ಕಾಂತ ರಸಾಯನಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಮಾಣ್ವಿಕ ಮತ್ತು ಆಣ್ವಿಕ ರಚನೆಗಳಿಗೂ ಒಂದು ಕಾಂತಕ್ಷೇತ್ರಕ್ಕೂ ಇರುವ ಅಂತರಸಂಬಂಧವನ್ನು ಅಭ್ಯಸಿಸುವ ರಸಾಯನಶಾಸ್ತ್ರ ವಿಭಾಗ (ಮ್ಯಾಗ್ನೆಟೊಕೆಮಿಸ್ಟ್ರಿ). ಕಾಂತದಿಂದ ಆಕರ್ಷಕವಾಗುವ ವಸ್ತುಗಳಲ್ಲಿ ಕಬ್ಬಿಣ ಪ್ರಧಾನವಾದದ್ದು ನಿಜ. ಈ ಗುಣಕ್ಕೆ ಕಾಂತಪ್ರವೃತ್ತಿ (ಮ್ಯಾಗ್ನೆಟಿಕ್ ಸಸೆಷ್ಟಿಬಿಲಿಟಿ) ಎಂದು ಹೆಸರು. ಕಾಂತಪ್ರವೃತ್ತಿ ಇರುವ ಇತರ ವಸ್ತುಗಳೂ ಇವೆ-ಕೆಲವು ಇತರ ಲೋಹಗಳು, ಆಕ್ಸಿಜನ್ ಮುಂತಾದ ಅನಿಲಗಳು, ಮುಕ್ತರ್ಯಾಡಿಕಲ್‍ಗಳು ಎಂದು ಹೆಸರಿರುವ ಅಷ್ಟೊಂದು ಸ್ಥಿರತೆ ಇರದ ಬಿಡಿಮೂಲ ಘಟಕಗಳು, ಇತ್ಯಾದಿ. 1845ರಲ್ಲಿ ಫ್ಯಾರಡೆ ತನ್ನ ಒಂದು ಪ್ರಯೋಗದಲ್ಲಿ ಎಲ್ಲ ವಸ್ತುಗಳನ್ನೂ ಕಾಂತಪ್ರವೃತ್ತಿಯ ದೃಷ್ಟಿಕೋನದಿಂದ ಪರೀಕ್ಷಿಸಿದ. ಒಂದು ವಸ್ತುವನ್ನು ಅಧಿಕ ಕಾಂತಸಾಮಥ್ರ್ಯ (ಮ್ಯಾಗ್ನೆಟಿಕ್ ಸ್ಟ್ರೆಂತ್) ಇರುವ ಕ್ಷೇತ್ರದಲ್ಲಿಟ್ಟಾಗ ಅದು ಕಾಂತಕ್ಷೇತದ ಕಡೆಗೆ ಆಕರ್ಷಿತವಾದರೆ ಅದನ್ನು ಅನುಕಾಂತೀಯವೆಂದೂ (ಪ್ಯಾರಾಮ್ನಾಗ್ನೇಟಿಕ್) ವಿಕರ್ಷಿತವಾದರೆ ಅದನ್ನು ಪ್ರತಿಕಾಂತೀಯವೆಂದೂ (ಡಯಾಮ್ಯಾಗ್ನೆಟಿಕ್) ಎಂದೂ ಹೆಸರಿಸಿದೆ. ಕಾಂತಕ್ಷೇತ್ರದಿಂದ ವಸ್ತು ಎಷ್ಟು ಪ್ರಭಾವಿತವಾಗುತ್ತದೆ ಎಂಬುದರ ಮಾನಕವೇ ಆ ವಸ್ತುವಿನ ಕಾಂತ ಪ್ರವೃತ್ತಿ. ವಸ್ತುವಿನಲ್ಲಿ ಮೂಡುವ ಕಾಂತಪ್ರವೃತ್ತಿ ಅನುಕಾಂತೀಯಗಳಲ್ಲಿ ಹೆಚ್ಚು. ಉಷ್ಣತೆಯಲ್ಲಿನ ಬದಲಾವಣೆ ಪ್ರತಿಕಾಂತೀಯಗಳ ಈ ಗುಣವನ್ನು ವ್ಯತ್ಯಾಸ ಮಾಡಲಾರದು ಎಂಬುದನ್ನು ಪಿ. ಕ್ಯೂರಿ ಕಂಡುಹಿಡಿದಿದ್ದಾನೆ. ಕಾಂತದಿಂದ ಕಬ್ಬಿಣ ಬಲು ಹೆಚ್ಚಾಗಿ ಆಕರ್ಷಿಕವಾಗುವುದರಿಂದಲೂ ಅದಕ್ಕೆ ಇತರ ವಿಶೇಷ ಗುಣಗಳಿರುವುದರಿಂದಲೂ ಅದನ್ನು ಫೆರ್ರೋಕಾಂತೀಯವೆಂದೂ (ಫೆರ್ರೋಮ್ಯಾಗ್ಯೆಟಿಕ್) ಕರೆಯುತ್ತಾರೆ. ಕಾಂತಕ್ಷೇತ್ರ ಸಾಮಥ್ರ್ಯದಿಂದ ಈ ರೀತಿ ಪ್ರಭಾವಿತವಾಗುವ ವಸ್ತುಗಳು ಪರಮಾಣುಗಳು ಅಣುಗಳು; ಹರಳುಗಳು, ರಸಾಯನವಸ್ತುಗಳು, ಕಡೆಗೆ ಬಿಡಿಮೂಲಘಟಕಗಳೂ ಆಗಿರಬಹುದು, ಲೋಹಗಳಲ್ಲಿ ಪೆಲೇಡಿಯಂ, ಪ್ಲಾಟಿನಂ ಮುಂತಾದುವುಗಳಿಗೆ ಅದರಲ್ಲೂ ವಿರಳ ಖನಿಜ (ರೇರ್ ಅರ್ತ್) ಗುಂಪಿಗೆ ಸೇರಿದ ಲೋಹಗಳಿಗೆ ಅನುಕಾಂತೀಯ ಗುಣಗಳಿವೆ. ಸಾಧಾರಣವಾಗಿ ಉತ್ತಮ ವಿದ್ಯುದ್ವಾಹಕಗಳಿಗೆ ಈ ಗುಣ ಕಡಿಮೆ.[೧]

ರಸಾಯನಶಾಸ್ತ್ರ[ಬದಲಾಯಿಸಿ]

ಸಾಧಾರಣವಾಗಿ ರಸಾಯನವಸ್ತುಗಳು ಪ್ರತಿಕಾಂತೀಯವಾಗಿರುವುವು. ಆದರೆ ಆ ಗುಣ ಪ್ರಕಟಿತವಾಗಿಯೇ ಇರಬೇಕೆಂದಿಲ್ಲ. ಈ ಗುಣಕ್ಕೂ ರಸಾಯನವಸ್ತುಗಳಿಗೂ ಇರುವ ಸಂಬಂಧ ಪರಮಾಣುಗಳಲ್ಲಿನ ಋಣವಿದ್ಯುತ್ತಿನಲ್ಲಿ ಎಲೆಕ್ಟ್ರಾನುಗಳಿಂದ. ಎಲೆಕ್ಟ್ರಾನುಗಳು ತಮ್ಮ ತಮ್ಮ ಅಕ್ಷಗಳ ಸುತ್ತಲೂ ಆವರ್ತಿಸುತ್ತಿರುತ್ತವೆ. ಈ ಆವರ್ತನೆಯಿಂದ ಅವು ಸಹ ಕಾಂತಸಾಮಥ್ರ್ಯ ಪಡೆದಿರುತ್ತವೆ. ಸಾಧಾರಣವಾಗಿ ಧಾತುಗಳಲ್ಲಿ ಎಲೆಕ್ಟ್ರಾನುಗಳು ಜೊತೆಯಾಗಿ ಇದ್ದು ವಿರುದ್ಧ ದಿಕ್ಕಿನಲ್ಲಿ ತಿರುಗುವುದರಿಂದ ಒಂದರ ಪರಿಣಾಮವನ್ನು ಇನ್ನೊಂದು ಹೊಡೆದು ಹಾಕುತ್ತದೆ. ಹೀಗಾಗಿ ಇವುಗಳ ನಿವ್ವಳ ಕಾಣಿಕೆ ಸೊನ್ನೆ (ಆಗ ಕಕ್ಷಕ ಚಲನೆಯಲ್ಲಿ ಪ್ರತಿಕಾಂತೀಯತೆ ಕಾಣಿಸಿಕೊಳ್ಳುತ್ತದೆ.) ಆದರೆ ಜೊತೆಗೂಡದ ಒಂಟಿ ಎಲೆಕ್ಟ್ರಾನುಗಳು ಒಂದು ಧಾತುವಿನಲ್ಲಿ ಇದ್ದಾಗ ಧಾತುವಿಗೆ ಸಹಜವಾಗಿ ಅನುಕಾಂತೀಯ ಗುಣ ಇರುವುದು. ಒಂಟಿ ಎಲೆಕ್ಟ್ರಾನುಗಳು ಪರಮಾಣುಗಳಲ್ಲಿ ಹೆಚ್ಚಾಗಿ ಇದ್ದರೆ ಅಂಥ ಧಾತುಗಳು ಅಧಿಕ ಅನುಕಾಂತಪ್ರವೃತ್ತಿ ಉಳ್ಳವಾಗಿರುತ್ತವೆ. ಒಂಟಿ ಎಲೆಕ್ಟ್ರಾನಿಗೂ ಒಂಟಿ ಎಲೆಕ್ಟ್ರಾನುಗಳಿಂದ ಕೂಡಿರುವ ರಸಾಯನ ವಸ್ತುಗಳಿಗೂ ಕಾಂತಭ್ರಮಣಾಂಕ (ಮ್ಯಾಗ್ಯೆಟಿಕ್ ಮೊಮೆಂಟ್) ಇರುವಂತೆಯೇ ಧನವಿದ್ಯುತ್ತಿರುವ ಪ್ರೋಟಾನಿಗೂ ಕಾಂತಭ್ರಮಣಾಂಕವಿದೆ. ಆದರೆ ಇದು ಎಲೆಕ್ಟ್ರಾನಿನ ಎರಡು ಸಾವಿರದಲ್ಲೊಂದು ಭಾಗ ಮಾತ್ರ.

ಉಲ್ಲೇಖನಗಳು:[ಬದಲಾಯಿಸಿ]

  1. http://www.chemistryexplained.com/Kr-Ma/Magnetism.html