ಕಣ್ಣಾನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಣ್ಣಾನೂರು : ಕೇರಳ ರಾಜ್ಯದ ಒಂದು ಜಿಲ್ಲೆ (ಸು. ೭,೦೯೯ ಚ.ಕಿಮೀ) ಹಾಗೂ ಮುಖ್ಯಪಟ್ಟಣ. ಪಟ್ಟಣ ದಕ್ಷಿಣ ರೈಲುಮಾರ್ಗದ ಪಶ್ಚಿಮ ತೀರಪ್ರದೇಶದಲ್ಲಿದ್ದು ಮಂಗಳೂರಿನ ದಕ್ಷಿಣಕ್ಕೆ ಸು. ೧೩೧ ಚ. ಕಿಮೀ ದೂರದಲ್ಲಿದೆ. ಅರಬ್ಬೀ ಸಮುದ್ರದ ದಂಡೆಯಲ್ಲಿರುವ ಈ ನಗರಕ್ಕೆ ಒಂದು ಸಣ್ಣ ಬಂದರಿದೆ. ಇಲ್ಲಿಂದ ಹೊರದೇಶಗಳಿಗೆ ಕೊಬ್ಬರಿ ಹಾಗೂ ತೆಂಗಿನ ನಾರು ರಫ್ತಾಗುತ್ತದೆ. ಇಲ್ಲಿ ನೇಯುವ, ನೂಲುವ ಹಾಗೂ ಉಡುಪುಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳಿವೆ. ಈ ನಗರ ೧೨ ಮತ್ತು ೧೩ನೆಯ ಶತಮಾನಗಳಲ್ಲಿ ಪರ್ಷಿಯ ಮತ್ತು ಅರೇಬಿಯ ದೇಶಗಳೊಡನೆ ವ್ಯಾಪಾರ ಸಂಪರ್ಕವಿಟ್ಟುಕೊಂಡಿದ್ದಂಥ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿತ್ತು. ಅದುವರೆಗೂ ದಕ್ಷಿಣ ಭಾರತದ ಸ್ವತಂತ್ರ ನಾಡಿನಲ್ಲಿದ್ದ ಈ ಸ್ಥಳ ೧೮ನೆಯ ಶತಮಾನದಲ್ಲಿ ಕಲ್ಲಿಕೋಟೆಯ ಕೊಲಾಟ್ಟರಿ ರಾಜನ ರಾಜಧಾನಿಯೆನಿಸಿತು.೧೪೯೮ರಲ್ಲಿ ವ್ಯಾಸ್ಕೊ ಡ ಗಾಮ ಇಲ್ಲಿಗೆ ಬಂದಿದ್ದ. ೧೫೦೫ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ಕೋಟೆಯನ್ನು ನಿರ್ಮಿಸಿದರು. ಈಗಿರುವ ಕೋಟೆ ಡಚ್ಚರಿಂದ ನಿರ್ಮಿತವಾಗಿದ್ದು ೧೭೭೧ರಲ್ಲಿ ಅದನ್ನು ಆಲಿ ರಾಜನಿಗೆ ಮಾರಲಾಯಿತು. ೧೭೮೩ರಲ್ಲಿ ಇದು ಬ್ರಿಟಿಷರ ವಶವಾಗಿ ಈಸ್ಟ್‌ ಇಂಡಿಯ ಕಂಪನಿಯ ಆಡಳಿತಕ್ಕೆ ಒಳಪಟ್ಟಿತು. ಅಲ್ಲಿಂದ ೧೮೮೭ರ ವರೆಗೂ ಬ್ರಿಟಿಷರ ಮಿಲಿಟರಿ ಠಾಣ್ಯವಾಗಿತ್ತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: