ಒರಿಯೊಸಿರಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಒರಿಯೊಸಿರಿಯಸ್: ಕಳ್ಳಿಗಳ ಕುಟುಂಬ. ಶಾಸ್ತ್ರನಾಮ ಕ್ಯಾಕ್ಟೇಸಿ. ಐದು ಪ್ರಭೇದಗಳಿವೆ. ಸಸ್ಯಗಳು ಬಲು ಆಕರ್ಷಕವಾಗಿರುವುದರಿಂದ ಇವನ್ನು ಕುಂಡಗಳಲ್ಲಿ ಬೆಳೆಸಿ ಮನೆಗಳಲ್ಲಿ ಅಲಂಕಾರಕ್ಕೋಸ್ಕರ ಇಡುವುದುಂಟು. ಕಾಂಡದಲ್ಲಿ ಏಣುಗಳು ಮತ್ತು ಮುಳ್ಳುಗಳುವೆ. ಏಣುಗಳ ಮೇಲಿರುವ ಗಂಟುಗಳಿಂದ ಉದ್ದವಾದ ಬಿಳಿಯ ಬಣ್ಣದ ಕೂದಲುಗಳು ಹೊರಬರುತ್ತವೆ. ಹೂಗಳ ಆಕಾರ ಕೊಳವೆಯಂತೆ. ಇವು ಪ್ರತಿದಿನವೂ ಅರಳುವುವು. ಅಂಡಾಶಯದ ಸುತ್ತಲೂ ಬಿಲ್ಲೆಗಳಂತಿರುವ ಅಸಂಖ್ಯಾತ ಉಪದಳಗಳಿವೆ. ಉಣ್ಣೆಯಂತೆ ಹೆಣೆದುಕೊಂಡಿರುವ ಕೂದಲುಗಳು ಕಂಕುಳಲ್ಲಿ ಇರುವುದರಿಂದ ಹೂ ನೋಡಲು ಆಕರ್ಷಣೀಯವಾಗಿದೆ. ಅಸಂಖ್ಯಾತ ಕೇಸರಗಳು ಹೂದಳಗಳಷ್ಟು ಅಥವಾ ಅವುಗಳಿಗಿಂತ ಉದ್ದವಾಗಿರುತ್ತವೆ. ಈ ಸಸ್ಯದ ಎರಡು ಮುಖ್ಯ ಪ್ರಭೇದಗಳು ಒ. ಸೆಲ್ಸಿಯಾನಸ್ ಮತ್ತು ಒ. ಫಾಸುಲೇಟಸ್. ಇವು ಬೋಲಿವಿಯ, ಪೆರು ಮತ್ತು ಚಿಲಿ ದೇಶಗಳ ಮೂಲವಾಸಿಗಳು. (ಬಿ.ಎ.ಸಿ.)