ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಗಾರು ಮಹಾಗಣಪತಿ ದೇವಸ್ಥಾನ

ಈ ದೇವಸ್ಥಾನವು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಸುಮಾರು ೪೧ ಕಿಲೋಮೀಟರ್ ದೂರದಲ್ಲಿ ಬಾರಂಗಿ ಹೋಬಳಿಯ ಕಂಚಿಕೈ ಎಂಬ ಗ್ರಾಮದಲ್ಲಿ ಶರಾವತಿ ನದಿಯ ದಂಡೆಯ ಮೇಲೆ ಇರುವುದು. ಈ ಸ್ಥಳವನ್ನು ತಲುಪಲು ರಸ್ತೆ ಸಾರಿಗೆ ಅಥವಾ ಜಲ ಸಾರಿಗೆಯನ್ನು ಉಪಯೋಗಿಸಬಹುದು. ಮೊದಲು ಸಾಗರದಿಂದ ಕಾರ್ಗಲ್ ಪಟ್ಟಣವನ್ನು ತಲುಪಬೇಕು.ನಂತರ, ಕಾರ್ಗಲ್ನಿಂದ ಭಟ್ಕಳ ಹೋಗುವ ರಸ್ತೆಯಲ್ಲಿ ಅರಳಗೋಡು ಎಂಬ ಊರಿನಲ್ಲಿ ಎಡಕ್ಕೆ ತಿರುಗಿ ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ ಕಂಚಿಕೈ ಮಹಾದ್ವಾರದ ಮೂಲಕ ದೇವಸ್ಥಾನ ತಲುಪಬಹುದು.ಇದು ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಸುಮಾರು ೨೧ ಕಿಮೀ ದೂರದಲ್ಲಿದೆ ಹಾಗೂ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ಜಲ ಸಾರಿಗೆ ಮೂಲಕ ಬಂದರೆ ಸುಮಾರು ೨೧ ಕಿಮೀ ಆಗುತ್ತದೆ.

ದೇವಾಲಯದ ದಂತಕಥೆ[ಬದಲಾಯಿಸಿ]

ಹಿಂದೆ ಲಿಂಗನಮಕ್ಕಿ ಜಲಾಶಯ ಆಗುವುದಕ್ಕೂ ಮುಂಚೆ ಕಂಚಿಕೈ ಎಂಬ ಊರಿನ ಸುತ್ತ ಮುತ್ತ ಬಹಳ ಊರು ಇದ್ದು, ಕಂಚಿಕೈ ದಾರಿಹೋಕರಿಗೆ ಹಾಗೂ ಮೊದಲು ಇದ್ದ ಬಹುಃಷ ಎಣ್ಣೆ ಹೊಳೆ ಎಂಬ ನದಿಯ ಮೇಲೆ ಜಲಸಾರಿಗೆ ಅಂದರೆ ದೋಣಿ ಪಯಣ ಇತ್ತು.ಈ ಪಯಣ ಕಂಚಿಕೈ ಹತ್ತಿರದ ಮೆಣಸಗಾರು ಊರಿನಿಂದ ಆರಂಭವಾಗಿ ತಾಳಗುಪ್ಪ ಹೋಗಲು ಬಹಳ ಹತ್ತಿರದ ದಾರಿಯಾಗಿತ್ತು.ಊರಿನ ಸುತ್ತ ಮುತ್ತ ಎಲ್ಲರೂ ಅಡಿಕೆ, ಬಾಳೆ ತೋಟ ಹಾಗೂ ಗದ್ದೆಗಳನ್ನು ಹೊಂದಿ ವ್ಯವಸಾಯ ಮಾಡುತ್ತಿದ್ದರು.ವ್ಯವಸಾಯಕ್ಕೆ ಮುಖ್ಯವಾಗಿ ಗೊಬ್ಬರಕ್ಕಾಗಿ ಆದರೂ ಹಸುಗಳನ್ನು ಸಾಕಲೇ ಬೇಕಾದ ಅನಿವಾರ್ಯತೆ ಪ್ರತಿಯೊಬ್ಬರಿಗೂ ಇತ್ತು.ಬಹಳ ಹಿಂದಿನವರೆಗೂ ಈ ಹಸುಗಳನ್ನು ಕಾಯ್ದುಕೊಂಡು ಅವು ಅಡವಿಯೊಳಗೆ ಉಳಿದು ಕಾಡು ಮೃಗಗಳ ಪಾಲಾಗದಂತೆ ಕಾಪಾಡಲು ಪ್ರತೀ ಊರಿನವರು ಗೋವುಗಳನ್ನು ಕಾಯುವುದಕ್ಕಾಗಿ ಗೋವಳನನ್ನು ನೇಮಿಸುವುದು ಒಂದು ಪದ್ಧತಿ.ಕಂಚಿಕೈ ದೇವಸ್ಥಾನ ಇರುವ ಜಾಗ ಹುಲ್ಲುಗಾವಲಿನ ಗುಡ್ಡದ ಬುಡ. ಈ ಹುಲ್ಲುಗಾವಲಿನಲ್ಲಿ ಗೋವಳ ಪ್ರತೀದಿನ ಹಸುಗಳನ್ನು ಮೇಯಿಸುತ್ತ ಹತ್ತಿರ ಇರುವ ಹೊಳೆಯಲ್ಲಿ ಹಸುಗಳಿಗೆ ನೀರು ಕುಡಿಸಿ ಸಂಜೆ ಸಮಯದಲ್ಲಿ ಹಸುಗಳನ್ನು ಮನೆಗೆ ಕರೆತರುತ್ತಿದ್ದ. ಹೀಗೆ ಪ್ರತೀ ದಿನವೂ ಹುಲ್ಲುಗಾವಲಿನಲ್ಲಿ ಹಸು ಮೇಯಿಸುತ್ತರುವಾಗ ಒಂದು ಹಸು ಪ್ರತೀದಿನ ಮರದ ಹಿಂದೆ ನಿಂತು ಬಹಳ ಸಮಯದ ನಂತರ ಅಲ್ಲಿಂದ ಬರುತ್ತಿತ್ತು.ಪ್ರತೀದಿನವೂ ಆ ಹಸು ಅಲ್ಲಿಗೆ ಹೋಗಿ ಬರುತ್ತಿದ್ದುದನ್ನು ನೋಡಿ ಗೋವಳನಿಗೆ ಅನುಮಾನ ಬರಲಾಗಿ ಅಲ್ಲಿ ಏನಾದರೂ ನೀರಡಿಕೆ ತೀರಿಸಿಕೊಳ್ಳಲು ನೀರಿನ ಕೆರೆ ಇರಬಹುದೇ ಎಂಬ ಸಂದೇಹದೊಡನೆ ಆ ಹಸುವನ್ನು ಹಿಂಬಾಲಿಸಿದ. ಆ ಹಸು ಅಲ್ಲಿ ಏನನ್ನೂ ಹುಡುಕದೇ ಅಲ್ಲಿರುವ ಶಿಲೆಯ ಮೇಲೆ ಹಾಲು ಸುರಿಸುವುದನ್ನು ಕಂಡ. ಇದು ಆಶ್ಚರ್ಯ ಎನಿಸಿದರೂ ಬಹುಶಃ ಹಾಲು ತಾನಾಗಿಯೇ ಬಿದ್ದಿರಬಹುದು ಎಂಬ ಅನುಮಾನದೊಡನೆ ನೋಡಿಯೂ ನೋಡದಂತೆ ಬಂದ.ಆದರೆ ಹಸು ಮಾತ್ರ ದಿನವೂ ಹಾಲು ಸುರಿಸಿ ಬರುತ್ತಲೇ ಇತ್ತು.ನಾಲ್ಕಾರು ದಿನ ಈ ಘಟನೆಯನ್ನು ನೋಡಿದ ಗೋವಳ ಇದನ್ನು ಊರಿನವರಿಗೆ ತಿಳಿಸಿ ಜನರನ್ನು ಕರೆತಂದು ನೋಡಿದಾಗ ಅಲ್ಲಿ ನೆರೆದವರಿಗೆ ಆ ಶಿಲೆ ಗಣೇಶನ ಮುಖದ ಆಕಾರ ಕಂಡಿತಲ್ಲದೇ ಇದು ಲಿಂಗ ರೂಪ ಗಣಪ ಎಂಬ ಉದ್ಗಾರ ಹೊರಟು, ಆ ಜಾಗವನ್ನು ಸ್ವಚ್ಛ ಗೊಳಿಸಿ,ಸಣ್ದದಾದ ಗುಡಿ ಕಟ್ಟಿ, ಪ್ರಾಣಪ್ರತಿಷ್ಠೆ ಮಾಡಿದರು.ಕಂಚಿಕೈ ಊರಿನಲ್ಲಿ ಇರುವ ಈ ದೇವಸ್ಥಾನಕ್ಕೆ ಮಾಗಾರು ಎಂಬ ಹೆಸರು ಸೇರಿಕೊಂಡಿರುವುದಕ್ಕೆ ಸ್ಥಳಿಯರು ಎರಡು ಕಾರಣ ಊಹಿಸುತ್ತಾರೆ. ಮಾಗಾರು ಎಂದರೆ ಮಾತೆಯ ಜೊತೆಗೂಡಿದವನು. ಇನ್ನೊಂದು ಕಥೆಯ ಪ್ರಕಾರ ಪಕ್ಕದ ಗ್ರಾಮವಾದ ಹಾಂಸೆಯ ಬಳಿ ಮಾಗಾರು ಎಂಬ ಊರು ಇತ್ತು. ಸದರೀ ಸ್ಥಳದಲ್ಲಿ ಋಷಿ ಮುನಿಗಳಿಗೆ ಸೇರೀದ ಶ್ರೀ ಮಾಗಾರು ಮಠ ಇತ್ತು.ಸದರೀ ಮಠದಲ್ಲಿ ಕೆಲವು ಶತಮಾನಗಳ ಹಿಂದೆ ಉದ್ಭವ ಗಣಪತಿ ದಕ್ಷಿಣಾಭಿಮುಖಿ ದೇವಾಲಯವಿತ್ತು.ಪ್ರಾಕೃತಿಕ ಮತ್ತು ಇನ್ನಿತರೆ ಕಾರಣಗಳಿಂದ ಅದು ಭಗ್ನ ಆಗುವ ವೇಳೆಗೆ ಪಕ್ಕದ ಕಂಚಿಕೈಯಲ್ಲಿ ಗಣಪತಿ ದೇವರು ಉದ್ಭವ ಆಗುವುದಕ್ಕೂ ಕಾಕತಾಳಿಯವಾಗಿ ಹೊಂದಾಣಿಕೆ ಆದ್ದರಿಂದ ಹೊಸದಾಗಿ ಉದ್ಭವ ಆಗಿರುವ ಸ್ಥಳವೇ ಮಾಗಾರು ಶ್ರೀ ಮಹಾಗಣಪತಿ ಎಂದು ಕರೆಯಲಾಗಿದೆ ಎಂಬುದು ತಿಳಿದವರ ಮಾತು.

ದೇವಾಲಯದ ಇತಿಹಾಸ[ಬದಲಾಯಿಸಿ]

ದೇವಾಲಯದಲ್ಲಿನ ದೇವತೆಗಳು[ಬದಲಾಯಿಸಿ]

ಶ್ರೀ ಸೀತಾ,ಲಕ್ಷ್ಮಣ,ಹನುಮ ಸಹಿತ ಶ್ರೀರಾಮಚಂದ್ರ ದೇವರು ಇದು ಮಾಗಾರು ಮಠದಿಂದ ಬಂದಿದೆಎನ್ನಲಾಗಿದೆ.ಶ್ರೀರಾಮದೇವರಿಗೆ ನಿತ್ಯಾರ್ಚನೆ ಮತ್ತು ವಾರ್ಷಿಕ 9 ದಿನಗಳ ರಾಮೋತ್ಸವ, ಹಾಗೂ ವಾರ್ಷಿಕ ಅನ್ನಸಂತರ್ಪಣೆ ನಡೆಯುತ್ತದೆ.

ಈ ಸನ್ನಿಧಾನದ ಇನ್ನೊಂದು ಪ್ರಮುಖ ಶಕ್ತಿ ದೇವತೆ ಶ್ರೀ ರಾಜರಾಜೇಶ್ವರಿ ಅಮ್ಮನವರು.ಶ್ರೀದೇವಿ ಮೂಲತಃ ಒಂದು ಕುಟುಂಬದ ಆರಾಧ್ಯ ದೇವಿಯಾಗಿದ್ದು ಕಾಲಾನಂತರ ಶ್ರೀ ಸನ್ನಿಧಾನ ಸೇರಿ ಶಕ್ತಿ ದೇವತೆ ಯಾಗಿ ಕಂಗೊಳಿಸುತ್ತಿದ್ದಾಳೆ.ಶ್ರೀದೇವಿಗೂ ಸಹ ನಿತ್ಯಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಆರಾಧನೆ[ಬದಲಾಯಿಸಿ]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]