ಕರ್ನಾಟಕ ವಿಸ್ತರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹತ್ತರಿಂದ ಹನ್ನೆರಡನೇ ಶತಮಾನದ ಸುಮಾರಿಗೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಈಗಿನ ಕರ್ನಾಟಕದ ಉತ್ತರ ಭಾಗದಿಂದ ಉತ್ತರ ಭಾರತದೆಡೆಗೆ ಅಪಾರ ಸಂಖ್ಯೆಯ ಜನರು ವಲಸೆ ಹೊರಟರು. ಸಾಮಾನ್ಯ ಜನರಷ್ಟೇ ಅಲ್ಲದೆ ಬಲಶಾಲಿಯಾದ ಸೈನ್ಯ, ಅಧಿನಾಯಕರು, ಪಾಳೇಗಾರರು, ಸಾಮಂತರು, ರಾಜರು ಕೂಡ ಉತ್ತರ ಭಾರತದೆಡೆಗೆ ವಿವಿಧ ಕಾರಣಗಳಿಗೆ ಪ್ರಯಾಣ ಬೆಳೆಸಿದರು. ಈ ಮೂಲಕ ಕರ್ನಾಟಕ ಸಾಂಸ್ಕೃತಿಕ, ಧಾರ್ಮಿಕ ಘಮಲನ್ನು ಉತ್ತರ ಭಾರತದ ಕಡೆಗೂ ಹರಡಿಸಿದ್ದಾರೆ.

ಉತ್ತರ ಭಾರತದ ಸಾಮ್ರಾಜ್ಯಗಳ ಉಗಮ[ಬದಲಾಯಿಸಿ]

ಕರ್ನಾಟಕದಲ್ಲಿ ಚಾಲುಕ್ಯ ಹಾಗೂ ರಾಷ್ಟ್ರಕೂಟರು(ಮುಂದೆ ರಾಜಸ್ಥಾನ ಪ್ರಾಂತದ ರಾಥೋಡ್ ವಂಶದವರು ಇದೇ ರಾಷ್ಟ್ರಕೂಟ ಸಂತತಿಯವರು) ಇನ್ನೂ ಆಳ್ವಿಕೆ ನಡೆಸಿದ್ದಂತೆಯೇ ಅವರ ಶಾಖೆಗಳು ಉತ್ತರ ಭಾರತದೆಡೆಗೆ ಪಸರಿಸಿದ್ದವು. ಈಗಿನ ಗುಜರಾತ್ ಮತ್ತು ದಕ್ಷಿಣ ರಾಜಸ್ಥಾನದಲ್ಲಿ ಕರ್ನಾಟಕ ವಲಸೆ ಜನಾಂಗ ಅತಿ ಪ್ರಭಾವಿತವಾಗಿ ಬೆಳೆಯಿತು. ಅವರ ಸಂತತಿಯು ಉತ್ತರ ಭಾರತದ ಇತರ ಭಾಗಗಳಲ್ಲಿಯೂ ಹರಡಿತು. ಕರ್ನಾಟಕಮಾನ್ಯಖೇಟರಾಷ್ಟ್ರಕೂಟರು ಆಗಿನ ಪ್ರಬಲ ರಾಜಕೀಯ ಕೇಂದ್ರವಾಗಿದ್ದ ಮಧ್ಯಪ್ರದೇಶಕನೌಜ್ ಬಳಿಯ ರಾಜ್ಯವೊಂದನ್ನು ಗೆದ್ದುಕೊಂಡಿದ್ದರು[೧].

ಸುಮಾರು ಅದೇ ಸಮಯಕ್ಕೆ ಕರ್ನಾಟಕ ಮೂಲದವರಾದ ಸೇನ ಸಾಮ್ರಾಜ್ಯ(೧೦೯೭ - ೧೨೨೫) ಈಗಿನ ಬಂಗಾಳದ ಪ್ರದೇಶವನ್ನು ಆಳುತ್ತಿತ್ತು. ಮೊದ ಮೊದಲು ಬಂಗಾಳದಲ್ಲಿ ಅಸ್ತಿತ್ವದಲ್ಲಿದ್ದ ಪಾಲ ಸಾಮ್ರಾಜ್ಯದ ಸೇನಾ ದಂಡನಾಯಕರಾಗಿದ್ದ ಸೇನರು ಪಾಲ ಸಾಮ್ರಾಜ್ಯದ ಪತನಾನಂತರ ತಾವೇ ರಾಜ್ಯಾಡಳಿತ ಗಾದಿಗೆ ಕುಳಿತು ತಮ್ಮ ಸಾಮ್ರಾಜ್ಯವನ್ನು ಸೇನ ಸಾಮ್ರಾಜ್ಯ ಎಂದು ಕರೆದುಕೊಂಡರು.

ಹನ್ನೆರಡನೇ ಶತಮಾನದಲ್ಲಿ ಈಗಿನ ಒಡಿಶಾದಲ್ಲಿ ಪ್ರಬಲ ಆಡಳಿತ ವರ್ಗವಾಗಿ ಹೊರ ಹೊಮ್ಮಿದ ಪೂರ್ವದ ಗಂಗರು ಕೂಡ ದಕ್ಷಿಣ ಕರ್ನಾಟಕ ಪ್ರಾಂತದ ಪಶ್ಚಿಮ ಗಂಗರ (ಕ್ರಿ.ಶ ೩೦೦ - ೧೦೦೦) ಸಂತತಿಯವರೇ ಆಗಿದ್ದಾರೆ[೨][೩].

ಭಾರತ ಉಪಖಂಡದಲ್ಲಿ ಇತರ ಸಾಮ್ರಾಜ್ಯಗಳ ಉಗಮ[ಬದಲಾಯಿಸಿ]

ವೆಂಗಿಯ ಚಾಲುಕ್ಯರು ಎಂದು ಕರೆಯಿಸಿಕೊಂಡ ಪೂರ್ವದ ಚಾಲುಕ್ಯರು ಸುಮಾರು ಏಳನೇ ಶತಮಾನದಿಂದ ಹನ್ನೊಂದನೇ ಶತಮಾನದವರೆವಿಗೂ ಆಂಧ್ರಪ್ರದೇಶವನ್ನು ಆಳಿದರು. ದೇವಗಿರಿಯಾದವ ಸಾಮ್ರಾಜ್ಯವೂ ಕೂಡ ಮೂಲತಃ ಕರ್ನಾಟಕ ಜಾತರಿಂದ ನಿರ್ಮಾಣವಾಗಿತ್ತು. ಇವರು ಸುಮಾರು ಕ್ರಿ.ಶ ೮೫೦ - ೧೩೨೦ ರವರೆಗೆ ಪಶ್ಚಿಮ ಭಾರತದ ಪ್ರದೇಶಗಳನ್ನಾಳಿದರು. ಭಾಷೆಯ ವಿಚಾರದಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದ ಇವರು ತಮ್ಮಆಡಳಿತ ಸಮಯದಲ್ಲಿ ಸ್ಥಳೀಯ ಭಾಷೆಗಳಿಗೂ ಮುನ್ನ ಕನ್ನಡ ಭಾಷೆ, ಸಾಹಿತ್ಯಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದರು.

ಸಾಂಸ್ಕೃತಿಕ ಪ್ರಭಾವ[ಬದಲಾಯಿಸಿ]

ಕರ್ನಾಟಕದ ವಿಸ್ತರಣೆ ಹೀಗೆ ನಡೆಯುತ್ತಿರಲು ಕರ್ನಾಟಕದ ನಾಣ್ಯ ಶೈಲಿ, ಪ್ರಸಾದನ ಶೈಲಿಯೂ ಒಳಗೊಂಡಂತೆ ಇನ್ನಿತರ ವಿಷಯಗಳನ್ನು ಆಗಿನ ಇತರ ಸಾಮ್ರಾಜ್ಯಗಳು ಅನುಸರಿಸಲು ತೊಡಗಿದ್ದವು. ಕಲ್ಹಣನು ರಾಜತರಂಗಿಣಿಯಲ್ಲಿ ನಮೂದಿಸಿರುವಂತೆ ಕಾಶ್ಮೀರದ ಆಗಿನ ರಾಜ ಹರ್ಷ ಕರ್ನಾಟಕದ ಕೆಲವು ಸಾಂಸ್ಕೃತಿಕ ಆಚರಣೆಗಳನ್ನು ತಾನು ರೂಢಿಸಿಕೊಂಡಿದ್ದ.

ಉತ್ತರ ಭಾರತದಲ್ಲಿ ಈಗ ಬಹಳ ಪ್ರಸಿದ್ಧಿ ಹೊಂದಿರುವ ದುರ್ಗಾ ಪೂಜೆ/ದುರ್ಗೆಯ ಆರಾಧನೆಯೂ ಕೂಡ ಕರ್ನಾಟಕದ ಕೊಡುಗೆಯೇ.

ಧಾರ್ಮಿಕ ಪ್ರಭಾವ[ಬದಲಾಯಿಸಿ]

ಕರ್ನಾಟಕದಿಂದ ಉತ್ತರ ಭಾರತದೆಡೆಗೆ ಅನೇಕ ಧಾರ್ಮಿಕ ಪ್ರಭಾವಗಳು ಉಂಟಾಗಿವೆ. ಅದ್ವೈತ ಸಿದ್ಧಾಂತ ಪ್ರತಿಪಾದಕರಾಗಿದ್ದ ಶಂಕರಾಚಾರ್ಯರು ತಮ್ಮ ಮೊಟ್ಟ ಮೊದಲ ಪೀಠವಾದ ದಕ್ಷಿಣಾಮ್ನಾಯಿ ಪೀಠವನ್ನು ರಾಷ್ಟ್ರಕೂಟರ ಆಡಳಿತಕ್ಕೆ ಒಳಪಟ್ಟಿದ್ದ ಶೃಂಗೇರಿಯಲ್ಲಿ ಸ್ಥಾಪನೆ ಮಾಡುತ್ತಾರೆ. ಮುಂದೆ ಇದೇ ಸಿದ್ಧಾಂತ ಪ್ರತಿಪಾದನೆಗಾಗಿ ಹಾಗು ಧರ್ಮ ಪ್ರಚಾರಕ್ಕಾಗಿ ಗುಜರಾತ್, ಒಡಿಶಾ, ಉತ್ತರಾಖಂಡ ರಾಜ್ಯಗಳಲ್ಲಿ ತಮ್ಮ ಪೀಠಗಳನ್ನು ಸ್ಥಾಪಿಸುತ್ತಾರೆ.

ಜೈನ ಧರ್ಮ ತತ್ವವೂ ಉತ್ತರ ಭಾರತಕ್ಕೆ ಪ್ರಮುಖವಾಲಾಗಿ ಕರ್ನಾಟಕದಿಂದ ಹರಿದು ಬಂದಿದೆ. ಕರ್ನಾಟಕಚಾಲುಕ್ಯರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು ಜೈನ ಧರ್ಮವನ್ನು ಬೆಂಬಲಿಸದವರೇ, ಆದರೆ ಕೆಲವು ರಾಷ್ಟ್ರಕೂಟರು, ಹೊಯ್ಸಳರು ತಾವೇ ಜೈನ ಧರ್ಮ ಸ್ವೀಕಾರ ಮಾಡಿ ಪಾಲನೆಯನ್ನು ಮಾಡಿದ್ದರು.

ಗುಜರಾತ್ನ ಅನ್ಹಿಲ್ ವಾಡದ ಸಿದ್ಧರಾಜ ಜಯಸಿಂಹನ ಹೆಂಡತಿಯೊಬ್ಬಳು ಕರ್ನಾಟಕದವಳು. ಕರ್ನಾಟಕದಿಂದ ಪ್ರವಾಸ ಹೊರಟಿದ್ದ ಜೈನ ಆಚಾರ್ಯರ ಸಂಗಡ ಆಕೆಯೂ ಗುಜರಾತ್ಪಠಾಣ್ ತಲುಪಿರುತ್ತಾಳೆ. ಪಠಾಣ್ ನ ಆಗಿನ ದೊರೆ ಕುಮಾರಪಾಲ ಒಬ್ಬ ಶ್ರದ್ಧಾವಂತ ಜೈನ ಧರ್ಮೀಯ ಕೂಡ. ರಾಜಸ್ಥಾನ ಹಾಗು ಗುಜರಾತ್ ಗಳಲ್ಲಿ ನೆಲೆಸಿರುವ ಅನೇಕ ಜೈನ ಧರ್ಮೀಯರ ಗೋತ್ರ 'ಕರ್ಣಾಟ' ಗೋತ್ರ. ಇದು ಅವರ ಮೂಲವನ್ನು ಎತ್ತಿ ತೋರಿಸುವಂತಿದೆ.

ಕರ್ನಾಟಕದ ಉತ್ತರ ಭಾಗದಲ್ಲಿ ಶ್ರೀ ಬಸವೇಶ್ವರರ ನೇತೃತ್ವದಲ್ಲಿ ಆರಂಭವಾದ ವೀರಶೈವ-ಲಿಂಗಾಯತ ಪಂಥ ಬರಿ ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟ್ರದಾದ್ಯಂತ ಹಬ್ಬಿತು. ಭಕ್ತಿ ಚಳುವಳಿಯಲ್ಲಿ ಕರ್ನಾಟಕದಲ್ಲಿ ಮಹತ್ತರ ಮೈಲಿಗಲ್ಲಾದ ಈ ಚಳುವಳಿ ಕನ್ನಡ ಸಾಹಿತ್ಯಕ್ಕೂ, ಸಾಮಾಜಿಕ ಸುಧಾರಣೆಗೂ ಅಪಾರ ಕೊಡುಗೆಗಳನ್ನು ಕೊಟ್ಟಿತು. ಇಷ್ಟೇ ಅಲ್ಲದೆ ಇದೇ ವೀರಶೈವ ಪಂಗಡದವರು ಇಂದಿಗೂ ಉತ್ತರಭಾರತದ ತೀರ್ಥ ಕ್ಷೇತ್ರವಾದ ಕೇದಾರನಾಥದಲ್ಲಿ ಪ್ರಧಾನ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಾರೆ.

ಸನಾತನ ಧರ್ಮದಲ್ಲಿ ದ್ವೈತ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತಗಳನ್ನು ಭೋದಿಸಿದ ಮಧ್ವಾಚಾರ್ಯರು ಹಾಗು ರಾಮಾನುಜಾಚಾರ್ಯರ ಪ್ರಭಾವವೂ ಕರ್ನಾಟಕ ಪ್ರಾಂತದಿಂದಲೇ ಶುರುವಾಯಿತು. ಶ್ರೀ ರಾಮಾನುಜರು ತಮಿಳುನಾಡಿನ ಮೂಲದವರಾದರೂ ಅಲ್ಲಿನ ಕೆಲವು ರಾಜಕೀಯ ತಿಕ್ಕಾಟಗಳಿಗೆ ಬೇಸತ್ತು ಕರ್ನಾಟಕ ಪ್ರಾಂತದ ಹೊಯ್ಸಳರ ಆಶ್ರಯಕ್ಕೆ ಬರುತ್ತಾರೆ. ಹೊಯ್ಸಳರ ರಾಜ ವಿಷ್ಣುವರ್ಧನ ರಾಮಾನುಜರಿಗೆ ಆಶ್ರಯ ಕೊಡುತ್ತಾನೆ. ಮುಂದೆ ೧೪-೧೬ನೇ ಶತಮಾನದಲ್ಲಿ ಹರಿದಾಸ ಪರಂಪರೆಯು ಕರ್ನಾಟಕ ಭಕ್ತಿ ಪರಂಪರೆಯಲ್ಲಿ ಹೆಮ್ಮರವಾಗಿ ಬೆಳೆಯಿತು. ಪುರಂದರ ದಾಸ, ಕನಕದಾಸರಂತಹ ದಾಸರು ಭಕ್ತಿ ಚಳುವಳಿಯು ಉತ್ತರ ಭಾರತದೆಡೆಗೂ ಹಬ್ಬಲು ಕಾರಣವಾದರು.

ಆಕರಗಳು[ಬದಲಾಯಿಸಿ]

  • ಡಾ.ಸೂರ್ಯಕಾಂತ್ ಯು ಕಾಮತ್ ಅವರ ಪುಸ್ತಕ 'ಕರ್ನಾಟಕ ಸಮಗ್ರ ಇತಿಹಾಸ' (ಆಂಗ್ಲ), ೨೦೦೧.
  • ನೀಲಕಂಠ ಶಾಸ್ತ್ರೀ ಕೆ.ಎ ಅವರ ಪುಸ್ತಕ 'ದಕ್ಷಿಣ ಭಾರತದ ಒಂದು ಇತಿಹಾಸ' (ಆಂಗ್ಲ), ನವ ದೆಹಲಿ, ೨೦೦೨.
  • ಡಾ.ರೋಮಿಲಾ ಥಾಪರ್ ಅವರ ಪುಸ್ತಕ 'ಪೂರ್ವ ಭಾರತದ ಇತಿಹಾಸ'(ಆಂಗ್ಲ), ನವ ದೆಹಲಿ, ೨೦೦೩.

ಕೊಂಡಿಗಳು[ಬದಲಾಯಿಸಿ]

  1. "ಕರ್ನಾಟಕ ವಿಸ್ತರಣೆಯ ಕುರಿತ ಆಂಗ್ಲ ವಿಕಿ ಪುಟ".
  2. "ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜಾಲತಾಣದ ಗಂಗರ ಕುರಿತ ಆಂಗ್ಲ ಮಾಹಿತಿ ಪುಟ".
  3. "ಪೂರ್ವದ ಗಂಗರ ಕುರಿತ ಜಾಲತಾಣದ ಆಂಗ್ಲ ಪುಟ".