ವಿಲಿಯಮ್ ಜೇಮ್ಸ್‌ ಡರ್ಯಾಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಲಿಯಮ್ ಜೇಮ್ಸ್‌ ಡರ್ಯಾಂಟ್ (1885 –1981 ) ಅಮೆರಿಕದ ಸುಪ್ರಸಿದ್ಧ ಇತಿಹಾಸಕಾರ.

ಬದುಕು[ಬದಲಾಯಿಸಿ]

ಹುಟ್ಟಿದ್ದು ಮ್ಯಾಸಚೂಸೆಟ್ಸಿನ ನಾರ್ತ್ ಆ್ಯಡಮ್ಸಿನಲ್ಲಿ 1907ರಲ್ಲಿ ಜರ್ಸಿ ನಗರದ ಸೇಂಟ್ ಪೀಟರ್ಸ್ ಕಾಲೇಜಿನಿಂದ ಪದವೀಧರನಾಗಿ ಸೌತ್ ಆರೆಂಜಿನ ಸೀಟನ್ ಹಾಲ್ ಕಾಲೇಜಿನಲ್ಲಿ ಲಯಾಟಿನ್ ಮತ್ತು ಫ್ರೆಂಚ್ ಭಾಷೆಗಳ ಅಧ್ಯಾಪಕನಾದ. 1914ರಿಂದ 1927ರ ವರೆಗೆ ನ್ಯೂ ಯಾರ್ಕಿನ ಲೇಬರ್ ಟೆಂಪಲ್ ಶಾಲೆಯ ನಿರ್ದೇಶಕನಾಗಿದ್ದ. ಜೊತೆಯಲ್ಲಿ ಶಿಕ್ಷಣವನ್ನೂ ಮುಂದುವರೆಸಿ 1917ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದುಕೊಂಡ. 1935ರಿಂದ ಲಾಸ್ ಆಂಜಲಿಸ್‍ನ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕನಾಗಿದ್ದ. 1917ರಲ್ಲಿ ಈತನ ಫಿಲಾಸಫಿ ಅಂಡ್ ದಿ ಸೋಷಿಯಲ್ ಪ್ರಾಬ್ಲೆಮ್ ಎಂಬ ಗ್ರಂಥ ಪ್ರಕಟಿತವಾಯಿತು. ಅನಂತರ ಈತ ತತ್ತ್ವಶಾಸ್ತ್ರ, ಇತಿಹಾಸ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ಜನಾದರಣೀಯವಾದ ಗ್ರಂಥಗಳನ್ನು ಬರೆದ.

ಬರಹ[ಬದಲಾಯಿಸಿ]

ಈತ ಬರೆದ ಏಕೈಕ ಕಾದಂಬರಿ ಟ್ರಾನ್ಸಿಷನ್ (1927) ಬಹುಮಟ್ಟಿಗೆ ಧಾರ್ಮಿಕ ಘರ್ಷಣೆ ಮತ್ತು ರಾಜಕೀಯ ಹಾಗೂ ಸಾಮಾಜಿಕ ಭ್ರಾಂತಿ ನಿವಾರಣೆಗಳಿಂದ ಮುದ್ರಿತವಾಗಿದ್ದು ಈತನ ಮೊದಲ ಜೀವನದ ಆತ್ಮಕಥಾನಿರೂಪಣೆಯಾಗಿದೆ. 1926ರಲ್ಲಿ ಪ್ರಕಟಿತವಾದ ಇವನ ದಿ ಸ್ಟೋರಿ ಆಫ್ ಫಿಲಾಸಫಿ ಎಂಬ ಗ್ರಂಥ ಅಮೆರಿಕದ ಹಾಗೂ ಪರದೇಶಗಳ ಜನತೆಯ ಮನಸ್ಸನ್ನು ಆಕರ್ಷಿಸಿತು. ಮೂರು ದಶಕಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಗ್ರಂಥದ 20 ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಈ ಗ್ರಂಥ ಅನೇಕ ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ಲೇಖಕನಿಗೆ ಅತ್ಯಂತ ಜನಪ್ರಿಯತೆಯನ್ನೂ ಪ್ರಸಿದ್ಧಿಯನ್ನೂ ತಂದೊದಗಿಸಿತು ದಿ ಪ್ಲೆಷರ್ಸ್ ಆಫ್ ಫಿಲಾಸಫಿ ಹಾಗೂ ಅಡ್ವೆಂಚರ್ಸ್ ಇನ್ ಜೀನಿಯಸ್-ಎಂಬುವು ಈತನ ಇನ್ನೆರಡು ಗಮನಾರ್ಹ ಕೃತಿಗಳು. ದಿ ಕೇಸ್ ಫಾರ್ ಇಂಡಿಯ (1930), ದಿ ಟ್ರಾಜಡಿ ಆಫ್ ರಷ್ಯ (1933) ಎಂಬುವು ಆಯಾ ದೇಶಗಳ ಪ್ರಚಲಿತ ಸಮಸ್ಯೆಗಳನ್ನು ಕುರಿತ ಗ್ರಂಥಗಳು.

ಮಾನವೇತಿಹಾಸವನ್ನು ಸಮಗ್ರವಾಗಿ, ಸಪ್ರಮಾಣವಾಗಿ ಸಾಕಷ್ಟು ವಿವರವಾಗಿ ರಚಿಸಲು ಉದ್ದೇಶಿಸಿದ ಡರ್ಯಾಂಟ್ ತನ್ನ ಪತ್ನಿ ಏರಿಯಲ್ ಡರ್ಯಾಟಳೊಂದಿಗೆ ನಾಲ್ಕು ದಶಕಗಳ ಕಾಲ ಶ್ರಮಿಸಿದ. ಅದರ ಫಲವಾಗಿ ಜಗದ್ ವಿಖ್ಯಾತವಾದ ದಿ ಸ್ಟೋರಿ ಆಫ್ ಸಿವಿಲಿಸೇಷನ್ ಎಂಬ ಗ್ರಂಥಮಾಲೆ ಸಿದ್ಧವಾಯಿತು. ಅದರಲ್ಲಿ ಹತ್ತು ಸಂಪುಟಗಳಿವೆ: 1. ಅವರ್ ಓರಿಯಂಟಲ್ ಹೆರಿಟೆಜ್, 2. ದಿ ಲೈಫ್ ಆಫ್ ಗ್ರೀಸ್, 3. ಸೀಸರ್ ಅಂಡ್ ಕ್ರೈಸ್ಟ, 4. ದಿ ಏಜ್ ಆಫ್ ಫೈಯ್ತ್, 5. ದಿ ರೆನೆಸಾನ್ಸ್, 6. ದಿ ರೆಫರ್ಮೇಷನ್, 7. ದಿ ಏಜ್ ಆಫ್ ರೆಫರ್ಮೇಷನ್ ಬಿಗಿನ್ಸ್, 8. ದಿ ಏಜ್ ಆಫ್ ಲೂಯಿ ಘಿIಗಿ, 9. ದಿ ಎಜ್ ಆಫ್ ವಾಲ್ಟೇರ್, 10. ರೂಸೊ ಅಂಡ್ ರೆವೊಲ್ಯೂಷನ್ ಈ ಬೃಹದ್ ಗ್ರಂಥಗಳಲ್ಲಿ ಲೇಖಕನ ಸ್ಥಿತಪ್ರಜ್ಞತೆ, ಮಾನವೀಯ ಸೌಹಾರ್ದ ಸಂಸ್ಕøತಿ ನಾಗರಿಕತೆ ಪ್ರಗತಿಗಳ ಬಗೆಗಿನ ಆಸ್ಥೆ-ಇವನ್ನು ಧಾರಾಳವಾಗಿ ಕಾಣಬಹುದು. ಬರೆವಣಿಗೆಯಂತೂ ಕಲಾತ್ಮಕವೂ ಆಕರ್ಷಕವೂ ಆಗಿದೆ.

ಡರ್ಯಾಂಟ್ ದಂಪತಿಗಳ ಈಚೆಗಿನ ಮಹಾಕೃತಿಯೆಂದರೆ ದಿ ಲೆಸನ್ಸ್ ಆಫ್ ಹಿಸ್ಟರಿ (1968). ಸ್ಟೋರಿ ಆಫ್ ಸಿವಿಲಿಸೇಷನ್ ಸಂಪುಟಗಳನ್ನು ಪರಿಷ್ಕರಿಸಿ ಮುದ್ರಿಸುವ ಕೆಲಸವನ್ನು ಕೈಗೊಂಡಾಗ ಡರ್ಯಾಂಟ್ ದಂಪತಿಗಳು ಇತಿಹಾಸದ ಸಾರವೇನು ಎಂಬುದರ ಬಗೆಗೆ ಚಿಂತನೆ ಮಾಡಿ ಹದಿನಾರು ಆಶ್ವಾಸಗಳ ಆದರೂ ಒಂದು ನೂರೇ ಪುಟಗಳ ಈ ಗ್ರಂಥವನ್ನು ರಚಿಸಿದರಂತೆ. ಇತಿಹಾಸ ತತ್ತ್ವವನ್ನು ತಿಳಿಯಬಯಸುವ ಎಲ್ಲರಿಗೂ ಇದು ಸಮರ್ಥ ಕೈಪಿಡಿಯಂತಿದೆ. ಅಚ್ಚಾದ ವರ್ಷವೇ (1968) ಇದು ಏಳಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡು ಬಹು ಜನಪ್ರಿಯವಾಯಿತು.