ವಿಷಯಕ್ಕೆ ಹೋಗು

ಥಾಮಸ್ ಕಿಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಥಾಮಸ್ ಕಿಡ್ (1558-1594). ಆಂಗ್ಲ ನಾಟಕಕಾರ. ಸ್ವ್ಯಾನಿಷ್ ಟ್ರ್ಯಾಜಡಿ ನಾಟಕ ರಚಿಸಿದವ.

ಗುಮಾಸ್ತೆಯೊಬ್ಬನ ಮಗ. ಹುಟ್ಟಿದ್ದು ಲಂಡನಿನಲ್ಲಿ ಎಡ್ಮಂಡ್ ಸ್ಪೆನ್‍ಸರ್‍ನ ಸಹಪಾಠಿ. ಮಾರ್ಲೊನ ಜೊತೆಗಾರ. ಈತನ ಜೀವಿತದ ಬಗೆಗೆ ಹೆಚ್ಚು ವಿವರಗಳು ತಿಳಿದಿಲ್ಲವಾದರೂ ಸ್ವೇಚ್ಛಾಜೀವನ ನಡೆಸುತ್ತಿದ್ದ ತರುಣ ಸಾಹಿತಿಗಳ ಗುಂಪಿಗೆ ಸೇರಿದವನೆಂದು ಪ್ರತೀತಿ. ಮಾರ್ಲೊನಂತೆ ಈತನೂ ನಾಸ್ತಿಕನೆಂಬ ಆಕ್ಷೇಪಣೆಗೆ ಗುರಿಯಾಗಿ ಸ್ವಲ್ಪಕಾಲ ಸೆರೆಮನೆಯಲ್ಲಿದ್ದ. ಕಡೆಯ ವರ್ಷಗಳನ್ನು ಬಡತನದಲ್ಲಿ ಕಳೆದ.

ನಾಟಕಕಾರ

[ಬದಲಾಯಿಸಿ]

ಹ್ಯಾಮ್‍ಲೆಟ್‍ನ ಕಥೆಯನ್ನು ವಸ್ತುವಾಗಿಟ್ಟುಕೊಂಡು ಷೇಕ್ಸ್‍ಪಿಯರ್‍ಗಿಂತ ಮೊದಲೇ ಕಿಡ್ ಒಂದು ದುರಂತ ನಾಟಕವನ್ನು ರಚಿಸಿದ್ದನೆಂದು ಹೇಳಲಾಗಿದೆ. ಅದರದು ಇಂದು ಉಪಲಬ್ಧವಿಲ್ಲ. 1592ರ ಹೊತ್ತಿಗೆ ಈತನ ಸ್ವ್ಯಾನಿಷ್ ಟ್ರ್ಯಾಜಡಿ ಎಂಬ ನಾಟಕ ಜನಪ್ರಿಯವಾಗಿತ್ತು. ಇದು ಡಚ್ ಮತ್ತು ಜರ್ಮನ್ ಭಾಷೆಗಳಿಗೂ ಭಾಷಾಂತರವಾಗಿದೆ. ಸೆನೆಕನ ನಾಟಕಗಳ ಧೋರಣೆಯನ್ನು ಇದರಲ್ಲಿ ಗುರುತಿಸಿದವರಿದ್ದಾರೆ. 1580ರಲ್ಲಿ ಪೋರ್ಚುಗಲ್‍ನ ಮೇಲೆ ಸ್ಪೇನ್ ಗಳಿಸಿದ ವಿಜಯ ಇದರ ರಾಜಕೀಯ ಹಿನ್ನೆಲೆ. ತಂದೆಯೊಬ್ಬ ತನ್ನ ಮಗನಿಗಾದ ಅನ್ಯಾಯಕ್ಕೆ ಮುಯ್ಯಿ ತೀರಿಸಲು ಪ್ರಯತ್ನಿಸಿ ಸಾವಿಗೀಡಾದುದು ಇದರ ವಸ್ತು. ಸಾಲಮನ್ ಅಂಡ್ ಪರ್‍ಸೀಡ (1592) ಎಂಬ ನಾಟಕವೂ ಇವನದೇ ಆಗಿರಬಹುದು. ಈತನ ಪಾಂಪೆ ದಿ ಗ್ರೇಟ್ ಕೃತಿ ಫ್ರೆಂಚ್‍ನಿಂದ ಭಾಷಾಂತರವಾಗಿದೆ. ಕಿಡ್‍ನ ಸೃಷ್ಟಿ ಮಹಾಸಾಹಿತ್ಯವಲ್ಲ. ಆದರೆ ನಾಟಕದ ರಚನೆ, ವಸ್ತುವಿನ ಸಂವಿಧಾನ, ಪಾತ್ರನಿರೂಪಣೆಗೆ ಘಟನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು, ಪಾತ್ರದ ಬೆಳವಣಿಗೆಯ ಸೂಚನೆ-ಇವುಗಳಲ್ಲಿ ಕಿಡ್‍ನ ಕೈ ಸ್ವಲ್ಪ ಪಳಗಿರುವುದನ್ನು ಕಾಣಬಹುದು. ಈತ ರಂಗ ಭೂಮಿಯ ಮೇಲಿನ ಸಂಭಾಷಣೆಯನ್ನು ಮೊದಲಿದ್ದುದಕ್ಕಿಂತ ಸಹಜವಾಗಿಸಿದ. ಮರ್ಲೊನೊಂದಿಗೆ ಸೇರಿ ದುಡಿದು ಷೇಕ್ಸ್‍ಷಿಯರನ ನಾಟಕಸೃಷ್ಟಿಗೆ ಇಂಗ್ಲಿಷ್ ರಂಗಭೂಮಿಯನ್ನು ಕಿಡ್ ಸಿದ್ಧಗೊಳಿಸಿದ ಎನ್ನುವ ಮಾತೂ ಇದೆ. ಎಫ್. ಎ.ಬೋಆಸನ ಸಂಪಾದಕತ್ವದಲ್ಲಿ ಕಿಡ್‍ನ ಕೃತಿಗಳು ಬೆಳಕು ಕಂಡವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: