ಹುಂಚ ಶ್ರೀ ಪದ್ಮಾವತಿ ಕ್ಷೇತ್ರ

ವಿಕಿಪೀಡಿಯ ಇಂದ
Jump to navigation Jump to search
ಹುಂಚ ಶ್ರೀ ಪದ್ಮಾವತಿ ಕ್ಷೇತ್ರ

ಜೈನ ಧರ್ಮದ ಉಛ್ರಾಯ ಕಾಲದಲ್ಲಿ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಆದರೆ ಆ ಧರ್ಮ ರಾಜರ ಅವನತಿಯೊಂದಿಗೆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಬಹು ಪ್ರಾಚೀನ ಕಾಲದಿಂದ ಆಧುನಿಕ ಯುಗವಾದ ಇಂದಿನ ದಿನದಲ್ಲೂ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಶ್ರೀಪದ್ಮಾವತಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ ಜೈನ ಧರ್ಮೀಯರ ಕಾಶಿಯಾಗಿ ನಿತ್ಯ ಹಿಂದೂ ಹಾಗೂ ಜೈನ ಧರ್ಮೀಯ ಭಕ್ತರನ್ನು ಆಕರ್ಷಿಸುತ್ತಿದೆ.

ಇಲ್ಲಿನ ಅಧಿದೇವತೆ ಶ್ರೀಪದ್ಮಾವತಿ ಜೈನರ ೨೩ ನೇ ತೀರ್ಥಂಕರ ಶ್ರೀಪಾರ್ಶ್ವನಾಥ ಸ್ವಾಮಿಯ ಯಕ್ಷಿಯಾಗಿದ್ದು ಜಿನದತ್ತ ರಾಜನಿಗೆ ಆಶ್ರಯನೀಡಿ ಸಾಮ್ರಾಜ್ಯ ಕರುಣಿಸಿದ ಕರುಣಾಮಯಿ. ಸಂತಾನಪ್ರಾಪ್ತಿ, ಉದ್ಯೋಗ ಲಭ್ಯತೆ, ವ್ಯಾಪಾರದಲ್ಲಿ ವೃದ್ಧಿ, ಭೂಮಿ ,ಧನ, ಕನಕ ಐಶ್ವರ್ಯಗಳ ಪ್ರಾಪ್ತಿ, ದುಷ್ಟ ಶಕ್ತಿ ನಿವಾರಣೆ, ಜಾನುವಾರುಗಳ ಸಂತಾನ ವೃದ್ಧಿ, ಸಮೃದ್ಧ ಹೈನು ಬಯಕೆ, ಶತ್ರು ಪೀಡೆ ಪರಿಹಾರ ,ಮಾನಸಿಕ ಶಾಂತಿ ಮತ್ತು ವಂಶೋದ್ಧಾರಕ್ಕಾಗಿ ಹಲವು ಜನರು ಹರಕೆ ಹೊತ್ತು ಈ ದೇವಿಗೆ ಪೂಜೆ ಸಲ್ಲಿಸುತ್ತಾರೆ. ತುಲಾಬಾರ, ನಂದಾದೀಪ, ಜಲ ಅಭಿಷೇಕ, ಪಂಚಾಮೃತ ಅಭಿಷೇಕ,ವರಹ ಪೂಜೆ, ಪಂಚಕಜ್ಜಾಯ ಸಮರ್ಪಣೆ ಇತ್ಯಾದಿ ಹರಕೆ ಕಾರ್ಯಗಳು ಪ್ರತಿನಿತ್ಯ ನಿರಂತರವಾಗಿ ಇಲ್ಲಿ ನಡೆಯುತ್ತಿದ್ದು ಸದಾ ಭಕ್ತರು ಮತ್ತು ಪ್ರವಾಸಿಗರಿಂದ ಕೂಡಿರುತ್ತದೆ.

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ[ಬದಲಾಯಿಸಿ]

ತಾಯಿ ಪದ್ಮಾವತಿ ದೇವಿ ಈ ಕ್ಷೇತ್ರದಲ್ಲಿ ಬಹುಕಾಲ ನೆಲೆಸಿ ಜಿನದತ್ತರಾಜನಿಗೆ ಈ ನಗರವನ್ನು ರಾಜಧಾನಿಯನ್ನಾಗಿ ದಯಪಾಲಿಸಿದಳು. ಆತನಿಗೆ ಸಮರ್ಥ ಆಡಳಿತಕ್ಕೆ ಪ್ರೇರೇಪಿಸಿ ಸಿಂಹಲಾಂಛನವನ್ನು ಕರುಣಿಸಿದಳು. ಸಾಮ್ರಾಜ್ಯದ ಉಚ್ಚ್ರಾಯದಿಂದ ಪದ್ಮಾವತಿ ದೇವಿಯ ಕಾರಣಿಕವೂ ಪ್ರಸಿದ್ಧಗೊಂಡಿತು. ಇಲ್ಲಿನ ಬಸದಿಯ ಹಿಂಭಾಗದಲ್ಲಿ ಬೃಹತ್ ನೆಕ್ಕಿ(ಲಕ್ಕಿ) ಮರವಿದ್ದು ಇದು ಪದ್ಮಾವತಿ ದೇವಿಯ ಮೂಲ ನೆಲೆ ಎನ್ನಲಾಗಿದೆ. ಈಗಲೂ ಸಹ ಈ ಮರದ ಕಟ್ಟೆಯ ಕೆಳ ಗೋಡೆಯ ಶಿಲಾ ಫಲಕದಲ್ಲಿ ಶ್ರೀಪದ್ಮಾವತಿ ದೇವಿ, ಕೆಳಗಡೆ ಅಶ್ವಾರೋಹಿಯಾಗಿ ದಂಡ ಹಿಡಿದಿರುವ ವಿಕ್ರಮ ಸಾಂತರ ಶಿಲ್ಪವಿದೆ.

ಹುಂಚ ಕ್ಷೇತ್ರಕ್ಕೆ ಸುಮಾರು ೧೫೦೦ ವರ್ಷಗಳ ಐತಿಹಾಸಿಕ ದಾಖಲೆಯಿದೆ.ಇದನ್ನು ಹುಂಚ, ಹೊಂಬುಜ, ಪೊಂಬುರ್ಚ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು ಎಂದು ಶಾಸನಗಳಿಂದ ವೇದ್ಯವಾಗುತ್ತದೆ. ಸಾಂತರಸರು ಈ ಸ್ಥಳವನ್ನು ರಾಜಧಾನಿಯನ್ನಾಗಿಸಿಕೊಂಡು ಸಾಂತಳಿಗೆ ಸಾಸಿರ ಎಂಬ ನಾಡು ಕಟ್ಟಿ ೧೦೦೦ ವರ್ಷಕ್ಕೂ ಅಧಿಕ ಕಾಲ ಆಳಿದರು ಎಂದು ದಾಖಲೆಗಳಿಂದ ತಿಳಿದು ಬರುತ್ತದೆ. ಹಿಂದೆ ಶೈವ, ವೈಷ್ಣವ ಧರ್ಮಿಯರ ನಾಡಾಗಿದ್ದು ಕ್ರಮೇಣ ಜೈನರ ಆಡಳಿತಕ್ಕೊಳಪಟ್ಟು ಈ ಕ್ಷೇತ್ರ ಜಿನಾಲಯ, ಬಸದಿಗಳ ಸಾಲು, ವಾಸ್ತು ವೈಭವ ಮತ್ತು ಧಾರ್ಮಿಕ ಪರಂಪರೆ ಸಂಸ್ಕೃತಿಗಳಿಂದ ಜೈನರ ಕ್ಷೇತ್ರವಾಗಿ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಜೈನ ಮತ್ತು ಹಿಂದೂ ಧರ್ಮೀಯರ ಶ್ರದ್ಧಾ ಕೇಂದ್ರವಾಗಿದೆ.

ಈ ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ.ಅಂತರದಲ್ಲಿ ಬಿಲ್ಲೇಶ್ವರವೆಂಬ ಸ್ಥಳವಿದ್ದು ಇಲ್ಲಿ ಕುಮದ್ವತಿ ನದಿಯ ಉಗಮಸ್ಥಾನವಿದೆ. ಉತ್ಸವಗಳಂದು ಈ ಕುಮದ್ವತಿ ತೀರ್ಥವನ್ನು ತಂದು ದೇವರಿಗೆ ಅಭಿಷೇಕ ಮಾಡುವ ಸಂಪ್ರದಾಯವಿದೆ.

ಪಾರ್ಶ್ವನಾಥ ಬಸದಿ[ಬದಲಾಯಿಸಿ]

ಇಲ್ಲಿನ ಮುಖ್ಯ ದೇವರಾದ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿ ವಿಶಾಲವಾಗಿದೆ. ಈ ವಿಗ್ರಹ ಧ್ಯಾನಸ್ಥ ಭಂಗಿಯಲ್ಲಿದ್ದು ನಿರಾಭರಣವಾಗಿದೆ. ಪ್ರತಿ ನಿತ್ಯ ಕ್ಷೀರ, ಶ್ರೀಗಂಧ,ಚಂದನ,ಅರಿಶಿನ ಮತ್ತು ಜಲಗಳ ಅಭಿಷೇಕ ಮಜ್ಜನ ನಡೆಯುತ್ತದೆ. ಇದೇ ಬಸದಿಯಲ್ಲಿ ಖಡ್ಗಾಸನ ಭಂಗಿಯ ಇನ್ನೂ ಎರಡು ಪಾರ್ಶ್ವನಾಥ ತೀರ್ಥಂಕರ ವಿಗ್ರಹವಿದೆ. ಜೊತೆಗೆ ಧರಣೇಂದ್ರ,ಯಕ್ಷ, ಪದ್ಮಾವತಿ ದೇವಿ ವಿಗ್ರಹ, ೨೪ ತೀರ್ಥಂಕರರ ವೃತ್ತಾಕಾರದ ಕಂಚಿನ ಲೋಹ ವಿಗ್ರಹ,ಮೇಲಂತಸ್ತಿನಲ್ಲಿ ಜಿಜಬಿಂಬ, ಶಿಲಾ ಸ್ತಂಭಗಳಲ್ಲಿ ಸುಂದರ ಕೆತ್ತನೆ ಹಾಗೂ ಬಸದಿಯ ಮುಂಭಾಗದ ಪ್ರವೇಶ ದ್ವಾರದಲ್ಲಿ ಎತ್ತರದ ಮಾನಸ್ತಂಭವಿದೆ.

ಶ್ರೀಪದ್ಮಾವತಿ ದೇವಿ ಬಸದಿ[ಬದಲಾಯಿಸಿ]

ಪಾರ್ಶ್ವನಾಥ ಬಸದಿಯ ಪಕ್ಕದಲ್ಲಿ ಶ್ರೀಪದ್ಮಾವತಿ ದೇವಿಯ ಬಸದಿಯಿದೆ. ಈ ದೇವಿಗೆ ಹಿಂದೂ ಮತ್ತು ಜೈನ ಧರ್ಮೀಯರು ಹರಕೆ,ಕಾಣಿಕೆ ಮತ್ತು ಪೂಜೆ ನೈವೇದ್ಯ ಸಮರ್ಪಿಸುತ್ತಾರೆ. ಶ್ರಾವಣಮಾಸದ ಶುಕ್ರವಾರ(ಸಂಪತ್ ಶುಕ್ರವಾರ) ದೂರ ದೂರದ ಸ್ಥಳಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿರುತ್ತಾರೆ. ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ವೈಭವದ ಪೂಜೆ ಮತ್ತು ದಶಮಿಯಂದು ದಿಗ್ವಿಜಯದ ಸಂಕೇತವಾಗಿ ಪೂಜ್ಯ ಮಹಾಸ್ವಾಮಿಗಳ ಸಿಂಹಾಸನಾರೋಹಣ ನಡೆಯುತ್ತದೆ. ಕಾರ್ತೀಕಮಾಸ,ಯುಗಾದಿ, ಶ್ರುತಪಂಚಮಿ ಹಾಗೂ ಹಬ್ಬ ಹರಿದಿನಗಳಂದು ವಿಶೇಷ ಪೂಜೆ, ಆರಾಧನೆ ,ಉತ್ಸವಾದಿಗಳು ಜರುಗುತ್ತವೆ.ಪ್ರತಿ ಮಂಗಳವಾರ,ಶುಕ್ರವಾರ,ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ವಿಶೇಷ ಅಲಂಕಾರ ಪೂಜೆ ಸಾಗುತ್ತದೆ.ಪ್ರತಿ ವರ್ಷ ಪಾಲ್ಗುಣ ಮಾಸದ ಮೂಲ ನಕ್ಷತ್ರದಂದು ಆರು ದಿನಗಳ ಕಾಲ ರಥೋತ್ಸವ ವಿಜೃಂಭಣೆಯಿಂದ ಸಾಗುತ್ತದೆ. ಈ ಕ್ಷೇತ್ರದಲ್ಲಿ ದೇವೇಂದ್ರಕೀರ್ತಿ ಭಟ್ಟಾರಕರ ಸ್ವಾಮಿಗಳ ಪೀಠವಿದ್ದು ಪುರಾತನ ಕಾಲದಿಂದಲೂ ಜೈನ ಧಾರ್ಮಿಕ ಸ್ವಾಮಿಜೀ ಪರಂಪರೆ ನಡೆದು ಬಂದಿದೆ.

ಈ ಕ್ಷೇತ್ರದ ಸುತ್ತಮುತ್ತ ಹಲವು ಬಸದಿಗಳಿದ್ದು ಪ್ರಾಚೀನ ವೈಭವ, ಧಾರ್ಮಿಕ ಮಹತಿ ಮತ್ತು ಪರಂಪರೆಯ ದ್ಯೋತಕವಾಗಿದೆ. ಶ್ರೀಸರಸ್ವತಿ ದೇವಿ ಬಸದಿ, ನೇಮೀಶ್ವರ ಸ್ವಾಮಿ ಬಸದಿ,ಬೋಗಾರ ಬಸದಿ,ಅತ್ಯಾಕರ್ಷಕ ಜಿನ ಬಿಂಬಗಳಿರುವ ಪಂಚಬಸದಿ,ಮಕ್ಕಳಬಸದಿ,ಪಾರ್ಶ್ವನಾಥ ಬಸದಿ,ಗುಹಾತೀರ್ಥಕುಂಡ,ಗುಡ್ಡದ ಬಸದಿ, ಗುಡ್ಡದ ಮೇಲಿರುವ ಸುಮಾರು ೨೧ ಎತ್ತರದ ಪಾರ್ಶ್ವನಾಥ ಸ್ವಾಮಿಯ ಏಕಶಿಲಾ ವಿಗ್ರಹ ಜ್ಞಾನ , ಭಕ್ತಿ, ವೈರಾಗ್ಯಗಳ ಸಂದೇಶ ಸಾರುತ್ತಾ ಭಕ್ತರನ್ನು ಆಕರ್ಷಿಸುವಂತಿದೆ. ಗುಡ್ಡದ ಬಸದಿ ಎತ್ತರವಾಗಿದ್ದು ಆ ಸ್ಥಳದಿಂದ ಸುತ್ತಮುತ್ತಲ ೫೦ -೬೦ ಕಿ.ಮೀ.ವಿಸ್ತಾರದ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ.

ಮುತ್ತಿನ ಕೆರೆ[ಬದಲಾಯಿಸಿ]

ಬಸದಿಯ ಎಡಭಾಗದ ಸ್ವಲ್ಪ ದೂರದಲ್ಲಿ ಮುತ್ತಿನ ಕೆರೆಯಿದೆ. ಹಿಂದೆ ಜಿನದತ್ತರಾಜನಿಗೆ ಈ ಕೆರೆಯಲ್ಲಿ ಬೆಲೆಯುಳ್ಳ ಎರಡು ಮುತ್ತುಗಳು ದೊರೆತಾಗ ಅದನ್ನು ತನ್ನ ರಾಣಿಗೆ ನೀಡಿದನಂತೆ. ಆದರೆ ಆ ಮುತ್ತುಗಳು ರಾಣಿಯ ಕೈಯಿಂದ ಮಾಯವಾಗಿ ದೇವಿ ಪದ್ಮಾವತಿಯ ಪಾದಗಳಲ್ಲಿ ಕಾಣಿಸಿಕೊಂಡು ರಾಜನಿಗೆ ಜ್ಞಾನೋದಯವಾಯಿತಂತೆ. ಈ ಕಾರಣದಿಂದ ಇಲ್ಲಿನ ಕೆರೆಗೆ ಮುತ್ತಿನಕೆರೆ ಎಂಬ ಹೆಸರು ಬಂದಿದ್ದು ಇದು ವಿಶಾಲವಾಗಿದ್ದು ವರ್ಷವಿಡೀ ನೀರಿನಿಂದ ಕೂಡಿರುತ್ತದೆ. ಆಗಮಿಸಿದ ಭಕ್ತರು ಕೆರೆಗೂ ಭೇಟಿ ನೀಡಿ ಮೆಟ್ಟಿಲುಗಳ ಮೂಲಕ ಇಳಿದು ಅಭ್ಯಂಜನ ಮಾಡಿ ಪದ್ಮಾವತಿ ದೇವಿಯ ದರ್ಶನ ಪಡೆಯುತ್ತಾರೆ. ಜೈನರ ಅತಿಶಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಹುಂಚ ಕ್ಷೇತ್ರ ಈಗ ಪ್ರಗತಿಯ ಹಾದಿಯಲ್ಲಿದೆ. ಶಿಥಿಲಗೊಂಡ ಬಸದಿಗಳ ಪುನರುಜ್ಜೀವ ಕಾರ್ಯ ನಡೆಯುತ್ತಿದೆ. ಪ್ರವಾಸಿಗರಿಗೆ ಅನುಕೂಲವಾಗಲು ಹಲವು ಸೌಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಯಾತ್ರಿಗಳಿಗೆ ತಂಗಲು ವಸತಿ ನಿಲಯವಿದೆ. ಕುಟುಂಬ ಸಹಿತ ಬಂದ ಭಕ್ತರಿಗೆ ಅನುಕೂಲವಾಗಲು ಉಟೋಪಚಾರದ ವ್ಯವಸ್ಥೆ ಸಹ ಇದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. ಜೈನ್ ಹೆರಿಟೇಜ್ ಸೆಂಟರ್
  2. ಹುಂಚ ದೇವಾಲಯದ ಅಧಿಕೃತ ಅಂತರಜಾಲ ತಾಣ