ಎಂ. ಆರ್. ಪಾವಂಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಆರ್.ಪಾವಂಜೆ, [೧] ಎಂದು ಕಲಾ ಪ್ರಪಂಚದಲ್ಲಿ ಹೆಸರುಗಳಿಸಿದ ಕಲಾವಿದನ ಹೆಸರು (ಮಾಧವ ರಾವ್ ಪಾವಂಜೆ) ಎಂದು.

ಜನನ[ಬದಲಾಯಿಸಿ]

ಮಾಧವ ರಾವ್ ಪಾವಂಜೆಯವರು, [೨]ಪಾವಂಜೆ ಗೋಪಾಲಕೃಷ್ಣಯ್ಯನವರ ಮೂವರು ಮಕ್ಕಳಲ್ಲಿ ಒಬ್ಬರಾದ ದಿ.ಪಾವಂಜೆ ಭುಜಂಗರಾವ್ ಹಾಗೂ ಭಾರತಿ ರಾವ್ ದಂಪತಿಗಳ ಮೂರು ಹೆಣ್ಣು ನಾಲ್ಕು ಗಂಡು ಮಕ್ಕಳಲ್ಲಿ ಮೂರನೆಯ ಮಗನಾಗಿ 1942 ರ ಆಗಸ್ಟ್ ತಿಂಗಳ 26 ರಂದು ಜನಿಸಿದರು. ತಂದೆ, ಭುಜಂಗ ರಾಯರೂ ಕಲೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡವರು. ಭುಜಂಗರಾಯರೂ ಕಲಾ ಅಧ್ಯಾಪಕರಾಗಿ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಜ್ಜ, ದೊಡ್ಡಪ್ಪ ಕಲಾವಿದರು. ಹಾಗಿರುವಾಗ ಕಲಾ ಶಿಕ್ಷಣ ಬಣ್ಣದೊಂದಿಗೆ ನೋಟ, ಕೂಟ, ರೇಖೆಗಳೊಂದಿಗೆ ಆಟ,ಪಾಠ ಸಹಜವಾಗಿಯೇ ಪ್ರಾಪ್ತವಾಗಿತ್ತು. ಕಲಾ ಶಿಕ್ಷಣಕ್ಕಾಗಿ ಪಾವಂಜೆ ಮನೆಗೆ ಬರುವ ವಿದ್ಯಾರ್ಥಿಗಳು, ಪ್ರಸಿದ್ಧ ಕಲಾವಿದರು ಮನೆಗೆ ಭೇಟಿ ನೀಡುತ್ತಿದ್ದ ಸಂದರ್ಭಗಳು ಅವರೊಂದಿಗಿನ ಮಾತುಕತೆಗಳನ್ನು ಕೇಳುತ್ತಾ ಮಾಧವ ರಾವ್ ಬೆಳೆದವರು. ಕಾರ್‌ಸ್ಟ್ರೀಟ್‌ನಲ್ಲಿರುವ ಸೆಂಟ್ರಲ್ ವಾರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮೇಲೆ ಕೆನರಾ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣ ಪಡೆದರು.

ಜೀವನ[ಬದಲಾಯಿಸಿ]

ಅಜ್ಜ ಗೋಪಾಲಕೃಷ್ಣಯ್ಯನವರ ಶಿಷ್ಯರಾದ ಎಲ್.ಕೆ. ಶೇವಗೂರರಲ್ಲಿ ಕಮರ್ಶಿಯಲ್ ಆರ್ಟ್‌ನಲ್ಲಿ ಶಿಕ್ಷಣ ಪಡೆದರು. ಜೀವನ ನಿರ್ವಹಣೆಗೆ ಹಲವು ವರ್ಷಗಳ ಕಾಲ ಹಲವಾರು ಜಾಹೀರಾತುಗಳನ್ನು ರಚಿಸಿ ಇವರು ಪ್ರಸಿದ್ಧರಾದರು. ಶ್ರದ್ಧೆಯಿಂದ ಚಿತ್ರಕಲೆಯ ಕಾಯಕವನ್ನು ನಡೆಸುವಂತಾಯಿತು. ಮುಂದೆ ಬ್ರಿಟಿಷ್ ಇನ್ಸಿಟ್ಯೂಟ್ ಆಫ್ ಆರ್ಟ್ಸ್‌ನಿಂದ ಕರೆಸ್ಪೊಂಡೆಂಟ್ ಆರ್ಟ್ ಕೋರ್ಸನ್ನು ಮುಗಿಸಿ ಕಲೆಯ ಜ್ಞಾನದ ಬಗ್ಗೆ ಅರಿವನ್ನು ವಿಸ್ತರಿಸಿಕೊಂಡರು. ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರರು ಇವರ ಅಜ್ಜ ಮತ್ತು ದೊಡ್ಡಪ್ಪನವರಿಂದ ಚಿತ್ರಕಲೆಯ ಮೂಲ ಪಾಠಗಳನ್ನು ಕಲಿತುಕೊಂಡು ಮಹಾನ್ ಕಲಾವಿದರಾಗಿ ಅರಳಿದವರು. ಕೆ.ಕೆ. ಹೆಬ್ಬಾರರು ಇವರ ಅಜ್ಜನ ಬಗ್ಗೆ ಬಿಡಿಸಿದ ರೇಖಾಚಿತ್ರ ಇವರ ಬಳಿ ಇದೆ. ಮುಂಬಯಿಗೆ ಹೋದಾಗಲೆಲ್ಲಾ ಕೆ.ಕೆ. ಹೆಬ್ಬಾರರಿಂದ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆಯುತ್ತಿದ್ದರು. ಹಾಗೆಯೇ ಹೆಬ್ಬಾರರೂ ಊರಿಗೆ ಬಂದಾಗಲೆಲ್ಲಾ ಇವರನ್ನು ಭೇಟಿ ಯಾಗುತ್ತಿದ್ದರು. ಶ್ರೇಷ್ಠ ಕಲಾವಿದರೊಂದಿಗಿನ ಅವರ ಸಂಬಂಧವು ಕಲೆಯಲ್ಲಿ ಪ್ರಬುದ್ಧತೆಯನ್ನು ಪರಿಪಕ್ವತೆಯನ್ನು ಬೆಳೆಸಲು ಸಾಧ್ಯವಾಯಿತು. ಚಿತ್ರಕಲೆಯನ್ನು ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಸೃಜಿಸುವ ಶಕ್ತಿಯನ್ನು ಪಡೆದರು.

ಹಲವು ಬಗೆಯ ವರ್ಣ ಪದ್ಧತಿಗಳು[ಬದಲಾಯಿಸಿ]

ತೈಲವರ್ಣ, ಜಲವರ್ಣ ಮೊದಲಾದ ಪದ್ಧತಿಗಳಿಂದ ಅನೇಕ ಕೃತಿಗಳು ನಿರ್ಮಾಣವಾದುವು. ಮಾಧವ ರಾವ್ ಪಾವಂಜೆಯವರ ತೈಲವರ್ಣ, ಜಲವರ್ಣ, ಪೆನ್ಸಿಲ್ ಶೇಡಿಂಗ್‌ನಂತಹ ಕೃತಿಗಳು ಸಂತೃಪ್ತಿಯನ್ನು ಕೊಡುವಂತಹವುಗಳು. ಮಾಧವರವ್ ರವರ ಕಲಾಕೃತಿಗಳು ಧಾರ್ಮಿಕ ಎನ್ನುವ ಗಾಢವಾದ ಶ್ರದ್ಧೆಯಿಂದ ಮೂಡಿದವುಗಳು. ಅವರ ಅಜ್ಜ ಗೋಪಾಲಕೃಷ್ಣಯ್ಯನ ಧಾರ್ಮಿಕ ಶ್ರದ್ಧೆ ಈ ಮೊಮ್ಮಗನಲ್ಲಿ ಪಾರಂಪರ್ಯವಾಗಿ ಬಂದಿದೆ. ವಾಜಿಣ್ಯೀಕರಣಗೊಂಡ ಕಲೆ ಹಳಿ ತಪ್ಪುತ್ತಿರುವ ಬಗ್ಗೆ ಅವರಿಗೆ ಖೇದವಿದೆ. ಇವರ ದೊಡ್ಡಪ್ಪನ ಕಾಲಕ್ಕಾಗಲೇ ನವ್ಯಕಲೆಯ ಶೈಲಿ ಪ್ರಾರಂಭವಾಗಿತ್ತು. ಆ ಕಲೆಯ ಹೊಸತನದ ಬಗ್ಗೆ ಗಾಢ ಚಿಂತನೆಗಳ ಬಗ್ಗೆ ಅವರಿಗೆ ಗೌರವವಿದೆ. ಆದರೆ ಅದನ್ನು ಅಳವಡಿಸಿಕೊಳ್ಳುವುದಾಗಲೀ, ಅನುಸರಿಸುವುದಾಗಲೀ ಅವರ ಸಾಂಪ್ರದಾಯಿಕ ಮನೋಭಾವಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಭಾವಂತ ಸೃಷ್ಟಿಶೀಲ ಕಲಾವಿದ ಮನುಷ್ಯರನ್ನು ಬೆಸೆದು ಅವರ ಭಾವನೆಗಳು ಅರಳಿಸುವಂತಿರಬೇಕು ಎಂಬುದು ಅವರ ಜೀವನ ಸಿದ್ಧಾಂತ. ಅವಿವಾಹಿತರಾಗಿದ್ದುಕೊಂಡು ತನ್ನ ಇಡೀ ಬದುಕನ್ನೇ ಚಿತ್ರಕಲೆಗೆ ಅರ್ಪಿಸಿ ಕೊಂಡವರಿವರು. ಚಿತ್ರಕಲೆಯ ಜೊತೆಗೆ ಅವರು ಬೆಳೆಸಿಕೊಂಡಿರುವ ಇನ್ನಿತರ ಹವ್ಯಾಸಗಳಲ್ಲೂ ಅಷ್ಟೇ ಅರ್ಪಣಾಭಾವದಿಂದ ತೊಡಗಿಸಿಕೊಂಡಿದ್ದಾರೆ. ಸಂಗೀತ ಕೇಳುವುದು, ಅವರಿಗೆ ಪ್ರಿಯವಾದ ಹವ್ಯಾಸ. ಇಷ್ಟವಾದ ಹಾಡುಗಳನ್ನು ಗುನುಗುನಿಸುತ್ತಾ, ನೆಲದ ಮೇಲೆ ಕುಳಿತು, ಚಿತ್ರ ರಚಿಸಲು ಕುಳಿತರೆ ಲೋಕವನ್ನೇ ಮರೆಯುತ್ತಿದ್ದರು.

ಅವರ ಇನ್ನಿತರ ಹವ್ಯಾಸಗಳು[ಬದಲಾಯಿಸಿ]

  1. ಭಾರತ ಸರಕಾರ ಮೊತ್ತಮೊದಲು ಹೊರಡಿಸಿದ ಕವರು, ಕಾರ್ಡ್, ಅಂಚೆ ಚೀಟಿಯಿಂದ ಪ್ರಾರಂಬಿಸಿ ದೇಶ ವಿದೇಶಗಳ ಅಂಚೆ ಚೀಟಿಗಳ ಸಂಗ್ರಹದ ಒಂದು ನಿದಿಯೇ ಅವರ ಬಳಿ ಇದೆ.
  2. ಅವುಗಳನ್ನು ಕಲಾತ್ಮಕವಾಗಿ ಜೋಡಿಸಿಟ್ಟ ಕ್ರಮವೂ ಗಮನಾರ್ಹವಾಗಿದೆ.
  3. ನಮ್ಮ ನಾಡನ್ನಾಳಿದ ರಾಜರ ನಾಣ್ಯಗಳ ಚಿನ್ನ, ಬೆಳ್ಳಿಯ ನಾಣ್ಯಗಳ ಸಂಗ್ರಹವೂ ಇದೆ.
  4. ಎಲ್ಲೂ ಕಾಣಸಿಗದ ಕೆಲವು ನಾಣ್ಯಗಳು ಉದಾಹರಣೆಗೆ ಅಳುಪರ ಕಾಲದ ನಾಣ್ಯಗಳು, ರೋಮ್ ನಾಣ್ಯಗಳು ಕೂಡಾ ಇವರ ಬಳಿ ಇದೆ. ಅವರ ಮನೆಯ ಅಟ್ಟದ ಮೇಲಿನ ಒಂದು ದೊಡ್ಡ ಕೋಣೆಯಿಡೀ ಹಳೆಯ ಕಾಲದ ವಸ್ತುಗಳಿಂದ ತುಂಬಿದೆ.
  5. ಸ್ವಾತಂತ್ರ್ಯ ಪೂರ್ವದ ಹಳೆಯ ಪತ್ರಿಕೆಗಳು,
  6. ಪ್ರಾಚೀನ ಅಂಚೆ ಚೀಟಿಗಳು, ನಾಣ್ಯಗಳು ಇತ್ಯಾದಿಗಳ ಅಪೂರ್ವವಾದ ಸಂಗ್ರಹ ಅವರ ಬಳಿ ಇದೆ
  7. ಇಂದು ದುರ್ಲಭವಾದ ಕೆಲವು ಅಮೂಲ್ಯ ಗ್ರಂಥಗಳು,
  8. ಹಿಂದಿನ ದಿನ ಬಳಕೆಯ ಅಪೂರ್ವ ವಸ್ತುಗಳು ಜೋಪಾನವಾಗಿದ್ದು ನಮ್ಮನ್ನು ಆಕರ್ಷಿಸುತ್ತವೆ.
  9. ತುಳು ಲಿಪಿಯ ಹಳೆಯ ಕೃತಿಗಳು.
  10. ಅಂಚೆ ಚೀಟಿ ಸಂಗ್ರಹದ ಇವರ ಆಸಕ್ತಿಯಿಂದಾಗಿ ರಾಷ್ಟ್ರಮಟ್ಟದ ಖ್ಯಾತಿ ಲಭಿಸಿದೆ. ಇವರು,ದ.ಕ. ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷರಾಗಿ ಕೆಲಸಮಾಡಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  1. ಮಂಗಳಾ ಪೆಕ್ಸ್ 80ರ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
  2. 84ರಲ್ಲಿ ಅತ್ಯುತ್ತಮ ಸಂಗ್ರಹಕಾರರೆಂಬ ಪ್ರಶಸ್ತಿಯೂ ಲಭಿಸಿದೆ.
  3. ಇವರ ಸಂಗ್ರಹಕ್ಕೆ 1986, 1988, 1990, 1992, 1994, 2000 ಮತ್ತು 2002ರಲ್ಲಿ ಬಹುಮಾನಗಳು ಸಂದಿವೆ.
  4. 2001ರಲ್ಲಿ ನಾಸಿಕ್‌ನಲ್ಲಿ ರಾಷ್ಟ್ರಮಟ್ಟದ ಅಂಚೆ ಚೀಟಿ ಪ್ರದರ್ಶನ ಜರಗಿದಾಗ ಇವರ ‘ಟ್ರಾವಂಕೂರ್-ಕೊಚ್ಚಿನ್’ ಸಂಗ್ರಹಕ್ಕೆ ರಜತ ಪದಕದ ಗೌರವ ಲಭಿಸಿದೆ.

ಉತ್ಕೃಷ್ಟ ಗುಣಗಳು[ಬದಲಾಯಿಸಿ]

ಸಂಯಮ, ನಿಶ್ಚಿತ ಗುರಿ,ಮತ್ತು ಕಠಿಣ ಪರಿಶ್ರಮಗಳು ಮಾಧವರಾಯರ ಯಶಸ್ಸಿಗೆ ಕಾರಣವಾಗಿವೆ. ಇವರ ಅಜ್ಜ, ತಂದೆ, ದೊಡ್ಡಪ್ಪಂದಿರೆಲ್ಲಾ ಪ್ರಯತ್ನಶೀಲರಾಗಿ ದುಡಿಯುವುದರಲ್ಲೇ ಸುಖ ಕಂಡವರು. ಅದೇ ರೀತಿ ಮಾಧವ ರಾವ್ ಪಾವಂಜೆಯವರೂ ಕೂಡಾ ಕಲಾಕೈಂಕರ್ಯ ಮಾಡುತ್ತಾ ಕಲಾ ಸರಸ್ವತಿಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ಅನು ಪಾವಂಜೆ ಬಾಲ್ಯದದಿನಗಳಲ್ಲಿ ಚಿಕ್ಕಪ್ಪನ ಮಡಿಲಲ್ಲಿ ಕುಳಿತು ಚಿತ್ರಕಲೆಯ ಮೂಲ ಪಾಠಗಳನ್ನು ಕಲಿತರು. ಅವರ ಚಿತ್ರ ರಚನೆಯ ಕೆಲಸ ಮುಗಿದ ಮೇಲೆ ಉಳಿದ ಬಣ್ಣಗಳನ್ನು ತಾನು ತನಗೆ ತೋಚಿದಂತೆ ಕ್ಯಾನ್ವಾಸ್‌ನ ಮೇಲೆ ಬಳಿಯುವ ಪ್ರಯತ್ನ ಮಾಡುತ್ತಿದ್ದರಂತೆ. ಈಗಿನ ಮಟ್ಟಕ್ಕೆ ಏರಿರುವ ಕಾಲಾವಿದೆಗೆ, ಎಂ.ಆರ್. ಪಾವಂಜೆಯವರ ಪ್ರೀತಿ ಮತ್ತು ಶಿಸ್ತು ಕಾರಣ.

ಉಲ್ಲೇಖಗಳು[ಬದಲಾಯಿಸಿ]

  1. ", ಕಣಜ, 'ವರ್ಣ ಚಿತ್ರಕಲಾವಿದ, ಪಾವಂಜೆ ಗೋಪಾಲಕೃಷ್ಣಯ್ಯ', 'ಎಂ.ಆರ್.ಪಾವಂಜೆ', 'ಅನು ಪಾವಂಜೆ',ಕನ್ನಡ ಸಂಘ, ಕಾಂತಾವರ- ಬಿ.ಎಂ.ರೋಹಿಣಿ". Archived from the original on 2015-12-14. Retrieved 2015-12-14.
  2. my-dearest-uncle-shri-m-r-pavanje-mentor-guru-and-a-guide