ಗಂಗರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಗರಾಜ ಹೊಯ್ಸಳ ವಿಷ್ಣುವರ್ಧನನ ಪಂಚಪ್ರಧಾನರಲ್ಲಿ ಪ್ರಮುಖ, ದಂಡನಾಯಕ. ತಾಯಿ ಪೋಚಿಕಬ್ಬೆ. ತಂದೆ ಈಚರಾಜ ಅಥವಾ ಬೌಧಮಿತ್ರ; ನೃಪ-ಕಾಮ ಹೊಯ್ಸಳನ ಸೇವೆ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. ಶ್ರವಣಬೆಳಗೊಳದ ಮತ್ತು ಹಾಸನದ ಅನೇಕ ಶಾಸನಗಳಲ್ಲಿ ಗಂಗರಾಜನಿಗೆ ಸಂಬಂಧಿಸಿದ ಹಲವು ಸಂಗತಿಗಳು ದೊರೆಯುತ್ತವೆ. ಅವನಿಗೆ ಬಮ್ಮ ಚಮೂಪನೆಂಬ ಅಣ್ಣನೊಬ್ಬನಿದ್ದ. ಆತನೊಬ್ಬ ಸೇನಾನಿಯಾಗಿದ್ದನೆಂದು ಕಾಣುತ್ತದೆ.

ಗಂಗರಾಜನ ಬಿರುದುಗಳು[ಬದಲಾಯಿಸಿ]

ಗಂಗರಾಜನಿಗೆ ಮಹಾಸಾಮಂತಾಧಿಪತಿ, ಮಹಾಪ್ರಚಂಡ ದಂಡನಾಯಕ, ದ್ರೋಹಘರಟ್ಟ, ಸ್ವಾಮಿದ್ರೋಹಘರಟ್ಟ ಎಂದು ಮುಂತಾಗಿ ಅನೇಕ ಬಿರುದುಗಳಿದ್ದುವು. ವಿಷ್ಣುವರ್ಧನನ ಏಳಿಗೆಯನ್ನು ಮುರಿಯಬೇಕೆಂದು ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯ 1118ರಲ್ಲಿ ತನ್ನ ಹನ್ನೆರಡು ಮಂದಿ ಸಾಮಂತರ ಸೈನ್ಯಗಳನ್ನು ಒಟ್ಟುಗೂಡಿಸಿ ಹೊಯ್ಸಳರ ಮೇಲೆ ಕಳುಹಿಸಿದ. ಹೊಯ್ಸಳನಾಡಿನ ಉತ್ತರದಲ್ಲಿತ್ತೆಂದು ಹೇಳಲಾದ ಕಣ್ಣೇಗಾಲವೆಂಬ ಸ್ಥಳದಲ್ಲಿ ಗಂಗರಾಜನ ಸೇನೆ ಶತ್ರುವನ್ನು ಎದುರಿಸಿತು. ರಾತ್ರಿ ನಡೆದ ಈ ಕೈಕೈ ಯುದ್ಧದಲ್ಲಿ ಗಂಗರಾಜನರ ವಿಜಯ ಲಭಿಸಿತು. ಚಾಳುಕ್ಯ ಸೈನ್ಯ ದಿಕ್ಕಪಾಲಾಯಿತು. ಶತ್ರುವಿನ ಅಗಾಧ ಸಾಮಗ್ರಿ ಹೊಯ್ಸಳರ ವಶವಾಯಿತು. ಕಣ್ಣೇಗಾಲ ಕದನದಲ್ಲಿ ಗಂಗರಾಜನ ಸಾಹಸದಿಂದಾಗಿ ವಿಷ್ಣುವರ್ಧನ ಹೊಯ್ಸಳನ ಕೀರ್ತಿ ಪ್ರತಿಷ್ಠೆಗಳು ಬೆಳೆದುವು. ಅವನ ರಾಜ್ಯ ವಿಸ್ತಾರಗೊಂಡಿತಲ್ಲದೆ ಅವನು ಸ್ವತಂತ್ರನಾಗಿ ಆಳಲುಪಕ್ರಮಿಸಿದ. ಗಂಗರಾಜನನ್ನು ಮೆಚ್ಚಿದ ವಿಷ್ಣುವರ್ಧನ ಅವನಿಗೆ ಮಹಾಸಾಮಂತಾಧಿಪತಿ, ಪ್ರಧಾನಮಾತ್ಯ, ಮಹಾಪ್ರಚಂಡ ದಂಡನಾಯಕ, ದ್ರೋಹಘರಟ್ಟ ಮುಂತಾದ ಬಿರುದುಗಳನ್ನು ನೀಡಿದ.

ಇತಿಹಾಸ[ಬದಲಾಯಿಸಿ]

ವಿಷ್ಣುವರ್ಧನನ ಪಟ್ಟಾಭಿಷೇಕದಲ್ಲಿ ಈತ ಪೂರ್ಣಕುಂಭನಾಗಿದ್ದನೆಂದು ವರ್ಣಿತನಾಗಿದ್ದಾನೆ. ಆ ಉತ್ಸವದಲ್ಲಿ ಇವನು ಪ್ರಮುಖಪಾತ್ರ ವಹಿಸಿದ್ದಿರಬೇಕು. ಈತ ಕಣ್ಣೇಗಾಲದ ಕದನದಲ್ಲಿ (ನೋಡಿ- ಕಣ್ಣೇಗಾಲ-ಕದನ) ಚಾಳುಕ್ಯರನ್ನು ಓಡಿಸಿದ. ತಲಕಾಡನ್ನು ಚೋಳರ ಆಡಳಿತದಿಂದ ವಿಮೋಚನಗೊಳಿಸಿದ. ಕೊಂಗು, ಚೆಂಗಿರಿ ಮುಂತಾದ ಅನೇಕ ಸ್ಥಳಗಳನ್ನು ಹಿಡಿದುಕೊಂಡ. ಜೈನಧರ್ಮದಲ್ಲಿ ಇವನಿಗೆ ವಿಶೇಷ ಆಭಿಮಾನವಿತ್ತು. ಈತ ಶುಭಚಂದ್ರ ಸಿದ್ಧಾಂತದೇವನ ಶಿಷ್ಯನಾಗಿದ್ದನೆಂದು ಹೇಳಲಾಗಿದೆ. ಗಂಗವಾಡಿಯ ಎಲ್ಲ ಜೈನದೇಗುಲಗಳನ್ನು ಜೀರ್ಣೋದ್ಧಾರ ಮಾಡಿಸಿದನೆಂದೂ ಗೊಮ್ಮಟದೇವನ ವಿಗ್ರಹದ ಸುತ್ತ ಆವರಣವನ್ನು ಕಟ್ಟಿಸಿದನೆಂದೂ ತಿಳಿದುಬರುತ್ತದೆ. ಗಂಗವಾಡಿ 96000 ವನ್ನು ಈತ ಕೊಪಣವಾಗಿ ಪರಿವರ್ತಿಸಿದನೆಂದು ಶಾಸನಗಳು ತಿಳಿಸುತ್ತವೆ. ಶ್ರವಣಬೆಳಗೊಳದ ಸನಿಯದಲ್ಲೇ ಈತ ಜಿನನಾಥಪುರವೆಂಬ ಊರನ್ನು ಕಟ್ಟಿಸಿದ. ಇವನಿಗೆ ಕೊಡಲಾಗಿದ್ದ ದತ್ತಿಗಳನ್ನು ಈತ ತನ್ನ ಗುರುವಿಗೆ ಒಪ್ಪಿಸಿದ. ಇವನ ಹೆಂಡತಿ ಲಕ್ಷ್ಮಿಯೂ ದಾನಶೀಲೆ. ಇವನ ಬಂಧುವರ್ಗಕ್ಕೆಲ್ಲ ದಾನಗುಣ ಸಹಜವಾಗಿ ಬಂದಿತ್ತೆಂದು ತಿಳಿದುಬರುತ್ತದೆ. ಗಂಗರಾಜನ ಸ್ವಧರ್ಮನಿಷ್ಠೆ ಸಂಕುಚಿತವಾದ್ದಾಗಿರಲಿಲ್ಲ. ಅನ್ಯಮತಗಳ ಜನಕ್ಕೂ ಅವನು ಉದಾರವಾಗಿ ದಾನಮಾಡಿದ. ವಿದ್ಯಾಭ್ಯಾಸ, ದಲಿತರ ಸೇವೆ, ರೋಗಿಗಳ ಶುಶ್ರೂಷೆಗಳಿಗಾಗಿ ಇವನು ದತ್ತಿಗಳನ್ನು ನೀಡಿದ್ದಾನೆ.

ಸೈನ್ಯದ ಮುಖಂಡನಾಗಿ[ಬದಲಾಯಿಸಿ]

ಗಂಗರಾಜ ಸಮರ್ಥ ಸೇನಾನಿಯಾಗಿದ್ದನೆಂಬುದಕ್ಕೂ ಧಾರಾಳವಾಗಿ ದಾಖಲೆಗಳುಂಟು. ವಿಷ್ಣುವರ್ಧನನ ರಾಜ್ಯವಿಸ್ತರಣ ಕಾರ್ಯದಲ್ಲಿ ಇವನು ಪ್ರಧಾನಪಾತ್ರವಹಿಸಿದ. ಗಂಗವಾಡಿಯನ್ನು ಚೋಳರ ಆಕ್ರಮಣದಿಂದ ವಿಮುಕ್ತಗೊಳಿಸಲು ವಿಷ್ಣುವರ್ಧನ ಗಂಗರಾಜನಿಗೆ ಸಮಸ್ತ ಸೈನ್ಯಾಧಿಕಾರವನ್ನೂ ವಹಿಸಿದ್ದ. ಗಂಗರಾಜಚೋಳರ ಆಡಳಿತವನ್ನು ಕೊನೆಗಾಣಿಸಲು ಎಂಥ ತ್ಯಾಗಕ್ಕಾದರೂ ಸಿದ್ಧನಾದ. ಸೈನ್ಯದ ಮುಖಂಡತ್ವವನ್ನು ವಹಿಸಿ ತಲಾಕಡಿನತ್ತ ಮುಂದುವರಿದ. ಅವನ ಸೈನ್ಯ ಕನ್ನಂಬಾಡಿಯನ್ನು ದಾಟಿ ಮುಂದುವರಿಯುತ್ತಿದ್ದಾಗ ಆ ಸುದ್ದಿ ತಿಳಿದು ತಲಕಾಡಿನ ಚೋಳ ಅಧಿಕಾರಿ ಅದಿಯಮನೆಂಬವನು ಹೊಯ್ಸಳ ಸೇನೆಯನ್ನೆದುರಿಸಲು ಸಜ್ಜಾಗಿ, ಕಾವೇರಿ ನದಿಯನ್ನು ದಾಟಿ ಬಂದ. ಅವನ ಸೇನೆ ಕಾವೇರಿಗೆ ಬೆನ್ನು ಮಾಡಿ ನಿಂತಿತು. ಅದು ನದಿಯನ್ನು ದಾಟದೆ ಇದ್ದಿದ್ದ ಪಕ್ಷದಲ್ಲಿ ಯುದ್ಧದ ಗತಿ ಬೇರೆ ರೀತಿ ಆಗುತ್ತಿತ್ತೋ ಏನೊ. ಹೊಯ್ಸಳರಿಗೆ ತಲಕಾಡನ್ನು ಒಪ್ಪಿಸಲು ನಿರಾಕರಿಸಿದ ಚೋಳಸೇನೆಯನ್ನು ಗಂಗರಾಜನ ಸೇನೆ ನದಿಯ ದಡದಲ್ಲೇ ಅಟ್ಟಿಸಿಕೊಂಡು ಹೋಯಿತು. ಚೋಳಸೇನೆ ತಲಕಾಡಿನ ಬಳಿಯಲ್ಲಿ ನದಿ ದಾಟಿ ಕೋಟೆಯೊಳಗೆ ಸೇರಿಕೊಂಡಿತು. ಅಲ್ಲಿ ನದಿ ಆಳವಾಗಿರದಿದ್ದರೂ ಆ ಇಕ್ಕಟ್ಟಿನ ಪ್ರಸಂಗದಲ್ಲಿ ಅನೇಕ ಚೋಳ ಸೈನಿಕರು ನಾಶವಾಗಿರಬೇಕೆಂದು ನಂಬಲಾಗಿದೆ. ಗಂಗರಾಜ ಕೂಡಲೇ ಕೋಟೆಯನ್ನು ಮುತ್ತಿ ಅದನ್ನು ವಶಪಡಿಸಿಕೊಂಡ. ಅದಿಯಮನ ಗತಿಯೇನಾಯಿತೆಂಬುದು ತಿಳಿದಿಲ್ಲ. ಬಹುಶಃ ಅವನು ಸತ್ತಿರಬೇಕು. ಅನಂತರ ಗಂಗರಾಜನ ಸೇನೆ ಪೂರ್ವದಲ್ಲಿದ್ದ ಇತರ ಚೋಳ ಅಧಿಕಾರಗಳತ್ತ ಏರಿಹೋಯಿತು. ಹೊಯ್ಸಳರಿಗೆ ಬೆದರಿ ದಾಮೋದರನೆಂಬವನು ಕಂಚಿಗೆ ಓಡಿಹೋದ, ನರಸಿಂಗವರ್ಮ ಬೆಂಗರಿಯ ಬಳಿಯಲ್ಲಿ ಸಾವಿಗೆ ಈಡಾದ.

ಗಂಗರಾಜನ ಮರಣ[ಬದಲಾಯಿಸಿ]

ಗಂಗರಾಜ 1133ರ ಪ್ರಾರಂಭದಲ್ಲಿ ಮರಣ ಹೊಂದಿದ. ಅದಕ್ಕೆ ಮುಂಚೆಯೇ 1121ರಲ್ಲಿ-ಲಕ್ಷ್ಮಿ ತೀರಿಕೊಂಡಿದ್ದಳು. ಗಂಗರಾಜನ ಮರಣದಿಂದ ವಿಷ್ಣುವರ್ಧನ ವಿಶೇಷವಾಗಿ ದುಃಖತಪ್ತನಾದ. ಗಂಗರಾಜನ ಮಗನಾದ ಬೊಪ್ಪನನ್ನು ದೊರೆ ತನ್ನ ದಂಡನಾಯಕ ಹಾಗೂ ಸಚಿವನನ್ನಾಗಿ ನೇಮಿಸಿಕೊಂಡ. ಬೊಪ್ಪ ದಂಡನಾಯಕ ತನ್ನ ತಂದೆಯ ಜ್ಞಾಪಕಾರ್ಥವಾಗಿ ದೋರಸಮುದ್ರದಲ್ಲಿ ಪಾಶ್ರ್ವನಾಥ ಜಿನಾಲಯವನ್ನು ಕಟ್ಟಿಸಿ ಅದನ್ನು ಗಂಗರಾಜನ ಬಿರುದುಗಳಲ್ಲೊಂದಾದ ದ್ರೋಹ ಘರಟ್ಟ ಜಿನಾಲಯ ಎಂಬ ಹೆಸರಿನಿಂದ ಕರೆದ. ಈ ಜಿನಾಲಯ ಇಂದಿಗೂ ವಿಜಯ ಪಾರ್ಶ್ವನಾಥ ಜಿನಾಲಯ ಎಂಬ ಹೆಸರಿನಿಂದ ದ್ವಾರಸಮುದ್ರದಲ್ಲಿ ಪ್ರಸಿದ್ಧವಾಗಿದೆ. ಗಂಗರಾಜ ಧರ್ಮಿಷ್ಟ, ಉದಾರಿ, ಸಾಮಿನಿಷ್ಠ, ಪರಾಕ್ರಮಿ, ರಾಜತಂತ್ರನಿಪುಣ ಎಂದು ಶಾಸನಗಳಲ್ಲಿ ಹೊಗಳಿಕೆಗೆ ಪಾತ್ರನಾಗಿದ್ದಾನೆ.

"https://kn.wikipedia.org/w/index.php?title=ಗಂಗರಾಜ&oldid=691442" ಇಂದ ಪಡೆಯಲ್ಪಟ್ಟಿದೆ