ಜಿಗಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಗಣೆ
Temporal range: Silurian–Recent
Hirudo medicinalis
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
Subclass:
Hirudinea

Lamarck, 1818
Infraclasses

Acanthobdellidea
Euhirudinea
(but see below)


ಜಿಗಣೆ ಇದು ಅನೆಲಿಡ ವಿಭಾಗದ ಹಿರುಡೀನಿಯ[೧] ವರ್ಗಕ್ಕೆ ಸೇರಿದ ಅಕಶೇರುಕ (ಲೀಚ್). ಭಾರತ, ಮ್ಯಾನ್ಮಾರ್ ಮತ್ತು ಶ್ರೀಲಂಕಾಗಳನ್ನೊಳಗೊಂಡು ಉಷ್ಣಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ವಾಸ ಸ್ಥಾನ[ಬದಲಾಯಿಸಿ]

ಸಿಹಿನೀರಿನ ಕೊಳ, ಕೆರೆ, ಜೌಗು ಪ್ರದೇಶ ಮತ್ತು ನಿಧಾನವಾಗಿ ಹರಿಯುವ ಹಳ್ಳಗಳಲ್ಲಿ ಇದರ ವಾಸ. ನೀರಿನಲ್ಲಿ ತನ್ನ ಮಾಂಸಲವಾದ ದೇಹವನ್ನು ಅಲೆಗಳಂತೆ ಬಳುಕಿಸಿ ಈಜುತ್ತದೆ. ಆಹಾರಾರ್ಜನೆಗಾಗಿ ನೆಲದ ಮೇಲೂ ಬರುವುದುಂಟು. ನೆಲದ ಮೇಲೆ ದೇಹದ ಎರಡೂ ತುದಿಗಳಲ್ಲಿರುವ ಹೀರುಬಟ್ಟಲುಗಳ ನೆರವಿನಿಂದ ದೇಹವನ್ನು ಕುಣಿಕೆಯಂತೆ ಬಾಗಿಸಿ ಚಲಿಸುತ್ತದೆ. ಜಿಗಣೆ ಒಂದು ರೀತಿಯಲ್ಲಿ ಬಹಿರ್ ಪರತಂತ್ರ ಜೀವಿ ; ಇದು ವಾಸಿಸುವ ನೆಲೆಯ ಬಳಿಗೆ ನೀರು ಕುಡಿಯಲು ಬರುವ ಕಶೇರುಕಗಳ ರಕ್ತವನ್ನು ಹೀರಿ ಬದುಕುತ್ತ ನೀರಿನಲ್ಲಿಯೇ ವಾಸಿಸುವ ಮೀನು, ಆಮೆಗಳ ಪರಾವಲಂಬಿಯಾಗಿ ಬದುಕುವುದೂ ಉಂಟು.[೨] . ಎಲ್ಲ ಜಿಗಣೆಗಳೂ ರಕ್ತ ಹೀರಿ ಜೀವಿಸುವ ಪರಾವಲಂಬಿಗಳಲ್ಲ. ಕೆಲವು ಬಸವನ ಹುಳು, ಕೀಟಗಳ ಡಿಂಬ ಮತ್ತು ಇತರ ಸೂಕ್ಷ್ಮಜೀವಿಗಳನ್ನು ತಿಂದು ಜೀವಿಸುತ್ತವೆ.

ಪ್ರಭೇದಗಳು[ಬದಲಾಯಿಸಿ]

ಸಾಮಾನ್ಯವಾಗಿ ಮನುಷ್ಯನಿಗೆ ಕೆಡುಕು ಮಾಡುವ ಜಿಗಣೆ ಹಿರುಡಿನೇರಿಯ ಜಾತಿಯದು. ಭಾರತದಲ್ಲಿ ನಾಲ್ಕು ಪ್ರಭೇದಗಳಿವೆ: ಹಿ. ವಿರಿಡಿಸ್, ಹಿ. ಜಾವನ್ಷಿಯ, ಹಿ. ಮ್ಯಾನಿಲೆನ್ಸಿಸ್ ಮತ್ತು ಹಿ. ಗ್ರ್ಯಾನುಲೋಸ, ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸಾಮಾನ್ಯವಾಗಿ ದೊರಕುವ ಪ್ರಭೇದ ಗ್ರ್ಯಾನುಲೋಸ.

ಶಾರೀರಿಕ ಲಕ್ಷಣಗಳು[ಬದಲಾಯಿಸಿ]

The leech and its nervous system
The number and position of eyes are essential for distinguishing the leech species.
Mouthparts and sucker
Leech cross-section

ಅನೆಲಿಡ ವಿಭಾಗದ ಇತರ ಜೀವಿಗಳಲ್ಲಿರುವಂತೆಯೆ ಜಿಗಣೆಯ ಮಾಂಸಲ ದೇಹವೂ ಅನೇಕ ಖಂಡಗಳಾಗಿ ವಿಭಾಗವಾಗಿದೆ. ಗ್ರ್ಯಾನುಲೋಸ ಪ್ರಭೇದ ವಿಸ್ತøತಾವಸ್ಥೆಯಲ್ಲಿ 12" ಉದ್ದ ಇದೆ. ದೇಹ ಚಪ್ಪಟೆಯಾಗಿ ಕಂಡರೂ, ಬೆನ್ನುಭಾಗ ಕಮಾನಿನಂತೆ ಉಬ್ಬಿದೆ. ಮೇಲ್ಭಾಗ ಗಾಢಹಸಿರು ಮತ್ತು ತಳಭಾಗ ಹಳದಿ ಮಿಶ್ರಿತ ಕಿತ್ತಲೆ ಬಣ್ಣದ್ದು ಬೆನ್ನುಭಾಗದ ಮೇಲೆ ಹಳದಿ ಮಿಶ್ರಿತ ಕಿತ್ತಲೆ ಬಣ್ಣದ ಮತ್ತು ಕಪ್ಪು ಬಣ್ಣದ ಪಟ್ಟೆಗಳು ಹಾಗೂ ಕಪ್ಪು ಚಿಕ್ಕೆಗಳು ಇವೆ. ದೇಹದ ಎರಡು ತುದಿಗಳಲ್ಲೂ ಹೀರು ಬಟ್ಟಲುಗಳಿವೆ. ಮುಂತುದಿಯಲ್ಲಿನ ಹೀರು ಬಟ್ಟಲಿನ ತಗ್ಗಿನ ನಡುವೆ ಬಾಯಿರಂಧ್ರವಿದೆ. ಹಿಂತುದೆಯ ಹೀರುಬಟ್ಟಲು ತಟ್ಟೆಯಾಕಾರದಲ್ಲಿದೆ. ಇದು ಮುಂತುದಿಯ ಹೀರುಬಟ್ಟಲಿಗಿಂತಲೂ ಹೆಚ್ಚು ಅಗಲ. ದೇಹದಲ್ಲಿ ಒಟ್ಟು 33 ಖಂಡಗಳುಂಟು. ಒಂದೊಂದು ಖಂಡವೂ ಆನ್ಯುಲೈ ಎಂಬ ಉಪಖಂಡಗಳಾಗಿ ವಿಭಾಗವಾಗಿದೆ. ಆನ್ಯುಲೈಗಳು ದೇಹದ ಹೊರಭಾಗದಲ್ಲಿ ಅಡ್ಡಜಾಡುಗಳಂತೆ ಕಂಡುಬಂದರೂ ದೇಹದ ಒಳ ಭಾಗದಲ್ಲಿ ಗೋಚರವಾಗುವುದಿಲ್ಲ. ಒಂದೊಂದು ಖಂಡದಲ್ಲೂ ಸಾಮಾನ್ಯವಾಗಿ 5 ಆನ್ಯುಲೈಗಳಿವೆ. ಆದರೆ ಮೊದಲಿನ 5 ಮತ್ತು ಕಡೆಯ 9 ಖಂಡಗಳಲ್ಲಿ ಭಿನ್ನ ಸಂಖ್ಯೆಯ ಆನ್ಯುಲೈಗಳುಂಟು. ಮೊದಲ 5 ಖಂಡಗಳಲ್ಲಿ ಪ್ರತಿಖಂಡದ ಮೊದಲನೆಯ ಆನ್ಯುಲಸಿನ ಊಧ್ರ್ವಭಾಗದಲ್ಲಿ ಒಂದೊಂದು ಜೊತೆ ಅರೆಚಂದ್ರಾಕಾರದ ಹಾಗೂ ಪೂರ್ಣ ರೂಪಗೊಂಡ ಕಣ್ಣುಗಲಿವೆ. ಎಲ್ಲ ಆನ್ಯುಲಸುಗಳ ಊಧ್ರ್ವ ಮತ್ತು ಅಧೋಭಾಗಗಳೆರಡರಲ್ಲಿಯೂ ಆನ್ಯುಲರ್ ಗ್ರಾಹಕಾಂಗಗಳಿವೆ. 6 ರಿಂದ 22 ನೆಯ ಖಂಡದ ವರೆಗೆ ಪ್ರತಿಯೊಂದು ಖಂಡದ ಕೊನೆಯ ಆನ್ಯುಲಸಿನ (ಅಂದರೆ 5ನೆಯ ಆನ್ಯುಲಸಿನ) ಅಧೋಭಾಗದಲ್ಲಿ ಒಂದೊಂದು ಜೊತೆ ನೆಫ್ರೀಡಿಯ ತೆರಪುಗಳಿವೆ. ಇದರ ಮೂಲಕ ಪ್ರಾಣಿಯ ಶುದ್ಧೀಕರಣಾಂಗಗಳಾದ ನೆಫ್ರೀಡಿಯಗಳು ಹೊರತೆರೆಯುತ್ತವೆ. ಖಂಡಗ್ರಾಹಕಾಂಗ ಮತ್ತು ಆನ್ಯುಲರ್ ಗ್ರಾಹಕಾಂಗಗಳ ಜಿಗಣೆಯ ಸಂವೇದನಾಂಗಗಳು. ಮೊದಲನೆಯ ಖಂಡದ ಮುಂಭಾಗದಲ್ಲಿ ಪ್ರೋಸ್ಟೋಮಿಯಮ್ ಎಂಬ ಒಂದು ರಚನೆ ಇದೆ. ದೇಹದ ಮುಂತುದಿಯಲ್ಲಿನ ಹೀರುಬಟ್ಟಲು ಮೊದಲನೆಯ 3 ಖಂಡಗಳ ವರೆಗೆ ವ್ಯಾಪಿಸುತ್ತದೆ. ಜಿಗಣೆ ಉಭಯ ಲಿಂಗಿ. ಆದರೆ ಗಂಡು ಮತ್ತು ಹೆಣ್ಣು ಜನನೇಂದ್ರಿಯ ತೆರಪುಗಳು 10 ಮತ್ತು 11ನೆಯ ಖಂಡಗಳಲ್ಲಿ 5 ಆನ್ಯುಲಸುಗಳ ಅಂತರದಲ್ಲಿ ಆಯಾ ಖಂಡಗಳ 2 ಮತ್ತು 3ನೆಯ ಆನ್ಯುಲಸಿನ ನಡುವಿನ ಜಾಡಿನಲ್ಲಿ ಹೊರಕ್ಕೆ ತೆಗೆಯುತ್ತವೆ. ಜಿಗಣೆ ಬಾಹ್ಯ ಪರಾವಲಂಬಿಯಾಗಿರುವುದರಿಂದ ಕೆಲವೊಂದು ಹೊಂದಾಣಿಕೆಗಳನ್ನು ಪ್ರದರ್ಶಿಸುತ್ತದೆ. ರಕ್ತವನ್ನು ಹೀರುವಾಗ ಆತಿಥೇಯ ಪ್ರಾಣಿಯ ದೇಹಕ್ಕೆ ಬಿಗಿಯಾಗಿ ಅಂಟಿಕೊಳ್ಳಲು ಹೀರುಬಟ್ಟಲುಗಳು ಸಹಾಯಕ. ಬಾಯ ರಂಧ್ರದ ಬಳಿ ಮಾಂಸಲವಾದ ಮೂರು ದವಡೆಗಳಿವೆ. ಇವುಗಳ ಸಹಾಯದಿಂದ ಆತಿಥೇಯ ಜೀವಿಯ ದೇಹದಲ್ಲಿ ಗಾಯಮಾಡಿ ರಕ್ತವನ್ನು ಹೀರುತ್ತದೆ. ಇದಕ್ಕೆ ಆತಿಥೇಯ ಸಿಕ್ಕುವುದು ಅಪರೂಪವಾದ್ದರಿಂದ ಸಿಕ್ಕಿದಾಗ ಆದಷ್ಟು ಹೆಚ್ಚು ರಕ್ತವನ್ನು ಹೀರಿಕೊಂಡು ಕೂಡಿಟ್ಟುಕೊಳ್ಳುತ್ತದೆ. ಹೀಗೆ ಹೆಚ್ಚು ಆಹಾರವನ್ನು ಕೂಡಿಟ್ಟುಕೊಳ್ಳುವ ಸಲುವಾಗಿ ಅನ್ನನಾಳದಲ್ಲಿ ಎಲೆಸಂಚಿ ಎಂಬ ರಚನಗಳು ಇವೆ. ಇದರಿಂದಾಗಿ ಒಮ್ಮೆ ರಕ್ತವನ್ನು ಹೀರಿತೆಂದರೆ 6 ತಿಂಗಳ ವರೆಗೆ ಪುನಃ ಆಹಾರವನ್ನು ಸೇವಿಸದೆ ಬದುಕಿರಬಲ್ಲುದು. ಹೆಚ್ಚು ರಕ್ತವನ್ನು ಹೀರಿದಾಗ ದೇಹವು ಹಿಗ್ಗಬೇಕಾದುದರಿಂದ ದೇಹಭಿತ್ತಿಯಲ್ಲಿ ಅಡ್ಡ ಮತ್ತು ಲಂಬ ಸ್ನಾಯುಗಳ ಜೊತೆಗೆ ಉದಗ್ರ ಮತ್ತು ಓರೆ ಸ್ನಾಯುಗಳೂ ಇವೆ. ರಕ್ತ ತುಂಬಿದ ಅನ್ನನಾಳ ಭಾಗವನ್ನು ರಕ್ಷಿಸುವುದಕ್ಕಾಗಿ ಇದರ ಸುತ್ತಲೂ ಬಾಟ್ರಾಯಿಡಲ್ ಎಂಬ ವಿಶಿಷ್ಟ ಅಂಗಾಂಶವಿದೆ. ಆತಿಥೇಯ ಪ್ರಾಣಿಯಿಂದ ರಕ್ತವನ್ನು ಹೀರುವಾಗ ಹೆಪ್ಪುಗಟ್ಟುವುದನ್ನು ತಡೆಯಲು ಜಿಗಣೆಯ ಜೊಲ್ಲು ಗ್ರಂಥಿಗಳು ಹಿರುಡಿನ್ ಎಂಬ ಪದಾರ್ಥವನ್ನು ಸ್ರವಿಸುತ್ತವೆ. ರಕ್ತವನ್ನು ಹೀರಲು ನೆರವಾಗುವಂತೆ ಫ್ಯಾರಿಂಕ್ಸ್ ಭಾಗ ಮಾಂಸಲವಾಗಿದೆ. ಜಿಗಣೆಯ ವಾಸಸ್ಥಳ ಕೂಡ ಆಹಾರಾರ್ಜನೆಗೆ ಅನುಕೂಲವಾಗಿದೆ. ಸಿಹಿನೀರಿನ ಹಳ್ಳಕೊಳ್ಳಗಳಲ್ಲಿ ಇದು ವಾಸಿಸುವುದರಿಂದ ನೀರು ಕುಡಿಯಲು ಬಂದ ಕಶೇರುಕಗಳು ಸುಲಭವಾಗಿ ಇದಕ್ಕೆ ಆಹಾರವನ್ನು ಒದಗಿಸುತ್ತವೆ.

ಜಿಗಣೆಯ ದೇಹದಲ್ಲಿ ಎರೆಹುಳುವಿನ ದೇಹದಂತೆ ಸ್ಪಷ್ಟವಾದ ಕ್ಲೈಟೆಲಮ್ ಭಾಗ ಇಲ್ಲ. ಆದರೆ ಪ್ರಜನನ ಕಾಲದಲ್ಲಿ 10, 11, 12ನೆಯ ಖಂಡಗಳು ತಾತ್ಕಾಲಿಕವಾಗಿ ಕ್ಲೈಟೆಲಮ್ ಭಾಗದಂತೆ ವರ್ತಿಸಿ ಪ್ರಜನನದಲ್ಲಿ ನೆರವಾಗುತ್ತವೆ.

ವೈದ್ಯಕೀಯದಲ್ಲಿ ಉಪಯೋಗ[ಬದಲಾಯಿಸಿ]

ಜಿಗಣೆಯ ಕೆಲವು ಪ್ರಭೇದಗಳು ಮನುಷ್ಯ ಮತ್ತು ಸಾಕುಪ್ರಾಣಿಗಳ ರಕ್ತವನ್ನು ಹೀರಿ ಮಾಡಿದರೂ ಕೆಲವು ಮನುಷ್ಯನಿಗೆ ಉಪಕಾರಿಗಳೂ ಆಗಿವೆ. ಹಿರುಡೊ ಮೆಡಿಸಿನ್ಯಾಲಿಸ್ ಎಂಬ ಪ್ರಭೇದದ ಜಿಗಣೆಗಳನ್ನು ಹುಣ್ಣು, ಕುರು ಇತ್ಯಾದಿಗಳಿಂದ ಕೆಟ್ಟ ರಕ್ತವನ್ನು ತೆಗೆಯಲು ವೈದ್ಯರು ಉಪಯೋಗಿಸುತ್ತಾರೆ. ಇವು ರಕ್ತವನ್ನು ಹೀರುವಾಗ ಮನುಷ್ಯನಿಗೆ ನೋವಾಗುವುದಿಲ್ಲವಾದುದರಿಂದ ಈ ವಿಧಾನವನ್ನು ಅನುಸರಿಸುತ್ತಾರೆ. ಅಲ್ಲದೆ ಜಿಗಣೆಗಳಿಂದ ಪ್ರತ್ಯೇಕಿಸಿದ ಕೆಲವು ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಬಳಸುತ್ತಾರೆ. ಪಿಡುಗುಗಳಾಗಿ ಮನುಷ್ಯನಿಗೆ ಹಾನಿಕಾರಕವಾದ ಕೀಟ ಡಿಂಬಗಳು, ಹುಳುಗಳು, ಮೃದ್ವಂಗಿಗಳು ಮುಂತಾದ ಪ್ರಾಣಿಗಳನ್ನು ಜಿಗಣೆಗಳು ಆಹಾರವಾಗಿ ಬಳಸುವುದರಿಂದ ಅವುಗಳನ್ನು ನಾಶಪಡಿಸಿ ಮನುಷ್ಯನಿಗೆ ಉಪಕಾರವೆಸಗುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Ralph Buchsbaum; Mildred Buchsbaum; John Pearse; Vicki Pearse (1987). Animals Without Backbone (3rd ed.). Chicago: The University of Chicago Press. pp. 312–317. ISBN 0-226-07874-4.
  2. Roy Sawyer (1981). Kenneth, Muller; Nicholls, John; Stent, Gunther (eds.). Neurobiology of the Leech. New York: Cold Spring Harbor Laboratory. pp. 7–26. ISBN 0-87969-146-8.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿಗಣೆ&oldid=1128167" ಇಂದ ಪಡೆಯಲ್ಪಟ್ಟಿದೆ