ಚಿಂತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಂತೆ ಎಂದರೆ ಪುನರಾವರ್ತಿತ, ನಿಯಂತ್ರಿಸಲಾಗದ ರೀತಿಯಲ್ಲಿರುವ ನಕಾರಾತ್ಮಕ ಸ್ವರೂಪದ ಯೋಚನೆಗಳು, ಚಿತ್ರಗಳು ಮತ್ತು ಭಾವನೆಗಳು. ಇದು ನಿರೀಕ್ಷಿತ ಸಂಭಾವ್ಯ ಬೆದರಿಕೆಗಳು ಮತ್ತು ಅವುಗಳ ಸಂಭಾವ್ಯ ಪರಿಣಾಮಗಳನ್ನು ತಪ್ಪಿಸಲು ಅಥವಾ ಬಗೆಹರಿಸಲು ಮಾಡಲಾದ ಪೂರ್ವಭಾವಿ ಅರಿವು ಸಂಬಂಧಿ ಅಪಾಯ ವಿಶ್ಲೇಷಣೆಯಿಂದ ಉಂಟಾಗುತ್ತದೆ.[೧] ವ್ಯಕ್ತಿಯು ಅಪರ್ಯಾಪ್ತ ಕೌಶಲಗಳನ್ನು ಹೊಂದಿದಾಗ ಮಧ್ಯಮಬಲದ ಸವಾಲಿಗೆ ಒಂದು ಪ್ರತಿಕ್ರಿಯೆ ಎಂದು ಚಿಂತೆಯನ್ನು ವಿವರಿಸಲಾಗುತ್ತದೆ. ಕನಿಷ್ಠಪಕ್ಷ ಆರು ತಿಂಗಳು ಒಬ್ಬರು ಹೆಚ್ಚಿನ ದಿನಗಳು ವಿಪರೀತವಾಗಿ ಭಯಭೀತರಾಗಿದ್ದರೆ ಚಿಂತೆಯು ಸಮಸ್ಯಾತ್ಮಕವಾಗುತ್ತದೆ.

ಚಿಂತೆಯ ಕುರಿತು ಪ್ರಾಚೀನವಾದ ಶ್ಲೋಕವೊಂದು ಹೀಗಿದೆ.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುರೇಕೋ ವಿಶಿಷ್ಯತೇ|

ಚಿತಾ ದಹತಿ ನಿರ್ಜೀವಂ ಚಿಂತಾ ತು ಸಜೀವಕಂ||

ಅಂದರೆ ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ. ಚಿತೆ ನಿರ್ಜೀವವಾದುದನ್ನು ಸುಟ್ಟರೆ, ಚಿಂತೆ ಸಜೀವವಾದುದನ್ನೇ ಸುಡುತ್ತದೆ.

ಒಂದು ಭಾವನೆಯಾಗಿ, ಒಂದು ವಾಸ್ತವಿಕ ಅಥವಾ ಕಲ್ಪನೆಯ ವಿಷಯದ ಬಗ್ಗೆ (ಹಲವುವೇಳೆ ಆರೋಗ್ಯ ಅಥವಾ ಹಣಕಾಸಿನಂತಹ ವೈಯಕ್ತಿಕ ವಿಷಯಗಳು, ಅಥವಾ ಪರಿಸರ ಮಾಲಿನ್ಯ, ಸಾಮಾಜಿಕ ರಚನೆ ಅಥವಾ ತಂತ್ರಜ್ಞಾನ ಬದಲಾವಣೆಯಂತಹ ವಿಶಾಲವಾದ ಬಾಹ್ಯ ವಿಷಯಗಳು) ಆತಂಕ ಅಥವಾ ಕಾಳಜಿಯಿಂದ ಚಿಂತೆಯನ್ನು ಅನುಭವಿಸಲಾಗುತ್ತದೆ. ಇದು ಭವಿಷ್ಯದ ನಿರೀಕ್ಷಿತ ಸಮಸ್ಯೆಗಳಿಗೆ ಒಂದು ಸಹಜ ಪ್ರತಿಕ್ರಿಯೆಯಾಗಿರುತ್ತದೆ. ವಿಪರೀತ ಚಿಂತೆಯು ಸಾಮಾನ್ಯೀಕೃತ ಆತಂಕ ಕಾಯಿಲೆಯ ಮುಖ್ಯ ರೋಗನಿದಾನ ಲಕ್ಷಣವಾಗಿದೆ. ಬಹುತೇಕ ಜನರು ತಮ್ಮ ಬದುಕಿನಲ್ಲಿ ಯಾವುದೇ ಘಟನೆಯಿಲ್ಲದ ಚಿಂತಿತರಾಗಿರುವ ಅಲ್ಪಕಾಲೀನ ಅವಧಿಗಳನ್ನು ಅನುಭವಿಸುತ್ತಾರೆ; ವಾಸ್ತವವಾಗಿ, ಚಿಂತೆಯು ಜನರನ್ನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರೇರಿಸಿದರೆ (ಉದಾ. ಸೀಟ್ ಬೆಲ್ಟ್‌ನ್ನು ಬಿಗಿಮಾಡಿಕೊಳ್ಳುವುದು ಅಥವಾ ವಿಮೆಯನ್ನು ಖರೀದಿಸುವುದು) ಅಥವಾ ಅಪಾಯಭರಿತ ವರ್ತನೆಗಳನ್ನು ತಪ್ಪಿಸುವಂತೆ ಪ್ರೇರಿಸಿದರೆ (ಉದಾ. ಅಪಾಯದ ಪ್ರಾಣಿಗಳಿಗೆ ಸಿಟ್ಟುಬರಿಸುವುದು, ಅನಿಯಂತ್ರಿತ ಮದ್ಯಪಾನ), ಸೌಮ್ಯ ಪ್ರಮಾಣದ ಚಿಂತೆಯು ಸಕಾರಾತ್ಮಕ ಪರಿಣಾಮಗಳನ್ನು ಹೊಂದಿರುತ್ತದೆ. ಆದರೆ ಜನರು ವಿಪರೀತವಾಗಿ ಚಿಂತಿತರಾದರೆ ತಮ್ಮ ಮೌಲ್ಯಮಾಪನಗಳಲ್ಲಿ ಭವಿಷ್ಯದ ಅಪಾಯಗಳಿಗೆ ಅತಿ ಮಹತ್ವ ಕೊಡುತ್ತಾರೆ ಮತ್ತು ಅದರ ವಿಪರೀತ ಪ್ರಮಾಣಗಳಲ್ಲಿ ಪರಿಸ್ಥಿತಿಯನ್ನು ಕುರುಡುತುದಿಯೆಂದು ಉತ್ಪ್ರೇಕ್ಷಿಸುವ ಪ್ರವೃತ್ತಿ ಹೊಂದಿರುತ್ತಾರೆ. ಇದು ಒತ್ತಡವಾಗಿ ಪರಿಣಮಿಸುತ್ತದೆ. ವಿಶ್ಲೇಷಣಾತ್ಮಕ ಸಂಪನ್ಮೂಲಗಳು ಬಾಹ್ಯ ನಿಯಂತ್ರಣ ಕೇಂದ್ರ, ವೈಯಕ್ತಿಕ ಅನುಭವ ಮತ್ತು ನಂಬಿಕೆಯಲ್ಲಿನ ತರ್ಕದೋಷಗಳ ಸಂಯೋಜನೆಯಾಗಿರುತ್ತವೆ, ಮತ್ತು ಹಾಗಾಗಿ ಅತಿ ಅಂದಾಜು ಮಾಡಲಾಗುತ್ತದೆ. ದೀರ್ಘಕಾಲದಿಂದ ಚಿಂತೆಗೊಂಡ ವ್ಯಕ್ತಿಗಳು ತಮ್ಮ ಸಮಸ್ಯೆ ಬಗೆಹರಿಕೆ ಸಾಮರ್ಥ್ಯದಲ್ಲಿ ಆತ್ಮವಿಶ್ವಾಸದ ಕೊರತೆ ಹೊಂದಿರುವ, ಸಮಸ್ಯೆಗಳನ್ನು ಬೆದರಿಕೆಗಳಾಗಿ ನೋಡುವ, ಒಂದು ಸಮಸ್ಯೆಯನ್ನು ನಿಭಾಯಿಸುವಾಗ ಸುಲಭವಾಗಿ ನಿರಾಶರಾಗುವ, ಮತ್ತು ಸಮಸ್ಯಾ ಬಗೆಹರಿಕೆ ಪ್ರಯತ್ನಗಳ ಫಲಿತಾಂಶಗಳ ಬಗ್ಗೆ ನಿರಾಶಾವಾದಿಗಳಾಗಿರುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಗಂಭೀರವಾಗಿ ಆತಂಕಗೊಂಡ ಜನರಿಗೆ ತಮ್ಮ ಚಿಂತೆಯನ್ನು ನಿಯಂತ್ರಿಸುವುದು ಕಷ್ಟವೆನಿಸುತ್ತದೆ ಮತ್ತು ವಿಶಿಷ್ಟವಾಗಿ ಚಡಪಡಿಕೆ, ಆಯಾಸ, ಗಮನವನ್ನು ಕೇಂದ್ರೀಕರಿಸುವುದರಲ್ಲಿ ತೊಂದರೆ, ಕಿರಿಕಿರಿ, ಸ್ನಾಯು ಸೆಳೆತ ಮತ್ತು ನಿದ್ರಾ ಭಂಗದಂತಹ ಲಕ್ಷಣಗಳನ್ನು ಅನುಭವಿಸುತ್ತಾರೆ. ಅತಿಯಾದ ಚಿಂತೆಯನ್ನು ತಡೆಯುವಲ್ಲಿ ವಿಶ್ರಾಂತಿ, ಅಪಾಯದ ಮೌಲ್ಯಮಾಪನ, ಚಿಂತೆಗೆ ಒಡ್ಡಿಕೆ ಮತ್ತು ವರ್ತನ ತಡೆಗಟ್ಟುವಿಕೆಗಳು ಪರಿಣಾಮಕಾರಿಯೆಂದು ಸಾಬೀತಾಗಿದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಚಿಂತೆ&oldid=846303" ಇಂದ ಪಡೆಯಲ್ಪಟ್ಟಿದೆ