ಜೈಮಿನಿ ಭಾರತದಲ್ಲಿ ಅಲಂಕಾರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವ್ಯದಲ್ಲಿ ಪ್ರಾಸ ಮತ್ತು ಅಲಂಕಾರಗಳು[ಬದಲಾಯಿಸಿ]

  • ಪದ್ಯ ಕಾವ್ಯಗಳ ಅನುಕೂಲತೆ
  • ಭಾಷೆಗೆ ಮತ್ತು ಕಾವ್ಯಕ್ಕೆ ಛಂದಸ್ಸೂ ಸಾಧಕವಾದುದು..ಕಾವ್ಯಗಳಲ್ಲಿ ಗದ್ಯ ಪದ್ಯ ಮತ್ತು ¸ಅವೆರಡರ ಮಿಶ್ರಣ ಚಂಪೂ ಎಂದು ಮೂರು ಬಗೆ. ಪದ್ಯ ಕಾವ್ಯ ಗಳಿಗೆ ಛಂದಸ್ಸು ವಿಷಯವನ್ನು ಸಂಗ್ರಹಿಸಿ ಹೇಳಲೂ , ರಸವತ್ತಾಗಿ ಹೇಳಲೂ ಮನೋಹರವಾಗಿ ತಿಳಿಸಲೂ ಅನುಕೂಲ. ನೆನಪಿಟ್ಟುಕೊಳ್ಳಲು ಪದ್ಯವು ಬಹಳ ಅನುಕೂಲ. ಕೇಳುಗರಿಗೆ ಇಂಪಾಗಿ ರಸವತ್ತಾಗಿ ಗಮಕ ಶೈಲಿಯಲ್ಲಿ ಹಾಡಬಹುದು. ಈ ಪದ್ಯರಚನೆಯ ನಿಯಮಗಳನ್ನು ಛಂದಶಾಸ್ತ್ರವು ಹೇಳುವುದು. ಇದು ಕಾವ್ಯ ಲಕ್ಷಣವಾದ ಅಲಂಕಾರದ ಜೊತೆಜೊತೆಯಲ್ಲಿಯೇ ಸಾಗುವುದು.

ಪದ್ಯರಚನೆ ಮತ್ತು ಮಾರ್ಗ ದೇಸಿ ಕಾವ್ಯಗಳು[ಬದಲಾಯಿಸಿ]

  • ಪದ್ಯವು ಕೆಲವು ಸಾಲುಗಳಿಂದ ಕೋಡಿರುವುದು. ಅದನ್ನು ಪಾದಗಳೆನ್ನುವರು. ಪ್ರತಿ ಪಾದವೂ ಗೊತ್ತಾದ ಅಕ್ಷರಗಳ ಗುಂಪಿನಿಂದ ಅಥವಾ ಗಣಗಳಿಂದ ಕೂಡಿರುತ್ತದೆ. ಅದು ಆ ಪದವನ್ನು ನುಡಿಯುವ ,ಕಾಲ, ವನ್ನು ಅವಲಂಬಿಸಿರುತ್ತದೆ. ಇದು ಪದ್ಯಕ್ಕೆ ಒಂದು ಲಯ ಅಥವಾ ಯತಿ, ಗ್ರಾಮ್ಯದಲ್ಲಿ ಹೇಳುವುದಾದರೆ ‘ಗತ್ತು’ ಕೊಡುವುದು. ಒಂದು ಅಕ್ಷರವನ್ನು ನುಡಿಯುವ ಕಾಲ ‘ಲಘು’ ಮತ್ತು ಎರಡು ಅಕ್ಷರದ ಅಥವಾ ದೀರ್ಘಅಕ್ಷರದ ಕಾಲ ‘ಗುರು’. ಗುರು ಲಘುಗಳು ಗೊತ್ತಾದ ಕ್ರಮದಲ್ಲಿ ಸೇರಿ ಗಣಗಳಾಗುವುವು. ಹೀಗೆ ನಿಯಮಬದ್ಧವಾಗಿ ಗಣಗಳಿಂದ ರಚಿತವಾದದ್ದು ಪದ್ಯ. ಸಂಪ್ರದಾಯ ಬದ್ಧವಾಗಿ ಬರೆದ ಪ್ರಾಸಲಕ್ಷಣವುಳ್ಳ ಪದ್ಯಗಳ ಕಾವ್ಯ ‘ಮಾರ್ಗ’ ಕಾವ್ಯ. ಜಾನಪದ ಅಥವಾ ಸಂಪ್ರದಾಯ ನಿಯಮ ಅನುಸರಿಸದೆ ಬರೆದ ಪದ್ಯಗಳು ‘ದೇಸಿ’ ಎನಿಸಿಕೊಳ್ಳುತ್ತವೆ.

ಛಂದಸ್ಸು ಮತ್ತು ಪ್ರಾಸ[ಬದಲಾಯಿಸಿ]

  • ಜೈಮಿನಿ ಭಾರತದ ಛಂದಸ್ಸು ವಾರ್ಧಕ ಷಟ್ಪದಿ. ಇದು ಆರು ಪಾದಗಳುಳ್ಳದ್ದು. ಇದರಲ್ಲಿ ಪ್ರತಿ ಪಾದದಲ್ಲಿಯೂ ಆರಂಭದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುದು. ಇದು ಆದಿ ಪ್ರಾಸ (ಎರಡನೇ ಅಕ್ಷರದ ಪ್ರಾಸ-ದ್ವಿತೀಯ ಪ್ರಾಸ). ಇದು ಷಟ್ಪದಿಗಳ ಸಾಮಾನ್ಯ ಲಕ್ಷಣ. ಇದರಲ್ಲಿ ಪಂಚಮಾತ್ರಾಗಣಗಳು ಒಂದು ಎರಡನೇ ಪಾದ ಮತ್ತು ನಾಲ್ಕು ಐದನೇಪಾದಗಳಲ್ಲಿ ನಾಲ್ಕು ನಾಲ್ಕು ಇರುತ್ತವೆ, ಮೂರು ಮತ್ತು ಆರನೆಯ ಪಾದಗಳಲ್ಲಿ ಆರು ಗಣಗಳಿರುವುವು. ಪ್ರತಿ ಪಾದದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನ ಇರಬೇಕು. ಸಾಲಿ ಎರಡನೇ ಅಕ್ಷರ ಒಂದೇ ಬಗೆಯ ವ್ಯಂಜನವುಳ್ಳದ್ದು. *ಉದಾ: ವಾರ್ಧಕ:
ಕೆತ್ತ ಬಲ್ಗತ್ತಲೆಗೆ ತರಣಿ ಮುಂಗಾಣದಿರೆ|
ಪೊತ್ತುವೆಳಗಂ ಬೇರೆ ತೋರ್ಪರಾರ್ ಬಿಡದೆ ಘ|
ರ್ಮೊತ್ತರಕೆ ಮಾರತಂ ಬೆಮೊರ್ದೊಡಾರ್ ಬೀಸುವರ್ ಬಳಿಕಾಲವಟ್ಟದಿಂದಂ||

ಕಾವ್ಯದಲ್ಲಿ ಅಲಂಕಾರ[ಬದಲಾಯಿಸಿ]

  • ಕಾವ್ಯ ಸೌಂದರ್ಯವನ್ನುಂಟುಮಾಡುವ ಶಬ್ದ ಅರ್ಥಗಳ ವೈಚಿತ್ರ್ಯ ಮತ್ತು ವಿಶಿಷ್ಟತೆಗಳಿಗೆ ಅಲಂಕಾರವೆಂದು ಹೆಸರು. ಧ್ವನಿ (ಒಳಾರ್ಥವಿರುವುದು) ರಸ, ವಕ್ರೋಕ್ತಿ, ರೀತಿ, ಗುಣ ಇವು ಸಂದರ್ಭಕ್ಕೆ ಶಬ್ದವೈ ಚಿತ್ರ್ಯವನ್ನೋ ಅರ್ಥವೈಚಿತ್ರ್ಯವನ್ನೋ ಉಂಟುಮಾಡಿ ಕಾವ್ಯಕ್ಕೆ ಸೌಂದರ್ಯವನ್ನು ತರುವುವು. ಕಾವ್ಯ ಸೌಂದರ್ಯವನ್ನು ಹೀಗೆ ಹೇಳುವರು: ಧ್ವನಿ ರಸಗಳು ಕಾವ್ಯ ಶರೀರದಲ್ಲಿ ಜೀವದಂತೆಯೂ, ಗುಣಗಳು ಶೌರ್ಯ ಧೈರ್ಯಗಳಂತೆ, ಅಲಂಕಾರಗಳು ಮೈಮೇಲೆ ಹಾಕಿಕೊಳ್ಳುವ ಒಡವೆಗಳಂತೆ ಇರುತ್ತವೆ, ಅಲಂಕಾರಗಳು ಅಗತ್ಯವಾದರೂ ಅನಿವಾರ್ಯವಲ್ಲ. ಹೆಚ್ಚು ಕಾಡಿಮೆ ಮಾಡಿಕೊಳ್ಳಬಹುದು. ಬಹಳಷ್ಟು ಪಂಡಿತರು ರಸವೇ ಪ್ರಧಾನವೆನ್ನುವರು.
  • ಅಲಂಕಾರಗಳಲ್ಲಿ ಅರ್ಥಾಲಂಕಾರಗಳಿಗೆ ಪ್ರಾಧಾನ್ಯತೆ ಕೊಡುವರು. ಶಬ್ದಾಲಂಕಾರಗಳು ಪದ್ಯದ ಕೇಳುವಿಕೆಗೆ ವಿಶಿಷ್ಟ ಹಿತವನ್ನು ಕೊಡುವುವುದು. ಈ ರಸಾಲಂಕಾರದಲ್ಲಿ ನಾನಾ ಬಗೆಗಳಿವೆ; ಅದರಲ್ಲಿ ಒಮ್ಮತವಿಲ್ಲ. ಶಬ್ದಾಲಂಕಾರಕ್ಕೆ ‘ಅನುಪ್ರಾಸ, ಯಮಕ, ಚಿತ್ರಕವಿತ್ವ ಮುಂತಾಗಿ ಇವೆ.(ಮುಂದೆ ನೋಡಿ).
  • ಅರ್ಥಆಲಂಕಾರಗಳಲ್ಲಿ ಉಪಮೆ, ರೂಪಕ, ದೀಪಕ, ದೃಷ್ಟಾಂತ, ಭ್ರಾಂತಿ, ಉತ್ಪ್ರೇಕ್ಷೆ, ಪರ್ಯಾಯೋಕ್ತಿ, ಸಮಾಸೋಕ್ತಿ, ಅತಿಶಯೋಕ್ತಿ, ವಿರೋಧಾಭಾಸ, ಮೊದಲಾದವು. ಶೃಂಖಲಾ ಮೂಲ ಅಲಂಕಾರಗಳಲ್ಲಿ, ಏಕಾವಳಿ, ಅನುಮಾನ, ಯಥಾ ಸಂಖ್ಯೆ ಮೊದಲಾದವಿವೆ. ವ್ಯಾಜಸ್ತುತಿ, (ನಿಂದಾಸ್ತುತಿ), ವ್ಯಾಜನಿಂದೆ (ಹೋಲಿಕೆಯಲ್ಲಿ ಇಬ್ಬರನ್ನೂ ನಿಂದಿಸುವುದು.) ಇದಲ್ಲದೆ ಮಿಶ್ರ ಅಲಂಕಾರಗಳೂ ಇವೆ.[೧]

ಉದಾಹರಣೆಗಳು[ಬದಲಾಯಿಸಿ]

  • ಅಲಂಕಾರಗಲ ಮುಂದಿರುವ ಸಂಖ್ಯೆಯು, ಶ್ರೀಡಿ.ಆರ್.ಪಾಂಡುರಂಗ ಅವರು ಲೆಕ್ಕಮಾಡಿದ ಕಾವ್ಯದಲ್ಲಿರುವ ಒಟ್ಟು ಆ ಬಗೆಯ ಅಲಂಕಾರಗಳು.
*೧. ಅಕ್ಷರಾನುಪ್ರಾಸಗಳು-11;
  • ಎತ್ತಿ ಬಹಸತ್ತಿಗೆಯ ಮೊತ್ತಂಗಳೆತ್ತಲಘಾ/
  • ಕತ್ತಲಿಸೆ ಪೊತ್ತಮನೆವೆತ್ತ ಬಲ್ಗತ್ತಿಗಳ/
  • ಕಿತ್ತು ಭಟರೆತ್ತಿ ಜಡಿಯುತ್ತರಲ್ಕತ್ತ ಬೆಳಗಿತ್ತುವವು ಮತ್ತೆ ಬಲಕ್ಕೆ//19//ಸಂ.4//
  • (2)ಬಿಟ್ಟನೇ ರಘುಶ್ರೇಷ್ಠನೆನ್ನಕಟಕಟ ತಾಂ/
  • ಮುಟ್ಟನೇ ನೆಗಳ್ದ ಬಾಳ್ಕೆಗೆ ಸಂಚಕಾರಮಂ/
  • ಕೊಟ್ಟನೇ ಸುಮಿತ್ರಾರಾನುಜ ಕಟ್ಟರಣ್ಯದೋಳ್ಕಳುಹಿಬಾರೆಂದು//18//ಸಂ.19//
♦♦♦
*೨. ಪದಾದಿ ಯಮಕ-71:
  • ಪಾವನತುಲಾಭರಣಮಂ ಮಾಡಿಕೊಂದೆಸೆವ/
  • ಪಾವನ ತರ ಸ್ವರೂಪಂ ನಾರದಾದಿ ಮುನಿ/
  • ಪಾವನತ (ಮುನಿಪ ಅವನತ)ಪಾದಪಂಕೇರುಹಂ--//2//ಸಂ.1//
  • (2) ತೊಟ್ಟಲೊಳ್ನಲಿವ ನೆವಮಿಲ್ಲದೆ ನಗುವ ಬಾಯ್ಗೆ/
  • ಬೆಟ್ಟಿಕ್ಕಿ ಪೀರ್ವ ಪಸಿದೊಡೆ ಚೀರ್ವಮೊಲೆಯುಂಬ/
  • ಪಟ್ಟಿರಿಸೆ ಪೊಳ್ವಂಬೆಗಾಲಿಡುವ ಮೊಳವೆಲ್ಲ ಜೊಲ್ಲುಗೆ ತೊದಲಿಸಿನುಡಿವ//50//ಸಂ.19//
♦♦♦
*೩. ಪಾದ ಮಧ್ಯ ಯಮಕ-9:
  • ಅಂಚೆ ವಿಂಡಾಡದ ಕೊಳಂ ಕೊಳಂಗಳೊಳು ಸಲೆ ಪ/
  • ಳಂಚಿ ಸುಳಿಯದ ಗಾಳಿ ಗಾಳಿಗಳ ಬಳಿವಿಡಿದು/
  • ಸಂಚರಿಸದೆಳೆದುಂಬಿ ದುಂಬಿಗಳ ಬಿದಯಕಿಂಪೆನಿಸದ ಅಚ್ಚಲಗ‍ಳ//೩//ಸಂ.೩//
♦♦♦
*೪. ಪದಾಂತ್ಯ ಯಮಕ-30:
  • ಎಲ್ಲಿಯುಂ ಪರಿವ ಪೆರ್ದೊರೆಯಿಂದೆಕೆರೆಯಿಂದೆ;
  • (2) ಇರುಳಂತೆ ಪಗಲಂತೆ ಮಖದಂತೆ ದಿವದಂತೆ/
  • ವರಪಯೋನಿಧಿಯಂತೆ ಕೈಲಾಸಗಿರಿಯಂತೆ/
  • ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವಾವಾಸಮಾಗಿ//
  • ಧುರದಂತೆ ಕೊಳದಂತೆ ಕಡಲಂತೆ ನಭದಂತೆ/9//ಸಂ.19//
♦♦♦
*೫. ಅನುಪ್ರಾಸ-56:
  • ಯಾವಂಗೆ ಭಾವಂಗೆ ಮೇಣತ್ತೆಗೈದೆ ಸಂ/
  • ಭಾವಿಸುತ ಸೇವಿಸುತ ಕಾಂತಂಗೆ ಸುರತ ಸಂ/
  • ಜೀವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ//೫೪//ಸಂ.೫//
♦♦♦
*೬. ಪುನರುಕ್ತಿ-೯:
  • ಸಾಲ ಸಾಲಂಗಲ ಬಹಳ ಕುಳದಿಂದೆ ಹಿಂ|
  • ತಾಲ ತಾಲಂಗಳಿಂ ಮಾದಲದಲರ್ಗಳಿಂ, ತ|
  • ಮಾಲ ಮಾಲತಿಗಳಿಂ ಸುರಂಭ ರಂಭದಿಂ ಮಂದ ಮಂದಾರದಿಂದ||
  • ಜಾಲ ಜಾಲಂಗಳಿಂ ಸುರಹೊನ್ನೆ ಹೊನ್ನೆಬಗೆ\
  • ಪಲ ಪಾಲಾಶ ತರುತರುಣಾಮ್ರ ಚಯದಿಂದ|
  • ಲಾಲಿಲಾಲಿತನವಾಶೋಕದಿಂದುದ್ಯಾನಮೇಂ ಚೆಲ್ವೆನಿಪುದೊ||34||ಸಂ.3||
♦♦♦
*೭. ಅಂತ್ಯಪ್ರಾಸ :
  • ತರುಣ ಪಲ್ಲವದ ವಿಸ್ತಾರದಿಂ ನೇರದಿಂ|
  • ಸರಗೈವ ಕಲಪಿಕೋಚ್ಚಾರದಿಂ ಸಾರದಿಂ|
  • ಸುರಿವ ಪೂದೊಂಗಲ ತುಷಾರದಿಂ ಸೈರದಿಂ ಸಲ್ಲಾಪಕೆಳಸಿ ಬಳಸಿ||
  • ಮೊರೆವ ದುಂಬಿಗಳ ಝಮಕಾರದಿಂ ತೋರದಿಂ|
  • ಪರಿಪಕ್ವಮಾದ ಫಲಭಾರದಿಂ ಕೀರದಿಂ |
  • ಕರಮೆಸಯತಿರ್ಪ ಸಹಕಾರದಿಂ ತೀರದಿಂಪೆಲ್ಲಿಯೂ ನಂದನದೊಳು||28||ಸಂ.3||
♦♦♦
*೮. ರೂಪಕ :
  • 1)ಮೊಳೆವಲ್ಲ ಮೊಲ್ಲೆಯಂ ಚಂದುಟಿಯ ಬಂದುಗೆಯ/
  • ನೆಳೆನೆಗೆಯ ಮಲ್ಲಿಗೆಯನೆಸಳ್ಗಣ್ಣ ನೈದಿಲಂ/
  • ನಳಿತೋಳ ಸಿರಿಸಮಂ ಸೆಳ್ಳುಗುರ ಕೇತಕಿಯಾನನದ ತಾವರೆಯನು//
  • ತೊಳಗುವ ಸುನಾಸಿಕದ ಸಂಪಿಗೆಯ ನವಯುವದೊ/
  • ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ
  • ಗಲನರಸಿ ಕೊಯ್ವರೆಂದವರ ನಡುಚಿಂತಿಸಿಯೆ ಬಡವಾದುದೆನಲೆಸೆದುದು//21//ಸಂ.8//
  • 2) ತಳಿರಡಿಗೆ ತೊಂಡೆವಣ್ತುಟಿಗೆ ತಾವರೆ ಮೊಗಕ್ಕೆ /
  • ಬೆಳೆಗಾಯಿ ಮೊಲೆಗೆ ನೈದಿಲೆ ಕಣ್ಗೆ ಬಾಳೆ ತೊಡೆ/
  • ಗೆಳವಲ್ಲಿ ಮೈಗೆಸಂಪಿಗೆ ನಾಸಿಕಕ್ಕೆ ಮಲ್ಲಿಗೆ ನಗೆಗೆ ಮೊಲ್ಲೆ ಪಲ್ಗೆ //
  • ಅಳಿ ಕುಂತಳಕೆ ನವಿಲ್ಮುಡಿಗಂಚೆನಡೆಗೆ ಕೋ/
  • ಗಿಲೆ ಗಿಳಿಗಳಿಂಚರಕೆ ಸೋಲ್ದವಯುವಂಗಳೊ/
  • ಳ್ನೆಲೆಸಿದವು ವೆಣ್ಗಳ್ಗೆ ಸೋಲದವರಾರೆನಲ್‍ ನಡೆತಂದರಂಗನೆಯರು//4//ಸಂ..30//
♦♦♦
*೯. ಉಪಮೆ :
  • 1)ಕಡು ಬೇಸಿಗೆಯ ಬಿಸಿಲಿಂದೆ ಬಸವಳಿದ ರಸಾಲದಂತೆ
  • 2)ಕಾಕ ಸಂಘಾತದೋಲ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ
  • 3)ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ/
  • ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ/
  • ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತ// 16//ಸಂ.19//
  • 4)ಭದ್ರಾವತಿ ವರ್ಣನೆ: ಸಾನುರಾಗದೊಳುಟ್ಟ ಪಸುರುಡುಗೆಯೆನೆ ಧರಾ/
  • ಮಾನಿನಿಯ ಮೊಗದಾವರೆಯ ಮುಸುಕಿಕಂಡಿಹ ನ/ವೀನ ಪತ್ರಾವಳಿಗಳೆನೆ ನಗರಮಂ ಬಳಸಿದುಪವನಂಗಳ್ಮೆರೆವುವು//22//ಸಂ.3//
♦♦♦
೧೦. ಉತ್ಪ್ರೇಕ್ಷೆ
  • 1)ಪ್ರಭಾವತಿಯ ಮುಖ ತಾವರೆಯ ಬಳಿಯಿದ್ದ ಚಂದ್ರಮಂಡಲ ಧರ್ಮರಾಜನ ಕೀರ್ತಿಬೆಳದಿಂಗಳು ವ್ಯಾಪಿಸಿದಂತೆ
  • 2)ಕುಶಲವರಿಂದ ಘಾತಿಗೊಂಡು ಬಿದ್ದ ರಾಮನ ಸೈನ್ಯವನ್ನು ವಾಲ್ಮೀಕಿ ಕಂಡ ಬಗೆ (ಬೆಟ್ಟಗಳೇ ಉರುಳಿಬಿದ್ದಂತೆ)
  • ಶರಧಿಯಂ ಕಟ್ಟುವಂದಾ ರಾಘವೇಸದವರಂ/
  • ಧರೆಯೊಳಟ್ಟಣಿಸಿರ್ದ ಬೆಟ್ಟಂಗಳೆಲ್ಲಮುಂ/
  • ತರಿಸಿದ, ಭೂಮಿಗಾಧಾರಮಿಲ್ಲದೆ ಪೋಪುದೆಂದವನ ತನುಜಾತರು//
  • ಗಿರಿಗಳಂ ಪ್ರತಿಯಾಗಿತಂದಿಳೆಯಮೇಲಿನ್ನು/
  • ಪರಪಿದರೋ ಪೇಳಲೇನ್ಪಡೆಗೆಡೆದು ಬಿದ್ದಿರ್ದ /
  • ಕರಿಘಟೆಗಳಟ್ಟೆ ಗಳ್ಕಾನಿಸಿದುವಾ ರಣದೊಳಾ ತಪೋನಿಧಿಯ ಕಣ್ಗೆ//47//ಸಂ.21//
♦♦♦
೧೧. ಏಕಾವಳಿ
  • ಅಂಚೆವಿಂಡಾಡದ ಕೊಳಂ ಕೊಳಂಗಳೊಳು ಸಲೆ ಪ
  • ಳಂಚಿ ಸುಳಿಯದ ಗಾಳಿ, ಗಾಳಿಗಳ ಬಳಿವಿಡಿದು /
  • ಸಂಚರಿಸದೆಳೆದುಂಬಿ ದುಂಬಿಗಳ ಬಿದಿಯಕಿಂಪೆನಿಸದಚ್ಚಲರಲರ್ಗಳ//
  • ಗೊಂಚಲೆರಗಿಸದ ಲತೆ, ಲತೆಗಳಡರದ ತಳ್ಕಿ/
  • ನಿಂ ಚಿಗುರದಿಮ್ಮಾವು ಮಾವುಗಳ ಚಂದಳಿ/
  • ರ್ಮಿಂಚದ ಬನಂ ಬನಗಳಂಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು//೩ //ಸಂ.೩//
♦♦♦
೧೨. ಶ್ಲೇಷೆ
  • ಕರವೀರ ವರ್ಗಮಂ ಬಾಗಿಸಿದರದಟರಂ/
  • ತಿರದೆ ಪುನ್ನಾಗಮಂ ಪತ್ತಿ ರಂಜಿಸಿದರ್ಚ/
  • ದುರ ಮಾವುತಿಗರಂತೆ,ಜಾತಿಯಂತವರನರಿದಾಯ್ದರವನೀಶರಂತೆ//
  • ಸುರಗಿಯಂ ತುಡುಗಿದರ್ಭಟರಂತೆ, ಬಗೆಗೆಳಸಿ/
  • ಪರಿದರ್ಸುವಿಟರಂತೆ, ಪಾದರಿಯನರಸಿ ಪಿಡಿ/
  • ದುರವಣಿಸಿದರ್ನಗರಶೋಧನೆಯ ತಳವಾರರಂತೆ ಬನದೊಳ್ಪೆಣ್ಗಳು//೨೨//ಸಂ.೮//
♦♦♦
೧೩. ಇತರೆ ಅಲಂಕಾರಗಳು ಅರ್ಥಾಂತರನ್ಯಾಸ, ದೀಪಕ ಮುಂತಾದ ಅಲಂಕಾರಗಳು ಸಾಕಷ್ಟಿವೆ. ಆದರೆ ಉಪಮಾಲಂಕಾದಲ್ಲಿ ಲಕ್ಷ್ಮೀಶನದು ಹೆಚ್ಚಿನ ಪ್ರತಿಭೆ.
  • ಒಂದೇ ಪದ್ಯದಲ್ಲಿ ಎರದು ಮೂರು ಅಲಂಕಾರಗಳಿರುವ ಸಾಧ್ಯತೆಯೂ ಇದೆ. ಲಕ್ಷ್ಮೀಶನಿಗೆ ಉಪಮಾಲಂಕಾರ ಬಹುಪ್ರಿಯ.[೨][೩]

ಪ್ರಕೃತಿವರ್ಣನೆ ಮತ್ತು ಕವಿಯ ಪ್ರತಿಭೆ[ಬದಲಾಯಿಸಿ]

  • ನಿತ್ಯನೂತನವಾದ ಪ್ರಕೃತಿಯನ್ನು ವರ್ಣಿಸುವುದು ಕವಿಗೆ ಆನಂದ-ರಮ್ಯ. ಈತನ ಪದ್ಯಗಳಲ್ಲಿ ಕಾವ್ಯಕ್ಕೆ ಮರಗು ಕೊಡುವ ಓಜಸ್ಸು,ಪ್ರಸಾದ, ಸಮತಾ, ಮಾಧುರ್ಯ, ಸುಕುಮಾರತೆ, ಆರ್ಥವ್ಕ್ತಿ, ಉದಾರತೆ, ಶ್ಲೇಷ, ಕಾಂತಿ, ಸಮಾಧಿ ಎಂಬ ಈ ಹತ್ತು ಗುಣಗಳನ್ನು ಕಾವ್ಯದುದ್ದಕ್ಕೂ ಕಾಣಬಹುದು.

ಉದಾ: ಉಪಮೆಯ ಮೂಲಕ ಸೌಂದರ್ಯ ವರ್ಣನೆ-

೧). ಸಗ್ಗದಾಣ್ಮನ ವಜ್ರಹತಿಯಿಂದ ಸಾಗರಕೆ|
ಮಗ್ಗುನ ಕುಲಾದ್ರಿಗಳ ಮರಿಗಳ ಸಮೂಹಮೆನ|
ಲೊಗ್ಗಿನಿಂ ಪೆರ್ಗಡಲನೀರ್ಮೊಗೆಲಿಳಿದ ಕಾರ್ಮುಗಿಲ ಬಳಗಂಗಳೆನಲು||
ದಿಗ್ಗಜಮನೇಕಂಗಳಾದುವೆನೆ, ಕರಿಘಟೆಯ|
ನೊಗ್ಗರಂ ವರ ಸರೋವರಸಲಿಲ ಪಾನಕಿಳೆ|
ನೆಗ್ಗಿದಲ್ಲದೆ ಮಾಣದೆಂಬಿನಂ ಪೊಳಲ ಪೊರಮಟ್ಟು ಬಂದಪುದೆಂದನು||೩೮||ಸಂ.೩||
  • ಆನೆಗಳು ನೀರು ಕುಡಿಯಲು ಸರೋವರಕ್ಕೆ ಇಳಿದು ಹೊರಬರುವುದು, ಇಂದ್ರನ ವಜ್ರಾಯುಧದಿಂದ ರೆಕ್ಕೆ ಕಡಿದು ಸಮುದ್ದರಕ್ಕೆ ಬಿದ್ದ ಪರ್ವತಗಳಂತೆ ಕಾಣುವುದು.
೨). ನಿರುತಂ ಕುಮುದಶೋಬಿ ನೈಋತ್ಯದಂತೆವಾ|
ನರಸೈನ್ಯದಂತೆ ಕಮಲೋದರೋದ್ಭಾಸಿ ಭಾ|
ಸುರ ಶುಕ್ಲ ಪ್ಷದಂತಹಿತಲ್ಪದಂತೆ, ಕವಿಸೇವಿತಂ ಗಗನದಂತೆ||
ಧರಣಿಪಾಲಯದಂತೆ ಸುಮನೋಹರಂ ನಿಶಾ|
ಚರ ವಂಶದಂತೆ ಮಾಲಾಕಾರ ಜನದಂತೆ|
ಹರಿಜನ್ಮಭೂಮಿ ಗೋಕುಲದಂತೆ ವನದಂತೆತತ್ಸರಂ ಕಂಗೊಳಿಸಿತು||೧೧||ಸಂ.೧೫||
  • ೩)ಸುಖವಾಗಿರುವ ಸಂಸಾರಿಗನಂತೆ ಸರೋವರ ಇತ್ತು-:
ಅಳಿಯವರ್ಗವನಾದರಿಸುತ ಮಿತ್ರಸ್ನೇಹ
ದೊಳ್ಸಂದು,ಸುತರಂಗಲೀಲೆಯಂ ಲಾಲಿಸುತ|
ಕುಲ ಸದಭ್ಯುದಯಮಂ ನೆಲೆಗೈದು ಕಾಂತಾನುಕೂಲ ರಮಣೀಯಮಾಗಿ||
ಲಲಿತ ಲಕ್ಷ್ಮೀಸ್ಥಾನಮೆನಿಸಿ ಮಂ|
ಗಳ ಭವಕಡೆಕೊಟ್ಟು ಸಕಲ ಸೌಭಾಗ್ಯಮಂ|
ತಳದ ಸಂಸಾರಿಕನ ತೆರದಿಂದೆ ವಿಮಲ ಪದ್ಮಾಕರಂ ಕಣ್ಗೆಸೆದುದು.||೧೩||ಸಂ.೧೫||

ದ್ವಂದಾರ್ಥದ ಚಮತ್ಕಾರಿಕ ಸಂಯೋಜಿತ ಪದ್ಯ[ಬದಲಾಯಿಸಿ]

  • ಶ್ಲೇಷಾಲಂಕಾರ:
ಕಳಹಂಸಮಾಕೀರ್ಣಮಾಗಿರ್ದು ಕಾಳಗದ|
ಖಳನಲ್ಲ, ವಿಷಭರಿತಮಾಗಿರ್ದು ಸರ್ಪ ಸಂ|
ಕುಳಮಲ್ಲ ಕುಮುದಯುತಮಾಗಿರ್ದು ಖಳರಂತರಂಗದಾಳಾಪಮಲ್ಲ||
ಅಳಿದುಳಿದು ಭಂಗಮಯಮಾಗಿರ್ದು ಮುರಿದ ನೃಪ|
ದಳಮಲ್ಲ ಬಹುವಿಚಾರಸ್ಥಾನಮಾಗಿರ್ದು|
ತಿಳಿಯಲ್ಕುಪದ್ರ ಸ್ಥಳಮಲ್ಲಮೆನಿಸಿರ್ದುದಾ ವಿಮಲ ಸರಸಿ ಕಣ್ಗೆ||೧೪||ಸಂ.೧೫||
  • (ಈ ಸರೋವರದಲ್ಲಿ, ಕಲಹಂ + ಸಮಾಕೀರ್ಣವಾಗಿದ್ದರೂ (ಕಲಹವು ನಡೆಯುತ್ತಿದ್ದರೂ) ಯುಧ್ಧಭೂಮಿಯಲ್ಲ, ಏಕೆಂದರೆ ಕಳಹಂಸಗಳು + ಆಕೀರ್ಣವಾಗಿದೆ. ಕಳಹಂಸಮಾಕೀರ್ಣಮಾಗಿರ್ದು- ಕಲಹಂಸಂ + ಆಕೀರ್ಣಮಾಗಿದೆ; ವಿಷಭರಿತಮಾಗಿರ್ದು ಸರ್ಪಸಂಕುಳಮಲ್ಲ- ವಿಷ +ಭರಿತವಾಗಿದು ಸರ್ಪಗಳ ಸಮೂಹವಲ್ಲ, ಏಕೆಂದರೆ ವಿಷಂ=ನೀರು ಭರಿತಂ ತುಂಬಿದೆ ; ಹಾಗೆಯೇ ಕು=ಕೆಟ್ಟದ್ದರಲ್ಲಿ + ಮುದಯುತಂ =ಸಂತೋಷಪಡುವಂತಿದ್ದರೂ, ಖಳನ ಅಂತರಂಗ=ಮನಸ್ಸಲ್ಲ, ಏಕೆಂದರೆ ಕುಮುದಯುತಂ + ಆಗಿರ್ದು, ತಾವರೆಯಿಂದ ತುಂಬಿದ- ಸರೋವರವಾಗಿದೆ--ಇತ್ಯಾದಿ)

ಉಪಮೆ ಮತ್ತು ಶ್ಲೇಷೆ[ಬದಲಾಯಿಸಿ]

  • ಕರ್ನಾಟಕ ಕವಿಚೆರಿತೆ ಬರೆದ ಆರ್.ನರಸಿಂಹಾಚಾರ್ಯರು ಅದರಲ್ಲಿ, ಈ ಬಗೆಯ ಷಟ್ಪದಿಯ ಅತ್ಯುತ್ತಮ ಮಾದರಿಯನ್ನು ಈ ಕಾವ್ಯದಲ್ಲಿ ಕಾಣಬಹುದು ಎಂದು ಬರೆದಿದ್ದಾರೆ.
  • ಅವನೇ ತನ್ನ ಕಾವ್ಯದ ಲಕ್ಷಣವನ್ನು ಪೀಠಿಕೆಯಲ್ಲಿ ಸತ್ಪುರುಷನ ಉಪಮೆಯನ್ನು ಕೊಟ್ಟು ಶ್ಲೇಷೆಯ ಅಲಂಕಾರದಲ್ಲಿ, ಹೀಗೆ ವರ್ಣಿಸಿದ್ದಾನೆ:
ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ|
ತಾರದೆ ನಿಜಾನ್ವಯ ಕ್ರಿಯೆಗಳ್ಗೆ ದೂಷಣಂ|
ಬಾರದೆ,ವಿಶೇಷಗುಣಗಣ ಕಲಾಗೌರವಂ ತೀರದೆ, ದುರುಕ್ತಿಗಳ್ಗೆ||
ಸೇರದೆ, ಸುಮಾರ್ಗದೊಳ್ನೆಡೆವ ಸತ್ಪುರುಷನ ಗ-|
ಭೀರ ದೆಸೆಯಿಂ ಪೊಲ್ವ ಕಾವ್ಯ ಪ್ರಬಂಧಮಂ|
ಶಾರದೆಯ ಕರುಣದಿಂ ಪೇಳ್ವೆನಾಂ, ದೋಷಮಂತೊರೆದೆಲ್ಲಮುಂ ಕೇಳ್ವುದು||
  • ಪದಗಳಿಗೆ ಎರಡೆರಡು ಅರ್ಥವಿಟ್ಟು ಹೇಳಿದೆ: ಪರರ ಅರ್ಥವನ್ನು ಎಂದರೆ ಹಣವನ್ನು ಅಪಹರಿಸದ, ಪೂಜ್ಯರಿಗೆ (ಯತಿಗಳಿಗೆ) ಅಗೌರವ ತೋರದ, ನಿತ್ಯದ ಕರ್ತವ್ಯಗಳನ್ನು ಬಿಡದ, ಉತ್ತಮ ಗುಣಗಳ ನಡತೆಗೆ ತಪ್ಪದ, ಕೆಟ್ಟ ಮಾತನ್ನಾಡದ, ಸನ್ಮಾರ್ಗಲ್ಲಿ ನೆಡವ ಸತ್ಪುರುಷನಂತೆ, -(ಪುನಃ ಅದೇ ಪದಗಳಿಗೆಬೇರೆ ಅರ್ಥ) ಕೃತಿಚೌರ್ಯ ಮಾಡದೆ(ಪಾರದೆ ಪರರ ಅರ್ಥವನ್ನು), ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ವ್ಯಾಕರಣ ದೋಷವಿಲ್ಲದೆ, ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ), ಗಂಭೀರ ಲಕ್ಷಣದ (ಸತ್ಪುರುಷನಂತಿರುವ) ಕಾವ್ಯವನ್ನು ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ. ಈ ಬಗೆಯ ದ್ವಂದಾರ್ಥವಿರುವ ಅನೇಕ ಪದ್ಯಗಳು ಈ ಕಾವ್ಯದಲ್ಲಿವೆ.

ಕಾವ್ಯದ ಗುಣ ಛಂದಸ್ಸು ಲಕ್ಷಣಮಲಂಕಾರ ಭಾವರಸದೊಂದಿಗೆ ಸತ್ಕೃತಿ ಚಮತ್ಕೃತಿ ಕಾವ್ಯದ ಗುಣ - ಹಾಗೆ ತನ್ನ ಕೃತಿ ಇದೆ ಎಂದಿದ್ದಾನೆ ಕವಿ, ಅದು ನಿಜವಾಗಿದೆ.

ಲಕ್ಷ್ಮೀಶನ ನುಡಿಗಟ್ಟು[ಬದಲಾಯಿಸಿ]

  • ಲಕ್ಷ್ಮೀಸನು ನೆನಪಿನಲ್ಲಿ ಉಳಿಯಬಹುದಾದ ಅನೇಕ ಅನುಭವದ ನುಡಿಗಟ್ಟುಗಳನ್ನು ತನ್ನ ಕಾವ್ಯದಲ್ಲಿ ಉಪಯೋಗಿಸಿದ್ದಾನೆ.
  • ಉದಾಹರಣೆಗೆ:
  • ಅರಿದರಿದು ಪರಹಿಂಸೆಯಂ ಮಾಡಿ ಮಾನವಂಬಾಳ್ದಪನೆ.♠ ಲೋಕದೊಳ್ ಆರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ!;
  • ಮುಳ್ಳಿಡಿದ ಮರನೇರಿದಂತಾದುದು. ♠ ಕೈಯಂ ಪಿಡಿದೊಡೆ ಮೈ ತಾನೆ ಬಹುದು! ♠ ಕರುಬರಿದ್ದೂರಿಂದೆ ಕಾಡೊಳ್ಳಿತು.(ಕರುಬುವವರು=ಕೊಟ್ಟೆಕಿಚ್ಚಿನವರು).
  • ಕೀರ್ತಿ ನಿಲ್ವುದು ನರರ ಬಾಳ್ದಿಟಮಿದಲ್ಲ. :♠ ಕೋವಿದರ್ ಗರ್ವವಂ ಮಾಡಲಾಗದು. (ಕೋವಿದರು= ಪಂಡಿತರು).♠ ಕೃತಘ್ನರ್ ಉಪಕಾರಮಂ ಬಲ್ಲರೇ?;
  • ಜಗದೊಳ್ ಉಪಕಾರಿಯಾದವಂ ತನ್ನ ನೋವಂ ನೋಳ್ಪನೆ! ಇತ್ಯಾದಿ
  • ಗಾದೆ ಮಾತು:ಹಸ್ತಿನಾವತಿಗೆ ಕೃಷ್ಣನ ಬರುವು:: ಅನ್ನೆಗಂ ತೊಳಲುತ ಅರಸುವ ಬಳ್ಳಿ ಕಾಲ್ತೊಡಕಿದಂತೆ :[೨]
  • ಲಕ್ಷ್ಮೀಶನು ಮಹಾಕವಿ ಎಂದು ಪಂಡಿತರು ಒಪ್ಪದ್ದಾರೆ. ಅಲ್ಲದೆ ಜನಪ್ರಿಯ ಕವಿ. ತನ್ನ ಕಾವ್ಯ ಪ್ರತಿಭೆಯಿಂದ ಕಾವ್ಯದಲ್ಲಿ ರಸೋತ್ಕರ್ಷ ತಂದಿದ್ದಾನೆ. ಅವನ ಶಬ್ದ ಸಂಪತ್ತಿ, ಅರ್ಥಗಾಂಭೀರ್ಯ, ಧ್ವನಿರಮ್ಯತೆ, ನಾದಮಾಧುರ್ಯ, ಪದಲಾಲಿತ್ಯ ನಮ್ಮನು ಸೆಳೆಯುತ್ತದೆ. ಕೇಳುಗರು ಇದರಲ್ಲಿನ ಕೃಷ್ಣ ಭಕ್ತಿಗೆ ಮಾರುಹೋಗುವರು. ಭಕ್ರಿಗೆ ಕಾವ್ಯ ಪೂಜನೀಯವಾಗುವುದು.
  • ಮಂಗಳಾಚರಣೆಯಲ್ಲಿ ಹೇಳಿದ ಮಾತು ನಿಜವಾಗಿ ಪರಿಣಮಿಸಿದೆ:
  • --------------ರಂಜಿಸುವ
ಪಲವಲಂಕಾರಗಳಿಡಿದ ಚಲ್ವಿನ ದೇವಪುರ ಲಕ್ಷ್ಮೀಕಾಂತನ||
ವಿಲಸಿತ ಕೃತಿಲಲನೆ ಮೃದು ಪದವಿಲಾಸದಿಂ|
ಸಲೆ ಸೊಗಸಲಡಿಗಡಿಗೆ ನಡೆಯಲ್ಕೆ ಚಿತ್ತಂಗ|
ಳೊಲಿದೆರಗದಿರ್ದಪುದವೆ! ಧರೆಯೊಳಗೆ ರಸಿಕರಾಗಿರ್ದ ಭಾವುಕ ನಿಕರದ||೪೪||ಸಂ.೩೪||
  • ಕಾವ್ಯ ಲಕ್ಷಣಗಳೆಂಬ ಆಭರಣಗಳಿಂದ ಸರ್ವಾಲಂಕಾರಭೂಷಿತಳಾದ ಲಕ್ಷ್ಮೀಕಾಂತನನ್ನು ಹೊಗಳುವ ದೇವೀಸ್ವರೂಪದ ಈ ಕೃತಿಲಲನೆಯ ಸಂತಸದ ನಡಿಗೆಯ / ಪದಗಳ ಲಾಲಿತ್ಯದ ಸೊಗಸಿಗೆ ಪ್ರೀತಿಯಿಂದ ನಮಿಸದವರು ಯಾರಿದ್ದಾರೆ! ಎಲ್ಲರೂ ಮೆಚ್ಚುವರು. (ಹೀಗೆ ತನ್ನ ಕಾವ್ಯಕ್ಕೆ ಕೃತಿಲಲನೆ ಎಂಬ ಅಧ್ಬುತ ರೂಪಕವನ್ನು ಹೆಣೆದಿದ್ದಾನೆ ಕವಿ.)

ಮಂಗಳಾಚರಣೆ[ಬದಲಾಯಿಸಿ]

  • ಮಂಗಳಾಚರಣೆಯ ಕೊನೆಯ ಪದ್ಯ:
  • ಪುಣ್ಯಮಿದು ಕೃಷ್ಣಚರಿತಾಮೃತಂ ಸುಕವೀಂದ್ರ|
  • ಗಣ್ಯಮಿದು ಶೃಂಗಾರ ಕುಸುಮತರು ತುರುಗಿದಾ|
  • ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ||
  • ಗಣ್ಯಮಿದು ಶಾರದೆಯ ಸನ್ಮೋಹನಾಂಗ ಲಾ|
  • ವಣ್ಯಮಿದು ಭಾವಕರ ಕಿವಿದೊಡವಿಗೊದಗಿದ ಹಿ|
  • ರಣ್ಯಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀಪತಿಯ ಕಾವ್ಯರಚನೆ||೪೬||ಒಟ್ಟು:೧೯೦೭||ಸಂ.೩೪||
  • ಕವಿ ಲಕ್ಷ್ಮೀಶನು ತನ್ನ ಕಾವ್ಯವು ಜನಪ್ರಿಯವಾಗಿ ವಿರಾಜಿಸುವುದೆಂದು, ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ.

ನೋಡಿ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ[ಬದಲಾಯಿಸಿ]

  1. ಕನ್ನಡ ಕೈಪಿಡಿ:ಸಂಪುಟ ೧:೩ ನೆಯಭಾಗ ಅಲಂಕಾರ; ೫ ರಸಪ್ರಕರಣ: ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ ೧೯೬೫
  2. ಲಕ್ಷ್ಮೀಶ ಕವಿ ವಿರಚಿತ ಕರ್ನಾಟಕ ಜೈಮಿನಿ ಭಾರತವು : ಭೀಮಸೇನರಾವ್ ಪರಿಷ್ಕರಿಸಿದ್ದು; ಪ್ರಕಾಶಕರು ಟಿ.ಎನ್. ಕೃಷ್ಣಶೆಟ್ಟಿ ಅಂಡ್ ಸನ್ ಬುಕ್ ಡಿಪೊ ಚಿಕ್ಕಪೇಟೆ ಬೆಂಗಳೂರು ನಗರ.(ಮದ್ರಣ ೧೯೫೬)
  3. ಆಧಾರ:ಮಹಾಕವಿ ಲಕ್ಷ್ಮೀಶನ ಸ್ಥಳ, ಕಾಲ ಮತ್ತು ಕಾವ್ಯ ವೈಶಿಷ್ಟ್ಯ -ಡಾ.ಡಿ.ಆರ್.ಪಾಂಡುರಂಗ ರೀಡರ್ ಎಂ.ಜಿ.ಎಂ.ಕಾಲೇಜು ಉಡುಪಿ; ಶ್ರೀಗುಂಡಾಜೋಯಿಸ್ ಅಭಿನಂದನಾ ಗ್ರಂಥ: ಮಲೆನಾಡು ರಿಸರ್ಚ್ ಅಕಾಡಮಿ.ಶಿವಮೊಗ್ಗ.