ದೀವರ ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ




ಇದು ಮಲೆನಾಡಿನಲ್ಲಿ ಮಾತ್ರ ಕಂಡುಬರುವ ಜನಪದರ ಆಚರಣೆಗಳ ಮೂಲದ ಆದಿಮ ರೇಖಾ ಶೈಲಿಯ ಪುರಾತನ ಚಿತ್ರಕಲೆಯಾಗಿದೆ.

ನಿಸರ್ಗದ ಇತರೆ ಪ್ರಾಣಿಗಳಂತೆ ಮನುಷ್ಯನೂ ಸಹ ಒಂದು ಪ್ರಾಣಿಯಾದರೂ ಸಹ ನಿಸರ್ಗದ ನೆಲಮೂಲದ ಅನುಭವಗಳಿಂದ ಕಲಿಯುತ್ತಾ , ಹೊಸತನ್ನು ಅನ್ವೇಷಿಸುತ್ತಾ , ಅನುಕರಿಸುತ್ತಲೇ ಕುಣಿಯುವುದನ್ನು, ಮಾತನಾಡುವುದನ್ನು,ಹಾಡುವುದನ್ನು , ಚಿತ್ತಾರ ಬಿಡಿಸುವುದನ್ನು ಕಲಿತುಕೊಂಡು ಹುಟ್ಟು ಕಲಾವಿದನಾದ. ನಾಗರಿಕತೆ ಕಲಿತಂತೆ ಮನುಷ್ಯನ ಕಲಾ ವೈವಿಧ್ಯತೆ ಬೆಳೆಯಿತು. ಅಂದು ಕಲಿತ ಬುಡಕಟ್ಟು ಸಂಪ್ರದಾಯ ಚಿತ್ತಾರ ಕಲೆ ಇಂದಿನವರೆಗೆ ಪರಂಪರೆಯಿಂದ ಸಾಗಿ ಬಂದು ವಿಶಿಷ್ಟತೆ ಹೆಚ್ಚಿಸಿಕೊಳ್ಳುತ್ತಲೇ ಬದುಕು ಕಟ್ಟಿಕೊಳ್ಳುತ್ತಿದ್ದಾನೆ. ಅಂತಹ ವಿಶಿಷ್ಟ ಪರಂಪರೆಯ ಚಿತ್ತಾರ ಕಲೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಬೆಳೆದುಬಂದ ಮಲೆನಾಡಿನ ಲಕ್ಷಾಂತರ ದೀವರ ಕುಟುಂಬದಲ್ಲಿ ಹಾಗೂ ಅಲ್ಲಲ್ಲಿ ಇತರೆ ಜನಸಮುದಾಯದ ಆಚರಣೆಗಳಲ್ಲಿ ಕಾಣಸಿಗುವ ಹಸೆ ಚಿತ್ತಾರ ಕಲೆಯೂ ಸಹ ಅತಿ ವಿಶಿಷ್ಟವಾದದ್ದು.

ಬೂಮಣ್ಣಿ ಬುಟ್ಟಿ ಚಿತ್ತಾರ
ವರ್ಲಿ ಕಲೆಗೂ ಮತ್ತು ಹಸೆ ಚಿತ್ತಾರಕ್ಕೂ ಇರುವ ವ್ಯತ್ಯಾಸ ಮತ್ತು ಹೋಲಿಕೆ
ಇದು ಮೇಲ್ನೋಟಕ್ಕೆ ವರ್ಲಿ ಕಲೆ ಅಂತೆಯೇ ಕಂಡರು ಸಹ ಹಲವು ವ್ಯತ್ಯಾಸಗಳಿವೆ. ಹಸೆ ಚಿತ್ತಾರದ ಹಿಂದೆ ಹಬ್ಬ ಮದುವೆಯ ಸಡಗರ ಸಂಭ್ರಮವಿದೆ. ನಿಸರ್ಗ ಆರಾಧನೆ ಫಲವಂತಿಕೆಯ ಸಾಂಕೇತಿಕ ಮೋಟಿಫ್ ಗಳಿವೆ. ಅನನ್ಯವಾದ ಸಾಂಪ್ರದಾಯಿಕ ಪರಂಪರೆಯಿದೆ. ವಿಶಿಷ್ಟವಾದ ಜಾಮಿತಿಯ ವಿನ್ಯಾಸಗಳಿವೆ. ನೈಸರ್ಗಿಕ ಬಣ್ಣಗಳ  ಬಳಕೆಯ ಅನ್ವೇಷಣೆ ಇದೆ. ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ, ಹಾಗೂ ಜಗತ್ತಿನ ಹಲವೆಡೆ ಬುಡಕಟ್ಟು ಸಂಪ್ರದಾಯಿಕ ಚಿತ್ತಾರ ಕಲೆ ಕಂಡುಬರುತ್ತದೆ. ಮಹಾರಾಷ್ಟ್ರದಲ್ಲಿ ವರ್ಲಿ, ಬಿಹಾರದಲ್ಲಿ ಮಧುಬನಿ ಚಿತ್ತಾರ ಕಲೆ ಇದ್ದಂತೆ ಕರ್ನಾಟಕದಲ್ಲಿ ಹಸೆ ಚಿತ್ತಾರ ಪರಂಪರೆ ಮದುವೆ,ಹಬ್ಬಗಳ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ರಾಜಸ್ಥಾನ ಹರಿಯಾಣ ಉತ್ತರ ಪ್ರದೇಶಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಗೋಡೆ ಮೇಲೆ ಸಾಂಜಿದೇವಿಯ ಚಿತ್ರ ಬರೆಯುವ ಪರಂಪರೆಯಿದೆ.ಸಂಜೆ ದೇವಿಯ ಉಬ್ಬುಚಿತ್ರ ಹಲವಾರು ನಕ್ಷೆಗಳನ್ನು ಸೂರ್ಯ-ಚಂದ್ರ ಮರ ಗಿಡ ಬಳ್ಳಿ ಒಂಬತ್ತು ದಿನ ಪೂಜಿಸುತ್ತಾರೆ. ಕರ್ನಾಟಕದಲ್ಲಿ ಕುಣಬಿ ಯವರು, ಗೊಂಡರು ನಾಮದಾರಿಗಳು ಹಾಲಕ್ಕಿಗಳು ಸಹ ವಿವಿಧ ರೀತಿಯ ಸರಳ ಗೋಡೆ ಚಿತ್ತಾರ ಬರೆಯುತ್ತಾರೆ. ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಬುಡಕಟ್ಟು ಚಿತ್ತಾರ ಪರಂಪರೆಯಿದೆ.

ಹಸೆ ಚಿತ್ತಾರ ಪರಂಪರೆ

ಮಲೆನಾಡಿನ ದೀವರ ಹಸೆಚಿತ್ತಾರದಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ವಿಶಿಷ್ಟ ವಿನ್ಯಾಸಗಳು ಕಂಡುಬರುತ್ತದೆ.ಪೀಳಿಗೆಯಿಂದ ಪೀಳಿಗೆಗೆ, ಪ್ರದೇಶದಿಂದ ಪ್ರದೇಶಕ್ಕೆ ಮಹಿಳೆಯರು ತಮ್ಮದೇ ನೆಲಮೂಲದ ಜ್ಞಾನದಿಂದ ವಿನ್ಯಾಸದಲ್ಲಿ ಒಂದಿಷ್ಟು ನಾವಿನ್ಯತೆಯನ್ನು ಕಂಡುಕೊಳ್ಳುತ್ತಾ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಜಾಗತೀಕರಣದ ಇಂದಿನ ಕಾಲದಲ್ಲೂ ಸಹ ನಮ್ಮ ಹಳ್ಳಿಗಳ ಚಿತ್ತಾರಗಿತ್ತಿ ಯರು ಹಸೆ ಚಿತ್ತಾರವನ್ನು ಮದುವೆ, ಹಬ್ಬಗಳ ಸಂಪ್ರದಾಯದ ಪರಂಪರೆಯ ಭಾಗವಾಗಿಯೇ ಉಳಿಸಿಕೊಂಡು ಪೋಷಿಸಿಕೊಂಡು ಬಂದಿದ್ದಾರೆ. ಇತ್ತೀಚಿಗೆ ಕೆಲವು ಚಿತ್ತಾರ ಗಿತ್ತಿಯರು, ಕಲಾವಿದರು ಇದನ್ನು ಅನ್ನ ನೀಡುವ ಕಲೆಯನ್ನಾಗಿಯು ಬಳಸಿಕೊಳ್ಳಲು ಪ್ರಯತ್ನಿಸಿ ಮುಂದೆ ಸಾಗುತ್ತಿದ್ದಾರೆ. ಅಂತರ್ರಾಜ್ಯ ,ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಹಸೆ ಚಿತ್ತಾರ ಪ್ರದರ್ಶನವನ್ನು ಮಾಡಿ ಕರ್ನಾಟಕದ ನೆಲಮೂಲದ ಚಿತ್ರ ಕಲೆಗೆ ಜಾಗತಿಕ ಪ್ರಸಂಸೆ ತಂದುಕೊಟ್ಟಿದ್ದಾರೆ.

ದೀವರ ಹಸೆ ಚಿತ್ತಾರ ಮಾದರಿ ಹೋಲುವ ಇತರೆ ಚಿತ್ತಾರಗಳು

ಮಲೆನಾಡಿನಲ್ಲಿ ಕಂಡುಬರುವ ದೀವರ ಹಸೆ ಗೋಡೆ ಚಿತ್ತಾರ, ಪುರಾತನವಾದುದು. ವಿರಳವಾಗಿ ಅಲ್ಲಲ್ಲಿ ಕೆಲವು ಸಮುದಾಯಗಳ ಕೆಲವು ಕುಟುಂಬಗಳಲ್ಲಿ ಹಸೆ ಚಿತ್ತಾರ ಹೋಲುವ ಕೆಲವು ಮಾದಮಾದರಿಗಳಿವೆ.ಕರೆ ಒಕ್ಕಲಿಗರು, ಗೊಂಡರು ,ಹಸಲರ ಕೆಲವು ಕುಟುಂಬಗಳಲ್ಲಿ ಚಿತ್ತಾರ ಬರೆಯುವ ಸಂಪ್ರದಾಯ ಇದೆ. ಸರಳ ಶೈಲಿಯಲ್ಲಿ ಇವೆ, ಕೆಲವು ಕಡೆ ಹವ್ಯಕರ ಕೆಲವು ಕಲಾವಿದರು ಕಲಿತು ಬಿಡಿಸುವುದು ರೂಢಿಯಿದೆ. ಪ್ರಾಚೀನ ಕಲೆಯಾದ ರಂಗೋಲಿಯ ಕೆಲವು ಬಗೆಗಳು , ಹಚ್ಚೆ, ಶೇಡಿ ಸಹ ಜನಪದರ ಚಿತ್ತಾರ ಕಲಾ ಮಾದರಿಗಳೇ ಆಗಿವೆ. ಇದೇ ಮಾದರಿ ಹೋಲುತ್ತವೆ. ಮದುವೆ ಶಾಸ್ತ್ರಕ್ಕಾಗಿ ಹಸೆ ಚಿತ್ತಾರವನ್ನು ಕೆಲವು ಜನಾಂಗಗಳು ಬರೆಯುವುದು ಈಗಲೂ ರೂಢಿಯಲ್ಲಿದೆ. ಆದರೆ ಜನಾಂಗದಿಂದ ಜನಾಂಗಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಕೆಲವೊಂದು ವಿನ್ಯಾಸದಲ್ಲಿ ವ್ಯತ್ಯಾಸಗಳಿವೆ. ಹಲವರು ಸರಳ ವಿನ್ಯಾಸ ಅನುಸರಿಸಿದರೆ, ಮಲೆನಾಡಿನ ಧೀವರು ಬರೆಯುವ ಹಸೆಗೋಡೆ ಚಿತ್ತಾರ, ಭೂಮಣ್ಣಿ ಬುಟ್ಟಿ ಚಿತ್ತಾರ ವಿನ್ಯಾಸದಲ್ಲಿ ಸಾಕಷ್ಟು ಕುಶಲತೆಯನ್ನು , ಅಂತಃಸತ್ವವನ್ನು ಹೊಂದಿದೆ.ಹಲವು ಜಾಮಿತಿಯ ಅಂಶಗಳನ್ನು ಹೊಂದಿದೆ. ಭೂಮಣ್ಣಿ ಬುಟ್ಟಿ ಚಿತ್ತಾರ , ಮತ್ತು ಭೂಮಿ ಹಬ್ಬದ ಸಂಪ್ರದಾಯ ಮಲೆನಾಡಿನ ದೀವರಲ್ಲಿ ಮತ್ತಷ್ಟು ವಿಶಿಷ್ಟವಾಗಿದೆ. ನಮ್ಮ ದೇಶದಲ್ಲಿ ಕಂಡು ಬರುವ ಬಹುತೇಕ ಎಲ್ಲ ಬಗೆಯ ಜನಪದರ ಚಿತ್ತಾರದ ಬಗೆಗಳನ್ನು ಹೆಣ್ಣು ಮಕ್ಕಳು ಮಾತ್ರ ಬರೆಯುವುದು ಮತ್ತೊಂದು ವಿಶೇಷ. ಬಿಹಾರದ ಮಧುಬನಿ, ಮಹಾರಾಷ್ಟ್ರದ ವರ್ಲಿ, ಕರ್ನಾಟಕದ ಹಸೆ ಚಿತ್ತಾರವನ್ನು ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಚಿತ್ರಕಲಾ ಬಗೆಗಳಾಗಿ ಬಿಂಬಿಸುವಲ್ಲಿ ಈಗ ಮಹಿಳೆಯರ ಜೊತೆ ಹಲವು ಕಡೆ ಪುರುಷ ಕಲಾವಿದರು ಸಹ ಬರೆಯುತ್ತಿದ್ದಾರೆ. ಆದರೂ ಮೂಲತಹ ಇದು ಬುಡಕಟ್ಟು ವರ್ಗಗಳ ಜನಪದರ ಹೆಣ್ಣು ಮಕ್ಕಳ ಕಲೆ.

ಜನಪದ ಚಿತ್ರಕಲೆಗಳು ಮಾನವನ ಮೂಲಸಂವೇದನೆಗಳಿಗೆ ತೀರ ಹತ್ತಿರವಾದವುಗಳಾಗಿವೆ. ಇವು ಜನರ ಬದುಕಿನಷ್ಟೇ ವೈವಿಧ್ಯಪೂರ್ಣವಾಗಿರುತ್ತವೆ. ಜನಪದರು ತಮ್ಮ ಅನುಭವಗಳಿಗೆ ಜೀವಕೊಟ್ಟದ್ದು, ಬಣ್ಣ ತುಂಬಿದ್ದು ಇಂಥ ಕಲೆಗಳ ಮೂಲಕ. ಆದುದರಿಂದ ಇವು ಜನಪದರ ಬದುಕಿನ ವೈವಿಧ್ಯ ಕಲಾಪರಂಪರೆ, ಹೃದಯ ಶ್ರೀಮಂತಿಕೆ ಹಾಗೂ ಸಂಸ್ಕಾರವಂತಿಕೆಗಳನ್ನು ತಿಳಿಸಿಕೊಡುತ್ತವೆ. ಹೀಗೆ ಜನಪದ ಚಿತ್ರಕಲೆ ಜನಾಂಗಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಭೌಗೋಳಿಕ ಅಂಶಗಳಿಂದ ಕೂಡಿದುದಾಗಿರುತ್ತದೆ. thumb|ಹಸೆ ಚಿತ್ತಾರ ಸಂಶೋಧನಾ ಕೃತಿ ಜನಪದರ ಸೌಂದರ್ಯ ಮೂಲಪ್ರಜ್ಞೆಯ ವರ್ಣರೇಖಾ ರೂಪವೇ ಜನಪದ ಚಿತ್ರಕಲೆ. ಹೀಗೆ ಜನಪದರ ಚಿತ್ರಕಲೆಯಲ್ಲಿ ಸೌಂದರ್ಯವೇ ಮೂಲಘಟಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಮಗ್ರ ಜನಪದ ಚಿತ್ರಕಲೆಗಳನ್ನು ಸೌಂದರ್ಯ ಮೂಲ, ಪ್ರಯೋಜನ ಮೂಲ, ಮನರಂಜನೆ ಮೂಲ, ಧರ್ಮಮೂಲ, ವೃತ್ತಿಮೂಲಗಳೆಂದು ವರ್ಗೀಕರಿಸಬಹುದು. ಜನಪದ ಚಿತ್ರಕಲೆಯಲ್ಲಿ ಜನಪದರ ದಟ್ಟವಾದ ಬದುಕು ಇರುವುದನ್ನು ಕಾಣುತ್ತೇವೆ. ಶಿಷ್ಟಪದ ಚಿತ್ರಕಲೆಯಲ್ಲಿ ಕಲಿಕೆಯ ಅನಿವಾರ್ಯತೆಯಿಂದಾಗಿ ಬೆರಳಣಿಕೆಯಷ್ಟು ಮಹಿಳೆಯರಿದ್ದರೆ ಜನಪದ ಚಿತ್ರಕಲೆಯಲ್ಲಿ ಮಹಿಳೆಯರದೇ ಸಿಂಹಪಾಲು. ಜನಪದ ಚಿತ್ರಕಲೆ ಸಂಪ್ರದಾಯನಿಷ್ಠವಾಗಿ ಸರಳ ರೂಪದಲ್ಲಿದ್ದರೆ ಶಿಷ್ಟಪದ ಚಿತ್ರಕಲೆ ಸಂಕೀರ್ಣನಿಷ್ಠವಾಗಿ ಕ್ಲಿಷ್ಟತೆಯನ್ನು ಹೊಂದಿರುತ್ತದೆ.

ಹಸೆಚಿತ್ತಾರ ಕಲೆ ಬಳಕೆಯ ಪ್ರದೇಶಗಳು

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯ ಸಿರ್ಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ದೀವರು ಜನಾಂಗದವರು ಹೆಚ್ಚಾಗಿ ವಾಸವಾಗಿದ್ದಾರೆ. ಈ ಜನಾಂಗದ ಮಹಿಳೆಯರು ಪುರಾತನ ಕಾಲದಿಂದ ಹಸೆಚಿತ್ರ ಕಲೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಬೆಳೆದು ನಿಂತ ಭತ್ತದ ಗದ್ದೆಗಳಿಂದ ಭತ್ತದ ತೆನೆಗಳನ್ನು ಕೊಯ್ದು ತಂದು ಬಾಗಿಲು ತೋರಣ, ಜುಮುಕಿ, ಭತ್ತದಿಂದ ತಯಾರಿಸುವ ಭತ್ತದ ಮಂಟಪ, ಪೆಟ್ಟಿಗೆಗಳನ್ನು ತುಂಬಾ ಸುಂದರವಾಗಿ ಮತ್ತು ಕಲಾತ್ಮಕವಾಗಿ ತಯಾರಿಸುತ್ತಾರೆ. ಗುಡ್ಡಬೆಟ್ಟಗಳಲ್ಲಿ ಬೆಳೆಯುವ ಈಚಲು ಹುಲ್ಲನ್ನು ತಂದು ಬಣ್ಣ, ಬಣ್ಣದ ಚಾಪೆಗಳನ್ನು ಹೆಣೆಯುತ್ತಾರೆ. ಹೊಲಗದ್ದೆಗಳಲ್ಲಿ ಬೆಳೆಯುವ “ಹಿಟ್ಟಂಡೆ” ಎಂಬ ಹುಲ್ಲನ್ನು ತಂದು ಹೂದಾನಿಬುಟ್ಟಿ, ಆಭರಣಗಳನ್ನು ಇಡುವ ಪೆಟ್ಟಿಗೆ ಚಿಬ್ಲ, ಪೊರಕೆ ಮತ್ತು ಇರಿಕೆ ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ತಾವು ತೊಡುವ ಸೀರೆ, ರವಿಕೆಗಳಿಗೆ ಸುಂದರವಾದ ಕಸೂತಿಗಳಿಂದ ಅಲಂಕರಿಸಿಕೊಳ್ಳುವುದು, ಗೋಡೆ, ಬುಟ್ಟಿಗಳ ಮೇಲೆ ಚಿತ್ತಾರಗಳನ್ನು ಬರೆದು ಅಲಂಕರಿಸಿ ಸಂಭ್ರಮಿಸುವ ಕೃಷಿ ಅವಲಂಬಿತ ಬುಡಕಟ್ಟುಗಳಾದ ದೀವರು ಜನಾಂಗದ ಮಹಿಳೆಯರ ಕರಕೌಶಲ್ಯಗಳಲ್ಲಿ ಅವರಲ್ಲಿರುವ ಜೀವನಾಸಕ್ತಿಯನ್ನು ಕಾಣುತ್ತೇವೆ. ಇವರು ತಯಾರಿಸುವ ಕರಕುಶಲ ವಸ್ತುಗಳನ್ನು ಗಮನಿಸಿದಾಗ ಇವರಲ್ಲಿರುವ ಸೌಂದರ್ಯ ಪ್ರಜ್ಞೆ ಮತ್ತು ಜೀವನಾಸಕ್ತಿಯನ್ನು ಕಾಣಬಹುದು.

ಹಸೆ ಚಿತ್ತಾರ

ಮಲೆನಾಡಿನ ಹಳ್ಳಿಗಳಲ್ಲಿ ಹಿಂದೆ ಆರು ಅಂಕಣದಿಂದ ಹನ್ನೆರಡು ಅಂಕಣದ ಮನೆಗಳು ಇರುತ್ತಿದ್ದವು. ಒಂದು ಅಂಕಣವೆಂದರೆ ಹತ್ತು ಅಡಿ ಉದ್ದ ಹತ್ತು ಅಡಿ ಅಗಲವಿರುವ ಜಾಗ. ಅವಿಭಕ್ತ ಕುಟುಂಬದ ದೀವರ ಮನೆಗಳಲ್ಲಿ ಐವತ್ತು-ಅರವತ್ತು ಜನ ಒಟ್ಟಿಗೆ ವಾಸ ಮಾಡುತ್ತಿದ್ದರು. ಆದರೆ ಇಷ್ಟು ದೊಡ್ಡ ಮನೆಯಲ್ಲಿ “ದೇವರಕೋಣೆ” ಪ್ರತ್ಯೇಕವಾಗಿ ಇರುತ್ತಿರಲಿಲ್ಲ. ಅಡಿಗೆ ಮನೆಯಲ್ಲಿ ಪೂರ್ವ ಅಥವಾ ಉತ್ತರಾಭಿಮುಖವಾಗಿ ಅರ್ಧ ಅಡಿ ಎತ್ತರ, ಮೂರು ಅಡಿ ಉದ್ದ, ಒಂದೂವರೆ ಅಡಿ ಅಗಲದ ಮಣ್ಣಿನಿಂದ ಮಾಡಿದ ಜಾಗವಿರುತ್ತಿತ್ತು. ಈ ಜಾಗದ ಮಧ್ಯಭಾಗದಲ್ಲಿ ದೊಡ್ಡದಾದ ತಾಮ್ರದ ಹಂಡೆ, ಎಡಬಲ ಬದಿಗಳಲ್ಲಿ ಎರಡು ತಾಮ್ರದ ಕೊಡಪಾನಗಳಿರುವ ಸ್ಥಳವೇ ‘ಹರಿಇಡಕಲು’. ಇದು ದೈವೀ ಸ್ಥಾನ. ಆ ಕುಟುಂಬದಲ್ಲಿ ನಡೆಯುವ ದೇವರ ಕಾರ್ಯಗಳು ಈ ಸ್ಥಳದಲ್ಲಿಯೇ ನಡೆಯುತ್ತವೆ. ಕುಟುಂಬದ ಪೂರ್ವಜರು (ಹಿರಿಯರು) ಇರುವ ಸ್ಥಾನ.

ಗ್ರಾಮೀಣ ಜನ ಮನೆ ಕಟ್ಟುವಾಗ ಮುಖ್ಯ ಬಾಗಿಲನ್ನು (ಪ್ರಧಾನ ಬಾಗಿಲು) ಪೂರ್ವ ಅಥವಾ ಉತ್ತರಾಭಿಮುಖವಾಗಿ ಇಡುವುದು ಸಂಪ್ರದಾಯ. ಮನೆಯನ್ನು ಪ್ರವೇಶಿಸಿದ ಕೂಡಲೇ ಸಿಗುವುದು ಮನೆಯ ಒಂದನೇ ಅಂಕಣದ ಜಗಲಿ. ಇದನ್ನು ದಾಟಿದ ನಂತರ ಸಿಗುವುದು ನಡುಮನೆ. ಇದು ಮನೆಯ ಎರಡನೇ ಅಂಕಣ. ಈ ಅಂಕಣದ ಪೂರ್ವ ಅಥವಾ ಉತ್ತರ ದಿಕ್ಕಿಗೆ ಎದುರಾಗುವ ಗೋಡೆಯೇ ಹಸೆಗೋಡೆ ಚಿತ್ತಾರ ಬರೆಯುವ ಗೋಡೆ. ಈ ಗೋಡೆಯ ಮಧ್ಯಭಾಗದಲ್ಲಿ ಐದು ಅಡಿ ಉದ್ದ, ಐದು ಅಡಿ ಅಗಲವಿರುವ ಚಚ್ಚೌಕದ ಭಾಗದಲ್ಲಿ ಸಗಣಿಯಿಂದ ಸಾರಿಸಿ ಕೆಮ್ಮಣ್ಣು ಬಳಿಯುತ್ತಾರೆ. ನಂತರ ಬಿಳಿಬಣ್ಣದಿಂದ ಹಸೆಚಿತ್ತಾರವನ್ನು ಬರೆಯುತ್ತಾರೆ. ಇದೇ ಹಸೆಗೋಡೆ ಚಿತ್ತಾರ.


ವಿವಿಧ ಬಣ್ಣಗಳ ಹಸೆ

ದೀವರ ಮಹಿಳೆಯರು ಹಸೆಗೋಡೆ ಚಿತ್ತಾರವನ್ನು ಮೂರು ವರ್ಣಗಳಿಂದ ಬರೆಯುತ್ತಾರೆ. 1) ಬಿಳಿ ಹಸೆ, 2) ಕಪ್ಪುಹಸೆ ಮತ್ತು 3)ಕೆಂಪು ಹಸೆ ಎಂದು ಮೂರು ಸಂಪ್ರದಾಯಗಳಿವೆ.


                    ನಿಯಮಗಳು

ಮದುವೆಗಳಲ್ಲಿ ಹಸೆಗೋಡೆ ಚಿತ್ತಾರ ಬರೆಯುವ ಪದ್ಧತಿ ಮಲೆನಾಡಿನ ದೀವರು ಮತ್ತು ಇತರೆ ಹಿಂದುಳಿದ ಜನಾಂಗಗಳಲ್ಲಿ ಪಾರಂಪರಿಕವಾಗಿ ಬಂದಂಥ ಒಂದು ಸಮುದಾಯ ಕಲೆಯಾಗಿ ಬೆಳೆದು ಬಂದಿದೆ. ಇತ್ತೀಚಿನ ದಿವಸಗಳಲ್ಲಿ ಪೇಟೆಯಲ್ಲಿ ಸಿಗುವ ಬೇರೆ ಬೇರೆ ಬಣ್ಣಗಳನ್ನು ಬಳಸುತ್ತಾರಾದರೂ ಚಿತ್ತಾರದ ವಸ್ತು, ವಿನ್ಯಾಸ, ರೇಖೆಗಳು ಮಾತ್ರ ಹಾಗೆಯೇ ಉಳಿದುಕೊಂಡು ಬಂದಿವೆ.

1) ಮದುವೆಗಳಲ್ಲಿ ಹಸೆಗೋಡೆ ಚಿತ್ತಾರಗಳನ್ನು ಮಧುಮಗ(ವರ)ನ ತಾಯಿ, ವಧುವಿನ ತಾಯಿ ಬರೆಯುವ ಹಾಗಿಲ್ಲ. ವಧೂ-ವರರ ಅಕ್ಕತಂಗಿಯರು, ಸೋದರತ್ತೆಯರು ಬರೆಯಬಹುದು. ಚಿಕ್ಕಮ್ಮ, ದೊಡ್ಡಮ್ಮಂದಿರು ಬರೆಯಬಹುದು.

2) ಚಿತ್ತಾರ ಬರೆಯುವವರು ಮದುವೆಯ ವಾರದ ಮುಂಚೆ ನಡೆಯುವ ವೀಳ್ಯಾಶಾಸ್ತ್ರದ ದಿವಸ ಎಳೆ ಹೊಡೆದು ಅಂದಿನಿಂದ ಬರೆಯಲು ಪ್ರಾರಂಭಿಸಬೇಕು.

3) ಹಸೆ ಚಿತ್ತಾರದ ಎಳೆಗಳನ್ನು ಒಂದು ಸಾರಿ ಹಾಕಿದರೆ ಅಳಿಸಿ ಬರೆಯುವ ಹಾಗಿಲ್ಲ. ಅಳಿಸಿ ಬರೆಯುವುದು ಅಪಶಕುನವೆಂದು ಭಾವಿಸುತ್ತಾರೆ. ಧಾರೆಯ ಮುಂಚೆಯೇ ಚಿತ್ತಾರ ಬರೆದು ಮುಗಿಸಿರಬೇಕು.

4) ಚಿತ್ತಾರದ ಬಣ್ಣ ತಯಾರಿಸಲು ಅಕ್ಕಿ ನೆನೆ ಹಾಕುವಾಗ ಒಳ್ಳೆಯ ಮುಹೂರ್ತ ನೋಡಿ ನೆನೆ ಹಾಕುತ್ತಾರೆ.

5) ಕುಟುಂಬದ ಸದಸ್ಯರಲ್ಲದೆ ಬೇರೆಯವರಿಂದ ಚಿತ್ತಾರ ಬರೆಸಿದಾಗ ಬರೆದ ಮಹಿಳೆಗೆ ರವಿಕೆ ಖಣ, ತೆಂಗಿನಕಾಯಿ, ಮಡಿಲಕ್ಕಿ ಹಾಕಿ ಗೌರವಿಸುತ್ತಾರೆ ಮತ್ತು ಚಿತ್ತಾರ ಬರೆಯುವಾಗ ಪ್ರಾರಂಭ ಮುಗಿಯುವವರೆಗೆ ತುಂಬಾ ಗೌರವದಿಂದ ಆತಿಥ್ಯ ಮಾಡುತ್ತಾರೆ.

6) ಒಮ್ಮೆ ಬರೆದ ಹಸೆ ಚಿತ್ತಾರವನ್ನು ಮೂರುವರ್ಷಗಳವರೆಗೆ ಅಳಿಸಬಾರದು ಎಂಬ ನಿಯಮವಿದೆ. ಆದರೆ ಒಂದು ವರ್ಷ ತುಂಬುವುದರೊಳಗೆ ಆ ಮನೆಯಲ್ಲಿ ಮದುವೆಗಳು ನಡೆದರೆ ಆ ಸ್ಥಳವನ್ನು ಬಿಟ್ಟು ಪಕ್ಕದಲ್ಲಿಯೇ ಹೊಸದಾಗಿ ಚಿತ್ರವನ್ನು ಬರೆಯಬಹುದು.

7 ಎರಡು ಮದುವೆಗಳು ಒಮ್ಮೆ ಆದರೆ ಎರಡು ದಂಡಿಗೆಯಿರುವ ಹಸೆ ಚಿತ್ತಾರವನ್ನು ಬರೆಯುತ್ತಾರ. ಒಂದೇ ಮದುವೆಯಾದರೆ ಒಂದು ದಂಡಿಗೆ ಇರುವ ಹಸೆ ಚಿತ್ರವನ್ನು ಬರೆಯುತ್ತಾರೆ.

ಬುಟ್ಟಿ ಚಿತ್ತಾರಗಳು

 ಮಲೆನಾಡಿನ ದೀವರು ಜನಾಂಗದವರು ಆಚರಿಸುವ ಹಬ್ಬಗಳಲ್ಲಿ ಭೂಮಿಹುಣ್ಣಿಮೆ ಹಬ್ಬ ತುಂಬಾ ಶ್ರೇಷ್ಠವಾದುದು ಮತ್ತು ವೈಶಿಷ್ಟ್ಯಪೂರ್ಣವಾದುದು. ಮಹಾನವಮಿ ಆಗಿ ಏಳು ಅಥವಾ ಆರನೇ ದಿವಸ ಬರುವ ಹುಣ್ಣಿಮೆ ಭೂಮಿಹುಣ್ಣಿಮೆ. ಈ ದಿವಸ ಭೂಮಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇದಕ್ಕೆ ಬಯಕೆ ಹಬ್ಬವೆಂದೂ ಕರೆಯುತ್ತಾರೆ. ಗರ್ಭಿಣಿಯರಾದ ಹೆಣ್ಣುಮಕ್ಕಳಿಗೆ ಸೀಮಂತ ಕಾರ್ಯವನ್ನು  ಮಾಡುವಂತೆ ಗರ್ಭಧರಿಸಿ (ಹೊಡೆ) ನಿಂತ ಭತ್ತದ ಸಸಿಗಳಿಗೆ ಸೀಮಂತ ಮಾಡುತ್ತಾರೆ. ಭೂಮಿಯು ಸಹ ‘ಅಮೂಲ್ಯ ಸ್ತ್ರೀ ದೇವತೆ’ ಎಂಬ ದಾರ್ಶನಿಕ ಕಲ್ಪನೆ ಇವರದು. ಈ ಹಬ್ಬದಲ್ಲಿ ಬಿದಿರಿನಿಂದ ತಯಾರಿಸಿದ ಎರಡು ಬುಟ್ಟಿಗಳಿರುತ್ತವೆ. ಒಂದನೆಯದು ಭೂಮಣ್ಣಿಬುಟ್ಟಿ, ಎರಡನೆಯದು ಹಚ್ಚಂಬಲಿ ಬುಟ್ಟಿ. ಭೂಮಣ್ಣಿ ಬುಟ್ಟಿ ದೊಡ್ಡದಾಗಿರುತ್ತದೆ. ಇದು ಒಂದು ಅಡಿ, ಎತ್ತರ ನಾಲ್ಕು ಅಡಿ ಸುತ್ತಳತೆ ಇರುತ್ತದೆ. ಚಿಕ್ಕ ಬುಟ್ಟಿ ಎಂಟು ಇಂಚು, ಎತ್ತರ ಎರಡು ಅಡಿ, ಎಂಟು ಇಂಚು ಸುತ್ತಳತೆ ಇರುತ್ತದೆ. ಮಹಾನವಮಿ ಹಬ್ಬದ ಹಿಂದಿನ ದಿವಸ ಅಟ್ಟದ ಮೇಲಿದ್ದ ಬುಟ್ಟಿಗಳನ್ನು ಇಳಿಸಿ ಸಗಣಿಯಿಂದ ಬಳಿದು ಕೆಮ್ಮಣ್ಣು ಹಚ್ಚುತ್ತಾರೆ. ಮಹಾನವಮಿ ಹಬ್ಬದ ದಿವಸ ಹರಿ ಇಡಕಲು ಕೆಳಗೆ ಇಟ್ಟು ಪೂಜೆ ಮಾಡಿ ನಂತರ ಬುಟ್ಟಿಗಳ ಮೇಲೆ ಚಿತ್ತಾರ ಬರೆಯಲು ಪ್ರಾರಂಭ ಮಾಡುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಳಿಯ ಬಣ್ಣದಿಂದ ಪುಂಡಿನಾರಿನ ಕುಂಚ(ಬ್ರೆಶ್)ದಿಂದ ಬುಟ್ಟಿಯ ಮೇಲೆ ಚಿತ್ರಗಳನ್ನು ಬರೆಯುತ್ತಾರೆ. ಬುಟ್ಟಿ ಚಿತ್ತಾರವನ್ನು ಬರೆಯುವ ಕಲಾವಿದೆಯರು ಎರಡು ರೀತಿಯಲ್ಲಿ ಚಿತ್ರ ಬರೆಯುತ್ತಾರೆ. ಸುತ್ತೆಳೆ ಚಿತ್ತಾರ ಮತ್ತು ಮೂಲೆ ಎಳೆ ಚಿತಾರ. ಸುತ್ತೆಳೆ ಚಿತ್ತಾರದಲ್ಲಿ ಹನ್ನೆರಡು ಎಳೆಗಳಿರುತ್ತವೆ. ಮೂಲೆ ಎಳೆ ಚಿತ್ತಾರದಲ್ಲಿ ಎಂಟು ಎಳೆಗಳಿರುತ್ತವೆ. ದೊಡ್ಡ ಬುಟ್ಟಿಯಲ್ಲಿ ಮಧ್ಯೆ ಎಂಟು ಮನೆಗಳಿರುತ್ತವೆ. ಸಣ್ಣ ಬುಟ್ಟಿಯಲ್ಲಿ ನಾಲ್ಕು ಮನೆಗಳು ಮಾತ್ರ ಇರುತ್ತವೆ. ಬುಟ್ಟಿಯ ಮೇಲೆ ಬರೆಯುವ ಚಿತ್ರಗಳನ್ನು ಎರಡು ಭಾಗವಾಗಿ ಮಾಡಿಕೊಳ್ಳಬಹುದು. ಕೃಷಿ ಚಟುವಟಿಕೆಗೆ ಸಂಬಂಧಿಸಿದ ಚಿತ್ರಗಳು ಮತ್ತು ಬಯಕೆ ಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರಗಳು. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಚಿತ್ರಗಳಲ್ಲಿ ಗೊಣಬೆ, ಕರಬಾನದ ಗಡಿಗೆ, ಭತ್ತದ ಸಸಿ, ಏಣಿ, ಗಾಡಿ, ಎತ್ತು, ಕಣಕಪ್ಪಿನ ಹೂವು ಇತ್ಯಾದಿ ಚಿತ್ರಗಳು. ಬಯಕೆಗೆ ಸಂಬಂಧಿಸಿದ ಚಿತ್ರಗಳಲ್ಲಿ ಕೌಳಿಮಟ್ಟಿ, ಸೀತೆ ಮುಡಿ, ಜೋಗಿ ಜಡೆ, ರಂಜಲ ಹೂವಿನದಂಡೆ ಇತ್ಯಾದಿ ಚಿತ್ರಗಳು. ಎಳೆಗಳ ಮಧ್ಯೆ ಜೋಡೆಳೆನಿಲಿ, ಬಾಸಿಂಗದನಿಲಿ ಬರೆದು ಎಳೆಗಳು ಸೇರುವ ಮೂಲೆಗಳಲ್ಲಿ ಪಪ್ಳಿ ಬರೆಯುತ್ತಾರೆ. ದೊಡ್ಡ ಬುಟ್ಟಿಯಲ್ಲಿ ಕರಬಾನದ ಗಡಿಗೆ, ಕೌಳಿಮಟ್ಟಿ, ಸೀತೆಮುಡಿ, ಜೋಗಿಜಡೆ ಮತ್ತು ಬುಟ್ಟಿ ಹೊತ್ತ ಮನುಷ್ಯ ಚಿತ್ರಗಳಿರುತ್ತವೆ. ಹಚ್ಚಂಬಲಿ ಬುಟ್ಟಿಯಲ್ಲೂ ಬರೆಯುತ್ತಾರೆ. ಹುಣ್ಣಿಮೆ ಹಿಂದಿನ ರಾತ್ರಿ ಹಬ್ಬ ‘ಅಡುವ’ ಕೆಲಸ ಪ್ರಾರಂಭಿಸುತ್ತಾರೆ. ಸ್ನಾನ ಮಾಡಿ ಅಡುಗೆಮನೆ ಮತ್ತು ಅಡುಗೆ ಒಲೆ ಇಡಕಲುಗಳನ್ನು ಸಗಣಿಯಿಂದ ಸಾರಿಸಿ ಸ್ವಚ್ಛ ಮಾಡುತ್ತಾರೆ. ಸುಮಾರು ರಾತ್ರಿ 10 ಗಂಟೆಯಿಂದ ಅಡುಗೆ ಮಾಡಲು ಪ್ರಾರಂಭಿಸುತ್ತಾರೆ. ಮೊಟ್ಟ ಮೊದಲು ಅಮಟೆಕಾಯಿ, ಹುಳಿಕಂಚಿಕಾಯಿ, ಸಿಹಿಕಂಚಿಕಾಯಿ ಎಲ್ಲಾ ರೀತಿಯ ತರಕಾರಿಗಳು, ಮನುಷ್ಯರು ತಿನ್ನಬಹುದಾದ ಎಲ್ಲಾ ತರದ ಸೊಪ್ಪುಗಳು, ಎಲ್ಲಾ ರೀತಿಯ ಧಾನ್ಯಗಳನ್ನು ಸೇರಿಸಿ ಉಪ್ಪು ಹಾಕದೆ ಬೇಯಿಸಿ ಚರಗ ತಯಾರಿಸುತ್ತಾರೆ. ನಂತರ ಅಡುಗೆ ಪ್ರಾರಂಭಿಸುತ್ತಾರೆ. ಚಿತ್ರಾನ್ನ, ಮೊಸರನ್ನ, ಸೌತೆಕಾಯಿಂದ ಸಿಹಿಕಡಬು, ಸಪ್ಪೆಕಡಬು, ಅತಿರಸದ ಕಜ್ಜಾಯ, ಹೋಳಿಗೆ, ಕರ್ಜಿಕಾಯಿ, ವಡೆ, ಕುಚ್ಚುಂಡೆ, ಬಾಳೆಹಣ್ಣಿನ ಕಜ್ಜಾಯ, ಪಾಯಸ, ಕೆಸವಿನ ಚೀಪಿನ ಪಲ್ಯ, ಹೀರೆಕಾಯಿ ಹುಳಿ ಮುಂತಾದ ಪದಾರ್ಥಗಳನ್ನು ಬೆಳತನಕ ತಯಾರು ಮಾಡುತ್ತಾರೆ. ಅಷ್ಟರಲ್ಲಿ ಬೆಳಗಾಗುತ್ತದೆ. ಹಚ್ಚಂಬಲಿ ಬುಟ್ಟಿ ಚರಗ ತುಂಬಿಕೊಂಡು ಇಡಕಲು ಕೆಳಗೆ ಇಟ್ಟು ಪೂಜೆ ಮಾಡಿ ಸೂರ್ಯೋದಯದೊಳಗೆ ಹಚ್ಚಂಬಲಿ ಬುಟ್ಟಿ ಹೊತ್ತುಕೊಂಡು ತಮ್ಮ ಜಮೀನುಗಳಿಗೆ ಹೋಗಿ
ಬೂಮಣ್ಣಿ ಬುಟ್ಟಿ ಚಿತ್ತಾರ

ಬಣ್ಣಗಳು

ಹಸೆ ಚಿತ್ರ ಕಲಾವಿದೆಯರು ಹಸೆ ಮತ್ತು ಬುಟ್ಟಿ ಚಿತ್ರಗಳನ್ನು ಬರೆಯುವಾಗ ಮುಖ್ಯವಾಗಿ ನಾಲ್ಕು ವರ್ಣಗಳನ್ನು ಬಳಸುತ್ತಾರೆ. ಈ ಬಣ್ಣಗಳು ತಮ್ಮ ಪರಿಸರದಲ್ಲಿಯೇ ದೊರಕುವ ನೈಸರ್ಗಿಕ ವರ್ಣಗಳು. ಮುಖ್ಯವಾಗಿ ಬಿಳಿ, ಕೆಂಪು, ಕಪ್ಪು ಮತ್ತು ಹಳದಿ ಬಣ್ಣಗಳು.ಬಿಳಿ ಮತ್ತು ಕೆಂಪು ಬಣ್ಣಗಳು ಮಣ್ಣಿನಿಂದ ನದಿಗಳ ಪಕ್ಕದಲ್ಲಿ ತೇವವಿರುವ ಕಡೆ ಜೇಡಿ ಮಣ್ಣು (ಬಿಳಿ) ಇರುತ್ತದೆ. ವರ್ಷಕ್ಕೊಮ್ಮೆ ಅದನ್ನು ತಂದು ಉಂಡೆ ಕಟ್ಟಿ ಒಣಗಿಸಿ ಬುಟ್ಟಿ ತುಂಬಿ ಇಟ್ಟುಕೊಳ್ಳುತ್ತಾರೆ.
ಗುಡ್ಡಗಳ ಮರಕಲು ಜಾಗಗಳಲ್ಲಿ ಕೆಲವು ಕಡೆ ಕೆಮ್ಮಣ್ಣು ಸಿಗುತ್ತದೆ. ಅದನ್ನು ತಂದು ಒಣಗಿಸಿ ಉಂಡೆಕಟ್ಟಿ ಬುಟ್ಟಿಯಲ್ಲಿ ಹಾಕಿ ಇಟ್ಟುಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಮನೆಗಳಲ್ಲಿ ಮದುವೆ, ಚೌಳ, ವಿಶೇಷವಾದ ಹಬ್ಬ, ದೀಪಾವಳಿ, ಗೌರಿಹಬ್ಬಗಳ ಸಂದರ್ಭದಲ್ಲಿ ಮನೆಯ ಗೋಡೆಗಳಿಗೆ ಜೇಡಿ ಕೆಮ್ಮಣ್ಣು ಬಳಿಯುತ್ತಾರೆ. ಅದಕ್ಕಾಗಿ ಕೆಮ್ಮಣ್ಣು ಮತ್ತು ಜೇಡಿ ಸದಾಕಾಲ ಸಂಗ್ರಹ ಮಾಡಿ ಇಟ್ಟುಕೊಂಡಿರುತ್ತಾರೆ. ಈ ಎರಡು ಬಣ್ಣದ ಮಣ್ಣನ್ನು ಚಿತ್ತಾರ ಬರೆಯಲು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೀವರು ಜನಾಂಗದವರು ಮನೆಗಳಿಗೆ ಸುಣ್ಣ ಬಣ್ಣ ಮಾಡುತ್ತಿದ್ದಾರೆ.ಅಕ್ಕಿಯಿಂದ ಬಿಳಿ ಮತ್ತು ಕಪ್ಪು ಬಣ್ಣ.ಮಲೆನಾಡಿಗರಾದ ದೀವರು ತಮ್ಮ ಜಮೀನುಗಳಲ್ಲಿ ಬೆಳೆಯುವ ಭತ್ತದ ತಳಿಗಳಾದ ನೆರೆಗುಳಿ ಹೊನಸು, ಸೋಮಸಾಲೆ, ತೊಗರಿ, ವಾಳ್ಯಾ ಇವುಗಳಲ್ಲಿ ಯಾವುದಾದರೂ ಒಂದು ತಳಿಯ ಭತ್ತದ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ದಿವಸಗಳ ಕಾಲ ನೀರಿನಲ್ಲಿ ನೆನಸಿ ಮೂರು ದಿನಗಳ ನಂತರ ಅಕ್ಕಿಯನ್ನು ತೆಗೆದು ನುಣ್ಣಗೆ ಅರೆಯುತ್ತಾರೆ. ಅಕ್ಕಿಹಿಟ್ಟಿನ ಪೇಸ್ಟ್ ಮಾಡಿಕೊಳ್ಳುತ್ತಾರೆ, ಬ್ರೆಶ್ (ಕುಂಚ) ಮಾಡಿಕೊಳ್ಳುವುದು. ಪುಂಡಿ ಎಂಬ ಜಾತಿಯ ಗಿಡದ ನಾರಿನಿಂದ ಕುಂಚ (ಬ್ರೆಶ್) ತಯಾರಿಸಿಕೊಂಡು ಕುಂಚದ ಹಿಂಭಾಗಕ್ಕೆ ಬೆರಳಿನಿಂದ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಭತ್ತದ ಹುಲ್ಲಿನ ಕೊಳವೆಯನ್ನು  ಹಾಕಿ ಕೊಳವೆ ಸರಿದಾಡದಂತೆ ಹಿಂಭಾಗಕ್ಕೆ ಗಂಟು ಹಾಕುತ್ತಾರೆ. ಈ ರೀತಿಯ ಬ್ರೆಶ್‍ಗಳಿಂದ ಚಿತ್ತಾರವನ್ನು ಬರೆಯುತ್ತಾರೆ.

ಭೂಮಣ್ಣಿ ಬಟ್ಟುಗಳು'

ಭೂಮಣ್ಣಿ ಹಬ್ಬಕ್ಕೂ, ಬೂರೆಹಬ್ಬಕ್ಕೂ ಹನ್ನೆರಡು ದಿವಸಗಳ ಅಂತರ. ಭೂಮಣ್ಣಿ ಹಬ್ಬದ ದಿವಸ ಮಹಿಳೆಯರು ರಾತ್ರಿಯೆಲ್ಲಾ ಭೂಮಣ್ಣಿ ಹಬ್ಬದ ಅಡಿಗೆಯನ್ನು ತಯಾರಿಸುತ್ತಾರೆ. ಬೆಳಗಿನ ಜಾವ ಹಚ್ಚಂಬಲಿ ಬುಟ್ಟಿಗೆ ಹಚ್ಚಂಬಲಿ (ಚರಗ) ತುಂಬಿ ಇಡಕಲು ಕೆಳಗೆ ಇಡುತ್ತಾರೆ. ಗಂಡಸರು ಸ್ನಾನ ಮಾಡಿ ಬುಟ್ಟಿಯನ್ನು ಪೂಜೆ ಮಾಡಿ ಹೊತ್ತುಕೊಂಡು ಜಮೀನಿಗೆ ಹೋಗುತ್ತಾರೆ. ಮಹಿಳೆಯರು ಭೂಮಣ್ಣಿ ಬುಟ್ಟಿ ಚಿತ್ತಾರ ಬರೆಯಲು ತಯಾರಿಸಿದ ಅಕ್ಕಿಹಿಟ್ಟಿನ ಬಣ್ಣದಲ್ಲಿ ನಾಲ್ಕು ಬೆರಳುಗಳನ್ನು ಅದ್ದಿಕೊಂಡು ಇಡಕಲು ಮತ್ತು ಬಾಗಿಲುಗಳ ಪಕ್ಕದಲ್ಲಿ ಬಟ್ಟುಗಳನ್ನು ಇಡುತ್ತಾರೆ. ಇವು ಭೂಮಣ್ಣಿ ಬಟ್ಟುಗಳು.

ನೋಡಿ[ಬದಲಾಯಿಸಿ]

ಉಲ್ಲೇಖwww.deevaru.com[ಬದಲಾಯಿಸಿ]