ಲಿಯೊನೆಲ್ ಜಾನ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಿಯೊನೆಲ್ ಜಾನ್ಸನ್ (1867-1902). ಇಂಗ್ಲಿಷ್ ಕವಿ ಮತ್ತು ವಿಮರ್ಶಕ.

ಬದುಕು ಮತ್ತು ಬರಹ[ಬದಲಾಯಿಸಿ]

ಕೆಂಟಿನ ಬ್ರಾಡ್‍ಸ್ಟೇರ್ಸ್ ಎಂಬಲ್ಲಿ ಹುಟ್ಟಿದ. ಚಿಕ್ಕವಯಸ್ಸಿನಲ್ಲಿಯೇ ಕವಿತೆ ಬರೆಯುವುದರಲ್ಲಿ ಆಸಕ್ತಿ ತೋರಿದ. ವಿಂಚೆಸ್ಟರ್ ಮತ್ತು ಆಕ್ಸ್‍ಫರ್ಡುಗಳಲ್ಲಿ ಓದಿ ಲಂಡನ್ನಿನಲ್ಲಿ ನೆಲಸಿ ವ್ಯಾಸಂಗ ಮಾಡುತ್ತ ವಿಮರ್ಶಕ ಲೇಖನಗಳನ್ನೂ ಪುಸ್ತಕ ವಿಮರ್ಶೆಗಳನ್ನೂ ಬರೆದ. ಷೇಕ್ಸ್‍ಪಿಯರನ ವಿದೂಷಕರ ಎಂಬ ಈತನ ವಿಮರ್ಶನ ಗ್ರಂಥ 1890ರಲ್ಲಿ ಪ್ರಕಟವಾಯಿತು. 1891ರಲ್ಲಿ ರೋಮನ್ ಕ್ಯಾಥೊಲಿಕ್ ಮತಕ್ಕೆ ಪರಿವರ್ತನಗೊಂಡು ಐರ್ಲೆಂಡಿಗೆ ಅನೇಕ ಬಾರಿ ಹೋಗಿ ಬಂದು ಅಲ್ಲಿನ ಪುನರುಜ್ಜೀವನದ ಬಗ್ಗೆ ಆಸಕ್ತಿತೋರಿದ. 1895ರಲ್ಲಿ ಪ್ರಕಟವಾದ ಪೊಯೆಮ್ಸ್ ಎಂಬ ಸಂಕಲನದಲ್ಲೂ 1897ರಲ್ಲಿ ಹೊರಬಂದ ಐರ್ಲೆಂಡ್ ಮತ್ತು ಇತರ ಕವನಗಳು ಎಂಬ ಸಂಗ್ರಹದಲ್ಲೂ ಐರ್ಲೆಂಡಿನ ಬಗ್ಗೆ ಈತನಿಗಿದ್ದ ಅಪಾರ ಒಲವು ಕಂಡುಬರುತ್ತದೆ. ಮುಂದಿನ ವರ್ಷಗಳಲ್ಲಿ ಮದ್ಯಪಾನದಿಂದ ಈತನ ಆರೋಗ್ಯ ತೀರ ಕೆಟ್ಟಿತು. ತನ್ನ ಸಾಹಿತ್ಯ ವ್ಯವಸಾಯದ ಮೇಲೆ ಬಹಳಷ್ಟು ಪ್ರಭಾವ ಬೀರಿದ ವಾಲ್ಟರ್ ಪೇಟರನನ್ನು ಕುರಿತ ಒಂದು ಶೋಕಗೀತೆಯನ್ನು ಬರೆದು ಮುಗಿಸುತ್ತಿದ್ದಂತೆ ಫ್ಲೀಟ್ ಸ್ಟ್ರೀಟ್‍ನಲ್ಲಿ ಕಾಲುಜಾರಿ ಬಿದ್ದು ಅಸುನೀಗಿದ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: