ವಿಷಯಕ್ಕೆ ಹೋಗು

ಸಿದ್ಧಿಯರ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ಧಿಯರ ಕುಣಿತ ಒಂದು ಜಾನಪದ ಕಲೆಯಾಗಿದೆ.[೧] ಪೋರ್ಚುಗೀಸರ ಕಾಲದಲ್ಲಿ ಗೋವಾದ ಮೂಲಕ ದಕ್ಷಿಣ ಆಫ್ರಿಕಾ ಮೂಲದ ಸಿದ್ಧಿಗಳು ಕರ್ನಾಟಕವನ್ನು ತಲುಪಿದರು.[೨][೩] ಪೋರ್ಚುಗೀಸರ ಕಾಲದಲ್ಲಿ ಗುಲಾಮರಾಗಿದ್ದ ಇವರು ಇತ್ತೀಚಿಗೆ ಉತ್ತರ ಕನ್ನಡದ ಕೆಲವು ತಾಲ್ಲೂಕುಗಳಲ್ಲಿ ಕಾಣಸಿಗುತ್ತಾರೆ. ಹೆಚ್ಚಾಗಿ ಯಲ್ಲಾಪುರ ತಾಲೂಕಿನಲ್ಲಿ ಕಾಣಿಸುತ್ತಾರೆ.

ಸಿದ್ಧಿಯರ ದೇಹರಚನೆ ಹಾಗೂ ಭಾಷೆ

[ಬದಲಾಯಿಸಿ]

ಸಿದ್ಧಿ ಜನಾಂಗದವರು ಮೂಲತಃ ದಕ್ಷಿಣ ಆಪ್ರಿಕಾದವರು. ಇವರು ಸಹಜವಾಗಿ ನಿಗ್ರೋಯಿಡ್ ಸಂತತಿಯ ಮೈಕಟ್ಟು ಹಾಗೂ ಬಲಾಡ್ಯ ದೇಹ ರಚನೆಯನ್ನು ಹೊಂದಿದವರಾಗಿದ್ದಾರೆ. ಮಿರುಗುವ ಕಪ್ಪು ಬಣ್ಣ, ಗುಂಗುರು ಕೂದಲು, ದಪ್ಪ ತುಟಿ, ಮೊಂಡು ಮೂಗು ಇದು ಇವರ ಪ್ರಮುಖ ಗುರುತುಗಳು. ಈಗ ಇವರು ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ, ಹಾಗೂ ಹಿಂದೂ ಧರ್ಮಗಳ ಅನುಯಾಯಿಗಳಾಗಿದ್ದಾರೆ. ಆದರೆ ಯಾವುದೂ ಇಲ್ಲಿ ಅವರ ಮೂಲ ಧರ್ಮವಾಗಿರದೆ ಹೊರಗಿನ ಒತ್ತಡದಿಂದ ಹಾಕಿರುವಂತಹದ್ದು. ಸಾಂದರ್ಭಿಕವಾಗಿ ಮರಾಠಿ, ಕೊಂಕಣಿ, ಕನ್ನಡವನ್ನು ಮಾತಾಡುವ ಇವರು ಹೆಚ್ಚಾಗಿ ಮರಾಠಿ- ಕೊಂಕಣಿ- ಕನ್ನಡಗಳ ಮಿಶ್ರಭಾಷೆಯನ್ನಾಡುತ್ತಾರೆ.

ಸಿದ್ಧಿಯರ ಕುಣಿತದ ವಿಧಗಳು

[ಬದಲಾಯಿಸಿ]

ಪುಗಡಿಕುಣಿತ

[ಬದಲಾಯಿಸಿ]

ಪುಗಡಿಕುಣಿತವು ಒಂದು ಪ್ರಭಾವಿಕಲೆ. ಗೌಳಿಗರ ಮಹಿಳೆಯರಲ್ಲಿ ಹಾಗೂ ಉತ್ತರಕನ್ನಡದ ಮೀನುಗಾರ ಮಹಿಳೆಯಲ್ಲಿ ಪ್ರಚಲಿತವಿರುವ ಈ ಕಲೆಯನ್ನು ಸಿದ್ಧಿಯರು ಎರವಲು ಪಡೆದಿದ್ದಾರೆ. ಈ ಜನಪದ ಕಲೆಯನ್ನು ಇನ್ನಷ್ಟು ಭಿನ್ನವಾಗಿ ಕೊಮಾರಪಂತ ಜನಾಂಗದವರು ಪ್ರದರ್ಶಿಸುತ್ತಾರೆ.

ಕುಣಿತದ ಶೈಲಿ

[ಬದಲಾಯಿಸಿ]

ಹೆಣ್ಣುಮಕ್ಕಳು ಸಮ ಸಂಖ್ಯೆಯಲ್ಲಿ ಎದುರುಬದುರು ನಿಂತು ಬರಿದಾದ ಕೊಡವನ್ನು ಕೈಯಲ್ಲಿ ಹಿಡಿದು ಗುಮಟೆಯ ತಾಳಕ್ಕೆ ಹಾಗೂ ಹಿಮ್ಮೇಳದ ಹಾಡಿಗೆ ತಕ್ಕಂತೆ ಬಾಗಿ ಕುಣಿಯುತ್ತಾರೆ. ಹಾಡು ಬದಲಾದಂತೆ ನರ್ತನದ ಗತಿಯೂ, ಹೆಜ್ಜೆಯೂ ಬದಲಾಗುತ್ತದೆ. ಇದನ್ನು ಕೊಡದ ಕುಣಿತವೆಂದೂ ಸಹ ಕರೆಯಬಹುದು. ಇಲ್ಲಿ ಗಮನಿಸಬಹುದಾದ ಒಂದು ಅಂಶವೆಂದರೆ ಹಾಲಕ್ಕಿ ಒಕ್ಕಲಿಗರ ಸಂಪ್ರದಾಯದ ಗುಮಟೆ ಹಾಗೂ ಕೊಂಕಣಿ ಸಂಪ್ರದಾಯ ಕೊಡ ಒಟ್ಟಾಗಿ ಸೇರಿರುವುದು. ಗುಮಟೆಯ ಲಯಬದ್ದವಾದ ನಾದ ಕೊಡದ ಊದಿನ ಶಬ್ದದ ಜೊತೆಗೆ ಸೇರಿ ಸುಮಧುರ ಹಿನ್ನೆಲೆಯನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಚೌತಿ ಹಬ್ಬದಲ್ಲಿ ಇತರೆ ಜನಾಂಗಗಳು ಕುಣಿತವನ್ನು ಪ್ರದರ್ಶಿಸುತ್ತಾರೆ. ಸಿದ್ಧಿಯರು ಚೌತಿ ಹಬ್ಬ ಮಾತ್ರವಲ್ಲದೆ ಮನರಂಜನಾ ಸಂದರ್ಭದಲ್ಲೂ ಪ್ರದರ್ಶಿಸುತ್ತಾರೆ.[೪] ಇದಕ್ಕೆ ಕಾರಣ ಈ ಕಲೆ ಇವರಿಗೆ ಆರಾಧನೆಯ ಒಂದು ಭಾಗ ಎನ್ನುವುದಕ್ಕಿಂತ ಒಂದು ರೀತಿಯ ಮನರಂಜನೆ ಎಂಬುದು ಮುಖ್ಯವಾಗುತ್ತದೆ.

ಡಮಾಮಿ ಕುಣಿತ

[ಬದಲಾಯಿಸಿ]

ಡಮಾಮಿ ಕುಣಿತವು ಸಿದ್ಧಿಯರ ಸ್ವಂತಿಕೆಯನ್ನು ಹೆಚ್ಚು ತೋರಿಸುವ ಒಂದು ಪ್ರಮುಖ ಕಲೆ. ಗಣೇಶನ ಹಬ್ಬದಲ್ಲಿ ಪುಗಡಿಕುಣಿತವನ್ನು ಕುಣಿದರೆ ಡಮಾಮಿ ನವರಾತ್ರಿಯ ಕಲೆ ಎಂದು ಅವರೇ ಹೇಳುತ್ತಾರೆ.ಈ ಡಮಾಮಿ ಕುಣಿತವು ಅವರ ಹಿರಿಯರ ಹಬ್ಬಗಳಲ್ಲೂ,ಇನ್ನಿತರ ಮನರಂಜನೆಯ ಸಂದರ್ಭಗಳಲ್ಲೂ ಪ್ರದರ್ಶಿಸಲಾಗುತ್ತದೆ.ಸಿದ್ದಿಗಳ ಸ್ವಂತಿಕೆ ಈ ಕಲೆಯಲ್ಲಿ ಹೆಚ್ಚಿದೆ ಎಂದು ಹೇಳಲು ಕಾರಣಗಳಿವೆ.ಪ್ರಮುಖವಾಗಿ ನವರಾತ್ರಿಯಲ್ಲಿ ಹಾಗೂ ಮಹಾಲಯ ಅಮಾವಾಸ್ಯೆ ಯಲ್ಲಿ ಈ ಪ್ರದರ್ಶನ ಕಂಡುಬರುತ್ತದೆ.[೫][೬][೭]ಇಲ್ಲಿನ ಯಾವ ಜನಾಂಗಗಳಲ್ಲೂ ಇವರ 'ಡಮಾಮಿ' ಎಂಬ ಚರ್ಮವಾದ್ಯ ಬಳಕೆಯಲ್ಲಿಲ್ಲ.ಇದಕ್ಕೆ ಬಹುಶಃ ಆಫ್ರಿಕಾದ ಮೂಲವಿರಬಹುದೇ ಎಂಬ ಸಂಶಯಗಳಿವೆ.

ಡಮಾಮಿ ಕುಣಿತದ ಶೈಲಿ

[ಬದಲಾಯಿಸಿ]

ಇಬ್ಬರು ಮಹಿಳೆಯರು ಅಥವಾ ಸೀರೆಯನ್ನು ಉಟ್ಟುಕೊಂಡ ಗಂಡಸರು ತೆಂಗಿನಕಾಯಿಯ ಬುರುಡೆ ಮತ್ತು ನವಿಲುಗರಿಯನ್ನು ಹಿಡಿದು ಹಿಮ್ಮೇಳದಲ್ಲಿ ಒಬ್ಬನು ಡಮಾಮಿ ಬಡಿಯುವಾಗ ಕುಣಿಯುತ್ತಾರೆ. ಈ ಕಲೆಯನ್ನು ಮುಖ್ಯವಾಗಿ ಈ ಮೂರು ಅಂಶಗಳು ಸೆಳೆಯುತ್ತವೆ. ಮೊದಲನೆಯದಾಗಿ, ಈ ಕುಣಿತವು ಹಿರಿಯರ ಪೂಜೆಯ ಸಂದರ್ಭದಲ್ಲಿ ನಡೆಯುವುದು. ಎರಡನೆಯದಾಗಿ, ಅಪರೂಪದ ಡಮಾಮಿ ಎಂಬ ವಾದ್ಯ ವಿಶೇಷ. ಮೂರನೆಯದಾಗಿ, 'ಮುಚಾಕೆ' ಎಂಬ ತೆಂಗಿನಕಾಯಿಯ ಬುರುಡೆ. ಈ ಕುಣಿತ ನಡೆಯುವ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾದವರಿಗೆ 'ಮೈಮೇಲೆ' ಬರುವುದೂ ಉಂಟು.ಇಂತಹ ಸಂದರ್ಭದಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಕೇಳುವ ಪದ್ಧತಿಯೂ ಉಂಟು.

ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವಂತಹ 'ಮೊಹರಂ ಕುಣಿತ' ಹಾಗೂ ಹೆಚ್ಚು ಉತ್ತರ ಕನ್ನಡದ ಮರಾಠಿ ಜನರಲ್ಲಿ ಪ್ರಚಲಿತವಿರುವ 'ಹೋಳಿ ಸಿಗ್ಮಾ' ಕುಣಿತವನ್ನು ಸಿದ್ಧಿಯರು ಪ್ರದರ್ಶಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ↑ https://www.edenart.com/news/what-is-folk-art-style
  2. ↑ ಗೊ.ರು.ಚೆನ್ನಬಸಪ್ಪ. ಕರ್ನಾಟಕ ಜನಪದ ಕಲೆಗಳು. ಕನ್ನಡ ಸಾಹಿತ್ಯ ಪರಿಷತ್ತು.೧೯೭೭.
  3. ↑ ಹಿ. ಚಿ. ಬೋರಲಿಂಗಯ್ಯ. ಕರ್ನಾಟಕ ಜನಪದ ಕಲೆಗಳ ಕೋಶ,ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ,೧೯೯೬.
  4. ↑ https://www.britannica.com/topic/Ganesh-Chaturthi
  5. ↑ "ಆರ್ಕೈವ್ ನಕಲು". Archived from the original on 2025-10-11. Retrieved 2025-10-12.
  6. ↑ http://omspiritualshop.com/blogs/news/mahalaya-amavasya-2025-significance-rituals-date-and-time?srsltid=AfmBOopkAsfew3INjqQxmSyICTN79BK_d8vYe6xofkmqw_6TYCwUb2V
  7. ↑ http://britannica.com/topic/Navratri