ವಿಷಯಕ್ಕೆ ಹೋಗು

ಸಿಂಧೂತಟದ ನಾಗರೀಕತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿಂಧೂ ನದಿ ನಾಗರಿಕತೆ ಇಂದ ಪುನರ್ನಿರ್ದೇಶಿತ)
ಸಿಂಧೂ ತಟದ ನಾಗರಿಕತೆಯ ವಿಸ್ತಾರ

ಸಿಂಧೂ ನದಿಯ ತಟದಲ್ಲಿ ಸಾ.ಶ.ಪೂ. ೨೯೦೦ರ ಸುಮಾರಿನಲ್ಲಿ ನಗರಗಳನ್ನು ಹೊಂದಿದ ನಾಗರಿಕತೆ ಆರಂಭವಾಯಿತು. ಇದರೊಂದಿಗೆ ಪ್ರಗತಿಗೊಂಡ ನಾಗರಿಕತೆ ಸಿಂಧೂತಟದ ನಾಗರಿಕತೆ ಅಥವ ಸಿಂಧೂಕಣಿವೆ ನಾಗರಿಕತೆ (Indus Valley Civilization) ಎಂದು ಕರೆಯಲ್ಪಟ್ಟಿದೆ. ಈ ನಾಗರಿಕತೆ ಸುಮಾರು ಸಾ.ಶ.ಪೂ. ೨೯೦೦ರಿಂದ ಸಾ.ಶ.ಪೂ. ೧೯೦೦ರ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ನಾಗರಿಕತೆಯ ಮುಖ್ಯ ನಗರಿಗಳಾದ ಹರಪ್ಪ ಮತ್ತು ಮೆಹೆಂಜೊದಾರೊ/ ಮೋಹೆನ್ಜದಾರೊ ಅವಿಭಜಿತ ಭಾರತದ ಮೊದಲ ನಗರಿಗಳೆಂದು ಪರಿಗಣಿಸಲ್ಪಟ್ಟಿವೆ ಭಾರತ ಉಪಖಂಡದ ವಾಯುವ್ಯ ಭಾಗದಲ್ಲಿತ್ತು ಮತ್ತು ಸಿಂಧೂ ನದಿಯ ಬಯಲಿನಲ್ಲಿ ನೆಲೆಗೊಂಡಿತ್ತು. ಇಂದಿನ ಪಂಜಾಬ್ ಪ್ರಾಂತ್ಯವು ಅದರ ಕೇಂದ್ರ ಸ್ಥಳವಾಗಿದ್ದುದಲ್ಲದೆ, ಅದು ಗಗ್ಗರ್-ಹಾಕ್ರ ಮತ್ತು ಗಂಗಾ-ಯಮುನಾ ದೋ-ಅಬ್ ಗಳವರೆಗೂ ಹಬ್ಬಿತ್ತು. ಅಂದರೆ ಇಂದಿನ ಪಾಕಿಸ್ತಾನದ ಬಹುತೇಕ ಪ್ರದೇಶಗಳು, ಆಧುನಿಕ ಭಾರತದ ವಾಯುವ್ಯ ರಾಜ್ಯಗಳು, ಗುಜರಾತ್, ಅಫಘಾನಿಸ್ಥಾನದ ಆಗ್ನೇಯ ಭಾಗ ಮತ್ತು ಬಲೂಚಿಸ್ಥಾನ,ಇರಾನಿನ ಪೂರ್ವ ಭಾಗ. ಆಗಿನ ಸಮಕಾಲೀನ ನಾಗರಿಕತೆಗಳಾದ ಈಜಿಪ್ತ್ ಮತ್ತು ಮೆಸಪೊಟೊಮಿಯಾ ನಾಗರಿಕತೆಗಳಿಗೆ ಹೋಲಿಸಿದರೆ, ವಿಸ್ತೀರ್ಣದಲ್ಲಿ ಇವೆರಡೂ ನಾಗರಿಕತೆಗಳು ಹರಡಿದ್ದ ಒಟ್ಟೂ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಸಿಂಧೂ ನಾಗರಿಕತೆ ಹರಡಿತ್ತು.

ಈ ನಾಗರಿಕತೆಯ ಅತ್ಯಂತ ವಿಕಸಿತಗೊಂಡ ಕಾಲವನ್ನು 'ಹರಪ್ಪ ನಾಗರಿಕತೆ' ಎಂದು ಕರೆಯಲಾಗುತ್ತದೆ. ಏಕೆಂದರೆ ಈ ನಾಗರಿಕತೆಯು ಪ್ರಪ್ರಥಮವಾಗಿ ಬೆಳಕಿಗೆ ಬಂದಿದ್ದು 'ಹರಪ್ಪ'ಎಂಬ ಸ್ಥಳದಲ್ಲಿ. ಈ ನಿವೇಶನದ ಉತ್ಖನನವು ೧೯೨೦'ರ ದಶಕದಲ್ಲಿ ಪ್ರಾರಂಭವಾದಾಗ ಇದು ಆಗಿನ ಬ್ರಿಟೀಶ್ ಆಡಳಿತಕ್ಕೊಳಪಟ್ಟಿದ್ದ ಪಂಜಾಬ್ ಪ್ರಾಂತ್ಯದಲ್ಲಿತ್ತು (ಈಗ ಪಾಕಿಸ್ತಾನದಲ್ಲಿದೆ). ೧೯೨೦'ರ ದಶಕದಲ್ಲಿ ಪ್ರಾರಂಭವಾದ ಉತ್ಖನನಗಳು ಈಗಲೂ ಮುಂದುವರೆದಿದೆ. ಸಿಂಧೂ ನಾಗರೀಕತೆಯ ಮತ್ತೊಂದು ಪ್ರಮುಖ ನಗರವಾದ ಮೊಹೆಂಜೋದಾರವು ಈಗ ಯುನೆಸ್ಕೋ ವಿಶ್ವದ ಸಾಂಸ್ಕೃತಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ನೂರಾರು ಹೆಕ್ಟೇರ್ ಸ್ಥಳದಲ್ಲಿ ಅತ್ಯಂತ ಯೋಜನಾ ಬದ್ದ ನಗರಗಳನ್ನು ನಿರ್ಮಿಸಿರುವುದು ಹರಪ್ಪಾ ಜನರ ವಿಶೇಷತೆ. ಆ ನಗರಗಳಲ್ಲಿ, ಉತ್ತಮವಾದ ರಸ್ತೆ, ಇಟ್ಟಿಗೆ ಕಟ್ಟಿಸಿದ ಬಾವಿ, ಸ್ನಾನದ ಕೊಳ, ಹಲವಾರು ಮನೆಗಳು, ಒಳಚರಂಡಿ, ಮನೆಗಳಲ್ಲಿ ಸ್ನಾನ ಗೃಹ, ಕೆಲವು ಮನೆಗಳ ನೆಲಕ್ಕೆ ವಿನ್ಯಾಸಗಳಿರುವ ಟಯಿಲ್ಸ್ ಇವೆಲ್ಲಾ ಇವೆ.

ನಗರಗಳು

[ಬದಲಾಯಿಸಿ]

ಮೊದಲಿಗೆ ಪತ್ತೆಗೊಂಡ ಎರಡು ನಗರಗಳೆಂದರೆ, ಹರಪ್ಪ ಮತ್ತು ಮೊಹೆಂಜೊದಾರೊ (ಇವೆರಡೂ ಈಗ ಪಾಕಿಸ್ತಾದಲ್ಲಿವೆ). ೧೯೨೦ರ ದಶಕದಿಂದಲೂ ಇಲ್ಲಿ ವ್ಯಾಪಕವಾದ ಸಂಶೋಧನೆ ಮತ್ತು ಉತ್ಖನನ ನಡೆದಿದ್ದು, ಈ ವರೆಗೆ ಈ ನಾಗರಿಕತೆಯ ಕುರಿತು ಗೊತ್ತಿರುವ ಹೆಚ್ಚಿ ನ ವಿಚಾರಗಳು, ಈ ಎರಡು ಸ್ಥಳಗಳಲ್ಲಿ ದೊರೆತ ವಿವರಗಳನ್ನು ಆಧರಿಸಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಭಾರತದಲ್ಲೂ ಈ ನಾಗರಿಕತೆಯ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ. ಲೋಥಲ್, ಧೊಲಾವಿರಾ, ಕಾಲಿಬಂಗಾ ರಾಖಿಘಠಿ, ಬನವಾಲಿ ಮೊದಲಾದ ಸ್ಥಳಗಳಲ್ಲಿ ಈ ನಾಗರಿಕತೆಗೆ ಸಂಬಂಧಿಸಿದ ನಗರಗಳ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ. ಇತರ ನೂರಾರು ಸ್ಥಳಗಳಲ್ಲಿ ಈ ನಾಗರಿಕತೆಯ ಕುರುಹುಗಳನ್ನು ಪತ್ತೆ ಹಚ್ಚಲಾಗಿದ್ದರೂ, ಸಾಕಷ್ಟು ಉತ್ಖನನ ಇನ್ನೂ ನಡೆಯಬೇಕಾಗಿರುವುದರಿಂದಾಗಿ, ಈ ನಾಗರಿಕತೆಯ ಕುರಿತು ನಾವು ಅರಿಯಬೇಕಾಗಿರುವುದು ಬೇಕಷ್ಟಿದೆ.

ಸಿಂಧೂ ಲಿಪಿ ಅಥವಾ ಹರಪ್ಪ ಲಿಪಿ

[ಬದಲಾಯಿಸಿ]

ಇಲ್ಲಿ ದೊರೆತಿರುವ ಸಾವಿರಾರು ಮುದ್ರೆಗಳಲ್ಲಿ ಮತ್ತು ಇತರ ಕೆಲವು ಕಡೆ ಲಿಪಿ ಇದೆ. ಹರಪ್ಪ ಲಿಪಿ ಮೂಲವನ್ನು ಕುರಿತು ಅನೇಕ ವಾದಗಳಿವೆ, ಕೆಲವರು ಈ ಲಿಪಿಯು ಪ್ರೋಟೋ-ದ್ರಾವಿಡ ಲಿಪಿಯಿಂದ ಬಂದದ್ದು ಎಂದರೆ ಮತ್ತೆ ಕೆಲವರು ಎಲ್ಮೋ-ದ್ರಾವಿಡ ಲಿಪಿಯಿಂದ ಬಂದದ್ದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದರ ಮೂಲವನ್ನು ಸಂಸ್ಖೃತದ ಹಳೆಯ ರೂಪಕ್ಕೆ ಕೊಂಡೊಯ್ದಿದ್ದಾರೆ. (ಎಸ್.ಆರ್.ರಾವ್ []). ಜೊತೆಗೆ ಈ ಲಿಪಿಯನ್ನು ಉಪಯೋಗಿಸಿ ಬರೆದಿರುವ ಅಕ್ಷರಗಳು ಯಾವ ಭಾಷೆಯಲ್ಲಿವೆ ಎಂಬುದರ ಕುರಿತೂ ವಿವಾದಗಳಿವೆ. ಈ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ಲಿಪಿಯ ಕುರಿತು ಸಂಶೋಧನೆ ನಡೆಸಿರುವ ವಿದ್ವಾಂಸರೆಂದರೆ ಐರಾವತಂ ಮಹಾದೇವನ್, ಎಫ್.ಬಿ.ಜೆ. ಕ್ಯುಪರ್, ಅಸ್ಕೊ ಪಾರ್ಪೋಲ ಮತ್ತು ಮೈಕೆಲ್ ವಿಟ್ಜೆಲ್, ಎಸ್. ಆರ್. ರಾವ್ ಮೊದಲಾದವರು.

ಸಂಶೋಧನೆ ಮತ್ತು ಉತ್ಖನನಗಳು

[ಬದಲಾಯಿಸಿ]

ಹರಪ್ಪ ನಾಗರೀಕತೆಯ ಕುರುಹುಗಳ ಕುರಿತು ಮೊದಲು ದಾಖಲಿಸಿದವರೆಂದರೆ 1826ರಲ್ಲಿ ನರೇಟಿವ್ಸ್ ಆಫ್ ವೇರಿಯಸ್ ಜರ್ನೀಸ್ ಇನ್ ಬಲೂಚೀಸ್ತಾನ್, ಆಫಘಾನಿಸ್ತಾನ್ ಅಂಡ್ ದ ಪಂಜಾಬ್ ಎಂಬ ಕೃತಿಯನ್ನು ಬರೆದ ಚಾರ್ಲ್ಸ್ ಮ್ಯಾಸನ್. ಸ್ಥಳಿಯರು ಇಲ್ಲಿ ೨೫(25)ಮೈಲುಗಳಷ್ಟು ವಿಶಾಲವಾದ ಪ್ರಾಚೀನ ನಗರವಿದೆ ಎಂದು ಹೇಳುತ್ತಿದ್ದರೂ ಸಹ ಒಂದು ಶತಮಾನದವರೆಗೂ ಯಾರು ಈ ಕುರಿತು ಉತ್ಸಾಹ ತೋರಿರಲಿಲ್ಲ. 1920ರ ನಂತರ ಹರಪ್ಪ ಮತ್ತು ಮೊಹೆಂಜದಾರೊ ಗಳಲ್ಲಿ ವ್ಯಾಪಕವಾದ ಉತ್ಖನನವನ್ನು ನಡೆಸಿದವರು ಭಾರತೀಯ ಪುರಾತತ್ವ ಇಲಾಖೆ. 1947ರ ಹೊತ್ತಿಗಾಗಲೇ ಸುಮಾರು ೪೦(40)ಸ್ಥಳಗಳಲ್ಲಿ ಈ ನಾಗರಿಕತೆಯ ಕುರುಹುಗಳು ಪತ್ತೆಯಾಗಿದ್ದವು. ಭಾರತದ ವಿಭಜನೆಯಾದಾಗ ಇವುಗಳಲ್ಲಿ ೩೮(38)ಸ್ಥಳಗಳು ಪಾಕಿಸ್ಥಾನದ ಪಾಲಿಗೆ ಸೇರಿಹೋದವು. ನಂತರ, ಭಾರತೀಯ ಪುರಾತತ್ವ ಇಲಾಖೆಯು ಧೋಲವಿರಾ, ಕಾಲಿಬಂಗನ್, ಲೋಥಲ್,ರಾಖಿಗಠಿ ಮೊದಲಾದ ಸ್ಥಳಗಳಲ್ಲಿ ಯೋಜನಾ ಬದ್ದ ನಗರಗಳ ಕುರುಹುಗಳನ್ನು ಗುರುತಿಸಿ, ವ್ಯಾಪಕ ಸಂಶೋಧನೆ ನಡೆಸಿತು. ಈಗ ಭಾರತದ ಗುಜರಾತ್, ಹರ್ಯಾಣಾ, ಪಂಜಾಬ್, ಉತ್ತರ ಪ್ರದೇಶಗಳಲ್ಲಿ ಈ ನಾಗರಿಕತೆಯ ೧೫೦೦(1500)ಕ್ಕೂ ಹೆಚ್ಚಿ ನ ಸ್ಥಳಗಳನ್ನು ಪತ್ತೆಹಚ್ಚಲಾಗಿದೆ. ಆದರೂ, ಇವುಗಳಲ್ಲಿ ಉತ್ಖನನ ನಡೆದಿರುವು ದು ಶೇ.೧೦ ಕ್ಕಿಂತ ಕಡಿಮೆ ವಿಸ್ತೀರ್ಣದಲ್ಲಿ. ಆದ್ದರಿಂದ, ಮುಂದುವರಿಯುತ್ತಿರುವ ಸಂಶೋಧನೆಗಳಲ್ಲಿ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ.


ಈ ಹರಪ್ಪ ಮತ್ತು ಮಹೋ೦ಜೋದಾರ್ ನಾಗರಿಕತೆ ಹಲವಾರು ಕಾರಣಗಳಿಂದಾಗಿ ಕ್ರಮೇಣ ಹಿನ್ನಡೆ ಕಂಡಿದೆ ಎಂದು ಶ೦ಕಿಸಲಾಗಿದೆ ಪ್ರಾಚೀನ ಕಾಲದ ಯಾವುದೇ ನಾಗರಿಕತೆ ನೊಡಿದಾಗ ನಮಗೆ ಗೋಚರವಾಗುವ ಒಂದು ಅಂಶ ಎ೦ದರೆ ಎಲ್ಲ ನಾಗರಿಕತೆಗಳು ಪ೦‌ಚಭೂತಗಳಲ್ಲೊ೦ದಾದ "ನೀರು" ಅನ್ನ ಅಳವಡಿಸಿಕೊಂಡಿದೆ ಮತ್ತು ನದಿ ತಟದಲ್ಲಿ ಬೆಳವಣಿಗೆ ಕಂಡಿದೆ. ಸಿಂಧೂ ಕಣಿವೆಯು ನಾಗರಿಕತೆಯ ತೊಟ್ಟಿಲೇನೂ ಅಲ್ಲ ಎಂದವರಿಗೆ ಅಚ್ಚರಿ ಕಾದಿದೆ. ಹರಪ್ಪಾ, ಮೊಹೆಂಜದಾರೋ, ಅವಶೇಷಗಳು ಕೇವಲ ನಾಶಗೊಂಡ ಸಂಸ್ಕೃತಿಯ ಕುರುಹುಗಳಲ್ಲ, ಅತ್ಯಂತ ಕ್ರಿಯಾಶೀಲವಾಗಿದ್ದ ಅಪ್ಪಟ ಭಾರತೀಯ ಬದುಕಿನ ಸಾಕ್ಷಿಯಾಗಿದ್ದವು ಎಂಬುದಕ್ಕೆ ಈಗಲೂ ಪುರಾವೆಗಳು ಸಿಗುತ್ತಿವೆ. 1921ರಲ್ಲಿ ಹರಪ್ಪಾ, ಮೊಹೆಂಜದಾರೋ ನಗರಗಳು ಪತ್ತೆಯಾದ ದಿನದಿಂದ ಈವರೆಗೂ ಈ ನಾಗರಿಕತೆಯ ಬಗ್ಗೆ ಬೆಳಕು ಚೆಲ್ಲುವ ಮತ್ತು ಕತ್ತಲನ್ನೂ ಚೆಲ್ಲುವ ವಾದಗಳು ಮೂಡುತ್ತಲೇ ಇವೆ. ಒಂದು ಮುಖ್ಯವಾದ ವಾದ ಎಂದರೆ ಇದು ದ್ರಾವಿಡರ ಭೂಮಿಯಾಗಿತ್ತು, ಆರ್ಯರು ಬಂದು ಅವರನ್ನು ಓಡಿಸಿದರು, ಅವರ ನಾಗರಿಕತೆಯನ್ನು ನಿರ್ನಾಮ ಮಾಡಿದರು, ಇತ್ಯಾದಿ. ಆದರೆ ಅಂಥ ಮಹಾನ್ ದ್ರಾವಿಡ ನಾಗರಿಕತೆಯ ಒಂದೂ ಸಾಂಸ್ಕೃತಿಕ ಕುರುಹುಗಳು ಈವರೆಗೆ ಪತ್ತೆಯಾಗದಿರುವುದು ಮತ್ತು ಆರ್ಯರು ಯಾವುದೇ ನಾಗರಿಕತೆಯ ಕುರುಹುಗಳನ್ನೂ ತೋರದೆ ಬೃಹತ್ ಗ್ರಂಥಗಳನ್ನು ರಚಿಸಿರುವುದು – ಎರಡೂ ತಾಳಮೇಳ ಇಲ್ಲದ ವಾದ ಎಂಬುದು ಮೇಲುನೋಟಕ್ಕೇ ಸರಿ ಎನಿಸುತ್ತದೆ. ಇಲ್ಲಿ ಅರಳಿದ್ದು ಒಂದೇ ಸಂಸ್ಕೃತಿ, ಅವರೇ ಈ ಎಲ್ಲಾ ಗ್ರಂಥಗಳನ್ನು ರೂಪಿಸಿದರು ಎಂಬ ವಾದಕ್ಕೆ ಈಗ ಬೆಲೆ ಬರುತ್ತಿದೆ. ಈವರೆಗೆ ಈ ಪ್ರದೇಶದಲ್ಲಿ 2000ಕ್ಕೂ ಹೆಚ್ಚು ನಗರಗಳು ಪತ್ತೆಯಾಗಿವೆ. ಈಗ ಬತ್ತಿ ಹೋಗಿರುವ ಸರಸ್ವತೀ ನದಿಯನ್ನು ಇಲ್ಲಿ ಸಂಶೋಧಕರು ಗುರುತಿಸಿದ್ದಾರೆ. ಸರಸ್ವತಿ ನದಿಯು ಸುಮಾರು ಕ್ರಿ.ಪೂ.2000 ರ ಸಮಯದಲ್ಲಿ, ಭೂಕಂಪನದ ಪ್ರಭಾವ ಮತ್ತಿತರ ಕಾರಣಗಳಿಂದಾಗಿ ಒಣಗಿ ಹೋಗಿದೆ ಎಂದು ಗುರುತಿಸಲಾಗಿದೆ ಹೀಗಾಗಿ ಇದು ಸಿಂಧೂ-ಸರಸ್ವತೀ ನಾಗರಿಕತೆ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಿದೆ. ಈಗ ಇದೇ ನೆಲದಲ್ಲಿ ವೇದಕಾಲೀನ ಸಂಸ್ಕೃತಿಯನ್ನು ಹೋಲುವ ಹಲವು ಕುರುಹುಗಳು ಮತ್ತು ನಿದರ್ಶನಗಳು ಸಾಕಷ್ಟು ದೊರೆತಿವೆ. (ಉದಾ - ಕಾಲಿಬಂಗನ್ ನಲ್ಲಿ ದೊರೆತಿರುವ ಹೋಮ ಕುಂಡಗಳಂತಹ ರಚನೆ).

ಹೊರ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಎಸ್. ಆರ್. ರಾವ್, ಸಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣನ ದ್ವಾರಕೆ. ಅಂಕಿತ ಪುಸ್ತಕ, ಬೆಂಗಳೂರು.