ಇಟಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೯೭ ನೇ ಸಾಲು: ೯೭ ನೇ ಸಾಲು:
1947ರಿಂದೀಚೆಗೆ ಇಲ್ಲಿಯ ಸರ್ಕಾರ ಪ್ರಬಲವಾಗಿದೆ. ಎರಡು ಮಹಾಯುದ್ಧಗಳ ಅನಂತರ ಇಟಲಿ ಇದೀಗ ಆರ್ಥಿಕರಂಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಇಟಲಿಯ ಮೇಲೆ ಹೇರಿದ್ದ ಅನೇಕ ನಿರ್ಬಂಧಗಳನ್ನೀಗ ಸಡಿಲಿಸಲಾಗಿದೆ. ಈಗ ಇದು ಉತ್ತರ ಅಟ್ಲಾಂಟಿಕ್ ಕೌಲು ವ್ಯವಸ್ಥೆ (ನ್ಯಾಟೋ) ಮತ್ತು ಐರೋಪ್ಯ ಆರ್ಥಿಕ ಸಹಕಾರ ಸಂಘಗಳ (ಇ.ಇ.ಸಿ) ಸದಸ್ಯ ರಾಷ್ಟ್ರ.
1947ರಿಂದೀಚೆಗೆ ಇಲ್ಲಿಯ ಸರ್ಕಾರ ಪ್ರಬಲವಾಗಿದೆ. ಎರಡು ಮಹಾಯುದ್ಧಗಳ ಅನಂತರ ಇಟಲಿ ಇದೀಗ ಆರ್ಥಿಕರಂಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಇಟಲಿಯ ಮೇಲೆ ಹೇರಿದ್ದ ಅನೇಕ ನಿರ್ಬಂಧಗಳನ್ನೀಗ ಸಡಿಲಿಸಲಾಗಿದೆ. ಈಗ ಇದು ಉತ್ತರ ಅಟ್ಲಾಂಟಿಕ್ ಕೌಲು ವ್ಯವಸ್ಥೆ (ನ್ಯಾಟೋ) ಮತ್ತು ಐರೋಪ್ಯ ಆರ್ಥಿಕ ಸಹಕಾರ ಸಂಘಗಳ (ಇ.ಇ.ಸಿ) ಸದಸ್ಯ ರಾಷ್ಟ್ರ.


==ಉಲ್ಲೇಖಗಳು==
{{reflist}}
[[ವರ್ಗ:ಯುರೋಪ್ ಖಂಡದ ದೇಶಗಳು]]
[[ವರ್ಗ:ಯುರೋಪ್ ಖಂಡದ ದೇಶಗಳು]]

೧೬:೧೧, ೨ ನವೆಂಬರ್ ೨೦೧೯ ನಂತೆ ಪರಿಷ್ಕರಣೆ

ಇಟಲಿ ಗಣರಾಜ್ಯ
Repubblica Italiana
ರಿಪಬ್ಬ್ಲಿಕ ಇಟಲಿಯಾನ
Flag of ಇಟಲಿ
Flag
ಲಾಂಛನ of ಇಟಲಿ
ಲಾಂಛನ
Anthem: Il Canto degli Italiani (also known as Fratelli d'Italia)
Location of ಇಟಲಿ
Capital
and largest city
ರೋಮ್
Official languagesಇಟಲಿಯನ್ ಭಾಷೆ1
Governmentಗಣರಾಜ್ಯ
ಜಿಯಾರ್ಜಿಯೊ ನಪೊಲಿಟಾನೊ
ರೊಮನೊ ಪ್ರೊಡಿ
ಸ್ಥಾಪನೆ
ಮಾರ್ಚ್ ೧೭ ೧೮೬೧
ಜೂನ್ ೨ ೧೯೪೬
• Water (%)
2.4
Population
• 2006 estimate
58,751,711 (22nd)
• ಅಕ್ಟೊಬರ್ ೨೦೦೧ census
57,110,144
GDP (PPP)2005 estimate
• Total
$1.668 trillion (8th)
• Per capita
$28,760 (21st)
HDI (2004)0.940
very high · 17th
Currencyಯುರೊ ()2 (EUR)
Time zoneUTC+1 (CET)
• Summer (DST)
UTC+2 (CEST)
Calling code39
Internet TLD.it3
1 French is co-official in the Aosta Valley; German is co-official in Trentino-South Tyrol.
2 Prior to 2002: Italian Lira.
3 The .eu domain is also used, as it is shared with other European Union member states.

ಖ್ಯಾತ ರೋಮನ್ ಸಾಮ್ರಾಜ್ಯದ ಮಾತೃಸ್ಥಾನವಾದ ಇಟಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪ. ಗಾತ್ರದಲ್ಲಿ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದು. ರೋಮನ್ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟು ಬೇರಾವ ಸಾಮ್ರಾಜ್ಯಕ್ಕೂ ಬರಲಾರದು. ರೋಂ ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಅಂದಿನ ನಾಗರಿಕ ಪ್ರಪಂಚವನ್ನೆಲ್ಲ ಏಕಚ್ಛತ್ರದಡಿ ಸಂವರಿಸಿ ಆಳಿತು. ಅದರ ವೈಭವ ಅನನ್ಯವಾದುದು; ಶಕ್ತಿ ಅದಮ್ಯವಾದುದು. ವಿಸ್ತಾರವಾದ ತನ್ನ ಸಾಮ್ರಾಜ್ಯದಲ್ಲಿ ಅದು ಏರ್ಪಡಿಸಿದ ಆಡಳಿತ ವ್ಯವಸ್ಥೆ, ನ್ಯಾಯ, ಜೀವನಕ್ರಮ-ಇವು ಇಡೀ ಸಾಮ್ರಾಜ್ಯದ ಐಕ್ಯಕ್ಕೆ ಸಹಾಯಕವಾದುವು. ರೋಮಿನಿಂದ ನಡೆದ ಈ ಬೃಹತ್ ವ್ಯವಹಾರಕ್ಕೆ ಇಟಲಿಯ ಭೂಮಿ ಆಶ್ರಯ ಕೊಟ್ಟಿತು. ರೋಮನರ ಚರಿತ್ರೆ, ನಾಗರಿಕತೆ, ಸಂಸ್ಕøತಿ, ಕಲೆ ಮೊದಲಾದ ವಿಷಯಗಳು ಅಲ್ಲಲ್ಲಿ ಪ್ರತ್ಯೇಕವಾಗಿ ಬಂದಿವೆ. ಇಲ್ಲಿ ಇಟಲಿಯ ಬಗ್ಗೆ ಬಂದಿರುವ ಲೇಖನಗಳಲ್ಲೂ ಆ ವಿಷಯಗಳ ಸಂಗ್ರಹ ನಿರೂಪಣೆ ಇದೆ. ಇಲ್ಲಿನ ಲೇಖನಗಳ ವ್ಯವಸ್ಥೆ ಹೀಗಿದೆ. ಇಟಲಿ ಎಂಬ ಲೇಖನದಲ್ಲಿ ಅದರ ಭೌಗೋಳಿಕ, ವಾಣಿಜ್ಯ ವಿಷಯಿಕ ವಿವರಗಳಿವೆ. ಇಟಲಿಯ ಇತಿಹಾಸ, ಕಲೆ, ಛಂದಸ್ಸು, ಭಾಷೆ, ಸಂಗೀತ, ಸಾಹಿತ್ಯ, ಸಾಹಿತ್ಯ ವಿಮರ್ಶೆಗಳ ಬಗ್ಗೆ ಪ್ರತ್ಯೇಕ ಶೀರ್ಷಿಕೆಗಳಿವೆ. ಇಟಲಿಯ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಕೆಲ ವಿಷಯಗಳು ಈ ಹರಹಿನಲ್ಲಿ ಬಂದಿವೆಯಾದರೂ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ವಿವರಗಳನ್ನು ಆಯಾ ವ್ಯಕ್ತಿಗಳನ್ನು ಕುರಿತ ಲೇಖನಗಳಲ್ಲಿ ಕೊಟ್ಟಿದೆ. ಇಟಲಿ ದಕ್ಷಿಣ ಯೂರೋಪಿನ ಒಂದು ಗಣರಾಜ್ಯ (ರಿಪಬ್ಲಿಕಾ ಇಟಾಲಿಯಾನ ಅಥವಾ ಇಟಾಲಿಯ). ಯೂರೋಪಿನಿಂದ ದಕ್ಷಿಣಾಭಿಮುಖವಾಗಿ ಮೆಡಿಟರೇನಿಯನ್ ಸಮುದ್ರದೊಳಕ್ಕೆ ಚಾಚಿರುವ ಮೂರು ಪರ್ಯಾಯದ್ವೀಪಗಳಲ್ಲಿ ಮಧ್ಯದ್ದು; ಸಾನ್ ಮರೀನೊ ಮತ್ತು ವ್ಯಾಟಿಕನ್ ನಗರಸೀಮೆಗಳನ್ನು ಬಿಟ್ಟು ಉಳಿದ ಭಾಗವೂ ಈ ಭೂಶಿರದ ಮುಂದಿನ ಭಾಗದಂತಿರುವ ಸಿಸಿಲಿ ದ್ವೀಪವೂ ಸಾರ್ಡಿನಿಯ, ಎಲ್ಬ ಮತ್ತು ಸುಮಾರು ಎಪ್ಪತ್ತು ಸಣ್ಣ ದ್ವೀಪಗಳೂ ಸೇರಿರುವ ಪ್ರದೇಶ. ಎತ್ತರ ಹಿಮ್ಮಡಿಯ ಬೊಟಿನಾಕಾರದ ಈ ಪರ್ಯಾಯದ್ವೀಪ ವಾಯವ್ಯ ದಿಕ್ಕಿನಿಂದ ಆಗ್ನೇಯಕ್ಕೆ ರೈಲುದಾರಿಯ ಕೈಮರದಂತೆ ಚಾಚಿಕೊಂಡಿದೆ. ಉತ್ತರ ಅಕ್ಷಾಂಶ 470 5 ನಿಂದ 350 39 ರವರೆಗೆ 1168 ಕಿ.ಮೀ. ಉದ್ದವಿರುವ ಈ ದೇಶವೆಲ್ಲೊ 240 ಕಿ.ಮೀ.ಗಿಂತ ಅಗಲವಾಗಿಲ್ಲ. ಇದು ಪೂರ್ವಾರ್ಧಗೋಳದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ರೇಖಾಂಶ 60 55 ನಿಂದ 180 30 ವರೆಗೆ ಹಬ್ಬಿದೆ. ಇಟಲಿಗೆ ಉತ್ತರದಲ್ಲಿ ಬಿಲ್ಲಿನಂತೆ ಬಾಗಿ ಹಬ್ಬಿರುವ ಆಲ್ಪ್ಸ್ ಪರ್ವತಶ್ರೇಣಿಯಿಂದ ಫ್ರಾನ್ಸ್ ಸ್ವಿಟ್ಜರ್ಲೆಂಡ್ ಆಸ್ಟ್ರಿಯ ಯುಗೋಸ್ಲಾವಿಯಗಳೂ ಇಟಲಿಯೂ ಪ್ರತ್ಯೇಕಗೊಂಡಿದೆ. ಆಲ್ಪ್ಸ್ ಪರ್ವತಶ್ರೇಣಿಯ ನೆತ್ತಿಯ ಗೆರೆಯೇ ಬಹಳಮಟ್ಟಿಗೆ ಇಟಲಿಗೂ ಈ ದೇಶಗಳಿಗೂ ನಡುವಣ ಗಡಿರೇಖೆ. ಇಟಲಿ ಪರ್ಯಾಯದ್ವೀಪದ ವಾಯುವ್ಯದಲ್ಲಿ ಲುಗುರಿಯನ್ ಸಮುದ್ರವೂ ಪಶ್ಚಿಮದಲ್ಲಿ ಟೆರ್ಪೆನಿಯನ್ ಸಮುದ್ರವೂ ಆಗ್ನೇಯದಲ್ಲಿ ಐಯೊನಿಯನ್ ಸಮುದ್ರವೂ ಪೂರ್ವದಲ್ಲಿ ಒಡ್ರಿಯಾಟಿಕ್ ಸಮುದ್ರವೂ ಇವೆ. ಸಿಸಿಲಿ ದ್ವೀಪಕ್ಕೂ ಆಫ್ರಿಕಕ್ಕೂ ನಡುವೆ ಇರುವ ಸಿಸಿಲಿಯನ್ ಜಲಸಂಧಿಯ ಅಗಲ ಕೇವಲ 144 ಕಿ.ಮೀ. ಹೀಗಾಗಿ ಇಟಲಿಯೂ ಸಿಸಿಲಿಯೂ ಮೇಡಿಟರೇನಿಯನ್ ಸಮುದ್ರವನ್ನೇ ಸ್ಥೂಲವಾಗಿ ಇಬ್ಭಾಗಿಸಿದೆ. ಸಿಸಿಲಿ ಸಾರ್ಡಿನಿಯಗಳು ಕೂಡಿದ ಇಟಲಿಯ ಒಟ್ಟು ವಿಸ್ತೀರ್ಣ 3,01,250 ಚ.ಕಿ.ಮೀ. ಆಡಳಿತ ಸೌಕರ್ಯಕ್ಕಾಗಿ ಇದನ್ನು ಹತ್ತೊಂಬತ್ತು ಭಾಗಗಳಾಗಿ ವಿಂಗಡಿಸಲಾಗಿದೆ. ಇಟಲಿಯ ರಾಜಧಾನಿ ರೋಂ. ಡಿಸೆಂಬರ್ 1967ರಲ್ಲಿದ್ದಂತೆ ಈ ದೇಶದ ಜನಸಂಖ್ಯೆ 5,36,56,000. ದ್ವಿತೀಯ ಯುದ್ಧಾನಂತರದಲ್ಲಿ 1947ರ ಶಾಂತಿ ಕೌಲಿಗೆ ಅನುಗುಣವಾಗಿ ಈ ದೇಶದ ಗಡಿ ನಿಷ್ಕರ್ಷೆಯಾಗಿದೆ. ಯುದ್ಧಪೂರ್ವದಲ್ಲಿ ಇದು ಹೊಂದಿದ್ದ ವಸಾಹತುಗಳ ಮೇಲಣ ಹಕ್ಕುಗಳನ್ನೆಲ್ಲ ಬಿಟ್ಟುಕೊಟ್ಟಿದೆ. ಇದರ ಆಕ್ರಮಣಕ್ಕೆ ಒಳಪಟ್ಟಿದ್ದ ಇಥಿಯೋಪಿಯ (ನೋಡಿ- ಅಬಿಸೀನಿಯ) 1942ರಲ್ಲಿ ತನ್ನ ಸ್ವಾತಂತ್ರ್ಯವನ್ನು ಮತ್ತೆ ಗಳಿಸಿಕೊಂಡಿತು. ಡೊಡೆಕನೀಸನ್ನು 1947ರಲ್ಲಿ ಗ್ರೀಸಿಗೆ ಸೇರಿಸಲಾಯಿತು. (ನೋಡಿ- ಗ್ರೀಸಿನ-ಚರಿತ್ರೆ) ಲಿಬಿಯ 1951ರಲ್ಲಿ ಸ್ವತಂತ್ರವಾಯಿತು. ಎರಿಟ್ಟ್ರಿಯ ಪ್ರದೇಶ 1952ರಲ್ಲಿ ಇಥಯೋಪಿಯ ಒಕ್ಕೊಟದಲ್ಲಿ ಸೇರ್ಪಡೆಹೊಂದಿತು. ಸೋಮಾಲಿಯ 1950ರಲ್ಲಿ ಇಟಲಿಯ ನ್ಯಾಸಾಧಿಕಾರಕ್ಕೊಳಪಟ್ಟಿದ್ದು. 1960ರ ಜುಲೈ ತಿಂಗಳಲ್ಲಿ ಸ್ವತಂತ್ರ ಗಣರಾಜ್ಯವಾಯಿತು.

ಮೇಲ್ಮೈಲಕ್ಷ

ಇಟಲಿಯ ಮುಖ್ಯ ಭೂಭಾಗವನ್ನು ಖಂಡಾಂತರ ಪ್ರದೇಶವೆಂದೂ ಪರ್ಯಾಯದ್ವೀಪಪ್ರದೇಶವೆಂದೂ ಎರಡು ಭಾಗಗಳಾಗಿ ವಿಂಗಡಿಸಬಹುದು. ಉತ್ತರದಲ್ಲಿ ಆಲ್ಪ್ಸ್‍ಪರ್ವತದ ದಕ್ಷಿಣದ ಇಳುಕಲೂ ದಕ್ಷಿಣಭಾಗದಲ್ಲಿ ಅಪೆನೈನ್ ಪರ್ವತಗಳ ಉತ್ತರದ ಇಳಿಜಾರು ಇಟಲಿಯ ಖಂಡಾಂತರ ಪ್ರದೇಶವನ್ನು ಅಡಕತ್ತರಿಯಂತೆ ಹಿಡಿದುಕೊಂಡಿವೆ. ಪರ್ಯಾಯದ್ವೀಪಪ್ರದೇಶದಲ್ಲಿ ಅಪೆಮಾಂಟಿರೋಸದ ಎತ್ತರ 15,217 ಅಡಿ. ಇಟಲಿಯ ಪ್ರದೇಶದಲ್ಲಿ ಇರುವ ಶಿಖರಗಳ ಪೈಕಿ ಗ್ರಾನ್ ಪಾರಾಡಿಸೊ (13,652) ಅತ್ಯಂತ ಉನ್ನತವಾದದ್ದು. ಮಧ್ಯ ಆಲ್ಪ್ಸ್ ಪಶ್ಚಿಮ ಭಾಗದಷ್ಟು ಎತ್ತರವಾಗಿಲ್ಲ. ಪೂರ್ವಭಾಗ ಇನ್ನೂ ತಗ್ಗು; ಆದರೆ ಸುಂದರ. ತೀರ ಪೂರ್ವದಲ್ಲಿ ಪೂರ್ವ-ಪಶ್ಚಿಮವಾಗಿ ಹಬ್ಬಿರುವ ಕಣಿವೆಗಳಲ್ಲಿ ಹರಿಯುವ ಹೊಳೆಗಳ ನೀರು ನಿಂತು ಸರೋವರವಾಗಿ ಪರಿಣಮಿಸಿ, ನೋಡಲು ರಮಣೀಯ. ಪಶ್ಚಿಮದಲ್ಲಿ 1,000 ದಿಂದ 1,700 ಅಡಿಗಳವರೆಗೆ ಮೇಲೆದ್ದು ಪೂರ್ವದಲ್ಲಿ 300ರಿಂದ 600 ಅಡಿಗಳವರೆಗೆ ತಗ್ಗಿ ಹಬ್ಬಿರುವ ಉತ್ತರದ ಬಯಲಿನ ಪಶ್ಚಿಮ ಭಾಗದಲ್ಲಿ ಪೋ ನದಿಯೂ ಅದರ ಉಪನದಿಗಳೂ ಪೂರ್ವಾಭಿಮುಖವಾಗಿ ಹರಿಯುತ್ತವೆ. ಪೂರ್ವದಲ್ಲಿ ಪೋ ಜೊತೆಗೆ ಅನೇಕ ಸ್ವತಂತ್ರ ನದಿಗಳಿವೆ. ಇಟಲಿಯ ಪರ್ಯಾಯದ್ವೀಪ ಭಾಗವನ್ನು ಕಬ್ಬಿನ ಗಿಣ್ಣುಗಳಂತೆ ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಪ್ರದೇಶದ ಪಶ್ಚಿಮಭಾಗವನ್ನು ಅನೇಕ ಸ್ವಾಭಾವಿಕ ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಕಂಪ ನದಿಯ ಮೈದಾನದಲ್ಲಿ ಫ್ಲೆಗ್ರೀನ್ ಫೀಲ್ಡ್ಸ್ ಮತ್ತು ವಿಸೊವಿಯಸ್ ಅಗ್ನಿಪರ್ವತಗಳಿವೆ. ಇವು ಇನ್ನೂ ಜೀವಂತವಾಗಿವೆ; ನೇಪಲ್ಸ್ ಪಟ್ಟಣಕ್ಕೆ ಹತ್ತಿರದಲ್ಲೇ ಇವೆ. ಅಪೆನೈನ್ ಪರ್ವತಶ್ರೇಣಿಯಲ್ಲಿ ಅನೇಕ ಬಗೆಯ ಬಂಡೆಗಳಿವೆ. ಅಪೆನೈನ್ ಶ್ರೇಣಿಗಳು ಉತ್ತರದಲ್ಲಿ ಕಿರಿದಾಗಿಯೂ ಮಧ್ಯದಲ್ಲಿ ದಪ್ಪಗೂ ಎತ್ತರವಾಗಿಯೂ ಮುಂದೆ ತಗ್ಗಿಯೂ ಇವೆ. ಇಟಲಿಯ ನದಿಗಳ ಪ್ರವಾಹಗಳು ವರ್ಷಾದ್ಯಂತ ಒಂದೇ ಸಮನಾಗಿರುವುದಿಲ್ಲ. ಉತ್ತರದ ನದಿಗಳಲ್ಲಿ ಈ ಏರುಪೇರು ದಕ್ಷಿಣದ ನದಿಗಳಷ್ಟು ಅಧಿಕವಲ್ಲ. ಆಲ್ಪ್ಸ್ ಮೇಲ್ಭಾಗದಲ್ಲಿ ಹುಟ್ಟಿ ಹರಿಯುವ ನದಿಗಳು ಮುಂಬೇಸಗೆಯಲ್ಲಿ ಕರಗಿದ ಹಿಮನೀರಿನಿಂದ ಕೂಡಿ ಉಬ್ಬಿ ಹರಿಯುತ್ತದೆ. ಆಲ್ಪ್ಸ್‍ಪರ್ವತಗಳ ಕೆಳಪ್ರದೇಶದಲ್ಲಿ ಹುಟ್ಟುವ ನದಿಗಳಲ್ಲಿ ವರ್ಷಕ್ಕೆ ಎರಡು ಬಾರಿ ಪ್ರವಾಹ. ಮುಂಬೇಸಗೆಯಲ್ಲಿ ಹಿಮ ಕರಗಿ ನೀರು ಹರಿದರೆ ಬೇಸಗೆಯ ಕೊನೆಭಾಗದಲ್ಲೂ ಶರತ್ಕಾಲದ ಆದಿಭಾಗದಲ್ಲೂ ಬೀಳುವ ಮಳೆಯಿಂದ ತುಂಬು ಹರಿವಿರುತ್ತದೆ. ಉತ್ತರದ ಮೈದಾನದ ದಕ್ಷಿಣದಲ್ಲಿ ಹುಟ್ಟಿ ಪೋ ನದಿಯಲ್ಲಿ ಸಂಗಮವಾಗುವ ನದಿಗಳಲ್ಲಿ ಮಾರ್ಚಿಯಲ್ಲೂ ಸೆಪ್ಟಂಬರಿನಲ್ಲೂ ಪ್ರವಾಹ. ಜುಲೈ ತಿಂಗಳಿಂದ ಸೆಪ್ಟೆಂಬರ್‍ವರೆಗೆ ಅವುಗಳ ನೀರಿನ ಮಟ್ಟ ಕಡಿಮೆ. ಮಧ್ಯ ಇಟಲಿಯ ನದಿಗಳಿಗೆ ವಸಂತಋತುವೇ ಪ್ರವಾಹಕಾಲ. ಜುಲೈಯಿಂದ ಸೆಪ್ಟೆಂಬರ್‍ವರೆಗೆ ತಗ್ಗಿದ ಮಟ್ಟ. ನವೆಂಬರಿನಲ್ಲಿ ಸ್ವಲ್ಪ ಪ್ರವಾಹ. ದಕ್ಷಿಣ ಇಟಲಿಯ ನದಿಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರವಾಹದ ಭೋರ್ಗರೆತ. ಬೇಸಗೆಯಲ್ಲಿ ಇವು ಬಹುತೇಕ ಶುಷ್ಕ. ಸ್ಥೂಲವಾಗಿ ಇದು ಇಟಲಿಯ ನದಿಗಳ ಪ್ರವಾಹದ ಚಿತ್ರ.

ವಾಯುಗುಣ

ಉತ್ತರದಿಂದ ದಕ್ಷಿಣಕ್ಕೆ ಅಕ್ಷಾಂಶದಲ್ಲಿ ಸುಮಾರು ಹತ್ತು ಡಿಗ್ರಿಗಳ ಅಂತರವಿರುವುದರಿಂದಲೂ ಮೈಮೇಲೆ ಬಹು ತೀವ್ರ ಉಬ್ಬು ತಗ್ಗುಗಳಿರುವುದರಿಂದಲೂ ಇಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ವಾಯುಗುಣದಲ್ಲಿ ಬಹಳ ವ್ಯತ್ಯಾಸಗಳಿವೆ. ಸಮುದ್ರಕ್ಕಿರುವ ದೂರವೂ ಈ ವ್ಯತ್ಯಾಸಗಳಿಗೆ ಒಂದು ಕಾರಣ. ಸಮುದ್ರಪ್ರಭಾವಕ್ಕೆ ಒಳಗಾದ ಪ್ರದೇಶದಲ್ಲಿ ಮಳೆ ಹೆಚ್ಚು; ಹವೆ ಹಿತಕರ. ಎತ್ತರ ಪ್ರದೇಶ ಹೆಚ್ಚು ತಂಪು; ಅಲ್ಲಿ ಮಳೆಯೂ ಹೆಚ್ಚು. ಪರ್ವತಗಳ ಪೂರ್ವ ಬದಿಯಲ್ಲಿ ಮಳೆ ಕಡಿಮೆ. ಇದು ಮಳೆನೆರಳು ಪ್ರದೇಶ. ಉತ್ತರ ಮೈದಾನದ ಪಶ್ಚಿಮಭಾಗದಲ್ಲಿರುವ ಟುರಿನ್ನಿನಲ್ಲಿ ವರ್ಷದ ಕನಿಷ್ಠ ಮಧ್ಯಮ ಉಷ್ಣತೆ 170 ಫ್ಯಾ. ನಷ್ಟು ಕೆಳಗಿರುತ್ತದೆ. ದಕ್ಷಿಣದ ಮೆಸ್ಸಿನ ಜಲಸಂಧಿಯ ಆಚೀಚೆ ಪ್ರದೇಶದಲ್ಲಿ ಚಳಿಗಾಲದಲ್ಲಿ 530 ಫ್ಯಾ. ನಷ್ಟು ಹೆಚ್ಚು ಉಷ್ಣತೆಯಿರುತ್ತದೆ. ಬೇಸಗೆಯಲ್ಲಿ ಟರಾಂಟೊ ಖಾರಿಯ ಸುತ್ತಣ ಪ್ರದೇಶದಲ್ಲಿ ಅತಿ ಹೆಚ್ಚು ಉಷ್ಣತೆಯೂ (77.5 ಫ್ಯಾ.) ಆಲ್ಪ್ಸ್ ತಲೆಗಳ ಮೇಲೆ ಅತ್ಯಂತ ತಂಪೂ ಇರುತ್ತದೆ. ಕರಾವಳಿ ಪ್ರದೇಶ ತಗ್ಗಾಗಿರುವುದರಿಂದ ಅಲ್ಲಿ ಬೇಸಗೆಯಲ್ಲಿ ಉಷ್ಣತೆ ಹೆಚ್ಚು. ಇಟಲಿಯ ಎಲ್ಲ ಕಡೆಗೂ ಹಿಮಬೀಳುವುದಾದರೂ ದಕ್ಷಿಣದಲ್ಲಿ ಇದು ವಿರಳ. ಉತ್ತರದ ಆಲ್ಪ್ಸ್ ಪ್ರದೇಶದಲ್ಲಿ ಪರಮಾವಧಿ ಮಳೆ (1200); ತಗ್ಗು ಪ್ರದೇಶದಲ್ಲಿ ತೀರಕಡಿಮೆ (15”). ಪಶ್ಚಿಮ ಮಾರುತಗಳೇ ಮೋಡ ವಾಹಕಗಳಾಗಿದ್ದರಿಂದ ಪಶ್ಚಿಮದಲ್ಲಿ ಮಳೆ ಹೆಚ್ಚು. ಪೂರ್ವಭಾಗ ಶುಷ್ಕ. ಇಟಲಿಯ ದಕ್ಷಿಣಾರ್ಧದಲ್ಲಿ ಮೆಡಿಟರೇನಿಯನ್ ವಾಯುಗುಣಕ್ಕೆ ಅನುಗುಣವಾಗಿ ಮಳೆ ಬೀಳುತ್ತದೆ. ಎಂದರೆ ಚಳಿಗಾಲದಲ್ಲಿ ಮಳೆ; ಬೇಸಗೆಯಲ್ಲಿ ತೇವವಿರುವುದಿಲ್ಲ. ಉತ್ತರಕ್ಕೆ ಹೋದಂತೆಲ್ಲ ವರ್ಷಕ್ಕೆ ಎರಡು ಮಳೆಗಾಲ; ಶರತ್ ಹಾಗೂ ವಸಂತಋತುಗಳಲ್ಲಿ ಮಳೆ ಅಧಿಕ. ಆದಾಗ್ಯೂ ಚಳಿಗಾಲದಲ್ಲೇ ಮಳೆಯ ಪ್ರಮಾಣ ಹೆಚ್ಚು. ಆದರೆ ಬೇಸಗೆಯ ಒಣಹವೆಯ ಅವಧಿ ಉತ್ತರಕ್ಕೆ ಹೋದಂತೆಲ್ಲ ಕಿರಿದಾಗುತ್ತದೆ. ಪೋ ನದಿಯ ಉತ್ತರಕ್ಕೆ ಚಳಿಗಾಲದಲ್ಲೇ ಮಳೆಯ ಕನಿಷ್ಠ ಪ್ರಮಾಣ. ಈ ಮೈದಾನದಲ್ಲಿ ಚಳಿಗಾಲ, ಬೇಸಗೆಕಾಲಗಳೆರಡರಲ್ಲೂ ಸಾಮಾನ್ಯವಾಗಿ ಒಣ ಹವೆ ಇರುವುದು ಸ್ವಾರಸ್ಯದ ಸಂಗತಿಯಾಗಿದೆ. ಆಲ್ಪ್ಸ್‍ಪರ್ವತದ ಶೃಂಗ ಪ್ರದೇಶಗಳಾದರೂ ಸದಾ ದಟ್ಟವಾದ ಹಿಮಕವಚವನ್ನು ಹೊದ್ದಿರುತ್ತವೆ. ಅಷ್ಟು ಎತ್ತರವಲ್ಲದ ಅಪೆನೈನ್ ಪರ್ವತ ಶ್ರೇಣಿಗಳ ವಿಶಾಲ ಪ್ರದೇಶಗಳಲ್ಲಿ ವರ್ಷದಲ್ಲಿ ಮೂರು ನಾಲ್ಕು ತಿಂಗಳುಗಳ ಕಾಲ ಹಿಮ ಇರುತ್ತದೆ. ಅದೇ ಉತ್ತರ ಭಾಗದ ಬಯಲು ಭೂಮಿಯಲ್ಲಿ ವರ್ಷದ ಕೇವಲ ಹತ್ತುದಿನ ಹಿಮ ಕಂಡರೆ ಹೆಚ್ಚು. ವಾಯುಗುಣದ ಹಿತಾಹಿತಗಳನ್ನೂ ಜೀವನ ಸೌಲಭ್ಯಗಳನ್ನೂ ವ್ಯವಸಾಯ, ಕೈಗಾರಿಕೆಗಳ ಸೌಕರ್ಯಗಳನ್ನೂ ಗಮನಿಸಿ ಜನ ನೆಲೆನಿಲ್ಲುತ್ತ ಹೋಗಿರುವುದನ್ನು ಇಲ್ಲಿ ಕಾಣಬಹುದು.

ಸ್ವಾಭಾವಿಕ ಸಸ್ಯವರ್ಗ

ಮಧ್ಯ ಐರೋಪ್ಯ ಹಾಗೂ ಮೆಡಿಟರೇನಿಯನ್ ಪ್ರದೇಶಗಳೆರಡೂ ಇಟಲಿಯಲ್ಲಿ ಒಂದರ ಮೇಲೊಂದು ಪ್ರಸರಿಸಿವೆ. ಶಂಕುವಿನಾಕಾರದ (ಕೊನಿಫರಸ್) ಮರಗಳಿಂದಲೂ ಅಗಲೆಲೆಯ ಪರ್ಣಪಾತೀ ವೃಕ್ಷಗಳಿಂದಲೂ ಕೂಡಿದ ಕಾಡುಗಳು, ಕುರುಚಲು ಕಾಡುಗಳು, ಹಸಿರು ಹುಲ್ಲುಗಾವಲುಗಳು ಮಧ್ಯ ಐರೋಪ್ಯ ಪ್ರದೇಶದ ಲಕ್ಷಣ. ಶರತ್ಕಾಲದಲ್ಲಿ ಬುಡದವರೆಗೂ ಸತ್ತು ಮತ್ತೆ ಬೆಳೆಯುವ ಸಸ್ಯಗಳು ಇಲ್ಲಿ ಅಧಿಕ. ಶಂಕುವಿನಾಕಾರದ ಮರಗಳೊ ದಪ್ಪನಾದ ಅಗಲೆಲೆಯ ನಿತ್ಯ ಹಸರು ವೃಕ್ಷಗಳೂ ವಾರ್ಷಿಕ ಸಸ್ಯಗಳೂ ಗೆಡ್ಡೆಯಿಂದ ಬೆಳೆಯುವ ಗಿಡಗಳೂ ಬೇಸಗೆಯಲ್ಲಿ ಒಣಗುವ ಹುಲ್ಲುಗಾವಲುಗಳೂ ಮೆಡಿಟರೇನಿಯನ್ ಪ್ರದೇಶದಲ್ಲಿ ಸಾಮಾನ್ಯ. ಇವೆರಡು ಸ್ವಾಭಾವಿಕ ವಿಭಾಗಗಳನ್ನೂ ಪ್ರತ್ಯೇಕಿಸುವ ಖಚಿತ ಗೆರೆ ಎಳೆಯುವುದು ಅಸಾಧ್ಯವಾದರೂ ಇಟಲಿಯ ಆಲ್ಪ್ಸ್ ಪ್ರದೇಶವನ್ನೂ ಉತ್ತರ ಮೈದಾನದ ಹೆಚ್ಚಿನ ಭಾಗವನ್ನೂ ಮಧ್ಯೆಐರೋಪ್ಯ ಪ್ರದೇಶಕ್ಕೂ ಪರ್ಯಾಯದ್ವೀಪ ಭಾಗವನ್ನು ಮೆಡಿಟರೇನಿಯನ್ ಪ್ರದೇಶಕ್ಕೂ ಸೇರಿಸಬಹುದು. ಇಟಲಿಯ ಪೂರ್ವ ಕರಾವಳಿ ಭಾಗವನ್ನು ಮೆಡಿಟರೇನಿಯನ್ ಪ್ರದೇಶದಲ್ಲೇ ವಿಶಿಷ್ಟವಾದದ್ದೆಂದು ಪರಿಗಣಿಸಬೇಕು. ಅಪೆನೈನ್ ಪರ್ವತಶ್ರೇಣಿಗಳ ಮೇಲೂ ಸಿಸಿಲಿಯ ಎಟ್ನ ಪರ್ವತದ ಮೇಲೂ ಪರ್ಣಪಾತೀ ವೃಕ್ಷಗಳ ಕಾಡುಗಳು ಅಧಿಕ. ಇಟಲಿಯ ಅನೇಕ ಭಾಗಗಳಲ್ಲಿ ಕುರುಚಲು ಗಿಡಗಳು ಸಾಮಾನ್ಯ.

ಪ್ರಾಣಿವರ್ಗ

ಇಟಲಿಯ ಪ್ರಾಣಿಗಳಿಗೂ ಮಧ್ಯ ಯೂರೋಪ್ ಬಾಲ್ಕನ್ ಹಾಗೂ ಆಫ್ರಿಕಾ ಪ್ರದೇಶಗಳ ಪ್ರಾಣಿಗಳಿಗೂ ರೂಪಸಾಮ್ಯವುಂಟು. ಆದರೆ ಪ್ರಾಣಿಗಳಿಗೆ ಆತ್ಮವಿಲ್ಲವೆಂದೂ ಆದ್ದರಿಂದ ಅವು ಮಾನವಾನುಕಂಪಕ್ಕೆ ಅನರ್ಹವೆಂದೂ ಅವುಗಳ ಬಗ್ಗೆ ಉಪಯುಕ್ತತೆಯ ದೃಷ್ಟಿಯಿಂದ ಮಾತ್ರ ವರ್ತಿಸಬೇಕೆಂದೂ ಇಟಾಲಿಯನ್ನರು ಭಾವಿಸಿರುವುದರಿಂದ ಇಲ್ಲಿ ಅವು ವಿರಳ. ಬೇಟೆಯಾಡಲು ಎಲ್ಲರಿಗೂ ಹಕ್ಕುಂಟು. ಜಮೀನಿನ ಒಡೆಯನಿಗೆ ತನ್ನ ನೆಲದ ಮೇಲಿನ ಪ್ರಾಣಿಗಳ ಮೇಲೆ ಯಾವ ಸ್ವಾಮ್ಯವೂ ಇಲ್ಲ. ಆಹಾರದ ಕೊರತೆಯನ್ನು ತುಂಬಿಕೊಳ್ಳುವ ಸಲುವಾಗಿ ಪ್ರಾಣಿಗಳನ್ನು ಬೇಟೆಯಾಡುವುದು ಸಾಮಾನ್ಯ. ಹೀಗಾಗಿ ಎಲ್ಲೋ ಕೆಲವೆಡೆಗಳಲ್ಲಿ ಮಾತ್ರ ಪ್ರಾಣಿಗಳು ಇನ್ನೂ ಉಳಿದುಕೊಂಡಿವೆ. ಕರಡಿಗಳು ಅಬ್ರುಜಿ ಎಂಬಲ್ಲಿ ಇನ್ನೂ ಕಾಣಸಿಗುತ್ತವೆ. ತೋಳಗಳು ಅಪೆನೈನ್ ಶ್ರೇಣಿಗಳಲ್ಲಿ ಹೆಚ್ಚಾಗಿವೆ. ಸಣ್ಣಜಾತಿಯ ಜಿಂಕೆಗಳು (ರೋ) ಕಾಡುಗಳಲ್ಲಿ ಉಳಿದುಬಂದಿವೆ. ವೆನಿಸ್ ಬಳಿಯ ಆಲ್ಪ್ಸ್ ಪ್ರದೇಶದಲ್ಲಿ ಸಾರಂಗಗಳೂ ಆಲ್ಪ್ಸ್ ಪ್ರದೇಶದ ಎಲ್ಲೆಡೆಗಳಲ್ಲೂ ಪಾಮಾಯ್ ಮೃಗಗಳೂ ಅಲ್ಲಲ್ಲಿ ಕಾಡುಹಂದಿಗಳೂ ಇವೆ. ಹಲ್ಲಿಗಳು ಅಸಂಖ್ಯಾತ. ಬೆಟ್ಟಗಾಡುಗಳಲ್ಲಿ ಹಾವುಗಳು ಧಾರಾಳ. ಸಾವಿರಕಾಲುಗಳೂ (ಸ್ಕಾಲೊಪೇಂಡ್ರ) ಸಣ್ಣ ಚೇಳುಗಳೂ ಹೆಜ್ಜೇಡಗಳೂ (ಟರಾಂಟ್ಯುಲ) ಹಾರುಜೇಡಗಳೂ ಇಲ್ಲಿನ ವಿಷಜಂತುಗಳು, ನಾನಾ ಬಗೆಯ ಸೊಳ್ಳೆಗಳೂ ಇಲ್ಲುಂಟು. ಆದರೆ ಮಲೇರಿಯ ಮೂಲೋತ್ಪಾಟನವಾಗಿರುವುದರಿಂದ ಭಯವಿಲ್ಲ.

ವ್ಯವಸಾಯ

ಇಟಲಿ ಕೃಷಿಪ್ರಧಾನ ರಾಷ್ಟ್ರ. ಇಲ್ಲಿಯ ಆರ್ಥಿಕ ವ್ಯವಸ್ಥೆಗೆ ವ್ಯವಸಾಯವೇ ತಳಹದಿ. ದೇಶದ 90% ರಷ್ಟು ಭಾಗ ಬೇಸಾಯದ ನೆಲದಿಂದಲೂ ಅರಣ್ಯಗಳಿಂದಲೂ ಕೂಡಿದೆ. ದೇಶದ ದುಡಿಯುವ ಜನರಲ್ಲಿ 2/5 ಭಾಗ ವ್ಯವಸಾಯದಲ್ಲೂ ಅರಣ್ಯೋದ್ಯಮದಲ್ಲೂ ನಿರತರಾಗಿದ್ದಾರೆ. 1953ರ ಭೂಸುಧಾರಣಾಕಾಯಿದೆಯ ಪ್ರಕಾರ ಜಮೀನನ್ನು ವಶಪಡಿಸಿಕೊಂಡು 1963ರಲ್ಲಿ ಸುಮಾರು 18,00,000 ಎಕರೆ ಜಮೀನನ್ನು ಪುನರ್ವಿಂಗಡಿಸಿಯೂ 16,00,000 ಎಕರೆ ಜಮೀನನ್ನು ಹೊಸದಾಗಿಯೂ ರೈತರಿಗೆ ನೀಡಲಾಯಿತು. ದೇಶದ ನಾನಾ ಕಡೆಗಳಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆಲ್ಪೈನ್ ಜಿಲ್ಲೆಗಳು ಅರಣ್ಯ, ಹಣ್ಣಿನ ತೋಟ ಹಾಗೂ ಗೋಮಾಳಗಳಿಗೆ ಪ್ರಸಿದ್ಧ. ಪೋ ಕಣಿವೆ ಪ್ರದೇಶಗಳಲ್ಲಿ ಧಾನ್ಯ ಹಾಗೂ ಹುಲ್ಲು ಬೆಳೆಯುತ್ತಾರೆ. ಬೆಟ್ಟಗಳ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ದವಸ ಧಾನ್ಯಗಳನ್ನು, ಆಲಿವ್ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಕಾಲುವೆ ವ್ಯವಸ್ಥೆ ನೀರಾವರಿ ವ್ಯವಸ್ಥೆ ತುಂಬ ಸಮರ್ಪಕವಾಗಿದೆ. ಪರಿಮಾಣದ ದೃಷ್ಟಿಯಿಂದ ಗೋಧಿ, ಬೀಟ್‍ರೂಟ್, ಆಲೂಗೆಡ್ಡೆ, ಜೋಳ, ಟೊಮ್ಯಾಟೊ, ಅಕ್ಕಿ, ಓಟ್ಸ್, ಬಾರ್ಲಿ, ಸಣ್ಣಗೋದಿ, ಹೊಗೆಸೊಪ್ಪು, ಸೆಣಬು-ಇವು ಮುಖ್ಯವಾದ ಬೆಳೆಗಳು. ಅಲ್ಲದೆ ಕಿತ್ತಲೆ ಹಾಗೂ ನಿಂಬೆಹಣ್ಣುಗಳನ್ನು ಹೇರಳವಾಗಿ ಬೆಳೆಯುತ್ತಾರೆ. ದ್ರಾಕ್ಷಾರಸ ಹಾಗೂ ಆಲಿವ್ ಎಣ್ಣೆಗಳ ಉತ್ಪಾದನೆಯಲ್ಲಿ ಪ್ರಸಿದ್ಧವಾದ ರಾಷ್ಟ್ರಗಳ ಪೈಕಿ ಇಟಲಿಗೆ ಎರಡನೆಯ ಸ್ಥಾನ. ದೇಶದ ಎಲ್ಲ ಭಾಗಗಳಲ್ಲೂ ಸುಮಾರು 1,00,00,000 ದನಕರುಗಳನ್ನೂ ಅಷ್ಟೇ ಪ್ರಮಾಣದಲ್ಲಿ ಕುರಿ, ಮೇಕೆ, ಹಂದಿಗಳನ್ನೂ ನೋಡಬಹುದಾಗಿದೆ. ಉಳಿದ ಪ್ರಾಣಿ ಸಂಪತ್ತೆಂದರೆ ಕತ್ತೆ, ಕುದುರೆ ಹಾಗೂ ಹೇಸರಗತ್ತೆ. ಇಟಲಿಯಲ್ಲಿ ದೊರಕುವ ಖನಿಜಸಂಪತ್ತು ಅಷ್ಟೇನೂ ಆಶಾದಾಯಕವಾದುದಲ್ಲ. ಗಂಧಕ ಹಾಗೂ ಪಾದರಸ ಹೇರಳವಾಗಿ ಸಮೃದ್ಧವಾಗಿ ದೊರಕುತ್ತದೆ. ಇಟಲಿ ಇದನ್ನು ಹೇರಳವಾಗಿ ರಫ್ತುಮಾಡುತ್ತದೆ. ಪ್ರಪಂಚದ 1/3 ಭಾಗದಷ್ಟು ಪಾದರಸ ಇಟಲಿಯಲ್ಲಿ ಉತ್ಪಾದನೆಯಾಗುತ್ತದೆ. ಕಬ್ಬಿಣ, ಸತು, ಸೀಸ, ಮ್ಯಾಂಗನೀಸ್ ಮತ್ತು ಅಲ್ಯೂಮಿನಿಯಂ ಅದುರುಗಳ ಉತ್ಪಾದನೆಯೂ ಇದೆ. ಆದರೆ ಕೈಗಾರಿಕೆಗೆ ಬೇಕಾದ ಕಬ್ಬಿಣದ ಅದುರು ಹಾಗೂ ಕಲ್ಲಿದ್ದಲು ಸಾಕಷ್ಟು ದೊರಕದಿರುವುದು ದೇಶದ ಕೈಗಾರಿಕೋದ್ಯಮಕ್ಕೆ ಭಾರಿ ಪೆಟ್ಟು. ಕೆಲವು ಮುಖ್ಯ ಗಣಿಗಳು ಸಿಸಿಲಿ, ಸಾರ್ಡಿನಿಯ, ಟಸ್ಕನಿ, ಲೊಂಬಾರ್ಡಿಗಳಲ್ಲಿವೆ. ಸಿಸಿಲಿಯಲ್ಲಿ ಅನೇಕ ಸಮೃದ್ಧ ಎಣ್ಣೆ ಬಾವಿಗಳು ದೊರಕಿವೆ. ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಯೂರೋಪಿನಲ್ಲೇ ಅತಿ ಪ್ರಮುಖವಾದ ಎಣ್ಣೆ ದೊರಕುವ ಪ್ರದೇಶಗಳನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜಲವಿದ್ಯುಚ್ಛಕ್ತಿಯನ್ನು ಅಧಿಕವಾಗಿ ಉತ್ಪಾದಿಸಲಾಗುತ್ತಿದೆ. ದೇಶದ ಕೈಗಾರಿಕೋದ್ಯಮಗಳು ಇಟಲಿಯ ಉತ್ತರಭಾಗದಲ್ಲಿ ಹೆಚ್ಚಾಗಿವೆ. ಆದರೆ ಇತ್ತೀಚೆಗೆ ದಕ್ಷಿಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ಪಾದನೆ ಹೆಚ್ಚಿಸಬೇಕೆಂದು ನಿಯೋಜಿತ ಯೋಜನೆಯನ್ನು ಹಾಕಿಕೊಂಡು ದೇಶ ಮುಂದುವರಿಯುತ್ತಿದೆ. ಇಟಲಿಯ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖವಾದದ್ದು ಎಂದರೆ ಬಟ್ಟೆ ಕೈಗಾರಿಕೆ. ಈ ಕೈಗಾರಿಕೆ ದೇಶದಲ್ಲಿ ಬಹುತೇಕ ಜನರಿಗೆ ಉದ್ಯೋಗ ನೀಡಿದೆ. ಈ ಕೈಗಾರಿಕೋದ್ಯಮದಲ್ಲಿ ಮುಖ್ಯವಾಗಿ ಸಿಲ್ಕ್, ಉಣ್ಣೆ ಮತ್ತು ಹತ್ತಿ ಹಾಗೂ ಕೃತಕನೂಲಿನ ಬಟ್ಟೆಗಳ ಉತ್ಪಾದನೆ ಹೆಚ್ಚಾಗಿದೆ. ರಾಸಾಯನಿಕ ವಸ್ತು, ಸಕ್ಕರೆ ಹಾಗೂ ಮೋಟಾರ್ ಕಾರು, ಕೈಗಾರಿಕೆಗಳು ಪ್ರಮುಖವಾದ ಉದ್ಯಮಗಳಾಗಿವೆ. ವೈರ್‍ಲೆಸ್ ಮತ್ತು ಬೆರಳಚ್ಚು ಯಂತ್ರ, ವ್ಯವಸಾಯಕ್ಕೆ ಬೇಕಾದ ಉಪಕರಣ ಬೈಸಿಕಲ್ಲು, ಮೋಟಾರ್ ಸೈಕಲ್ಲು-ಇವು ಕೈಗಾರಿಕೋದ್ಯಮದ ಇತರ ಉತ್ಪಾದಿತ ವಸ್ತುಗಳು. (ನೋಡಿ- ಇಟಲಿಯ-ಆರ್ಥಿಕ-ವ್ಯವಸ್ಥೆ)

ಜನಜೀವನ

ಬಹುಪುರಾತನ ಕಾಲದಿಂದ ಇಟಲಿಗೆ ಅನೇಕ ಜನಾಂಗಗಳು ಬಂದು ಸೇರಿವೆ. ಆರ್ಯರು, ಕೆಲ್ಟರು, ಗೋಥರು, ಇಟ್ರಸ್ಕನರು ಮುಂತಾದ ಜನಾಂಗಗಳ ಜನರು ಇಟಲಿಯ ಮೇಲೆ ದಾಳಿ ನಡೆಸಿದರು. ಪ್ರತಿಯೊಂದು ದಾಳಿಯ ಅನಂತರವೂ ಅವರಲ್ಲಿ ಸ್ವಲ್ಪಜನ ಅಲ್ಲೇ ನೆಲೆಯೂರಿದರು. ಹೀಗೆ ಇಟಲಿಯಲ್ಲಿ ಅನೇಕ ಜನಾಂಗಗಳ ಮಿಶ್ರಣವಾಗುತ್ತ ಬಂದಿದೆ. ಈಗ ಅದು ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳಿಂದ ಕೂಡಿದೆ. ಇಂದಿಗೂ ಇಟಲಿಯ ಜನರಲ್ಲಿ ವೈವಿಧ್ಯವನ್ನು ಕಾಣಬಹುದು. ದೇಶದ ಒಟ್ಟು ವಿಸ್ತೀರ್ಣದ ದೃಷ್ಟಿಯಿಂದ ಇಟಲಿಯಲ್ಲಿ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಜನಸಾಂದ್ರತೆ ಇಲ್ಲದಿದ್ದರೂ ಪರ್ವತಮಯ ಪ್ರದೇಶದಿಂದಾಗಿ ಜನವಸತಿ ಕೆಲವೇ ಅತಿ ಹೆಚ್ಚಾಗಿದೆ. ಈಗಂತೂ ಇದೊಂದು ಸಮಸ್ಯೆಯೇ ಆಗಿ ಪರಿಣಮಿಸಿದೆ. 1936ರಲ್ಲಿ ಪ್ರತಿ ಚ.ಮೈ.ಗೆ 359 ಮಂದಿ ಇದ್ದರು. 1961ರಲ್ಲಿ ಇದು 435ಕ್ಕೇರಿತು. 1961ರ ಗಣತಿಯಂತೆ ಪ್ರತಿ ಚ.ಮೈ.ಗೆ 80 ರಿಂದ 907ರವರೆಗೆ ವಿವಿಧ ರೀತಿಯಲ್ಲಿ ಜನಸಾಂದ್ರತೆ ಹರಡಿತ್ತು. ಈಗ ಜನಸಂಖ್ಯೆಯ ಏರಿಕೆಯ ಪ್ರಮಾಣ ಅಷ್ಟಾಗಿಲ್ಲ. 1938ರಿಂದ 1961ರ ವರೆಗೆ ಜನನ ಪ್ರಮಾಣ ಸಾಕಷ್ಟು ಇಳಿಯಿತು. ಆದರೆ ಸುಧಾರಿತ ವೈದ್ಯಕೀಯ ಸೌಲಭ್ಯದಿಂದಾಗಿ ನೈಸರ್ಗಿಕ ಮರಣಗಳ ಸಂಖ್ಯೆಯೂ ಇಳಿಯಿತು. ಹೀಗಾಗಿ ಒಟ್ಟಿನಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ತಕ್ಕಮಟ್ಟಿಗೆ ಇತ್ತು. ಇಲ್ಲಿನ ಜನ ಮೊದಲಿನಿಂದಲೂ ಅಧಿಕಸಂಖ್ಯೆಯಲ್ಲಿ ಹೊರಕ್ಕೆ ವಲಸೆ ಹೋಗುತ್ತಿದ್ದುದರಿಂದ ಜನಸಂಖ್ಯೆಯ ಏರಿಕೆ ಅತಿಯಾಗಿ ಪರಿಣಮಿಸಿಲ್ಲವೆನ್ನಬಹುದು. ಇಟಲಿಯ ಬಹುಸಂಖ್ಯಾತ ಪ್ರಜೆಗಳು ಅಮೆರಿಕಕ್ಕೂ ಯೂರೋಪಿನ ಇತರ ರಾಷ್ಟ್ರಗಳಿಗೂ ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಈ ರೀತಿ ವಲಸೆ ಹೋಗುವವರ ಸಂಖ್ಯೆ ತಗ್ಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ.

ಧರ್ಮ

ಇಟಲಿಯನ್ನು ರೋಮನ್ ಕೆಥೊಲಿಕ್ ರಾಷ್ಟ್ರವೆಂದೇ ಹೇಳಬಹುದು. ಇಲ್ಲಿಯ ಜನರಲ್ಲಿ 95%ಕ್ಕೂ ಹೆಚ್ಚು ಜನ ಕೆಥೊಲಿಕರು. ಪ್ರಾಟೆಸ್ಟಂಟರೂ ಜ್ಯೂಗಳೂ ಇತರ ಮತಾವಲಂಬಿಗಳೂ ಅಲ್ಪಸಂಖ್ಯೆಯಲ್ಲಿದ್ದಾರೆ. ಕೆಥೊಲಿಕ್ ಮತವನ್ನು ರಾಷ್ಟ್ರೀಯಮತವೆಂದು ಪರಿಗಣಿಸಲಾಗಿದೆ. ಆದರೆ ಇತರ ಮತಗಳನ್ನೂ ಇದಕ್ಕೆ ಸರಿಸಮನಾಗಿಯೇ ಕಾಣಲಾಗುತ್ತದೆ. ಇಲ್ಲಿನ ಶಾಖೆಗಳಲ್ಲಿ ಕೆಥೊಲಿಕ್ ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿದೆ. ಈ ಶಿಕ್ಷಣದ ಹೊಣೆಯನ್ನು ಚರ್ಚುಗಳು ನಿರ್ವಹಿಸುತ್ತವೆ. ಧರ್ಮಾಧಿಕಾರಿಗಳಿಗೆ ರಾಜ್ಯದ ಬೊಕ್ಕಸದಿಂದಲೇ ವೇತನ ಕೊಡಲಾಗುವುದು. ಧರ್ಮಾಧಿಕಾರಿಗಳನ್ನು (ಪ್ರೀಸ್ಟ, ಬಿಷಪ್, ಆರ್ಚ್‍ಬಿಷಪ್ ಮುಂತಾದವರು) ಪೋಪರೇ ನಿಯಮಿಸುತ್ತಾರೆ. ಆದರೆ ನೇಮಕದ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂಗೀಕಾರಕ್ಕಾಗಿ ಕಳಿಸಲಾಗುವುದು. ಕೆಥೊಲಿಕ್ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಬರದ ಇನ್ನಾವುದೇ ಧರ್ಮದ ಧಾರ್ಮಿಕ ಕಾರ್ಯಗಳಿಗೆ ಇಲ್ಲಿ ಮಾನ್ಯತೆ ಇದೆ. ಮೊದಲು ದಕ್ಷಿಣದ ಕೆಲವೇ ನಗರಗಳಲ್ಲಿ ದಟ್ಟೈಸಿದ್ದ ಜನ ಈಗ ಉತ್ತರದ ಬಯಲುಗಳಲ್ಲಿ ಸ್ಥಾಪಿಸಲಾಗುತ್ತಿರುವ ಕೈಗಾರಿಕಾ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಉತ್ತರದ ಕೆಲವೇ ಕಡೆ ಹೆಚ್ಚಾಗಿದ್ದ ಜನಸಂಖ್ಯೆ ಈಗ ಎಲ್ಲ ಕಡೆಗೆ ಹರಡಿ ಒಂದು ರೀತಿಯ ಸಮತೋಲ ಏರ್ಪಟ್ಟಿದೆ. ರೋಮ್, ಮಿಲಾನ್, ನೇಪಲ್ಸ್, ಟ್ಯೂರಿನ್, ಜಿನೋವ, ಫ್ಯಾರೆನ್ಸ್, ವೆನಿಸ್ ಮುಂತಾದವು ಹೆಚ್ಚು ಜನಸಂಖ್ಯೆ ಇರುವ ಮುಖ್ಯ ನಗರಗಳು. (ವಿವರಗಳಿಗೆ ಆಯಾ ನಗರಗಳನ್ನು ಕುರಿತ ಶೀರ್ಷಿಕೆಗಳನ್ನು ನೋಡಿ).

ಆಡಳಿತ ವ್ಯವಸ್ಥೆ

1946ರ ಜೂನ್ 10ರಿಂದ ಇಟಲಿ ಗಣರಾಜ್ಯವಾಗಿದೆ. ದ್ವಿತೀಯ ಮಹಾ ಯುದ್ಧದಲ್ಲಿ ಪರಾಜಯಗೊಂಡ ಮೇಲೆ 1946ರ ಜೂನ್ 2ರಂದು ಇಟಲಿಯಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 54.3% ಜನ ಗಣರಾಜ್ಯದ ಪರವಾಗಿಯೂ 45.7% ಜನ ಅರಸೊತ್ತಿಗೆ ಉಳಿಸಿಕೊಳ್ಳಬೇಕೆಂದೂ ಅಭಿಪ್ರಾಯಪಟ್ಟರು. ಸಂವಿಧಾನ ಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು (1946). 556 ಸದಸ್ಯರುಳ್ಳ ಸಭೆ ಸಿನಾಲರ ಎನ್ರಿಕೋ ಡಿ. ನೀಕೋಲಾನನ್ನು ಅಧ್ಯಕ್ಷನನ್ನಾಗಿ ಆರಿಸಿತು. ಹೊಸ ಸಂವಿಧಾನ ರೂಪಿಸಿ ಶಾಂತಿ ಒಡಂಬಡಿಕೆಯನ್ನು ಕ್ರಮಬದ್ದಗೊಳಿಸಿದ್ದು ಇದರ ಮುಖ್ಯ ಕೆಲಸ. 1947ರ ಡಿಸೆಂಬರ್ 27ರಂದು ನೂತನ ಸಂವಿಧಾನ ಅಂಗೀಕೃತವಾಯಿತು. 1948ರ ಜನವರಿ 1ರಿಂದ ಅದು ಜಾರಿಗೆ ಬಂತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಅಮೆರಿಕ ಸಂಯುಕ್ತ ಸಂಸ್ಥಾನಗಳ ಅನುಭವವನ್ನೂ ಉದಾಹರಣೆಗಳನ್ನೂ ಇಟಲಿಯ ಸಂವಿಧಾನ ಪ್ರತಿಬಿಂಬಿಸುತ್ತದೆ. ಇಟಲಿ ಈ ಸಂವಿಧಾನಕ್ಕನುಗುಣವಾಗಿ ರೂಪಿತವಾದ ಪ್ರಜಾಸತ್ತಾತ್ಮಕ ಗಣರಾಜ್ಯ. ಪರಮಾಧಿಕಾರ ಜನತೆಗೆ ಸೇರಿದ್ದಾದರೂ ಅವರು ಸಂವಿಧಾನಕ್ಕೆ ಬದ್ಧರಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಇಟಲಿಯಲ್ಲಿ ದ್ವಿಸದನ ಪದ್ಧತಿಯ ರಾಷ್ಟ್ರೀಯ ಪಾರ್ಲಿಮೆಂಟ್ ಇದೆ. ಮೊದಲನೆಯದು ಚೇಂಬರ್ ಆಪ್ ಡೆಪ್ಯುಟೀಸ್, ಎರಡನೆಯದು ಸೆನೆಟ್. ಚೇಂಬರಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. 21 ವರ್ಷಕ್ಕೆ ಕಡಿಮೆಯಿಲ್ಲದ ಸ್ತ್ರೀ-ಪುರುಷರೆಲ್ಲ ಮತದಾನಕ್ಕೆ ಅರ್ಹರು. ಚೇಂಬರ್ ಆಫ್ ಡೆಪ್ಯುಟೀಸ್‍ಗೆ ಸದಸ್ಯರಾಗುವವರ ಕನಿಷ್ಠ ವಯೋಮಿತಿ 25 ವರ್ಷ. 80,000 ಜನರಿಗೆ ಒಬ್ಬ ಪ್ರತಿನಿಧಿಯಿದ್ದಾನೆ (ಡೆಪ್ಯುಟಿ). ಸೆನೆಟ್ಟಿಗೆ ಆರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. 2,00,000 ಜನರಿಗೆ ಒಬ್ಬ ಪ್ರತಿನಿಧಿಯಿರುತ್ತಾನೆ. ಅಧ್ಯಕ್ಷನ ಕನಿಷ್ಠ ವಯೋಮಿತಿ 55 ವರ್ಷ, ಎರಡೂ ಸದನಗಳ ಸದಸ್ಯರೂ ಪ್ರಾದೇಶಿಕ ಕೌನ್ಸಿಲ್‍ನ ಸದಸ್ಯರೂ ಸೇರಿ ಸಂಯುಕ್ತಾದಿವೇಶನದಲ್ಲಿ ಗಣರಾಜ್ಯದ ಅಧ್ಯಕ್ಷನನ್ನು ಆರಿಸುತ್ತಾರೆ. ಈ ರೀತಿ ಆಯ್ಕೆಗೊಂಡ ಅಧ್ಯಕ್ಷನ ಅಧಿಕಾರಾವಧಿ 7 ವರ್ಷ. ಆತನಿಗೆ ಪಾರ್ಲಿಮೆಂಟನ್ನು ವಿಸರ್ಜಿಸುವ ಅಧಿಕಾರವಿದೆ. ಆದರೆ ತನ್ನ ಅಧಿಕಾರಾವಧಿಯ ಕೊನೆಯ ಆರು ತಿಂಗಳಲ್ಲಿ ಆತ ಈ ಅಧಿಕಾರ ಚಲಾಯಿಸಲಾರ. ತನ್ನ ಅಧ್ಯಕ್ಷಾಧಿಕಾರದ ಕಾರಣದಿಂದ ಆತ ಸೆನೆಟ್ಟಿನ ಜೀವಾವಧಿ ಸದಸ್ಯ. ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಗಣ್ಯರಾದ ನಾಗರಿಕರನ್ನು ಆತ ಸೆನೆಟ್ಟಿನ ಅಜೀವ ಸದಸ್ಯರನ್ನಾಗಿ ನಾಮಕರಣ ಮಾಡಬಹುದು. ಇಟಲಿಯ ಅಧ್ಯಕ್ಷ ರಾಷ್ಟ್ರೈಕದ ಪ್ರತೀಕ. ಆತನೇ ರಾಷ್ಟ್ರಸೇನೆಗಳ ಮಹಾ ದಂಡನಾಯಕ. ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯನ್ನು ಕಡಿಮೆ ಮಾಡುವುದು, ಅವರಿಗೆ ಕ್ಷಮಾದಾನ ಮಾಡುವುದು ಮೊದಲಾದುವು ಆತನ ಅಧಿಕಾರವ್ಯಾಪ್ತಿಗೊಳಪಡುತ್ತವೆ. ಇಟಲಿಯ ಪ್ರಧಾನ ಮಂತ್ರಿಗೆ ಮಂತ್ರಿಮಂಡಲದ ಅಧ್ಯಕ್ಷನೆಂದು ಹೆಸರಿದೆ. ಆತನ ಸಲಹೆಯ ಮೇರೆಗೆ ಮಂತ್ರಿಮಂಡಲದ ಇತರ ಸದಸ್ಯರನ್ನು ನೇಮಿಸುವುದು ಅಧ್ಯಕ್ಷನ ಕರ್ತವ್ಯ. ಇಟಲಿಯ ಮಂಡಲ ಎರಡೂ ಶಾಸಕಾಂಗಗಳ ವಿಶ್ವಾಸ ಗಳಿಸಿರಬೇಕು. ಮಂತ್ರಿಮಂಡಲದ ಅಧ್ಯಕ್ಷ ಸಂವಿಧಾನಕ್ಕನುಗುಣವಾಗಿ ಸರ್ಕಾರದ ನೀತಿ ರೂಪಿಸುತ್ತಾನೆ. ಪ್ರತಿಯೊಬ್ಬ ಮಂತ್ರಿಗೂ ವೈಯಕ್ತಿಕ ಹೊಣೆಗಾರಿಕೆಯೊಂದಿಗೆ ಸಂಯುಕ್ತ ಹೊಣೆಗಾರಿಕೆಯೂ ಇರುತ್ತದೆ. ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜನತೆಯ ಹೆಸರಿನಲ್ಲಿ ನ್ಯಾಯ ನೀಡಲಾಗುವುದು. ನ್ಯಾಯಾಧೀಶ ಕಾಯಿದೆಯ ಪರಿಮಿತಿಗೆ ಒಳಗಾಗಿರುತ್ತಾನೆ. ನ್ಯಾಯಾಲಯ ಕಾರ್ಯಾಂಗದಿಂದ ಸ್ವತಂತ್ರವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂವಿಧಾನ ಸಂಬಂಧವಾದ ಬಿಕ್ಕಟ್ಟು ಉಂಟಾದಾಗ, ಅದನ್ನು 15 ಜನರ ಸಂವಿಧಾನ ನ್ಯಾಯಾಲಯ ಪರಿಹರಿಸುತ್ತದೆ. ಇದರಲ್ಲಿ ⅓ ಸದಸ್ಯರನ್ನು ಅಧ್ಯಕ್ಷ ನಾಮಕರಣ ಮಾಡಿರುತ್ತಾನೆ. ⅓ ಸದಸ್ಯರನ್ನು ಶಾಸಕಾಂಗದ ಎರಡು ಮನೆಗಳು ಆರಿಸುತ್ತವೆ. ಉಳಿದ ⅓ ಸದಸ್ಯರನ್ನು ಸರ್ವೋನ್ನತ ನ್ಯಾಯಾಂಗ ಸಮಿತಿ ಆರಿಸುತ್ತದೆ. ಈ ಸದಸ್ಯರ ಅಧಿಕಾರಾವಧಿ 12 ವರ್ಷ. ಅಧಿಕಾರಾವಧಿ ಮುಗಿದ ತಕ್ಷಣವೇ ಅವರನ್ನು ಪುನರ್ ನೇಮಕ ಮಾಡಲಾಗುವುದಿಲ್ಲ. ಅಧಿಕಾರದ ವಿಕೇಂದ್ರೀಕರಣಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ತಮ್ಮ ಕಕ್ಷೆಯಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಪ್ರಾದೇಶಿಕ ಸಮಿತಿಗಳಿಗೆ ಅವಕಾಶವಿದೆ. ಇಟಲಿಯನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಂವಿಧಾನದಲ್ಲಿ 19 ವಿಭಾಗಗಳಿಗೆ ಅವಕಾಶವಿದ್ದರೂ ಮಹಾಯುದ್ಧದ ಅನಂತರ ಇದು ಪ್ರತ್ಯೇಕತೆಗೆ ಅವಕಾಶ ನೀಡಬಹುದೆಂದು ಈ ವಿಂಗಡಣೆಯನ್ನು ಸೀಮಿತಗೊಳಿಸಲಾಗಿದೆ. ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಪಕ್ಷ ಮೊದಲು ಸ್ವತಂತ್ರ ರಾಜ್ಯ ರಚನೆಗೆ ಸಲಹೆ ನೀಡಿತ್ತು. ಅನಂತರ ಅದೇ ಪಕ್ಷ ಇದನ್ನು ವಿರೋಧಿಸಿತು. ರಾಜ್ಯಗಳ ಅಧಿಕಾರ ಕಕ್ಷೆಯಲ್ಲಿ ಸ್ಥಳೀಯ ಆಡಳಿತ, ಪೊಲೀಸ್, ಮಾರುಕಟ್ಟೆ, ಸಾರ್ವಜನಿಕ ಕಲ್ಯಾಣ, ನಗರ, ಶಿಕ್ಷಣ, ಸಾರಿಗೆಸಂಪರ್ಕ, ವ್ಯವಸಾಯ, ಅರಣ್ಯ-ಇವು ಬರುತ್ತವೆ. ಆಡಳಿತದ ಕಾರ್ಯನಿರ್ವಹಣೆಗೆ ಕೆಲವೊಂದು ತೆರಿಗೆಯನ್ನು ವಿಧಿಸಬಹುದು. ಕೇಂದ್ರಕ್ಕೆ ಬರುವ ಕಂದಾಯದಲ್ಲಿ ಕೆಲವೊಂದು ಭಾಗಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಪ್ರತಿಯೊಂದು ಪ್ರದೇಶಕ್ಕೂ ಒಂದು ಪ್ರಾದೇಶಿಕ ಕೌನ್ಸಿಲ್ ಇದೆ. ಅದಕ್ಕೊಂದು ಕಾರ್ಯನಿರ್ವಾಹಕ ಸಮಿತಿ ಮತ್ತು ಅಧ್ಯಕ್ಷ ಇರುತ್ತಾನೆ. ಪ್ರಾದೇಶಿಕ ಕೌನ್ಸಿಲ್ ಚೇಂಬರಿಗೆ ಮಸೂದೆಗಳನ್ನು ಕಳಿಸಬಹುದು. ಕೇಂದ್ರದ ಅಧ್ಯಕ್ಷ ಪ್ರಾದೇಶಿಕ ಮಂಡಲಿಯನ್ನು ಯಾವಾಗ ಬೇಕಾದರೂ ವಿಸರ್ಜಿಸಬಹುದಾಗಿದೆ. ಪ್ರತಿಯೊಂದು ಪ್ರದೇಶಕ್ಕೂ ಒಬ್ಬ ಆಯುಕ್ತನನ್ನು (ಕಮೀಷನರ್) ನೇಮಿಸಿದೆ. ನ್ಯಾಯಾಂಗ, ಆಡಳಿತ ಮತ್ತು ಲೆಕ್ಕಪತ್ರ, ಮುಂಗಡಪತ್ರಗಳ ತಪಾಸಣೆ-ಇವಕ್ಕೆ ಒಂದೊಂದು ಸಮಿತಿಯಿದೆ. ಸುಗ್ರೀವಾಜ್ಞೆಗಳನ್ನು ಹೊರಡಿಸಿದಾಗ ತಕ್ಷಣ ಸಂಸತ್ತಿನ ಅನುಮತಿ ಪಡೆಯಬೇಕೆಂಬ ವಿಧಿಯಿದೆ. ಆಗ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲವಾದರೆ ಅದು ಐದು ದಿನಗಳಲ್ಲಿ ಸೇರುವಂತೆ ಏರ್ಪಾಡಾಗಬೇಕು. 60 ದಿನಗಳೊಳಗೆ ಸುಗ್ರೀವಾಜ್ಞೆ ಕಾಯಿದೆಯಾಗದಿದ್ದಲ್ಲಿ ಅದು ಜಾರಿಯಲ್ಲಿರುವುದಿಲ್ಲ. ಪ್ರಾಪ್ತವಯಸ್ಕರಿಗೆಲ್ಲ ಮತದಾನದ ಹಕ್ಕಿದೆ. ರಹಸ್ಯ ಮತದಾನ ಪದ್ಧತಿಯಿದೆ. ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೆಂದು ಪರಿಗಣಿಸಲಾಗಿದೆ. ಭಾಷೆ, ಧರ್ಮ, ರಾಜಕೀಯ, ಸಾಮಾಜಿಕ ಬೇಧಗಳಿಲ್ಲದೆ ಎಲ್ಲ ಪ್ರಜೆಗಳಿಗೂ ಸಮಾನ ಸಂಬಳ ನೀಡಬೇಕೆಂಬ ತತ್ತ್ವವೂ ಅಂಗೀಕೃತವಾಗಿದೆ. ಯಾರಿಗೂ ಶ್ರೀಮಂತಿಕೆಯ ಬಿರುದುಗಳನ್ನು ನೀಡಲಾಗುವುದಿಲ್ಲ. ಮಾನವನ ವ್ಯಕ್ತಿತ್ವದ ಬೆಳವಣಿಗೆಗೆ ಅಡ್ಡಿ ಆತಂಕಗಳನ್ನೊಡ್ಡುವ ಆರ್ಥಿಕ, ಸಾಮಾಜಿಕ ಅಸಮತೆಗಳನ್ನು ತೊಡೆದು ಹಾಕುವುದು ಕರ್ತವ್ಯವೆಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಜನತೆಗೆ ಉದ್ಯೋಗದ ಹಕ್ಕನ್ನು ಅಂಗೀಕರಿಸಲಾಗಿದೆ. ಸಮಾಜದ ನೈತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆಯಾದರೂ ರೋಮನ್ ಕೆಥೊಲಿಕ್ ಪಂಥವನ್ನು ದೇಶದ ಅಧಿಕೃತ ಧರ್ಮವೆಂದು ಪರಿಗಣಿಸಲಾಗಿದೆ. ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಉಂಟು. ಗುಪ್ತ ಸಂಘಗಳನ್ನೂ ಸೈನ್ಯ ಮಾದರಿಯ ಕೂಟಗಳನ್ನೂ ನಿಷೇಧಿಸಲಾಗಿದೆ. ಫ್ಯಾಸಿಸ್ಟ್ ಪಕ್ಷವನ್ನು ಪುನಃ ಸಂಘಟಿಸಲು ಅವಕಾಶವಿಲ್ಲ. ರಾಜಮನೆತನದವರು ದೇಶ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪ್ರಜೆಗಳು ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಲ್ಲ. ಪಾಲಕರು ತಮ್ಮ ಮಕ್ಕಳ ಪಾಲನೆ ಪೋಷಣೆ ಮಾಡುವುದರೊಂದಿಗೆ ಅವರಿಗೆ ಶಿಕ್ಷಣ ನೀಡಬೇಕು. ಕಾರ್ಮಿಕ ಸಂಘಟನೆ ಮತ್ತು ಮುಷ್ಕರದ ಹಕ್ಕು ಅಂಗೀಕೃತ. ವೈಯಕ್ತಿಕ ಆಸ್ತಿ ಹೊಂದಲು ಅಭ್ಯಂತರವಿಲ್ಲ. ವ್ಯಕ್ತಿಯ ಶಕ್ತಿಗೆ ಅನುಸಾರವಾಗಿ ತೆರಿಗೆ ವಿಧಿಸಲಾಗುತ್ತದೆ. ಸಂವಿಧಾನದ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಶಾಸಕಾಂಗದ ಎರಡು ಸಭೆಗಳೂ ಸಂಯುಕ್ತಾಧಿವೇಶನದಲ್ಲಿ ಸೇರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದು. ಎರಡನೆಯ ಬಾರಿ ಮತಕ್ಕೆ ಹಾಕಿದಾಗ ಎರಡೂ ಸಭೆಗಳು ಬಹುಮತದಿಂದ ಅದನ್ನು ಒಪ್ಪಬೇಕು. ಸಂವಿಧಾನ ನ್ಯಾಯಾಲಯವೊಂದರ ನಿರ್ಮಾಣಕ್ಕೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಶಾಸನಗಳ ಕ್ರಮಬದ್ಧತೆಯನ್ನು ಆ ನ್ಯಾಯಾಲಯ ಪರಿಶೀಲಿಸುತ್ತದೆ. ಆಡಳಿತಾನುಕೂಲಕ್ಕಾಗಿ ಜಿಲ್ಲಾ ನ್ಯಾಯಾಲಯಗಳೂ ಇವೆ. 1947ರ ಸಂವಿಧಾನಕ್ಕನುಗುಣವಾಗಿ ಸೈನ್ಯದ ಗಾತ್ರವನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ ಪರಮಾಣು ಅಸ್ತ್ರಗಳ ತಯಾರಿಕೆಯನ್ನು ಪ್ರತಿಬಂಧಿಸಲಾಗಿದೆ. ಮಧ್ಯಮ ಮತ್ತು ದೊಡ್ಡ ಪ್ರಮಾಣದ ಟ್ಯಾಂಕುಗಳ ಸಂಖ್ಯೆಯನ್ನು ಮಿತಿಗೊಳಿಸಿದ್ದು, ನೌಕೆಗಳ ಸಾಮಥ್ರ್ಯವನ್ನೂ ಮೊಟಕು ಮಾಡಲಾಗಿದೆ. ವಿಶ್ವಸಂಸ್ಥೆಯ ಪೂರ್ವಾನುಮತಿಯಿಲ್ಲದೆ ಈ ಸಂಖ್ಯೆಯನ್ನು ಏರಿಸಲಾಗದು. 1947ರಿಂದೀಚೆಗೆ ಇಲ್ಲಿಯ ಸರ್ಕಾರ ಪ್ರಬಲವಾಗಿದೆ. ಎರಡು ಮಹಾಯುದ್ಧಗಳ ಅನಂತರ ಇಟಲಿ ಇದೀಗ ಆರ್ಥಿಕರಂಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಇಟಲಿಯ ಮೇಲೆ ಹೇರಿದ್ದ ಅನೇಕ ನಿರ್ಬಂಧಗಳನ್ನೀಗ ಸಡಿಲಿಸಲಾಗಿದೆ. ಈಗ ಇದು ಉತ್ತರ ಅಟ್ಲಾಂಟಿಕ್ ಕೌಲು ವ್ಯವಸ್ಥೆ (ನ್ಯಾಟೋ) ಮತ್ತು ಐರೋಪ್ಯ ಆರ್ಥಿಕ ಸಹಕಾರ ಸಂಘಗಳ (ಇ.ಇ.ಸಿ) ಸದಸ್ಯ ರಾಷ್ಟ್ರ.

ಉಲ್ಲೇಖಗಳು

"https://kn.wikipedia.org/w/index.php?title=ಇಟಲಿ&oldid=949766" ಇಂದ ಪಡೆಯಲ್ಪಟ್ಟಿದೆ