ವಿಷಯಕ್ಕೆ ಹೋಗು

ಹರ್ಮನ್ ವಿಲ್ಹೆಲ್ಮ್ ಗೋರಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಚಾರಣೆಯ ವೇಳೆ ಗೋರಿಂಗ್, ಸು ೧೯೪೬

ಹರ್ಮನ್ ವಿಲ್ಹೆಲ್ಮ್ ಗೋರಿಂಗ್ ನಾಟ್ಸಿ ಜರ್ಮನಿಯ ಒಬ್ಬ ರಾಜಕಾರಣಿ, ಸೈನಿಕ ಮತ್ತು ಆರ್ಥಿಕ ಮುಖಂಡ.

ಜನನ 1893ರ ಜನವರಿ 12ರಂದು ಬವೇರಿಯದ ರೊಸೆನ್‌ಹೀಂನಲ್ಲಿ.[] ತಂದೆ ಒಬ್ಬ ವಸಾಹತು ಅಧಿಕಾರಿ. 1914ರಲ್ಲಿ ವಿಮಾನದಳದ ಅಧಿಕಾರಿಯಾಗಿ ಸೇರಿದ.[] 1918ರಲ್ಲಿ ನಡೆದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಮೊದಲನೆಯ ದರ್ಜೆಯ ಐರನ್ ಕ್ರಾಸ್ ಪಡೆದ.[] ಒಂದನೆಯ ಮಹಾಯುದ್ಧದ ಅನಂತರ ಸ್ವೀಡನ್ನಿನಲ್ಲಿ ಫಾಕರ್ ವಿಮಾನ ಕಾರ್ಖಾನೆಗಾಗಿಯೂ, ಆಮೇಲೆ ಸ್ವೆನ್‍ಸ್ಕ್ ಲಫ್ತ್ರಾಫಿಕ್‌ಗಾಗಿಯೂ ಕೆಲಸ ಮಾಡಿದ. ಫ್ರಾ ಕಾರಿನ್ ಫಾನ್ ಕೆಂಟ್‌ಸವಳನ್ನು ವಿವಾಹವಾಗಿ ಮ್ಯೂನಿಕ್‌ನಲ್ಲಿ ವಾಸಿಸತೊಡಗಿದ.[] ಅಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಹಿಟ್ಲರನನ್ನು ಕಂಡು, ಅವನ ಜೊತೆಗೂಡಿದ. ಹಿಟ್ಲರ್ ಅವನನ್ನು ಕೂಡಲೆ ಒಬ್ಬ ಅಧಿಕಾರಿಯಾಗಿ ನೇಮಿಸಿಕೊಂಡ. ನವೆಂಬರ್ 1923ರಲ್ಲಿ ಮ್ಯೂನಿಕ್‌ನಲ್ಲಿ ನಾಟ್ಸಿಗಳು ಅಧಿಕಾರಕ್ಕೆ ಬರಲು ನಡೆಸಿದ ಗಲಭೆಯಲ್ಲಿ ಗಾಯಗೊಂಡು, ದಸ್ತಗಿರಿಯಾದ.[] ಆದರೆ ಆಸ್ಟ್ರಿಯಕ್ಕೆ ತಪ್ಪಿಸಿಕೊಂಡು ಹೋದ. 1927ರಲ್ಲಿ ಜರ್ಮನಿಗೆ ಹಿಂದಿರುಗಿ, ಹಿಟ್ಲರನೊಡನೆ ಸೇರಿದ.[] 1928ರಲ್ಲಿ ರೈಕ್‌ಸ್ಟಾಕಿಗೆ ಹಿಟ್ಲರನ ಬೆಂಬಲದಿಂದ ಗೋರಿಂಗನ ಚುನಾವಣೆಯಾಯಿತು.[]

ಗೋರಿಂಗ್ ಕೈಗಾರಿಕೋದ್ಯಮಿಗಳ ಮತ್ತು ಶ್ರೀಮಂತರ ಸಖ್ಯ ಬೆಳೆಸಿ ಅವರನ್ನು ಹಿಟ್ಲರನ ಅನುಕೂಲಕ್ಕೆ ಬಳಸಿಕೊಂಡ. ನಾಟ್ಸಿ ಪಕ್ಷ 1932 ನಡೆದ ಚುನಾವಣೆಯಲ್ಲಿ ಜಯಗಳಿಸಿದ ಮೇಲೆ ಗೋರಿಂಗನಿಗೆ ರೈಕ್‌ಸ್ಟಾಕಿನ ಅಧ್ಯಕ್ಷ ಸ್ಥಾನ ಪ್ರಾಪ್ತವಾಯಿತು.[] ಹಿಟ್ಲರ್ ಅಧಿಕಾರಕ್ಕೆ ಬಂದಾಗ ಗೋರಿಂಗನನ್ನು ಖಾತಾರಹಿತ ಮಂತ್ರಿಯಾಗಿ ನೇಮಿಸಿದ.[] ಇವನು ವಾಯುದಳದ ಕಮಿಷನರ್, ಪ್ರಷ್ಯ ಮುಖ್ಯಮಂತ್ರಿ ಮತ್ತು ಒಳಾಡಳಿತ ಮಂತ್ರಿಯಾಗಿ ಅಧಿಕಾರ ಚಲಾಯಿಸಿದ. ಈತನ ಅಧಿಕಾರದಲ್ಲಿ ಪ್ರಷ್ಯದ ಆಡಳಿತ ಮತ್ತು ಪೊಲೀಸ್ ದಳದಲ್ಲಿ ನಾಟ್ಸಿಗಳು ತುಂಬಿಕೊಂಡರು. ಅನಂತರ ಗೋರಿಂಗನಿಗೆ ಜನರಲ್ ಹುದ್ದೆ ದೊರಕಿತು. ಹಿಟ್ಲರ್ ಈತನನ್ನು ರಾಯಭಾರಿಯಾಗಿ ಇಟಲಿ, ಪೂರ್ವ ಯೂರೋಪ್‌ಗಳಿಗೆ ಕಳುಹಿಸಿದ. 1933ರ ಫೆಬ್ರುವರಿ 27ರಂದು ರೈಕ್‌ಸ್ಟಾಕ್ ಕಟ್ಟಡವನ್ನು ಸುಡಲು ನಡೆಸಿದ ಪಿತೂರಿಯಲ್ಲಿ ಇವನೂ ಸೇರಿದ್ದನೆಂದು ಮೊದಲು ನಂಬಲಾಗಿತ್ತು. 1935ರಲ್ಲಿ ಈತ ವಿಮಾನ ದಳದ ದಂಡನಾಯಕನಾದ.

ಹಿಟ್ಲರ್ ಈತನನ್ನು 1936ರಲ್ಲಿ ಜರ್ಮನಿಯ ನಾಲ್ಕು ವರ್ಷಗಳ ಆರ್ಥಿಕ ಯೋಜನೆಯ ಅಧಿಕಾರಿಯನ್ನಾಗಿ ನೇಮಿಸಿದ. ಗೋರಿಂಗ್ ಜರ್ಮನಿಯ ಆರ್ಥಿಕ ಸರ್ವಾಧಿಕಾರಿಯಾದ. ಎರಡನೆಯ ಮಹಾಯುದ್ಧ ಆರಂಭವಾದಾಗ ಗೋರಿಂಗ್ ಹಿಟ್ಲರನ ಉತ್ತರಾಧಿಕಾರಿಯಾಗಿ ನೇಮಕ ಹೊಂದಿದ.[೧೦] 1945ರ ಏಪ್ರಿಲ್‌ನಲ್ಲಿ ಹಿಟ್ಲರ್ ಜರ್ಮನಿಗೆ ಮಾರ್ಗದರ್ಶನ ನೀಡುವುದನ್ನು ಬಿಟ್ಟನೆಂದು ಗೋರಿಂಗ್ ಭಾವಿಸಿ ಆತನ ನಿಯೋಗಿಯಾಗಿ ಅಧಿಕಾರ ಚಲಾಯಿಸಲು ಮುಂದಾದ. ಆದರೆ ಹಿಟ್ಲರ್ ಇವನನ್ನು ಎಲ್ಲ ಅಧಿಕಾರಗಳಿಂದ ವಿಮೋಚನೆಗೊಳಿಸಿ ನಾಟ್ಸಿ ಪಕ್ಷದಿಂದ ತೆಗೆದು ಹಾಕಿದ. ಅಮೆರಿಕನ್ ಪಡೆಗಳು ಇವನನ್ನು ದಸ್ತಗಿರಿ ಮಾಡಿದುವು. ನ್ಯೂರೆಂಬರ್ಗಿನಲ್ಲಿ ಈತನ ವಿಚಾರಣೆ ನಡೆದು ಇವನಿಗೆ ಮರಣದಂಡನೆ ವಿಧಿಸಲಾಯಿತು. 1946ರ ಅಕ್ಟೋಬರ್ 15ರ ಸಂಜೆ, ಇವನನ್ನು ಫಾಸಿಗೆ ಗುರಿಪಡಿಸುವ ಮುನ್ನ, ಈತ ವಿಷ ತೆಗೆದುಕೊಂಡು ಪ್ರಾಣ ಬಿಟ್ಟ.[೧೧]

ಉಲ್ಲೇಖಗಳು

[ಬದಲಾಯಿಸಿ]
  1. Manvell & Fraenkel 2011, p. 21.
  2. Manvell & Fraenkel 2011, pp. 24–28.
  3. Manvell & Fraenkel 2011, pp. 28–29.
  4. Manvell & Fraenkel 2011, p. 43.
  5. Holland 2011, p. 54.
  6. Manvell & Fraenkel 2011, p. 62, 64.
  7. Manvell & Fraenkel 2011, p. 66.
  8. Evans 2003, p. 297.
  9. Miller & Schulz 2015, p. 47.
  10. Gunther 1940, p. 19.
  11. Kershaw 2008, p. 964.


ಗ್ರಂಥಸೂಚಿ

[ಬದಲಾಯಿಸಿ]
  • Manvell, Roger; Fraenkel, Heinrich (2011) [1962]. Goering: The Rise and Fall of the Notorious Nazi Leader. London: Skyhorse. ISBN 978-1-61608-109-6.
  • Holland, James (2011). The Battle of Britain: Five Months That Changed History; May-October 1940. New York: St. Martin's Press. ISBN 978-0-31-267500-4.
  • Evans, Richard J. (2003). The Coming of the Third Reich. New York: Penguin. ISBN 978-0-14-303469-8.
  • Gunther, John (1940). Inside Europe. New York: Harper & Brothers. OCLC 836676034.
  • Kershaw, Ian (2008). Hitler: A Biography. New York: W.W. Norton & Company. ISBN 978-0-393-06757-6.