ಭೂತಾರಾಧನೆಯಲ್ಲಿ ನ್ಯಾಯಪದ್ದತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂತಾರಾಧನೆಯ ಪರಿಕಲ್ಪನೆ : ಭೂತಾರಾಧನೆಯನ್ನು ದೈವಾರಾಧನೆಯೆಂದು ಕರೆಯುತ್ತಾರೆ. ಭೂತಾರಾಧನೆ ಎಂಬುದು ತುಳುನಾಡಿನ ರಾಜಕೀಯ ಆಡಳಿತ ವ್ಯವಸ್ಥೆಯ ಐತಿಹಾಸಿಕ ಸಂಬಂಧವನ್ನು ಹೊಂದಿದ್ದು, ಅದು ತುಳು ಜನಪದರ ಸಾಂಸ್ಕೃತಿಕ ಬದುಕು. ಜನಪದರಲ್ಲಿ ಆರಾಧನೆಯನ್ನು ನಡೆಸುವವರು ಮತ್ತು ದೈವವನ್ನು ಕಟ್ಟುವವರು ಎಂಬ ಎರಡು ವರ್ಗವನ್ನು ಕಾಣಬಹುದು. ನಡೆಸುವವರು ಭೂತ ಸ್ಥಾನಕ್ಕೆ ಸಂಬಂಧಿಸಿದ, ಜಾಗಕ್ಕೆ ಸಂಬಂಧಿಸಿದ ಅಧಿಕಾರವುಳ್ಳÀವರು. ಅವರು ಮನೆಯ/ಗುತ್ತಿನ ಯಜಮಾನ, ಊರ/ಗ್ರಾಮದ ಮುಕ್ತೇಸರ ಅಥವಾ ಸೀಮೆಯ ಅರಸರಾಗಿರುತ್ತಾರೆ. ನಮ್ಮ ಸಾಂಸ್ಕøತಿಕ ಲೋಕದಲ್ಲಿ ಪರವ, ಪಂಬದ, ಪಾಣಾರ ನಲಿಕೆ(ಅಜಲಾಯ)ಯೆಂದು ಕರೆವ ತುಳುನಾಡಿನಾದ್ಯಂತ ಪ್ರಚಲಿತದಲ್ಲಿರುವ ಕೆಳವರ್ಗದವರು ಆರಾಧನೆಯನ್ನು ದೈವವನ್ನು ಕಟ್ಟುವವರು ಹಾಗೂ ಭೂತ ಮತ್ತು ಯಜಮಾನರ ನಡುವೆ ಸಂಪರ್ಕ ಸೃಷ್ಟಿಸುವ ಭೂತ ಕಟ್ಟುವವರು. ಹೀಗೆ ನಡೆಸುವವರು(ಯಜಮಾನ)-ಭೂತ(ದೈವಾರಾಧನೆಯಲ್ಲಿ ಒಳಗೊಳ್ಳುವ ಯಾವುದೇ ಭೂತ)- ದೈವವನ್ನು ಕಟ್ಟುವವರು (ಪರವ, ಪಂಬದ, ಪಾಣಾರ ನಲಿಕೆ/ಅಜಲಾಯ) ಈ ತ್ರಿವಳಿ ಸಂಗಮದಲ್ಲಿ ನಡೆಯುವ ಒಂದು ಸಾಂಸ್ಕøತಿಕ ಅಭಿವ್ಯಕ್ತಿಯೇ ದೈವಾರಾಧನೆ.

ದೈವಾರಾಧನೆಯನ್ನು ಜಾಗೆ, ಊರು, ಮಾಗಣೆ ಹೀಗೆ ಆಯಾ ಸಂದರ್ಭಗಳಲ್ಲಿ ನಡೆವ ಭೂತಗಳಿಗೆ ಅನುಸರಿಸಿ ವಿಂಗಡಿಸಿಕೊಳ್ಳಬಹುದು. ನಡೆಸುವವರ ಜಾತಿಗೆ ಅನುಸಾರವಾಗಿಯೂ ಭೂತಗಳ ಆರಾಧನೆ, ಆಚರಣೆ, ಕಾರಣಿಕ ಮತ್ತು ಪ್ರಸರಣ ವ್ಯತ್ಯಾಸಗೊಳ್ಳುವುದನ್ನು ವಿದ್ವಾಂಸರಾದ ವಿವೇಕ ರೈ ಅವರ ತುಳು ಜಾನಪದ ಸಾಹಿತ್ಯ, ಚಿನ್ನಪ್ಪ ಗೌಡರ ಭೂತಾರಾಧನೆ ಜಾನಪದೀಯ ಅಧ್ಯಯನ, ಅಮೃತ ಸೋಮೇಶ್ವರರ ತುಳು ಜಾನಪದ ಕೆಲವು ನೋಟಗಳು, ಗಣೇಶ ಅಮೀನರ ಮಾಯ ಮತ್ತು ಜೋಗ ಮುಂತಾದ ಗ್ರಂಥಗಳಲ್ಲಿ ಚರ್ಚಿಸಿದ್ದಾರೆ.

ನ್ಯಾಯ-ಸತ್ಯ-ದಾನ-ಧರ್ಮ ಪರಿಕಲ್ಪನೆ[ಬದಲಾಯಿಸಿ]

ಆಡಳಿತ ವ್ಯವಸ್ಥೆಯ ರಾಜಕೀಯ ಅಂಗವು ನ್ಯಾಯಾಂಗ ಪದ್ಧತಿಯಾಗಿ ಭೂತಾರಾಧನೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಶ್ರೇಣೀಕರಣ ವ್ಯವಸ್ಥೆಯ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ-ಪಂಚಮರೆಂಬ ಐದು ವರ್ಗದÀಲ್ಲಿ ಮುಟ್ಟಿಸಿಕೊಳ್ಳದ ಬ್ರಾಹ್ಮಣ ಆಳುವ ವರ್ಗ ನಡೆಸುವವನ ಹಿಂದೆ ಇರುತ್ತಾನೆ. ವಾಸ್ತವದಲ್ಲಿ ಮುಟ್ಟಬಾರದೆಂಬ ಸ್ಥಾನದಲ್ಲಿರುವ ನಡೆಸಿಕೊಡುವ ದೈವವನ್ನು ಕಟ್ಟುವವರು ದೈವಗಳ ಪಾತ್ರಿಗಳು ತಾವೇ ದೈವ/ಭೂತÀವೆಂದು ಹೇಳುತ್ತಾ ಬಂದಿದ್ದಾರೆ. ತಮ್ಮನ್ನು ತಾವೇ ಭೂತವೆಂದು ಕರೆಸಿಕೊಳ್ಳಲು ಹೆಮ್ಮೆಪಡುತ್ತಾರೆ. ಅವರು ಸಿರಿಮುಡಿ ಕಟ್ಟಿಕೊಂಡು, ಕಾಲಿಗೆ ಚಪ್ಪಲಿ ಹಾಕದೆ, ಸೂತಕಗಳಿರುವ ಮನೆ, ಕುಟುಂಬದವರೊಂದಿಗೆ ಸಂಪರ್ಕ ಬಿಡುತ್ತಾರೆ. ನಡೆಸುವವರು ಮತ್ತು ದೈವವನ್ನು ಕಟ್ಟುವವರು ದೈವಾರಾಧನೆಯ ಸಂದರ್ಭದಲ್ಲಿ ಶುದ್ಧಾಚರಣೆಯಲ್ಲಿದ್ದು, ನಡಾವಳಿಯ ನ್ಯಾಯ-ಸತ್ಯ-ದಾನ-ಧರ್ಮದ ಸೂತ್ರದಾರರಾಗಿರುತ್ತಾರೆ. ಒಂದಾನೊಂದು ಕಾಲದಲ್ಲಿ ದೈವಾರಾಧನೆಯ ಗುಡಿ ಅಥವಾ ಅಂಗಳವು ನ್ಯಾಯಾಂಗ ಕೊಠಡಿಯೇ ಆಗಿತ್ತು. ಇಂದಿಗೂ ಹಲವಾರು ಕುಟುಂಬ ಕಲಹ, ಒಳಜಗಳಗಳು ದೈವದ ಸಮಕ್ಷಮದಲ್ಲೇ ನೆರವೇರುತ್ತದೆ ಮತ್ತು ಇತ್ಯರ್ಥವಾಗುತ್ತದೆ. ಈ ಸಂದರ್ಭದಲ್ಲಿ ದೈವದ ಚಾಕರಿ ಮಾಡುವವರು ಮಾಯ-ಜೋಗವೆಂಬ ಅಲೌಕಿಕ ಲೋಕದಲ್ಲಿರುತ್ತಾರೆ. ಕೈಯಲ್ಲಿ ಆಯುಧ ಹಿಡಿದು, ವೇಷಭೂಷಣ ತೊಟ್ಟು, ವಿವಿಧ ಅಣಿಗಳನ್ನು ಕಟ್ಟಿಕೊಂಡು ನೆರೆದಿರುವ ಎಲ್ಲರಿಗಿಂತಲೂ ಹಿರಿಯ ಸ್ಥಾನದಲ್ಲಿ ನಿಂತು ದೈವವು ನ್ಯಾಯಾಧೀಶನಂತೆ ವರ್ತಿಸುತ್ತದೆ. ತನ್ನ ವ್ಯಕ್ತಿತ್ವವನ್ನು ಅಲೌಕಿಕಗೊಳಿಸುತ್ತದೆ. ಈ ಸಂದರ್ಭದಲ್ಲಿ ನ್ಯಾಯಮಾರ್ಗ, ಸತ್ಯದ ನುಡಿ, ದಾನದ ನಡೆ, ಧರ್ಮ ನಡಾವಳಿಯನ್ನು ದೈವ ಬಯಸುತ್ತದೆ. ‘ನಂಬುನಾಯಗ್ ಇಂಬು, ನಂಬಂದಿನಾಯಗ್ ಅಂಬು’ ಎಂಬ ಒಕ್ಕಣೆಯಲ್ಲಿ ದೈವ ನಡೆದುಕೊಳ್ಳುತ್ತದೆ.

ನ್ಯಾಯ ತೀರ್ಮಾನದ ನಿಯಮಗಳು[ಬದಲಾಯಿಸಿ]

  1. ವಾದಿ-ಪ್ರತಿವಾದಿಗಳು ದೈವದ ಎದುರು ಹಾಜರಿರಬೇಕು.
  2. ಮನೆತನದ ಹಿರಿಯರ ಮಧ್ಯಸ್ಥಿಕೆಯಲ್ಲಿ ನ್ಯಾಯಪಂಚಾತಿಕೆ ನಡೆಯುತ್ತದೆ.
  3. ತರವಾಡು ಮನೆಯಲ್ಲಿ ನ್ಯಾಯತೀರ್ಮಾನವಾಗುತ್ತದೆ.
  4. ಧಾರ್ಮಿಕ ಕ್ಷೇತ್ರಗಳಲ್ಲಿ ತೀರ್ಮಾನವಾಗುತ್ತದೆ. ಉದಾ: ಕಾನತ್ತೂರು, ಧರ್ಮಸ್ಥಳಗಳಲ್ಲಿ ನಡೆಯುವ ನ್ಯಾಯ ತೀರ್ಮಾನ.
  5. ಎರಡೂ ಪಂಗಡದವರು ತಮ್ಮ ತಮ್ಮ ಅಭಿಪ್ರಾಯಗಳನ್ನು, ಸಮರ್ಥನೆಗಳನ್ನು ವಾದ ರೂಪದಲ್ಲಿ ಸಂಕ್ಷಿಪ್ತವಾಗಿ ದೈವದ ಮುಂದಿಡಬೇಕು.
  6. ವಾದಿಗಳು ತಮ್ಮ ತಮ್ಮ ಸಾಕ್ಷಿಗಳನ್ನು ಎದುರು ನಿಲ್ಲಿಸಿ ತಮಗೆ ಬೇಕಾದವರನ್ನು ಬಳಸಿಕೊಳ್ಳುವುದು.
  7. ಸರಿ-ತಪ್ಪುಗಳನ್ನು ದೈವ ಇತ್ಯರ್ಥ ಮಾಡಿದ ಮೇಲೆ ತಪ್ಪಿತಸ್ಥನು ಶಿಕ್ಷೆಯ ರೂಪದಲ್ಲಿ ದಂಡವನ್ನು ನೀಡುವುದು.
  8. ನ್ಯಾಯ ತೀರ್ಮಾನದ ಸಂದರ್ಭದಲ್ಲಿ ಮನೆಯ/ಕುಟುಂಬದ/ಗುತ್ತಿನ/ಸೀಮೆಯ ಹಿರಿಯರು ಉಪಸ್ಥಿತರಿರುವುದು.

ಹೀಗೆ ಸಮಸ್ಯೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ದೈವವು ಪಡೆದುಕೊಂಡು ನ್ಯಾಯ ತೀರ್ಪನ್ನು ಕೊಡುವುದು. ಸಾಕಷ್ಟು ಸಾಕ್ಷ್ಯಾಧಾರಗಳು ಸಿಗದಿರುವಾಗ ಸತ್ಯ ಪರೀಕ್ಷೆ ನಡೆಯುವುದು. ಸತ್ಯ ಪರೀಕ್ಷೆಯಂತೆ ಸತ್ಯ ನಿರೂಪಣೆಯೂ ಇರುತ್ತದೆ. ಭೂತಗಳ ಸಮ್ಮುಖದಲ್ಲಿ ಪ್ರೇತ ಬಿಡಿಸುವ ಕ್ರಮ ಇರುತ್ತದೆ. ಆಣೆ-ಪ್ರಮಾಣ ಮಾಡುವುದು. ಎಷ್ಟೋ ನ್ಯಾಯಗಳು ಪರಸ್ಪರ ವಾದ-ವಿವಾದಗಳಿಂದ ಆರಂಭವಾಗಿರುತ್ತದೆ. ಮದುವೆ ಮಂಟಪದಲ್ಲಿ ನ್ಯಾಯ ಹುಟ್ಟಿಕೊಳ್ಳುತ್ತವೆ. ಆಸ್ತಿ ಪಾಲಿನಲ್ಲಿ ಹೆಚ್ಚುಕಡಿಮೆಯಾದಾಗ ಅಣ್ಣ ತಮ್ಮಂದಿರ ನಡುವೆ ನ್ಯಾಯ ಉಂಟಾಗುತ್ತದೆ. ತಂದೆ ಮಕ್ಕಳ ನಡುವೆ ಆಸ್ತಿ ವಿವಾದ ಬರುತ್ತದೆ. ನಾಯಿ, ಕೋಳಿ, ಹಸು-ಕರುಗಳ ನೆಪದಲ್ಲಿ ನೆರೆಕರೆಯಲ್ಲಿ ಜಗಳ ಬರುತ್ತದೆ. ನೆರೆಕರೆಯವರ ತೋಟ, ಗದ್ದೆ ವಿಚಾರದಲ್ಲಿ ಭೂ-ವಿವಾದದ ನ್ಯಾಯ ಬರುತ್ತದೆ. ಹೀಗೆ ಹಲವಾರು ವಿಧದಲ್ಲಿ ನ್ಯಾಯಗಳು ಎದ್ದಾಗ ಅವುಗಳ ನಿವಾರಣೆಯನ್ನು ಸತ್ಯದ ಎದುರು ನಿಂತು ಆಣೆ-ಪ್ರಮಾಣ ಮಾಡಿಸಿ ದೈವದ ಎದುರು ನಿಂತು ಬೂಳ್ಯಪ್ರಸಾದ, ಗಂಧಪ್ರಸಾದ ತೆಗೆದುಕೊಂಡು ಇತ್ಯರ್ಥ ಮಾಡುತ್ತಿದ್ದರು.

ನ್ಯಾಯ ತೀರ್ಮಾನದ ಕತೆ[ಬದಲಾಯಿಸಿ]

ಒಂದು ಕ್ರಿಶ್ಚಿಯನ್ ಕುಟುಂಬದ ಒಬ್ಬ ಹುಡುಗ ಬೊಂಬಾಯಿಗೆ ಹೋದವ ಹಿಂದಿರುಗಿ ಬರಲಿಲ್ಲ. ಸುಮಾರು ಹತ್ತು ವರುಷ ಆದಾಗ ಅವನಿಗೆ ಮದುವೆಯಾಗಿದೆ ಎಂದು ಸುದ್ದಿ ತಿಳಿಯಿತು. ಇದನ್ನು ಕೇಳಿದ ತಂದೆ ತಾಯಿಯರು ಕೋರ್ದಬ್ಬು ದೈವಕ್ಕೆ ದೂರು ನೀಡುತ್ತಾರೆ. ಅವನನ್ನು ಬರುವಂತೆ ಮಾಡಿದರೆ ನನಗೇನು ಕಾಣಿಕೆ ಕೊಡುವಿರಿ ಎಂದಾಗ ನಿನ್ನ ಭಂಡಾರಕ್ಕೆ ಇಪ್ಪತೈದು ರುಪಾಯಿ ಕಾಣಿಕೆ ಹಾಕುತ್ತೇವೆ ಎನ್ನುತ್ತಾರೆ. ಆಗ ದೈವದ ಮದಿಪು ಹೀಗಿದೆ; ಯಾನೆ ಮಲ್ಲ ಪರ್ವತ ಜರಿಪೊಡು, ಆಂಡ ಎಂಕ್ ತಿಕುನು ಬಜೀ ಕಿಚ್ಚೆಲಿ. ಉಂದು ಎಲ್ಯ ಬೇಲೆ ಅತ್ತ್. ಕರಿಯಣಿ ಕಡ್ತ್‍ದ್ ಕನವೊಡಾಪುಂಡು. ಮಲ್ಲ ಪಾಪೊತ್ತುನು ಯಾನ್ ತುಂಬೊನೊಡು. ಸತ್ಯ ಪರೀಕ್ಷೆಯ ವಿಧಾನಗಳು :

  1. ದೈವಕ್ಕೆ ತಂಬಿಲ ಕೊಡುವ ಸಂದರ್ಭ - ಕೋಳಿ ಕೊಂದು ಎಡೆ ಬಡಿಸುವುದು. ಆ ಸಂದರ್ಭದಲ್ಲಿ ಕೊಂದ ಕೋಳಿ ಸರಿಯಾಗಿ ಬೀಳುವಂತೆ ಬಯಸುವುದು. ಅದು ಸರಿಯಾಗಿ ಬೀಳಲಿಲ್ಲವೆಂದರೆ ಕುಟುಂಬಕ್ಕೆ ತೊಂದರೆಯಿದೆ, ಕೋಲ ಕೊಡಬೇಕು ಎಂದು ತಿಳಿದುಕೊಳ್ಳುವುದು.
  2. ಮನೆ ಒಕ್ಕಲು, ತೊಟ್ಟಿಲು ಕೊಂಡುಹೋಗುವುದು, ಯಾವುದೇ ಶುಭಮುಹೂರ್ತದಲ್ಲಿ ತೆಂಗಿನಕಾಯಿ ಒಡೆಯುವುದು. ತೆಂಗಿನಕಾಯಿ ಸರಿಯಾಗಿ ಒಡೆದು ಬಿದ್ದರೆ ಶುಭ. ಇಲ್ಲವಾದರೆ ಅಪಶಕುನ.
  3. ದೈವ ವೀಳ್ಯದೆಲೆಯನ್ನು ಹಾರಿಸಿ ಅಂಗಾತ ಬಿದ್ದರೆ ಸರಿ, ಎಲೆಯ ಬೆನ್ನು ಬಿದ್ದರೆ ದೋಷವೆಂದು ಪರಿಗಣಿಸುವುದು.
  4. ದೈವ ತೆಂಗಿನ ಕಾಯನ್ನು ಹಾರಿಸಿ ಸರಿ ಬೀಳುವುದು.
  5. ಯಾವುದೇ ದೈವ ಕ್ರಿಯೆಯಲ್ಲಿ ದೀಪ ಉರಿಸಿಡುವುದು. ಅದು ನಂದಾ ದೀಪದಂತೆ ಉರಿಯಬೇಕೆಂದು ಬಯಸುವುದು.

ಹಲವಾರು ಸನ್ನಿವೇಶಗಳಲ್ಲಿ ಸತ್ಯ ಪ್ರಮಾಣ ಪರೀಕ್ಷೆ ನಡೆಯುತ್ತದೆ. ಬೆಂಕಿಗೆ ಕೈ ಇಡುವುದು, ಕಾದ ಎಣ್ಣೆಗೆ ಕೈ ಹಾಕುವುದು ಇಂತಹ ಸಂದರ್ಭಗಳು ನಡೆಯುತ್ತಿದ್ದವು. ಆಣೆ ಪ್ರಮಾಣ ಮಾಡಿಕೊಂಡವರು ಮತ್ತೆ ಜೊತೆ ಸೇರಬಾರದು. ಪರಸ್ಪರ ಅನ್ನ ನೀರು ಮುಟ್ಟಬಾರದು, ಮದುವೆಯಾಗಬಾರದೆಂಬ ನಿಷೇಧವಿದೆ. ಉದಾ: ಬಳಜೇಯಿ ಮಾಣಿಗನ ಸಂಧಿಯಲ್ಲಿ ಬರುವ ಸನ್ನವೇಶ - ಚೆನ್ನೆಯಾಟದಲ್ಲಿ ಆಟ ಕೆಡಿಸಿದುದಕ್ಕಾಗಿ ಕೋಪಿಸಿ ಮಡದಿ ತವರಿಗೆ ಹೋದಳು. ಮಡದಿ ಮರಳಿ ಬಂದರೆ ಅವಳ ಮೈ ಮುಟ್ಟುವುದಕ್ಕೆ ಮೊದಲು ದೈವಕ್ಕೆ ನೇಮ ಕೊಡುವುದಾಗಿ ಗಂಡ ಹರಕೆ ಹೇಳಿದ. ದೈವದ ಪ್ರೇರಣೆಯಿಂದ ಆಕೆ ಮರಳಿ ಬರುತ್ತಾಳೆ. ಮಡದಿ ಮರಳಿ ಬಂದ ಸಂಭ್ರಮದಲ್ಲಿ ಹರಕೆಯನ್ನು ಮರೆತು, ಮೈಮರೆತು ಆಕೆಯನ್ನು ಬರಸೆಳೆದುದರಿಂದ ಆತ ಹೆಂಡತಿಯನ್ನು ಕಳೆದುಕೊಂಡ ಎಂಬ ಉಲ್ಲೇಖವಿದೆ. ನ್ಯಾಯ ತೀರ್ಮಾನ ಮತ್ತು ಸತ್ಯ ಪರೀಕ್ಷೆಯ ಜೊತೆಜೊತೆಗೆ ದಾನ-ಧರ್ಮ ನೀಡುವ ಸಂದರ್ಭಗಳು ಬರುತ್ತವೆ. ತುಳುನಾಡಿನಲ್ಲಿ ನಡೆವ ಅನೇಕ ಉತ್ಸವ ಸಮಾರಂಭಗಳಲ್ಲಿ ಅನ್ನದಾನ ಧರ್ಮಕಾರ್ಯ ಇಂದಿಗೂ ನಡೆಯುತ್ತಿದೆ. ಅನ್ನದಾನದಿಂದ ಧರ್ಮ ಚೆನ್ನಾಗಿ ನಡೆಯಿತೇ ಎಂಬ ಮಾತೊಂದಿದೆ. ತುಳುನಾಡಿನ ಪ್ರತಿಯೊಂದು ವಾರ್ಷಿಕಾವರ್ತನ ಆಚರಣೆ ಆರಾಧನೆಗಳಲ್ಲಿ ಮತ್ತು ಹುಟ್ಟಿನಿಂದ ಸಾವಿನ ವರೆಗೆ ಬರುವ ಎಲ್ಲಾ ಜೀವನಾವರ್ತನ ಆಚರಣೆಗಳಲ್ಲಿ ಅನ್ನದಾನ ಪ್ರಧಾನವಾಗಿದೆ.

ದೈವಾರಾಧನೆಯಲ್ಲಿ ನ್ಯಾಯ-ಸತ್ಯ-ದಾನ-ಧರ್ಮ ಇವುಗಳ ತಾತ್ವಿಕ ಅಂಶ[ಬದಲಾಯಿಸಿ]

ದೈವಾರಾಧನೆಯಲ್ಲಿ ಈ ನಾಲ್ಕು ಪರಿಕಲ್ಪನೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳನ್ನು ಈ ರೀತಿ ಚರ್ಚಿಸಬಹುದು.

  1. ಜನಪದ ನ್ಯಾಯಾಂಗ ಎನ್ನುವುದು ಒಂದು ಸಾಮಾಜಿಕ ನ್ಯಾಯ ಪದ್ಧತಿಯೂ ಹೌದು. ಧಾರ್ಮಿಕ ನ್ಯಾಯ ಪದ್ಧತಿನೂ ಹೌದು. ನ್ಯಾಯಾಂಗ ಪದ್ಧತಿಯನ್ನು ನಿರ್ವಹಿಸುವ ಸಾಮಥ್ರ್ಯ ಭೂತದ ಹಲವಾರು ನುಡಿಕಟ್ಟುಗಳಲ್ಲಿದೆ. “ಪತ್ತ್ ಕೂಡಿ ಕಳಟ್ಟ್ ಮುತ್ತು ಉಂಡು ಪನ್ಪೆರ್. ನಿನ್ನ ಸತ್ಯೊದ ಕಳಟ್ಟ್ ಇಂಚಿನಾಯೆ ಇಂಚ ಮಲ್ತೆ. ಈ ದಾದ ಶಿಕ್ಷೆ ಕೊರ್‍ಯ”. [ಹತ್ತು ಜನ ಸೇರಿದಲ್ಲಿ ಮುತ್ತು(ಕಳೆ) ಇದೆ ಎನ್ನುತ್ತಾರೆ. ನಿನ್ನ ಸತ್ಯದ ಕಳದಲ್ಲಿ ಇಂತಹ ತಪ್ಪನ್ನು ಇಂತವ ಮಾಡಿದ್ದಾನೆ. ನೀನು ಏನು ಶಿಕ್ಷೆ ನೀಡಿದೆ] ಇದು ನ್ಯಾಯ ತೀರ್ಮಾನದಲ್ಲಿ ನಡೆಸುವವರಿಂದ ಬರುವ ಮಾತು. ನ್ಯಾಯ ಸಿಗಬೇಕಾಗಿರುವುದು ಭೂತ ಕಟ್ಟಿರುವ ಮಾಯ ಸ್ವರೂಪಿ ಸತ್ಯದಿಂದ. ದೈವವು ‘ಬಾಸೆ ತತ್ತಿನಾಯಗ್ ಬಾಸೆ’ ದೀಪೆ ಎನ್ನುತ್ತದೆ. ಎಂದರೆ ನನ್ನ ಮಾತು ತಪ್ಪಿದವನಿಗೆ ನನ್ನಾಣೆ ಎಂಬ ಶಾಪ. “ಪತ್ತಿ ಪಗರಿನ್ ಬೂಮಿಗ್ ಬುಡೊಡಾ ಬಾನೊಗು ಬುಡೊಡಾ?” ಆಕಾಶಕ್ಕೆ ಬಾಣ ಬಿಡುವುದರಿಂದ ಪ್ರಯೋಜನವಿಲ್ಲವೆಂದು ದೈವ ತನ್ನ ಸುರಿಯೆಯನ್ನು ಅಥವಾ ಬಾಣವನ್ನು ನೆಲಕ್ಕೆ ಊರುತ್ತದೆ. “ಪಂಡಿ ನಾಲಾಯಿ ದೊಂಡೆಡಾವೊಡಾಂಡ ನೆತ್ತ ದೃಷ್ಟಾಂತ ತೋಜಾವೆ” ಎಂದು ಶಾಪ ನೀಡುತ್ತದೆ. ಇಂದಿಗೂ ಸರ್ಪವನ್ನು ಕೊಲ್ಲುವವರು ಅದು ನೆಲ ಕಚ್ಚದಂತೆ ಕೊಲ್ಲುತ್ತಾರಂತೆ. ‘ಮಣ್ಣ್ ಮೂರಿ ಲಕ್ಕ್‌ದ್‍ಂಡ್’, ‘ನೆಲನೇ ತುಚ್ಚು’ ಇಂತಹ ಮಾತುಗಳಲ್ಲಿ ದೈವವನ್ನು ನಡೆಸಿಕೊಡುವವರು ಮತ್ತು ಕಟ್ಟುವವರ ಮಾತಿನಲ್ಲಿ ಭಯ ಹುಟ್ಟಿಸುವ ಮಾತುಗಳು ಬರುತ್ತವೆ.
  2. ಜನಪದ ನ್ಯಾಯಾಂಗ ಎನ್ನುವುದು ಒಂದು ಫ್ಯೂಡಲ್ ಪದ್ಧತಿಯೂ ಹೌದು. ಆಳುವವರು, ಶ್ರೀಮಂತರು, ಊರ ಯಜಮಾನಿಕೆ ಇರುವವರು, ಮೇಲ್ಜಾತಿಯಲ್ಲಿರುವವರು ತಮ್ಮನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪರತಿ ಮಂಗಣೆ ಎಂಬ ಆರಾಧನೆಯಲ್ಲಿ ಪರತಿ ಭೂತಕ್ಕೆ ಕಟ್ಟುವ ಪರವನ ಹೆಂಡತಿ. ಆಕೆಯ ರೂಪಕ್ಕೆ ಮರುಳಾಗಿ ಪರವನನ್ನು ಉಪಾಯವಾಗಿ ಕೊಂದು ಆಕೆಯನ್ನು ವಶಪಡಿಸಲು ಸಾಧ್ಯವಾಗದೆ ತನ್ನ ಸರ್ವಸ್ವವನ್ನೂ ಪರವನ ಚಿತೆಗೆ ಸುರಿದು ಕೊನೆಗೆ ಆತನೂ ಚಿತೆಗೆ ಹಾರಿಕೊಳ್ಳುವಂತ ದುರ್ದೈವಿಯೊಬ್ಬನ ಕೃತ್ಯದ ವಿವರ ಬೊಟ್ಟುವಾದಿ ಬಲ್ಲಾಳನ ಸಂಧಿಯಲ್ಲಿ ಬರುತ್ತದೆ. ಆಳುವವನಿಗೆ ಊರ ಸಂಪತ್ತು, ಹೆಣ್ಣು, ಯಜಮಾನಿಕೆ ಎಲ್ಲವೂ ಬೇಕಿದ್ದ ಕಾಲವಿತ್ತು ಎಂಬುದು ಜನಪದ ಸಾಹಿತ್ಯದಲ್ಲಿ ತಿಳಿದುಬರುತ್ತದೆ. ಆ ಕಾಲದಲ್ಲಿ ಭೂತವಾಗುತ್ತಿದ್ದರು. ಈಗ ಅಂತಹದಕ್ಕೆ ಜನ ರಾಕ್ಷಸರಾಗುತ್ತಾರೆ.
  3. ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದಾಗ ದನಿ ಒಕ್ಕಲು ಕಾನೂನು ಬಂದ ಸಂದರ್ಭದಲ್ಲಿ ಭೂ ಮಾಲೀಕ ಒಕ್ಕಲಿನಿಗೆ ಭೂಮಿ ಬಿಟ್ಟುಕೊಡುವ ಪ್ರಸಂಗವೂ ಬಂತು. ದೈವ ಯಾರ ಕಡೆ ನ್ಯಾಯ ಒದಗಿಸಿರಬಹುದೆಂಬುದನ್ನು ನಮಗೆ ಕಲ್ಪಿಸಿಕೊಳ್ಳುವುದಕ್ಕೆ ಅಸಾಧ್ಯ. ದೈವವನ್ನು ನಡೆಸುವವ ಮತ್ತು ಕಟ್ಟುವವ ಇಬ್ಬರೂ ಜೊತೆ ಸೇರಿ ಊರಿನ ಗ್ರಹಸ್ಥರ ಮಾತು ಮೊದಲು ದೈವದ ನಡೆ ನಂತರ ಎಂದು ತೀರ್ಮಾನಿಸಿದರು. ಎಷ್ಟೋ ಒಕ್ಕಲುಗಳ ಮನೆಗೆ ರಾತ್ರೋ ರಾತ್ರಿ ಬೆಂಕಿ ಬಿತ್ತು. ಅವರು ಊರು ಬಿಟ್ಟು ಓಡಿದರು. ದೈವದ ವಿರುದ್ಧ ಮತ್ತು ಊರಿನ ಯಜಮಾನರ ವಿರುದ್ಧ ಮಾತನಾಡುವುದು ಕಷ್ಟವಾಗಿತ್ತು.
  4. ದೈವಾರಾಧನೆ ಒಂದು ಮನೋವೈಜ್ಞಾನಿಕ ಆಟವೂ ಹೌದು. ಕೆಲವೊಮ್ಮೆ ದೈವದ ಬಗೆಗೆ ಅತೀವ ಭಕ್ತಿಯಿದ್ದಲ್ಲಿ ಮೈಮೇಲೆ ದರ್ಶನ ಬರುತ್ತದೆ. ನ್ಯಾಯಪದ್ಧತಿಯೆಂಬ ಈ ವ್ಯವಸ್ಥೆಯಲ್ಲಿ ಆಳುವವರನ್ನು ವಿರೋಧಿಸುವ ಸಾಮಥ್ರ್ಯ ದೈವಕ್ಕೂ ಇರುವುದಿಲ್ಲ. ಕೆಲವು ಜಿಗುಟಾದ ಸಮಸ್ಯೆಗಳನ್ನು, ಜಗಳಗಳನ್ನು ಬಿಡಿಸಲು ನ್ಯಾಯ ತೀರ್ಮಾನವನ್ನು ನೀಡುವ ದೈವಕ್ಕೂ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಂದು ಉಪಾಯಗಳನ್ನು ಬಳಸಿದ್ದೂ ಇದೆಯೆಂಬುದಕ್ಕೆ ಒಂದು ಸನ್ನಿವೇಶವಿದೆ. ಒಮ್ಮೆ ದೈವವು ಪ್ರಚಂಡ ವ್ಯಕ್ತಿಯ ವಿರುದ್ಧ ತೀರ್ಮಾನ ನೀಡಿತು. ಆತ ದೈವÀವನ್ನು ವಿರೋಧಿಸಿದ ಬೈದ, ದೈವಕ್ಕೆ ಹೊಡೆಯಲೂ ಬಂದ. ದೈವವು ಇದ್ದಕ್ಕಿದ್ದಂತೆ ಅಣಿಸಮೇತ ಕೆಳಗುರುಳಿತು. ಎಷ್ಟೇ ಪ್ರಾರ್ಥಿಸಿದರೂ ದೈವ ಮೈದುಂಬಿ ಬಾರದಿದ್ದಾಗ ಬೈದಾತ ಕ್ಷಮೆ ಯಾಚಿಸಿ ತಪ್ಪು ಕಾಣಿಕೆ ನೀಡಿದ ಮೇಲೆ ದೈವ ಮೈದುಂಬಿ ಬಂತು.
  5. ದೈವವನ್ನೇ ‘ಸತ್ಯೊ’ ಎಂದು ಜನಪದರು ಭಾವಿಸಿದ್ದಾರೆ. ದೈವದ ಚಾಕರಿ ಮಾಡುವವರಿಗೆ, ಭೂತ ಕಟ್ಟುವವರಿಗೆ ಚಪ್ಪಲಿಯಿಂದ ಹೊಡೆದರೆ, ಅವಮಾನಿಸಿದರೆ ಹೊಡೆಸಿಕೊಂಡವರು ಮುಂದೆ ದೈವದ ಯಾವುದೇ ಕೆಲಸಕ್ಕೆ ಅನರ್ಹರಾಗುತ್ತಾರೆ. ಕಾರಣವಿಷ್ಟೇ ದೈವಾರಾಧನೆಯೆಂಬುದು ಶುದ್ಧದಿಂದ ನಡೆದುಕೊಳ್ಳುವ ಆಚರಣೆ. ದೈವವನ್ನು ಕಟ್ಟುವವರಿಗೆ ಸಮಾಜದಲ್ಲಿ ತುಂಬ ಉನ್ನತವಾದ ಸ್ಥಾನವನ್ನು ನೀಡಲಾಗಿದೆ.