ಜಲ್ಲಿಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿಯ ಭುಜ ಹಿಡಿದು ನಿಯಂತ್ರಿಸುತ್ತಿರುವ ಯುವಕ

ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ. ಗೂಳಿಯನ್ನು ಹಗ್ಗ ಬಿಚ್ಚಿ ಬಿಟ್ಟ ತಕ್ಷಣ ನೆರೆದಿರುವ ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ. ಇದನ್ನು ಕಂಡ ಹೋರಿ ನಿಗದಿತ ಬಯಲಿನಲ್ಲಿ ಓಡಾಲಾರಂಭಿಸುತ್ತದೆ. ಅದರ ಮೇಲೆ ಎರಗುವ ಉತ್ಸಸಾಹಿ ತರುಣರು, ಯುವಕರು ಹೋರಿಯ ಭುಜ ಹಿಡಿದುಕೊಂಡು ಹೋರಿಯನ್ನು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಸಫಲರಾಗುತ್ತಾರೋ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅವರಿಗೆ ಇನ್ನಿಲ್ಲದ ಮನ್ನಣೆ, ಗೌರವ ಸಿಗುತ್ತದೆ.ಕ್ರೀಡೆಯಲ್ಲಿ ಯಶಸ್ವಿಯಾಗಿ ಹೋರಿಯನ್ನು ನಿಯಂತ್ರಿಸಿದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಹೋರಿಯ ಭುಜ ಹಿಡಿದ ತಕ್ಷಣ ಹೋರಿ ನಿಲ್ಲುವುದಿಲ್ಲ. ಭುಜವನ್ನು ಬಿಗಿಯಾಗಿ ಹಿಡಿದಾಗ್ಯೂ ಹೋರಿ ಮನುಷ್ಯರನ್ನೇ ಹೊತ್ತುಕೊಂಡು ತಾನು ದಿಕ್ಕಾಪಾಲಾಗಿ ಓಡುತ್ತಿರುತ್ತದೆ. ಬಿಗಿಯಾದ ಹಿಡಿತದಿಂದ ಹೋರಿಯನ್ನು ನಿಯಂತ್ರಣಕ್ಕೆ ತರುವುದು ಸುಲಭ ಸಾಧ್ಯವಲ್ಲ.

ಎಲ್ಲಾ ಕಡೆಯೂ ಜಲ್ಲಿ ಕಟ್ಟು ಕ್ರೀಡೆ ಹೀಗೇ ನಡೆಯುವುದಿಲ್ಲ. ಹೋರಿಯನ್ನು ನಿಯಂತ್ರಿಸುವ ಬಗೆ ಕೆಲವು ಕಡೆ ಆಚರಣೆಯಲ್ಲಿದ್ದರೆ ಮತ್ತೆ ಕೆಲವು ಕಡೆ ಗೂಳಿಯ ಎರಡು ಕೊಂಬುಗಳಿಗೆ ಬಾವುಟಗಳನ್ನ ಕಟ್ಟಲಾಗುತ್ತದೆ. ಗೂಳಿಯನ್ನು ನಿಯಂತ್ರಿಸಲಾಗದಿದ್ದರೂ ಆ ಬಾವುಟಗಳನ್ನು ಕೊಂಬುಗಳಿಂದ ಕಳಚಿಕೊಂಡರೆ ಆಟ ಮುಗಿದಂತೆ. ಇನ್ನೂ ಕೆಲವು ಕಡೆ ಗೂಳಿಯ ಕೊರಳಿಗೆ ಬಟ್ಟೆಯೊಂದನ್ನು ಕಟ್ಟಲಾಗುತ್ತದೆ, ಉಪಾಯದಿಂದ ಅದನ್ನು ಬಿಡಿಸಿಕೊಳ್ಳುವಲ್ಲಿ ಯುವಕರ ಚಾಣಾಕ್ಷತನ, ಧೈರ್ಯ ಪ್ರದರ್ಶನವಾಗುತ್ತದೆ.

ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಾಗಿಯೇ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ವರ್ಷವಿಡೀ ಗೂಳಿಯನ್ನು ಉತ್ತಮವಾಗಿ ಆರೈಕೆ ಮಾಡಿ ದಷ್ಟ ಪುಷ್ಟ ದೇಹ ಹೊಂದುವಂತೆ ಸಲಹಲಾಗುತ್ತದೆ.ಬಹುತೇಕ ಗ್ರಾಮಗಳಲ್ಲಿ ದೇವಸ್ಥಾನದ ಗೂಳಿ ಎಂದೇ ಸಾಕಲಾಗಿರುತ್ತದೆ. ವಿಶೇಷ ವಿಧಿ ವಿಧಾನಗಳೊಂದಿಗೆ ಆ ಗೂಳಿಗಳನ್ನು ದೇವಸ್ಥಾನದ ವತಿಯಿಂದಲೇ ಸಾಕಲಾಗಿರುತ್ತದೆ. ಅದು ದೇವರಿಗೆ ಮುಡಿಪಾಗಿರುವ ಪ್ರಾಣಿಯೆಂದು ಗ್ರಾಮದ ಜನರು ಅದಕ್ಕೆ ವಿಶೇಷ ಗೌರವವನ್ನು ಕೊಡುತ್ತಾರೆ. ಹಬ್ಬ ಹರಿದಿನಗಳ ಸಂಧರ್ಭಗಳಲ್ಲಿ ಆ ಗೂಳಿಗಳಿಗೆ ಪೂಜೆಯನ್ನು ಏರ್ಪಾಟು ಮಾಡುತ್ತಾರೆ. ದೇವಸ್ಥಾನದ ಹಸುವು ಊರಿನ ಎಲ್ಲಾ ಸಾಕುಪ್ರಾಣಿಗಳಿಗೆ ಮುಖ್ಯಸ್ಥನಂತೆ ಗ್ರಾಮದ ಜನರು ಭಾವಿಸುತ್ತಾರೆ, ಇಂತಹ ಪೂಜನೀಯ ಗೂಳಿಗಳು ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಕಳೆ ತರುತ್ತದೆ. ಕಂಗಾಯಂ ತಳಿಯ ಗೂಳಿಗಳು ಇದರಲ್ಲಿ ಬಳಕೆಯಾಗುತ್ತವೆ.

ಜಲ್ಲಿಕಟ್ಟು ಕ್ರೀಡೆಗೆ ಕೊಂಬುಗಳಿಗೆ ಬಾವುಟಗಳನ್ನು ಕಟ್ಟಿ ತಯಾರು ಮಾಡಿರುವ ಗೂಳಿ

ಹಿನ್ನೆಲೆ[ಬದಲಾಯಿಸಿ]

ಪುರಾತನ ತಮಿಳು ಸಂಗಮ ಕುಲದಲ್ಲಿ ಜಲ್ಲಿಕಟ್ಟನ್ನು ಎರುತಳುವಲ್ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿಟ್ಟಿದ್ದರು. ಎರು ತಳುವಲ್ ಎಂಬ ಹೆಸರಿನ ಅರ್ಥ ಗೂಳಿಯನ್ನು ನಿಯಂತ್ರಿಸುವುದು ಎಂದೇ ಆಗಿದೆ. ಇದೆ ಕ್ರೀಡೆಯನ್ನು ಜಲ್ಲಿಕಟ್ಟು ಎಂದು ಕರೆಯಲು ಮುಖ್ಯ ಕಾರಣ ಈ ಕ್ರೀಡೆಗಾಗಿ ಹಣ ಕಟ್ಟಿ ಆಡುತ್ತಿದ್ದುದು. ಜಲ್ಲಿಕಟ್ಟು ಎಂಬ ಪದ ಜನ್ಮ ತಳೆದಿರುವುದು 'ಸಲ್ಲಿಕಟ್ಟು' ಎಂಬ ಪದದಿಂದ 'ಸಲ್ಲಿ' ಎಂದರೆ ನಾಣ್ಯಗಳು ಹಾಗು ಕಟ್ಟು ಎಂದರೆ ಕನ್ನಡ ಭಾಷೆಯ ಕಟ್ಟು ಪದದ ಅರ್ಥವೇ ಬರುತ್ತದೆ. ಈ ಕ್ರೀಡೆಗಾಗಿ ನಾಣ್ಯಗಳನ್ನು ಪಣವಾಗಿ ಕಟ್ಟುತ್ತಿದ್ದ ಕಾರಣ ಜಲ್ಲಿ ಕಟ್ಟು ಎಂಬ ಹೆಸರು ಬಂದಿದೆ. ಪಣವಾಗಿ ಇಡುತ್ತಿದ್ದ ನಾಣ್ಯಗಳನ್ನು ಗೂಳಿಯ ಕೊಂಬಿಗೆ ಕಟ್ಟಿ ಬಿಡಲಾಗುತ್ತಿತ್ತು. ಆ ನಾಣ್ಯಗಳನ್ನು ಯಾರು ಕೊಂಬಿನಿಂದ ಬಿಡಿಸಿ ಕೊಳ್ಳುತ್ತಾರೋ ಹಣ ಅವರದೇ.

ಇತಿಹಾಸ[ಬದಲಾಯಿಸಿ]

ಜಲ್ಲಿ ಕಟ್ಟು ಕ್ರೀಡೆಯ ಇತಿಹಾಸ ಕ್ರಿಸ್ತ ಪೂರ್ವದ್ದು. ಕ್ರಿ.ಪೂ ೪೦೦ ರಿಂದ ಕ್ರಿ.ಪೂ ೧೦೦ ತಮಿಳು ಶಾಸ್ತ್ರೀಯ ಯುಗದಲ್ಲೇ ಈ ಕ್ರೀಡೆ ಜನಿಸಿದೆ ಎಂದು ಅಂದಾಜಿಸಲಾಗಿದೆ. ತಮಿಳಿನ ಆಯರ್ ಹಾಗು ಯಾದವ ಕುಲಗಳಲ್ಲಿ ಈ ಕ್ರೀಡೆ ಸಾಮಾನ್ಯವಾಗಿತ್ತು. ಮೊದಲು ಪುರಾತನ ತಮಿಳು ಪ್ರಾಂತದ 'ಮುಲ್ಲೈ' ಪ್ರದೇಶದಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿದ್ದು, ಆಟಗಾರರ ಚಾಣಾಕ್ಷತನ, ಧೈರ್ಯವಂತಿಕೆ, ಚತುರತನಗಳನ್ನೂ ಒರೆಗೆ ಹಚ್ಚುವ ಕ್ರೀಡೆಯಾಗಿದ್ದು ಬಹುಮಾನ ರೂಪದಲ್ಲಿ ಹಣವನ್ನು ಹಾಗು ಗೌರವವನ್ನು ಗಳಿಸುವ ಕಾರಣದಿಂದ ಕ್ರಮೇಣ ತಮಿಳುನಾಡಿನಾದ್ಯಂತ ಜನಪ್ರಿಯವಾಗಿದೆ. ಸಿಂಧು ನದಿ ವ್ಯಾಪ್ತಿಯ ಪುರಾತನ ನಾಗರೀಕತೆಯಲ್ಲೂ ಗೂಳಿ ಕಾಳಗದ ಕುರುಹುಗಳಿದ್ದು ಅವುಗಳನ್ನು ದೆಹಲಿಯ ರಾಷ್ಟ್ರೀಯ ವಸ್ತು ಪ್ರದರ್ಶನಾಲಯದಲ್ಲಿ ಇರಿಸಲಾಗಿದೆ.

ಜಲ್ಲಿಕಟ್ಟು ಕ್ರೀಡೆಯ ಬಗ್ಗೆ ದೊರೆತ ತಮಿಳು ಶಾಸನ

ಮದುರೈ ಬಳಿಯ ಗುಹೆಯೊಂದರಲ್ಲಿ ಗೂಳಿ ಕಾಳಗದ ವರ್ಣ ಚಿತ್ರವೂ ದೊರಕಿದ್ದು ಅದು ಸುಮಾರು ಎರಡೂವರೆ ಸಾವಿರ ವರ್ಷದ ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಜಲ್ಲಿಕಟ್ಟು ಕ್ರೀಡೆಯ ಕೆತ್ತನೆಯಿರುವ ಶಾಸನವೊಂದು ತಮಿಳುನಾಡಿನ ಸರ್ಕಾರಿ ವಸ್ತುಪ್ರದರ್ಶನಾಲಯದಲ್ಲಿದೆ.

ಜಲ್ಲಿಕಟ್ಟು ನಿಷೇಧ[ಬದಲಾಯಿಸಿ]

ವಿವಿಧ ಪ್ರಾಣಿ ದಯಾ ಸಂಘಟನೆ ಹಾಗು ಪೇಟಾ(PETA) ೨೦೦೪ ರಿಂದಲೇ ಜಲ್ಲಿಕಟ್ಟು ಕ್ರೀಡೆಯನ್ನು ವಿರೋಧಿಸುತ್ತಾ ಬಂದಿವೆ. ಗೂಳಿಗೆ ಅಥವಾ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮನುಷ್ಯರಿಗೆ ಕ್ರೀಡೆಯಲ್ಲಿ ಅಪಘಾತ ಸಂಭವಿಸಿದ ಉದಾಹರಣೆಗಳಿವೆ.

ಮೇ ೨೦೧೪ ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಪ್ರಾಣಿಗಳಿಗೆ ಹಿಂಸೆಯಾಗುವ ಕಾರಣ ನೀಡಿ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧ ಮಾಡಿತು. ಜನವರಿ ೮ ೨೦೧೬ರಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿ ಹಬ್ಬದ ಎಲ್ಲಾ ಆಚರಣೆಗಳು ಯಥವಾತ್ತಾಗಿ ನಡೆಯಲು ಯಾವುದೇ ಅಡ್ಡಿಯಿಲ್ಲ, ಆದರೆ ಗೂಳಿಗಳನ್ನು ಮಾತ್ರ ಬಳಸಕೊಡದು ಎಂದು ತಿಳಿಯಪಡಿಸಿತು. ಮುಂದೆ ಜನವರಿ ೧೪ , ೨೦೧೬ ರಂದು ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ತನ್ನ ತೀರ್ಪನ್ನು ಎತ್ತಿ ಹಿಡಿದು ಜಲ್ಲಿಕಟ್ಟು ಕ್ರೀಡೆಯನ್ನು ನಿಷೇದಿಸಿರುವುದನ್ನು ಮುಂದುವರೆಸಿತು. ಹೀಗಾಗಿ ೨೦೧೭ ರ ಸಂಕ್ರಾಂತಿ ಸಂಧರ್ಭದಲ್ಲಿ ತಮಿಳುನಾಡಿನಾದ್ಯಂತ ಜಲ್ಲಿ ಕಟ್ಟು ನಡೆಸದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಾಡಾಗಿತ್ತು. ಈ ಕಾರಣದಿಂದ ಜಲ್ಲಿಕಟ್ಟು ನಿಷೇಧವನ್ನು ವಿರೋಧಿಸಿ ತಮಿಳು ನಾಡಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.

ಉಲ್ಲೇಖಗಳು[ಬದಲಾಯಿಸಿ]

ಹೊರಸಂಪರ್ಕಗಳು[ಬದಲಾಯಿಸಿ]