ಸರ್ಪಕೋಲ
ನಾಗನ ಕೋಲವು ಒಂದು ಜನಪದ ಆಚರಣೆ. ಇದು ಪಾಣರಾಟದ ಒಂದು ಅಂಗವಾಗಿದೆ. ಇದು ನಾಗ ದೇವನನ್ನು ಒಳಗೊಂಡಿದೆ. ಪಾಣರಾಟ ಎಂದರೆ ಸ್ಥಳೀಯ ದೈವ ಸಮೂಹಗಳಿಗೆ ಜಿಲ್ಲೆಯ ಪ್ರಧಾನ ಭೂತ ಮಾಧ್ಯಮ ಜನಾಂಗಗಳಲ್ಲಿ ಒಂದಾದ ಪಾಣರು ಗ್ರಾಮ ಮಟ್ಟದಲ್ಲಿ ಅಥವಾ ಮನೆತನದ ಮಟ್ಟದಲ್ಲಿ ನಡೆಸುವ ವೈದಿಕೇತರ ಆಚರಣೆ. [೧]ಸ್ಥಳೀಯ ಬ್ರಾಹ್ಮಣೇತರ ಜನವರ್ಗದ ದೃಷ್ಠಿಯಲ್ಲಿ, ನಾಗರೂಪಿಯಾದ ಸ್ವಾಮಿಯು ಒಂದು ಆರ್ಯೇತರ ದೈವ ಭೂಮಿ ಪುತ್ರನೆಂದು ನಂಬಲಾಗಿದೆ. ನಾಗ ಅಥವಾ ಸ್ವಾಮಿಯನ್ನು ಕರಾವಳಿಯ ಅತ್ಯಂತ ಪ್ರಭಾವಿ ಕೃಷಿ ಮೂಲದ ನಾಡವರು ತಮ್ಮ ಆರಾಧ್ಯ ದೈವವೆಂದು ನಂಬುತ್ತಾರೆ. ಇದು ನಾಗಾರಾಧನೆಯ ಒಂದು ಭಾಗವಾಗಿದೆ.[೨] [೩] ಈ ಆಚರಣೆಯಲ್ಲಿ ನಾಗನನ್ನು ಸೂಚಿಸುವ ವ್ಯಕ್ತಿಯು ನೃತ್ಯ ಮಾಡುತ್ತಾನೆ.
ಹಿನ್ನೆಲೆ
[ಬದಲಾಯಿಸಿ]ಹಿಂದೆ ಮಹಾಭಾರತ ಕಾಲದಲ್ಲಿ ಪರೀಕ್ಷಿತನ ಮಗನಾದ “ಜನಮೇಜಯ” ಉತ್ತಂಕನೆಂಬವನಿಂದ ಪ್ರೇರಿತನಾಗಿ ತನ್ನ ತಂದೆಯ ಮರಣದ ಹಗೆಯನ್ನು ಸಾಧಿಸುವುದಕ್ಕಾಗಿ ಸರ್ಪಕುಲವನ್ನೇ ನಾಶಪಡಿಸುವಂತಹ “ಸರ್ಪಯಾಗ”ವನ್ನು ಮಾಡುತ್ತಾನೆ.[೪] ಇದಕ್ಕೆ ಕದ್ರುವಿನ ಶಾಪವೂ ಪೂರಕವಾದುದು. ಹೀಗಾಗಿ ಸರ್ಪಯಾಗದಲ್ಲಿ ಅನೇಕಾನೇಕ ಸರ್ಪಗಳು ಅಗ್ನಿದೇವನಿಗೆ ಅರ್ಪಿತವಾದುವು. ಕೊನೆಗೆ ತಕ್ಷಕನೆಂಬ ಸರ್ಪವು ಇಂದ್ರನ ಆಶ್ರಯದಲ್ಲಿ ಇದ್ದುದನ್ನು ಗಮನಿಸಿದ ಹೋತೃಗಳು, ಇಂದ್ರಸಮೇತ ತಕ್ಷಕನನ್ನು ಆಹ್ವಾನಿಸಿದಾಗ, ಇನ್ನೇನು ಇಂದ್ರಸಮೇತ ತಕ್ಷಕ ಅಗ್ನಿಗೆ ಬೀಳುವುದರಲ್ಲಿದ್ದಾಗ ಜರಾತ್ಕಾರುವಿನ ಮಗನಾದ ಅಸ್ತಿಕನೆಂಬ ಜ್ಞಾನಿಯು ಯಾಗವನ್ನು ನಿಲ್ಲಿಸುತ್ತಾನೆ. ಇದರಿಂದ ಅಲ್ಪ- ಸ್ವಲ್ಪ ನಾಗಗಳು ಬದುಕುಳಿದವು. ಕ್ರಮೇಣ ಮಹಾಭಾರತದ ದ್ವಾಪರಯುಗವು ಮುಗಿಯಿತು. ಕಲಿಯುಗದಲ್ಲಿ ಮಾನವರು ನಾಗಗಳ ವಂಶವನ್ನು ನಾಶಪಡಿಸತೊಡಗಿದರು. ನಾಗರೂಪದ ಸ್ಕಂದನು ನಾಗಗಳ ವಂಶವನ್ನು ಉದ್ಧಾರ ಮಾಡುವುದರ ಸಲುವಾಗಿ ಮನುಷ್ಯರನ್ನು ಕಚ್ಚತೊಡಗಿದನು. ಮನುಷ್ಯರಿಗೆ ನಾಗಗಳ ಭಯ ಹುಟ್ಟಿತು. ಇದಕ್ಕೆ ಪರಿಹಾರವೆಂಬಂತೆ ನಾಗಗಳ ಆರಾಧನೆ ಪ್ರಾರಂಭವಾಯಿತು. ಈ ರೀತಿಯಾಗಿ ಆರಂಭವಾದ ನಾಗನ ಸ್ತುತಿಗೆ “ನಾಗಮಂಡಲ”ವೆಂದು ಹೆಸರಾಯಿತು. ಈ ಮಂಡಲವನ್ನು ಶ್ರದ್ಧೆಯಿಂದ ಮಾಡಿದವರಿಗೆ ನಾಗ ಕೃಪೆ ಹಾಗೂ ಸುಬ್ರಹ್ಮಣ್ಯನ ಅನುಗ್ರಹ ಸದಾ ಇರುತ್ತದೆ ಎಂದು ನಂಬಲಾಗಿದೆ.
ಆಚರಣೆ
[ಬದಲಾಯಿಸಿ]ನಾಗ ಕೋಲದ ಆಚರಣೆ ಹೇಗಿರುತ್ತದೆಂದರೆ ಈ ನಾಗನನ್ನು ಸೂಚಿಸುವ ವ್ಯಕ್ತಿಯು ನೃತ್ಯ ಮಾಡುತ್ತಾನೆ. ಅರ್ಧನಾರಿ ವೇಷದ ಪಾಣ ಕಸೆ ವೇಷತೊಟ್ಟು ನಾಗನ ಹೊಗಳಿಕೆ ಹೇಳುತ್ತಾ ಮಂಡಲಕ್ಕೆ ಪ್ರದಕ್ಷಿಣೆ ಹಾಕಿ ಬರುತ್ತಾನೆ. ಇನ್ನೊಬ್ಬ ಪಾಣ ಅವನ ಜೊತೆ ಹೆಜ್ಜೆ ಹಾಕುತ್ತಾನೆ. ಆದರೆ ಈತನು ನಾಗಮಂಡಲದ ನಾಗಪಾತ್ರಿಯಂತೆ ಕೆಂಪು ಬಟ್ಟೆ ತೊಡುವುದಿಲ್ಲ. ಬಿಳಿಯ ಬಟ್ಟೆಯನ್ನು ತೊಟ್ಟಿರುತ್ತಾನೆ. ತಲೆಯ ಮೇಲಿನ ಅಡಿಕೆ ಹಾಳೆಯ ಶಿರೋಭೂಷಣವು ನಾಗನ ಹೆಡೆಯನ್ನು ಹೋಲುತ್ತದೆ. ಪಾಣರು ಸ್ವಾಮಿಕೋಲ ಮತ್ತು ನಾಗನಕೋಲ ಎರಡರಲ್ಲೂ ಮರದ ಡಕ್ಕೆ ಅಥವಾ ಕಂಚಿನ ಡಕ್ಕೆಯನ್ನೇ ಬಳಸುತ್ತಾರೆ. ಸ್ವಾಮಿಯನ್ನು ಮೈದುಂಬಿಕೊಂಡು ಬರುವ ಪಾಣನ ವೇಷವು ಯಕ್ಷಗಾನದ ಕೇದಗೆ ಮುಂದಲೆ ವೇಷವನ್ನು ಹೋಲುತ್ತದೆ. ಪಾಣರು ನಡೆಸುವ ಈ ಕೋಲಗಳಿಗೆ ಪ್ರತ್ಯೇಕವಾದ ವೇದಿಕೆಯಾಗಲಿ, ರಂಗಮಂದಿರವಾಗಲಿ ಇಲ್ಲ. ಗುಡಿಯ ಎದುರಿನ ಸಣ್ಣ ಅಂಗಳದಲ್ಲಿ ಈ ಆಚರಣೆ ಸಂಪ್ರದಾಯದಂತೆ ಜರುಗುತ್ತದೆ. ಸುತ್ತಲೂ ಭಕ್ತಾದಿಗಳು ನೆರೆದಿರುತ್ತಾರೆ. ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ. ಭಕ್ತಾದಿಗಳ ನಡುವೆಯೇ ವೇಷಧಾರಿಗಳು ಸಂಚರಿಸುತ್ತಾರೆ. ಜನರು ಆಚರಣೆಯನ್ನು ಮನರಂಜನೆಯ ಹಿತದೃಷ್ಟಿಯಿಂದ ನೋಡದೆ ಭಕ್ತಿ ಗೌರವದಿಂದ ನೋಡುತ್ತಾರೆ. ಇಲ್ಲಿ ಪ್ರೇಕ್ಷಕರಾಗಿ ಹಾಗೂ ಭಾಗಾಳುಗಳಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣೇತರರೇ ಭಾಗವಹಿಸುತ್ತಾರೆ. ವಾದ್ಯದವರು ಬ್ಯಾಂಡು, ಸಮ್ಮೇಳ, ಮೌರಿ ಬಳಸುತ್ತಾರೆ. ಇವರು ಪ್ರೇಕ್ಷಕವೃಂದದ ಪಕ್ಕಕ್ಕೆ ಕುಳಿತುಕೊಳ್ಳುತ್ತಾರೆ. ಇವರು ಬ್ರಾಹ್ಮಣೇತರ ಪಂಗಡಕ್ಕೆ ಸೇರಿದ ದೇವಾಡಿಗ ಜಾತಿಗೆ ಸೇರಿದವರಾಗಿರುತ್ತಾರೆ.
ಬೈಲಬಾಕುಡರ ಸರ್ಪಕೋಲ
[ಬದಲಾಯಿಸಿ]ಬೈಲಬಾಕುಡರ ಸರ್ಪಕೋಲವು ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಕಲೆಯ ಭಾಗವಾಗಿದ್ದು, ಈಗ ಕೇರಳಕ್ಕೆ ಸೇರಿರುವ ಕಾಸರಗೋಡು ಪರಿಸರದ ಹರಿಜನ ಜನಾಂಗಗಳಲ್ಲಿ ಬೈಲ ಬಾಕುಡರ ಜನಾಂಗವೂ ಒಂದು. ಸರ್ಪ ಈ ಜನಾಂಗದ ಕುಲದೈವವಾಗಿದೆ. ಕಾಸರಗೋಡು ಪರಿಸರದಲ್ಲಿನ ಜನರು ನಂಬಿ ಪೂಜಿಸಿಕೊಂಡು ಬಂದ ಹಲವು ನಾಗನಬನಗಳಿವೆ. ಇಲ್ಲಿ ಅವರು ಪ್ರತೀ ವರ್ಷ ಬೆರ್ಮೆರೆ ಸೇವೆ, ಸರ್ಪಕೋಲ, ಬೆರ್ಮೆರೆ ನಲಿಕೆ ಎಂದು ಕರೆಯುವ ವಿವಿಧ ನಾಗಾರಾಧನೆಯ ಆಚರಣೆಗಳನ್ನು ನಡೆಸಿಕೊಂಡು ಬರುತ್ತಾರೆ. ಇವರು ವಾರ್ಷಿಕ ಆಚರಣೆಗಳನ್ನು ಭೂತ ಮಾಧ್ಯಮ ಜನಾಂಗಗಳಲ್ಲಿ ಒಂದಾದ ನಲಿಕೆ ಅಥವಾ ಕೋಪಾಳರ ಮೂಲಕ ನಡೆಸುತ್ತಾರೆ. ಈ ಜನವರ್ಗದವರು ಆ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೈಲಬಾಕುಡರು ನಾಗಬ್ರಹ್ಮನನ್ನು ತಮ್ಮ ಕುಲದೈವವಾಗಿ ಆರಾಧಿಸುತ್ತಾರೆ. ವಾರ್ಷಿಕ ಆಚರಣೆಯಲ್ಲಿ ನಾಲ್ಕು ಬಗೆಯ ಸರ್ಪಗಳನ್ನು ಆರಾಧಿಸುತ್ತಾರೆ. ಅವುಗಳೆಂದರೆ:ದೊಡ್ಡ ಉಳ್ಳಾಳ್ತಿ(ನಾಗಾಯಕ್ಷಿ), ಚಿಕ್ಕ ಉಳ್ಳಾಳ್ತಿ, ಸಂಕಪಾಲೆ, ಹಾಗೂ ಕೃಷ್ಣಸರ್ಪ. ಬೈಲಕುಡರ ಜನವರ್ಗದವರ ನಂಬಿಕೆಯಂತೆ ಸರ್ಪಸುತ್ತು, ಕುಷ್ಟ, ಮುಂತಾದ ಕಾಯಿಲೆಗಳು ನಿವಾರಣೆ ಹಾಗೂ ಸಂತಾನ ಭಾಗ್ಯಕ್ಕಾಗಿ ಸರ್ಪಕೋಲವನ್ನು ಆಚರಿಸುತ್ತಾರೆ.
ಹಿನ್ನೆಲೆ
[ಬದಲಾಯಿಸಿ]ತುಳುನಾಡಿನಲ್ಲಿ ಬೈಲಬಾಕುಡರ ಸರ್ಪಕೋಲವನ್ನು ತುಳು ಪಾಡ್ದನದ ಅಂದರೆ ತುಳು ಭಾಷೆಯಲ್ಲಿ ಹಾಡನ್ನು ಹಾಡುತ್ತಾ ನಾಗನನ್ನು ಆರಾಧಿಸುತ್ತಾರೆ.[೫] ಈ ಆಚರಣೆಯ ಸಂಧರ್ಭದಲ್ಲಿ ಹೇಳುವ ತುಳು ಪಾಡ್ದನದಲ್ಲಿ ದೊರೆವ ವಿವರ ಹೀಗಿದೆ: ಅಪ್ಪಣ್ಣ ಎನ್ನುವುದು ಒಂದು ರಾಜ್ಯ. ಅಲ್ಲಿ ನಾರಾಯಣ ದೇವರು ಎಂಬುವವರಿದ್ದರು. ಅವರ ಹೆಂಡತಿಯ ಹೆಸರು ಮುಂಗಡೆ ದೆಯ್ಯಾರ್. ಅವರಿಗೆ ಬಹುಕಾಲ ಮಕ್ಕಳಾಗಿರಲಿಲ್ಲ. ಮುಂಗಡೆ ದೆಯ್ಯಾರ್ ಅವರು "ನನ್ನಂಥ ಹೆಂಗಸರು ತಿಂಗಳು ತಿಂಗಳು ಮುಟ್ಟು ಮೀಯುತ್ತಾರೆ. ಬಸುರಿಯಾಗಿ ವರ್ಷದೊಳಗೆ ಮಗುವನ್ನು ಹೆರುತ್ತಾರೆ. ಆದರೆ ನಾನು ಮೀಯುವುದು ಮೀನು ಮಿಂದ ಹಾಗೆ ಆಯ್ತಲ್ಲ" ಎಂದು ದುಃಖಿಸುತ್ತಾಳೆ. ಆಕೆಯ ಈ ಕೊರಗು ದೇವರಿಗೆ ತಲುಪಿತು. ಆ ಕೂಡಲೆ ಆಕೆ ಹೊರಗಾದಳು. ನಾಲ್ಕನೆ ದಿನ ಎಣ್ಣೆ, ಅರಿಶಿಣ ಹುಡಿ, ಸೀಗೆಬಾಗೆ ಹುಡಿ ತೆಗೆದುಕೊಂಡು ಹೊಳೆಗೆ ಸ್ನಾನಕ್ಕೆ ಹೋದಳು. ದಂಡೆಯ ಕಲ್ಲಿನಲ್ಲಿ ಕುಳಿತು"ಮೀನುಗಳಿಗಾದರೂ ಮಕ್ಕಳಾಗುತ್ತವೆ, ನನಗೆ ಮಕ್ಕಳಾಗಲಿಲ್ಲ." ಎಂದು ಮರುಗುತ್ತಾಳೆ. ಒಂದು ಬಾಳೆಯೆಲೆಯ ಮೇಲೆ ಸ್ವಲ್ಪ ಅಕ್ಕಿ, ವೀಳ್ಯದೆಲೆ ಮತ್ತು ಅಡಿಕೆ ಇರಿಸಿ ದೇವರನ್ನು ನೆನೆದು ನೀರಲ್ಲಿ ತೇಲಿಬಿಟ್ಟಳು.ಶುಭಲಕ್ಷಣ ಕಂಡಿತು. ಸ್ನಾನ ಮಾಡಿ ಬಂದಳು. ಮುಂದಿನ ತಿಂಗಳು ಮುಟ್ಟಾಗಲಿಲ್ಲ. ಏಳನೆ ತಿಂಗಳು ಅವಳ ಅತ್ತೆಯು ಅವಳ ಬಯಕೆಯನ್ನು ಮದುವೆ(ಸೀಮಂತ) ಮಾಡಲು ಬಯಸಿದಳು. ಒಂಬತ್ತು ತಿಂಗಳು ತುಂಬಿತು. ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತು. ಒಂದೊಂದು ಬೇನೆಗೆ ಒಂದೊಂದು ತತ್ತಿಗಳ ಮಾಲೆಗಳನ್ನು ಇಕ್ಕುತ್ತಾ ಹೋದಳು. ಆರನೆಯ ಬೇಯಲ್ಲಿ ಅರವತ್ತಾರು ಕೋಟಿ ಹೆಡೆಯ 'ಬೋಳಿಯ ಸಂಕಪಾಲ' ಎಂಬ ಸರ್ಪ ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಇಪ್ಪತ್ತೇಳು ಕೋಟಿ ಹೆಡೆಯುಳ್ಳ ಕರಿಯ ಸಂಕಪಾಲ(ಕಾಳಿಂಗ ಸರ್ಪ) ಹುಟ್ಟುತ್ತದೆ. ನಾರಾಯಣ ದೇವರು ಕರಿಯ ಸಂಕಪಲನನ್ನು ಕರೆದು ಜಲಲೋಕ, ಭೂಲೋಕ ಹಾಗೂ ಪಾತಾಳ ಲೋಕಗಳ ಅಧಿಪತಿಯಾಗಿ ನಾಗರಾಜನೆಂಬ ಖ್ಯಾತಿಯಿಂದ ಜೀವಿಸು ಎಂದು ಸೂಚಿಸುತ್ತಾರೆ.
ಒಂದು ದಿನ ಕರಿಯ ಸಂಕಪಾಲನು ಪಾತಾಳದಿಂದ ಮೇಲಕ್ಕೆ ಎದ್ದು ಬಂದು ತನಗೆ ಬೇಕಾದ ಯೋಗ್ಯ ವ್ಯಕ್ತಿ ಯಾರೆಂದು ಹುಡುಕುತ್ತಾನೆ. ಆಗ ಅವನ ಕಣ್ಣಿಗೆ ಬಿದ್ದವಳು ಕೊಡಂಬೇರಿನ ಪಳ್ಳಿತೋಕೂರು ಬಾಕುಡ್ತಿ. ಕಾಳಿಂಗ ಸರ್ಪ 'ಹೆದರಬೇಡ ನನ್ನನ್ನು ನಂಬು, ಕೋಲ ನಡೆಸಿ ನನ್ನ ಆರಾಧನೆ ಮಾಡು' ಎನ್ನುತ್ತಾನೆ. ಹಾಗೆಯೇ ಆಕೆ ಕೊಡಂಬೆರನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗ ಸರ್ಪವನ್ನು ಆರಾಧನೆ ಮಾಡುತ್ತಾಳೆ. ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆಯ ಸಂಪ್ರದಾಯ ರೂಢಿಗೆ ಬಂತು.
ಆಚರಣೆ
[ಬದಲಾಯಿಸಿ]ಬಾಕುಡರು ನಡೆಸುವ ಸರ್ಪಾರಧನೆಗೆ ಸರ್ಪಕೋಲ ಎನ್ನುತ್ತಾರೆ. ಕೋಪಾಳರು ಮತ್ತು ನಲ್ಕೆಯವರು ಬಾಕುಡರು ನಡೆಸುವ ಈ ಕೋಲವನ್ನು ನಡೆಸಿಕೊಡುತ್ತಾರೆ. ಸಂಕಪಾಲನಿಗೆ ಏಳುನೂರ ಇಪ್ಪತ್ತೇಳು ಹೆಡೆ ಇದೆ ಎಂಬ ನಂಬಿಕೆಯಿಂದ ಆ ದೈವವನ್ನು ಧರಿಸುವ ವ್ಯಕ್ತಿ ಬೃಹದಾಕಾರದ 'ಮುಡಿ'ಯನ್ನು ಬಳಸುತ್ತಾನೆ. ಈ ಮುಡಿ ಅಡಿಕೆಯ ಹಾಳೆಯಿಂದ ರಚಿಸಲಾಗುತ್ತದೆ.ಆ ಮುಡಿಯು ಶಂಕುವಿನ ಆಕಾರವನ್ನು ಪಡೆಯುತ್ತದೆ. ಈ ಅಣಿಯ ಗಾತ್ರದಿಂದಾಗಿ ಅದನ್ನು ಈತ ತಲೆಯ ಮೇಲಾಗಲೀ, ಸೊಂಟಕ್ಕಾಗಲೀ ಕಟ್ಟಿಕೊಳ್ಳುವಂತಿಲ್ಲ. ಭೂತ ಮಾಧ್ಯಮ ಕೋಪಳನು ನಡೆದುಕೊಂಡು ಬರುವಾಗ ಅಕ್ಕಪಕ್ಕಗಳಲ್ಲಿ ಮತ್ತು ಹಿಂದೆ ಜನರು ನಿಂತುಕೊಂಡು ಅವನ ತಲೆಯ ಮೇಲು ಭಾಗಕ್ಕೆ ಸರಿಯಾಗಿ ಮುಡಿಯನ್ನು ಹೊತ್ತು ನಡೆದುಕೊಂಡು ಬರುತ್ತಾರೆ. ಈ ಕೋಲ ವಿಧಿ ಇಡಿಯ ರಾತ್ರಿ ನಡೆಯುತ್ತದೆ.ಈ ನಡುವೆ ಕುಂಡಂಗೇರ್ ಎಂಬ ಯಕ್ಷಗಾನದ ಕೊಡಂಗಿಯನ್ನು ಹೋಲುವ ಎರಡು ಹಾಸ್ಯಪಾತ್ರಗಳ ಸಂಭಾಷಣೆ ಜರುಗುತ್ತದೆ. ಈ ಕ್ರಿಯೆಯನ್ನು ನಿಯಂತಿಸುವವಳು ಕೋಪಾಳ ಜಾತಿಗೆ ಸೇರಿದ ಮಹಿಳೆಯಾಗಿರುತ್ತಾಳೆ. ಆಕೆ ಯಕ್ಷಗಾನ ಭಾಗವತರಂತೆ ಈ ’ಕೋಡಂಗಿ’ಗಳೊಂದಿಗೆ ಸಂಭಾಷಿಸುತ್ತಾಳೆ ಮತ್ತು ಹಾಡುತ್ತಾಳೆ.
ಸರ್ಪಕೋಲದ ಒಂದು ಭಾಗ ’ಬೆರ್ಮೆರ್ ನಲಿಕೆ’ (ಬ್ರಹ್ಮನ ಕುಣಿತ)ಎಂಬ ಆಚರಣೆ.[೬] ಇದಕ್ಕೆ ನಾಲ್ಕು ಮಂದಿ ಮುಖ್ಯಸ್ಥರು ಇರುತ್ತಾರೆ. ಇವರಿಗೆ ನಾಲಜ್ಜಿ, ಕರ್ನೆರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಆಚರಣೆಯ ಕೊನೆಯ ಹಂತ ಕೃಷ್ಣಸರ್ಪನ ಕೋಲವು ನಡೆಯುವುದು ಗದ್ದೆಯಲ್ಲಿ. ಆ ದಿನ ಗದ್ದೆಯಲ್ಲಿನ ಕಸಕಡ್ಡಿಗಳನ್ನೆಲ್ಲಾ ಹಾರೆಯಿಂದ ಕೊರೆದು ಕಾಳಿಂಗ ಸರ್ಪನಿಗೆ ಸಂಚರಿಸಲು ದಾರಿ ಅನುಕೂಲ ಮಾಡಿಕೊಡಲಾಗುತ್ತದೆ.[೭] ಗದ್ದೆಯ ನಡುವೆ ಆಳೆತ್ತರದ ಹಸಿಮಾವಿನ ಗೆಲ್ಲುಗಳನ್ನು ಹುದುಗಿರುತ್ತಾರೆ. ಇದಕ್ಕೆ ’ಕುಕ್ಕಂಬಿಲ’ ಎಂದು ಕರೆಯುತ್ತಾರೆ. ಕಾಳಿಂಗ ಸರ್ಪವನ್ನು ಮೈಯಲ್ಲಿ ಆವಾಹಿಸಿಕೊಂಡ ಮಾಧ್ಯಮನು ಆ ಗದ್ದೆಯಲ್ಲಿ ಕವುಚಿ ಮಲಗಿ ಹಾವಿನಂತೆ ಹರಿದಾಡುತ್ತಾ ಹೊಟ್ಟೆಯೆಳೆದುಕೊಂಡು ಮಾವಿನ ಗೆಲ್ಲುಗಳಿರುವಲ್ಲಿಗೆ ಬರುತ್ತಾನೆ. ಬ್ರಾಹ್ಮಣ ಮಂತ್ರವಾದಿಯೊಬ್ಬ ನೆಲದಲ್ಲಿ ಹರಿದಾಡುವ ಈ ವ್ಯಕ್ತಿಯ ಕುಕ್ಕಂಬಿಲದ ಬಳಿಗೆ ಬಂದು ಸುಮ್ಮನೆ ಮಲಗಿದಾಗ ಮಂತ್ರವಾದಿಯು ಮಾವಿನ ಸೊಪ್ಪನ್ನು ಅದರ ಮೈ ಮೇಲೆ ಎಸೆಯುತ್ತಾನೆ. ಆಗ ಕಾಳಿಂಗ ಸರ್ಪವು ಸಿಟ್ಟಿನಿಂದ ಬುಸುಗುಟ್ಟುತ್ತದೆ. ಹೆಡೆಯೆತ್ತುವ ಅನುಕರಣೆ ಮಾಡುತ್ತದೆ ಹಾಗೂ ಹರಿದಾಡುತ್ತಾ ಮುಂದೆ ಸಾಗಿ ಇನ್ನೊಂದು ಕೊಕ್ಕಂಬಿಲದ ಬಳಿಗೆ ಬರುತ್ತದೆ. ಈ ಸರ್ಪಕೋಲದ ದಿವಸ ಅದಕ್ಕೆ ಸಂಬಂಧಪಟ್ಟವರೆಲ್ಲರೂ ನಿಯತ ಆಹಾರದಲ್ಲಿರುತ್ತಾರೆ. ಹಾಲು ಹಾಕದ ಚಾ ಹಾಗೂ ಬಾಳೆಹಣ್ಣು ಸೇವಿಸುತ್ತಾರೆ. ಹಸಿ ತೆಂಗಿನಗರಿಯ ಮೇಲೆ ಮಲಗುತ್ತಾರೆ.
ಸರ್ಪಂಕಳ
[ಬದಲಾಯಿಸಿ]ಸರ್ಪಂಕಳ ಇದು ಭರಣಿ ಉತ್ಸವದ ಒಂದು ಅಂಗವಾಗಿದೆ. ನಿರ್ದಿಷ್ಟವಾದ ಭರಣಿ ನಕ್ಷತ್ರದಲ್ಲಿ ಈ ಉತ್ಸವ ಆರಂಭವಾಗುತ್ತದೆ. ಉದಾಹರಣೆಗೆ: ಕಣಿಲ (ಮಂಜೇಶ್ವರ),ಉಳ್ಳಾಲ, ಪಡತ್ತೂರು ಇತ್ಯಾದಿ ಭಗವತಿಯ ದೇವಳದ ಮುಂಭಾಗದಲ್ಲಿ ಬಣ್ಣದ ಹುಡಿಗಳಿಂದ ಸರ್ಪದ ಹೆಡೆಯ ಮಂಡಲಗಳನ್ನು ಬಿಡಿಸುತ್ತಾರೆ ಭಾಗವತಿ ಪಾತ್ರಿಗಳು ಆವೇಶವಾಗಿ ಬಂದು ಆ ಹೆಡೆಗಳ ಮೇಲೆ ಉಗ್ರವಾಗಿ ನರ್ತಿಸುತ್ತಾರೆ. ಈ ಕ್ರಿಯೆ ಆದ ಬಳಿಕ ಧೂಳು ಮಿಶ್ರಿತವಾದ ಆ ಬಣ್ಣದ ಹುಡಿಯನ್ನು ಪ್ರಸಾದ ರೂಪವಾಗಿ ಸಂಗ್ರಹಿಸಿಕೊಳ್ಳಲು ಭಕ್ತಾದಿಗಳು ಮುಗಿ ಬೀಳುತ್ತಾರೆ. ಶೇಷನ ಗರ್ವಭಂಗದ ಕುರಿತಾಗಿ ಈ ಕ್ರಿಯೆಯು ನಿರೂಪಿಸಲ್ಪಟ್ಟರೂ ಸರ್ಪಲಾಂಛನದ ಜನಾಂಗವನ್ನು ಬಹುಶಃ ಇನ್ನೊಂದು ಜನಾಂಗವು ತುಳಿದುದರ ಸಂಕೇತ ಇದಾಗಿರಬಹುದೆಂದೆನಿಸುತ್ತದೆ.
ಕಾಡ್ಯನಾಟ
[ಬದಲಾಯಿಸಿ]ಕಾಡ್ಯ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಪ್ರದೇಶದ ಮೇರು ಹರಿಜನರ ಆರಾಧ್ಯದೈವ. ಕಾಡ್ಯನಾಟ, ಭಕ್ತಾದಿಗಳು ಈ ದೈವಕ್ಕೆ ನಡೆಸುವ ಒಂದು ಉಪಚಾರ. ಹೀಗಾಗಿ ಮೇರರ ವಾಸಸ್ಥಾನವಿರುವ ಎಲ್ಲೆಡೆಗಳಲ್ಲೆಲ್ಲ ಕಾಡ್ಯನ ಆರಾಧನಾ ಕೇಂದ್ರಗಳು ಗೋಚರಿಸುತ್ತದೆ. ಕಾಡ್ಯಾನಾಟದ ಸಂದರ್ಭದ ಹಾಡುಗಳನ್ನು ನೋಡಿದಾಗ ಕಾಡ್ಯನೆಂದರೆ ಕರಿನಾಗರ ಹಾವು ಅಂದರೆ ಕಾಳಿಂಗ ಸರ್ಪ ಎಂದು ತಿಳಿಯುತ್ತದೆ.[೮] ಅಲ್ಲದೆ ಕಾಡ್ಯನ ಮನೆಗಳಲ್ಲಿರುವ ಹುತ್ತ, ಸರ್ಪದ ಸಂಕೇತವಿರುವ ಕಲ್ಲುಗಳು, ಮಣ್ಣಿನ ಕಲಶಗಳು, ಅವುಗಳ ಮೇಲೆ ರೇಖಿಸಿರುವ ಸರ್ಪನ ಉಬ್ಬುಚಿತ್ರ, ಬರೆಯುವ ಮಂಡಲದ ರೇಖೆಗಳು, ಮೇರರು ತಮ್ಮ ಜನಾಂಗದ ಮೂಲಸ್ತ್ರೀ ಎಂದು ಹೇಳುವ ಹೊನ್ನಿಗೆ ಕಲಶ ದೊರೆತ ಬಗ್ಗೆ ಹಾಡುವ ಕಥಾನಕ ಎಲ್ಲವೂ ಕಾಡ್ಯನಾಟ ಒಂದು ಸರ್ಪಾರಾಧನೆ ಎನ್ನುವುದನ್ನು ತಿಳಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Prabhakar, K. V. (ಅಕ್ಟೋ 26, 2013). "ಭೂತದ ಆರಾಧನೆ, ಹಾಡು, ಕುಣಿತವೇ ನಲಿಕೆಯವರ ಕಸುಬು". Kannada Prabha.
{{cite web}}: Check date values in:|date=(help) - ↑ ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ೧೯೭೭.
- ↑ ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬.
- ↑ "ಪರೀಕ್ಷಿತ ರಾಜ ಮತ್ತು ಜನಮೇಜಯನ ಸರ್ಪಯಾಗಕ್ಕೂ ಸಂಬಂಧ ಇದೆಯೆ? ಆ ಯಾಗ ಪೂರ್ಣಗೊಂಡಿತೆ? - Kannada News". ಸೆಪ್ಟೆಂ 25, 2025.
{{cite web}}: Check date values in:|date=(help) - ↑ "ತುಳು ಚಾವಡಿ -'ಪಾಡ್ದನ' ಶಬ್ದ ತುಳುಟು ಎಂಚ ಬತ್ತ್ಂಡ್?". Vijay Karnataka.
- ↑ ಮಂಗಳೂರು, ಡಾ ಇಂದಿರಾ ಹೆಗ್ಗಡೆ (ಡಿಸೆಂ 27, 2024). "ತುಳುನಾಡಿನ ಭೂತಾರಾಧನೆ ನೆಲೆ - ಹಿನ್ನೆಲೆ". www.varthabharati.in.
{{cite web}}: Check date values in:|date=(help) - ↑ Badiger, Lingaraj (ಜುಲೈ 30, 2014). "ಸರ್ಪಾರಾಧನೆ". Kannada Prabha.
- ↑ "ಬಹುರೂಪ: ಕಳಶಗಳು ಕೆದಕುವ ಕಥೆಯ ಜಾಡಿನಲ್ಲಿ..." Vijay Karnataka.