ಹರ್ಮನ್ ಮೊಗ್ಲಿಂಗ್

ವಿಕಿಪೀಡಿಯ ಇಂದ
Jump to navigation Jump to search
ಮೊಗ್ಲಿಂಗರ ೧೮೩೬ರ ಚಿತ್ರ

೧೯ನೆಯ ಶತಮಾನದಲ್ಲಿ ಹುಟ್ಟಿ ಬದುಕಿದ , ರೆವರೆಂಡ್ ಡಾಕ್ಟರ್‍ ಹರ್ಮನ್ ಮೊಗ್ಲಿಂಗ್ (೧೮೧೧-೧೮೮೧) ಜರ್ಮನ್ ದೇಶೀಯನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. ಕನ್ನಡದ ಪ್ರಪ್ರಥಮ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಾರಂಭಿಸಿದವನು ಮೊಗ್ಲಿಂಗ್. ಕನ್ನಡದಲ್ಲಿ ‘ಪತ್ರ ಸಾಹಿತ್ಯ’ ಪ್ರಾರಂಭಿಸಿದ್ದೂ ಅವನೇ. ಕನ್ನಡದ ಕೆಲಸಕ್ಕಾಗಿ ಕೊಡಮಾಡಿದ ಮೊದಲಿನ ಡಾಕ್ಟರೇಟು ಸಹಾ ಅವನಿಗೆ ದೊರಕಿತು, ಜರ್ಮನಿಯಲ್ಲಿ!.[೧].[೨] .[೩]

ಹಿನ್ನೆಲೆ[ಬದಲಾಯಿಸಿ]

ಮೊಗ್ಲಿಂಗ್ ಹುಟ್ಟಿದ್ದು ಜರ್ಮನಿಯ ಬ್ರಾಕನ್ ಹೀಮ್ ಎಂಬ ಊರಿನಲ್ಲಿ ೧೮೧೧ರಲ್ಲಿ. ಕ್ರೈಸ್ತ ಮತ ಪ್ರಚಾರಕ್ಕೆಂದು ೧೯ನೆಯ ಶತಮಾನದಲ್ಲಿ ಜರ್ಮನಿಯಿಂದ ಬಂದಿದ್ದ ಬಡಮಧ್ಯಮವರ್ಗದ, ಹೆಚ್ಚು ಓದಿರದ , ಅನೇಕ ಮಿಶನರಿಗಳಲ್ಲಿ ಮೋಗ್ಲಿಂಗ್ ( ಜರ್ಮನ್ ಉಚ್ಚಾರ ಮ್ಯುವ್^ಗ್ಲಿಂಗ್) ಒಬ್ಬ. ಟ್ಯೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷ ಶಿಕ್ಷಣ ಪಡೆದು ಅಲ್ಲಿಂದ ಬಾಸೆಲ್ ನಲ್ಲಿ ಅಲ್ಪಾವಧಿ ಮಿಶನರಿ ತರಬೇತಿಯನ್ನು ಮುಗಿಸಿ ೧೮೩೬ರಲ್ಲಿ ಮಂಗಳೂರಿಗೆ ಬಂದನು. ಅವನನ್ನು ಆ ಕೂಡಲೇ ಧಾರವಾಡಕ್ಕೆ ಕಳಿಸಲಾಯಿತು.

ಬಾಸೆಲ್ ಮಿಶನ್ ಶಾಲೆಯ ಹುಟ್ಟು[ಬದಲಾಯಿಸಿ]

ಅಲ್ಲಿಯ ನ್ಯಾಯಾಧೀಶ ಹುದ್ದೆಯಲ್ಲಿದ್ದವರು ಮೊಗ್ಲಿಂಗನ ಮಾತಿನ ಮೋಡಿಗೆ ಒಲೆದು, ತಮ್ಮ ಹದಿವಯದ ಮಗನಿಗೆ ಗುಟ್ಟಿನಲ್ಲಿ ಇಂಗ್ಲೀಷ್ ಕಲಿಸಬೇಕೆಂದು ಕೇಳಿಕೊಂಡರು. ಬ್ರಿಟಿಷರ ರಾಜ್ಯಾಡಳಿತ ಅದೇ ಆರಂಭವಾಗಿದ್ದು , ಮೊಗ್ಲಿಂಗ್ ಆ ಕೂಡಲೇ ಇಂಗ್ಲೀಷ್ ಶಾಲೆಯನ್ನೇ ತೆರೆದನು. ಅದುವೆ ಈಗಿನ ಬಾಸೆಲ್ ಮಿಶನ್ ಹೈಸ್ಕೂಲಿನ ಮೂಲ ಸ್ವರೂಪ.

ಕನ್ನಡ ಭಾಷೆಯ ಆಧ್ಯಯನ ಮತ್ತು ಪ್ರಕಟಣೆ[ಬದಲಾಯಿಸಿ]

ಮೊಗ್ಲಿಂಗನಿಗೆ ಜನರ ಮತಾಂತರಕ್ಕಿಂತ ಕ್ರೈಸ್ತ ಮತ ಪ್ರಸಾರಣವೇ ಮುಖ್ಯವಾಗಿತ್ತು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮುಂತಾದ ಯಾತ್ರಾಸ್ಥಳಗಳಿಗೆ ಹೋಗುತ್ತಿದ್ದನು. ಮಂಗಳೂರಿನಲ್ಲಿಯೂ ಒಂದು ಶಾಲೆಯನ್ನು ಸ್ಥಾಪಿಸಿ ಅಲ್ಲಿಯ ಹುಡುಗರನ್ನು ಸಂಗಡ ಕರೆದೊಯ್ಯುತ್ತಿದ್ದನು. ಆ ಹುಡುಗರು ಜನರಾಡುವ ಮಾತುಗಳನ್ನು ಇವನಿಗೆ ವರದಿ ಮಾಡಬೇಕಿತ್ತು. ಉದ್ದೇಶ? ಸ್ಥಳೀಯರ ವಾಗ್ರೂಢಿಯನ್ನು ತಿಳಿದುಕೊಳ್ಳಬೇಕೆಂದು . ಪರಿಣಾಮವಾಗಿ ಮುಂದಿನ ೨-೩ ವ಼ರ್ಷಗಳಲ್ಲಿ ಬಳಕೆಯಲ್ಲಿದ್ದ ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಗಾದೆಗಳನ್ನು ಕಲೆಹಾಕಿ ‘ಲೋಕೋಕ್ತಿ ನಿದಾನ’ ಎಂಬ ಹೆಸರಿನಲ್ಲಿ ಪ್ರಕಟಿಸಿದನು. ಇದರಲ್ಲಿ ಕೆಲವು ತಪ್ಪು ಉಕ್ತಿಗಳು ನುಸುಳಿಕೊಂಡಿದ್ದರೂ , ಕನ್ನಡ ಗಾದೆಗಳನ್ನು ಪ್ರಕಟಿಸುವಲ್ಲಿ ಮೊಗ್ಲಿಂಗನೇ ಮೊದಲಿಗನು.

ಮಂಗಳೂರು ಸಮಾಚಾರ[ಬದಲಾಯಿಸಿ]

ಮೊಗ್ಲಿಂಗ್ ಇನ್ನೂ ಹಲವಾರು ಕನ್ನಡ ವಿಷಯಗಳಲ್ಲಿ ಮೊದಲಿಗ. ಜುಲೈ ೧ ,೧೮೪೩ರಂದು ಕನ್ನಡದಲ್ಲಿ ಪ್ರಥಮವಾಗಿ ಪತ್ರಿಕೆಯನ್ನು - ಮಂಗಳೂರು ಸಮಾಚಾರ – ಹೊರಡಿಸಿದ. ’ವೂರ ವರ್ತಮಾನ’ ,’ಸರ್‍ವರಾಜ್ಯ ವರ್ತಮಾನ’ ,ಆಶ್ಚರ್ಯದ ಸುದ್ದಿ’ ಇವೇ ಮೊದಲಾದ ಸ್ಥಿರ ಶೀರ್ಷಿಕೆಗಳು ಅದರಲ್ಲಿದ್ದವು. ವಿವಿಧತೆಗಾಗಿ ದಾಸರ ಪದಗಳು, ಕತೆಗಳು, ಜೊತೆಗೆ ಬ್ರಿಟಿಷ್ ಸರಕಾರವು ಒಂದೊಂದಾಗಿ ಹೊರಡಿಸುತ್ತಿದ್ದ ಕಾನೂನುಗಳು . ಕಲ್ಲಚ್ಚಿನ ನಾಲ್ಕೇ ಪುಟಗಳ ಪಕ್ಷ ಪತ್ರಿಕೆಯಾಗಿತ್ತು. ಅದರಲ್ಲಿ ಕ್ರೈಸ್ತ ವಿಷಯಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.ಆದರೂ ಮೊಗ್ಲಿಂಗ್ ಈ ಪತ್ರಿಕೆಯನ್ನು ಮತಪ್ರಚಾರಕ್ಕೆ ಉಪಯೋಗಿಸಿಕೊಂಡ ಬಗ್ಯೆ ಒಮ್ಮತವಿಲ್ಲ.

ಪತ್ರಿಕೆಯು ಬಲು ಬೇಗ ಹೆಸರು ಗಳಿಸಿತು. ಪತ್ರಿಕೆಯು ಕನ್ನಡ ಮಾತನಾಡುವ ಹೊರಗಿನವರಿಗೂ ತಲುಪಬೇಕೆಂದು ಯೋಚಿಸಿ, ಪತ್ರಿಕೆಯ ಹೆಸರನ್ನು ‘ಕನ್ನಡ ಸಮಾಚಾರ’ ಎಂದು ಬದಲಾಯಿಸಿದನು. ಮೊಳೆಗಳಿಂದ ಮುದ್ರಿಸಿ ಹೆಚ್ಚು ಸುದ್ದಿಗಳಿಗೆ ಅವಕಾಶವಿರಲೆಂದು ಬಳ್ಳಾರಿಗೆ ಬೇರೊಬ್ಬ ಮಿಶನರಿಗೆ ಒಪ್ಪಿಸಿದನು.ಆದರೆ ಮೂರು ಸಂಚಿಕೆಗಳು ಮಾತ್ರ ಹೊರಬಂದು ನಂತರ ನಿಂತು ಹೋಯಿತು. ಮುಂದೆ ೧೮೫೮ರಲ್ಲಿ ಇನ್ನೊಂದು ಪತ್ರಿಕೆಯನ್ನು ಹೊರಡಿಸಿದನು. ಹೆಸರು ಕನ್ನಡ ವಾರ್ತಿಕ. ಕನ್ನಡ ಹಾಗೂ ವಾರ್ತೆಗಳು ಇವೆರಡೇ ಅವನಿಗೆ ಮುಖ್ಯವಾಗಿದ್ದವು. ಕನ್ನಡದಲ್ಲಿ ಪತ್ರ ಸಾಹಿತ್ಯ ರಚಿಸುವಲ್ಲಿಯೂ ಅವನು ಮೊದಲಿಗ. ೧೮೪೨ರಲ್ಲಿ ಆನಂದರಾವ್ ಕೌಂಡಿನ್ಯ ಎಂಬಾತ ಇವನ ವಾಗ್ಝರಿಗೆ ಮನಸೋತು ಕ್ರೈಸ್ತಮತಕ್ಕೆ ಮತಾಂತರ ಹೊಂದಿದನು.ಯಾರಾದರು ಹೀಗೆ ಮತಾಂತರ ಹೊಂದಿದರೆ ಅವರ ಕುಟುಂಬದವರ ಪ್ರತಿಕ್ರಿಯೆ ಹೇಗಿರಬಹುದೆಂಬ ವಿಷಯವನ್ನಿಟ್ಟುಕೊಂಡು ೧೨ ಪತ್ರಗಳನ್ನು ಹೆಣೆದನು. ಅದು ‘ಈದಾರು ಪತ್ರಗಳು’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಆನಂದರಾಯರ ಹೆಂಡತಿ ಮತಾಂತರ ಮಾಡಲಿಲ್ಲ. ಅವಳನ್ನೂ ತಮ್ಮತ್ತ ಸೆಳೆಯುವುದು ಕಷ್ಟವೇನಿರಲಿಲ್ಲವಾದರೂ, ಉದಾರ ಬುದ್ಧಿಯ ಮೊಗ್ಲಿಂಗನು ಆಕೆಯ ಇಚ್ಛೆಯ ಪ್ರಕಾರವೇ ಮಿಶನ್ ಹೌಸಿನಲ್ಲಿ ಗಂಡನೊಟ್ಟಿಗೆ ಇದ್ದೂ , ಹಿಂದೂ ಧರ್ಮಾವಲಂಬಿಯಾಗಿಯೇ ಉಳಿದು , ತನ್ನ ಅಡಿಗೆ ತಾನೇ ಮಾಡಿಕೊಂಡು ಉಣ್ಣುವುದಕ್ಕೆ ಸಮ್ಮತಿಸಿದ. ಇಂಥ ವಿಚಾರ ಸಾಧಾರಣ ಮಿಷನರಿಗಳಲ್ಲಿ ಕಂಡುಬಾರದ್ದು.

ಹಳಗನ್ನಡ ಕಾವ್ಯಗಳ ಪ್ರಕಟಣೆ[ಬದಲಾಯಿಸಿ]

ಕನ್ನಡಕ್ಕಾಗಿ ಮೊಗ್ಲಿಂಗ್ ಮಾಡಿದ ಅತ್ಯಂತ ಮಹತ್ವದ ಸಂಗತಿ ಪ್ರಸಿದ್ಧ ಹಳಗನ್ನಡ ಕಾವ್ಯಗಳನ್ನು ಹೊರತಂದದ್ದು. ಕ್ರಿ.ಶ. ೧೮೪೮ರಲ್ಲಿ ಸರ್ವಜ್ಞನ ವಚನಗಳಂತಹ ಜನಪ್ರಿಯ ಕವಿತಾ ಸಂಗ್ರಹ ಕನ್ನಡದಲ್ಲಿ ಆಗಲೇ ಬಂದಿತ್ತು. ಮೊಗ್ಲಿಂಗನದು ಅದಕ್ಕಿಂತ ದೊಡ್ಡ ಪ್ರಮಾಣದ ಯೋಜನೆಯಾಗಿತ್ತು. ಮೊದಲಿಗೆ ಅಂಥ ಹಸ್ತ ಪ್ರತಿಗಳನ್ನು ದೊರಕಿಸುವುದು. ಅಲ್ಲಿಂದ ಆ ಕಾವ್ಯದಲ್ಲಿ ತಿದ್ದುಪಡಿ ಮಾಡಿ ಅಂತಿಮ ಶುದ್ಧ ಹಸ್ತಪ್ರತಿಯನ್ನು ಸಿದ್ಧಗೊಳಿಸುವುದು. ಇನ್ನು ಅದರ ಶಿಲಾ ಮುದ್ರಣವಾಗಬೇಕು. ಅದಕ್ಕೆಂದು ಕಲ್ಲಿನಮೇಲೆ ದುಂಡಾಗಿ ಬರೆಯುವವರನ್ನು ಗೊತ್ತುಮಾಡುವುದು. ಅವರಿಗೆ ಸಂಬಳ ಕೊಡಬೇಕು.ಉತ್ತಮ ಶಿಲೆಯೇ ಆಗಬೇಕೆಂದು ಪ್ರಾರಂಭದಲ್ಲಿ ಅಂಥ ಕಲ್ಲುಗಳನ್ನು ಜರ್ಮನಿಯಿಂದ ತರಿಸಿದ್ದ.ಹಾಗೆ ಬರೆಯುವಾಗ , ಅಕ್ಷರಗಳ ಗಾತ್ರ , ಮಧ್ಯೆ ಬಿಡಬೇಕಾದ ಜಾಗ, ದ್ವಿತೀಯ ಪ್ರಾಸವು ತಪ್ಪದೇ ಬರುವ ಹಾಗೆ ಪದ್ಯದ ಸಾಲುಗಳ ಹೊಂದಾಣಿಕೆ. ಏನೆಲ್ಲ ಪರಿಶ್ರಮ ಪಟ್ಟು ಒಂದೊಂದಾಗಿ ಗ್ರಂಥಗಳನ್ನು ಹೊರತಂದನು. ಲಕ್ಷ್ಮೀಶಕವಿಯ ಜೈಮಿನಿ ಭಾರತ, ಕನಕದಾಸರ ಹರಿಭಕ್ತಿಸಾರ, ಕುಮಾರವ್ಯಾಸ ಭಾರತದ ಕೆಲವು ಪರ್ವಗಳು,ತೊರವೆ ರಾಮಾಯಣ. ಇವುಗಳಲ್ಲಿ ೬೪೦ ಪುಟಗಳ ಬಸವಪುರಾಣಹಾಗೂ‘ರಾವಣ ದಿಗ್ವಿಜಯ’ ಎಂಬ ಯಕ್ಷಗಾನವೂ ಇವೆ. ಇವಿಷ್ಟಲ್ಲದೆ ಹರ್ಮನ್ ಮೊಗ್ಲಿಂಗ್ ೪೦೨ ಕೀರ್ತನೆಗಳನ್ನೂ ಸಂಗ್ರಹಿಸಿದನು. ಅವುಗಳಲ್ಲಿ ಪುರಂದರದಾಸರ ೧೬೦ ಕೀರ್ತನೆಗಳು, ತಿಮ್ಮಪ್ಪದಾಸರ ೯೮ ಕೀರ್ತನೆಗಳು, ಕನಕದಾಸರ ೪೩ ಕೀರ್ತನೆಗಳು, ವಿಠಲದಾಸರ ೨೦ ಕೀರ್ತನೆಗಳು, ವೆಂಕಟದಾಸರ ೧೩ ಕೀರ್ತನೆಗಳು, ವಿಜಯದಾಸರ ೯ ಕೀರ್ತನೆಗಳು, ಮಾಧವದಾಸರ ೭ ಕೀರ್ತನೆಗಳು, ಉಡುಪಿಕೃಷ್ಣದಾಸರ ೫ ಕೀರ್ತನೆಗಳು ಮತ್ತು ವೈಕುಂಠದಾಸರ ೫ ಕೀರ್ತನೆಗಳಿವೆ. ಇವುಗಳಲ್ಲಿ ಆಯ್ದ ೧೦೦ ಕೀರ್ತನೆಗಳನ್ನು ಮೊಗ್ಲಿಂಗ್ ೧೮47ರಲ್ಲಿ ಮಂಗಳೂರಿನಲ್ಲಿ ಕಲ್ಲಚ್ಚಿನ ಮುದ್ರಣ ಮಾಡಿಸಿದ. ಅವನಿಗೆ ಗೊತ್ತಿಲ್ಲದೆ ದಕ್ಷಿಣದ ಓರ್ವ ಹರಿದಾಸರನ್ನು (ವರಾಹ ತಿಮ್ಮಪ್ಪ ಎಂಬ ಅಂಕಿತನಾಮದ ನೆಕ್ಕಾರ ಕೃಷ್ಣ್ದದಾಸರು) ಕಂಡುಹಿಡಿದಿದ್ದನು. ಏನಿದ್ದರೂ ಕೀರ್ತನೆಗಳನ್ನು ಮೊದಲಿಗೆ ಸಂಪಾದಿಸಿದವನು ಮೊಗ್ಲಿಂಗನೇ. ಇದಕ್ಕೆಲ್ಲ ಆರ್ಥಿಕ ಸಹಾಯ ಒದಗಿಸಿದವನು - ಮದರಾಸಿನಲ್ಲಿ ನ್ಯಾಯಾಧೀಶನಾಗಿ ನಿವೃತ್ತನಾಗಿ ನೀಲಗಿರಿಯಲ್ಲಿ ನೆಲೆಸಿದ್ದ , ಕನ್ನಡದ ಒಂದಕ್ಷರವೂ ತಿಳಿಯದ ಕೆಸಮಜೋರ್‍ ಎಂಬ ಸದ್ಗೃಹಸ್ಥ. ವಿಶೇಷವೆಂದರೆ, ಆತ ತನ್ನ ಹೆಸರನ್ನು ಎಲ್ಲಿಯೂ ಉಲ್ಲೇಖಿಸಬಾರದು ಎಂದು ಕರಾರು ಹಾಕಿದ್ದು. ೧೧ ಗ್ರಂಥಗಳನ್ನು ಹೊರತಂದ ಮೇಲೆ, ಕೆಸಮಜೋರನ ನಿಧನ ಮತ್ತು ಮೊಗ್ಲಿಂಗನ ಜರ್ಮನಿಗೆ ಮರಳುವಿಕೆಯೊಂದಿಗೆ , ಈ ಕೆಲಸ ಹಠಾತ್ತನೆ ನಿಂತುಹೋಯಿತು.

ಕನ್ನಡದ ಕೆಲಸಕ್ಕಾಗಿ ಡಾಕ್ಟರೇಟು[ಬದಲಾಯಿಸಿ]

’ಬಿಬ್ಲಿಯಾಥೆಕಾ ಕರ್ನಾಟಕಾ’ ಎಂಬೀ ಮಾಲಿಕೆಯ ಗ್ರಂಥಗಳ ವಿಷಯ ಜರ್ಮನಿಯ ಟ್ಯೂಬಿಂಗೆನ್ ವರೆಗೂ ತಲುಪಿತು. ೧೮೫೮ರಲ್ಲಿ ಮೊಗ್ಲಿಂಗನಿಗೆ ಈ ಕಾರ್ಯಕ್ಕೆಂದೇ ಗೌರವ ಡಾಕ್ಟರೇಟು ಪ್ರಶಸ್ತಿಯನ್ನು ಕೊಡಮಾಡಿದರು. ಕನ್ನಡದ ಕೆಲಸಕ್ಕಾಗಿ ದೊರೆತ ಮೊತ್ತ ಮೊದಲಿನ ಡಾಕ್ಟರೇಟು ಪದವಿಯಿದು.

ಕವಿಯಾಗಿ[ಬದಲಾಯಿಸಿ]

ಮೊಗ್ಲಿಂಗ್ ಮೇಲ್ಮಟ್ಟದ ಕವಿಯೂ ಆಗಿದ್ದನು. ಅನೇಕ ಹಳಗನ್ನಡ ಕಾವ್ಯಗಳನ್ನು ಅಭ್ಯಸಿಸಿದ್ದರ ಕಾರಣವೋ ಏನೋ , ಅವನ ಕನ್ನಡ ಭಾಷಾಜ್ಞಾನ ಸಾಮಾನ್ಯ ದೇಶೀಯರಿಗಿಂತ ಉತ್ತಮವಾಗಿತ್ತು.ಅವನು ಕ್ರೈಸ್ತಗೀತೆಗಳನ್ನು ಅನುವಾದಿಸಿದ್ದಂತೂ ಸ್ವಾಭಾವಿಕವೇ ಆಗಿತ್ತು. ಇಂಗ್ಲೀಷಿನಲ್ಲಿ ‘ಪಿಲಿಗ್ರಿಮ್ಸ್ ಪ್ರೊಗ್ರೆಸ್’ ಎಂಬ ತಾತ್ವಿಕ ಕಾದಂಬರಿಯಿದೆ. ಅದರ ಮೊದಲ ಭಾಗದಲ್ಲಿ ಸುಮಾರು ೨೦ ಕ್ಲಿಷ್ಟ ಪದ್ಯಗಳಿವೆ. ಅವನ್ನು ಮೊಗ್ಲಿಂಗ್ ತನ್ನ ಜ್ಞಾತಿಬಂಧುವಾದ ವ್ಯೆಗ್ಲೆ ಎಂಬುವವನೊಂದಿಗೆ ೧೮೪೮ರಲ್ಲಿ ಅನುವಾದಿಸಿದ್ದಾನೆ. ಅದು ಡಾ.ರಂ.ಶ್ರೀ.ಮುಗಳಿಯವರ ಗಮನಕ್ಕೆ ಬಂದು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ ಗ್ರಂಥದಲ್ಲಿ ಒಂದು ಪದ್ಯವನ್ನು ಹೊಸಗನ್ನಡ ಕವಿತೆಯ ಆರಂಭ ಎಂಬರ್ಥದಲ್ಲಿ ಕೊಟ್ಟಿದ್ದಾರೆ. ಡಾ.ಮೊಗ್ಲಿಂಗ್ ಇಲ್ಲಿಯ ವಾಸ್ತವ್ಯದ ಉತ್ತರಾರ್ಧವನ್ನು ಕೊಡಗಿನಲ್ಲಿ ಕಳೆದನು. ಕೊಡಗರ ಜೀವನ, ಇತಿಹಾಸ, ಹಬ್ಬ ಹುಣ್ಣಿಮೆಗಳನ್ನು ಅಭ್ಯಸಿಸಿ ‘ಕೂರ್ಗ್ ಮೆಮೊಯರ್ಸ್’ ಎಂಬ ಗ್ರಂಥವನ್ನು೧೮೫೫ರಲ್ಲಿ ಬರೆದನು.ಹಿರಿಯ ವೀರರಾಜೇಂದ್ರನ ಶೌರ್ಯ, ಧೈರ್ಯವನ್ನೂ, ಚಿಕ್ಕವೀರರಾಜೇಂದ್ರನ ನಿರ್ದಯತನವನ್ನೂ ವರ್ಣಿಸಿದ್ದಾನೆ. ಇತಿಹಾಸಪ್ರಜ್ಞೆಯಿಂದ ಕೂಡಿದ ಗ್ರಂಥವದು. ಬ್ರಿಟಿಶರು ೧೮೩೪ರಲ್ಲಿ ಕೊಡಗನ್ನು ವಶಪಡಿಸಿಕೊಂಡ ಮೇಲೆ ಯಾವ ಸುಧಾರಣೆಯನ್ನೂ ಮಾಡಿರಲಿಲ್ಲ ಎಂಬುದನ್ನು ಅಳುಕಿಲ್ಲದೆ ಅಭಿಪ್ರಾಯ ಪಟ್ಟಿದ್ದಾನೆ.

ಲಿಪಿ ಸುಧಾರಣೆಯ ಪ್ರಯತ್ನ[ಬದಲಾಯಿಸಿ]

ಕೊಡಗಿಗೆ ಸಂಬಂಧಿಸಿದ ಇನ್ನೊಂದು ಗ್ರಂಥ ‘ರಾಜೇಂದ್ರ ನಾಮಾ’ ಎಂಬುದನ್ನು ಸಂಪಾದಿಸಿ ಅದೇ ಸುಮಾರಿಗೆ ಪ್ರಕಟಿಸಿದ್ದಾನೆ. ಅದರ ವೈಶಿಷ್ಟ್ಯವೆಂದರೆ ಶಬ್ದದ ಕೆಳಗೆ ಒತ್ತಕ್ಷರ ಒಂದೂ ಇಲ್ಲ. ’ರಾಜೇಂದ್ರ’ ಎಂಬುದನ್ನು ‘ರಾಜೇಂದ್ ರ’ ಎಂದು ಬರೆದರೆ ಓದಬಹುದಲ್ಲವೆ. ಅದರಿಂದ ಜಾಗವು ಉಳಿತಾಯವಾಗುವುದು.ಇದೊಂದಲ್ಲದೆ ಇನ್ನೂ ಹಲವು ಲಿಪಿ ಸುಧಾರಣೆಗಳನ್ನು ಆ ಗ್ರಂಥ ಮುದ್ರಣದಲ್ಲಿ ಮಾಡಿದ. ಇಂಥದೇ ಸುಧಾರಣೆಗಳನ್ನು ಬಿ.ಎಂ.ಶ್ರೀಯವರೂ ಹುಬ್ಬಳ್ಳಿಯ ಕಬ್ಬೂರು ಮಧ್ವರಾಯರೂ ೧೯೩೦ರ ದಶಕದಲ್ಲಿ ಪ್ರಯತ್ನ ಮಾಡಿದರು. ಮೊಗ್ಲಿಂಗನಂತೆ ಅವರೂ ಅಯಶಸ್ವಿಯಾದರು. ಅರ್ಥಾತ್ ಜನಗಳ ರೂಢಿಯೇ ಮುಂದುವರೆಯಿತು.

ಆ ಕಾಲದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಭಾಷೆ ಕನ್ನಡವೇ ಆಗಿದ್ದರೂ, ಪರಸ್ಪರ ಸುದ್ದಿ ವಿನಿಮಯ ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾಗಿತ್ತು. ಸಮಗ್ರ ಕರ್ನಾಟಕದ ಪರಿಕಲ್ಪನೆಯನ್ನು ಮೊಗ್ಲಿಂಗ್ ಆಗಲೇ ವಿಚಾರ ಮಾಡಿದ್ದನು. ಕರ್ನಾಟಕ ಸಮಾಚಾರದ ಕೊನೆಯ ಅಂಕದಲ್ಲಿ ಆತ ಸಮಗ್ರ ಕರ್ನಾಟಕದ ಪ್ರಸ್ತಾಪ ಮಾಡಿದ್ದಾನೆ.

ಮರಳಿ ಸ್ವದೇಶಕ್ಕೆ[ಬದಲಾಯಿಸಿ]

ಕ್ರಿ.ಶ.೧೮೬೦ರಲ್ಲಿ ನಿವೃತ್ತನಾಗಿ ಸ್ವದೇಶಕ್ಕೆ ಹಿಂದಿರುಗಿದ . ಅಲ್ಲಿಯೂ ತನ್ನ ಕನ್ನಡ ಪ್ರೀತಿಯನ್ನು ವ್ಯಕ್ತ ಪಡಿಸಿದ. ಕಿಟೆಲ್ಲರಿಗೆ ಕನ್ನಡ ನಿಘಂಟುವಿನ ಕೆಲಸ ಒಪ್ಪಿಸಲು ಬ್ರಿಟಿಷ್ ಸರಕಾರದೊಡನೆ ಪತ್ರವ್ಯವಹಾರ ಮಾಡಿ, ಕಿಟೆಲರ ಮಿಶನರಿ ಕೆಲಸವನ್ನೇ ನಿಲ್ಲಿಸಿ ಕನ್ನಡ ಕೋಶ ರಚನೆಗೇ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಮೊಗ್ಲಿಂಗನಿಗೆ ಸಲ್ಲಬೇಕು. ಮೊಗ್ಲಿಂಗನ ಮನೆಯಲ್ಲಿಯೇ ಕಿಟೆಲ್ ತನ್ನ ಕೆಲಸವನ್ನು ಆರಂಭಿಸಿದ್ದನಂತೆ.[೪]

ನಿವೃತ್ತನಾದ ಮೇಲೆ ಕನ್ನಡದ ಯಾವುದೇ ಕೆಲಸ ಮಾಡುವ ಅಗತ್ಯವಿರದಿದ್ದರೂ, ಅವನ ಕನ್ನಡ ಪ್ರೇಮ ಸುಮ್ಮನಿರಲು ಬಿಡಲಿಲ್ಲ. ಮೊಗ್ಲಿಂಗ್ ಜರ್ಮನಿಯ ಪ್ರಾಚ್ಯ ವಿಶೇಷ ಪತ್ರಿಕೆ ಜೆಡಿಎಂಜಿಯಲ್ಲಿ ಹರಿದಾಸರ ೨೦ ಕೀರ್ತನೆಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ, ಟೀಕೆ ಟಿಪ್ಪಣಿ ಸಹಿತ. ಅದರಂತೆ ಅವನ ಮೆಚ್ಚಿನ ಕಾವ್ಯವಾಗಿದ್ದ ಜೈಮಿನಿ ಭಾರತದ ಎರಡು ಸಂಧಿಗಳನ್ನೂ ತನ್ನವರಿಗಾಗಿ ಜರ್ಮನ್ ಭಾಷೆಯಲ್ಲಿ ಒದಗಿಸಿದನು.

ನಿಧನ[ಬದಲಾಯಿಸಿ]

೧೮೮೧ರಲ್ಲಿ ಮೊಗ್ಲಿಂಗ್ ಕೊನೆಯುಸಿರೆಳೆದ. ಅವನ ಸಮಾಧಿ ಜರ್ಮನಿಯ ಎಸ್ಸ್ಲಿಂಗೆನ್ ಎಂಬಲ್ಲಿದೆ. ಮೊಗ್ಲಿಂಗನ ಕನ್ನಡ ಪ್ರೀತಿ ಮತ್ತು ಅಭಿಮಾನ ಇನ್ನಾವ ವಿದೇಶೀಯರಲ್ಲೂ ಕಂಡುಬಂದಿಲ್ಲ. ಹಲವಾರು ಆಂಶಗಳಲ್ಲಿ ಪ್ರಥಮನಾಗಿ ಹೊಸಗನ್ನಡದ ಆದ್ಯ ಪ್ರವರ್ತಕನೆನಿಸಿದ್ದಾನೆ.

ಮಂಗಳೂರಿನ ಮೊಗ್ಲಿಂಗ್ ಜರ್ಮನ್ ಭಾಷಾ ಸಂಸ್ಥೆ ಅವನ ಹೆಸರು ಹೊತ್ತಿದೆ. ಮಂಗಳೂರು ಸಮಾಚಾರ ಮೊಟ್ಟಮೊದಲು ಹೊರಬಿದ್ದ ತಾರೀಖು ಜುಲೈ ೧, ಕನ್ನಡ ಪತ್ರಿಕಾ ದಿನ ಎಂದು ಆಚರಿಸಲಾಗುತ್ತದೆ.

ಕೃತಿಗಳು[ಬದಲಾಯಿಸಿ]

ಹೃದಯ ದರ್ಪಣ, ಕೂರ್ಗ್ ಮೆಮೋರಿಸ್, ಕನ್ನಡ ಗಾದಗಳ ಸಂಕಲನ,ಜೈಮಿನಿ ಭಾರತದ ಅನುವಾದ, ‘ಜಾತಿ ವಿಚಾರಣೆ’, ‘ದೇವ ವಿಚಾರಣೆ’ ಹಾಗು ‘ಬೈಬಲ್ಲಿನ ಕೆಲ ಕತೆಗಳು’ ಇವನ ಕೆಲವು ಕೃತಿಗಳು

ಉಲ್ಲೇಖಗಳು[ಬದಲಾಯಿಸಿ]

  1. Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Archived from the original on 5 February 2012. Unknown parameter |deadurl= ignored (help)
  2. Anderson, Gerald H. (1999). Biographical Dictionary of Christian Missions. Herrmann Friedrich Moegling. p. 464. ISBN 0802846807.
  3. Balasubramanyam, A S (28 July 2015). "Miscellany - Early years of Kannada journalism" (Bangalore). Deccan Herald.
  4. ’ಪ್ರಜಾವಾಣಿ’ ೨೩ನೆಯ ಡಿಸೆಂಬರ್‍ ೨೦೦೭ರ ಭಾನುವಾರದ ಪುರವಣಿಯಲ್ಲಿ ಡಾ.ಶ್ರೀನಿವಾಸ ಹಾವನೂರ ಬರೆದ ಲೇಖನ