ಉತ್ತರಕಾಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತರಕಾಂಡ
ಮೊದಲ ಆವೃತ್ತಿಯ ಮುಖಪುಟ
ಲೇಖಕರುಎಸ್.ಎಲ್. ಭೈರಪ್ಪ
ದೇಶಭಾರತ
ಭಾಷೆಕನ್ನಡ
ವಿಷಯರಾಮಾಯಣ
ಪ್ರಕಾರಐತಿಹಾಸಿಕ ಗ್ರಂಥ
ಪ್ರಕಾಶಕರುಸಾಹಿತ್ಯ ಭಂಡಾರ, ಬೆಂಗಳೂರು
ಪ್ರಕಟವಾದ ದಿನಾಂಕ
೧೬-ಜನವರಿ-೨೦೧೭
ಮಾಧ್ಯಮ ಪ್ರಕಾರಮುದ್ರಣ (ಗಡಸು ರಟ್ಟು)
ಮುಂಚಿನಯಾನ

ಉತ್ತರಕಾಂಡ (ಇಂಗ್ಲೀಷ್: Uttarakaanda) ಕಾದಂಬರಿ ಕನ್ನಡದ ಸುಪ್ರಸಿದ್ದ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ೨೦೧೭ ರಲ್ಲಿ ಪ್ರಕಟವಾದ ಕಾದಂಬರಿ. ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರಕಾಂಡದಲ್ಲಿ ಬರುತ್ತದೆ [೧][೨].

ಮುದ್ರಣದ ಹಿನ್ನಲೆ[ಬದಲಾಯಿಸಿ]

೨೦೧೭ರ ಜನವರಿ ೧೬ ರಂದು ಉತ್ತರಕಾಂಡ ಕಾದಂಬರಿಯ ಮೊದಲ ಆವೃತ್ತಿ ಮುದ್ರಣ ಕಂಡಿತು. ಬಿಡುಗಡೆಯಾದ ಮೊದಲ ದಿನವೇ 'ಉತ್ತರಕಾಂಡ' ಪುಸ್ತಕದ ಮೊದಲ ಆವೃತ್ತಿ ಬಿಕರಿಯಾದ ಕಾರಣ ಎರಡನೇ ಆವೃತ್ತಿಯ ಮುದ್ರಣವನ್ನು ಪ್ರಾರಂಭಿಸಲಾಯಿತು[೩].

ಅಭಿಪ್ರಾಯ[ಬದಲಾಯಿಸಿ]

  • ಎಸ್‌. ಸೂರ್ಯಪ್ರಕಾಶ ಪಂಡಿತ್‌;28 Jan, 2017;
  • ಅಂತೆಯೇ ರಾಮನನ್ನೂ ರಾಮಾಯಣವನ್ನೂ ಸೀತೆಯ ನೋಟದಿಂದ ಕಂಡರಿಸಲು ಹೊರಟಿರುವುದೇ ಭೈರಪ್ಪನವರ ಕೃತಿ ‘ಉತ್ತರಕಾಂಡ’. ರಾಮಾಯಣ ನಮ್ಮ ಪಾಲಿಗೆ ಕೇವಲ ಒಂದು ಮಹಾಕಾವ್ಯವಷ್ಟೆ ಅಲ್ಲ; ಅದು ಇತಿಹಾಸ; ಪುರಾಣವೂ ಕೂಡ. ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಆಧಾರಶ್ರುತಿಯೂ ಹೌದು. (ಮಹಾಭಾರತವನ್ನು ‘ಇತಿಹಾಸ’ ಎಂದೂ ರಾಮಾಯಣವನ್ನು ‘ಕಾವ್ಯ’ ಎಂದೂ ವಿಂಗಡಿಸಲಾಗಿದ್ದರೂ ವಿಶಾಲಾರ್ಥದಲ್ಲಿ ‘ಪುರಾಣ’ ಎಂದು ಇಲ್ಲಿ ಎಣಿಸಲಾಗಿದೆ.) ಇಂಥದೊಂದು ಜೀವಂತಕೃತಿಗೆ ಒದಗಿರುವ ‘ಆಧುನಿಕ’ ಸಂವೇದನೆಯನ್ನು ಹೇಗೆ ಗ್ರಹಿಸಿಕೊಳ್ಳಬೇಕೆಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ.

ಆಧುನಿಕ ವಾಸ್ತವತೆಗೆ ಪುರಾಣ ಪರಿವರ್ತನೆ[ಬದಲಾಯಿಸಿ]

  • ಮೂಲಕೃತಿಗಳನ್ನು ಅಲೌಕಿಕ ಅಂಶಗಳಿಂದ ಪಾರು ಮಾಡಿಸಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಯಾವುದೋ ಕಾಲದ ವ್ಯಕ್ತಿ–ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡಿಸುವ ಕುಶಲತೆಯೂ ಈ ರಚನೆಗಳ ಹಿಂದಿನ ಆಶಯದಲ್ಲಿ ಸೇರಿಕೊಂಡಿದೆ.’ ಇದನ್ನು ಸುಲಭವಾಗಿ ಹೇಳಬೇಕೆಂದರೆ, ಪುರಾಣವನ್ನು ಅದರ ಪೌರಾಣಿಕತೆಯಿಂದ ಕಳಚುವುದು. ಈ ಕ್ರಮ ನಮ್ಮ ಸಂಸ್ಕೃತಿಗೆ ಒಗ್ಗುವ ಸಂಗತಿಯೇ? ಕೆಲವರಿಗೆ ‘ಪುರಾಣ’ ಎಂದರೆ ಕಲ್ಪನೆ, ಊಹೆಗಳಿಂದ ಕಟ್ಟಿಕೊಂಡ ಕಥೆಗಳು ಮಾತ್ರವೇ. ಇವುಗಳಿಗೆ ಇತಿಹಾಸದ ಶಿಷ್ಟಗುಣಗಳು ಇರದು; ತರ್ಕ–ಅರ್ಥ–ವಾಸ್ತವಿಕತೆಗಳ ಬಲವೂ ಇರದು; ಹೀಗಾಗಿ ಅವನ್ನು ನಮ್ಮ ಪ್ರತಿಭೆಯಿಂದ ಅರ್ಥೈಸಿ ಉಳಿಸಬೇಕಿದೆ ಎಂದೂ ಕೆಲವರು ಯೋಚಿಸುವುದುಂಟು.
  • ಮಾನವತಾವಾದ ತನ್ನ ತಾಪಮಾನಕ್ಕೆ ಒಗ್ಗುವಂತೆ ಜಗತ್ತಿನ ಪ್ರತಿಯೊಂದು ವಸ್ತುವನ್ನೂ ಹದಗೊಳಿಸಿ ಇಡಬೇಕೆನ್ನುತ್ತದೆ’ ಎಂದ ಕೀರ್ತಿನಾಥ ಕುರ್ತಕೋಟಿಯವರ ಮಾತು ಇಲ್ಲಿ ಮನನೀಯ. ಮಾನವತಾವಾದ ಎಂದರೆ ಪ್ರಜ್ಞಾವಲಯದಿಂದ ಹೊರಗೆ ನಿಂತು, ನಮ್ಮ ಬುದ್ಧಿ–ತರ್ಕವನ್ನಷ್ಟೆ ನಂಬಿ ಇತಿಹಾಸವನ್ನು ಕಟ್ಟುತ್ತ ಅದಕ್ಕೆ ಪ್ರಗತಿಶೀಲತೆಯ ಅಲಂಕಾರವನ್ನು ಮಾಡುವುದು.
  • ಇತಿಹಾಸವನ್ನು ಕುರಿತು ನಮಗಿರುವ ಭಯವೇ ಪುರಾಣವನ್ನೂ ಇತಿಹಾಸದ ಚೌಕಟ್ಟಿಗೆ ಬಗ್ಗಿಸಲು ನಮ್ಮ ಮೇಲೆ ಒತ್ತಡವನ್ನು ಹೇರುತ್ತದೆ. ಆದರೆ ಪುರಾಣಪ್ರಜ್ಞೆಯಿಂದ ವಂಚಿತವಾದ ಮನಸ್ಸು ಜಗತ್ತಿನ ಬಗ್ಗೆ ಉಲ್ಲಾಸ–ನಂಬಿಕೆಗಳನ್ನು ಕಳೆದುಕೊಂಡು ಬದುಕನ್ನು ಒಂದು ಹೊರೆಯಂತೆ ಕಾಣುವಂತಾಗುತ್ತದೆ; ಅರಿವಿನ ವಿಶ್ವಾತ್ಮಕತೆಯನ್ನು ಅದು ತರ್ಕದ ಗೂಟಕ್ಕೆ ಬಿಗಿಯುತ್ತದೆ.

ಪುರಾಣದ ಕಲ್ಪನೆಗಳು - ನಂಬಿಕೆಗಳು ಹಾಗೆಯೇ ಇರಲಿ?[ಬದಲಾಯಿಸಿ]

  • ‘Men live by myths, ... they are no mere poetic invention’ – ಆನಂದ ಕುಮಾರಸ್ವಾಮಿಯವರು ಉಲ್ಲೇಖಿಸುವ ಈ ಮಾತು ನಮ್ಮ ಸಂಸ್ಕೃತಿಗೆ ಒಪ್ಪುವಂಥದ್ದು; ಒಗ್ಗಿರುವಂಥದ್ದು. ಪುರಾಣಗಳು ನಮ್ಮಲ್ಲಿ ಹೇಗೆ ಜೀವಿಸುತ್ತವೆ, ಅಥವಾ ಪುರಾಣಗಳಲ್ಲಿ ನಾವು ಹೇಗೆ ಬದುಕುತ್ತಿರುತ್ತೇವೆ ಎನ್ನುವುದನ್ನು ವಿಶದೀಕರಿಸಲು ಕುರ್ತಕೋಟಿಯವರ ಈ ಮಾತುಗಳು ನೆರವಾಗುತ್ತವೆ:
  • ‘ಮನುಷ್ಯನ ಇತಿಹಾಸ ಪ್ರಾರಂಭವಾಗುವದಕ್ಕಿಂತ ಮೊದಲಿನ ಸಂಗತಿಗಳಿಗೆ ಸಂಬಂಧಿಸಿದವುಗಳೆಂದು ಅವುಗಳನ್ನು ‘‘ಪುರಾಣ’’ ಎಂದು ಕರೆಯಬೇಕಾಯಿತು. ಆ ದೃಷ್ಟಿಯಿಂದ ನೋಡಿದಾಗ ನಮ್ಮ ಇತಿಹಾಸ ತೀರ ಅರ್ವಾಚೀನವಾದದ್ದು. ಆದರೂ ಪೌರಾಣಿಕ ಪ್ರತಿಭೆ ಬೇಗ ಅಳಿದುಹೋಗಲಿಲ್ಲ. ವಿಶ್ವದ ಉತ್ಪತ್ತಿ ಮತ್ತು ಅದರ ಸ್ಥಿತಿಗತಿಗಳ ಬಗ್ಗೆ, ದೇವಮಾನವ ಸಂಬಂಧದ ಬಗ್ಗೆ ಹೊಸ ಹೊಸ ಪೌರಾಣಿಕ ಕಲ್ಪನೆಗಳು ಕಾಲಕಾಲಕ್ಕೆ ಪ್ರಕಟವಾಗುತ್ತಲೇ ಬಂದಿವೆ.
  • ಇದರಿಂದಾಗಿ ನಮ್ಮ ಸಾಮಾಜಿಕ ಸಂಸ್ಕೃತಿಯ ರೂಪುರೇಷೆಗಳು, ನಮ್ಮ ಜ್ಞಾನದ ಪರಿಸೀಮೆಗಳು ಪುರಾಣಗಳಲ್ಲಿ ಕಾಣಸಿಗುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯನ ಸಾರ್ವತ್ರಿಕ ಪ್ರಜ್ಞೆಯ ಬೇರುಗಳು ನಮಗೆ ಪುರಾಣಗಳಲ್ಲಿಯೇ ದೊರೆಯುತ್ತವೆ. ದಂತಕತೆಗಳು, ಭೂತಪ್ರೇತಗಳ ಕತೆಗಳು, ಕಲ್ಪಕ ಕತೆಗಳು, ಜಾನಪದ ನಂಬಿಕೆಗಳು ಇವೆಲ್ಲವೂ ನಮ್ಮ ಪೌರಾಣಿಕತೆಯ ಅಂಶಗಳೇ ಆಗಿವೆ. ಸೂರ್ಯಚಂದ್ರರ ಗ್ರಹಣಗಳ ಬಗ್ಗೆ ಈಗ ಇರುವ ತಿಳಿವಳಿಕೆ ಕೂಡ, ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಹಳೆಯದೇ.
  • ಇಡಿಯ ರಾಮಾಯಣದ ಕಥನವನ್ನು ಸೀತೆಯ ದಾರಿಯಲ್ಲಿ ನಿರ್ಮಿಸಿರುವ ಭೈರಪ್ಪನವರು ರಾಮಾಯಣಕ್ಕಿರುವ ಮತ್ತೊಂದು ಹೆಸರನ್ನಂತೂ ಸಾರ್ಥಕಗೊಳಿಸಿದ್ದಾರೆ. ಈ ಕಾರಣದಿಂದ ಕಥನದ ಉದ್ದಕ್ಕೂ ಹಲವು ಪಾತ್ರಗಳನ್ನು ಪೋಷಿಸಿದ್ದಾರೆ, ಸೃಷ್ಟಿಸಿದ್ದಾರೆ ಕೂಡ. ಊರ್ಮಿಳೆಯ ಪಾತ್ರದ ಬೆಳವಣಿಗೆ, ಲಕ್ಷ್ಮಣನ ವ್ಯಕ್ತಿತ್ವಕ್ಕೆ ಒದಗಿಸಿದ ಆಯಾಮ, ಧರ್ಮಸಭೆ ಮುಂತಾದವು ಅವರ ಕಾವ್ಯಸೃಷ್ಟಿಶಕ್ತಿಗೆ ನಿದರ್ಶನಗಳಾಗಿವೆ.

ಸೀತೆಯ ಡೈರಿ[ಬದಲಾಯಿಸಿ]

  • ಆದರೆ ಒಟ್ಟು ಕಥನಶೈಲಿ ಒಂದು ವರದಿಯಂತೆ, ಸೀತೆಯ ‘ಡೈರಿ’ಯಂತೆ ಸಾಗಿ, ಗಾಢವಾದ ಕಾವ್ಯಾನುಭವವನ್ನು ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಅತಿಯಾದ ವಾಸ್ತವಪ್ರಜ್ಞೆಯ ಹೊರೆಯೂ ಕಥೆಯ ನಡಿಗೆಯನ್ನೂ ಕಾವ್ಯಸಂಭ್ರಮವನ್ನೂ ಕುಂಠಿತಗೊಳಿಸಿದೆ. ಅತಿ ವಾಸ್ತವದ ನಿರೂಪಣೆಗೊಂದು ಉದಾಹರಣೆಯನ್ನು ನೋಡಬಹುದು. ಅಹಲ್ಯೆ ಮತ್ತು ರಾಮನ ಸಂದರ್ಶನದ ಆರಂಭದ ಸಂಭಾಷಣೆಯ ತುಣುಕೊಂದು ಹೀಗಿದೆ:
  • ‘ನಮ್ಮ ಊಟವಾಗಿದೆ. ನೀನು ಹಸಿದಿದ್ದೀಯ. ನೀನು ಉಣ್ಣು,’ ರಾಮ ಹೇಳಿದ. (ಅಹಲ್ಯೆಗೆ)
  • ‘ದಿನಗಟ್ಟಲೆ ಉಪವಾಸ ಮಾಡುವ ನನಗೆ ಹಸಿವಿನ ಬಾಧೆಯೇ ಇಲ್ಲ. ಯಾರೋ ಪುಣ್ಯಾತ್ಮರು ಅನ್ನ, ನೀರು ಇಟ್ಟು ಹೋಗುತ್ತಾರೆ. ಯಾರೆಂತ ಗೊತ್ತಿಲ್ಲ. ಅನ್ನ ಬಹುತೇಕ ಹಕ್ಕಿ ಪಕ್ಷಿಗಳಿಗೆ ಆಹಾರವಾಗುತ್ತೆ. ನೀರು ಮಾತ್ರ ನನ್ನ ಹೊಟ್ಟೆಗೆ, ಮೈ ಬೆವರು ಒರೆಸಿಕೊಳ್ಳುಕ್ಕೆ, ಬಹಿರ್ದೆಸೆಗೆ’ ಎಂದಳು.
  • ಇನ್ನು ಸೀತೆ. ರಾಮನನ್ನು ಪ್ರಶ್ನಿಸುವ, ನಮ್ಮ ಸಹಾನುಭೂತಿಯನ್ನೂ ಗಳಿಸಿಕೊಳ್ಳುವ ಸೀತೆ, ‘ಉತ್ತರಕಾಂಡ’ದಲ್ಲಿ ‘ಸೀತೆ’ಯೇ ಆಗಿದ್ದಾಳೆಯೆ ಎಂಬ ಪ್ರಶ್ನೆಗೂ ಕಾರಣವಾಗುತ್ತಾಳೆ. ಹೀಗಿದ್ದರೂ ‘ಉತ್ತರಕಾಂಡ’ ನಮ್ಮನ್ನು ವಾಲ್ಮೀಕಿ ರಾಮಾಯಣದ ಓದಿಗೆ, ಮರು ಓದಿಗೆ ಪ್ರಚೋದಿಸುತ್ತದೆ ಎನ್ನುವುದೂ ಸುಳ್ಳಲ್ಲ. ಇದು ಕಾದಂಬರಿಯ ಸಾಫಲ್ಯ.[೪]
  • (ಲೇಖಕ:ಎಸ್.ಎಲ್. ಭೈರಪ್ಪ;ಪ್ರಕಾಶಕರು :ಸಾಹಿತ್ಯ ಭಂಡಾರ, ಜಂಗಮ ಮೇಸ್ತ್ರಿಗಲ್ಲಿ, ಬಳೇಪೇಟೆ, (ಮಲಬಾರ್ ಹೋಟೆಲ್ ಎದುರು ಗಲ್ಲಿ), ಬೆಂಗಳೂರು– 560053;ಪ್ರಕಟವಾದ ವರ್ಷ:2017;ಪುಟ : 336;ಬೆಲೆ ರೂ.375)

ಮಾನವಸಹಜ- ಭೈರಪ್ಪನವರ ಸೀತೆ[ಬದಲಾಯಿಸಿ]

  • ‘ಉತ್ತರಕಾಂಡ’ ಕಾದಂಬರಿಯು ವಾಲ್ಮೀಕಿ ರಾಮಾಯಣಕ್ಕೆ ತಮ್ಮ ಸೃಜನಶೀಲ ಪ್ರತಿಕ್ರಿಯೆಯೆಂದು ಎಸ್‌.ಎಲ್‌. ಭೈರಪ್ಪನವರು ಪ್ರಾರಂಭದಲ್ಲಿಯೇ ಹೇಳುತ್ತಾರೆ. ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳನ್ನು ಹಡೆದಿರುವ ಪರಿತ್ಯಕ್ತ ಸೀತೆ ತನ್ನ ದನಿಯಲ್ಲಿಯೇ ರಾಮಾಯಣದ ಕಥೆಯನ್ನು ಹೇಳುತ್ತಾಳೆ. ಇಲ್ಲಿನ ಕಥೆ ಅವಳ ಬದುಕಿಗೆ ಸಂಬಂಧಿಸಿದಂತೆ ಸಾಗುತ್ತ ನಡೆಯುತ್ತದೆ. ಸೀತೆಯು ತನಗೆ ತಾನೆ ಮಾತನಾಡಿಕೊಳ್ಳುತ್ತ ವಿವರಿಸಿಕೊಳ್ಳುವ ‘ಉತ್ತರಕಾಂಡ’ದ ಸ್ವಗತಧಾಟಿಯ ಕಥನಶೈಲಿ ಭೈರಪ್ಪನವರಿಗೆ ಹೊಸದೇನಲ್ಲ.
  • ಗಾತ್ರದಲ್ಲಿ ‘ಪರ್ವ’ದ ಅರ್ಧದಷ್ಟಿರುವ ‘ಉತ್ತರಕಾಂಡ’ದಲ್ಲಿ ಸೀತೆಯೊಬ್ಬಳೇ ಕಥನವನ್ನು ನಿರೂಪಿಸುತ್ತಾಳೆ. ಸ್ತ್ರೀ ಪಾತ್ರವೊಂದನ್ನು ಭೈರಪ್ಪನವರು ಕಥನದ ಕೇಂದ್ರದಲ್ಲಿರಿಸಿಕೊಂಡಿದ್ದಾರೆ. ಸೀತೆಯನ್ನು ‘ಕರ್ತೆ’ (ಏಜೆಂಟ್) ಆಗಿ ನೋಡುವ ಪ್ರಯತ್ನವನ್ನು ಸಹ ಅವರು ಮಾಡುತ್ತಾರೆ. ಸ್ತ್ರೀವಾದಿಯೆಂಬ ಹಣೆಪಟ್ಟಿಯನ್ನು ಭೈರಪ್ಪನವರಿಗೆ ಯಾರೂ ಕೊಡದಿರಬಹುದು. ಆದರೆ ಸೀತೆಯನ್ನು ಸ್ವಾಯತ್ತ, ಸದೃಢ ಮತ್ತು ಸ್ವತಂತ್ರ ಯೋಚನೆಯನ್ನು ಮಾಡುವ ಶಕ್ತಿಯಿರುವ ರಕ್ತ, ಮಾಂಸಗಳಿಂದ ಕೂಡಿದ ಮನುಷ್ಯೆಯಾಗಿ ಓದುಗನ ಮುಂದಿಡುವ ಪ್ರಯತ್ನವನ್ನು ಅವರು ಮಾಡುತ್ತಾರೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
  • ಹಾಗಾದರೆ ಭೈರಪ್ಪನವರು ಸೃಷ್ಟಿಸುವ ಸೀತೆ ಯಾರು? ಕಾದಂಬರಿಯ ಪ್ರಾರಂಭದಲ್ಲಿಯೇ ನಮಗೆ ತಿಳಿಯುವಂತೆ ತನ್ನ ಇಬ್ಬರು ಶಿಶುಮಕ್ಕಳಿಗೆ ಅಗತ್ಯವಿರುವ ಎದೆಹಾಲನ್ನು ಉತ್ಪಾದಿಸಲು ಹೆಣಗುತ್ತಿರುವ ಹೆಣ್ಣುಮಗಳು. ಗಂಡ ರಾಜ ರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ವಾಸವಾಗಿದ್ದಾಳೆ. ಅವಳ ಜೊತೆಗೆ ಸುಕೇಶಿಯೆಂಬ ಸಖಿಯಿದ್ದಾಳೆ. ಸುಕೇಶಿ ಮಿಥಿಲೆಯವಳು ಮತ್ತು ಸೀತೆಯ ವಿವಾಹದ ನಂತರ ಅಯೋಧ್ಯೆಗೆ ಅವಳೊಡನೆ ಬಂದವಳು. ಅಯೋಧ್ಯೆಯಲ್ಲಿಯೇ ಮದುವೆಯಾಗಿ, ಸೀತೆಯ ವನವಾಸದ ಸಮಯದಲ್ಲಿ ಸುಕೇಶಿ ಅಲ್ಲಿಯೇ ತನ್ನ ಗಂಡ ಮಕ್ಕಳೊಡನೆ ಇದ್ದಳು. ಈಗ ಸೀತೆಗೆ ಮಕ್ಕಳಾದ ಸುದ್ದಿ ಕೇಳಿ ಅವಳನ್ನು ನೋಡಿಕೊಳ್ಳಲು ವಾಲ್ಮೀಕಿಯ ಆಶ್ರಮಕ್ಕೆ ಬಂದಿದ್ದಾಳೆ. ಆಶ್ರಮದಲ್ಲಿದ್ದರೂ ಸುಕೇಶಿ ಮತ್ತು ಅವಳ ಸಂಸಾರದ ಸದಸ್ಯರನ್ನು ಒಳಗೊಂಡ ಪ್ರತ್ಯೇಕ ಬದುಕು ಸೀತೆಗಿದೆ. ತಂಗಿ ಊರ್ಮಿಳೆ ಆಗಾಗ ಬಂದುಹೋಗುತ್ತಾಳೆ ಮತ್ತು ಒಂದಷ್ಟು ದವಸಧಾನ್ಯಗಳನ್ನು ತರುತ್ತಾಳೆ.
  • ಭೈರಪ್ಪನವರ ಸೀತೆ ಎಲ್ಲ ಮಾನವಸಹಜ ಶಕ್ತಿ-ದೌರ್ಬಲ್ಯಗಳನ್ನು ಹೊಂದಿರುವ, ಕ್ಲೇಶಗಳನ್ನು ಅನುಭವಿಸುವ ಪಾತ್ರ. ಹಾಗಾಗಿಯೇ ತವರುಮನೆಯ ಹಿನ್ನೆಲೆಯ ಹೆಣ್ಣುಮಗಳೊಬ್ಬಳ ಸಖ್ಯ, ಮಾರ್ಗದರ್ಶನ ಹೊಸತಾಯಿಗೆ ಅಗತ್ಯವಿದೆ. ಹೀಗೆ ನಮಗೆ ಪರಿಚಿತಳಾಗುವ ಸೀತೆಯ ಬದುಕಿನ ಕಥನ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದುದೇನಲ್ಲ. ಜನಕರಾಜನ ಔರಸಪುತ್ರಿಯಾದ ಸೀತೆಯು ಶಿವಧನುಸ್ಸನ್ನು ಮುರಿದ ರಾಮನನ್ನು ಮದುವೆಯಾದಳು. ರಾಮ-ಲಕ್ಷ್ಮಣರೊಡನೆ ವನವಾಸದಲ್ಲಿದ್ದಾಗ ರಾವಣನಿಂದ ಅಪಹೃತಳಾದಳು. ರಾವಣನನ್ನು ರಾಮ ಯುದ್ಧದಲ್ಲಿ ಸೋಲಿಸಿ, ಕೊಂದ ನಂತರ ಅವನಿಂದ ಮೊದಲ ಬಾರಿಗೆ ಪರಿತ್ಯಕ್ತಳಾಗಿ, ಅಗ್ನಿಪ್ರವೇಶ ಮಾಡಿದಳು. ಆಯೋಧ್ಯೆಗೆ ವಾಪಸಾದ ಬಳಿಕ, ಪ್ರಜಾನಿಂದನೆಯ ಕಾರಣದಿಂದ ರಾಮನಿಂದ ಎರಡನೆಯ ಬಾರಿಗೆ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯ ಪಡೆದಳು. ಅಲ್ಲಿಯೇ ಲವ-ಕುಶರಿಗೆ ಜನ್ಮ ನೀಡಿದಳು. ಆದರೆ ರಾಮಾಯಣದ ಸೀತೆಯನ್ನು ಹಸಿವು-ನೀರಡಿಕೆಯಾಗುವ, ಸುಕೇಶಿಯಂತಹ ತವರಿನಿಂದ ಬಂದ ಸೇವಕಿಯ ಅಗತ್ಯವಿರುವ ಮನುಷ್ಯೆಯಾಗಿ ನಾವು ನೋಡುವುದಿಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಕಥನಗಳಿಗೆ ನಮ್ಮ ವಾಸ್ತವವನ್ನು ಮರೆಯುವಂತೆ ಮಾಡುವ ಮಾಂತ್ರಿಕ ಗುಣವಿರುತ್ತದೆ. ‘ಉತ್ತರಕಾಂಡ’ವು ಸಾಹಿತ್ಯ, ಕಲೆಗಳಿಗಿರುವ ಇಂತಹ ಸಾಧ್ಯತೆಯನ್ನು ಕಿತ್ತುಹಾಕುವುದರಲ್ಲಿ ಉತ್ಸುಕವಾಗಿದೆ. ಅದಕ್ಕಾಗಿಯೇ ಇಲ್ಲಿ ಪುಷ್ಪಕವಿಮಾನವಿಲ್ಲ. ಸೀತೆಯನ್ನು ಹೊತ್ತ ರಾಕ್ಷಸರು ಲಂಕೆಯ ತನಕ ಓಡುತ್ತಾರೆ.
  • ಯಾಗ ಮಾಡಲೋಸುಗ ಭೂಮಿಯನ್ನು ಉಳುತ್ತಿದ್ದ ಜನಕರಾಜನಿಗೆ ದೊರಕಿದ ಸೀತೆಯ ಹುಟ್ಟಿನ ಬಗ್ಗೆ ಯಾರೂ ಪ್ರಶ್ನೆಗಳನ್ನು ಕೇಳಲಿಲ್ಲವೇ? ಈ ಪ್ರಶ್ನೆ ದಶರಥನ ಮನಸ್ಸಿನಲ್ಲಿಯೇ ಮೂಡಿತು. ಹಾಗಾಗಿ ಅವನು ಸೀತೆಯನ್ನು ತನ್ನ ಸೊಸೆಯನ್ನಾಗಿಸಿಕೊಳ್ಳಲು ನಿರಾಕರಿಸಿದಾಗ, ಸ್ವತಃ ರಾಮನೇ ಮಧ್ಯಪ್ರವೇಶಿಸುತ್ತಾನೆ: ವಿಶ್ವಾಮಿತ್ರರ ಸೂಚನೆಯಂತೆ ತಾನು ಶಿವಧನುಸ್ಸನ್ನು ಮುರಿದ ನಂತರ ಸೀತೆಯನ್ನು ವರಿಸಿದಂತಾಯಿತು. ಏಕಪತ್ನಿವ್ರತಸ್ಥನಾದ ತಾನು ಬೇರೆಯ ಹುಡುಗಿಯನ್ನು ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿ, ದಶರಥನನ್ನು ಒಪ್ಪಿಸುತ್ತಾನೆ. ಭೈರಪ್ಪನವರ ಕಥನದಲ್ಲಿ ಕರ್ತವ್ಯ ಮತ್ತು ಧರ್ಮಪ್ರಜ್ಞೆಗಳು ರಾಮನನ್ನು ಕೇವಲ ಸೀತೆಯನ್ನು ತ್ಯಜಿಸುವಂತೆ ಮಾಡಲಿಲ್ಲ. ಅದಕ್ಕೂ ಮೊದಲು ರಾಮ-ಸೀತೆಯರ ಮದುವೆಗೂ ದಾರಿ ಮಾಡಿಕೊಡುತ್ತವೆ. ಕುತೂಹಲದ ವಿಷಯವೆಂದರೆ ರಾಮನ ಮೇಲೆ ಸೀತೆಗೆ ಪ್ರೀತಿ ಹುಟ್ಟುವುದು ಸಹ ಈ ಕಾರಣದಿಂದಲೇ.
  • ‘ಉತ್ತರಕಾಂಡ’ದಲ್ಲಿ ಸೀತೆ ಕೃಷಿಕಳಾಗಲು ನಿರ್ಧರಿಸುತ್ತಾಳೆ. ತನ್ನ ಚಾರಿತ್ರ್ಯವನ್ನು ಸೀತೆ ಮಾಯಾಮೃಗ ಪ್ರಸಂಗದಲ್ಲಿ ಶಂಕಿಸಿದ ನಂತರ ಲಕ್ಷ್ಮಣ ಜೀವನಪರ್ಯಂತ ಅವಳೊಡನೆ ಮಾತು ಬಿಡುತ್ತಾನೆ. ವಾಸ್ತವಿಕ ನೆಲೆಯ ಕಾದಂಬರಿಯನ್ನು ರಚಿಸುವಾಗಿನ ಸವಾಲುಗಳನ್ನು ಭೈರಪ್ಪನವರು ಎದುರಿಸುವ ರೀತಿಯನ್ನು ಗಮನಿಸಲು ‘ಉತ್ತರಕಾಂಡ’ದ ಮತ್ತೊಂದು ಉದಾಹರಣೆಯನ್ನು ಪರಿಗಣಿಸಿ. ಮೊದಲಿಗೆ, ಕೈಕೇಯಿ ಮತ್ತು ದಶರಥರ ಸಂಬಂಧ. ಮಕ್ಕಳು ಬೇಕೆಂದು ಹಂಬಲಿಸುತ್ತಿದ್ದ ದಶರಥ ಕೈಕೇಯಿಯನ್ನು ಮದುವೆಯಾಗುವಾಗ, ಅವಳ ಮಗನನ್ನೇ ತನ್ನ ಉತ್ತರಾಧಿಕಾರಿಯಾಗಿ ಮಾಡುವುದಾಗಿ ವಚನ ನೀಡಿರುತ್ತಾನೆ. ಮಕ್ಕಳಾದ ಮೇಲಂತೂ, ಕೌಸಲ್ಯ ಮತ್ತು ಸುಮಿತ್ರೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರಿಗೆ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನೂ ನೀಡುವುದಿಲ್ಲ. ಕೌಸಲ್ಯೆಯ ತವರುಮನೆಯವರು ಉಡುಗೊರೆಯಾಗಿ ನೀಡಿದ್ದ 50 ಹಳ್ಳಿಗಳ ಉತ್ಪನ್ನದಿಂದ ಅವರಿಬ್ಬರ (ಹಾಗೂ ರಾಮ-ಲಕ್ಷ್ಮಣರ ಬಾಲ್ಯದ) ಬದುಕು ಸಾಗುತ್ತದೆ. ತನಗಿಂತ ತುಂಬ ಕಿರಿಯಳಾದ, ತುಂಬ ಸುಂದರಿಯಾದ ಹೆಂಡತಿಯ ಪ್ರಭಾವ ದಶರಥನ ಮೇಲೆ ಹೇಗಾಗಬಹುದು ಎನ್ನುವ ಪ್ರಶ್ನೆಯು ಇಂತಹ ವಿವರಣೆಗೆ ದಾರಿ ಮಾಡಿಕೊಡುತ್ತದೆ.
  • ಆದರೆ ವಾಸ್ತವಿಕತೆಯ ಭಾರ ರಾಮಾಯಣದ ಮಾಂತ್ರಿಕತೆಯನ್ನೂ, ನೈತಿಕ ಸಾಧ್ಯತೆಗಳನ್ನೂ ಹೊಸಕಿಬಿಡುತ್ತದೆ. ‘ಉತ್ತರಕಾಂಡ’ದ ಎಲ್ಲ ಪಾತ್ರಗಳು ಸ್ವಹಿತಾಸಕ್ತಿಯ ಕೇಂದ್ರದಿಂದ, ಸಂಕುಚಿತ ನೆಲೆಯಿಂದ ಮಾತ್ರ ಯೋಚಿಸುವಂತೆ ತೋರುತ್ತದೆ. ಹಾಗಾಗಿ ಅಲ್ಲಿನ ಪಾತ್ರಗಳು ಹಾಗೂ ಸನ್ನಿವೇಶಗಳಿಗಿರುವ ಉದಾತ್ತತೆಯ ಸಾಧ್ಯತೆಗಳು ಕಡಿಮೆಯಾಗುತ್ತ ಹೋಗುತ್ತವೆ. ನನ್ನ ಮೇಲಿನ ಮಾತಿಗೆ ಅಪವಾದವೆಂದು ಧರ್ಮವನ್ನು ಪರಿಪಾಲಿಸುವ ರಾಮನನ್ನೇ ಉದಾಹರಣೆಯಾಗಿ ಕೊಡಬಹುದು. ಆದರೆ ರಾಮ-ಲಕ್ಷ್ಮಣರೂ ಸೇರಿದಂತೆ ಇಲ್ಲಿನ ಎಲ್ಲ ಪಾತ್ರಗಳು ಸಹ ದುರ್ಬಲವಾಗಿವೆಯೇ ಚಿತ್ರಿತವಾಗಿವೆ. ಮನುಷ್ಯನ ವಾಸ್ತವ ಇದೇನೆ ಎಂದು ಅವರ ಸಮರ್ಥಕರು ವಾದಿಸಬಹುದು. ಅಂತಹ ವಾಸ್ತವವಾದಿ ನೆಲೆಯಿಂದಲೇ ಭೈರಪ್ಪನವರ ಸೃಜನಶೀಲತೆ ಹುಟ್ಟುತ್ತದೆ.[೫]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಭೈರಪ್ಪನವರ ಹೊಸ ಕಾದಂಬರಿ 'ಉತ್ತರಕಾಂಡ' 16ರಿಂದ ಲಭ್ಯ".
  2. "ಭಾರತೀಯ ಸ್ತ್ರೀವಾದದ ನೆಲೆಯ 'ಉತ್ತರಕಾಂಡ'".[ಶಾಶ್ವತವಾಗಿ ಮಡಿದ ಕೊಂಡಿ]
  3. "ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ 'ಉತ್ತರಕಾಂಡ' ಭರ್ಜರಿ ಮಾರಾಟ". Archived from the original on 2017-01-18. Retrieved 2017-01-18.
  4. "ಉತ್ತರಕಾಂಡ;ಎಸ್‌. ಸೂರ್ಯಪ್ರಕಾಶ ಪಂಡಿತ್‌;28 Jan, 2017;prajavani;". Archived from the original on 2017-01-31. Retrieved 2017-01-30.
  5. "ಪೃಥ್ವಿ ದತ್ತ ಚಂದ್ರ ಶೋಭಿ;ವಾಸ್ತವಿಕ ನೆಲೆಯ ಕಾದಂಬರಿ ರಚನೆಯ ಸವಾಲು;17 Mar, 2017". Archived from the original on 2017-03-19. Retrieved 2017-03-17.