ಮುಳಿಯ ತಿಮ್ಮಪ್ಪಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಳಿಯ ತಿಮ್ಮಪ್ಪಯ್ಯ
ಜನನಮಾರ್ಚ್ 3, 1888
ವಿಟ್ಲ, ಬಂಟವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮರಣಜನವರಿ 16, 1950
ಮದ್ರಾಸ್
ವೃತ್ತಿಕವಿ, ನಾಟಕಕಾರ, ಕಾದಂಬರಿಕಾರ, ಸಂಶೋಧಕ, ಕನ್ನಡ ಪಂಡಿತ
ರಾಷ್ಟ್ರೀಯತೆಭಾರತೀಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಕಾವ್ಯ, ನಾಟಕ, ಕಾದಂಬರಿ, ಯಕ್ಷಗಾನ ಪ್ರಸಂಗ
ವಿಷಯಕನ್ನಡ ,ಪಂಪ, ಕವಿರಾಜಮಾರ್ಗ
ಸಾಹಿತ್ಯ ಚಳುವಳಿನವೋದಯ
ಬಾಳ ಸಂಗಾತಿದೇವಕಿ

ಅಭಿನವ ಆಂಡಯ್ಯ , ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಕನ್ನಡದ ಹುಚ್ಚ, ಕ್ಷಮಿಸು ನಮೋ ನಮೋ, ಕನ್ನಡದ ತಿರುಳನ್ನು ಉಂಡು ಉಣಿಸಿದ ನಮ್ಮ ಮುಳಿಯದ ಪಂಡಿತವಕ್ಕಿ. ಪಂಪ ಮಹಾಕವಿಯನ್ನು ಕುರಿತು ಅಧಿಕಾರವಾಣಿಯಿಂದ ನುಡಿಯಬಲ್ಲ ಕೆಲವೇ ವಿದ್ವಾಂಸರಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರು ಅಗ್ರಗಣ್ಯರು. ನಾಡೋಜ ಪಂಪ ಅವರ ಪ್ರಸಿದ್ಧ ಕೃತಿ. 1941ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಪಂಪನ ಸಹಸ್ರ ಸಾಂವತ್ಸರಿಕೋತ್ಸವದ ಪ್ರತಿಷ್ಠಿತ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಮೊತ್ತಮೊದಲ ಬಾರಿಗೆ ಕವಿರಾಜ ಮಾರ್ಗ ವಿವೇಕವನ್ನು ಬರೆದವನು ನೃಪತುಂಗನಲ್ಲ, ಜಯಾಳ್ವನೆಂದು ಕಾವ್ಯದ ಆಂತರಿಕ ಸಾಕ್ಷ್ಯಗಳಿಂದಲೇ ತೋರಿಸಿಕೊಟ್ಟವರು ತಿಮ್ಮಪ್ಪಯ್ಯನವರು. 1914–1919ರವರೆಗೆ ಕನ್ನಡ ಕೋಗಿಲೆ ಎನ್ನುವ ಮಾಸಪತ್ರಿಕೆ ನಡೆಸಿದ್ದ ಅವರು, 1931ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.

ಜೀವನ[ಬದಲಾಯಿಸಿ]

ಜನನ[ಬದಲಾಯಿಸಿ]

ಮುಳಿಯ ತಿಮ್ಮಪ್ಪಯ್ಯ ನವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ವಿಟ್ಲ ಗ್ರಾಮದಲ್ಲಿ ೧೮೮೮ ಮಾರ್ಚ ೩ರಂದು ಹುಟ್ಟಿದರು. ತಂದೆ ಕೇಶವ ಭಟ್ಟ; ತಾಯಿ ಮೂಕಾಂಬಿಕಾ.

ವಿದ್ಯಾಭ್ಯಾಸ[ಬದಲಾಯಿಸಿ]

ಬಡತನದ ಪರಿಸ್ಥಿತಿಯಿಂದಾಗಿ ೪ನೆಯ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ತಿಮ್ಮಪ್ಪಯ್ಯನವರು ಮನೆಯಲ್ಲಿಯೇ ಅಲ್ಪಸ್ವಲ್ಪ ಸಂಸ್ಕೃತ ಹಾಗೂ ಸಂಗೀತ ಕಲಿತರು. ೧೯೦೬ರಲ್ಲಿ ಯಾರಿಗೂ ಹೇಳದೆ ತಿರುವನಂತಪುರಕ್ಕೆ, ಅಲ್ಲಿಂದ ಮೈಸೂರಿಗೆ ತೆರಳಿದರು. ವಾರಾನ್ನದ ಮೂಲಕವೇ ಜೀವನ ಸಾಗಿಸುತ್ತ ವಾಸುದೇವಾಚಾರ್ಯ ಎನ್ನುವವರಿಂದ ಸಂಗೀತ ಶಿಕ್ಷಣ ಪಡೆದರು.೧೯೧೦ರಲ್ಲಿ ಮನೆಗೆ ಮರಳಿದರು.

ವೃತ್ತಿ ಜೀವನ[ಬದಲಾಯಿಸಿ]

ರಾಮಾಯಣ, ಮಹಾಭಾರತ ಮೊದಲಾದ ಕಾವ್ಯಗಳನ್ನು ಓದುವದು, ದಾಸರ ಪದಗಳನ್ನು ಹಾಡುವದು ಮಾಡುತ್ತ ತಿಮ್ಮಪ್ಪಯ್ಯನವರು ಸಂಸಾರ ಸಾಗಿಸಲಾರಂಭಿಸಿದರು. ಹಾರ್ಮೋನಿಯಮ್ ಶ್ರುತಿಯೊಂದಿಗೆ ಗಮಕ ಪದ್ಧತಿಯಲ್ಲಿ ಹಾಡುವದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸಿದವರು ಇವರೇ ಎಂದು ಹೇಳಬಹುದು. ಅಮ್ಮೆಂಬಳ ಶ್ರೀನಿವಾಸ ಪೈಗಳ ಎದುರು ಲಕ್ಷ್ಮೀಶಜೈಮಿನಿ ಭಾರತ ವಾಚನ ಮಾಡಿದಾಗ ಸಂತೋಷಪಟ್ಟ ಪೈಗಳು ತಿಮ್ಮಪ್ಪಯ್ಯನವರನ್ನು ಕೆನರಾ ಹೈಸ್ಕೂಲಿನ ಕನ್ನಡ ಪಂಡಿತ ಹುದ್ದೆಗೆ ನೇಮಿಸಿದರು. ೧೯೧೮ರಲ್ಲಿ ತಿಮ್ಮಪ್ಪಯ್ಯನವರು ಸೇಂಟ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಪಂಡಿತರೆಂದು ನೇಮಕವಾದರು. ೧೯೪೮ರಲ್ಲಿ ನಿವೃತ್ತರಾದರು.

ಕೌಟಂಬಿಕ ಜೀವನ[ಬದಲಾಯಿಸಿ]

೧೯೧೬ರಲ್ಲಿ ತಿಮ್ಮಪ್ಪಯ್ಯನವರ ಮದುವೆ ಕರೋಪಾಡಿ ಗ್ರಾಮದ ಮಹಾಬಲ ಭಟ್ಟರ ಮಗಳು ದೇವಕಿಯೊಡನೆ ಜರುಗಿತು. ಇವರಿಗೆ ನಾಲ್ಕು ಗಂಡು ಮಕ್ಕಳು ಹಾಗು ಇಬ್ಬರು ಹೆಣ್ಣು ಮಕ್ಕಳು. ತಿಮ್ಮಪ್ಪಯ್ಯನವರ ತಾಯಿ ೧೯೧೯ರಲ್ಲಿ ನಿಧನರಾದರು; ಹೆಂಡತಿ ೧೯೪೫ರಲ್ಲಿ ತೀರಿಕೊಂಡರು.

ಮರಣ[ಬದಲಾಯಿಸಿ]

ಮುಳಿಯ ತಿಮ್ಮಪ್ಪಯ್ಯನವರು ೧೯೫೦ ಜನೆವರಿ ೧೬ರಂದು ಮದ್ರಾಸಿನಲ್ಲಿ ಹೃದ್ರೋಗದಿಂದ ತೀರಿಕೊಂಡರು.

ವ್ಯಕ್ತಿತ್ವ[ಬದಲಾಯಿಸಿ]

ಮುಳಿಯರು ಎಷ್ಟು ಸಾತ್ವಿಕ ವ್ಯಕ್ತಿಗಳಾಗಿದ್ದರು ಎನ್ನುವುದಕ್ಕೆ ಅವರನ್ನು ಕುರಿತು ದಂತಕತೆಗಳು ಹುಟ್ಟಿಕೊಂಡಿವೆ. ಅವರನ್ನು ಅವರ ಸ್ನೇಹಿತರೆಲ್ಲರೂ ‘ಮುಳಿಯ ತಿಮ್ಮಪ್ಪಯ್ಯ’ ಎನ್ನುವುದಕ್ಕೆ ಬದಲು ‘ತಿಮ್ಮಪ್ಪಯ್ಯ ಮುಳಿಯ’ (ತಿಮ್ಮಪ್ಪಯ್ಯ ಕೋಪಿಸಿಕೊಳ್ಳುವುದಿಲ್ಲ.) ಎಂದೇ ಕರೆಯುತ್ತಿದ್ದರಂತೆ.

ಕೊಡಲಿ (ನೀಡಲಿ) ಎನ್ನುವ ಅರ್ಥದಲ್ಲಿ ಆ ಶಬ್ದವು ಕುಠಾರಪ್ರಾಯವಾದ್ದರಿಂದ ‘ಕೊಡಲಿ’ ಎನ್ನುವ ಶಬ್ದವನ್ನೇ ಮುಳಿಯರು ಪ್ರಯೋಗಿಸುತ್ತಿರಲಿಲ್ಲವಂತೆ. ಹಾಗೆಯೇ ಅವರಿಗೆ ವಿಪರೀತ ಕೋಪ ಬಂದಾಗ ‘ದುರ್ಬುದ್ಧಿ’ ಶಬ್ದವನ್ನು ಬಳಸುತ್ತಿದ್ದರಂತೆ. ಅದು ಅವರು ಪ್ರಯೋಗಿಸುತ್ತಿದ್ದ ಅತ್ಯಂತ ಕೆಟ್ಟ ಬೈಗುಳ!

ಸಾಹಿತ್ಯಿಕ ಸಾಧನೆ[ಬದಲಾಯಿಸಿ]

ಮುಳಿಯರು ಒಟ್ಟು 22 ಕೃತಿಗಳನ್ನು ರಚಿಸಿರುತ್ತಾರೆ. ತಿಮ್ಮಪ್ಪಯ್ಯನವರು ೧೯೧೦ಕ್ಕೂ ಮೊದಲೇ ಸೂರ್ಯಕಾಂತಿ ಕಲ್ಯಾಣವೆಂಬ ಯಕ್ಷಗಾನ ಪ್ರಸಂಗವನ್ನೂ, ಅಜೋದಯವೆಂಬ ವಾರ್ಧಕ ಷಟ್ಪದಿಯನ್ನೂ ರಚಿಸಿದ್ದರು. ಮೊತ್ತಮೊದಲ ಬಾರಿಗೆ ಕವಿರಾಜ ಮಾರ್ಗ ವಿವೇಕವನ್ನು ಬರೆದವನು ನೃಪತುಂಗನಲ್ಲ, ಜಯಾಳ್ವನೆಂದು ಕಾವ್ಯದ ಆಂತರಿಕ ಸಾಕ್ಷ್ಯಗಳಿಂದಲೇ ತೋರಿಸಿಕೊಟ್ಟವರು ತಿಮ್ಮಪ್ಪಯ್ಯನವರು. ಅವರ ಬೃಹತ್ ಗ್ರಂಥ ನಾಡೋಜ ಪಂಪದಿಂದಾಗಿ ಅವರು ಖ್ಯಾತರಾದರು. ೧೯೧೪ರಲ್ಲಿ ಪೇಜಾವರ ಭೋಜರಾಯರೊಂದಿಗೆ ಕನ್ನಡ ಕೋಗಿಲೆ ಎನ್ನುವ ಸಾಹಿತ್ಯಿಕ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಹಣದ ತೊಂದರೆಯಿಂದಾಗಿ ಈ ಪತ್ರಿಕೆಯನ್ನು ೧೯೧೯ರಲ್ಲಿ ನಿಲ್ಲಿಸಬೇಕಾಯಿತು.

ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  1. ಚಂದ್ರಾವಲೀ ವಿಲಾಸಂ (ಹಳಗನ್ನಡ ಗದ್ಯಕಾವ್ಯ)
  2. ಅಜೋದಯ
  3. ಸೊಬಗಿನ ಬಳ್ಳಿ (ಕಾವ್ಯ)

ನಾಟಕ[ಬದಲಾಯಿಸಿ]

  1. ಹಗಲಿರುಳು (ನಾಟಕ)

ಯಕ್ಷಗಾನ ಪ್ರಸಂಗ[ಬದಲಾಯಿಸಿ]

  1. ಸೂರ್ಯಕಾಂತಿ ಕಲ್ಯಾಣ

ಕಾದಂಬರಿ[ಬದಲಾಯಿಸಿ]

  1. ಪಶ್ಚಾತ್ತಾಪ (ಸಾಮಾಜಿಕ ಕಾದಂಬರಿ)
  2. ಪ್ರೇಮಪಾಶ (ಸಾಮಾಜಿಕ ಕಾದಂಬರಿ)
  3. ವೀರ ಬಂಕೆಯ (ಐತಿಹಾಸಿಕ ಕಾದಂಬರಿ)

ಲಕ್ಷಣ ಗ್ರಂಥ[ಬದಲಾಯಿಸಿ]

  1. ಸಾಹಿತ್ಯ ಸರೋವರ (ಲಕ್ಷಣ ಗ್ರಂಥ)

ಸಂಶೋಧನೆ[ಬದಲಾಯಿಸಿ]

  1. ನಾಡೋಜ ಪಂಪ (ಸಂಶೋಧನೆ)

ಸಂಪಾದನೆ[ಬದಲಾಯಿಸಿ]

  1. ಆದಿಪುರಾಣ ಸಂಗ್ರಹ
  2. ಸಮಸ್ತ ಭಾರತ ಸಾರ
  3. ಕವಿರಾಜ ಮಾರ್ಗ ವಿವೇಕ (ಭಾಗ 1, 2)
  4. ಪಾರ್ತಿ ಸುಬ್ಬ

ಇತರೆ[ಬದಲಾಯಿಸಿ]

  1. ತ್ರಿಪುರದಾಹ
  2. ನಡತೆಯ ನಾಡು
  3. ಬಡ ಹುಡುಗಿ
  4. ನವನೀತ ರಾಮಾಯಣ
  5. ಕನ್ನಡ ನಾಡೂ ದೇಸೀ ಸಾಹಿತ್ಯವೂ

ಪುರಸ್ಕಾರ[ಬದಲಾಯಿಸಿ]

  1. ೧೯೩೧ರಲ್ಲಿ ಕಾರವಾರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಳಿಯ ತಿಮ್ಮಪ್ಪಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಲಾಯಿತು.
  2. ೧೯೪೧ರಲ್ಲಿ ಲಕ್ಷ್ಮೇಶ್ವರದಲ್ಲಿ ಜರುಗಿದ ಪಂಪನ ಸಹಸ್ರ ಸಾಂವತ್ಸರಿಕೋತ್ಸವಕ್ಕೆ ತಿಮ್ಮಪ್ಪಯ್ಯನವರು ಅಧ್ಯಕ್ಷರಾಗಿದ್ದರು.

[೧]

ಉಲ್ಲೇಖ[ಬದಲಾಯಿಸಿ]

  1. 05/06/2016 www.prajavani.net/article/ಮುಳಿಯರ-‘ಚಂದ್ರಾವಲಿ-ವಿಲಾಸಂ’