ಟಾರ್ಮಿಗನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಾರ್ಮಿಗನ್ - ಗ್ಯಾಲಿಫಾರ್ಮೀಸ್ ಗಣದ ಟೆಟ್ರವೋನಿಡೀ ಕುಟುಂಬಕ್ಕೆ ಸೇರಿದ ಪಕ್ಷಿ. ಗ್ರೌಸ್ ಪರ್ಯಾಯನಾಮ. ಇದರ ಶಾಸ್ತ್ರೀಯ ಹೆಸರು ಲ್ಯಾಗೋಪಸ್.

ಇದರಲ್ಲಿ ನಾಲ್ಕು ಪ್ರಭೇದಗಳುಂಟು:

  1. ರಾಕ್ ಟಾರ್ಮಿಗನ್ _(ಲ್ಯಾಗೋಪನ್ ಮ್ಯೂಟಾಸ್). ಸ್ಕಾಟ್ಲೆಂಡ್, ಸ್ವೀಡನ್, ನಾರ್ವೆ, ಕೆನಡ, ಲ್ಯಾಪ್‍ಲ್ಯಾಂಡ್ ಮತ್ತು ಸೈಬೀರಿಯಗಳಲ್ಲಿ ಕಾಣಬರುತ್ತದೆ.
  2. ವಿಲೊ ಟಾರ್ಮಿಗನ್-(ಲ್ಯಾಗೋಪಸ್ ಲ್ಯಾಗೋಪಸ್) ಉತ್ತರ ಯೂರೋಪ್, ಉತ್ತರ ಅಮೆರಿಕಗಳ ಮೂಲವಾಸಿ.
  3. ವೈಟ್ ಟೇಲ್ಡ್ ಟಾರ್ಮಿಗನ್_(ಲ್ಯಾಗೋಪಸ್ ಲ್ಯೂಕ್ಯೂರಸ್) ಉತ್ತರ ಅಮೆರಿಕದಲ್ಲಿ ವಾಸಿಸುವುದು.
  4. ರೆಡ್ ಗ್ರೌಸ್_(ಲ್ಯಾಗೋಪಸ್ ಸ್ಕಾಟಿಕಸ್)_ ಬ್ರಿಟಿಷ್ ದ್ವೀಪ, ಉತ್ತರ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಐರ್ಲೆಂಡ್‍ಗಳಲ್ಲಿ ಜೀವಿಸುತ್ತದೆ.

ಇವು ಸುಮಾರು 2000-4000 ಎತ್ತರದ ಕಲ್ಲುಬಂಡೆಗಳ ಮಧ್ಯದಲ್ಲಿರುವ ಬಂಜರು ಪ್ರದೇಶದಲ್ಲಿ ವಾಸಿಸುವುದರಿಂದ ಇವುಗಳ ವಿಷಯ ಹೆಚ್ಚು ತಿಳಿದುಬಂದಿಲ್ಲ. ಇವುಗಳ ಸರಾಸರಿ ಉದ್ದ ಸು. 35 ಸೆಂ.ಮೀ. ಮೈಬಣ್ಣ ಕೆಂಪು. ಮೇಲೆಲ್ಲ ಕಪ್ಪು ಮಿಶ್ರಿತ ಕಂದುಬಣ್ಣದ ಅಡ್ಡಪಟ್ಟೆಗಳಿವೆ. ಚಳಿಗಾಲದಲ್ಲಿ ಮಾತ್ರ ಮೈಬಣ್ಣ ಸಂಪೂರ್ಣವಾಗಿ ಬಿಳಿಯ ಬಣ್ಣಕ್ಕೆ ತಿರುಗಿ (ರೆಡ್‍ಗ್ರೌಸ್ ಮಾತ್ರ ವರ್ಷವಿಡೀ ಕೆಂಪು ಬಣ್ಣದ್ದಾಗಿಯೇ ಉಳಿಯುತ್ತದೆ) ಮಂಜಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಇವನ್ನು ಗುರುತಿಸುವುದು ಕಷ್ಟವಾಗುತ್ತದೆ. ಕಾಲುಗಳ ಮೇಲೂ ಕಾಲ್ಬೆರಳುಗಳ ಮೇಲೂ ಪುಕ್ಕಗಳ ಹೊದಿಕೆಯುಂಟು. ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಹೆಣ್ಣು ಹಕ್ಕಿಗಳು ಜೊತೆಜೊತೆಯಾಗಿ ಗುಂಪಿನಿಂದ ಹೊರಟು ಗೂಡುಕಟ್ಟಲು ಯೋಗ್ಯವಾದ ಸ್ಥಳ ಹುಡುಕುತ್ತವೆ. ಪೊದೆಯ ಸಂದಿಯಲ್ಲಿ ಅಥವಾ ಬಂಡೆಯ ಮಧ್ಯದಲ್ಲಿ ನೆಲದ ಮೇಲೆ ಅಷ್ಟು ಆಳವಿಲ್ಲದ ಗುಳಿಯನ್ನು ಮಾಡಿ ಅದರ ಸುತ್ತ ಎಲೆ ಅಥವಾ ಗಿಡಗಳಿಂದ ಅಲಂಕರಿಸುತ್ತವೆ. ಒಂದಾವರ್ತಿಗೆ 6-10 ಮೊಟ್ಟೆಗಳನ್ನಿಟ್ಟು 2 ವಾರದವರೆಗೆ ಕಾವು ಕೊಡುತ್ತವೆ. ಮೊಟ್ಟೆಯ ಬಣ್ಣ ಕೆಂಪು ಮಿಶ್ರಿತ ಹಳದಿ ಅಥವಾ ಬಿಳಿಮಿಶ್ರಿತ ಹಳದಿ. ಅಲ್ಲಲ್ಲಿ ಕಂದುಬಣ್ಣದ ಚುಕ್ಕೆಗಳೂ ಇವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: