ಜಾಲೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಲೌನ್ - ಉತ್ತರಪ್ರದೇಶಝಾನ್ಸಿ ವಿಭಾಗದ ಒಂದು ಜಿಲ್ಲೆ ; ಒಂದು ಪಟ್ಟಣ.

ಜಿಲ್ಲೆ[ಬದಲಾಯಿಸಿ]

ಬುಂದೇಲಖಂಡದ ಮೈದಾನದಲ್ಲಿದೆ. ಯಮುನಾ ಮತ್ತು ಅದರ ಉಪನದಿಗಳಾದ ಬೇಟ್ವಾ ಮತ್ತು ಪಹುಜ್‍ಗಳಿಂದ ಬಹುತೇಕ ಸುತ್ತುವರಿಯಲ್ಪಟ್ಟಿದೆ. ಜಿಲ್ಲೆಯ ವಿಸ್ತೀರ್ಣ 1,762ಚ.ಮೈ. ಜನಸಂಖ್ಯೆ 8,12,909(1971). ಈ ಜಿಲ್ಲೆ ಕಪ್ಪನೆಯ ಹತ್ತಿ ಮಣ್ಣಿನ ಪ್ರದೇಶ. ಮರಗಳು ಇಲ್ಲವೇ ಇಲ್ಲವೆನ್ನಬಹುದಾದ ಇದರ ಮೈದಾನ ಬಹುತೇಕ ಸಾಗುವಳಿಗೆ ಒಳಪಟ್ಟಿದೆ. ಜಿಲ್ಲೆಯ ಮಧ್ಯಭಾಗದಲ್ಲಿ ನೋನ್ ನದಿ ಹರಿಯುತ್ತದೆ. ಜಿಲ್ಲೆಯ ಪಶ್ಚಿಮದಲ್ಲಿ ಸ್ವಲ್ಪಭಾಗಕ್ಕೆ ಬೇಟ್ವಾ ನಾಲೆಯಿಂದ ನೀರಾವರಿ ಸೌಲಭ್ಯವುಂಟು. ಇಲ್ಲಿಯದು ಶುಷ್ಕ ವಾಯುಗುಣವಲ್ಲವಾದರೂ ಆರೋಗ್ಯಕರ. ಸರಾಸರಿ ವಾರ್ಷಿಕ ಮಳೆ 32”. ಕೃಷಿ ಇಲ್ಲಿಯ ಮುಖ್ಯ ಕಸುಬು. ಜೋಳ, ಎಣ್ಣೆ ಬೀಜಗಳು, ಹತ್ತಿ ಮುಖ್ಯಬೆಳೆಗಳು.

ಪಟ್ಟಣ[ಬದಲಾಯಿಸಿ]

ಜಾಲೌನ್ ಪಟ್ಟಣದ ಜನಸಂಖ್ಯೆ 19,574 (1971). ಜಿಲ್ಲೆಯ ಆಡಳಿತ ಕೇಂದ್ರವಾದ ಓರಾಯ್ ಇಲ್ಲಿಂದ 13 ಮೈ. ದೂರದಲ್ಲಿದೆ. ಇವುಗಳ ನಡುವೆ ರಸ್ತೆಯುಂಟು. ಜಾಲೌನ್ 18ನೆಯ ಶತಮಾನದಲ್ಲಿ ಮರಾಠಾ ಪ್ರಾಂತ್ಯಾಧಿಕಾರಿಯ ಆಡಳಿತಕೇಂದ್ರವಾಗಿತ್ತು. ಚಂದೇಲರ ಕಾಲದ ಸರೋವರಗಳನ್ನೂ ಮರಾಠರ ಕಾಲದ ಕಟ್ಟಡಗಳ ಭಗ್ನಾವಶೇಷಗಳನ್ನೂ ಕಾಣಬಹುದು.

ಓರಾಯ್‍ನ ಜನಸಂಖ್ಯೆ 42,513. ಕೋಂಚ್(28,403) ಮತ್ತು ಕಾಲ್ಟಿ (21,334) ಈ ಜಿಲ್ಲೆಯ ಇನ್ನೆರಡು ಪಟ್ಟಣಗಳು. ಕಾಲ್ಟಿ ಯಮುನಾ ನದಿಯ ದಡದ ಮೇಲಿದೆ. ಇದು 1857 ರ ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ತಾತ್ಯಾಟೋಪಿ, ನಾನಾಸಾಹೆಬರ ಪ್ರಮುಖ ನೆಲೆಯಾಗಿತ್ತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಲೌನ್&oldid=1065737" ಇಂದ ಪಡೆಯಲ್ಪಟ್ಟಿದೆ