ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟವು ಕ್ರಿ.ಶ. ೧೮೩೭ರಲ್ಲಿ ಬ್ರಿಟಿಷರ ವಿರುದ್ಧ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಗ ಜನರ ಮುಂದಾಳತ್ವದಿಂದ ನಡೆದ ಸ್ವಾತಂತ್ರ್ಯ ಹೋರಾಟ. ಇದನ್ನು ಕೊಡಗು-ಕೆನರಾ ಬಂಡಾಯ, ಕಲ್ಯಾಣಪ್ಪನ ಕಾಟಕಾಯಿ, ಅಮರ ಸುಳ್ಯದ ರೈತರ ದಂಗೆ ಎಂದೂ ಕರೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಕ್ರಿ.ಶ. ೧೮೫೭ರಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷ್ ಆಡಳಿತ ಸಿಪಾಯಿ ದಂಗೆಯೆಂದು ಪ್ರತಿಬಿಂಬಿಸಿದರೂ ಭಾರತೀಯರು ಬ್ರಿಟಿಷರ ವಿರುದ್ಧ ನಡೆಸಿದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಚರಿತ್ರೆಯಲ್ಲಿ ದಾಖಲಾಗಿದೆ. ಆದರೆ ಇದಕ್ಕಿಂತ ೨೦ ವರ್ಷಗಳ ಪೂರ್ವದಲ್ಲಿಯೇ ಹಿಂದೊಮ್ಮೆ ಕೊಡಗಿನ ಅವಿಭಾಜ್ಯ ಅಂಗವಾಗಿದ್ದ ಸುಳ್ಯದ ಪಕ್ಕದ ಕುಗ್ರಾಮವಾಗಿದ್ದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಆರಂಭವಾಗಿ ಪೂರ್ತಿ ಮೇಲಿನ ಹಾಗೂ ಕೆಳಗಿನ ಕೊಡಗು ಮತ್ತು ಪೂರ್ತಿ ದಕ್ಷಿಣ ಕನ್ನಡಕ್ಕೆ ಹರಡಿ ಬ್ರಿಟಿಷರಿಗೆ ಸೆಡ್ಡು ಹೊಡೆದ ರೈತಾಪಿ ಸಮೂಹದ ಹೋರಾಟವು ಇಂದು ಅಮರ ಸುಳ್ಯ ಹೋರಾಟವೆಂದು ದಾಖಲಾಗಿರುತ್ತದೆ.[೧]

೧೮೩೪ರ ಸುಮಾರಿಗೆ ಅತ್ತ ಕೊಡಗಿನಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕ ವೀರರಾಜೇಂದ್ರನನ್ನು ಬ್ರಿಟಿಷರು ಪಟ್ಟದಿಂದ ಕೆಳಗಿಳಿಸಿ, ಅಲ್ಲಿನ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅಲ್ಲದೆ, ಪಂಜ ಸೀಮೆಗೆ ಒಳಪಟ್ಟಿದ್ದ ಪುತ್ತೂರು, ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಪ್ರದೇಶವನ್ನು ಬ್ರಿಟಿಷರು ವಿಭಜಿಸಿದ್ದಲ್ಲದೆ, ಹೆಚ್ಚುವರಿಯಾಗಿ ಕಂದಾಯವನ್ನು ಹೇರಿದ್ದು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರ, ಕುಂಬಳೆ, ಹೊಸದುರ್ಗ, ಬಂಟ್ವಾಳ, ಉಡುಪಿ, ಫರಂಗಿಪೇಟೆ, ಮಂಗಳೂರು, ಬ್ರಹ್ಮಾವರ, ಕುಂದಾಪುರ ಹೀಗೆ ಇಷ್ಟೂ ಭಾಗವನ್ನು ಸೌತ್ ಕೆನರಾ ಎಂದು ಬ್ರಿಟಿಷರು ಗುರುತಿಸಿದ್ದರು. ಟಿಪ್ಪು ಮರಣಾನಂತರ ಈ ಭಾಗದಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಬ್ರಿಟಿಷರು ಸುಳ್ಯ, ಕೊಡಗನ್ನೂ ಆಕ್ರಮಿಸಿದ್ದರು.[೨][೩]

ಹೋರಾಟಕ್ಕೆ ಕಾರಣಗಳು[ಬದಲಾಯಿಸಿ]

ದಕ್ಷಿಣ ಕನ್ನಡದ ಸುಳ್ಯ ಪುತ್ತೂರುಗಳು ಕೆನರಾ ಪ್ರಾಂತ್ಯವಾಗುವವರೆಗೆ ರಾಜನಿಗೆ ವಸ್ತುಗಳ ರೂಪದಲ್ಲಿ ಕಂದಾಯ ಕಟ್ಟುವ ಪದ್ಧತಿ ಇತ್ತು. ಇದನ್ನು ಬದಿಗೊತ್ತಿ ಬ್ರಿಟಿಷರು ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಹಣದ ರೂಪದಲ್ಲಿ ಕಂದಾಯ ಕಟ್ಟುವಂತೆ ಜನರ ಮೇಲೆ ಕಟ್ಟಳೆ ಹೇರಿದ್ದು ಹೈರಾಣು ಮಾಡಿತ್ತು. ತಮ್ಮನ್ನು ವಿದೇಶಿಯರು ಬಂದು ಆಳುತ್ತಿದ್ದಾರೆ, ಕಂದಾಯದ ನೆಪದಲ್ಲಿ ಹಣದ ರೂಪದಲ್ಲಿ ತಮ್ಮ ಬೆವರಿನಿಂದ ಗಳಿಸಿದ ಸಂಪತ್ತನ್ನು ಹೀರುತ್ತಿದ್ದಾರೆ ಎನ್ನುವುದು ಜನರಿಗೆ ಮನದಟ್ಟು ಆಗತೊಡಗಿತ್ತು. ಬೆಳೆ ಕೊಯ್ಲಿಗೆ ಬಂದ ಕೂಡಲೇ ಅದರ ಬಹುಪಾಲನ್ನು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಿ, ಹಣವನ್ನು ಕಂದಾಯ ರೂಪದಲ್ಲಿ ಕಟ್ಟುತ್ತಿದ್ದ ಸ್ಥಿತಿ ಜನರಲ್ಲಿ ಒಂದೆಡೆ ಹಸಿವು, ಮತ್ತೊಂದೆಡೆ ಆಡಳಿತದ ವಿರುದ್ಧ ದಂಗೆ ಏಳಲು ಪ್ರೇರಣೆಯಾಗಿತ್ತು.[೪]

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟಗಾರರು[ಬದಲಾಯಿಸಿ]

  1. ಜಂಗಮ ಕಲ್ಯಾಣಸ್ವಾಮಿ
  2. ಸ್ವಾಮಿ ಅಪರಂಪಾರ
  3. ಕರಿ ಬಸವಯ್ಯ
  4. ಗುಡ್ಡೆಮನೆ ಅಪ್ಪಯ್ಯ, ಕೊಡಗು (ಗುಡ್ಡೇರ ಅಪ್ಪಯ್ಯ ಗೌಡ )
  5. ಕೆದಂಬಾಡಿ ರಾಮ ಗೌಡ
  6. ಕುಜುಗೋಡು ಮಲ್ಲಪ್ಪ
  7. ಕುಡೆಕಲ್ಲು ಅಪ್ಪಯ್ಯ
  8. ಕುಡೆಕಲ್ಲು ಪುಟ್ಟ ಗೌಡ
  9. ಕುಕ್ಕನೂರು ಚೆನ್ನಯ್ಯ
  10. ಸಿರ್ಕಜೆ ಮಲ್ಲಯ್ಯ
  11. ಸುಬೇದಾರ್ ನೇರಪಾಂಡ ಮಾದಯ್ಯ, ಕೊಡಗು (ನಾಲ್ ನಾಡ್ ಸುಬೇದಾರ್ ಮಾದಯ್ಯ) ಕೊಡವ
  12. ಚೆಟ್ಟಿ ಕುಡಿಯ, ಕೊಡಗು
  13. ಕುರ್ತ ಕುಡಿಯ, ಕೊಡಗು
  14. ಕಾರ್ಯಕರ ಮಂಡೀರ ಉತಯ್ಯ, ಕೊಡಗು (ಪಾಡಿ ನಾಲ್ಕು ನಾಡು ಉತ್ತಾ) ಕೊಡವ
  15. ಕಾರ್ಯಕರ ಶಾಂತೆಯಂಡ ಮಲ್ಲಯ್ಯ, ಕೊಡಗು (ಹೆರವ ನಾಡ್) ಕೊಡವ
  16. ಪೆರಾಜೆ ಕೃಷ್ಣಯ್ಯ
  17. ಬೀರಣ್ಣ ಬಂಟ
  18. ಕುಂಚಡ್ಕ ರಾಮ ಗೌಡ
  19. ಹುಲಿಕಡಿದ ನಂಜಯ್ಯ
  20. ಲಕ್ಷ್ಮಪ್ಪ ಬಂಗಾರಸ
  21. ಕರಣಿಕ ಸುಬ್ಬಯ್ಯ
  22. ಊಕಣ್ಣ ಬಂಟ
  23. ಪಾಟೀಲ್ ಶಂಕರನಾರಾಯಣ
  24. ಮಾನೆಗಾರ ನಾರಣಪ್ಪ
  25. ಅಮೀನ್ ವೆಂಕಟ

ಉಲ್ಲೇಖಗಳು[ಬದಲಾಯಿಸಿ]

  1. "1834-37 ರ ಬ್ರಿಟಿಷರ ವಿರುದ್ಧ ವಿಶಾಲ ಕೊಡಗಿನ 'ಅಮರಸುಳ್ಯ ಸ್ವಾತಂತ್ರ್ಯ ಸಮರ' | News13". 30 October 2020.
  2. Karnataka, Headline. "ಬಾವುಟಗುಡ್ಡೆಯಲ್ಲಿ 13 ದಿನ ರಾರಾಜಿಸಿತ್ತು ಸ್ವಾತಂತ್ರ್ಯ ಬಾವುಟ ! ಸುಳ್ಯದ ರೈತರು ಹಚ್ಚಿದ್ದ ಸೇಡಿನ ಕಿಚ್ಚಿಗೆ ಬೆಚ್ಚಿ ಓಡಿದ್ದರು ಬ್ರಿಟಿಷರು !". Headline Karanataka (in English).{{cite web}}: CS1 maint: unrecognized language (link)
  3. Gaṇapati Rāv Aigaḷ, Em.̣. Dakṣiṇa Kannaḍa Jilleya prācīna itihāsa. Uḍupi: Rāṣṭrakavi Gōvinda Pai Saṃśōdhana Kēndra. ISBN 81-86668-47-0.
  4. Bhat, N. Shyam. South Kanara, 1799-1860 : a study in colonial administration and regional response (1st ed.). New Delhi, India: Mittal Publications. ISBN 978-81-7099-586-9.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: