ಏಕಪ್ರಕಾರತವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hutton's Unconformity at Jedburgh. A photograph shows the current scene (2003), below John Clerk of Eldin's illustration of 1787.

ಏಕಪ್ರಕಾರತವಾದ( ಯೂನಿಫಾರ್ಮಿಟೇರಿಯಾನಿಸಂ): ಭೂಮಿಯ ಹೊರಪದರದಲ್ಲೂ ಒಳಭಾಗದಲ್ಲೂ ಆಗುತ್ತಿರುವ ವ್ಯತ್ಯಾಸಗಳು ಕೇವಲ ಆಕಸ್ಮಿಕವಲ್ಲ; ಅವು ಭೂಚರಿತ್ರೆಯ ಉದ್ದಕ್ಕೂ ಒಂದು ನಿಯಮಕ್ಕೆ ಅನುಸಾರವಾಗಿ ಏಕಪ್ರಕಾರವಾಗಿ ನಡೆಯುತ್ತ ಬಂದಿವೆ ಎಂಬ ವಾದ (ಯೂನಿಫಾರ್ಮಿಟೇರಿಯಾನಿಸಂ). ಇದನ್ನು ಜೇಮ್ಸ್‌ ಹಟ್ಟನ್ ಎಂಬ ಭೂವಿಜ್ಞಾನಿ 1788ರಲ್ಲಿ ಮಂಡಿಸಿದ. ಈ ವಾದಕ್ಕೆ ಸರ್ ಚಾರ್ಲ್ಸ್ ಲಯೆಲ್ ಎಂಬ ವಿಖ್ಯಾತ ಭೂವಿಜ್ಞಾನಿ ಯೂನಿಫಾರ್ಮಿಟೇರಿಯಾನಿಸಂ (ಏಕಪ್ರಕಾರತಾವಾದ) ಎಂದು ಹೆಸರಿಟ್ಟ.[೧]

ಪ್ರತಿದಿವಸ ಉಂಟಾಗುವ ಉಷ್ಣತೆಯ ಏರಿಳಿತ, ನೀರಿನ ಹರಿವು. ಸಾಗರಗಳ ಬಡಿತ, ವಿವಿಧ ರಾಸಾಯನಿಕಗಳ ಕ್ರಿಯೆಗಳು, ಅಖಿಲ ಪ್ರಾಣಿವರ್ಗದ ಚಟುವಟಿಕೆಗಳು-ಇವೆಲ್ಲವುಗಳ ಸಮಗ್ರ ಪರಿಣಾಮವಾಗಿ ಭೂಮಿಯಲ್ಲಿ ವ್ಯತ್ಯಾಸಗಳು ನಿರಂತರವಾಗಿ ಸಂಭವಿಸುತ್ತವೆ. ಉದಾಹರಣೆಗೆ 250 ವರ್ಷಗಳಲ್ಲಿ ಲಂಡನ್ನಿನ ಸೇಂಟ್ ಪಾಲ್ ಕಟ್ಟಡದ ಹೊರಮೈಯಲ್ಲಿ ಸರಾಸರಿ ಅರ್ಧ ಅಂಗುಲದಷ್ಟು ಶಿಲಾಪದರ ಸವೆದುಹೋಗಿದೆ ಎಂದು ಅಂದಾಜು ಮಾಡಲಾಗಿದೆ. ಇದು ನಿಧಾನವಾಗಿಯೂ ಸತತವಾಗಿಯೂ ಭೂಮಿಯ ಮೇಲೆ ನಡೆಯುವ ಕಾರ್ಯಗಳಿಂದ ಆಯಿತು ಎನ್ನುವುದು ಖಚಿತವಾಗಿದೆ. ಪ್ರಕೃತಿ ವ್ಯಾಪಾರ ಇದೇ ರೀತಿ ನಡೆಯುತ್ತಿದ್ದರೆ, ಕೋಟಿ ವರ್ಷಗಳಲ್ಲಿ ಒಂದು ಪ್ರದೇಶದ ಗುಡ್ಡಗಳೂ ಬೆಟ್ಟಗಳೂ ನೆಲಸಮವಾಗುವುದು ಅಸಾಧ್ಯವೇನಲ್ಲ. ಭೂವಿಜ್ಞಾನ ದೃಷ್ಟಿಯಲ್ಲಿ ಒಂದು ಕೋಟಿ ವರ್ಷ ಚಿಕ್ಕ ಅವಧಿ. ಭೂಮಿಯ ಪ್ರಾಯ 5 ´ 109 ವರ್ಷಗಳು ಎಂದಾಗ 1 ಕೋಟಿ ವರ್ಷಗಳು (107 ) ಎಷ್ಟು ಚಿಕ್ಕ ಅವಧಿ ಎಂದು ಊಹಿಸಬಹುದು. ಈ ಅಗಾಧ ಕಾಲದಲ್ಲಿ ಮೇಲೆ ವಿವರಿಸಿರುವ ಎಲ್ಲ ಕಾರಣಗಳಿಂದಾಗಿ ಭೂಮಿಯ ಹೊರಮೈಯ ರೂಪದಲ್ಲಿಯೂ ಭೂ ಜಲಭಾಗಗಳ ಹರವಿನಲ್ಲಿಯೂ ಅನೇಕ ವ್ಯತ್ಯಾಸಗಳಾಗಿವೆ. ಭೂಮಿಯ ಮೇಲ್ಭಾಗದಲ್ಲಿ ಎಡೆಬಿಡದೆ ಒಂದೇ ಸಮನಾಗಿ ನಡೆಯುವ ಇಂಥ ಕಾರ್ಯಗಳೇ ಈ ಬಗೆಯ ವ್ಯತ್ಯಾಸಗಳಿಗೆ ಕಾರಣಗಳಾಗಿವೆ.

ಭೂಚರಿತ್ರೆಯ ಅಗಾಧ ಕಾಲವನ್ನೂ ಅದರ ಪಾತ್ರವನ್ನೂ ಮೊತ್ತಮೊದಲು ಸರಿಯಾಗಿ ಅರ್ಥಮಾಡಿಕೊಂಡವ ಆಧುನಿಕ ಭೂವಿಜ್ಞಾನದ ಪಿತಾಮಹನಾದ ಇಂಗ್ಲೆಂಡಿನ ಜೇಮ್ಸ್‌ ಹಟ್ಟನ್ (1726-97). 1785ರಲ್ಲಿ ಆತ ಎಡಿನ್ಬರೋವಿನ ರಾಯಲ್ ಸೊಸ್ಶೆಟಿಯ ಮುಂದೆ ಥಿಯೊರಿ ಆಫ್ ದಿ ಅರ್ತ್ ಎಂಬ ಗ್ರಂಥವನ್ನು ಮಂಡಿಸಿದ. ಇಂದಿನ ಬೆಟ್ಟಗಳು ಮತ್ತು ಪರ್ವತಗಳು ಅವಿರತವಾಗಿ ನಡೆಯುತ್ತಿರುವ ಭೂವ್ಯಾಪಾರ ಕರ್ತೃಗಳ ತೇಮಾನದ ಪರಿಣಾಮದಿಂದ ಉಂಟಾದುವೆಂಬುದನ್ನು ಆತ ತನ್ನ ಗ್ರಂಥದಲ್ಲಿ ಸ್ಥಾಪಿಸಿದ್ದಾನೆ. ಆತನಿಗೆ ಮೊದಲು ಯಾರೂ ಈ ವಿವರಗಳನ್ನು ಸರಿಯಾಗಿ ತಿಳಿಸಿರಲಿಲ್ಲ ಮತ್ತು ಸಕಾರವಾಗಿ ವಿವರಿಸಿರಲಿಲ್ಲ. ಪ್ರಕೃತಿಯಲ್ಲಿ ನಡೆಯುವ ಎಲ್ಲ ವ್ಯತ್ಯಾಸಗಳೂ ಇದ್ದಕ್ಕಿದ್ದಂತೆ ಹಠಾತ್ತಾಗಿ ವಿಪ್ಲವಗಳ ದೆಸೆಯಿಂದ ಉಂಟಾಗುತ್ತವೆ ಎಂಬ ಭಾವನೆ ಹಟ್ಟನನ ಕಾಲದಲ್ಲೂ ಮತ್ತು ಅದಕ್ಕೆ ಮುಂಚೆಯೂ ಇತ್ತು. ಇದಕ್ಕೆ ವಿಪ್ಲವವಾದ (ಕ್ಯಾಟಸ್ಟ್ರೋಫಿಸಂ) ಎಂದು ಹೆಸರು. ಆದರೆ ಇಂದು ಏಕಪ್ರಕಾರತಾವಾದವೇ ಭೂವಿಜ್ಞಾನದ ಒಂದು ಮೂಲಭೂತ ತತ್ತ್ವವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Uniformitarianism: World of Earth Science". {{cite web}}: Invalid |ref=harv (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: