ಮೂಗೂರು ಜೇಜಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಗೂರು ಜೇಜಮ್ಮನವರು (ಮೇ ೧೨, ೧೮೯೯ - ಆಗಸ್ಟ್ ೧೫, ೧೯೮೩) ಭರತ ನಾಟ್ಯದಲ್ಲಿ[೧] ಪ್ರಖ್ಯಾತ ಹೆಸರು.

ಜೀವನ[ಬದಲಾಯಿಸಿ]

ಮೂಗೂರು ಅಮೃತ್ತಪ್ಪನವರಿಂದ ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿ, ನೃತ್ಯಕ್ಕೊಂದು ಕ್ರಮಬದ್ಧ ಪದ್ಧತಿಯನ್ನು ರೂಢಿಗೆ ತಂದು ಮೂಗೂರು ಶೈಲಿ ಎಂದೇ ಒಂದು ಪರಂಪರೆಯನ್ನೇ ನಿರ್ಮಿಸಿದ ವಂಶದ ಕುಡಿಯಾದ ಜೇಜಮ್ಮನವರು ಮೈಸೂರು[೨]• ಜಿಲ್ಲೆಯ ಮೂಗೂರು ಎಂಬಲ್ಲಿ ಮೇ ೧೨, ೧೮೯೯ರಂದು ಜನಿಸಿದರು.

ತಾತ ಅಮೃತಪ್ಪನವರಿಂದಲೇ ಪ್ರಾರಂಭಿಕ ನೃತ್ಯ ಶಿಕ್ಷಣ ಪಡೆದ ಜೇಜಮ್ಮನವರು ನಂತರ ತಾಯಿ ಗೌರಮ್ಮನವರಿಂದ ಕಲಿಕೆಯನ್ನು ಮುಂದುವರಿಸಿದರು. ಸಂಗೀತ ವಿದ್ವಾನ್ ಮಳವಳ್ಳಿ ಸುಬ್ಬಣ್ಣನವರಿಂದ [೩] ಸಂಗೀತ ಹಾಗೂ ಮರಿಯಾಲ ಮಠದ ಮಹಾಂತ ಸ್ವಾಮಿಗಳಲ್ಲಿ ಸಂಸ್ಕೃತಾಭ್ಯಾಸ ಮಾಡಿದರು.

ರಂಗಭೂಮಿಯಲ್ಲಿ[ಬದಲಾಯಿಸಿ]

ಜೇಜಮ್ಮನವರು 1930ರಲ್ಲಿ ಸ್ತ್ರೀನಾಟಕ ಮಂಡಲಿಯ ಸ್ಥಾಪನೆ ಮಾಡಿದರು. ಇದು ಮಹಿಳೆಯೊಬ್ಬರಿಂದ ಸ್ಥಾಪಿತವಾದ ವೃತ್ತಿ ನಾಟಕ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತು. ನಾಟಕ ಮಂಡಲಿಯಲ್ಲಿ ಆಡಳಿತದಾರರಾಗಿ, ಪಾತ್ರಧಾರಿಯಾಗಿ ವಹಿಸಿದ ಜೇಜಮ್ಮನವರು ಜವಾಬ್ದಾರಿಗಳು ಹಲವಾರು. ಮಂಡಲಿಗಳಲ್ಲಿ ಅಭಿನಯಿಸುತ್ತಿದ್ದ ಅವರು ಪ್ರಹ್ಲಾದ ಚರಿತ್ರೆಯಲ್ಲಿ ಹಿರಣ್ಯಕಶಿಪುವಾಗಿ, ಗುಲೇಬ ಕಾವಲಿಯಲ್ಲಿ ಮಂದಾರವಲ್ಲಿಯಾಗಿ ತೋರಿದ ನಟನಾ ಸಾಮರ್ಥ್ಯ ಅತ್ಯಂತ ಜನಪ್ರಿಯವಾಗಿತ್ತು.

ನೃತ್ಯ ಗುರು ಮತ್ತು ಮಹಾನ್ ಕಲಾವಿದೆ[ಬದಲಾಯಿಸಿ]

ಜೇಜಮ್ಮನವರು ಹಲವಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದರು. ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಗಣ್ಯರ ಮನೆಯ ಶುಭ ಸಮಾರಂಭಗಳಲ್ಲಿ, ಸಾಂಸ್ಕೃತಿಕ ಉತ್ಸವದ ಸಂದರ್ಭಗಳಲ್ಲಿ ಕಾರ್ಯಕ್ರಗಳನ್ನು ನೀಡುತ್ತಿದ್ದರು. ೧೯೫೬ರಿಂದ ಹತ್ತು ವರ್ಷ ಕಾಲ ಕೊಡಗು ಸಂಗೀತ ನಾಟಕ ಅಕಾಡೆಮಿಯಲ್ಲಿ ಭರತ ನಾಟ್ಯ ಶಿಕ್ಷಕಿಯಾಗಿ ಹಲವಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದರು. ಆರ್ಥಿಕ ದೃಷ್ಟಿಯಿಂದ ಅಶಕ್ತರಾಗಿದ್ದು, ನೃತ್ಯ ಕಲಿಯುವ ಆಸೆಯಿಂದ ಬಂದವರಿಗೆ ನೀಡಿದ ಊಟ, ವಸತಿ ಸೌಕರ್ಯ ಕಲ್ಪಿಸಿಕೊಡುತ್ತಿದ್ದರು.

ತಮ್ಮ ತಾತನವರು ಕಲಿಸಿದ ನೃತ್ಯ ಪದ್ಧತಿಯಲ್ಲಿ, ಪ್ರಾರಂಭದಲ್ಲಿ ಆರಭಿಯಲ್ಲಿ ಚೂರ್ಣಿಕ, ಮೇಳ ಪ್ರಾಪ್ತಿ, ಜಪಿತ, ನಂತರ ನಾಟ ರಾಗದಲ್ಲಿ ಮಂಗಳ ಆಮೇಲೆ ಕಲಾವಿದೆಯ ಪ್ರವೇಶ, ಪುಷ್ಪಾಂಜಲಿ, ಗೀತೆ, ಅಲರಿಪುಯಿಂದ ಹಿಡಿದು ತಿಲ್ಲಾನದವರೆಗೆ ನೃತ್ಯ ಬಂಧಗಳು. ಇವು ಜೇಜಮ್ಮನವರು ಕಲಿಸುತ್ತಿದ್ದ ವಿಶಿಷ್ಟ ರೀತಿ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

೧೯೬೩ರ ವರ್ಷದಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿಯು ಈ ಮಹಾನ್ ಕಲಾವಿದೆ ಜೇಜಮ್ಮನವರನ್ನು ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿತು. ೧೯೭೦ರಲ್ಲಿ ನಾಡಿನ ಹಿರಿಯ ಸಂಗೀತ ಕಲಾವಿದರಾಗಿದ್ದ ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪನವರು ತಮ್ಮ ಮಾರುತಿ ಮಂದಿರದಲ್ಲಿನ ವಿದ್ವತ್ ಸಭೆಯಲ್ಲಿ ಜೇಜಮ್ಮನವರಿಗೆ ’ಭರತ ನಾಟ್ಯ ಪ್ರವೀಣೆ’ ಬಿರುದು ನೀಡಿ ಮಾಡಿ ಸನ್ಮಾನಿಸಿದರು.

ವಿದಾಯ[ಬದಲಾಯಿಸಿ]

ಈ ಮಹಾನ್ ಕಲಾವಿದೆ ಜೇಜಮ್ಮನವರು ಆಗಸ್ಟ್ ೧೫, ೧೯೮೩ರಂದು ಈ ಲೋಕವನ್ನಗಲಿದರು. ಈ ಮಹಾನ್ ಕಲಾಚೇತನಕ್ಕೆ ನಮ್ಮ ಗೌರವಪೂರ್ವಕ ನಮನಗಳು.

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖಗಳು[ಬದಲಾಯಿಸಿ]