ಪೀಟರ್ ಜೋಸೆಫ್ ವಿಲ್ಹೆಲ್ಮ್‌ ಡೀಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಟರ್ ಜೋಸೆಫ್ ವಿಲ್‍ಹೆಲ್ಮ್ ಡೀಬೈ1884-1966. ಡಚ್-ಅಮೆರಿಕನ್ ಭೌತರಸಾಯನ ವಿಜ್ಞಾನಿ.

ನೆದರ್ಲೆಂಡ್ಸಿನ ಮಾಸ್ಟ್ರಿಕ್ಸ್ ಎಂಬಲ್ಲಿ ಜನನ (24-3-1884). ಹುಟ್ಟೂರಿನಲ್ಲಿ ಪ್ರೌಢವಿದ್ಯಾಭ್ಯಾಸ ಮುಗಿಸಿ ಬಳಿಕ ನೆರೆಯ ಆಕೆನ್ ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಎಂಜಿನಿಯರಿಂಗ್ ಪದವಿಯನ್ನು ಪಡೆದ (1905). ಅನಂತರ ಅಲ್ಲೇ ಎರಡು ವರ್ಷಗಳ ಕಾಲ ತಾಂತ್ರಿಕ ವೃತ್ತಿಯಲ್ಲಿದ್ದ. ಡೀಬೈಗೆ ಚಿಕ್ಕಂದಿನಿಂದಲೂ ಭೌತ ಮತ್ತು ಗಣಿತಶಾಸ್ತ್ರಗಳಲ್ಲಿ ಅಪಾರ ಆಸಕ್ತಿ ಇತ್ತು. ಅಲ್ಲದೆ, ಆಕೆನ್ನಿನಲ್ಲಿ ಇವನಿಗೆ ಇಬ್ಬರು ಶ್ರೇಷ್ಠ ಭೌತವಿಜ್ಞಾನಿಗಳಾದ ವೀನ್ ಮತ್ತು ಸಾಮರ್‍ಫೆಲ್ಡ್‍ರ ನಿಕಟ ಸಂಪರ್ಕ ಒದಗಿತು. ಮೂಲತಃ ಎಂಜಿನಿಯರಿಂಗಿನಲ್ಲಿ ಶಿಕ್ಷಣ ಹಾಗೂ ಅನುಭವ ಪಡೆಯುತ್ತಿದ್ದು, ಜೊತೆಯಲ್ಲೇ ಈ ಹಿರಿಯ ವಿಜ್ಞಾನಿಗಳಿಂದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಭೌತವಿಜ್ಞಾನಗಳಲ್ಲಿ ಪಡೆದ ತರಬೇತು ಮುಂದಿನ ಮಹಾವಿಜ್ಞಾನಿಯನ್ನು ರೂಪಿಸಲು ಬಲು ಸಹಾಯ ಮಾಡಿರಬೇಕು. ಈ ವೇಳೆಯಲ್ಲಿ ಡೀಬೈಯ ಒಲವು ಭೌತಶಾಸ್ತ್ರದ ಕಡೆಗೇ ಹೆಚ್ಚುತ್ತ ಬಂದದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಆಕೆನ್ನಿನಿಂದ ಡೀಬೈ 1906ರಲ್ಲಿ ಮ್ಯೂನಿಕ್‍ಗೆ ಬಂದು, ಆಗತಾನೇ ಅಲ್ಲಿನ ಸೈದ್ಧಾಂತಿಕ ಭೌತವಿಜ್ಞಾನ ವಿಭಾಗದ ನೇತೃತ್ವ ವಹಿಸಿದ್ದ ಸಾಮರ್‍ಫೆಲ್ಡನ ಜೊತೆ ಸೇರಿಕೊಂಡ. ಭೌತವಿಜ್ಞಾನದಲ್ಲಿ ಪಿಎಚ್.ಡಿ ಪಡೆದ (1908). ಐನ್‍ಸ್ಟೈನ್ ಜಯೂರಿಕ್‍ನಿಂದ ಪ್ರಾಗ್‍ಗೆ ಹೋದಾಗ ತೆರವಾದ ಸ್ಥಾನಕ್ಕೆ 27 ವರ್ಷದ ಡೀಬೈಗೆ ಕರೆ ಬಂತು (1911). ಇದು ಇವನ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಅಲ್ಲಿ ಈತ ಕಳೆದ ಒಂದು ವರ್ಷದಲ್ಲಿ ಎರಡು ಮೂಲಭೂತ ಸಿದ್ಧಾಂತಗಳನ್ನು ಪ್ರಕಟಿಸಿದ. ಘನವಸ್ತುಗಳ ವಿಶಿಷ್ಟೋಷ್ಣ ಸಿದ್ಧಾಂತ ಮತ್ತು ಧ್ರುವೀಯ ಅಣುಗಳ ಸಿದ್ಧಾಂತ. ಘನವಸ್ತುಗಳ ಅನೇಕ ಮೂಲಗುಣಗಳನ್ನು ಅರಿಯಲು ಡೀಬೈ ವಿವಿಧ ವಿದ್ಯುತ್ಕಾಂತ ಅಲೆಗಳನ್ನು ಮಾಧ್ಯಮವಾಗಿ ಬಳಸಿದ. ಉದಾಹರಣೆಗೆ, ಉಷ್ಣ-ಅಲೆಗಳ ಅಲೆಯುದ್ದ ಅಣುಗಳ ನಡುವಣ ಅಂತರಕ್ಕಿಂತ ಬಲುಪಟ್ಟು ಹೆಚ್ಚಾಗಿರುವುದರಿಂದ, ಅವುಗಳಿಗೆ ಘನವಸ್ತುವಿನ ಸೂಕ್ಷ್ಮ ರಚನೆ ತೋರದೆ, ಅದೊಂದು ಅವಿಚ್ಛಿನ್ನ ಮಾಧ್ಯಮವೆಂಬಂತೆ ಭಾಸವಾಗುವುದು. ಉಷ್ಣತೆಯೊಡನೆ ಘನವಸ್ತುವಿನ ವಿಶಿಷ್ಟೋಷ್ಣದ ಬದಲಾವಣೆಯನ್ನು ಅರಿಯಲು ಡೀಬೈ ಈ ವಿಷಯವನ್ನು ಅಳವಡಿಸಿಕೊಂಡ. ಉಷ್ಣತೆ (ವಸ್ತುವಿನ ಸಾಂದ್ರತೆಯನ್ನು ಅವಲಂಬಿಸಿದ ಡೀಬೈ-ಉಷ್ಣತೆ ಎಂಬ ಮಟ್ಟಕ್ಕಿಂತ) ಅತಿ ಕಡಿಮೆ ಇದ್ದಾಗ ಡೀಬೈ ಸಮೀಕರಣ ಸರಳರೂಪವನ್ನು ಪಡೆದು ವಿಶಿಷ್ಟೋಷ್ಣ (ಅ) ಉಷ್ಣತೆಯ (ಬ) ಘನೋತ್ಪನ್ನದಂತೆ ವರ್ತಿಸುತ್ತದೆ ಅ(ಖಿ3 ಇನ್ನೊಂದು ಸಿದ್ಧಾಂತದಲ್ಲಿ ಡೀಬೈ ಒಂದು ಅಣುವಿನ ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುತ್ಕಣಗಳ ಕೇಂದ್ರಗಳನ್ನು ಅಣು ಒಂದು ದ್ವಿಧ್ರುವದಂತೆ (ಡೈಪೋಲ್) ವರ್ತಿಸುವುದು. ದ್ವಿಧ್ರುವತ್ವದ ಮಟ್ಟ ಅಣುವಿನ ರಚನೆಯನ್ನು ಅವಲಂಬಿಸಿದೆ. ಆದ್ದರಿಂದ, ವಿದ್ಯುತ್ ಕ್ಷೇತ್ರದಲ್ಲಿ ಧ್ರುವೀಯ ಸಂರೇಖನವನ್ನು (ಅಲೈನ್‍ಮೆಂಟ್) ಬಳಸಿಕೊಂಡು ಅನೇಕ ಅಣುಗಳ ರಚನೆಯನ್ನು ತಿಳಿಯಲು ಡೀಬೈಯ ಧ್ರುವೀಯ ಅಣುಸಿದ್ಧಾಂತ ಮತ್ತು ಅವನ ಪ್ರಯೋಗಗಳು ನೆರವಾದುವು.

ಜ್ಯೂರಿಕ್‍ನಿಂದ ಡೀಬೈ ಸ್ವದೇಶಕ್ಕೆ ಮರಳಿ ಅಲ್ಲಿ ಎರಡು ವರ್ಷಗಳ ಕಾಲ ನೆಲೆಸಿದ್ದ. ಅಣುಗಳ ದ್ವಿಧ್ರುವತ್ವವೇ ಮುಂತಾದ ಕೆಲವು ವಿಷಯಗಳಲ್ಲಿ ತನ್ನ ಗ್ರಹಿಕೆಗಳನ್ನು ಪರೀಕ್ಷಿಸಲು ಅವನು ಅನೇಕ ಪ್ರಯೋಗಗಳನ್ನು ನಡೆಸಲು ಗಟಿಂಗೆನ್ನಿಗೆ ತೆರಳಿದ (1913). ಇಲ್ಲಿ ಅವನು ಏಳು ವರ್ಷಗಲ ಕಾಲ ಇದ್ದ. ಒಂದನೆಯ ಮಹಾಯುದ್ಧದಿಂದಾಗಿ ಅನೇಕ ಅಡಚಣೆಗಳು ಬಂದರೂ ಈ ಅವಧಿಯಲ್ಲಿ ಡೀಬೈ ಇನ್ನೊಂದು ಅಮೋಘ ಕೊಡುಗೆಯನ್ನು ನೀಡಿದ. ಸ್ಫಟಿಕರೂಪಿ ಘನವಸ್ತುವಿನ ಅಣುರಚನೆಯನ್ನು ನಿರೂಪಿಸಲು ಅದರ ಚೂರ್ಣದಿಂದ ಎಕ್ಸ್‍ಕಿರಣಗಳ ನಮನವನ್ನು (ಡಿಫ್ರ್ಯಾಕ್ಷನ್) ಬಳಸುವ ವಿಧಾನವನ್ನು ಷೆರರ್ ಎಂಬಾತನ ನೆರವಿನಿಂದ ಡೀಬೈ ತೋರಿಸಿಕೊಟ್ಟ. ಇದು (ಡೀಬೈ-ಷೆರರ್) ಚೂರ್ಣವಿಧಾನವೆಂದು ಪ್ರಸಿದ್ಧಿ ಪಡೆದಿದೆ. 1920ರಲ್ಲಿ ಡೀಬೈ ಮತ್ತೆ ಜಯೂರಿಕ್‍ಗೆ ತೆರಳಿದ. ಅಲ್ಲಿ ಷೆರರ್ ಸಹ ಈತನನ್ನು ಸೇರಿಕೊಂಡದ್ದರಿಂದ ಇವರ ಎಕ್ಸ್‍ಕಿರಣಶಾಲೆ ಸುಗಮವಾಗಿ ಮುಂದುವರಿಯಿತು. ಭೌತ ಹಾಗೂ ರಸಾಯನವಿಜ್ಞಾನಿಗಳಿಗೆ ಇದೊಂದು ಪುಣ್ಯಕ್ಷೇತ್ರವಾಗಿ, ಅನೇಕ ವಿಜ್ಞಾನಿಗಳ ತರಬೇತಿಗೆ ಡೀಬೈ ಕಾರಣನಾದ. ಇಲ್ಲಿ ಮತ್ತೆರಡು ಡೀಬೈ ದಿಗ್ವಿಜಯಗಳು ಮೂಡಿಬಂದುವು; ಪ್ರಬಲ ವಿದ್ಯುದ್ರಾವಣಗಳಲ್ಲಿ ಅಂತರ-ಅಯಾನಿಕ ಆಕರ್ಷಣೆಯ ಬಗ್ಗೆ ಡೀಬೈ-ಹಕೆಲ್ ಸಿದ್ಧಾಂತ ಮತ್ತು ಕ್ರಾಂತೀಯ ಶೈತ್ಯವಿಧಾನ.

ಡೀಬೈಯ ಮುಂದಿನ ಕಾರ್ಯಸ್ಥಾನ ಲೆಪ್‍ಜಿûಗ್. ಸ್ಥಳೀಯ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕನಾಗಿ 1927ರಲ್ಲಿ ಇಲ್ಲಿಗೆ ಆಗಮಿಸಿದ. ಈ ವರೆಗೆ ರೂಪಿತವಾದ ಅವನ ಪ್ರಯೋಗಗಳು ಇಲ್ಲಿ ಭರದಿಂದ ಮುಂದುವರಿದುವು. ಬರ್ಲಿನ್ನಿನಲ್ಲಿ ತನ್ನ ಪ್ರಯೋಗಗಳಿಗೆ ಹೆಚ್ಚಿನ ಸೌಲಭ್ಯಗಳ ಸಾಧ್ಯತೆಯಿದ್ದುದರಿಂದ, 1934ರಲ್ಲಿ ಅಲ್ಲಿನ ಕರೆಯನ್ನು ಮನ್ನಿಸಿ ಬರ್ಲಿನ್ನಿಗೆ ತೆರಳಿದ. ಅನೇಕ ಅಣುಗಳ ರಚನೆಯನ್ನು ನಿರ್ಣಯಿಸಿ, ಅವುಗಳ ರಾಸಾಯನಿಕ ಕ್ರಿಯೆಗಳನ್ನು ವಿವರಿಸಲು ಡೀಬೈಯ ಸಂಶೋಧನೆಗಳು ನೀಡಿದ ನೆರವಿನ ಕುರುಹಾಗಿ, 1936ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪಾರಿತೋಷಿಕವನ್ನು ಡೀಬೈಗೆ ನೀಡಲಾಯಿತು.

ಬರ್ಲಿನ್ನಿನಲ್ಲಿ ಡೀಬೈ ಒಂದು ಉತ್ತಮ ಪ್ರಯೋಗಶಾಲೆಯನ್ನು ನಿರ್ಮಿಸಿದರೂ ಅದನ್ನು ತನ್ನ ಪ್ರಯೋಗಗಳಿಗಾಗಿ ಬಳಸಿಕೊಳ್ಳುವ ಅವಕಾಶ ಅವನಿಗೆ ಒದಗಲಿಲ್ಲ. ಇದರ ಕಾರಣ ಅಂದಿನ ರಾಜಕೀಯ. ಜರ್ಮನಿಯ ಪೌರರಲ್ಲದವರಿಗೆ ಸಾಮಾನ್ಯವಾಗಿ ಇಂಥ ಹಿರಿಯ ವೈಜ್ಞಾನಿಕ ಸಂಸ್ಥೆಯ ಮುಖ್ಯಸ್ಥರಾಗಿರಲು ಅವಕಾಶ ಇರಲಿಲ್ಲ. ಡೀಬೈ ಇದನ್ನು ಇಷ್ಟಪಡದೆ, ತನ್ನ ಹಾಲೆಂಡಿನ ಮೂಲ ಪೌರತ್ವವನ್ನೇ ಉಳಿಸಿಕೊಂಡಿರಲು ವಿಶೇಷ ಅನುಮತಿ ಪಡೆದಿದ್ದ. ಆದರೆ, ಇವನು ನಿರ್ಮಿಸಿದ ಪ್ರಯೋಗಶಾಲೆ ಒಂದು ಉತ್ತಮ ರೂಪಕ್ಕೆ ಬಂದಿದ್ದಾಗ (1939) ಈ ಯೋಜನೆಗೆ ಇದ್ದಕ್ಕಿದ್ದಂತೆ ಭಂಗ ಬಂದಿತು. ಜರ್ಮನಿಯ ಪೌರನಾಗದೆ ಆ ಪ್ರಯೋಗಶಾಲೆಗೆ ಆತ ಕಾಲಿಡುವಂತಿಲ್ಲವೆಂದು ತಿಳಿಸಲಾಯಿತು. ಇದರಿಂದ ಮನನೊಂದ ಡೀಬೈ ಅಲ್ಲಿರಲು ಒಪ್ಪದೆ ಅದೇ ವೇಳೆಯಲ್ಲಿ ಅಮೆರಿಕದ ಕಾರ್ನೆಲ್ಲಿನಿಂದ ವಿಶೇಷ ಪ್ರವಚನಗಳಿಗಾಗಿ ಬಂದ ಆಹ್ವಾನವನ್ನು ಒಪ್ಪಿಕೊಂಡು ಅಲ್ಲಿಗೆ ಪ್ರಯಾಣ ಮಾಡಿದ. ಇದನ್ನು ತಾತ್ಕಾಲಿಕ ಏರ್ಪಾಡೆಂದು ಮೊದಲು ಬಗೆದಿದ್ದರೂ ಅದೇ ವೇಳೆ ಜರ್ಮನಿ, ಹಾಲೆಂಡುಗಳ ನಡುವೆ ಯುದ್ಧ ಘೋಷಿತವಾದ್ದರಿಂದ ಡೀಬೈ ಹಿಂದಿರುಗಲಿಲ್ಲ. ಕಾರ್ನೆಲ್ಲನ್ನೇ ತನ್ನ ಮುಂದಿನ ಕಾರ್ಯಸ್ಥಾನವನ್ನಾಗಿ ಆರಿಸಿಕೊಂಡ. ಹೀಗೆ ಯೂರೋಪು ತನ್ನ ಪ್ರತಿಭಾಶಾಲಿ ವಿಜ್ಞಾನಿಯೊಬ್ಬನನ್ನು ಕಳೆದುಕೊಂಡಿತು. ಅಮೆರಿಕದ ಪ್ರವೇಶದೊಂದಿಗೆ ಡೀಬೈ ತನ್ನ ವೈe್ಜ್ಞಾನಿಕ ಜೀವನದ ಮತ್ತೊಂದು ಹಂತವನ್ನು ಪ್ರವೇಶಿಸಿದ ಎನ್ನಬಹುದು. ಇನ್ನು ಮುಂದಿನ ಈತನ ವೃತ್ತಿಯನ್ನು ರಸಾಯನಶಾಸ್ತ್ರಾಧ್ಯಯನವೆಂದು ಕರೆಯಲಾಯಿತು. 1940ರಲ್ಲಿ ಕಾರ್ನೆಲ್ಲಿನ ರಸಾಯನಶಾಸ್ತ್ರ ವಿಭಾಗದ ನೇತೃತ್ವ ವಹಿಸಲು ಡೀಬೈಯನ್ನು ಕೋರಲಾಯಿತು. 1946ರಲ್ಲಿ ಈತ ಅಮೆರಿಕದ ಪೌರತ್ವವನ್ನು ಸ್ವೀಕರಿಸಿದ. 1950ರಲ್ಲಿ ಆಡಳಿತ ಜವಾಬ್ದಾರಿಯಿಂದ ಇವನನ್ನು ಪೂರ್ಣ ಮುಕ್ತಗೊಳಿಸಿ, ಪ್ರೊಫೆಸರ್ ಎಮೆರಿಟಸ್ ಪದವಿಗೆ ಏರಿಸಿದರು. ಆದರೆ ಸತತ ಸಂಶೋಧನೆಯಿಂದ ಮಾತ್ರ ಕೊನೆ ಉಸಿರಿರುವ ತನಕ ಈತ ನಿವೃತ್ತಿ ಪಡೆಯಲ್ಲಿಲ್ಲ. ಅಮೆರಿಕಕ್ಕೆ ಬಂದ ಕೂಡಲೆ ಡೀಬೈ ಮತ್ತೊಮ್ಮೆ ಹೊಸ ಕ್ಷೇತ್ರವೊಂದನ್ನು ಪ್ರವೇಶಿಸಿ ಅಲ್ಲಿಯೂ ಮೂಲಭೂತ ಕಾಣಿಕೆಗಳನ್ನು ನೀಡಿದ. ಈ ಬಾರಿ ಅವನ ಸಂಶೋಧನೆಯ ಮುಖ್ಯ ವಿಷಯ ಪಾಲಿಮರುಗಳು. ಇವು ಅನೇಕ ಕಾರ್ಬನಿಕ ಅಣುಗಳ ದೀರ್ಘ ಸರಪಳಿಗಳು (ಉದಾಹರಣೆಗೆ ರಬ್ಬರ್, ಪ್ಲಾಸ್ಟಿಕ್, ಪ್ರೋಟೀನು ಇತ್ಯಾದಿ). ಇವುಗಳ ದ್ರಾವಣಗಳ ಮೂಲಕ ಬೆಳಕಿನ ಚದರುವಿಕೆಯ ನೆರವಿನಿಂದ ಅಣುತೂಕ ಮತ್ತು ಆಸ್ಮಾಟಿಕ್ ಒತ್ತಡಗಳನ್ನು ನಿರ್ಧರಿಸುವ ವಿಧಾನವನ್ನು ಕಂಡುಹಿಡಿದ. ಈ ಪ್ರಯೋಗಗಳನ್ನು ವ್ಯಾವಹಾರಿಕ ರೂಪಕ್ಕೆ ತರಲು ಮಗ ಪಿ. ಪಾಲ್ ಡೀಬೈ ತಂದೆಗೆ ನೆರವಾದ.

ಒಬ್ಬ ವ್ಯಕ್ತಿಯ ಹಿರಿಮೆಗೆ ಅವನ ಸಾಧನೆಗಳೊಂದಿಗೆ ಅವನ ಹೆಸರು ಬೆಸೆದು ಹೋಗಿರುವುದು ಒಂದು ಅಳತೆಗೋಲು ಎನ್ನುವುದಾದರೆ ಮೇಲೆ ತಿಳಿಸಿದ ಹಲವಾರು ಸಂದರ್ಭಗಳಲ್ಲದೆ, ದ್ವಿಧ್ರುವ ಭ್ರಮಣಾಂಕದ (ಡೈಪೋಲ್ ಮೊಮೆಂಟ್) ಒಂದು ಮೂಲ ಮಾನದಲ್ಲೂ ಮತ್ತಿತರ ಕೆಲವೆಡೆಗಳಲ್ಲೂ ಡೀಬೈಯ ಹೆಸರು ಶಾಶ್ವತವಾಗಿ ನೆಲೆಸಿದೆಯೆಂಬುದನ್ನು ಇಲ್ಲಿ ನೆನೆಯಬಹುದು. ಭೌತ ರಸಾಯನವಿಜ್ಞಾನದಲ್ಲಿ ಕಡಿಮೆ ಪಕ್ಷ ಏಳು ಕ್ಷೇತ್ರದಲ್ಲಿ ಅವನ ಹೆಸರನ್ನು ಎಣಿಸಿ ಬೆರಗಾದವರೊಬ್ಬರಿಗೆ, ಒಬ್ಬ ವ್ಯಕ್ತಿಯ ಹಿರಿಮೆಯನ್ನಳೆಯಲು ಆವಿಷ್ಕಾರ ಸಾಂದ್ರತೆ ಎಂಬ ಹೊಸ ಮಾಪನವನ್ನು ಡೀಬೈಯೇ ಸೂಚಿಸಿದ. ವ್ಯಕ್ತಿಯ ಮಹತ್ಸಾಧನೆಗಳ ಸಂಖ್ಯೆಯನ್ನು ಅವನ ಜೀವಿತ ಸಹಾಯದಿಂದ ಭಾಗಿಸಿದರೆ ಬರುವ ಸಂಖ್ಯೆಯೇ ಈ ಆವಿಷ್ಕಾರ ಸಾಂದ್ರತೆ. ಡೀಬೈಯ 82 ವರ್ಷಗಳ ತುಂಬು ಜೀವನದಲ್ಲಿ ಈ ಆವಿಷ್ಕಾರ ಸಾಂದ್ರತೆಯೂ ಅಗಾಧ ಪ್ರಮಾಣದಲ್ಲಿ ಇತ್ತೆಂಬುದರಲ್ಲಿ ಸಂಶಯವಿಲ್ಲ. ಡೀಬೈಯನ್ನು ಅನೇಕ ವೈಜ್ಞಾನಿಕ ಸಂಸ್ಥೆಗಳು ಗೌರವಿಸಿವೆ.