ಸಾಬುದಾಣಾ ವಡೆ
ಸಾಬುದಾಣಾ ವಡೆ ಮಹಾರಾಷ್ಟ್ರದ ಒಂದು ಸಾಂಪ್ರದಾಯಿಕ ಕರಿದ ಲಘು ಆಹಾರ. ಅದನ್ನು ಹಲವುವೇಳೆ ಮಸಾಲೆಯುಕ್ತ ಹಸಿರು ಚಟ್ನಿ ಮತ್ತು ಬಿಸಿ ಮಸಾಲೆ ಚಹಾದೊಂದಿಗೆ ಬಡಿಸಲಾಗುತ್ತದೆ ಮತ್ತು ತಾಜಾ ಇದ್ದಾಗ ತಿಂದರೆ ಅತ್ಯುತ್ತಮವಾಗಿರುತ್ತದೆ. ಸಾಬುದಾಣಾ ವಡೆ ಉಪವಾಸದ ಸಮಯದಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ, ಇದನ್ನು ಸಾಮಾನ್ಯವಾಗಿ ಧಾರ್ಮಿಕ ಹಬ್ಬಗಳು ಮತ್ತು ನವರಾತ್ರಿ ವ್ರತದ ಅವಧಿಯಲ್ಲಿ ಬಡಿಸಲಾಗುತ್ತದೆ. ಸಾಬುದಾಣಾ ವಡೆಗಳು ಗರಿಗರಿಯಾಗಿರುತ್ತವೆ ಮತ್ತು ಬಾಯಲ್ಲಿಟ್ಟ ತಕ್ಷಣ ಕರಗಿಬಿಡುತ್ತವೆ ಮತ್ತು ಇನ್ನಷ್ಟು ಬೇಕೆನ್ನುವ ಆಸೆ ಉಂಟು ಮಾಡುತ್ತವೆ. ಮಾಡುವ ವಿಧಾನಗಳು ಸರಳವಾಗಿವೆ ಆದರೆ ಸಮಯ ತೆಗೆದುಕೊಳ್ಳುತ್ತವೆ. ಸಾಬುದಾಣಿಯನ್ನು ರಾತ್ರಿಯಿಡಿ ನೆನೆಸಿಡಬೇಕು; ಆಲೂಗಡ್ಡೆಗಳನ್ನು ಬೇಯಿಸಬೇಕು, ಸಿಪ್ಪೆ ತೆಗೆದು ಹಿಸುಕಬೇಕು; ಶೇಂಗಾವನ್ನು ಹುರಿದು, ಸಿಪ್ಪೆ ಸುಲಿದು, ತರಿತರಿಯಾಗಿ ರುಬ್ಬಿಕೊಳ್ಳಬೇಕು. ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಉಪ್ಪು ಮತ್ತು ಕರಿಯಲು ಎಣ್ಣೆ ಸಾಬುದಾಣಾ ವಡೆಗೆ ಅಗತ್ಯವಾದ ಇತರ ಹೆಚ್ಚುವರಿ ಪದಾರ್ಥಗಳು.