ರಾಸಾಯನಿಕ ಎಂಜಿನಿಯರಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಸಾಯನಿಕ ಎಂಜಿನಿಯರಿಂಗ್ ( ಕೆಮಿಕಲ್ ಇಂಜಿನಿಯರಿಂಗ್) - ಇದು ರಾಸಾಯನಿಕ ಪ್ರಕ್ರಿಯೆಗಳನ್ನು ಆಧರಿಸಿದ ಉತ್ಪಾದನೆ ಇರುವ ಔದ್ಯಮಿಕ ಸ್ಥಾವರಗಳ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ಸುಸ್ಥಿತಿ ಕಾಯ್ದುಕೊಳ್ಳುವಿಕೆ ಇವನ್ನು ವ್ಯವಹರಿಸುವ ಎಂಜಿನಿಯರಿಂಗ್ ಶಾಖೆ .


ಉದ್ದೇಶ[ಬದಲಾಯಿಸಿ]

ರಾಸಾಯನಿಕ ಪ್ರಕ್ರಿಯೆಗಳು ಪದಾರ್ಥಗಳ ಸಂಯೋಜನೆ, ಸಂರಚನೆ ಮತ್ತು ಶಕ್ತಿಸಂಚಯ ಮುಂತಾದ ಗುಣಗಳನ್ನು ಬದಲಿಸುತ್ತವೆ. ಎಂದೇ, ಆ ಪ್ರಕ್ರಿಯೆಗಳ ಯುಕ್ತ ಅನ್ವಯದಿಂದ ಕಚ್ಚಾಸಾಮಗ್ರಿಗಳನ್ನು ಉಪಯುಕ್ತ ಉತ್ಪನ್ನಗಳಾಗಿ ಬೃಹತ್‍ಪ್ರಮಾಣದಲ್ಲಿ ಪರಿವರ್ತಿಸುವುದು ಈ ಎಂಜಿನಿಯರಿಂಗ್ ಶಾಖೆಯ ಉದ್ದೇಶ.

ಯಾವುದೇ ರಾಸಾಯನಿಕ ಪ್ರಕ್ರಿಯೆಯನ್ನು ವಿಭಿನ್ನ ಘಟಕ ಪರಿಕರ್ಮಗಳಾಗಿ ವಿಶ್ಲೇಷಿಸಬಹುದು (ಉದಾ: ಆಸವನ, ಉತ್ಪತನ, ಸೋಸುವಿಕೆ, ಶುದ್ಧೀಕರಣ, ಸ್ಫಟಿಕೀಕರಣ, ಬಾಷ್ಪೀಕರಣ, ಆಹರಣ, ಹೈಡ್ರೊಜನೀಕರಣ, ಉಷ್ಣ ವರ್ಗಾವಣೆ ಇತ್ಯಾದಿ). ರಾಸಾಯನಿಕಗಳು ಬೇರೆಬೇರೆ ಆದರೂ ಈ ಪರಿಕರ್ಮಗಳ ಮೂಲತತ್ತ್ವ ಬದಲಾಗುವುದಿಲ್ಲ. ಆದ್ದರಿಂದ, ರಾಸಾಯನಿಕ ಪ್ರಕ್ರಿಯೆಯ ಸುಸಂಗತ ಘಟಕ ಪರಿಕರ್ಮಗಳ ಪರಿಪೂರ್ಣ ತಿಳಿವಳಿಕೆ ರಾಸಾಯನಿಕ ಎಂಜಿನಿಯರ್‍ಗೆ ಇರಬೇಕು. ಅಲ್ಲದೆ, ಅವುಗಳ ವಿನ್ಯಾಸ, ಪರೀಕ್ಷಣ, ಬೃಹದೀಕರಣ (ಸ್ಕೇಲ್ ಅಪ್), ಅನುಷ್ಠಾನ, ನಿಯಂತ್ರಣ ಮತ್ತು ಅತ್ಯುತ್ತಮ ಫಲಿತಾಂಶದ ಗಳಿಕೆ ಮುಂತಾದ ಎಲ್ಲವನ್ನೂ ನಿಭಾಯಿಸುವ ಕೌಶಲಗಳೂ ಆತನಲ್ಲಿರಬೇಕು. ಘಟಕ ಪರಿಕರ್ಮಗಳನ್ನು ವಿಶ್ಲೇಷಿಸಿ ಸುಧಾರಿಸಲೋಸುಗ ಅವಶ್ಯವಾದ ಜ್ಞಾನ ಮತ್ತು ತಂತ್ರಗಳನ್ನು ರಾಸಾಯನಿಕ ಎಂಜಿನಿಯರ್ ಸ್ವಯಂ ಆವಿಷ್ಕರಿಸುವುದಲ್ಲದೆ ಇತರ ಜ್ಞಾನಶಾಖೆಗಳಲ್ಲಿ ಲಭ್ಯವಿರುವುವನ್ನು ಸ್ವಾಂಗೀಕರಿಸಿಕೊಳ್ಳುವದೂ ಉಂಟು.

ಇತಿಹಾಸ[ಬದಲಾಯಿಸಿ]

ರಾಸಾಯನಿಕ ಉದ್ಯಮದ ಆವಶ್ಯಕತೆಗಳನ್ನು ಪೂರೈಸಲೋಸುಗ ರಾಸಾಯನಿಕ ಎಂಜಿನಿಯರಿಂಗ್ ಔದ್ಯಮಿಕ ರಸಾಯನವಿಜ್ಞಾನದಿಂದ ವಿಕಸಿಸಿತು. ಜಾಗತಿಕ ಯುದ್ಧಗಳು ಮತ್ತು ಔದ್ಯಮಿಕ ಕ್ರಾಂತಿಯ ಪರಿಣಾಮವಾಗಿ ಕೆಲವು ಮೂಲ ರಾಸಾಯನಿಕಗಳ (ಉದಾ: ಗಂಧಕಾಮ್ಲ, ಸೋಡ ಆ್ಯಷ್, ಪೊಟ್ಯಾಷ್) ಉತ್ಪಾದನ ವಿಧಾನಗಳ ಕಾಲ, ವೆಚ್ಚ ಮತ್ತು ಶ್ರಮ ಇವನ್ನು ಕಡಿಮೆ ಮಾಡಲೇಬೇಕಾದ ಅನಿವಾರ್ಯತೆ ಉಂಟಾಯಿತು. ತತ್ಪರಿಣಾಮವಾಗಿ, ಉತ್ಪಾದನದಕ್ಷತೆ, ನಿರಂತರ ಕಾರ್ಯನಿರ್ವಹಣೆ, ಮರುಬಳಕೆ, ಕಡಿಮೆ ವೆಚ್ಚದಲ್ಲಿ ಶುದ್ಧೀಕರಣ ಇವೇ ಮೊದಲಾದ ಅನೇಕ ಪರಿಕಲ್ಪನೆಗಳು ವಿಕಸಿಸಿ ಅನುಷ್ಠಾನ ಗೊಂಡುವು. ದಕ್ಷ ರಾಸಾಯನಿಕ ಸ್ಥಾವರದ ಪರಿಕಲ್ಪನೆ ಕ್ರಮೇಣ ಮೈದಳೆಯಿತು. ರಸಾಯನವಿಜ್ಞಾನ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಇವೆರಡರ ಅರಿವುಳ್ಳ ತಜ್ಞರ ಆವಶ್ಯಕತೆ ಉಂಟಾಯಿತು. ಸಂಕೀರ್ಣ ರಾಸಾಯನಿಕ ಪರಿಕರ್ಮಗಳಿಗೆ ಸಂಬಂಧಿಸಿದಂತೆ ಆಗುತ್ತಿದ್ದ ಆವಿಷ್ಕಾರಗಳು ಕೂಡ ಈ ಆವಶ್ಯಕತೆಯನ್ನು ಪೂರೈಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದುವು. ರಾಸಾಯನಿಕ ಎಂಜಿನಿಯರ್ ಎಂಬ ಪದ 1880ರ ಸುಮಾರಿಗೆ ಬಳಕೆಯಲ್ಲಿ ಇದ್ದರೂ ಈ ಸ್ಥಾನ ಗಳಿಸಲು ವಿಶೇಷವಾದ ಔಪಚಾರಿಕ ಶಿಕ್ಷಣ ರೂಪುಗೊಂಡಿರಲಿಲ್ಲ. ರಾಸಾಯನಿಕ ಪ್ರಕ್ರಿಯೆಗಳಲ್ಲಿ ಬಳಸ ಬೇಕಾದ ಉಪಕರಣಗಳ ಅಲ್ಪಸ್ವಲ್ಪ ಜ್ಞಾನವಿದ್ದ ಮೆಕ್ಯಾನಿಕಲ್ ಎಂಜಿನಿಯರ್, ವಿಶೇಷ ಶಿಕ್ಷಣವಿಲ್ಲದಿದ್ದರೂ ರಾಸಾಯನಿಕ ಸ್ಥಾವರದ ಅನುಭವೀ ಮುಖ್ಯಸ್ಥ ಅಥವಾ ದೊಡ್ಡ ಪ್ರಮಾಣದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ತಿಳಿವಳಿಕೆ ಇರುವ ಆನ್ವಯಿಕ ರಸಾಯನ ವಿಜ್ಞಾನಿಗಳು ರಾಸಾಯನಿಕ ಎಂಜಿನಿಯರ್‍ನ ಪಾತ್ರ ನಿರ್ವಹಿಸುತ್ತಿದ್ದರು. ಇಂಥ ಸನ್ನಿವೇಶದಲ್ಲಿ ರಾಸಾಯನಿಕ ಎಂಜಿನಿಯರಿಂಗ್‍ಗೆ ವೃತ್ತಿಯ ಸ್ಥಾನಮಾನ ದೊರಕಿಸಿಕೊಡುವ ಪ್ರಯತ್ನ ಮಾಡಿದ ಶ್ರೇಯಸ್ಸು ಇಂಗ್ಲೆಂಡಿನ ಜಾರ್ಜ್ ಡೇವಿಸ್ (1850-1906) ಎಂಬಾತನಿಗೆ ಸಲ್ಲುತ್ತದೆ. ದೇಶದ ಎಲ್ಲ ರಾಸಾಯನಿಕ ಸ್ಥಾವರಗಳು ಆಗ ಜಾರಿಯಲ್ಲಿದ್ದ ಆಲ್ಕಲಿ ವಕ್ರ್ಸ್ ಆ್ಯಕ್ಟ್-1863 ವಿಧಿಸಿದ್ದ ಕಟ್ಟುಪಾಡುಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಲ್ಕಲಿ ಇನ್ಸ್‍ಪೆಕ್ಟರ್ ಜಾರ್ಜ್ ಡೇವಿಸ್‍ನದು. ಕರ್ತವ್ಯ ನಿರ್ವಹಿಸುವಾಗ ಗಳಿಸಿದ ಅನುಭವದಿಂದ ಪ್ರೇರಿತನಾಗಿ ಸೊಸೈಟಿ ಆಫ್ ಕೆಮಿಕಲ್ ಎಂಜಿನಿಯರ್ಸ್ ಎಂಬ ಸಂಸ್ಥೆ ಸ್ಥಾಪಿಸಲು ಪ್ರಯತ್ನಿಸಿದ (1880). ಅದರಲ್ಲಿ ಅಯಶಸ್ವಿಯಾದರೂ ಧೃತಿಗೆಡದೆ ರಾಸಾಯನಿಕ ಎಂಜಿನಿಯರಿಂಗ್ ಪರಿಕಲ್ಪನೆಗೆ ಇತರ ಎಂಜಿನಿಯರ್‍ಗಳ ಮಾನ್ಯತೆ ದೊರಕಿಸುವ ಪ್ರಯತ್ನ ಮುಂದುವರಿಸಿದ. 1884ರಲ್ಲಿ ವೃತ್ತಿ ಸಲಹಾಕಾರನಾದ ಈತ ತನ್ನ ಅನುಭವವನ್ನು ಆಧರಿಸಿ `ರಾಸಾಯನಿಕ ಎಂಜಿನಿಯರಿಂಗ್ ಎಂಬ ವಿಷಯ ಕುರಿತು 12 ಉಪನ್ಯಾಸಗಳ ಮಾಲಿಕೆಯೊಂದನ್ನು ಸಿದ್ಧಪಡಿಸಿ ಮ್ಯಾಂಚೆಸ್ಟರ್ ಟೆಕ್ನಿಕಲ್ ಸ್ಕೂಲ್‍ನಲ್ಲಿ ಸಾದರ ಪಡಿಸಿದ (1887). ಅನುಭವಜನ್ಯ ವಿವೇಕದಿಂದ ಆತ ಬ್ರಿಟಿಷ್ ರಾಸಾಯನಿಕ ಉದ್ಯಮದ ಕಾರ್ಯವಿಧಾನವನ್ನು ಸ್ವತಂತ್ರ ರಾಸಾಯನಿಕ ಪರಿಕರ್ಮಗಳಾಗಿ ವಿಶ್ಲೇಷಿಸಿ ರೂಪಿಸಿದ್ದ ಪಠ್ಯಕ್ರಮದ ಪ್ರತಿಪಾದನೆ ಇದಾಗಿತ್ತು. ಅವನು ಪ್ರತಿಪಾದಿಸಿದ ರಾಸಾಯನಿಕ ಪರಿಕರ್ಮಗಳ ಪರಿಕಲ್ಪನೆಯೇ ಮುಂದೆ ಘಟಕ ಪರಿಕರ್ಮಗಳ ಪರಿಕಲ್ಪನೆಯಾಗಿ ರೂಪಾಂತರಣಗೊಂಡಿತು. ಅನೇಕ ತಜ್ಞರ ಮನ್ನಣೆ ಗಳಿಸುವುದರಲ್ಲಿ ಯಶಸ್ವಿಯಾದ ಈ ಉಪನ್ಯಾಸಮಾಲಿಕೆ ರಾಸಾಯನಿಕ ಎಂಜಿನಿಯರಿಂಗ್ ಮೈದಳೆಯಲು ಕಾರಣವಾಯಿತು. ಅಮೆರಿಕದ ಮ್ಯಾಸಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಮ್‍ಐಟಿ) ಲ್ಯೂಯಿಸ್ ಮಿಲ್ಸ್ ನಾರ್ಟನ್ (1855-93) ಕೋರ್ಸ್ ಘಿ ಎಂಬ ಹೆಸರಿನ ಪಠ್ಯಕ್ರಮ ರೂಪಿಸಿ ರಾಸಾಯನಿಕ ಎಂಜಿನಿಯರಿಂಗ್‍ನ ಔಪಚಾರಿಕ ಪದವಿ ನೀಡಲಾರಂಭಿಸಿದ (1888). ಅರ್ಥಾತ್, ಆ ವರ್ಷ ರಾಸಾಯನಿಕ ಎಂಜಿನಿಯರಿಂಗ್ ಒಂದು ವೃತ್ತಿ ಎಂಬ ಮಾನ್ಯತೆ ಗಳಿಸಿತು. ಆದರೂ ಈ ವೃತ್ತಿಯ ಅದ್ವಿತೀಯತೆ ಮತ್ತು ವಿಶಿಷ್ಟತೆಗಳು ಏನು ಎಂಬುದು ಸ್ಪಷ್ಟವಾಗಿರಲಿಲ್ಲ. ಈ ನ್ಯೂನತೆಯನ್ನು ನಿವಾರಿಸಲೋಸುಗ ಅಮೆರಿಕನ್ ಇನ್‍ಸ್ಟಿಟ್ಯೂಟ್ ಆಫ್ ಕೆಮಿಕಲ್ ಎಂಜಿನಿಯರ್ಸ್ ಹುಟ್ಟಿತು (1908). ಜಾರ್ಜ್ ಡೇವಿಸ್ ರೂಪಿಸಿದ್ದ ರಾಸಾಯನಿಕ ಪರಿಕರ್ಮಗಳ ಪರಿಕಲ್ಪನೆಯನ್ನು ಸ್ಪಷ್ಟೀಕರಿಸಿ ಘಟಕ ಪರಿಕರ್ಮ ಎಂದು ನಾಮಕರಣ ಮಾಡಿ, ಈ ಪರಿಕಲ್ಪನೆಯೇ ರಾಸಾಯನಿಕ ಎಂಜಿನಿಯರಿಂಗಿನ ಅದ್ವಿತೀಯತೆ ಹಾಗೂ ವಿಶಿಷ್ಟತೆ ಎಂದು ಪ್ರತಿಪಾದಿಸಿದವ ಆರ್ತರ್ ಲಿಟಲ್(1918). ಹೀಗೆ ಇಂಗ್ಲೆಂಡಿನಲ್ಲಿ ರೂಪುಗೊಂಡ ರಾಸಾಯನಿಕ ಎಂಜಿನಿಯರಿಂಗಿನ ಆರಂಭಿಕ ಪರಿಕಲ್ಪನೆ ಅಮೆರಿಕದಲ್ಲಿ ಶೈಕ್ಷಣಿಕವಾಗಿ ಮತ್ತು ಔದ್ಯಮಿಕವಾಗಿ ವಿಕಸಿಸಿತು, ಘಟಕ ಪರಿಕರ್ಮ ಪರಿಕಲ್ಪನೆಯ ನೆರವಿನಿಂದ ಔದ್ಯಮಿಕ ರಸಾಯನವಿಜ್ಞಾನ ಪರಂಪರೆಯ ಪೊರೆ ಕಳಚಿ ಸ್ವತಂತ್ರ ವೃತ್ತಿಯಾಯಿತು.


ಸದ್ಯದ ಸ್ಥಿತಿ[ಬದಲಾಯಿಸಿ]

ಬದಲಾಗುತ್ತಿರುವ ಔದ್ಯಮಿಕ ಆವಶ್ಯಕತೆಗಳಿಗೆ ತಕ್ಕಂತೆ ರಾಸಾಯನಿಕ ಎಂಜಿನಿಯರಿಂಗ್ ತನ್ನ ಜ್ಞಾನಸಂಚಯದ ಪರಿಧಿಯನ್ನು ವ್ಯಾಕೋಚಿಸುತ್ತಲೇ ಇದೆ. ದ್ರವ್ಯ ಮತ್ತು ಶಕ್ತಿ ಸಂತುಲನೆ, ಉಷ್ಣಗತಿ ವಿಜ್ಞಾನ, ರಾಸಾಯನಿಕ ಬಲಗತಿ ವಿಜ್ಞಾನ ಮುಂತಾದವುಗಳ ಸೇರ್ಪಡೆ, ಗಣಿತೀಯ ಸಾಮಥ್ರ್ಯಕ್ಕೆ ಒತ್ತು ನೀಡಿಕೆ, ಸ್ಥಾವರದ ಒಳಗೆ ಮತ್ತು ಹೊರಗೆ ರಾಸಾಯನಿಕಗಳ ಸಾಗಾಣಿಕಾವ್ಯವಸ್ಥೆಗಳ ಸುಧಾರಣೆ, ಪ್ರಕ್ರಿಯೆಗಳ ನಿಯಂತ್ರಣಕ್ಕೆ ಗಣಕಗಳ ಬಳಕೆ ಮುಂತಾದ ಅನೇಕ ಬದಲಾವಣೆಗಳು ಆಗಿವೆ. ವಿದ್ಯುದ್ರಾಸಾಯನಿಕ ಎಂಜಿನಿಯರಿಂಗ್, ಆಹಾರ ಸಂಸ್ಕರಣೆ, ಪಾಲಿಮರ್ ತಂತ್ರವಿದ್ಯೆ, ಕಲಿಲವಿಜ್ಞಾನ, ಜೈವತಂತ್ರವಿದ್ಯೆ, ಜೈವರಾಸಾಯನಿಕ ಎಂಜಿನಿಯರಿಂಗ್ ಮುಂತಾದ ಅಂತರ್‍ಶಾಸ್ತ್ರೀಯ ಜ್ಞಾನಶಾಖೆಗಳೂ ಮೂಡುತ್ತಿವೆ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: