ಚಿದಾನಂದ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿದಾನಂದ ಮೂರ್ತಿ
ಜನನ (1931-05-10) ೧೦ ಮೇ ೧೯೩೧ (ವಯಸ್ಸು ೯೨)
ಹಿರೆಕೊಗಳುರ್, ಚನ್ನಗಿರಿ ತಾಲೂಕ, ದಾವಣಗೆರೆ, ಕರ್ನಾಟಕ
ಮರಣ11 ಜನವರಿ 2020
ಬೆಂಗಳೂರು
ಕಾವ್ಯನಾಮಚಿಮು
ವೃತ್ತಿಪ್ರಾಧ್ಯಾಪಕ, ಲೇಖಕ, ಇತಿಹಾಸಕಾರ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿNon Fiction

ಚಿದಾನಂದ ಮೂರ್ತಿಯವರು (೧೦ ಮೇ ೧೯೩೧ - ೧೧ ಜನವರಿ ೨೦೨೦[೧]), ಕನ್ನಡದ ಹಿರಿಯ ಲೇಖಕ, ವಿದ್ವಾಂಸ, ಸಂಶೋದಧಕ ಹಾಗು ಇತಿಹಾಸಜ್ಞ. ಕನ್ನಡ ಭಾಷೆ ಹಾಗೂ ಕರ್ನಾಟಕದ ಇತಿಹಾಸದ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಇವರು ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ಮಾಡಿದ್ದ ಹೋರಾಟಕ್ಕೆ ಪ್ರಸಿದ್ದ.

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

  • ಚಿದಾನಂದಮೂರ್ತಿಗಳು ೧೯೩೧ನೇ ಮೇ ೧೦ನೆಯ ತಾರೀಖಿನಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಹುಟ್ಟಿದರು.
  • ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ನಡೆದುವು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು ಹತ್ತನೆಯ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಇಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು.
  • ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಸಹಾ ಪಡೆದರು (೧೯೫೩).
  • ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತೆ ರಜೆ ಹಾಕಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ೧೯೫೭ರಲ್ಲಿ ಗಳಿಸಿದರು.
  • ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕುವೆಂಪು ಪುತೀನ ಹಾಗು ರಾಘವಾಚಾರಂತ ಕನ್ನಡದ ಮಹಾ ಸಾಹಿತಿಗಳ ಪ್ರಭಾವಕ್ಕೊಳಗಾದವರು. ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ೧೯೬೪ರಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.

ವೃತ್ತಿಜೀವನ[೨][ಬದಲಾಯಿಸಿ]

  • ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು ೧೯೫೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು.
  • ೧೯೬೦ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು.
  • ೧೯೬೮ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು ಬಳಿಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಚಿದಾನಂದ ಮೂರ್ತಿ ಅವರು ಬೆಂಗಳೂರು ವಿಶ್ವವಿದ್ಯಾಲದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.
  • ೧೯೯೦ರ ಅಕ್ಟೋಬರ್ ೧೦ರಂದು ಸ್ವಯಂಸೇವಾ ನಿವೃತ್ತಿ ಪಡೆದರು.

ಅಮೆರಿಕೆ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದಾರೆ. ಸಂಶೋಧನೆಗೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತಿದ್ದಾರೆ. ಬರ್ಕ್ಲಿ, ಫಿಲಡೆಲ್ಫಿಯ, ಸ್ಟಾನ್ಫೋರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳು ಮತ್ತು ವಿಶ್ವಮಟ್ಟದ ಐತಿಹಾಸಿಕ ಬಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರು ಕನ್ನಡ ಶಕ್ತಿ ಕೇಂದ್ರದೊಂದಿಗೆ ಸಹ ಕೆಲಸ ಮಾಡಿದ್ದಾರೆ. ಚಿ.ಮು ರವರು ಕನ್ನಡ ಭಾಷೆ ಹಾಗು ಕರ್ನಾಟಕದ ಇತಿಹಾಸದ ಕುರಿತು ಹಲವಾರು ಪುಸ್ತಕಗಳನು ಪ್ರಕಟಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಅವರ ಸಂಶೋದನದಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಸಂಶೋಧನಾ ಕ್ಷೇತ್ರದಲ್ಲಿ[ಬದಲಾಯಿಸಿ]

  • ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಸುಮಾರು ನಾಲ್ಕು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಂಶೋಧನೆಗಳ ಕುರಿತಾದ ಮಹತ್ವದ ಬರಹಗಳನ್ನು ಪ್ರಕಟಿಸಿದ್ದಾರೆ.
  • ಚಿದಾನಂದಮೂರ್ತಿಗಳು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕ ಇತಿಹಾಸ –ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.
  • 1960ರ ದಶಕಗಳಲ್ಲಿ ತಾವು ಪ್ರಕಟಿಸಿದ ಹಲವಾರು ಲೇಖನಗಳಲ್ಲೇ ಉಂಬರಿ, ಇರ್, ಡುಂಡುಚಿ, ಅಮ್ಮ, ಅಬ್ಬೆ, ಅಲ್ಲಮ, ಬಾಮಬ್ಬೆ, ಶಬ್ದಗಳನ್ನು ಕನ್ನಡ ಭಾಷೆ, ವ್ಯಾಕರಣ, ಅವಸ್ಥಾಂತರಗಳ ಹಿನ್ನೆಲೆಯಲ್ಲಿ ಮೂರ್ತಿಗಳು ಪರಿಶೀಲಿಸಿದ್ದಾರೆ. ಅನಂತರ ‘ಭಾಷಾ ವಿಜ್ಞಾನದ ಮೂಲತತ್ವಗಳು’ (1965), ‘ವಾಗಾರ್ಥ’(1981) ಎಂಬ ಎರಡು ಮುಖ್ಯವಾದ ಅವರ ಭಾಷಾಸಂಬಂಧವಾದ ಕೃತಿಗಳು ಪ್ರಕಟವಾದವು.
  • ಕನ್ನಡ ಸಂಶೋಧನ ಕ್ಷೇತ್ರದಲ್ಲಿ ತುಂಬಾ ದೂಡ್ಡ ಕೊಡುಗೆ ಕೊಟ್ಟ ಡಿ. ಎಲ್. ನರಸಿಂಹಾಚಾರ್, ತೀ.ನಂ.ಶ್ರೀ ಅವರಿಗೆ ಪ್ರಿಯವಾಗಿದ್ದ ಕ್ಷೇತ್ರಗಳು ಛಂದಸ್ಸು, ಗ್ರಂಥಸಂಪಾದನೆ. ಅವರ ನೇರ ಶಿಷ್ಯರಾಗಿದ್ದ ಚಿದಾನಂದಮೂರ್ತಿ ಈ ಕ್ಷೇತ್ರಗಳಲ್ಲಿ ಕೂಡಾ ಕೊಡುಗೆ ನೀಡಿದ್ದಾರೆ. ಕನ್ನಡದ ಮೊತ್ತ ಮೊದಲ ಷಟ್ಪದಿ ಕಾವ್ಯವನ್ನು ಸೊಲ್ಲಾಪುರದ ‘ವಿವಾಹ ಪುರಾಣ’ ಶಾಸನದಲ್ಲಿ ಗುರುತಿಸಿಕೊಟ್ಟಿದ್ದಾರೆ. ಕುವೆಂಪು, ಕಣವಿಯವರ ಕಾವ್ಯದ ಛಂದಸ್ಸನ್ನು ಅವರು ವಿಶ್ಲೇಷಿಸಿದ್ದಾರೆ. ಗ್ರಂಥ ಸಂಪಾದನೆಯ ಬಗೆಗೆ ಅವರು ಬರೆದಿರುವ ಅನೇಕ ಮೌಲಿಕ ಲೇಖನಗಳು ಕನ್ನಡ ಸಾಹಿತ್ಯದಲ್ಲಿ ಮಹತ್ವಪೂರ್ಣವೆನಿಸಿವೆ.
  • ತೀ. ನಂ. ಶ್ರೀಕಂಠಯ್ಯ ಅವರು ಚಿದಾನಂದಮೂರ್ತಿಗಳನ್ನು “ಕನ್ನಡ ಭಾಷಾ ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ” ಎಂದು ಮೆಚ್ಚಿದ್ದಾರೆ. ಅದರ ಸಮರ್ಥನೆ ಎಂಬಂತೆ ಮೂರ್ತಿಗಳು ಕನ್ನಡ ಸಾಹಿತ್ಯ ಚರಿತ್ರೆಯ ಕ್ಷೇತ್ರದಲ್ಲಿ ವಿಫುಲವಾಗಿ ಕೆಲಸಮಾಡಿದ್ದಾರೆ. ಕವಿರಾಜಮಾರ್ಗ ಕಾಲದ ಕನ್ನಡ ಸಾಹಿತ್ಯದಿಂದ ಹಿಡಿದು ಮುದ್ದಣ್ಣನವರೆಗೆ ಅವರ ಬರವಣಿಗೆ ವ್ಯಾಪಿಸಿದೆ. ‘ಸಂಶೋಧನ ತರಂಗ’ದ ಎರಡು ಸಂಪುಟಗಳು, ‘ಲಿಂಗಾಯತ ಅಧ್ಯಯನಗಳು’, ‘ಹೊಸತು ಹೊಸತು’, ಶೂನ್ಯ ಸಂಪಾದನೆಯನ್ನು ಕುರಿತು’. ‘ವಚನ ಸಾಹಿತ್ಯ’, ‘ವಚನ ಶೋಧ-೧’, ವಚನ ಶೋಧ-೨’ ಈ ದೃಷ್ಟಿಯಿಂದ ಮುಖ್ಯವಾದವು.
  • ಚಿದಾನಂದಮೂರ್ತಿ ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ‘ಗ್ರಾಮೀಣ’ ಹಾಗೂ ‘ಪಗರಣ ಮತ್ತು ಇತರ ಸಂಪ್ರಯದಾಯಗಳು’ ಎಂಬ ಎರಡು ಪುಸ್ತಕಗಳಲ್ಲಿ ಅವರ ಈ ಸಂಬಂಧವಾದ ಸಂಪ್ರಬಂಧಗಳು ಸಂಗ್ರಹಗೊಂಡಿವೆ. ಜಾನಪದ ವಿಜ್ಞಾನದ ದೃಷ್ಟಿಯಿಂದ ಈ ಲೇಖನಗಳು ಮಹತ್ವಪೂರ್ಣವಾಗಿವೆ.
  • ಚಿದಾನಂದಮೂರ್ತಿಯವರು ದೂಡ್ಡ ಸಂಶೋಧಕರಾಗಿ ವಿದ್ವಾಂಸರಾಗಿ ಹೆಸರು ಗಳಿಸಿದ್ದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರಿಂದಲೇ. ‘ಸಂಶೋಧನ ತರಂಗ’ದ ಎರಡೂ ಸಂಪುಟಗಳಲ್ಲಿ ಇಂಥ ಲೇಖನಗಳಿವೆ. ಅವರ ಪಿ.ಎಚ್.ಡಿ ಪ್ರಬಂಧವಾದ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ದ ಬಗ್ಗೆ “ಇದೊಂದು ಸಂಸ್ಕೃತಿಯ ವಿಶ್ವಕೋಶ.

ಕನ್ನಡ ಚಳುವಳಿಯಲ್ಲಿ[ಬದಲಾಯಿಸಿ]

ಕಳೆದ ಹಲವು ದಶಕಗಳಲ್ಲಿ ಚಿದಾನಂದ ಮೂರ್ತಿ ಕನ್ನಡ-ಕರ್ನಾಟಕಗಳ ಉಳಿವಿಗೆ ಮಾಡಿದ ಹೋರಾಟ ಪ್ರತ್ಯೇಕ ಉಲ್ಲೇಖಕ್ಕೆ ಅರ್ಹವಾದದ್ದು. 1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರು ಹೋರಾಟ ಹೂಡಿದರು. ಅದೇ ವರ್ಷದ ಎಪ್ರಿಲ್ 13ರಂದು ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿದಾನಂದಮೂರ್ತಿಯವರು ಕನ್ನಡ ಚಳುವಳಿಯ ಹೊಸ ನಾಯಕರಾದರು. ಗೋಕಾಕ್ ಚಳುವಳಿಯಲ್ಲಿ ಮೂರ್ತಿಗಳು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನ ಕನ್ನಡ ಚಳವಳಿಗೆ ಹೊಸ ರೂಪ ವರ್ಚಸ್ಸು, ಗೌರವಗಳನ್ನು ತಂದಿತ್ತವು. ಕನ್ನಡ ಚಳವಳಿಯ ಬಗ್ಗೆ ಜನಸಾಮಾನ್ಯರಲ್ಲಿದ್ದ ಕೀಳು ಮನೋಭಾವ ತೊಲಗಲೂ ಮೂರ್ತಿಗಳೇ ಕಾರಣ. 1988ರಲ್ಲಿ ಚಿದಾನಂದಮೂರ್ತಿ ‘ಕನ್ನಡ ಶಕ್ತಿಕೇಂದ್ರವನ್ನು’ ಅಸ್ತಿತ್ವಕ್ಕೆ ತಂದರು. ಕನ್ನಡ ಶಕ್ತಿಕೇಂದ್ರ ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಜಿಲ್ಲಾ ಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ.

ಚಿದಾನಂದಮೂರ್ತಿಯವರ ದೊಡ್ಡ ಸಾಧನೆ ಕನ್ನಡಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ದುಡಿಯುವ ಕಾರ್ಯಕರ್ತರನ್ನು ರೂಪಿಸಿದ್ದು ಮತ್ತು ಅವರ ಬಳಗ ಕಟ್ಟಿದ್ದು. ಈ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸಮೂಡಲು, ಕನ್ನಡ-ಕರ್ನಾಟಕಗಳ ಬಗ್ಗೆ ಕುರಿತು ಅರಿವು ಹೆಚ್ಚಲು ಅವರು ‘ಮಾತುಗಾರಿಕೆ ಶಿಬಿರ’ಗಳನ್ನೂ ಏರ್ಪಡಿಸಿದರು. ಜನಸಾಮಾನ್ಯರಲ್ಲಿ ಕನ್ನಡತನ ಉಂಟಾಗಲು ‘ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ’ ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದರು. ಈ ಪುಸ್ತಕ ಹಲವು ಮುದ್ರಣಗಳನ್ನು ಕಂಡಿತು. ಇದಾದ ನಂತರ ಶಕ್ತಿಕೇಂದ್ರದ ವತಿಯಿಂದ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ತುಂಬಾ ಉಪಯುಕ್ತವಾದ ಅಂಕಿ-ಅಂಶಗಳನ್ನು, ಖಚಿತ ಮಾಹಿತಿಯನ್ನೂ ಒಳಗೊಂಡ ಪುಸ್ತಕವನ್ನು ಸಂಪಾದಕ ಮಂಡಳಿಯ ನೆರವಿನಿಂದ ಹೊರತಂದರು. ಇದು “ಕನ್ನಡಿಗರ ಅನಧಿಕೃತವಾದ ಸಂವಿಧಾನ” ಎಂಬ ಪ್ರಶಂಸೆಗೆ ಪಾತ್ರವಾಯಿತು.

ಕನ್ನಡ ವಿಶ್ವವಿದ್ಯಾಲಯ[ಬದಲಾಯಿಸಿ]

ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

ಕೃತಿಗಳು[೩][ಬದಲಾಯಿಸಿ]

  • ವೀರಶೈವ ಧರ್ಮ, ಭಾರತೀಯ ಸಂಸ್ಕ್ರತಿ ಪ್ರಕಾಶನ, ೨೦೦೦
  • ವಾಗರ್ಥ, ಬಪ್ಕೋ ಪ್ರಕಾಶನ, ೧೯೮೧
  • ವಚನ ಸಾಹಿತ್ಯ ೧೯೭೫
  • Sweetness and light Sahithigala Kalavidara Balaga, 1989 [microform]
  • ಸಂಶೋಧನೆ, ೧೯೬೭
  • ಸಂಶೋಧನಾ ತರಂಗ ಸರಸ, ಸಾಹಿತ್ಯ ಪ್ರಕಾಶನ, ೧೯೬೬
  • ಪೂರ್ಣ ಸೂರ್ಯಗ್ರಹಣ, ಐಬಿಎಚ್ ಪ್ರಕಾಶನ, ೧೯೮೨
  • ಪಾಂಡಿತ್ಯ ರಸ, ಕನ್ನಡ ವಿಶ್ವವಿದ್ಯಾಲಯ, ೨೦೦೦
  • ಶೂನ್ಯ ಸಂಪಾದನೆಯನ್ನು ಕುರಿತು. ೧೯೬೨
  • ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ, ೧೯೮೫
  • ಲಿಂಗಾಯತ ಅಧ್ಯಯನಗಳು,
  • ವಾಗ್ದೇವಿ, ೧೯೮೬
  • ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ. ೧೯೭೩
  • ಕರ್ನಾಟಕ ಸಂಸ್ಕ್ರತಿ, ಕನ್ನಡ ಸಾಹಿತ್ಯ ಪರಿಷತ್ತು, ೧೯೯೧

ಪ್ರಶಸ್ತಿಗಳು[ಬದಲಾಯಿಸಿ]

ನಿಧನ[ಬದಲಾಯಿಸಿ]

ಎಂ.ಚಿದಾನಂದಮೂರ್ತಿ ತಮ್ಮ 88ನೇ ವರ್ಷದಲ್ಲಿ 11 ಜನವರಿ 2020 ರಂದು ಶನಿವಾರ ನಸುಕಿನ 3.45ಕ್ಕೆ, ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದ ಸೋಂಕು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮಗ ವಿನಯ್ ಕುಮಾರ್, ಮಗಳು ಶೋಭಾರನ್ನು ಅಗಲಿದ್ದಾರೆ. ಅವರು ಬೆಂಗಳೂರಿನ ವಿಜಯನಗರ ಸಮೀಪ ಹಂಪಿನಗರದ ಮೂರನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ವಾಸವಾಗಿದ್ದರು.[೬]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಸಂಶೋಧಕರ ಸಂಶೋಧಕ, ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅಸ್ತಂಗತ". Vijaya Karnataka. 11 January 2020. Retrieved 11 January 2020.
  2. "ಆರ್ಕೈವ್ ನಕಲು". Archived from the original on 2003-04-22. Retrieved 2010-07-02.
  3. http://openlibrary.org/a/OL8732A/M._Chidananda_Murthy?books_page=1
  4. "ಆರ್ಕೈವ್ ನಕಲು". Archived from the original on 2016-12-13. Retrieved 2010-07-02.
  5. "ಆರ್ಕೈವ್ ನಕಲು". Archived from the original on 2010-02-07. Retrieved 2021-08-10.
  6. ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದ ಮೂರ್ತಿ ಇನ್ನಿಲ್ಲ;ಪ್ರಜಾವಾಣಿ: 11 ಜನವರಿ 2020