ನರಹಳ್ಳಿ ಬಾಲಸುಬ್ರಹ್ಮಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನರಹಳ್ಳಿ ಬಾಲಸುಬ್ರಹ್ಮಣ್ಯ
ಜನನಸೆಪ್ಟೆಂಬರ್ ೫, ೧೯೫೩
ಮಂಡ್ಯ ಜಿಲ್ಲೆಯ ನರಹಳ್ಳಿ
ಉದ್ಯೋಗನಿವೃತ್ತ ಪ್ರಾಧ್ಯಾಪಕರು, ಸಾಹಿತ್ಯ ವಿಮರ್ಶಕರು
ಇದಕ್ಕೆ ಖ್ಯಾತರುಕನ್ನಡ ಸಾಹಿತ್ಯ ವಿಮರ್ಶೆ

ಕನ್ನಡದಲ್ಲಿ ವಿದ್ವತ್ಪೂರ್ಣ ವಿಮರ್ಶೆಗೆ ಹೆಸರಾದವರಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರದ್ದು ಪ್ರಮುಖ ಹೆಸರು. ಸಾಹಿತ್ಯದ ಅತಿ ಸಂಕೀರ್ಣ ಸಂಗತಿಗಳನ್ನು, ಒಣವಿಚಾರ ಎನ್ನಿಸದಿರುವಂತೆ ಅತಿ ಸ್ವಾರಸ್ಯಕರವಾಗಿ ಹಾಗೂ ಸರಳ ರೀತಿಯಲ್ಲಿ ವಿಶ್ಲೇಷಿಸುವುದರಲ್ಲಿ ಅವರು ಪ್ರಸಿದ್ಧಿ ಪಡೆದಿದ್ದಾರೆ.

ಜೀವನ[ಬದಲಾಯಿಸಿ]

ನರಹಳ್ಳಿ ಬಾಲಸುಬ್ರಮಣ್ಯ ಅವರು ಸೆಪ್ಟೆಂಬರ್ ೫, ೧೯೫೩ರಂದು ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಶಿವರಾಮಯ್ಯನವರು. ತಾಯಿ ರಾಜಲಕ್ಷಮ್ಮನವರು. ಸುಬ್ರಮಣ್ಯರ ಪ್ರಾರಂಭಿಕ ಶಾಲಾ ಓದು ನರಹಳ್ಳಿ, ಸುಂಕಾ ತೊಣ್ಣೂರು ಮತ್ತು ನಾಗಮಂಗಲಗಳಲ್ಲಿ ನೆರವೇರಿತು. ಅವರು ಪ್ರಥಮ ರ್ಯಾಂಕ್‌ನೊಡನೆ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕನ್ನಡ ಬಿ.ಎ. ಆನರ್ಸ್ ಪದವಿ ಹಾಗೂ ಪ್ರಥಮ ರ್ಯಾಂಕಿನಿಂದ ಕನ್ನಡ ಎಂ.ಎ. ಪದವಿ ಗಳಿಸಿ ಬಿ.ಎಂ.ಶ್ರೀ, ರಾಜರತ್ನಂ ಸ್ವರ್ಣ ಪದಕ ಪಡೆದುದೇ ಅಲ್ಲದೆ ಅತ್ಯುತ್ತಮ ವಿದ್ಯಾರ್ಥಿ ಎಂಬ ರಾಜ್ಯ ಪ್ರಶಸ್ತಿ ಹಾಗೂ ಭಾರತ ಸರಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದ ಪ್ರತಿಭಾವಂತರು. ಮುಂದೆ ಬಾಲಸುಬ್ರಮಣ್ಯರು ‘ಆಧುನಿಕ ಕಾವ್ಯದ ಹಿನ್ನೆಲೆಯಲ್ಲಿ ಕೆ.ಎಸ್‌.ನ. ಕಾವ್ಯ - ಒಂದು ಅಧ್ಯಯನ’ ಎಂಬ ಪ್ರೌಢಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಕೆ.ಎಸ್‌.ನ ಬಗ್ಗೆ ಇವರ ಮತ್ತೊಂದು ಮಹತ್ವದ ಕೃತಿಯೆಂದರೆ ಪೂರ್ಣ ಪ್ರಮಾಣದ ಸಂದರ್ಶನ ಕೃತಿಯಾದ ‘ಕೆ.ಎಸ್‌.ನ: ನುಡಿಮಲ್ಲಿಗೆ’. ಇದು ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗಿರುವ ಈ ಮಾದರಿಯ ವೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಕರ ದಿನಾಚರಣೆಯಂದು ಹುಟ್ಟಿದ ನರಹಳ್ಳಿಯವರು ಬೆಂಗಳೂರು ಶೇಷಾದ್ರಿಪುರಂ ಕಾಲೇಜು ಕನ್ನಡ ವಿಭಾಗಕ್ಕೆ ಸೇರಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು.

ಸಾಹಿತ್ಯ ವಿಮರ್ಶೆ[ಬದಲಾಯಿಸಿ]

ಕಳೆದ ಮೂರು ದಶಕಗಳಿಗೂ ಮೀರಿ ನಿರಂತರವಾಗಿ ಸಾಹಿತ್ಯಿಕ ಅನುಸಂಧಾನದಲ್ಲಿ ತೊಡಗಿಸಿ ಕೊಂಡಿರುವ ಬಾಲಸುಬ್ರಮಣ್ಯರು, ತಮ್ಮ ಸ್ವಯಂ ಪ್ರತಿಭೆಯಿಂದ ವಿಮರ್ಶನ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿವ್ಯಕ್ತಿಯ ಛಾಪನ್ನು ಮೂಡಿಸಿದ್ದಾರೆ. ಅವರು ಯಾವುದೇ ಪ್ರಾಚೀನ ಕೃತಿಯನ್ನು ಕುರಿತು ಹೇಳುವಾಗ ಅದನ್ನು ಆಧುನಿಕ ಪ್ರಸ್ತುತತೆಯ ನಿಟ್ಟಿನಲ್ಲಿ ಪರಿಶೀಲಿಸುವಂತೆ ಯೇ, ಆಧುನಿಕ ಕೃತಿಯನ್ನು ವಿಮರ್ಶೆಗೆ ಒಡ್ಡುವಾಗ ಪಾರಂಪರಿಕವಾಗಿ ಅದು ಪಡೆಯಬಹುದಾದ ಅರ್ಥವನ್ನು ವಿವೇಚಿಸ ಹೊರಡುವುದು ವೈಶಿಷ್ಟ್ಯಪೂರ್ಣವೆನಿಸಿದೆ. ನರಹಳ್ಳಿ ಬಾಲಸುಬ್ರಮಣ್ಯರು, ಜನಪರ ಸಂಸ್ಕೃತಿಯನ್ನು ಕುರಿತು ಹೇಳುವಾಗ, ಇಂದಿನ ಕೊಳ್ಳು ಬಾಕ ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಾಧಾರವಾದ ಸ್ನಾಯು ಬಲದಿಂದ ಹೆಚ್ಚುತ್ತಿರುವ ದ್ವೇಷ, ಅಸಹನೆ, ಹಿಂಸೆ ಮುಂತಾದವುಗಳು ಇಂದಿನ ಜೀವನ ಕ್ರಮದಲ್ಲಿ ಹೇಗೆ ಅನಿವಾರ್ಯವಾಗಿ ಬಿಟ್ಟಿದೆ ಎಂಬುದನ್ನು ವಿವೇಚಿಸುವ ಸಂದರ್ಭದಲ್ಲಿ, ಗಾಂಧೀಜಿಯವರ ಸರಳತೆ, ಪ್ರೀತಿಸುವ ಶಕ್ತಿ, ಪ್ರಾಮಾಣಿಕತೆ ಹಾಗೂ ಸಮುದಾಯದ ಬಗೆಗಿನ ಕಾಳಜಿಗಳ ಬಗ್ಗೆ ಗಮನ ಹರಿಯುವಂತೆ ಮಾಡುತ್ತಾರೆ. ಸಾಹಿತ್ಯಪರ ಚಿಂತನೆ ಮಾಡುವಾಗಲೆಲ್ಲಾ, ಕಳೆದ ಶತಮಾನದ ಸಾಹಿತ್ಯವನ್ನೂ ಅರ್ಥೈಸುವ, ಜೊತೆಗೆ ಮರುಚಿಂತನೆಗೆ ಗುರಿಪಡಿಸುವ ಅಗತ್ಯತೆಯನ್ನೂ ಅವರು ಒತ್ತಿ ಹೇಳುತ್ತಾರೆ.

ನರಹಳ್ಳಿ ಬಾಲಸುಬ್ರಮಣ್ಯ ಅವರು ಚಿಂತನೆ ನಡೆಸಿ ಪ್ರಕಟಿಸಿರುವ ಎರಡು ಪೂರ್ಣ ಪ್ರಮಾಣದ ಕೃತಿಗಳೆಂದರೆ ಕುವೆಂಪುರವರ ನಾಟಕಗಳ ಅಧ್ಯಯನ ಮತ್ತು ಕುವೆಂಪು ಕಾವ್ಯವನ್ನು ಕುರಿತ ಗ್ರಂಥಗಳು ಮತ್ತು ಜಿ.ಎಸ್‌.ಶಿವರುದ್ರಪ್ಪನವರ ಕಾವ್ಯದ ಸಮಗ್ರ ಅಧ್ಯಯನದ ಕೃತಿ, ‘ಹಣತೆಯ ಹಾಡು’.

  • ಅನುಸಂಧಾನ.
  • ನವ್ಯತೆ.
  • ಇಹದ ಪರಿಮಳದ ಹಾದಿ.
  • ಸಾಹಿತ್ಯ ಸಂಸ್ಕೃತಿ.
  • ಹಣತೆಯ ಹಾಡು.
  • ನೆಲ ಸಂಸ್ಕೃತಿ.
  • ಸಂಸ್ಕೃತಿ ಪಥ. ‌‌
  • ಅ.ನ.ಕೃ ಮತ್ತು ಕನ್ನಡ ಸಂಸ್ಕೃತಿ.
  • ಕುವೆಂಪುರವರ ನಾಟಕಗಳ ಅಧ್ಯಯನ. ‌‌

ಪ್ರಬಂಧ ಸಂಕಲನಗಳು[ಬದಲಾಯಿಸಿ]

  • ಅಂತರಂಗದ ಮೃದಂಗ.
  • ಜೀವದಾಯಿನಿ.

ಅನುವಾದಗಳು[ಬದಲಾಯಿಸಿ]

  • ಸಿಂಗಲ್ ಕಥೆಗಳು (ಐಸಾಕ್‌ ಬಾಷೆ ವಿಸ್‌ ಸಿಂಗರ್ ಅವರ ಕತೆಗಳ ಅನುವಾದ),
  • ಮಾರ್ಕ್ವೆಜ್ ಕಥೆಗಳು (ಗೇಬ್ರಿಯಲ್‌ ಗಾರ್ಸಿಯ ಮಾರ್ಕ್ವೆಜ್‌ ಕತೆಗಳು).
  • ಕಡಿದಾದ ಹಾದಿ (ಆಂದ್ರೆಜೀದ್‌ ಅವರ ಕಾದಂಬರಿ ಅನುವಾದ)

ಸಂಪಾದನೆ[ಬದಲಾಯಿಸಿ]

ನರಹಳ್ಳಿ ಬಾಲಸುಬ್ರಮಣ್ಯ ಅವರು ಇತರರೊಡನೆ ಸಂಪಾದಿಸಿರುವ ಕೃತಿಗಳಲ್ಲಿ ಕ್ರಿಸ್ತಾಂಜಲಿ, ೧೯೮೨ರ ವಿಮರ್ಶೆ, ಹೊಸಹೆಜ್ಜೆ, ಕಥನ ಕವನಗಳು, ಸಂಗ್ರಹ ಷಟ್ಪದಿ ಮತ್ತು ಅಪೂರ್ವ ಕೃತಿಗಳು ಮುಂತಾದವು ಸೇರಿವೆ.

ಸಾಹಿತ್ಯಕ ಒಡನಾಟ[ಬದಲಾಯಿಸಿ]

ನರಹಳ್ಳಿ ಬಾಲಸುಬ್ರಮಣ್ಯ ಅವರು ಸಾಹಿತ್ಯ ನಿರ್ಮಾಣ, ವಿಮರ್ಶೆಯ ಜೊತೆ ಜೊತೆಗೇ ಹಲವಾರು ಸಂಘ-ಸಂಸ್ಥೆಗಳೊಡನೆ ಸಕ್ರಿಯ ಒಡನಾಟ ಹೊಂದಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸಂಘವನ್ನೂ ಕಟ್ಟಿ ಬೆಳೆಸಿದ್ದಲ್ಲದೆ ೨೫ ಮಹತ್ವದ ಕೃತಿ ಪ್ರಕಟಣೆಗಳಲ್ಲಿ ಮಹತ್ವದ ಪಾತ್ರ ವಹಿಸಿ, ಅನೇಕ ಸಂಘ-ಸಂಸ್ಥೆಗಳ ಸಲಹೆಗಾರರಾಗಿ; ವಿಶ್ವವಿದ್ಯಾಲಯ, ಸಾಹಿತ್ಯ ಅಕಾಡೆಮಿ, ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಕನ್ನಡ ಸಂಸ್ಥೆಗಳು ಮುಂಬಯಿ, ಚೆನ್ನೈ, ಕಾಸರಗೋಡು, ಒಡಿಶಾ, ದೆಹಲಿ ಮುಂತಾದೆಡೆಗಳಲ್ಲಿ ಆಯೋಜಿಸಿರುವ ವಿಚಾರ ಸಂಕಿರಣಗಳಲ್ಲಿ ಪ್ರತಿನಿಧಿಯಾಗಿ ಹೀಗೆ ವಿವಿಧ ರೀತಿಯಲ್ಲಿ ಕನ್ನಡದ ಬಗೆಗಿನ ಕಾಳಜಿಗಾಗಿ, ಅದರ ಏಳಿಗೆಗಾಗಿ ದುಡಿಯುತ್ತಿದ್ದಾರೆ.

ಪ್ರಶಸ್ತಿ /ಗೌರವಗಳು[ಬದಲಾಯಿಸಿ]

ಬಿಡಿಯಾಗಿ ಓದಿ ವಿಮರ್ಶಿಸುವ ಕ್ರಮಕ್ಕಿಂತ ಇಡಿಯಾಗಿ ಓದಿ ವಿಮರ್ಶಿಸುವಂತಹ ಅಧ್ಯಯನ ಕ್ರಮದ ಬಗ್ಗೆ ಕಾಳಜಿ ಹೊಂದಿರುವ ನರಹಳ್ಳಿಯವರ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ:

  1. ವಿ.ಎಂ. ಇನಾಂದಾರ್ ಪ್ರಶಸ್ತಿ,
  2. ಆದರ್ಶ ಸಾಹಿತ್ಯ ರತ್ನ ಪ್ರಶಸ್ತಿ,
  3. ಜಿ.ಎಸ್‌.ಎಸ್‌. ಪ್ರಶಸ್ತಿ,
  4. ಆರ್ಯಭಟ ಪ್ರಶಸ್ತಿ,
  5. ಕಾವ್ಯಾನಂದ ಪ್ರಶಸ್ತಿ,
  6. ವಿಶ್ವಮಾನವ ಪ್ರಶಸ್ತಿ,
  7. ಸ.ಸ. ಮಾಳವಾಡ ಪ್ರಶಸ್ತಿ,
  8. ಗೋರಖನಾಥ ಪುರಸ್ಕಾರ, (ಬೆಂಗಳೂರು)
  9. ಶಿವರಾಮ ಕಾರಂತ ಪ್ರಶಸ್ತಿ,[೧]

ಶ್ಲಾಘನೆ[ಬದಲಾಯಿಸಿ]

ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರ ಹಿರಿತು ಹಿರಿಯ ವಿಮರ್ಶಕರಾದ ಡಾ. ಎಲ್. ಎಸ್. ಶೇಷಗಿರಿರಾವ್ ಅವರು ಹೀಗೆ ಹೇಳುತ್ತಾರೆ: “ನಾನು ಅನಕೃ ಅವರ ಕಿರಿಯ ಸಮಕಾಲೀನ. ಅವರೊಡನೆ ಚರ್ಚೆಗಳನ್ನು ಮಾಡಿದವನು. ಅವರ ಕಾರ್ಯವೈಖರಿಯನ್ನು ಕಂಡವನು, ಅವರ ಬರಹಗಳು ಪ್ರಕಟವಾಗುತ್ತಿದ್ದಂತೆಯೆ ಓದಿದವನು, ಅವನ್ನು ಕುರಿತು ಚಿಂತಿಸಿದವನು, ಒಮ್ಮೊಮ್ಮೆ ಅವರೊಡನೆಯೆ ಚರ್ಚೆ ಮಾಡಿದವನು, ಜಗಳವನ್ನೂ ಆಡಿದವನು. ಆದರೆ ನರಹಳ್ಳಿಯವರ 'ಅನಕೃ ಮತ್ತು ಕನ್ನಡ ಸಂಸ್ಕೃತಿ' ಎನ್ನುವ ಪುಸ್ತಕವನ್ನು ಓದಿದಾಗ ಡಾ. ನರಹಳ್ಳಿಯವರು ಹೊಚ್ಚ ಹೊಸ ಅಂಶಗಳನ್ನು ನಿರೂಪಿಸಿದ್ದನ್ನು ಕಂಡು ಆಶ್ಚರ್ಯವಾಯಿತು, ಸಂತೋಷವಾಯಿತು. ಅವರು ಕುವೆಂಪು ಅವರ ಮೇಲೆ ಬರೆಯಲಿ, ವ್ಯಾಸರಾಯ ಬಲ್ಲಾಳರ ಮೇಲೆ ಬರೆಯಲಿ, ಜಿ.ಎಸ್. ಆಮೂರರ ಮೇಲೆ ಬರೆಯಲಿ, ಎ.ಕೆ. ರಾಮಾನುಜನ್ ಅವರ ಮೇಲೆ ಬರೆಯಲಿ, ಜಿಡ್ಡು ಕೃಷ್ಣಮೂರ್ತಿ ಅವರ ಮೇಲೆ ಬರೆಯಲಿ, ನಾವು ಯೋಚಿಸಬೇಕಾದ ಹಲವು ಅಂಶಗಳನ್ನು ಮುಂದಿಡುತ್ತಾರೆ. ಸಮುದಾಯದ ಸಂಸ್ಕೃತಿಯಲ್ಲಿ ಆಳವಾದ ಆಸಕ್ತಿ ಇರುವ ನರಹಳ್ಳಿಯವರು ವ್ಯಕ್ತಿಯ ಭಾವ ಜಗತ್ತಿಗೂ ಗಮನ ಕೊಡುತ್ತಾರೆ. ನಾನು ಗಮನಿಸಿರುವ ಒಂದು ಅಂಶವೆಂದರೆ ಅವರ ಬರಹ ಎಷ್ಟೇ ವಿದ್ವತ್ಪೂರ್ಣವಾಗಿರಲಿ, ಚಿಂತನಶೀಲವಾಗಿರಲಿ ಓದುವಾಗ ಸಂತೋಷವನ್ನು ಕೊಡುತ್ತದೆ. ಸೊಗಸಾದ ವಿಮರ್ಶೆಯನ್ನು ಸಂತೋಷ ಕೊಡುವ ಶೈಲಿಯಾಗಿ ಸ್ಪಷ್ಟವಾದ ಮಾತುಗಳಲ್ಲಿ ಲಭ್ಯ ಮಾಡಿ ಕೊಡಬಲ್ಲವರು ಅವರು. ಅವರು ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರಕ್ಕೆ ಒಂದು ಆಸ್ತಿ.”

ಉಲ್ಲೇಖ[ಬದಲಾಯಿಸಿ]

  1. ಕಣಜ Archived 2014-04-03 ವೇಬ್ಯಾಕ್ ಮೆಷಿನ್ ನಲ್ಲಿ.
  2. ಮಹಾಭಾರತ ಸಾರ್ವಕಾಲಿಕ Archived 2013-07-22 ವೇಬ್ಯಾಕ್ ಮೆಷಿನ್ ನಲ್ಲಿ.
  3. ನರಹಳ್ಳಿ ಕನ್ನಡ ವಿಮರ್ಶೆಯ ಆಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
  1. ಅಭಿನವದ ಎನ್.ರವಿಕುಮಾರ್ ನರಹಳ್ಳಿಯವರನ್ನು ಸಂದರ್ಶಿಸಿದರು. ಅವಧಿ,೨೩, ಆಗಸ್ಟ್,೨೦೧೬, ನರಹಳ್ಳಿ ಸರ್ ಗೆ,ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ