ವಿಷಯಕ್ಕೆ ಹೋಗು

ಲಮ್ಹೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಮ್ಹೆ
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
Directed byಯಶ್ ಚೋಪ್ರಾ
Written byಹನಿ ಇರಾನಿ
ರಾಹಿ ಮಾಸೂಮ್ ರಜ಼ಾ
Produced byಯಶ್ ಚೋಪ್ರಾ
ಟಿ. ಸುಬ್ಬರಾಮಿ ರೆಡ್ಡಿ
Starringಶ್ರೀದೇವಿ
ಅನಿಲ್ ಕಪೂರ್
ವಹೀದಾ ರೆಹಮಾನ್
ಅನುಪಮ್ ಖೇರ್
Cinematographyಮನ್‍ಮೋಹನ್ ಸಿಂಗ್
Music byಶಿವ್-ಹರಿ
Distributed byಯಶ್ ರಾಜ್ ಫ಼ಿಲ್ಮ್ಸ್
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೬".
  • 22 ನವೆಂಬರ್ 1991 (1991-11-22)
Running time
187 ನಿಮಿಷಗಳು
Languageಹಿಂದಿ
Budgetಕೋಟಿ (ಯುಎಸ್$೧.೩೩ ದಶಲಕ್ಷ)
Box office20.5 ಶತಕೋಟಿ (US$೪೫೫.೧ ದಶಲಕ್ಷ)

ಲಮ್ಹೆ (ಅನುವಾದ: ಕ್ಷಣಗಳು) ೧೯೯೧ರ ಒಂದು ಪ್ರಣಯಪ್ರಧಾನ ನಾಟಕೀಯ ಹಿಂದಿ ಚಲನಚಿತ್ರ. ಇದನ್ನು ಯಶ್ ಚೋಪ್ರಾ ನಿರ್ದೇಶಿಸಿದ್ದಾರೆ. ಹನಿ ಇರಾನಿ ಮತ್ತು ರಾಹಿ ಮಾಸೂಮ್ ರಜ಼ಾ ಇದನ್ನು ಬರೆದಿದ್ದಾರೆ. ಈ ಚಲನಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ನಟಿಸಿದ್ದಾರೆ. ವಹೀದಾ ರೆಹಮಾನ್, ಅನುಪಮ್ ಖೇರ್ ಮತ್ತು ಮನೋಹರ್ ಸಿಂಗ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ, ವಿರೇನ್ ಪಲ್ಲವಿಯನ್ನು ಪ್ರೀತಿಸತೊಡಗುತ್ತಾನೆ. ಆದರೆ ಅವಳು ಸಿದ್ಧಾರ್ಥ್‌ನನ್ನು ಮದುವೆಯಾಗುತ್ತಾಳೆ. ವಿವಾಹಿತ ದಂಪತಿಯು ಒಂದು ದುರಂತದ ಕಾರ್ ಅಪಘಾತದಲ್ಲಿ ಮೃತರಾಗುತ್ತಾರೆ ಮತ್ತು ಅವಳ ಒಬ್ಬಳೆ ಮಗಳು ಉಳಿಯುತ್ತಾಳೆ. ಅವಳು ಬೆಳೆದು ತನ್ನ ತಾಯಿಯಂತೆಯೇ ಕಾಣುತ್ತಾಳೆ. ಅವಳು ವಿರೇನ್‍ನನ್ನು ಭೇಟಿಯಾಗಿ ಅವನನ್ನು ಪ್ರೀತಿಸತೊಡಗುತ್ತಾಳೆ.

ತಮ್ಮ ನಿರ್ಮಾಣ ಲಾಂಛನವಾದ ಯಶ್ ರಾಜ್ ಫ಼ಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾದ ಲಮ್ಹೆಯನ್ನು ಎರಡು ವೇಳಾಪಟ್ಟಿಗಳಲ್ಲಿ ರಾಜಸ್ಥಾನ ಮತ್ತು ಲಂಡನ್‍ನಲ್ಲಿ ಚಿತ್ರೀಕರಿಸಲಾಯಿತು. ಕಳೆದ ಕೆಲವು ವರ್ಷಗಳಲ್ಲಿ, ಇದನ್ನು ಒಂದು ಶ್ರೇಷ್ಠಕೃತಿ ಎಂದು ಮತ್ತು ಪ್ರಾಯಶಃ ಚೋಪ್ರಾರ ಅತ್ಯಂತ ಶ್ರೇಷ್ಠ ಚಿತ್ರವೆಂದು ಹೊಗಳಲಾಗಿದೆ. ಬಿಡುಗಡೆಯಾದ ಮೇಲೆ ಈ ಚಿತ್ರವನ್ನು ಬಹಳವಾಗಿ ಶ್ಲಾಘಿಸಲಾಯಿತು ಮತ್ತು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಚಲನಚಿತ್ರಗಳಲ್ಲಿ ಒಂದು ಎಂದು ಇದು ಪರಿಗಣಿತವಾಗಿದೆ. ಭಾರತದಲ್ಲಿ ಈ ಚಲನಚಿತ್ರವು ಸಾಧಾರಣ ವ್ಯಾಪಾರ ಮಾಡಿತಾದರೂ, ಇದು ವಿದೇಶದಲ್ಲಿ ಭಾರಿ ಯಶಸ್ಸು ಕಂಡಿತು. ೬ ಕೋಟಿ ಬಂಡವಾಳದಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವಾದ್ಯಂತ ೨೦.೫ ಕೋಟಿ ಹಣಗಳಿಸಿತು. ಈ ಚಲನಚಿತ್ರವು ಅಸಂಖ್ಯಾತ ಪ್ರಶಸ್ತಿ ಗೌರವಗಳನ್ನು ಪಡೆಯಿತು. ಇದನ್ನು ತಾವು ನಿರ್ದೇಶಿಸಿದ ಚಲನಚಿತ್ರಗಳಲ್ಲಿ ತಮ್ಮ ವೈಯಕ್ತಿಕ ಅಚ್ಚುಮೆಚ್ಚಿನ ಚಿತ್ರವೆಂದು ಯಶ್ ಚೋಪ್ರಾ ಹೇಳಿದ್ದಾರೆ. ಇದು ಮಾಸೂಮ್ ರಜ಼ಾ ಬರೆದ ಕೊನೆಯ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡುಗಡೆಯಾದ ಕೆಲವು ತಿಂಗಳುಗಳ ನಂತರ ಅವರು ಮೃತರಾದರು.

೩೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ, ಈ ಚಿತ್ರವು ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿಯನ್ನು ಗೆದ್ದಿತು. ೩೭ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಈ ಚಲನಚಿತ್ರವು ಹದಿಮೂರು ನಾಮನಿರ್ದೇಶನಗಳನ್ನು ಪಡೆಯಿತು ಮತ್ತು ಐದು ಪ್ರಶಸ್ತಿಗಳನ್ನು ಗೆದ್ದಿತು: ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟಿ (ಶ್ರೀದೇವಿ), ಅತ್ಯುತ್ತಮ ಹಾಸ್ಯನಟ (ಖೇರ್), ಅತ್ಯುತ್ತಮ ಕಥೆ ಮತ್ತು ಅತ್ಯುತ್ತಮ ಸಂಭಾಷಣೆ.

ಕಥಾವಸ್ತು

[ಬದಲಾಯಿಸಿ]

ಸಣ್ಣವಯಸ್ಸಿನ ವಿರೇಂದ್ರ "ವಿರೇನ್" ಪ್ರತಾಪ್ ಸಿಂಗ್ (ಅನಿಲ್ ಕಪೂರ್) ಪ್ರೀತಿಯಿಂದ ದಾಯಿಜಾನ್ (ವಹೀದಾ ರೆಹಮಾನ್) ಎಂದು ಕರೆಯಲ್ಪಡುವ ತನ್ನ ಮನೆ ಶಿಕ್ಷಕಿಯೊಂದಿಗೆ ರಾಜಸ್ಥಾನಕ್ಕೆ ಪ್ರಯಾಣಿಸುತ್ತಾನೆ. ಅಲ್ಲಿ ಅವನು ಸುಂದರಿ ಪಲ್ಲವಿಯನ್ನು (ಶ್ರೀದೇವಿ) ಭೇಟಿಯಾಗಿ ಅವಳನ್ನು ಪ್ರೀತಿಸತೊಡಗುತ್ತಾನೆ. ಪಲ್ಲವಿಯು ವ್ಯವಹಾರವು ಕುಸಿದಾಗ ವಿರೇನ್‍ನ ತಂದೆಗೆ ಸಹಾಯಮಾಡಿದ್ದ ಒಬ್ಬ ಉದ್ಯಮಿಯ ಮಗಳಾಗಿರುತ್ತಾಳೆ. ವಿರೇನ್ ಮತ್ತು ಪಲ್ಲವಿ ಸ್ನೇಹಿತರಾಗುತ್ತಾರೆ ಆದರೆ ಅವನಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಆಗುವುದಿಲ್ಲ. ದಾಯಿಜಾನ್ ದುಃಖದಿಂದ ವಿರೇನ್‍ನ ನಿರಾಶೆಗಳನ್ನು ಗಮನಿಸುತ್ತಾಳೆ.

ಒಂದು ಆಸ್ತಿ ವಿವಾದ ಮತ್ತು ಪ್ರಮುಖ ಸಿವಿಲ್ ನ್ಯಾಯಾಲಯ ವ್ಯಾಜ್ಯದ ನಂತರ, ಪಲ್ಲವಿಯ ತಂದೆ ಹೃದಯಾಘಾತದಿಂದ ಸಾಯುತ್ತಾನೆ. ಪಲ್ಲವಿಯು ಖಿನ್ನತೆಗೆ ಒಳಗಾಗಿ ಹತ್ತಿರದ ಜನಸಂದಣಿಯಿರದ ಪಟ್ಟಣದಲ್ಲಿ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಾಳೆ. ಸಾಂತ್ವನ ಹೇಳಲು ವಿರೇನ್ ಅವಳ ಬಳಿ ಹೋಗುತ್ತಾನೆ. ಆದರೆ ಅವಳು ತಾನು ಪ್ರೀತಿಸುತ್ತಿರುವ ಸಿದ್ಧಾರ್ಥ್ ಬಳಿ ಓಡುತ್ತಾಳೆ. ವಿರೇನ್‍ನ ಹೃದಯ ಒಡೆಯುತ್ತದೆ, ಆದರೆ ಪಲ್ಲವಿಯ ತಂದೆಯ ಕೊನೆ ಬಯಕೆಗೆ ಗೌರವ ಕೊಟ್ಟು ಅವಳ ಮತ್ತು ಸಿದ್ಧಾರ್ಥ್‌ನ ವಿವಾಹ ಸಮಾರಂಭದಲ್ಲಿ ಭಾಗಿಯಾಗುತ್ತಾನೆ. ಆದರೆ, ಬಹಳವಾಗಿ ದುಃಖಿತನಾದ ವಿರೇನ್ ಬಹಳ ದೂರ ವಲಸೆ ಹೋಗಲು ನಿರ್ಧರಿಸಿ ಶಾಶ್ವತವಾಗಿ ಲಂಡನ್‍ಗೆ ಸ್ಥಳಾಂತರವಾಗುತ್ತಾನೆ. ದುರಂತವುಂಟಾಗಿ ಒಂದು ವರ್ಷದ ನಂತರ ಸಿದ್ಧಾರ್ಥ್ ಮತ್ತು ಪಲ್ಲವಿ ಒಂದು ಕಾರ್ ಅಪಘಾತದಲ್ಲಿ ಮರಣಹೊಂದುತ್ತಾರೆ. ಅವಳ ನವಜಾತ ಶಿಶು ಪೂಜಾ ಉಳಿಯುತ್ತಾಳೆ ಮತ್ತು ಅವಳನ್ನು ದಾಯಿಜಾನ್‍ನ ಆರೈಕೆಯಲ್ಲಿ ಇಡಲಾಗುತ್ತದೆ.

ಲಂಡನ್‍ನಲ್ಲಿ, ವಿರೇನ್ ತನ್ನ ಬಾಲ್ಯದ ಗೆಳೆಯ ಪ್ರೇಮ್‍ನೊಂದಿಗೆ (ಅನುಪಮ್ ಖೇರ್) ಸಮಯ ಕಳೆಯುತ್ತಾನೆ. ವಿರೇನ್‍ನ ಹೃದಯ ಪಲ್ಲವಿಗಾಗಿ ಹಂಬಲಿಸುತ್ತದೆಂದು ಅವನಿಗೆ ಚೆನ್ನಾಗಿ ಅರಿವಿರುತ್ತದೆ. ಕಾಲ ಕಳೆದಂತೆ ಬಹಳ ಮನವೊಲಿಸುವಿಕೆಯಿಂದ, ವಿರೇನ್ ನಿಧಾನವಾಗಿ ವಾಸ್ತವಕ್ಕೆ ಮರಳಿ, ಒಬ್ಬ ಗೆಳತಿ ಮತ್ತು ವ್ಯವಹಾರ ಜೊತೆಗಾರ್ತಿ ಅನಿತಾ (ಡಿಪ್ಪಿ ಸಾಗೂ) ಸೇರಿದಂತೆ, ಹೊಸ ಗೆಳೆಯರನ್ನು ಮಾಡಿಕೊಳ್ಳುತ್ತಾನೆ. ಅವಳಿಗೆ ಪಲ್ಲವಿಯೊಂದಿಗೆ ವಿರೇನ್‍ನ ಗತಕಾಲದ ಬಗ್ಗೆ ಗೊತ್ತಾಗಿ, ನಿರಂತರವಾಗಿ ಅವನ ಗಮನ ಸೆಳೆಯಲು ಪ್ರಯತ್ನಿಸುತ್ತಾಳೆ ಮತ್ತು ಅಸೂಯೆಪಡುತ್ತಾಳೆ.

ವಿರೇನ್ ಪ್ರತಿ ವರ್ಷಕ್ಕೊಮ್ಮೆ ಪಲ್ಲವಿಯ ಪುಣ್ಯತಿಥಿಗಾಗಿ, ಮತ್ತು ಸಣ್ಣವಳಾದ ಪೂಜಾಗಾಗಿ ಉಡುಗೊರೆಗಳನ್ನು ಕೊಳ್ಳಲು ಮತ್ತು ಮನೆ ಶಿಕ್ಷಕಿ ದಾಯಿಜಾನ್‍ಗೆ ನಮಸ್ಕಾರ ಹೇಳಲು ರಾಜಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾನೆ. ಅವನು ಎಂದೂ ಪೂಜಾಳೊಂದಿಗೆ ಸಮಯ ಕಳೆಯುತ್ತಿರುವುದಿಲ್ಲ ಏಕೆಂದರೆ ಅವಳು ಅವನಿಗೆ ಪಲ್ಲವಿಯನ್ನು ಬಹಳವಾಗಿ ನೆನಪಿಗೆ ತರಿಸುತ್ತಾಳೆ. ಇದು ಪೂಜಾಗೆ ಬಹಳ ದುಃಖ ತರಿಸುತ್ತಿರುತ್ತದೆ. ಕೆಲವು ವರ್ಷಗಳ ನಂತರ, ಒಂದು ಭೇಟಿಯ ವೇಳೆ ವಿರೇನ್ ಬೆಳೆದ ಪೂಜಾಳನ್ನು ಭೇಟಿಯಾಗುತ್ತಾನೆ ಮತ್ತು ಅವಳ ತಾಯಿ ಪಲ್ಲವಿಯೊಂದಿಗೆ ಅವಳು ಹಂಚಿಕೊಂಡಿರುವ ಹೋಲಿಕೆಯನ್ನು ನೋಡಿ ದಿಗಿಲಾಗುತ್ತಾನೆ. ಕೆಲವು ವರ್ಷಗಳ ನಂತರ, ದಾಯಿಜಾನ್ ಪೂಜಾಳನ್ನು ಲಂಡನ್‍ಗೆ ಕರೆತರುತ್ತಾಳೆ. ವಿರೇನ್‍ನ ಮನೆಯಲ್ಲಿ ಅವಳು ಅನಿತಾಳನ್ನು ಭೇಟಿಯಾಗುತ್ತಾನೆ, ಮತ್ತು ಪೂಜಾ ಪಲ್ಲವಿಯನ್ನು ನಿರಂತರ ನೆನಪಿಸುವುದರಿಂದ ವಿರೇನ್ ಪಲ್ಲವಿಯನ್ನು ಎಂದೂ ಮರೆಯಲಾಗುವುದಿಲ್ಲ ಎಂದು ಅನಿತಾಳಿಗೆ ಬೇಗನೇ ಅರಿವಾಗುತ್ತದೆ.

ಮತ್ತೊಂದೆಡೆ, ಪೂಜಾಗೆ ತಾನು ತನ್ನ ತಾಯಿಯನ್ನು ಗಮನಾರ್ಹವಾಗಿ ಹೋಲುತ್ತೇನೆಂಬ ಸ್ವಲ್ಪವೂ ಅರಿವಿರುವುದಿಲ್ಲ. ಪೂಜಾ ವಿರೇನ್‍ನ ಬಗ್ಗೆ ಭಾವನೆಗಳನ್ನು ಬೆಳೆಸಿಕೊಳ್ಳುವುದು ಮುಂದುವರಿಯುತ್ತದೆ. ಅವಳು ವಿರೇನ್‍ನನ್ನು ಪ್ರೀತಿಯಿಂದ "ಕ್ಞುವರ್‌ಜಿ" ಎಂದು ಕರೆಯುತ್ತಿರುತ್ತಾಳೆ. ಪ್ರೇಮ್ ಕೂಡ ಪೂಜಾಳ ಉತ್ಸಾಹಭರಿತ, ಸ್ನೇಹಪರ ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳುತ್ತಾನೆ ಮತ್ತು ಪೂಜಾ ವಿರೇನ್‌ನನ್ನು ಎಷ್ಟು ಹಚ್ಚಿಕೊಂಡಿದ್ದಾಳೆ ಎಂದು ತಿಳಿದಿರುತ್ತಾನೆ. ಪ್ರೇಮ್‍ಗೆ ಸಂಬಂಧ ಇಷ್ಟವಾದರೂ, ವಿರೇನ್ ಆಗಲೂ ಭೂತಕಾಲದಲ್ಲಿ ಇರುತ್ತಿರುವುದರಿಂದ ಅವನು ಸಂದೇಹ ಹೊಂದಿರುತ್ತಾನೆ.

ವಿರೇನ್ ಪೂಜಾಳನ್ನು ಪ್ರೀತಿಸುತ್ತಿರಬಹುದೆಂದು ಅನಿತಾಗೆ ಕ್ರಮೇಣವಾಗಿ ಅರಿವಾಗುತ್ತದೆ. ಹಾಗಾಗಿ ಅವಳು ಪೂಜಾಳನ್ನು ಭೇಟಿಯಾಗಿ ಅವಳು ವಿರೇನ್‍ಗೆ ಕೇವಲ ಜವಾಬ್ದಾರಿಯಾಗಿದ್ದಾಳೆಂದು ಅವಳಿಗೆ ಹೇಳುತ್ತಾಳೆ. ಬಹಳವಾಗಿ ಚಿಕ್ಕವಳಾಗಿರುವ ಪೂಜಾಳ ಬಗ್ಗೆ ಭಾವನೆಗಳನ್ನು ಹೊಂದಿರುವುದಕ್ಕೆ ಅವನಿಗೆ ನಾಚಿಕೆಯಾಗಬೇಕು ಎಂದೂ ಅನಿತಾ ವಿರೇನ್‍ಗೆ ಹೇಳುತ್ತಾಳೆ.

ವಿರೇನ್‍ನ ಮನೆಯಲ್ಲಿ, ಪೂಜಾಗೆ ಪೆನ್ಸಿಲ್‍ನಿಂದ ಬಿಡಿಸಿದ ಚಿತ್ರ ಸಿಗುತ್ತದೆ ಮತ್ತು ಅದು ತನ್ನದೆಂದು ತಪ್ಪುತಿಳಿಯುತ್ತಾಳೆ, ಆದರೆ ವಾಸ್ತವವಾಗಿ ಅದು ಅವಳ ತಾಯಿಯದಾಗಿರುತ್ತದೆ. ವಿರೇನ್ ಹಿಂದಿರುಗಿದಾಗ ಅವಳು ಅವನ ಬಗೆಗಿನ ತನ್ನ ಪ್ರೀತಿಯನ್ನು ಒಪ್ಪಿಕೊಂಡು ತನ್ನ ಭಾವನೆಗಳನ್ನು ಹಿಂದಿರುಗಿಸುತ್ತಾನೆ ಎಂದು ಭಾವಿಸುತ್ತಾಳೆ. ಕೋಪಗೊಂಡ ವಿರೇನ್ ಅಂತಿಮವಾಗಿ ತಾನು ಅವಳ ತಾಯಿಯನ್ನು ಮಾತ್ರ ಪ್ರೀತಿಸಿದ್ದೆನೆಂದು ಹೇಳುತ್ತಾನೆ. ದಾಯಿಜಾನ್ ಎದೆಯೊಡೆದ ಪೂಜಾಳನ್ನು ಸಂತೈಸುತ್ತಾಳೆ ಮತ್ತು ಅವಳಿಗೆ ಪಲ್ಲವಿಯ ಕಥೆಯನ್ನು ಹೇಳುತ್ತಾನೆ. ಅನಿತಾ ವಿರೇನ್ ಬಗ್ಗೆ ಏಕೆ ಅಷ್ಟು ಒಡೆತನದೊಲವು ಹೊಂದಿದ್ದಾಳೆಂದು ಪೂಜಾಗೆ ಅರ್ಥವಾಗಲು ಆರಂಭವಾಗುತ್ತದೆ. ಅವಮಾನಗೊಂಡ ಪೂಜಾ ತಾವು ಭಾರತಕ್ಕೆ ಮರಳಬೇಕೆಂದು ದಾಯಿಜಾನ್‍ಗೆ ಕೇಳಿಕೊಳ್ಳುತ್ತಾಳೆ.

ಮರಳಿ ಮನೆಯಲ್ಲಿ, ದಾಯಿಜಾನ್ ಮತ್ತು ಸಮುದಾಯದ ಸದಸ್ಯರು ಪೂಜಾಳಿಗಾಗಿ ಸಂಭಾವ್ಯ ವರನನ್ನು ಹುಡುಕಲು ಆರಂಭಿಸುತ್ತಾರೆ. ವಿರೇನ್ ಮೊದಲು ಮದುವೆಯಾಗಬೇಕೆಂಬ ಷರತ್ತಿನ ಮೇಲೆ ಪೂಜಾ ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ. ಲಂಡನ್‍ನಲ್ಲಿ, ಅವನು ಪೂಜಾಳನ್ನು ಮದುವೆಯಾಗಬೇಕೆಂದು ಗೊಂದಲಗೊಂಡ ವಿರೇನ್‍ಗೆ ಪ್ರೇಮ್ ಸಲಹೆ ನೀಡುತ್ತಾನೆ. ಆದರೆ ಅದು ತನಗಾಗಿ ಬಹಳ ಸಮಯದಿಂದ ಕಾದಿರುವ ಅನಿತಾಳಿಗೆ ಅನ್ಯಾಯವಾಗುತ್ತದೆಂದು ವಿರೇನ್‍ ಭಾವಿಸುತ್ತಾನೆ. ಅವನು ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ ಆದರೆ ಆಮಂತ್ರಣ ಪತ್ರಿಕೆಗಳು ಮುದ್ರಣಗೊಂಡ ಮೇಲೆ ತನ್ನ ಮನಸ್ಸನ್ನು ಬದಲಾಯಿಸಿದಾಗ ಅನಿತಾಗೆ ಬಹಳ ನಿರಾಶೆಯಾಗುತ್ತದೆ. ಒಂದು ದೂರವಾಣಿ ಕರೆಯಲ್ಲಿ, ತಾನು ಮದುವೆಯಾಗಿದ್ದೇನೆಂದು ಪೂಜಾ ಸುಳ್ಳು ಹೇಳುತ್ತಾಳೆ. ಅವಳು ಸುಳ್ಳು ಹೇಳುತ್ತಿದ್ದಾಳೆಂದು ವಿರೇನ್‍ಗೆ ಗೊತ್ತಿರುತ್ತದೆ. ಆದರೆ ಅನಿತಾಳೊಂದಿಗೆ ತನ್ನ ಮದುವೆಯೂ ನಡೆಯಲಿದೆ ಎಂಬ ತನ್ನ ಸುಳ್ಳಿನಿಂದ ಪ್ರತಿಕ್ರಿಯಿಸಲು ನಿರ್ಧರಿಸುತ್ತಾನೆ.

ಅನೇಕ ವರ್ಷಗಳು ಬೇರೆಯಾಗಿ ಇದ್ದು ಸಂಪರ್ಕ ಕಳೆದುಕೊಂಡ ಬಳಿಕ, ಎದೆಯೊಡೆದ ಪೂಜಾ ರಾಜಸ್ಥಾನದ ಹಳ್ಳಿಗಳಲ್ಲಿ ಕಥೆಗಾರ್ತಿಯಾಗಿ ತನ್ನ ಜೀವನವನ್ನು ಮುಂದುವರೆಸಲು ಪ್ರಯತ್ನಿಸುತ್ತಿರುತ್ತಾಳೆ ಮತ್ತು ಸೂತ್ರದಬೊಂಬೆಗಳನ್ನು ಬಳಸಿ ಜನಪದ ಕಥೆಗಳನ್ನು ಹೇಳುತ್ತಿರುತ್ತಾಳೆ. ಲಂಡ‍ನ್‍ನಲ್ಲಿ, ಏಕಾಂಗಿಯಾದ ವಿರೇನ್ ಪೂಜಾಳನ್ನು ಮರೆಯಲು ಸಾಧ್ಯವಾಗಿರುವುದಿಲ್ಲ. ಅವನು ರಾಜಸ್ಥಾನಕ್ಕೆ ಪ್ರಯಾಣಿಸಿ ಪೂಜಾ ಮತ್ತು ದಾಯಿಜಾನ್‍ರನ್ನು ಪತ್ತೆಹಚ್ಚುತ್ತಾನೆ. ಅವಳು ಲಂಡನ್ ಬಿಟ್ಟ ಮೇಲೆ, ತಾನು ಅವಳನ್ನು ಪ್ರೀತಿಸತೊಡಗಿದ್ದೇನೆಂದು ವಿರೇನ್ ಪೂಜಾಗೆ ಹೇಳುತ್ತಾನೆ. ಕೊನೆಯಲ್ಲಿ, ಪೂಜಾ ಮತ್ತು ವಿರೇನ್ ಒಟ್ಟಾಗುತ್ತಾರೆ.

ಪಾತ್ರವರ್ಗ

[ಬದಲಾಯಿಸಿ]
  • ಪಲ್ಲವಿ ಮತ್ತು ಪೂಜಾ ಆಗಿ ಶ್ರೀದೇವಿ; ದ್ವಿಪಾತ್ರದಲ್ಲಿ
  • ವಿರೇಂದ್ರ ಪ್ರತಾಪ್ ಸಿಂಗ್ ಆಗಿ ಅನಿಲ್ ಕಪೂರ್
  • ದೈಜಾನ್ ಆಗಿ ವಹೀದಾ ರೆಹಮಾನ್
  • ಪ್ರೇಮ್ ಆಗಿ ಅನುಪಮ್ ಖೇರ್
  • ಅನಿತಾ ಮಲ್ಹೋತ್ರಾ ಆಗಿ ಡಿಪಿ ಸಾಗೂ
  • ಕೋಠೀವಾಲೆ ಠಾಕುರ್ ಆಗಿ ಮನೋಹರ್ ಸಿಂಗ್
  • ಸುಧೇಶ್ವರ್ ನಾರಾಯಣ್ ತಿವಾರಿ ಆಗಿ ಲಲಿತ್ ತಿವಾರಿ
  • ಸಿದ್ಧಾರ್ಥ್ ಭಟ್ನಾಗರ್ ಆಗಿ ದೀಪಕ್ ಮಲ್ಹೋತ್ರಾ
  • "ಚೂಡಿಯ್ಞಾ ಖನಕ್ ಗಯಿ" ಹಾಡಿನಲ್ಲಿ ಜಾನಪದ ಗಾಯಕಿಯಾಗಿ ಇಲಾ ಅರುಣ್
  • ಯುವ ಪೂಜಾ ಆಗಿ ರಿಚಾ ಪಲ್ಲೋದ್
  • ಡಾಕ್ಟರ್ ವಿಕಾಸ್ ಆಗಿ ವಿಕಾಸ್ ಆನಂದ್

ಸಂಗೀತ

[ಬದಲಾಯಿಸಿ]

ಚಿತ್ರದ ಸಂಗೀತವನ್ನು ಶಿವಕುಮಾರ್ ಶರ್ಮಾ ಮತ್ತು ಹರಿಪ್ರಸಾದ್ ಚೌರಾಸಿಯಾ (ಶಿವ್-ಹರಿ ಎಂದು ಪರಿಚಿತವಾಗಿದ್ದಾರೆ) ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆನಂದ ಬಕ್ಷಿ ಬರೆದರು.

ಹಾಡು ಗಾಯಕ(ರು)
"ಯೇ ಲಮ್ಹೆ ಯೇ ಪಲ್" ಹರಿಹರನ್
"ಯೇ ಲಮ್ಹೆ ಯೇ ಪಲ್" (ಉದಾಸ ಆವೃತ್ತಿ) ಹರಿಹರನ್
"ಮ್ಹಾರೆ ರಾಜಸ್ಥಾನ್ ಮಾ" ಮೊಹಿನುದ್ದೀನ್
"ಮೋಹೆ ಛೇಡೊ ನಾ" ಲತಾ ಮಂಗೇಶ್ಕರ್
"ಚೂಡಿಯ್ಞಾ ಖನಕ್ ಗಯಿ" (ಆರಂಭದಲ್ಲಿ 'ಮ್ಹಾರೆ ರಾಜಸ್ಥಾನ್ ಮಾ'ದ ತುಣುಕನ್ನು ಹೊಂದಿದೆ) ಲತಾ ಮಂಗೇಶ್ಕರ್, ಮೋಯಿನುದ್ದೀನ್ ಮತ್ತು ಇಲಾ ಅರುಣ್
"ಚೂಡಿಯ್ಞಾ ಖನಕ್ ಗಯಿ" (ಉದಾಸ ಆವೃತ್ತಿ) ಲತಾ ಮಂಗೇಶ್ಕರ್
"ಕಭಿ ಮೇ ಕಹ್ಞೂ" ಲತಾ ಮಂಗೇಶ್ಕರ್ ಮತ್ತು ಹರಿಹರನ್
"ಮೇಘಾ ರೆ ಮೇಘಾ" ಲತಾ ಮಂಗೇಶ್ಕರ್ ಮತ್ತು ಇಲಾ ಅರುಣ್
"ಯಾದ್ ನಹಿ ಭೂಲ್ ಗಯಾ" ಲತಾ ಮಂಗೇಶ್ಕರ್ ಮತ್ತು ಸುರೇಶ್ ವಾಡ್ಕರ್
"ಗುಡಿಯಾ ರಾಣಿ" ಲತಾ ಮಂಗೇಶ್ಕರ್
"ಮೇರಿ ಬಿಂದಿಯಾ" ಲತಾ ಮಂಗೇಶ್ಕರ್
"ಫ಼್ರೀಕ್ ಔಟ್" (ವಿಡಂಬನ ಗೀತೆ) ಪಮೇಲಾ ಚೋಪ್ರಾ ಮತ್ತು ಸುದೇಶ್ ಭೋಸ್ಲೆ
"ಮೊಮೆಂಟ್ ಆಫ಼್ ರೇಜ್" (ವಾದ್ಯ) ವಾದ್ಯಸಂಗೀತ
"ಮೊಮೆಂಟ್ಸ್ ಆಫ಼್ ಪ್ಯಾಷನ್" (ವಾದ್ಯ) ವಾದ್ಯಸಂಗೀತ

ಪ್ರತಿಕ್ರಿಯೆ, ವಿಶ್ಲೇಷಣೆ ಮತ್ತು ಕೊಡುಗೆ

[ಬದಲಾಯಿಸಿ]

ಲಮ್ಹೆಯನ್ನು ವಿಮರ್ಶಕರು ವ್ಯಾಪಕವಾಗಿ ಶ್ಲಾಘಿಸಿದರು. ಇದು ಭಾರತದಲ್ಲಿ ಸಾಧಾರಣ ವ್ಯಾಪಾರ ಮಾಡಿಯೂ ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಕೆಲವೇ ಚಲನಚಿತ್ರಗಳಲ್ಲಿ ಒಂದಾಗಿದೆ. ಲಮ್ಹೆ ವಿದೇಶಿ ಮಾರುಕಟ್ಟೆಗಳಲ್ಲಿ ಮತ್ತು ವೀಡಿಯೊ ಜಾಲದಲ್ಲಿ ಅತ್ಯಂತ ದೊಡ್ಡ ಬಾಲಿವುಡ್ ಯಶಸ್ಸುಗಳಲ್ಲಿ ಒಂದೆನಿಸಿದೆ. ತಾಯಿ ಮತ್ತು ಮಗಳ ತಮ್ಮ ದ್ವಿಪಾತ್ರಕ್ಕಾಗಿ ಶ್ರೀದೇವಿ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆದರು ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು.


ಕಳೆದ ಕೆಲವು ವರ್ಷಗಳಲ್ಲಿ, ಲಮ್ಹೆ ಅಭಿಮಾನಿಗಳು ಬಹಳ ಇಷ್ಟಪಡುವ ಚಲನಚಿತ್ರಗಳಲ್ಲಿ ಒಂದಾಗಿದೆ.[][]

ಪ್ರಶಸ್ತಿಗಳು

[ಬದಲಾಯಿಸಿ]
೩೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
  • ಅತ್ಯುತ್ತಮ ವಸ್ತ್ರವಿನ್ಯಾಸ – ನೀತಾ ಲುಲ್ಲಾ, ಕಚಿನ್ಸ್ ಮತ್ತು ಲೀನಾ ದಾರು
೩೭ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು[]

ಗೆಲುವು

  • ಅತ್ಯುತ್ತಮ ಚಲನಚಿತ್ರ – ಯಶ್ ಚೋಪ್ರಾ
  • ಅತ್ಯುತ್ತಮ ನಟಿ – ಶ್ರೀದೇವಿ
  • ಅತ್ಯುತ್ತಮ ಹಾಸ್ಯನಟ – ಅನುಪಮ್ ಖೇರ್
  • ಅತ್ಯುತ್ತಮ ಕಥೆ – ಹನಿ ಇರಾನಿ
  • ಅತ್ಯುತ್ತಮ ಸಂಭಾಷಣೆ – ರಾಹಿ ಮಾಸೂಮ್ ರಜ಼ಾ

ನಾಮನಿರ್ದೇಶನಗಳು

  • ಅತ್ಯುತ್ತಮ ನಿರ್ದೇಶಕ – ಯಶ್ ಚೋಪ್ರಾ
  • ಅತ್ಯುತ್ತಮ ನಟ – ಅನಿಲ್ ಕಪೂರ್
  • ಅತ್ಯುತ್ತಮ ಪೋಷಕ ನಟ – ಅನುಪಮ್ ಖೇರ್
  • ಅತ್ಯುತ್ತಮ ಪೋಷಕ ನಟಿ – ವಹೀದಾ ರೆಹಮಾನ್

ಉಲ್ಲೇಖಗಳು

[ಬದಲಾಯಿಸಿ]
  1. idiva.com. "10 Must Watch Movies That Weren't Blockbusters". Archived from the original on 2012-10-23. Retrieved 2020-03-10.
  2. Yahoo. "The Magical Years of Yash Chopra". Archived from the original on 2012-12-26. Retrieved 2020-03-10.
  3. "1st Filmfare Awards 1953" (PDF). Archived from the original (PDF) on 2009-06-12. Retrieved 2020-03-10.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]