ಇನ್ಸ್‌ ಆಫ್ ಕೋರ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ಇನ್ಸ್ ಆಫ್ ಕೋರ್ಟ್''', ಇವು ಇಂಗ್ಲೆಂಡಿನಲ್ಲಿ ವಕೀಲ ವೃತ್ತಿ ಅವಲಂಬಿಸಲು ಅನು...
( ಯಾವುದೇ ವ್ಯತ್ಯಾಸವಿಲ್ಲ )

೦೪:೧೮, ೧೨ ಜನವರಿ ೨೦೨೦ ನಂತೆ ಪರಿಷ್ಕರಣೆ

ಇನ್ಸ್ ಆಫ್ ಕೋರ್ಟ್, ಇವು ಇಂಗ್ಲೆಂಡಿನಲ್ಲಿ ವಕೀಲ ವೃತ್ತಿ ಅವಲಂಬಿಸಲು ಅನುಮತಿ ಕೊಡುವ ಸರ್ವಾಧಿಕಾರವುಳ್ಳ ನಾಲ್ಕು ನ್ಯಾಯವಾದಿ ಸಂಸ್ಥೆಗಳು.

ಹಿನ್ನೆಲೆ

ಲಿಂಕನ್ಸ್ ಇನ್, ಗ್ರೇಸ್ ಇನ್, ದಿ ಇನ್ನರ್ ಟೆಂಪ್ಲ್, ದಿ ಮಿಡ್ಲ್ ಟೆಂಪ್ಲ್ ಎಂಬ ಈ ನಾಲ್ಕು ಸಂಸ್ಥೆಗಳೂ ಲಂಡನ್ನಿನಲ್ಲಿವೆ. ನ್ಯಾಯಶಾಸ್ತ್ರ ವಿಶ್ವವಿದ್ಯಾನಿಲಯದ ಕಾಲೇಜುಗಳೆಂದು ಇವನ್ನು ಕರೆಯುವುದು ರೂಢಿ. ಇವುಗಳ ಸಾಮಾನ್ಯ ರಚನೆ, ಆಡಳಿತ ವ್ಯವಸ್ಥೆ ಹಾಗೂ ಕಾರ್ಯಭಾರದ ದೃಷ್ಟಿಯಿಂದ ಇವನ್ನು ಹೀಗೆನ್ನುವುದು ಉಚಿತವೇ ಆಗಿದೆ. ಕೋಕ್, ಸೆಲ್ಡನ್ ಮುಂತಾದವರು ಆಕ್ಸ್‍ಫರ್ಡ್ ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಂತೆಯೇ ಇವನ್ನೂ ಪರಿಗಣಿಸಿದ್ದಾರೆ. ವಿಶ್ವವಿದ್ಯಾನಿಲಯಗಳಂತೆಯೇ ಇವುಗಳೂ ಪದವೀಪ್ರಧಾನಕ್ಕಾಗಿ ವಿದ್ಯಾರ್ಥಿಗಳನ್ನು ತಯಾರಿಸುತ್ತವೆ; ಅವರ ಶಿಸ್ತಿನ ಹೊಣೆ ಹೊರುತ್ತವೆ. ಅಭ್ಯರ್ಥಿಗಳು ನ್ಯಾಯವಾದಿಗಳಾಗಿ ವೃತ್ತಿಯಲ್ಲಿ ತೊಡಗಬಹುದೆಂದು ಅವರಿಗೆ ವಿಧಿವತ್ತಾಗಿ ದೀಕ್ಷೆ ನೀಡುವ ವಿಶಿಷ್ಟಾಧಿಕಾರವುಳ್ಳ ಬೆಂಚುಗಳೆಂಬ ಆಡಳಿತ ಮಂಡಲಿಗಳನ್ನೂ ಇವು ಹೊಂದಿರುತ್ತವೆ.[೧]

ವೈಶಿಷ್ಠ್ಯ

ಈ ಇನ್ನುಗಳು ಸ್ವಯಂಪ್ರವೃತ್ತ (ವಾಲಂಟರಿ) ಸಂಘಗಳು. ಇವುಗಳಿಗೆ ಸನ್ನದುಗಳಿಲ್ಲ. ವಿಶಿಷ್ಟವಾದ ಶಾಸನದಿಂದ ಇವನ್ನು ನಿರ್ಮಿಸಿಲ್ಲ. ಇವಕ್ಕಾಗಿ ಯಾವ ದತ್ತಿ ಅಥವಾ ಉಂಬಳಿಯನ್ನೂ ಯಾರೂ ಬಿಟ್ಟಿಲ್ಲ. ಆದ್ದರಿಂದ ಇವುಗಳ ಪೂರ್ವೇತಿಹಾಸವನ್ನರಿಯುವುದು ಕಠಿಣ. ಇವಕ್ಕೆ ತಮ್ಮದೆಂಬ ನೆಲವಿಲ್ಲ; ಗುತ್ತಿಗೆಯ ನೆಲದ ಮೇಲೆ ಇವುಗಳ ನಿವಾಸ. ಈ ಕರಾರುಗಳ ದಾಖಲೆಗಳ ಮೂಲ ಹುಡುಕುವುದೂ ಅಸಾಧ್ಯ. ಆದ್ದರಿಂದ ಇವುಗಳ ಜನ್ಮದಿನಗಳನ್ನರಿಯುವುದು ಶಕ್ಯವಿಲ್ಲ.[೨]

ಇತಿಹಾಸ

ಈ ಇನ್ನುಗಳು ನ್ಯಾಯಶಾಸ್ತ್ರ ಶಿಕ್ಷಣ ನೀಡಲಾರಂಭಿಸಿದ್ದು ಯಾವಾಗ?-ಎಂಬ ವಿಚಾರವೂ ಸ್ಪಷ್ಟವಾಗಿಲ್ಲ. ಹದಿಮೂರನೆಯ ಶತಮಾನದಲ್ಲಿ ಕ್ರೈಸ್ತಪಾದ್ರಿಗಳು ನ್ಯಾಯಾಲಯಗಳಲ್ಲಿ ವಕೀಲಿ ಮಾಡುವುದನ್ನು ನಿಲ್ಲಿಸಿದಾಗ, ಕಾಯಿದೆಯ ವಿಶೇಷ ಅಭ್ಯಾಸ ಮಾಡದಿದ್ದ ಪ್ರಾಧ್ಯಾಪಕರೂ ಅಭ್ಯಾಸಿಗಳೂ ಈ ಕಾರ್ಯನಿರ್ವಹಿಸಲಾರಂಭಿಸಿದರೆಂದೂ ಆಗ ಈ ಇನ್ನುಗಳು ಉಗಮವಾಗಿರಬೇಕೆಂದು ಹೇಳಲಾಗಿದೆ.[೩]

ಸಾಮಾನ್ಯ ಶಿಕ್ಷಣವನ್ನಷ್ಟೇ ಪಡೆದಿದ್ದ ಈ ಜನ ನ್ಯಾಯಕ್ಷೇತ್ರದಲ್ಲಿ ವಿಶೇಷ ಆಸಕ್ತಿ ತಳೆದರು. ನ್ಯಾಯಕ್ಷೇತ್ರದಲ್ಲಿ ಇವರು ಬಲು ಹೆಚ್ಚಿನ ಪ್ರಭಾವ ಬೀರಿದರು; ನ್ಯಾಯಶಾಸ್ತ್ರ ಶಿಕ್ಷಣ ಸಂಬಂಧವಾದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದರು; ಪರಿಹರಿಸಿದರು. ಇವರೇ ನ್ಯಾಯವಾದಿಗಳ ವೃತ್ತಿಗೂ ಶಿಕ್ಷಣಕ್ಕೂ ರಾಜಮಾರ್ಗ ನಿರ್ಮಿಸಿದರು. ಮುಂದೆ ಇನ್ಸ್ ಆಫ್ ಕೋರ್ಟುಗಳು ಕ್ರಮೇಣ ವಿಕಾಸಗೊಂಡುವು.

ರೋಮನ್ ಹಾಗೂ ಧರ್ಮ ಪ್ರಾಮಾಣ್ಯ ನ್ಯಾಯಸೂತ್ರಗಳಿಗಿಂತ ಭಿನ್ನವಾದ ಇಂಗ್ಲಿಷ್ ನ್ಯಾಯಮಾರ್ಗ ಸುಮಾರು ಈ ಕಾಲದಲ್ಲಿ ಸ್ಪಷ್ಟವಾಗಿ ರೂಪು ತಳೆದಿರಬೇಕು. ಯಾವ ವಿಶ್ವವಿದ್ಯಾನಿಲಯವೂ ಆಗ ಇದನ್ನು ಬೋಧಿಸುತ್ತಿರಲಿಲ್ಲ. ಆ ಕಾಲದಲ್ಲಿ ನ್ಯಾಯಗ್ರಂಥಗಳನ್ನು ಬರೆದವರು ಲ್ಯಾಟಿನ್ ಬದಲು ಫ್ರೆಂಚ್ ಭಾಷೆಯಲ್ಲಿ ಬರೆದರು. ಆ ವೇಳೆಗಾಗಲೇ ಇಂಗ್ಲಿಷ್ ನ್ಯಾಯಶಾಸ್ತ್ರ ಬೋಧನೆ ಆರಂಭವಾಗಿತ್ತೆಂದು ಹೇಳಬಹುದು. ಆ ಕಾಲದಲ್ಲಿ ನ್ಯಾಯಪಂಡಿತರು ಬರೆದ ಚೊಕ್ಕ ಹೊತ್ತಗೆಗಳೂ ಲೇಖನಗಳೂ ಅಸಂಖ್ಯಾತವಾಗಿವೆ.

ವಿದ್ಯಾರ್ಥಿಗಳು ಆಗ ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದ ವಾದ ಪ್ರತಿವಾದಗಳನ್ನು ಆಲಿಸುತ್ತಿದ್ದರು. ತತ್ಸಂಬಂಧವಾದ ನ್ಯಾಯ ಸಮಸ್ಯೆಗಳನ್ನು ತಂತಮ್ಮಲ್ಲೇ ಚರ್ಚಿಸುತ್ತಿದ್ದರು. ಆದರೂ ಆಗ ಇನ್‍ಗಳಿನ್ನೂ ಉದ್ಭವಿಸಿರಲಿಲ್ಲ. ನ್ಯಾಯಶಿಕ್ಷಣಕ್ಕೂ ವಸತಿಗೂ ವಿದ್ಯಾರ್ಥಿಗಳೇ ಖಾಸಗಿಯಾಗಿ ವ್ಯವಸ್ಥೆ ಮಾಡಿಕೊಂಡಿದ್ದಿರಬಹುದು. ಇವರು ಕೋರ್ಟಿನ ಹೊರಗೆ ಯಾವುದೋ ನಿರ್ದಿಷ್ಟ ಸ್ಥಳದಲ್ಲಿ ಸಮಾವೇಶಗೊಳ್ಳುತ್ತಿದ್ದರೆಂಬುದಂತೂ ನಿಜ.

ಆಗ ನ್ಯಾಯಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಧನಿಕರಾಗಿದ್ದರು. ನ್ಯಾಯದ ರೀತಿಯನ್ನರಿಯುವ ಸಲುವಾಗಿಯೇ ಅವರು ಒಮ್ಮೊಮ್ಮೆ ಮೊಕದ್ದಮೆಗಳನ್ನು ಸೃಷ್ಟಿಸುತ್ತಿದ್ದರು. ನ್ಯಾಯಾಲಯದ ಮುಂದೆ ಬಂದಿದ್ದ ತೊಡಕಿನ ಮೊಕದ್ದಮೆಯೊಂದರ ಸಂಬಂಧವಾಗಿ ಪರಮೋಚ್ಚ ನ್ಯಾಯಾಧೀಶನಿಗೆ ಒಮ್ಮೆ ಈ ಸಂದೇಹ ಹುಟ್ಟಿತ್ತು. ನ್ಯಾಯಾಭ್ಯಾಸಿಯೊಬ್ಬ ಬೇಕೆಂದೇ ಯಾವುದೋ ಒಂದು ನೆಲ ಕೊಂಡು ತಕರಾರು ನಿರ್ಮಿಸಿ ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ದಿರಬೇಕೆಂದು ನ್ಯಾಯಾಧೀಶನಿಗೆ ಅನಿಸಿತ್ತು.

ಪ್ರಾಚೀನ ಕಾಲದ ನ್ಯಾಯದಾನದ ಕ್ರಮಗಳು

1300ರ ವೇಳೆಗೆ ನಾನಾ ಬಗೆಯ ವಕೀಲರು ಬಹುಸಂಖ್ಯಾತರಾಗಿ ಬೆಳೆದುಕೊಂಡರು. ಇವರನ್ನು ಕ್ರಮಕ್ಕೊಳಪಡಿಸಲು 1280ರಲ್ಲಿ ನಗರವ್ಯವಸ್ಥೆ ಕೆಲವು ನಿಬಂಧನೆಗಳನ್ನು ರಚಿಸಿತು. 1292ರಲ್ಲಿ ರಾಜಾಜ್ಞೆಯೊಂದು ಹೊರಬಿತ್ತು. ಇಂಗ್ಲೆಂಡಿನ ನಾನಾ ಜಿಲ್ಲೆಗಳಿಂದ 140 ಮಂದಿ ಅಭ್ಯಾಸಿಗಳನ್ನೂ ವಕೀಲರನ್ನೂ ನ್ಯಾಯಮೂರ್ತಿಗಳು ಆಯ್ಕೆ ಮಾಡಬೇಕೆಂದೂ ಇವರಲ್ಲದೆ ಬೇರೆ ಯಾರೂ ನ್ಯಾಯಸಂಬಂಧ ವ್ಯವಹಾರಗಳಲ್ಲಿ ಕೈ ಹಾಕತಕ್ಕದ್ದಲ್ಲವೆಂದೂ ವಿಧಿಸಲಾಯಿತು.

ಬೇರೆಡೆಗಳ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿದ್ದಂತೆಯೇ ನ್ಯಾಯ ವಿದ್ಯಾರ್ಥಿಗಳೂ ತಮ್ಮ ಶಿಕ್ಷಣದಲ್ಲಿ ತೊಡಗಿದ್ದರೆಂಬುದು ಈ ಕಾಲಕ್ಕೆ ಸಂಬಂಧಿಸಿದ ನಾನಾ ಪುರಾವೆಗಳಿಂದ ವೇದ್ಯವಾಗುತ್ತದೆ. ಇವರು ವಿದ್ಯಾರ್ಥಿನಿಲಯಗಳನ್ನೋ ಖಾನಾವಳಿಗಳನ್ನೋ (ಇನ್ಸ್) ಬಾಡಿಗೆಗೆ ಪಡೆಯುತ್ತಿದ್ದರು. ಇಲ್ಲಿ ಇವರು ಒಟ್ಟಿಗೆ ವಾಸಿಸುತ್ತಿದ್ದರು. ನ್ಯಾಯಬೋಧನೆಗಾಗಿ ಸೂಕ್ತವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಪ್ರಸಿದ್ಧಿ ಹೊಂದಿದ ನ್ಯಾಯವಾದಿಯೇ ಒಂದು ಸ್ಥಳವನ್ನು ಬಾಡಿಗೆಗೆ ಪಡೆದು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅವರಿಗೆ ನ್ಯಾಯಶಾಸ್ತ್ರ ಬೋಧಿಸುತ್ತಿದ್ದದ್ದೂ ಇರಬಹುದು. ಇಂಗ್ಲೆಂಡಿನಲ್ಲಿ ಸಾಮಾನ್ಯವಾಗಿ ಶ್ರೀಮಂತರು ಮಾತ್ರವೇ ನ್ಯಾಯ ವಿದ್ಯೆ ಕಲಿಯುವ ಸಲುವಾಗಿ ಬರುತ್ತಿದ್ದುದ್ದರಿಂದ ಬಡವಿದ್ಯಾರ್ಥಿಗಳಿಗೋಸ್ಕರವಾಗಿ ಯಾರೂ ದತ್ತಿಯನ್ನೇನೂ ಬಿಡಲಿಲ್ಲ. ಈ ಇನ್ನುಗಳಿಗೆ ಸ್ವಂತ ಕಟ್ಟಡಗಳಿಲ್ಲದ್ದರಿಂದ ಇವು ಬಾಡಿಗೆಯ ಕರಾರಿನ ಅವಧಿ ಮುಗಿದೊಡನೆಯೇ ಎಷ್ಟೋ ಸಾರಿ ಉತ್ತಮ ಸ್ಥಳಗಳಿಗೆ ವರ್ಗವಾಗುತ್ತಿದ್ದದ್ದೂ ಉಂಟು. ಇಂಥ ಕೆಲವು ಇನ್ನುಗಳು ಕ್ರಮೇಣ ಪ್ರಸಿದ್ಧವಾಗಿ ಜನರ ನಂಬಿಕೆ ಗಳಿಸಿಕೊಂಡು ಶಾಶ್ವತ ಸಂಸ್ಥೆಗಳಾಗಿ ಬೆಳೆದಿದ್ದಿರಬೇಕು.[೪]

ಹದಿನೈದನೆಯ ಶತಮಾನದ ಆದಿಯ ವೇಳೆಗೆ ವಿಶಿಷ್ಟ ಸಂಪ್ರದಾಯಗಳನ್ನು ಬೆಳೆಸಿಕೊಂಡು ನಾಲ್ಕು ಇನ್ನುಗಳು ಭದ್ರವಾದ ವ್ಯವಸ್ಥೆ ಹೊಂದಿದ್ದುವು. ಬೆಂಚರುಗಳು (ಹಿರಿಯ ಸದಸ್ಯರು) ಈ ಸಂಸ್ಥೆಗಳ ಆಡಳಿತ ನಡೆಸುತ್ತಿದ್ದರು. ಕನಿಷ್ಠಪಕ್ಷ ಎರಡು ಶಿಕ್ಷಣಾವಧಿಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ (ರೀಡಿಂಗ್ಸ್) ನೀಡಿದ್ದವರೂ ಅಣಕುವಾದಗಳ (ಮೂಟ್ಸ್) ಅಧ್ಯಕ್ಷತೆ ವಹಿಸಿದ್ದವರೂ ಮಾತ್ರವೇ ಬೆಂಚ್ ಸದಸ್ಯತ್ವದ ಅರ್ಹತೆ ಹೊಂದಿರುತ್ತಿದ್ದರು. ಈ ಉಪನ್ಯಾಸಗಳೂ ವಾದಗೋಷ್ಠಿಗಳೂ ಬಹು ಉನ್ನತ ಶ್ರೇಣಿಯವಾಗಿರುತ್ತಿದ್ದುವೆಂಬುದು ಅವುಗಳ ದಾಖಲೆಗಳಿಂದ ಸ್ಪಷ್ಟಪಡುತ್ತದೆ.

ನ್ಯಾಯಕ್ಷೇತ್ರ ತುಂಬ ಕ್ಲಿಷ್ಟಕರವಾಗಿದ್ದರಿಂದ ಈ ಇನ್ನುಗಳಲ್ಲಿ ತೀವ್ರ ಶಿಕ್ಷಣ ಪಡೆದವರು ಮಾತ್ರವೇ ಇದರಲ್ಲಿ ಪ್ರವೀಣರಾಗುವುದು ಸಾಧ್ಯವಿತ್ತು. ಆದ್ದರಿಂದ ವಾಸ್ತವವಾಗಿ ಈ ಸಂಸ್ಥೆಗಳು ಈ ಶಿಕ್ಷಣದಲ್ಲಿ ಸರ್ವಾಧಿಕಾರ ಹೊಂದಿದ್ದುವು. ಇವಕ್ಕೆ ಕ್ರಮೇಣ ಮನ್ನಣೆ ದೊರಕಿತು. ಬೆಂಚರುಗಳಿಂದ ಇನ್ನಿನ ಬಾರ್‍ಗೆ ಆಮಂತ್ರಣ (ಕಾಲ್) ಪಡೆದ ವಿದ್ಯಾರ್ಥಿ ಅರ್ಹ ಅಭ್ಯಾಸಿ ಅಥವಾ ಬ್ಯಾರಿಸ್ಟರ್ ಎನ್ನಿಸಿಕೊಳ್ಳುತ್ತಿದ್ದ. ಪ್ರಮುಖ ಬ್ಯಾರಿಸ್ಟರುಗಳಿಗೆ ದೊರೆಯ ಮನ್ನಣೆ ದೊರೆತು ಅವರು ಸಾರ್ಜೆಂಟ್-ಅಟ್-ಲಾ ಅಥವಾ ಮೇಲುದರ್ಜೆಯ ವಕೀಲರೆಂಬ ಪದವಿ ಪಡೆದಾಗ ಅವರ ಅಭ್ಯಾಸದ (ಅಪ್ರೆಂಟಿಸ್) ಆಶ್ರಮ ಮುಗಿಯುತ್ತಿತ್ತು. ಅವರು ತಮ್ಮ ಹಳೆಯ ಇನ್ನುಗಳನ್ನು ಬಿಟ್ಟು ಸಾರ್ಜೆಂಟುಗಳ ಇನ್‍ಗೆ ಹೋಗುತ್ತಿದ್ದರು. ನ್ಯಾಯಾಧೀಶರೆಲ್ಲ ಸಾರ್ಜೆಂಟುಗಳೇ ಆಗಿದ್ದರು. ಅವರೂ ಸಾರ್ಜೆಂಟುಗಳ ಇನ್ನಿನಲ್ಲಿರುತ್ತಿದ್ದರು. ಈ ಇನ್ನುಗಳ ನಿಯಮಗಳು ಬಹು ಕಠಿಣವಾಗಿದ್ದರೂ ಹದಿನೈದು ಹದಿನಾರನೆಯ ಶತಮಾನಗಳಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇವುಗಳಿಗೆ ಸೇರುತ್ತಿದ್ದರು. ಇವರಲ್ಲನೇಕರಿಗೆ ನ್ಯಾಯವೃತ್ತಿಯಲ್ಲಿ ತೊಡಗಬೇಕೆಂಬ ಆಕಾಂಕ್ಷೆಯೇನೂ ಇರುತ್ತಿರಲಿಲ್ಲ. ಶಿಕ್ಷಣ ಪಡೆಯುವುದಷ್ಟೇ ಇವರ ಉದ್ದೇಶವಾಗಿರುತ್ತಿತ್ತು. ಈ ಕಾಲದಲ್ಲಿ ನ್ಯಾಯಶಿಕ್ಷಣ ಬಹು ಉತ್ತಮ ಸ್ಥಿತಿಯಲ್ಲಿತ್ತು.[೫]

ಮುಂದೆ ಇವು ಕ್ಷೀಣಿಸಿದುವು. ಅಚ್ಚುಕೂಟದ ಆಗಮನದಿಂದ ವಿದ್ಯಾರ್ಥಿಗಳು ಗ್ರಂಥ ವ್ಯಾಸಂಗದಿಂದಲೇ ಈ ವಿದ್ಯೆಯನ್ನು ಸುಲಭವಾಗಿಯೂ ಶೀಘ್ರವಾಗಿಯೂ ಕಲಿಯಬಹುದೆಂದು ಭಾವಿಸಿದರು. ರೀಡಿಂಗ್ ಮತ್ತು ಮೂಟುಗಳಿಗೆ ತಮ್ಮ ಪರವಾಗಿ ಇತರರನ್ನು ಕಳಿಸುತ್ತಿದ್ದರು. ವಿದ್ಯಾರ್ಥಿಗಳಂತೆ ರೀಡರುಗಳೂ ಉದಾಸೀನ ಪ್ರವೃತ್ತಿ ಬೆಳೆಸಿಕೊಂಡರು. ಇವರಿಗೆ ಪ್ರವಚನಗಳಿಗಾಗಿ ಸಂಭಾವನೆಯೇನೂ ದೊರಕುತ್ತಿರಲಿಲ್ಲ. ಪ್ರತಿಯಾಗಿ ಇವರು ಅಂತ್ಯದಲ್ಲಿ ಬಹು ವೆಚ್ಚದ ಭೋಜನಕೂಟಗಳನ್ನೇರ್ಪಡಿಸಬೇಕಾಗುತ್ತಿತ್ತು. ವಕೀಲಿಗೆ ಅಮೂಲ್ಯವಾದ ಸಮಯವನ್ನು ಪ್ರವಚನ ಸಿದ್ಧತೆಗಾಗಿ ಇವರು ವ್ಯಯಮಾಡಲಿಚ್ಛಿಸಲಿಲ್ಲ. ನ್ಯಾಯಾಧೀಶರು ಮಾತ್ರ ಇನ್ನುಗಳ ಮೇಲೆ ಕಟ್ಟುನಿಟ್ಟಾಗಿ ಅಧಿಕಾರ ಚಲಾಯಿಸಲು ಯತ್ನಿಸುತ್ತಿದ್ದರು. ಕೊನೆಗೆ, ಇಂಗ್ಲೆಂಡಿನ ಅಂತರ್ಯುದ್ಧದ ಕಾಲದಲ್ಲಿ, ಈ ವ್ಯವಸ್ಥೆ ಸಂಪೂರ್ಣವಾಗಿ ಮುರಿದು ಬಿತ್ತು. 1677ರಲ್ಲಿ ತರಗತಿಗಳು ಕೊನೆಗೊಂಡುವು. ಗೊತ್ತಾದ ಶುಲ್ಕ ಕೊಟ್ಟ ವಿದ್ಯಾರ್ಥಿ ಸುಲಭವಾಗಿ ಬಾರಿಗೆ ಪ್ರವೇಶ ಪಡೆಯಬಹುದಿತ್ತು.

ಈ ಶೂನ್ಯಸ್ಥಿತಿ 1762ರ ವರೆಗೂ ಹೆಚ್ಚು ಕಡಿಮೆ ಮುಂದುವರಿಯಿತು. ಆ ವರ್ಷ ಈ ನಾಲ್ಕು ಇನ್‍ಗಳೂ ಒಂದು ಒಡಂಬಡಿಕೆ ಮಾಡಿಕೊಂಡುವು. ಕೆಲವು ಗೊತ್ತಾದ ಅವಧಿಗಳ ಹಾಜರಿ ಕೊಟ್ಟ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದೆಂದು ಸಮ್ಮತಿಸಲಾಯಿತು. ಮೂರು ಭೋಜನಕೂಟಗಳಿಗೆ ಬಂದವರು ಅವಧಿಯ ಪೂರ್ತಿ ಹಾಜರಾದಂತೆ ಭಾವಿಸಬೇಕೆಂದು ಮುಂದೆ ತೀರ್ಮಾನಿಸಲಾಯಿತು. ಕೋಶಾಧಿಕಾರಿಯಾದವ ಇನ್ನಿನ ಅಧ್ಯಕ್ಷನೆಂದೂ ಸರದಿಯಂತೆ ಹಿರಿತನದ ಕ್ರಮದಲ್ಲಿ ಈ ಅಧಿಕಾರ ಎಲ್ಲರಿಗೂ ದೊರಕತಕ್ಕದ್ದೆಂದೂ ನಿರ್ಣಯವಾಯಿತು. 1873, 1874 ಮತ್ತು 1875ರ ನ್ಯಾಯನಿರ್ವಾಹ ಕಾಯಿದೆಗಳು ಬಂದಮೇಲೆ ಸಾರ್ಜಂಟ್-ಅಟ್-ಲಾ ಎಂಬ ಪದವಿ ರದ್ದಾಯಿತು. ನ್ಯಾಯಾಧೀಶರಾದವರು. ಈಗ ತಂತಮ್ಮ ಇನ್‍ಗಳ ಸದಸ್ಯರಾಗಿಯೇ ಮುಂದುವರಿಯಬಹುದು.

1854ರಿಂದೀಚೆಗೆ ಇನ್‍ಗಳು ಮತ್ತೆ ತಮ್ಮ ಶಿಕ್ಷಣ ಕಾರ್ಯಗಳಲ್ಲಿ ತೊಡಗಿದುವು. ರೀಡರ್ ಹುದ್ದೆಗಳು ನಿರ್ಮಾಣವಾದುವು. ದಕ್ಷ ವಕೀಲರು ಅಧ್ಯಾಪಕರಾದರು. ಕೌನ್ಸಿಲ್ ಆಫ್ ಲೀಗಲ್ ಎಜುಕೇಷನ್ ಎಂಬ ಸಂಸ್ಥೆಯವರು ನಡೆಸುವ ಪರೀಕ್ಷೆಗಳಿಗೆ ಈ ನಾಲ್ಕು ಇನ್ನುಗಳ ವಿದ್ಯಾರ್ಥಿಗಳೂ ಕೂಡುತ್ತಾರೆ.

ಉಲ್ಲೇಖಗಳು

  1. https://www.britannica.com/topic/Inns-of-Court
  2. https://www.merriam-webster.com/dictionary/Inns%20of%20Court
  3. https://www.encyclopedia.com/social-sciences-and-law/law/law/inns-court
  4. https://www.tripadvisor.com/Attraction_Review-g186338-d12059729-Reviews-Inns_of_Court-London_England.html
  5. https://www.womeninlawsummit.com/blog/everything-you-need-to-know-about-the-inns-of-court