹೊರಡಿಸಲು ನೆರವಾಗಿ ಸ್ಟ್ರಾಸ್ಬರ್ಗಿನಲ್ಲಿ ಔಷಧವಿಜ್ಞಾನಕ್ಕಾಗಿ ಒಂದು ಶಾಲೆಯನ್ನು ತೆರೆದವನೂ ಇವನೇ. ಈ ಶಾಲೆ ಪ್ರಪಂಚದ ಎಲ್ಲೆಡೆಗಳಿಂದಲೂ ಕಲಿತವರನ್ನು ಸೆಳೆಯಿತು. ಪ್ರಪಂಚದ ಬೇರೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಔಷಧವಿಜ್ಞಾನ ಇಲಾಖೆಗಳನ್ನು ತೆರೆದವರು ಒಂದಿಲ್ಲೊಂದು ರೀತಿಯಲ್ಲಿ ಇಲ್ಲಿ ಕಲಿತು ಚಿಗುರಿ ಮೊಳೆತವರೇ.

ಗುರಿ, ವಿಧಾನಗಳು[ಬದಲಾಯಿಸಿ]

ಮದ್ದುಗಳಿಂದ ಮೈಮೇಲೆ ಆಗುವ ಪ್ರಬಾವಗಳನ್ನು ಚೆನ್ನಾಗಿ ತಿಳಿಯಬೇಕಾದರೆ ಮೊದಲು ಅಂಗಗಳ ನಿಜಗೆಲಸಗಳನ್ನು ತಿಳಿದುಕೊಂಡು ಅಳೆಯುವುದು ಗೊತ್ತಿರಬೇಕು. ಅಲ್ಲದೆ, ಪೆಟ್ಟು, ಗಾಯ, ರೋಗಗಳಿಂದ ಅಂಗರಚನೆ, ನಿಜಗೆಲಸಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿಸಿಕೊಡುವ ರೋಗವಿಜ್ಞಾನದ (ಪೆಥಾಲಜಿ) ಅರಿವು ಚೆನ್ನಾಗಿರಬೇಕು. ಇದನ್ನು ತಿಳಿಯಲು ಬದುಕಿರುವ ಪ್ರಾಣಿಗಳ ಅಂಗಗಳನ್ನು ಬರಿಗಣ್ಣಿನಿಂದ ನೋಡುವುದಲ್ಲದೆ ಊತಕಗಳು, ಜೀವಕಣಗಳನ್ನು ಸೂಕ್ಷ್ಮದರ್ಶಿಯ ಅಡಿಯಲ್ಲೂ ಮೈರಸಗಳು, ಮಲ, ಮೂತ್ರ, ಬೆವರೇ ಮುಂತಾದವನ್ನು ರಾಸಾಯನಿಕವಾಗೂ ಪರೀಕ್ಷಿಸಬೇಕಾಗಬಹುದು. ಮೈಯೊಳಗಿನ ನಿಜಗೆಲಸಗಳ ಮೇಲೆ ಮದ್ದುಗಳ ಪ್ರಭಾವ ಗೊತ್ತಾಗಬೇಕಾದರೆ ಜೀವರಸಾಯನವಿಜ್ಞಾನ ತಿಳಿದಿರಲೇಬೇಕು. ನಂಜುರೋಧಕಗಳು (ಆಣಟಿಸೆಪ್ಟಿಕ್ಸ್‌), ಜೀವನಿರೋಧಕ (ಆಂಟಿಬಂiೆÆಟಿಕ್) ಮದ್ದುಗಳ ಪ್ರಭಾವ ಕಾಣಬೇಕಾದರೆ ಏಕಾಣುಜೀವಿವಿಜ್ಞಾನದ (ಬ್ಯಾಕ್ಟೀರಿಯಾಲಜಿ) ಕಲ್ಪನೆ, ವಿಧಾನಗಳ ತಿಳಿವಳಿಕೆ ಇರಲೇಬೇಕು. ಗಿಡಮೂಲಿಕೆ, ನಾರುಬೇರುಗಳಲ್ಲಿನ ಮದ್ದುಗಳನ್ನು ಪಡೆಯಲು ರಸಾಯನವಿಜ್ಞಾನ, ಸಸ್ಯವಿಜ್ಞಾನಗಳು ಗೊತ್ತಿರಬೇಕಾಗುತ್ತದೆ. ಒಂದು ಮದ್ದಿನ ರಾಸಾಯನಿಕ ರಚನೆಗೂ ಮೈಯಲ್ಲಿ ಅದರ ವರ್ತನೆಗೂ ನಿಕಟ ಸಂಬಂಧ ಇರುವುದನ್ನು ಔಷಧವಿಜ್ಞಾನಪರಿಣತರು ಬಲುಬೇಗನೆ ಕಂಡುಕೊಂಡರು. ರಸಾಯನವಿಜ್ಞಾನಪಟುಗಳು ಮೂಲದವನ್ನು ಹೋಲುವ ಹೊಸ ಮದ್ದುಗಳನ್ನು ತಯಾರಿಸಿದಂತೆಲ್ಲ ಇದು ಇನ್ನಷ್ಟು ಖಚಿತವಾಗುತ್ತ ಬಂದಿದೆ. ಮದ್ದುಗಳಲ್ಲಿ ಗೊತ್ತಾದ ಪ್ರಭಾವಕ್ಕೆ ಕಾರಣವಾದ ರಾಸಾಯನಿಕ ರಚನೆಯ ಅಣ್ವಂಶ ತಿಳಿದರೆ, ಕೊಂಚಮಟ್ಟಿಗೆ ಬದಲಿಸಿ ಇನ್ನೂ ಒಳ್ಳೆಯ ನಿರಪಾಯಕರ ಮದ್ದುಗಳನ್ನು ಕೃತಕವಾಗಿ ತಯಾರಿಸಲು ಅನುಕೂಲ. ಬಳಕೆ ಮದ್ದುಗಳಲ್ಲಿ ಬಹುಪಾಲು ಇಂಗಾಲ ಪರಮಾಣುಗಳಿರುವುದರಿಂದ ಜೈವಿಕ ರಸಾಯನವಿಜ್ಞಾನದ ಪರಿಣತೆಯೂ ಇರಬೇಕು.

ಎರಡನೆಯ ಮಹಾಯುದ್ಧ ಮುಗಿದ ಮೇಲಿನ ಶಾಂತ ಕಾಲದಲ್ಲಿ ಪರಮಾಣು ಮೂಲಗಳು ಔಷಧವಿಜ್ಞಾನಿಗಳಿಗೂ ದೊರೆತುದರಿಂದ ಶಾಸ್ತ್ರದ ಮೇಲೆ ಹೊಸ ಬೆಳಕು ಬಿತ್ತು. ನಾವು ಸೇವಿಸಿದ ಮದ್ದು ಮೈಯಲ್ಲಿ ಯಾವಾಗ, ಎಲ್ಲಿ ಏನಾಗುತ್ತದೆಂದು ವಿವರವಾಗಿ ತಿಳಿಯುವುದು ಆ ತನಕ ಸುಲಭವಾಗಿರಲಿಲ್ಲ. ಪ್ರಭಾವಿ ಮದ್ದುಗಳು, ವಿಷಕರ ವಸ್ತುಗಳನ್ನು ಕೊಡುವುದೇ ಬಹು ಸ್ವಲ್ಪ ಪ್ರಮಾಣದಲ್ಲಿ. ಅಷ್ಟು ಕೊಂಚ ಮೈಯಲ್ಲೆಲ್ಲ ಹರಡಿಕೊಂಡರೆ ಒಂದು ಊತಕದಲ್ಲೋ ಅಂಗದಲ್ಲೋ ಸಾಂದ್ರವಾಗಿ ಇರುವಷ್ಟನ್ನು ಕೂಡ ಅಳೆಯುವಂತಿಲ್ಲ. ಅದು ಎಷ್ಟು ಕಾಲ ಉಳಿದಿರುವುದೆಂದೂ ಗೊತ್ತಾಗದು. ಇದಕ್ಕೆ ಉತ್ತರವೆಂಬಂತೆ (1945)ರಿಂದಲೂ ವಿಕಿರಣಶೀಲ ಸಮಸ್ಥಾನಿಗಳು (ರೇಡಿಯೊ ಆಕ್ಟಿವ್ ಐಸೊಟೋಪ್ಸ್‌) ಕೈಲಿವೆ. ಇವುಗಳ ವಿಕಿರಣತೆ ತೀರ ಕೊಂಚವಾದ್ದರಿಂದ ಜೀವಿಗಂತೂ ಯಾವ ತೊಂದರೆಯೂ ಇಲ್ಲ. ಪರೀಕ್ಷಿಸಬೇಕಿರುವ ಮದ್ದುಗಳೊಂದಿಗೆ ಇವನ್ನು ಬೆರೆಸಿಕೊಟ್ಟು ಗೀಗರ್ ಗುಣಕದಿಂದ ಮೈಯಲ್ಲಿನ ಬೇರೆ ಬೇರೆ ಅಂಗಗಳಲ್ಲಿ ಮದ್ದಿನ ಸುಳಿವನ್ನು ಹಿಡಿಯಬಹುದು. ಸುಳಿವಿಡಿತ ಸಂಯುಕ್ತಗಳನ್ನು (ಟ್ರೇಸರ್ ಕಂಪೌಂಡ್ಸ್‌) ಕೃತಕ ರಾಸಾಯನಿಕಗಳಾಗಿ ತಯಾರಿಸುವುದುಂಟು. ಅದಾಗದಿದ್ದಲ್ಲಿ ಗಿಡಮರವನ್ನೋ ಜೀವಿಯನ್ನೋ ವಿಕಿರಣತೆಗೊಡ್ಡಿ ಬೇಕಿರುವ ವಿಕಿರಣಶೀಲ ಸಂಯುಕ್ತಗಳು ತಯಾರಾಗುವಂತೆ ಮಾಡಿ ಹೊರತೆಗೆದು ಚೊಕ್ಕಪಡಿಸಬಹುದು. ಒಟ್ಟಿನಲ್ಲಿ ಮದ್ದನ್ನು ಕೊಟ್ಟರೆ ಅಂಗಗಳ ನಿಜಗೆಲಸಗಳಲ್ಲಾಗುವ ವ್ಯತ್ಯಾಸಗಳನ್ನು ಗುರುತಿಸಿವುದೂ ಮದ್ದಿನ ಗತಿ ಏನಾಗುವುದೆಂದು ತಿಳಿವುದೂ ಔಷಧವಿಜ್ಞಾನದ ಪ್ರಯೋಗಗಳ ಮುಖ್ಯ ಗುರಿ. ಈ ವ್ಯತ್ಯಾಸಗಳನ್ನು ಅಂಗಕ್ರಿಯಾಶಾಸ್ತ್ರ, ರಸಾಯನವಿಜ್ಞಾನ, ಭೌತವಿಜ್ಞಾನಗಳ ವಿಧಾನಗಳಲ್ಲಿ ವಿವರಿಸಬೇಕು. ರಸಾಯನವಿಜ್ಞಾನ ರೀತಿಯಾಗಿ ರಾಸಾಯನಿಕ ವರ್ತನೆಗಳನ್ನು ಮೈಯಲ್ಲಿ ನಡೆವವಕ್ಕೆ ಅನ್ವಯಿಸಿದರೆ ಜೀವರಸಾಯನವಿಜ್ಞಾನವಾಯಿತು. ಇದರಿಂದ ಅಂಗಕ್ರಿಯಾವಿಜ್ಞಾನ ಮತ್ತಿತರ ಜೀವವಿಜ್ಞಾನಗಳ ತಿಳಿವಳಿಕೆ ಹೆಚ್ಚುತ್ತದಲ್ಲದೆ ಮದ್ದುಗಳನ್ನು ಇನ್ನೂ ಚೆನ್ನಾಗಿ ಬಳಸಬಹುದು. ಮದ್ದುಗಳಲ್ಲಿನ ಹೆಚ್ಚಿನ ಗುಣಗಳು ಗೊತ್ತಾಗಿ ಕೆಡುಕಿಲ್ಲದವನ್ನು ತಯಾರಿಸಲು ಅನುವಾಗುತ್ತದೆ. ಕೈಗಾರಿಕೆಯ, ಬೇಸಾಯಗಾರಿಕೆಯ, ಮನೆಬಳಕೆಯ ವಸ್ತುಗಳನ್ನು ಸಹ ಹೀಗೆ ರೂಪಿಸಬಹುದು.

ಸಂಶೋಧನೆ[ಬದಲಾಯಿಸಿ]

ವೈದ್ಯ, ಔಷಧಗಾರಿಕೆ, ದಂತವೈದ್ಯ, ದನವೈದ್ಯಗಳನ್ನು ಕಲಿವವರ ಪಾಠಕ್ರಮಗಳಲ್ಲಿ ಔಷಧವಿಜ್ಞಾನವೂ ಒಂದು. ಆದ್ದರಿಂದ ಇವನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುತ್ತಾರೆ. ಅಲ್ಲದೇ ಕೆಲವು ಮೂಲ ವಿಷಯಗಳ ಮೇಲೆ ಸಂಶೋಧನೆಯೂ ನಡೆಯುತ್ತದೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕೊಟ್ಟು ರೋಗಚಿಕಿತ್ಸೆಯಲ್ಲಿ ಮದ್ದುಗಳ ಆಗುಹೋಗುಗಳನ್ನು ಕಂಡುಕೊಳ್ಳಲು ಅವಕಾಶವಿದೆ.

ಕೈಗಾರಿಕೆಯಲ್ಲಿ[ಬದಲಾಯಿಸಿ]

ರಾಸಾಯನಿಕಗಳ ತಯಾರಿಕೆ ಸಂಸ್ಥೆಗಳ ಸಂಶೋಧನಾಲಯಗಳಲ್ಲೂ ಔಷಧಗಳ ಮುಖ್ಯವಾದ ಮೂಲಶೋಧನೆ ನಡೆವುದು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಂತೂ 40 ವರ್ಷಗಳಿಂದೀಚೆಗೆ ಔಷಧ ಕೈಗಾರಿಕೆಗಳಲ್ಲಿ ಸಂಶೋಧನೆ ಅಪಾರವಾಗಿ ನಡೆಯುತ್ತಿದೆ. ಕೈಗಾರಿಕೆಯ ಹಣಕಾಸು, ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ಸಂಶೋಧನೆ ಸಂಘಗಳ ಒಗ್ಗಟ್ಟಿನಿಂದ ಹೆಚ್ಚಿನ ಮುನ್ನಡೆಯಾಗಿ ಎಷ್ಟೊ ತೊಡಕುಗಳು ಬಗೆಹರಿದಿವೆ. ಸ್ವಲ್ಪಮದ್ದುಗಳು, ಜೀವಿ ವಿರೋಧಕಗಳು, ಕಾರ್ಟಿಸೋನ್ ತೆರನವು, ನೆಮ್ಮದಿಕಾರಿಗಳು (ಟ್ರಾಂಕ್ವಿಲೈಸರ್ಸ್), ಮೂತ್ರಕಾರಿಗಳು. ಸಿಹಿಮೂತ್ರರೋಧಕಗಳು, ರಕ್ತದ ಬದಲಿಗಳು, ಏಡಿಗಂತಿರೋಧಕಗಳೇ ಮುಂತಾದವು ಉದಾಹರಣೆಗಳು. ಔಷಧವಿಜ್ಞಾನದ ಮೂಲ ತಿಳಿವಳಿಕೆಯೂ ಅಪಾರವಾಗಿ ಹೆಚ್ಚಿದೆ.

ರೋಗಿಗಳ ಬಳಕೆಗೆ ಹೊಸ ಹೊಸ ಮದ್ದುಗಳನ್ನು ತಯಾರಿಸಿ ವೈದ್ಯನ ಕೈಗೆಕೊಡುವ ಮುನ್ನ ಅವು ವಿಷಕರವಲ್ಲವೆಂದು ಖಚಿತ ಮಾಡಿಕೊಳ್ಳಲು, ಪ್ರಾಣಿಗಳ ಮುಖ್ಯವಾದ ಎಲ್ಲ ಅಂಗಗಳು, ಮಂಡಲಗಳ ಮೇಲೂ ಪ್ರಭಾವವನ್ನು ತಿಳಿಯಲು ಪರೀಕ್ಷೆಗಳನ್ನು ಸಾಂಗವಾಗಿ ಮಾಡಿ ಮುಗಿಸಿರಬೇಕು. ಯಾವ ಮದ್ದನ್ನೇ ಆಗಲಿ ಮೊಟ್ಟಮೊದಲು ಪ್ರಯೋಗದ ಪ್ರಾಣಿಗಳಿಗೆ ಕೊಟ್ಟು ನೋಡಿದ ಮೆಲೆ ಮಾತ್ರವೇ ರೋಗಿಗೆ ಕೊಡುವುದು. ಬಳಸುವ ಮದ್ದಗಳ ಗುಣಮಟ್ಟ ಒಂದೇ ಸಮನಾಗಿ ಇರುವಂತೆ ನೋಡಿಕೊಳ್ಳಲು ತಯಾರಾದವನ್ನು ಮೇಲಿಂದ ಮೇಲೆ ಪರೀಕ್ಷಿಸುತ್ತಿರಲೇಬೇಕು. ಮದ್ದುಗಳಾದ ಅಚ್ಚರಾಸಾಯನಿಕ ವಸ್ತುಗಳನ್ನೇನೋ ರಾಸಾಯನಿಕ ಪರೀಕ್ಷೆಗಳಿಂದ ಶಿಷ್ಟೀಕರಿಸಬಹುದು. ಆದರೆ ಇನ್ಸುಲಿನ್, ಪ್ರಾಣಿಗಳು ಇಲ್ಲವೇ ಗಿಡಮರಗಳಿಂದ ಪಡೆದ ಕಚ್ಚ ಉತ್ಪನ್ನಗಳಾದ ಡಿಜಟ್ಯಾಲಿಸಿನಂಥವನ್ನು ಇಷ್ಟು ಸರಳವಾಗಿ ಪರೀಕ್ಷಿಸುವಂತಿಲ್ಲ. ಖಚಿತವಾಗಿ ಅಧಿಕೃತವಾಗಿ ಗೊತ್ತು ಪಡಿಸಿಟ್ಟುಕೊಂಡಿರುವ ಗುಣಮಟ್ಟವೊಂದಿಗೆ ಹೋಲಿಸಿನೋಡಿ ಒರೆಹಚ್ಚಿ ನಿರ್ಧರಿಸಬೇಕು. ಈ ಪರೀಕ್ಷೆಗಳನ್ನು ಯಾವುದಾದರೂ ಬದುಕಿರುವ ಪ್ರಾಣಿಯಲ್ಲಿ ಮಾಡಬೇಕು. ಇನ್ಸುಲಿನ್ನನ್ನು ಮೊಲದ ರಕ್ತದ ಸಕ್ಕರೆಮಟ್ಟ ಇಳಿಸುವುದರಿಂದಲೂ ಡಿಜಿಟ್ಯಾಲಿಸನ್ನು ಬೆಕ್ಕಿನ ಗುಂಡಿಗೆಯನ್ನು ನಿಲ್ಲಿಸುವುದರಿಂದಲೂ ನಿರ್ಧರಿಸುವುದು ವಾಡಿಕೆಯಲ್ಲಿವೆ. ಹೀಗೆ ಜೀವಿಗಳಲ್ಲಿ ಒರೆಹಚ್ಚಿ ನೋಡುವುದಕ್ಕೆ ಜೀವದೊರೆ (ಬಂiೆÆಆಸ್ಸೆ) ಎಂದಿದೆ. ಬಹುಪಾಲು ಜೀವಾತುಗಳಿಗೂ ಜೀವದೊರೆ ಹಚ್ಚಬೇಕಾಗುತ್ತದೆ. ಜನಾರೋಗ್ಯ: ಕೈಗಾರಿಕೆಗಳಲ್ಲಿ ಹೊಸ ಹೊಸ ಉತ್ಪನ್ನಗಳನ್ನು ವಿಧಾನಗಳನ್ನೂ ಹೊರತರುವಾಗ ಅಲ್ಲಿನ ಕೆಲಸಗಾರರ ಆರೋಗ್ಯಕ್ಕೆ ಕೆಲವೇಳೆ ಕೆಡುಕಾಗುವುದುಂಟು. ಅವರಿಗಾಗುವ ಅಪಾಯಗಳನ್ನು ತಿಳಿಯಲೋಸುಗ ಔಷಧವಿಜ್ಞಾನದ ಪ್ರಯೋಗ ವಿಧಾನಗಳನ್ನೇ ಹೆಚ್ಚಿನ ರೀತಿಯಲ್ಲಿ ಅನುಸರಿಸಬೇಕಾಗುತ್ತದೆ. ಗಿಡಮರಗಳ, ಪ್ರಾಣಿಗಳ ಆರೋಗ್ಯಕ್ಕಾಗಿ ಕೀಟನಾಶಕಗಳನ್ನು ಬೇಸಾಯದಲ್ಲಿ ಬಳಸುವಾಗ ಅನ್ವಯವಾಗುವುದೂ ಔಷಧವಿಜ್ಞಾನದ ವಿಭಾಗವಾದ ವಿಷವಿಜ್ಞಾನಕ್ಕೆ ಸಂಬಂಧಿಸಿದ್ದೇ. ನಾಶಕ ಮದ್ದುಗಳು ಕೀಟಗಳನ್ನು ಹೀಗೆ ಸಾಯಿಸುವುವೆಂದು ಔಷಧವಿಜ್ಞಾನದ ಪ್ರಯೋಗಗಳನ್ನು ಮಾಡಿನೋಡುವರು. ಇಲಿ ವಿಷಗಳಲ್ಲಿ ಕೆಲವು, ಇಲಿಗಳನ್ನು ರಕ್ತ ಸುರಿಸಿ ಸಾಯಿಸುತ್ತವೆ. ಡಿಡಿಟಿ ತೆರನ ಮದ್ದುಗಳು ತಾಕುವುದರಿಂದಲೇ ಸೊಳ್ಳೆಚಿಗಟಗಳು ಸಾಯುತ್ತವೆ. ಮದ್ದು ಕೆಲಸಮಾಡುವ ರೀತಿ ಸರಿಯಾಗಿ ಗೊತ್ತಾದರೆ ಇನ್ನೂ ಪ್ರಭಾವೀ ರಾಸಾಯನಿಕಗಳನ್ನು ತಯಾರಿಸಲು ಅನುಕೂಲ. ಇವುಗಳ ತಯಾರಿಕೆಯ ಕೆಲಸಗಾರರು, ಸಾಗಿಸುವವರು, ಮುಟ್ಟಿಕೊಳ್ಳುವವರು, ದೂಳಿಗೆ ಸಿಕ್ಕುವವರಿಗೆ ಯಾವ ಅಪಾಯಗಳಾಗಬಹುದೆಂದೂ ಅಕಸ್ಮಾತ್ ವಿಷವೇರಿದರೆ ತಕ್ಕ ಚಿಕಿತ್ಸೆ ಮತ್ತು ಕಟ್ಟುಮದ್ದುಗಳನ್ನೂ (ಅಂಟಿಡೋಟ್ಸ್‌) ಕಂಡುಕೊಳ್ಳಬಹುದು (ನೋಡಿ-ಅಪಾಯಕರ-ವೃತ್ತಿಗಳು; ಔಷಧಗಾರಿಕೆ; ಔಷಧಮಂಜರಿ). [೧]

ಉಲ್ಲೇಖಗಳು[ಬದಲಾಯಿಸಿ]