ಮುಹೂರ್ತ ಟ್ರೇಡಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಹೂರ್ತ ಟ್ರೇಡಿಂಗ್ ಅಥವಾ ಮುಹೂರತ್ ಟ್ರೇಡಿಂಗ್ ದೀಪಾವಳಿ ಹಬ್ಬದ ದಿನ ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಡೆಸಲಾಗುವ ವಿಶೇಷ ಶೇರು ವ್ಯವಹಾರ ಚಟುವಟಿಕೆಯಾಗಿದೆ. [೧] ಇದನ್ನು ಸಂಜೆಯ ಸಮಯದಲ್ಲಿ, ನಿಗದಿತ ಸಮಯದವರೆಗೆ ಮಾತ್ರ(ಸಂಜೆ ೬.೧೫ ರಿಂದ ೭.೧೫ ರವರೆಗೆ) ನಡೆಸಲಾಗುತ್ತದೆ. ಭಾರತೀಯ ಹಿಂದೂ ಪರಂಪರೆಯಲ್ಲಿ ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಉತ್ತಮ ಮೌಲ್ಯವುಳ್ಳ ಶೇರುಗಳನ್ನು ಖರೀದಿಸಿದರೆ, ಭವಿಷ್ಯದಲ್ಲಿ ಉತ್ತಮ ಪ್ರತಿಫಲ ದೊರೆಯುತ್ತದೆ ಎಂದು ಹೂಡಿಕೆದಾರರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಶೇರು ಮಾರುಕಟ್ಟೆ ಪ್ರಾಧಿಕಾರ ಸಂಸ್ಥೆ ಸೆಬಿ(ಸ್ಟಾಕ್ ಎಕ್ಸ್‌ಚೇಂಜ್ ಬೋರ್ಡ್ ಅಫ್ ಇಂಡಿಯಾ), ದೀಪಾವಳಿಯ ಸಂದರ್ಭದಲ್ಲಿ ಭಾರತೀಯ ಶೇರು ಮಾರುಕಟ್ಟೆ(ಎನ್‍ಎಸ್‍ಇ) ಮತ್ತು ಮುಂಬೈ ಶೇರು ಮಾರುಕಟ್ಟೆ(ಬಿಎಸ್‌ಇ)ಯಲ್ಲಿ ಶೇರುಗಳನ್ನು ಖರೀದಿಸಲು ಅವಕಾಶ ಕಲ್ಪಿಸುತ್ತದೆ.

ಹಿನ್ನೆಲೆ[ಬದಲಾಯಿಸಿ]

ಭಾರತೀಯ ಹಿಂದೂ ಪದ್ಧತಿಯ ಪ್ರಕಾರ, ಹಬ್ಬದ ಸಂದರ್ಭಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಖರೀದಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಉದಾಹರಣೆಗೆ, ಅಕ್ಷಯ ತದಿಗೆಯ ದಿನ ಚಿನ್ನವನ್ನು ಖರೀದಿಸುತ್ತಾರೆ. ಅದೇ ರೀತಿ ದೀಪಾವಳಿಯಂದು ಚಿನ್ನ, ಹೊಸ ಬಟ್ಟೆ, ಹೊಸ ವಾಹನಗಳನ್ನು ಕೊಂಡುಕೊಳ್ಳುತ್ತಾರೆ.

ಮೇಲ್ನೋಟಕ್ಕೆ ಇದೊಂದು ಸಾಮಾನ್ಯವಾದ ನಂಬಿಕೆ ಎನಿಸಿದರೂ, ಹಬ್ಬದ ಸಂದರ್ಭದಲ್ಲಿ ನಡೆಯುವ ಈ ರೀತಿಯ ಖರೀದಿಯು ಭಾರತದ ಅರ್ಥವ್ಯವಸ್ಥೆಗೆ ಉತ್ತಮ ರೀತಿಯ ಉತ್ತೇಜನ ನೀಡುವುದರಲ್ಲಿ, ಹೊಸ ಚೈತನ್ಯ ನೀಡುವುದರಲ್ಲಿ ಸಂದೇಹವಿಲ್ಲ. ಒಂದು ಉದಾಹರಣೆಯನ್ನು ಗಮನಿಸೋಣ. ೨೦೧೯(ಕೋವಿಡ್-೧೯ ಬರುವ ಮುನ್ನ)ರ ಅಕ್ಷಯ ತದಿಗೆಯಂದು ಭಾರತದಾದ್ಯಂತ ಒಟ್ಟು ೧೦,೦೦೦ ಕೋಟಿ ಮೌಲ್ಯದ ಚಿನ್ನದ ಖರೀದಿ ನಡೆಯಿತು. ಇದರಲ್ಲಿ ಚಿನ್ನದ ಬಿಸ್ಕತ್ತು, ನಾಣ್ಯ ಮತ್ತು ಆಭರಣ ಸೇರಿವೆ. ೨೦೧೯ರ ಸಮಯದಲ್ಲಿ ೧೦ ಗ್ರಾಂ ಚಿನ್ನಕ್ಕೆ ಅಂದಾಜು ರೂ. ೩೨,೭೦೦ ಇತ್ತು. ೨೦೨೦ರ ಅಕ್ಷಯ ತದಿಗೆಯಂದು ೫೦೦ ಕೋಟಿ ಮೌಲ್ಯದ ಚಿನ್ನದ ಖರೀದಿ ನಡೆದಿತ್ತು[೨]. ೨೦೨೧ರ ಧನ ತ್ರಯೋದಶಿ(ನವಂಬರ್ ೨)ಯಂದು ದೇಶದಾದ್ಯಂತ ಅಂದಾಜು ೭೫೦೦ ಕೋಟಿ ಮೌಲ್ಯದ ಚಿನ್ನ ಖರೀದಿಸಲಾಗಿತ್ತು[೩]. ಅದೇ ರೀತಿ ೨೦೨೨ರ ಅಕ್ಷಯ ತದಿಗೆಯ ಸಮಯ, ಚಿನ್ನದ ಬೆಲೆ ೧೦ ಗ್ರಾಮ್‌ಗೆ ಅಂದಾಜು ೫೦,೦೦೦ ರೂ ಇತ್ತು[೪]. ಅಂದು ದೇಶದಾದ್ಯಂತ ಒಟ್ಟು ೧೫,೦೦೦ ಕೋಟಿ ಮೌಲ್ಯದ ಚಿನ್ನದ ಖರೀದಿ ನಡೆಯಿತು.

ಇನ್ನು, ಭಾರತದ ಹಲವಾರು ಸಮುದಾಯಗಳಲ್ಲಿ, ಹೊಸ ವರ್ಷ ಅಂದರೆ ಭಾರತೀಯ ಶಕ ವರ್ಷವಾದ ವಿಕ್ರಮ ಶಕೆ ಮತ್ತು ಮಹಾವೀರ ಶಕೆ ಕಾಲಗಣನೆಯಲ್ಲಿ ಒಂದು ಶಕ ಮುಗಿದು ಹೊಸ ಶಕೆ ಆರಂಭವಾಗುವುದೂ ಸಹ ದೀಪಾವಳಿಯ ಸಂದರ್ಭದಲ್ಲಿಯೇ ಆಗಿದೆ. ಹೊಸ ವರ್ಷದ ಆರಂಭವನ್ನು ಸೂಚಿಸಲು ದೀಪಾವಳಿಯಂದು ಖಾತೆಗಳ ಪುಸ್ತಕಗಳನ್ನು ಲಕ್ಷ್ಮಿ ವಿಗ್ರಹದ ಮುಂದಿಟ್ಟು ಪೂಜಿಸಲಾಗುತ್ತದೆ.

ಈ ರೀತಿಯ ಖರೀದಿ ಪ್ರಕ್ರಿಯೆಯನ್ನು ಶೇರು ಮಾರುಕಟ್ಟೆಗೆ ಅನ್ವಯಿಸಿದಾಗ, ದೇಶದ ಆರ್ಥಿಕ ವಲಯದಲ್ಲಿ ಧನಾತ್ಮಕ ಫಲಿತಾಂಶವನ್ನು ಕಾಣಬಹುದು ಎಂಬ ದೃಷ್ಟಿಯನ್ನಿಟ್ಟುಕೊಂಡು ಮುಹೂರ್ತ ಟ್ರೇಡಿಂಗ್ ಅನ್ನು ಆರಂಭಿಸಲಾಯಿತು.

ಆರಂಭ[ಬದಲಾಯಿಸಿ]

ಮುಹೂರ್ತ ಟ್ರೇಡಿಂಗ್ ಅನ್ನು ಮೊದಲಿಗೆ ಮುಂಬೈ ಶೇರು ಮಾರುಕಟ್ಟೆ(ಬಿಎಸ್‌ಇ)ಯಲ್ಲಿ ೧೯೫೭ನೇ ಇಸವಿಯಲ್ಲಿ ಆರಂಭಿಸಲಾಯಿತು. ನಂತರ ರಾಷ್ಟ್ರೀಯ ಶೇರುಮಾರುಕಟ್ಟೆ(ಎನ್‍ಎಸ್‍ಇ) ೧೯೯೨ನೇ ಇಸವಿಯಲ್ಲಿ ಮುಹೂರ್ತ ಟ್ರೇಡಿಂಗ್ ಅನ್ನು ಜಾರಿಗೆ ತಂದಿತು[೫].

ಸಮಯ, ನೀತಿ ನಿಯಮ ಮತ್ತು ವಿಧಾನ[ಬದಲಾಯಿಸಿ]

ಮುಹೂರ್ತ ಟ್ರೇಡಿಂಗ್‌ ನಡೆಸುವ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ಪ್ರಕಟಿಸಲಾಗುತ್ತದೆ. ಮುಂಬಯಿ ಶೇರು ಮಾರುಕಟ್ಟೆ ಮತ್ತು ಭಾರತೀಯ ಶೇರು ಮಾರುಕಟ್ಟೆಗಳು ತಂತಮ್ಮ ಅಧೀಕೃತ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಕಟಣೆಯನ್ನು ನೀಡುತ್ತವೆ. ಅದೇ ರೀತಿ ಶೇರು ದಲ್ಲಾಳಿಗಳು(ಸ್ಟಾಕ್ ಬ್ರೋಕರ್) ತಮ್ಮ ಗ್ರಾಹಕರಿಗೆ ತಮ್ಮ ಜಾಲತಾಣಗಳ ಮೂಲಕ ಅಥವಾ ಮಿಂಚೆಯ ಮೂಲಕ ಸೂಚನೆಯನ್ನು ಕಳಿಸುತ್ತವೆ. ಸಂಜೆ ೬.೧೫ರಿಂದ ೭.೧೫ವರೆಗೆ ಈ ವಿಶೇಷ ಟ್ರೇಡಿಂಗ್‌‌ಅನ್ನು ನಡೆಸಿದರೂ ಇದಕ್ಕೆ ಸಂಬಂಧಿಸಿದಂತೆ ಹಿನ್ನೆಲೆ ತಯಾರಿಗಳು ಸಂಜೆ ೫ ಗಂಟೆಗೆ ಆರಂಭವಾಗುತ್ತವೆ. ಕೆಲವೊಂದು ಮಾಹಿತಿ ಈ ರೀತಿ ಇವೆ.

  1. ಬ್ಲಾಕ್ ಡೀಲ್ ಸಮಯ (೫.೪೫ರಿಂದ ೬.೦೦ ವರೆಗೆ)- ಎರಡು ಸಂಸ್ಥೆಗಳು ತಮ್ಮ ಶೇರುಗಳನ್ನು ನಿಗದಿತ ದರದಲ್ಲಿ ಮಾರಿಕೊಳ್ಳುವ ಸಮಯ.
  2. ಮಾರುಕಟ್ಟೆ ಪೂರ್ವ ಸಮಯ (೬.೦೦-೬.೦೮ವರೆಗೆ)- ಈ ಸಮಯದಲ್ಲಿ ಹೂಡಿಕೆದಾರರು ತಾವು ಕೊಳ್ಳಬೇಕಾದ ಶೇರಿನ ಮಾಹಿತಿ(ಶೇರನ್ನು ಖರೀದಿಸುವ ಮೊತ್ತ, ಖರೀದಿಯ ಗಾತ್ರ ಇತ್ಯಾದಿ)ಯನ್ನು ನಮೂದಿಸುವ ಸಮಯ.
  3. ಹೊಂದಾಣಿಕಾ ಸಮಯ (೬.೦೮-೬.೧೫ ವರೆಗೆ)- ದಾಖಲಿಸಿದ ಶೇರಿನ ಮಾಹಿತಿಯನ್ನು ಕೊನೆಯ ಕ್ಷಣದ ಬದಲಾವಣೆ ಮಾಡುವ ಸಮಯ.
  4. ವ್ಯವಹಾರ(ಟ್ರೇಡಿಂಗ್) ಸಮಯ (೬.೧೫-೭.೧೫ರವರೆಗೆ)- ಶೇರುಗಳನ್ನು ಕೊಡು-ಕೊಳ್ಳುವ ಸಮಯ.


ಅಂಕಿ ಅಂಶಗಳು[ಬದಲಾಯಿಸಿ]

ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಿನ ಹೂಡಿಕೆದಾರರು ಸಕಾರಾತ್ಮಕ, ಖುಷಿಯ ಮನಸಿನಲ್ಲಿ ಇರುತ್ತಾರೆ. ಮುಹೂರ್ತ ಟ್ರೇಡಿಂಗ್‌ನ ಇಲ್ಲಿಯವರೆಗಿನ ಇತಿಹಾಸದಲ್ಲಿ ಇದನ್ನು ಕಾಣಬಹುದು. ಕಳೆದ ೧೫ ವರ್ಷಗಳ (ಅಂದರೆ ೨೦೦೮-೨೦೨೨ವರೆಗಿನ) ೧೫ ಮುಹೂರ್ತ ಟ್ರೇಡಿಂಗ್‌ಗಳಲ್ಲಿ ೧೨ ವಹಿವಾಟುಗಳು ಧನಾತ್ಮಕವಾಗಿ ಕೊನೆಗೊಂಡಿವೆ. ೨೦೨೧ರ ದೀಪಾವಳಿಯ (ನವೆಂಬರ್ 4) ಮುಹೂರ್ತ ಟ್ರೇಡಿಂಗ್ ಸಮಯದಲ್ಲಿ ಭಾರತೀಯ ಶೇರು ಸೂಚ್ಯಂಕಗಳು ಸುಮಾರು ೦.೪೫% ನಷ್ಟು ಏರಿಕೆ ದಾಖಲಿಸಿದವು. ಅದೇ ರೀತಿ ೨೦೧೯ರ ಮುಹೂರ್ತ ಟ್ರೇಡಿಂಗ್‌ನಲ್ಲಿ ಸೂಚ್ಯಂಕ ೦.೪೯% ನಷ್ಟು ಏರಿಕೆಯನ್ನು ದಾಖಲಿಸಿತ್ತು. ಈ ಹಿಂದೆಯೂ ಸಹ ಇದೇ ಪ್ರವೃತ್ತಿಯನ್ನು ಭಾರತೀಯ ಶೇರು ಮಾರುಕಟ್ಟೆ ಅನುಸರಿಸಿವೆ[೬].

ಎಲ್ಲಾ ಮುಹೂರ್ತ ಟ್ರೇಡಿಂಗ್‌ಗಳು ಧನಾತ್ಮಕವಾಗಿಯೇ ಇರುತ್ತದೆ ಎಂದು ಹೇಳಲಾಗದು. ೨೦೧೨, ೨೦೧೬ ಮತ್ತು ೨೦೧೭ರ ವ್ಯವಹಾರದಲ್ಲಿ ಶೇರು ಸೂಚ್ಯಂಕವು ಕ್ರಮವಾಗಿ ೦.೩೦%, ೦.೦೪% ಮತ್ತು ೦.೬೦%ದಷ್ಟು ಇಳಿಕೆಯನ್ನು ದಾಖಲಿಸಿದ್ದವು[೭].

ಇಲ್ಲಿಯವರೆಗೆ ನಡೆದಿರುವ ಮುಹೂರ್ತ ಟ್ರೇಡಿಂಗ್‌ನಲ್ಲಿ ಅತೀ ಹೆಚ್ಚು ಶೇ. ಏರಿಕೆ ಕಂಡಿದ್ದು ೨೦೦೮ರಲ್ಲಿ. ಆರ್ಥಿಕ ಮಹಾ ಕುಸಿತದ ಉತ್ತುಂಗದ ಸಮಯದಲ್ಲಿಯೂ ಅಂದಾಜು ೬% ದಷ್ಟು ಏರಿಕೆಯನ್ನು ಶೇರು ಸೂಚ್ಯಂಕವು ದಾಖಲಿಸಿತ್ತು[೮][೯].

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Mudgill, Amit. "Muhurat Trading: Will Sensex break the pattern and make a mark?".
  2. [೧]
  3. https://www.businesstoday.in/latest/economy/story/gold-jewellery-sales-worth-rs-7500-crores-on-dhanteras-festival-cait-aijgf-311133-2021-11-02
  4. https://www.indiatoday.in/business/story/jewellery-sales-worth-rs-15-000-crore-recorded-on-akshaya-tritiya-2022-1944950-2022-05-03
  5. https://www.outlookindia.com/business/the-significance-and-trends-of-muhurat-trading-at-bse-nse-on-diwali-news-232208
  6. https://economictimes.indiatimes.com/markets/stocks/news/diwali-muhurat-trading-sensex-performance-history-trading-hours-more/articleshow/87521241.cms?from=mdr
  7. https://economictimes.indiatimes.com/markets/stocks/news/diwali-muhurat-trading-sensex-performance-history-trading-hours-more/articleshow/87521241.cms?from=mdr
  8. https://economictimes.indiatimes.com/markets/stocks/news/diwali-muhurat-trading-sensex-performance-history-trading-hours-more/articleshow/87521241.cms?from=mdr
  9. https://www.livemint.com/market/stock-market-news/diwali-muhurat-trading-how-sensex-has-fared-in-past-10-years-11572169396186.html