ಜೈಸಲ್ಮೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈಸಲ್‍ಮೇರ್ ಹಿಂದಿನ ರಾಜಪುತಾನದ ಒಂದು ಸಂಸ್ಥಾನವಾಗಿದ್ದ ಇದು ಈಗ ರಾಜಸ್ಥಾನದ ಒಂದು ಜಿಲ್ಲೆ. ವಿಸ್ತೀರ್ಣ 38,401 ಕಿಮೀ. ಜನಸಂಖ್ಯೆ 1,66,761 (1971).

ಭೌಗೋಲಿಕ ಮಾಹಿತಿ[ಬದಲಾಯಿಸಿ]

ಈ ಜಿಲ್ಲೆಯ ಬಹುಭಾಗ ಬರಡುಭೂಮಿ, ಮರಳುಗಾಡು. ಇಲ್ಲಿಯ ಹೊಳೆ ಹಳ್ಳಗಳು ಹರಿಯುವುದು ಮಳೆಗಾಲದಲ್ಲಿ ಮಾತ್ರ. ಈ ಜಿಲ್ಲೆಯ ಒಂದೇ ಒಂದು ನದಿ ಕಕನಿ. ಸು. 45 ಕಿಮೀ.ಗಳಷ್ಟು ದೂರ ನಿಧಾನವಾಗಿ ಹರಿದು ಮುಂದೆ ಬಯಲುಸೀಮೆಯಲ್ಲಿ ವಿಸ್ತಾರಗೊಂಡು ಭುಜ್ ಸರೋವರವಾಗಿ ಮಾರ್ಪಟ್ಟಿದೆ. ಈ ಪ್ರದೇಶದ ವಾಯುಗುಣ ಶುಷ್ಕ, ಆರೋಗ್ಯಕರ.

ಉದ್ಯೋಗಗಳು[ಬದಲಾಯಿಸಿ]

ಕೃಷಿಯಲ್ಲಿ ಈ ಜಿಲ್ಲೆ ಬಹಳ ಹಿಂದುಳಿದೆ. ಮಳೆಗಾಲದಲ್ಲಿ ಮಾತ್ರವೇ ಸಣ್ಣ ಕಾಳುಗಳ ಅಲ್ಪಸ್ವಲ್ಪ ಬೆಳೆ ತೆಗೆಯುವುದು ಇಲ್ಲಿಯ ವಾಡಿಕೆ, ಜೋಳ, ಗೋಧಿ, ಬಾರ್ಲಿಗಳಂಥ ಹಿಂಗಾರಿ ಬೆಳೆಗಳು ವಿರಳ. ಒಂದು ಕಡೆ ನೆಲೆನಿಂತು ಬೇಸಾಯ ಅಥವಾ ಕೈಕಸಬು ಕೈಗೊಂಡು ಹೊಟ್ಟ ತುಂಬಿಸಿಕೊಳ್ಳುವುದು ಸಾಧ್ಯವಾಗದೆ ಇಲ್ಲಿಯ ಬಹುಸಂಖ್ಯೆಯ ಜನ ಅಲೆಮಾರಿ ಬದುಕು ಸಾಗಿಸುತ್ತಾರೆ. ತಮ್ಮ ದನಕರುಗಳ ಮತ್ತು ಕುರಿಹಿಂಡುಗಳ ಪಾಲನೆಯೇ ಅವರಿಗೆ ಮುಖ್ಯ. ಹುಲ್ಲುಗಾವಲು ಪ್ರದೇಶಗಳ ಮೇಲೆಯೇ ಅವರ ಗಮನ. ಉಣ್ಣೆಯ ಕೆಲಸ, ತುಪ್ಪದ ತಯಾರಿಕೆ, ಒಂಟೆ ಮತ್ತಿತರ ದನಕರುಗಳ ಮಾರಾಟ- ಇವೇ ಇಲ್ಲಿಯ ಜನರ ಮುಖ್ಯ ಉದ್ಯೋಗಗಳು. ಊರಿಂದೂರಿಗೆ ಹೋಗಿ ಬರಲು ಮುಖ್ಯ ವಾಹನವೆಂದರೆ ಒಂಟೆ.

ಇತಿಹಾಸ[ಬದಲಾಯಿಸಿ]

ಇಲ್ಲಿಯ ಬಹುಸಂಖ್ಯೆಯ ಜನರು ಭಟ್ಟಿ ರಜಪೂತ ಕುಲಕ್ಕೆ ಸೇರಿದವರು. ಭಟ್ಟಿ ದೊರೆಯ ತರುವಾಯ ಅವನ ವಂಶಕ್ಕೆ ಈ ಹೆಸರು ಪ್ರಾಪ್ತವಾಯಿತು. ಸಮರಶೂರನೆಂದು ಆತ ಹೆಸರಾಗಿದ್ದ. ಜೈಸಲ್ಮೇರ್ ಸಂಸ್ಥಾನದ ಮೂಲ ಸಂಸ್ಥಾಪಕ ದೇವರಾಜ. ಅವನ ತರುವಾಯ ಅವನ ಮನೆತನಕ್ಕೆ ರಾವಲ ಎಂಬ ಗೌರವಸೂಚಕ ಹೆಸರು ಪ್ರಾಪ್ತವಾಯಿತು. ದೇವರಾಜ ದೊರೆಯ ಅನಂತರದ ಆರನೆಯ ದೊರೆ ಜೈಸಾಲ 1156ರಲ್ಲಿ ಜೈಸಲ್ಮೇರಿನ ಕೋಟೆಯನ್ನು ಕಟ್ಟಿಸಿ, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಆದರೆ ಮುಂದೆ ಅಲ್ಲಾವುದ್ದೀನನ ಆಕ್ರಮಣದಿಂದಾಗಿ ಈ ಕೋಟೆ ನಷ್ಟಕ್ಕೆ ಒಳಗಾಯಿತು. 1762-1818ರ ಅವಧಿಯಲ್ಲಿ ರಾವಲ ಮೂಲರಾಜ ಈ ಪ್ರದೇಶದ ಅಧಿಕಾರ ವಹಿಸಿಕೊಂಡ. ಮುಂದೆ ಬ್ರಿಟಿಷರೊಡನೆ ಒಂದು ರಾಜಕೀಯ ಒಪ್ಪಂದ ಮಾಡಿಕೊಂಡು ಜೈಸಲ್‍ಮೇರ್ ಪಟ್ಟಣಕ್ಕೆ ಮತ್ತೆ ಜೀವಕಳೆ ಬರುವಂತೆ ನೋಡಿಕೊಂಡ.

ಜೈಸಲ್‍ಮೇರ್ ಪಟ್ಟಣ[ಬದಲಾಯಿಸಿ]

ಜೈಸಲ್‍ಮೇರ್ ಪಟ್ಟಣವು ಜಿಲ್ಲೆಯ ಆಡಳಿತಕೇಂದ್ರ. ಜನಸಂಖ್ಯೆ 16,578 (1971). ಪಟ್ಟಣದ ಸುತ್ತಲೂ 10'-15' ಎತ್ತರ 5' ದಪ್ಪ ಇರುವ ಗೋಡೆ ಇದೆ. ಇಲ್ಲಿಯ ಹಳದಿ ಬಣ್ಣದ ಉಸುಕಿನ ಶಿಲೆಗಳಿಂದ ನಿರ್ಮಾಣಗೊಂಡ ಮನೆ ಮಹಲುಗಳೂ, ಜೈನಮಂದಿರಗಳೂ ಅರಮನೆ ಮತ್ತು ಕೋಟೆಗಳೂ ಸುಂದರವಾಗಿವೆ. ಮಹಾರಾವಲನ ಅರಮನೆ ಇಲ್ಲಿಯ ಪ್ರಮುಖ ಪ್ರೇಕ್ಷಣಿಯ ಕಟ್ಟಡ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: