ಸರಳ ಕುರ್‌ಆನ್

ವಿಕಿಪೀಡಿಯ ಇಂದ
Jump to navigation Jump to search


ಸರಳ ಕುರ್‌ಆನ್: ಇದು ತಫ್ಸೀರ್ ಅಥವಾ ವ್ಯಾಖ್ಯಾನ ಗ್ರಂಥಗಳ ಸಹಾಯವಿಲ್ಲದೆ ಸುಲಭವಾಗಿ ಅರ್ಥವಾಗುವ ಕುರ್‌ಆನ್ ನ ಹೊಸ ಭಾಷಾಂತರ. ಅರಬಿ ಮೂಲದಿಂದ ಇದು ನೇರವಾಗಿ ಕನ್ನಡಕ್ಕೆ ತರ್ಜುಮೆಯಾಗುತ್ತಿರುವ ಒಂದು ಕೃತಿಯಾಗಿದ್ದು, ಒಟ್ಟು ಒಂಬತ್ತು ಜುಝ್ ಗಳು (ವಿಭಾಗಗಳು) ಈಗಾಗಲೆ ಅನುವಾದಗೊಂಡು ಜಾಲತಾಣದಲ್ಲಿ ಪ್ರಕಟವಾಗಿವೆ. ಇಕ್ಬಾಲ್ ಸೂಫಿ ಯವರು ಇದನ್ನು ಅನುವಾದಿಸಿ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ನವರಾದ ಇಕ್ಬಾಲ್ ಸೂಫಿ ಯವರು ಸದ್ಯ ಕೊಲ್ಲಿ ರಾಷ್ಟ್ರ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ[೧].

ಅಭಿಜಾತ ಅರಬಿ ಭಾಷೆಯಲ್ಲಿರುವ ಕುರ್‌ಆನ್ ನ ಆಯತ್‍ ಗಳನ್ನು (ಅರ್ಥಾತ್ ವಚನಗಳನ್ನು) ವ್ಯಾಖ್ಯಾನಿಸುವ ತಫ್ಸೀರ್ ಗ್ರಂಥಗಳ ಸಹಾಯವಿಲ್ಲದೆ ಒಬ್ಬ ಸಾಮಾನ್ಯ ಓದುಗನಿಗೆ ಆಯತ್ ಗಳ ಇಂಗಿತವು ಸುಲಭವಾಗಿ ಅರ್ಥವಾಗುವಂತೆ ಮಾಡಲು 'ಸರಳ ಕುರ್‌ಆನ್' ಎಂಬ ಈ ಕೃತಿಯಲ್ಲಿ ಅನುವಾದಕರು ಪ್ರಯತ್ನಿಸಿದ್ದಾರೆ. ಅನುವಾದಗೊಂಡ ಕೆಲವು ಸೂರಃ ಗಳನ್ನು ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು ಅದು ಈಗ ಕನ್ನಡ ಜನಕೋಟಿಯ ಮುಂದಿದೆ.

'ಜುಝ್ ಅಮ್ಮ' ಎಂದು ನಾಮಕರಣಗೊಂಡಿರುವ ಕುರ್‌ಆನ್ ನ ಕೊನೆಯ ಅರ್ಥಾತ್ 30 ನೆಯ ಭಾಗದಲ್ಲಿರುವ ಎಲ್ಲ 37 ಸೂರಃ ಗಳು ಸಂಪೂರ್ಣವಾಗಿ ಅನುವಾದಗೊಂಡಿವೆ[೨]. ಅಲ್ಲದೆ ಸೂರಃ ಅಲ್-ಫಾತಿಹಃ[೩], ಸೂರಃ ಅಲ್-ಬಕರಃ[೪], ಸೂರಃ ಆಲಿ-ಇಮ್ರಾನ್[೫], ಸೂರಃ ಅನ್-ನಿಸಾ[೬], ಸೂರಃ ಅಲ್‌-ಮಾಇದಃ[೭] ಮತ್ತು ಸೂರಃ ಅಲ್-ಅನ್‍ಆಮ್[೮] ಗಳ ಅರ್ಥವನ್ನು ಕನ್ನಡೀಕರಿಸುವ ಕಾರ್ಯವೂ ಇದೀಗ ಅನುವಾದಕರು ಪೂರ್ಣಗೊಳಿಸಿದ್ದು ಪ್ರಸ್ತುತ ಸೂರಃ ಅಲ್-ಅಅರಾಫ್[೯] ಅನ್ನು ಭಾಷಾಂತರಿಸಲಾಗುತ್ತಿದೆ.

ಕೃತಿಯಲ್ಲಿ ಬಳಸಲಾದ ಚಿಹ್ನೆಗಳು[ಬದಲಾಯಿಸಿ]

ಈ ಭಾಷಾಂತರ ಕೃತಿಯ ಉದ್ದಕ್ಕೂ ಓದುಗರ ಅನುಕೂಲಕ್ಕಾಗಿ ಮೂರು ವಿಭಿನ್ನ ರೀತಿಯ ಕಂಸ ಅಥವಾ ಆವರಣಗಳನ್ನು ಬಳಸಲಾಗಿದೆ. ಮೊದಲನೆಯದಾಗಿ, ಕುರ್‌ಆನ್ ನ ಅಭಿಜಾತ ಅರಬಿ ಭಾಷೆಯ ವಿಶಿಷ್ಠ ಶೈಲಿ, ಪದಪ್ರಯೋಗ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಅದರ ಕೆಲವು ಅಶಾಬ್ದಿಕ ಸಂವಹನವನ್ನು ಕನ್ನಡೀಕರಿಸಲು ಸೂಕ್ತ ಕನ್ನಡ ಪರ್ಯಾಯಗಳು ಸಿಗದೇ ಹೋದಾಗ ಅವುಗಳ ಅರ್ಥವನ್ನು ಓದುಗರಿಗೆ ಸುಲಭವಾಗಿಸಿ ಕೊಡಲು ಇಂತಹ ( ) ಆವರಣಗಳನ್ನು ಬಳಸಲಾಗಿದೆ. ಎರಡನೆಯದಾಗಿ, ಈ [ ] ರೀತಿಯ ಆವರಣಗಳನ್ನು ಬಳಸಿರುವುದು 'ವಿವರಣಾತ್ಮಕ ಟಿಪ್ಪಣಿಗಳನ್ನು' ಸಕಾಲಿಕವಾಗಿ ಒದಗಿಸುವ ಸಲುವಾಗಿ. ಇಂತಹ ಆವರಣಗಳಲ್ಲಿ ಕೊಡಲಾದ ವಿವರಣೆಯು ಆಯತ್ ಗಳಿಗೆ ಸಂಬಂಧಿಸಿದ ಸೂಕ್ತವಾದ ಸಕಾಲಿಕವಾದ ಹೆಚ್ಚುವರಿ ಮಾಹಿತಿಯೇ ಹೊರತು ಆಯತ್ ಗಳ ನೇರ ಅರ್ಥವಂತೂ ಅಲ್ಲ. ಮೂರನೆಯದಾಗಿ, ಆಯತ್ ಗಳು ಅಂತ್ಯಗೊಳ್ಳುದನ್ನು ಅಥವಾ ಆಯತ್ ಗಳ ಒಂದು ಸಮೂಹವು ಅಂತ್ಯಗೊಳ್ಳುವುದನ್ನು ಗುರುತಿಸಲು ಇಂತಹ { } ಆವರಣಗಳನ್ನು ಬಳಸಿ ಅದರಲ್ಲಿ ಆಯಾ ಆಯತ್ ನ ಅಥವಾ ಸಮೂಹದಲ್ಲಿ ಬರುವ ಆಯತ್ ಗಳ ಸಂಖ್ಯೆಯನ್ನು ಕೊಡಲಾಗಿದೆ.

ಓದುಗರ ಮತ್ತು ಕಂಠಪಾಟ ಮಾಡುವವರ ಅನುಕೂಲಕ್ಕಾಗಿ ಕುರ್‌ಆನ್ ಗ್ರಂಥದ ಮೂಲ ಪಠ್ಯವನ್ನು 30 ಸಮ ವಿಭಾಗಗಳನ್ನಾಗಿ ವಿಂಗಡಿಸಿಕೊಳ್ಳುತ್ತಾರೆ. ಅಂತಹ ವಿಭಾಗೀಕರಣದ ಪ್ರತಿ ವಿಭಾಗವನ್ನು 'ಜುಝ್' ಎಂದು ಕರೆದಿದ್ದಾರೆ. ಈ ಕೃತಿಯಲ್ಲಿ ಪ್ರತಿ 'ಜುಝ್' ನ ಆರಂಭವನ್ನು ಗುರುತಿಸಲು ಜುಝ್ ನ ಕ್ರಮಸಂಖ್ಯೆಯನ್ನು ನಮೂದಿಸುವುದರ ಜೊತೆಗೆ ಕ್ರಮಸಂಖ್ಯೆಯ ಅತ್ತಿತ್ತ ✽ಸಂಖ್ಯೆ✽ ಚಿಹ್ನೆಯನ್ನು ಕೆಂಪು ಬಣ್ಣದಲ್ಲಿ ಬಳಸಲಾಗಿದೆ. ಉದಾಹರಣೆಗೆ, ಎಂಟನೆಯ ಜುಝ್ ನ ಆರಂಭವು ಸೂರಃ ಅಲ್ ಅನ್ಆಮ್ ನ ನೂರ ಹನ್ನೊಂದನೆಯ ಆಯತ್ ನೊಂದಿಗೆ ಆಗುತ್ತದೆ. ಅದನ್ನು ಗುರುತಿಸಲು ಆ ಆಯತ್ ನ ಆರಂಭದಲ್ಲಿ ✽8✽ ಚಿಹ್ನೆ ಬಳಸಲಾಗಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/List_of_translations_of_the_Quran#Kannada
  2. http://saralaquran.blogspot.com/p/new.html
  3. http://saralaquran.blogspot.com/p/blog-page.html
  4. http://saralaquran.blogspot.com/p/blog-page_24.html
  5. http://saralaquran.blogspot.com/p/blog-page_12.html
  6. http://saralaquran.blogspot.com/p/blog-page_16.html
  7. http://saralaquran.blogspot.com/p/blog-page_78.html
  8. http://saralaquran.blogspot.com/p/blog-page_5.html
  9. http://saralaquran.blogspot.com/p/blog-page_4.html