ಜಾರ್ಜ್‍ಟೌನ್ (ಗಯಾನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜ್‍ಟೌನ್ -ಗಯಾನ ಗಣರಾಜ್ಯದ ರಾಜಧಾನಿ ; ಪ್ರಮುಖ ಬಂದರು. ಜನಸಂಖ್ಯೆ ಸು.1,95,000 (1970ರ ಅಂದಾಜು). ಡೆಮರ್ಯಾರ ನದಿಯ ಮುಖದ ಬಳಿ, ಅದರ ಬಲದಂಡೆಯ ಮೇಲೆ ಇದೆ. ಡಚ್ಚರ ಸ್ವಾಧೀನದಲ್ಲಿದ್ದಾಗ ಇದಕ್ಕೆ ಮೊದಲಿದ್ದ ಹೆಸರು ಸ್ಟ್ಯಾಬ್ರೋಕ್. 1784ರಲ್ಲಿ ಇದನ್ನು ಎಸಕೀಬೋ ಮತ್ತು ಡೆಮರ್ಯಾರ ವಸಾಹತು ಪ್ರದೇಶಗಳ ಸಂಯುಕ್ತ ರಾಜಧಾನಿಯಾಗಿ ಮಾಡಿ 1812ರಲ್ಲಿ ಇದರ ಹೆಸರನ್ನು ಜಾರ್ಜ್‍ಟೌನ್ ಎಂದು ಬದಲಾಯಿಸಲಾಯಿತು.

ಜಾರ್ಜ್‍ಟೌನ್ ಜಗತ್ತಿನ ಅತ್ಯಂತ ಸುಂದರ ನಗರಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ. ನಗರದ ರಸ್ತೆಗಳು ಅಗಲವಾಗಿಯೂ ಅನೇಕ ಕಡೆ ಜೋಡಿಯಾಗಿಯೂ ಇವೆ. ಮೇನ್ ಸ್ಟ್ರೀಟ್ ಎಂಬುದು ನಗರದ ಪ್ರಮುಖ ಮತ್ತು ಅತ್ಯಂತ ಸುಂದರ ರಸ್ತೆ. ನಗರದ ವಿವಿಧ ಭಾಗಗಳಲ್ಲಿ ಹಂಚಿಹೋಗಿರುವ ಪ್ರಮುಖ ಕಟ್ಟಡಗಳ ಸುತ್ತಲೂ ಸುಂದರ ಉದ್ಯಾನಗಳಿವೆ. ನಗರದ ಮಧ್ಯದಲ್ಲಿರುವ ಶಾಸನ ಭವನ, ಪುರಸಭಾ ಭವನ, ನ್ಯಾಯಾಲಯ ಕಟ್ಟಡಗಳು ಹಳೆಯವು. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಕಟ್ಟಿದವು. ಇಲ್ಲಿ ಎರಡು ಆಸ್ಪತ್ರೆಗಳು, ಸಾರ್ವಜನಿಕ ಗ್ರಂಥಾಲಯ ಇವೆ. ಹುಡುಗರಿಗಾಗಿ ಕ್ವೀನ್ಸ್ ಕಾಲೇಜು, ಹುಡುಗಿಯರಿಗಾಗಿ ಬಿಷಪ್ಸ್ ಹೈಸ್ಕೂಲು ಮತ್ತು ಒಂದು ತಾಂತ್ರಿಕ ಶಿಕ್ಷಣ ಸಂಸ್ಥೇ ಇವೆ. ಗಣರಾಜ್ಯದ ಏಕೈಕ ವಿಶ್ವವಿದ್ಯಾಲಯವಾದ ಗೈಯಾನ ವಿಶ್ವವಿದ್ಯಾಲಯ ಇರುವುದು ಇಲ್ಲಿಯೆ. ನಗರದ ಹೊರವಲಯದಲ್ಲಿರುವ ಸಸ್ಯೋದ್ಯಾನ ಪ್ರಸಿದ್ಧವಾದ್ದು. ಇಲ್ಲಿ ಬತ್ತ, ಕಬ್ಬು ಮತ್ತು ಹತ್ತಿಯ ಪ್ರಾಯೋಗಿಕ ಕ್ಷೇತ್ರಗಳಿವೆ. ಇಲ್ಲಿಯ ಸಮುದ್ರ ಕಟ್ಟೆ ಹಾಗೂ ನಗರ ಮಧ್ಯದಲ್ಲಿರುವ ಉದ್ಯಾನ ಪ್ರಮುಖ ವಿಹಾರಕೇಂದ್ರಗಳು. ಕ್ರಿಕೆಟ್, ಫುಟ್ಬಾಲ್, ಕುದುರೆಸವಾರಿ, ದೋಣಿಪಂದ್ಯ ಇಲ್ಲಿಯ ಮುಖ್ಯ ಕ್ರೀಡೆಗಳು. ಇಲ್ಲಿಯ ಬಂದರಿನ ಮೂಲಕ ಸಕ್ಕರೆ, ಬತ್ತ, ಹಣ್ಣು, ಚಿನ್ನ, ವಜ್ರ, ಬಾಕ್ಸೈಟ್ ಹೆಚ್ಚಾಗಿ ರಫ್ತಾಗುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: