ವಿಷಯಕ್ಕೆ ಹೋಗು

ಸಮುದ್ರಗತ ಗಣಿಗಾರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಹುಲೋಹೀಯ ಉಂಡೆಗಳ ಗಣಿಗಾರಿಕಾ ಕಾರ್ಯಾಚರಣೆಯ ರೂಪರೇಖೆ

ಸಮುದ್ರಗತ ಗಣಿಗಾರಿಕೆ ಎಂದರೆ ಸಮುದ್ರದ ನೀರಿನಿಂದಲೂ, ಸಮುದ್ರ ತಳದಲ್ಲಿನ ನಿಕ್ಷೇಪಗಳಿಂದಲೂ ಖನಿಜ ಸಂಪತ್ತನ್ನು ಪಡೆಯುವ ಪ್ರಕ್ರಮ (ಅಂಡರ್‌ಸೀ ಮೈನಿಂಗ್). ಸಮುದ್ರದ ನೀರಿನಲ್ಲೂ, ಅದರ ತಳದಲ್ಲೂ ಇರುವ ಅಪಾರ ಖನಿಜ ಸಂಪತ್ತನ್ನು ಹೊರತೆಗೆಯುವುದು ಅಷ್ಟು ಸುಲಭವಲ್ಲ. ಇಲ್ಲಿ ಎದುರಾಗುವ ಪರಿಸರದ ಅಡ್ಡಿ ಆತಂಕಗಳು ನೆಲದ ಅಡಿಯಿಂದ ಖನಿಜವನ್ನು ಹೊರ ತೆಗೆಯುವಾಗ ಎದುರಾಗುವ ಅಡ್ಡಿ ಆತಂಕಗಳಿಗಿಂತ ಅವೆಷ್ಟೊ ಹೆಚ್ಚು. ಸಮುದ್ರದಲ್ಲಿರುವ ಖನಿಜ ನಿಕ್ಷೇಪಗಳು ಒಂದೇ ಭಾಗಕ್ಕೆ ಸೀಮಿತವಾಗಿಲ್ಲ. ಇವುಗಳ ಹರವನ್ನು ಅಧ್ಯಯಿಸಲು ಸಮುದ್ರವನ್ನು ನಾಲ್ಕು ಪ್ರದೇಶಗಳಾಗಿ ವಿಂಗಡಿಸಬಹುದು: ನೀರಿನ ಪ್ರದೇಶ, ಸಮುದ್ರದ ಆಳದ ನೆಲ, ಭೂಖಂಡದ ಮುಂಚಾಚಿನ ಪ್ರದೇಶ ಮತ್ತು ಇಳಿಜಾರು ಹಾಗೂ ತೀರಪ್ರದೇಶ. ಇವುಗಳ ಪೈಕಿ ಸಮುದ್ರದ ನೀರು ಖನಿಜಾಂಶ ಮತ್ತು ಖನಿಜ ಸಂಯೋಜನ ಗುಣದಲ್ಲಿ ಅತಿಮುಖ್ಯವಾದದ್ದು.

ಸಮುದ್ರದ ಖನಿಜ ಸಂಪತ್ತು ಮೂರು ಮೂಲ ರೀತಿಗಳಲ್ಲಿದೆ:

  1. ಖನಿಜಗಳು ಕರಗಿರುವ ಸಮುದ್ರದ ನೀರು;
  2. ಸಮುದ್ರದ ದಂಡೆಯಲ್ಲಿರುವ ಗಟ್ಟಿಯಾದ ಖನಿಜ ನಿಕ್ಷೇಪ, ಭೂಖಂಡದ ಮುಂಚಾಚಿನ ಪ್ರದೇಶದ ಮತ್ತು ಆಳ ಸಮುದ್ರ ನೆಲದ ನಿಕ್ಷೇಪ;
  3. ಸಮುದ್ರದ ಅಡಿಯ ತಳಬಂಡೆಯಲ್ಲಿರುವ ಗಟ್ಟಿಯಾದ ಖನಿಜ ನಿಕ್ಷೇಪ.

ಈ ಮೂರು ರೀತಿಯ ಸಾಗರ ಸಂಪತ್ತಿನಲ್ಲಿ ಸಿಗುವ ಹಲವಾರು ಖನಿಜಗಳು ಹೀಗಿವೆ:

  1. ಮೆಗ್ನೀಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಬ್ರೋಮಿನ್, ಪೊಟ್ಯಾಸಿಯಂ, ಗಂಧಕ, ಸ್ಟ್ರಾನ್ಷಿಯಂ, ಬೋರಾನ್, ಯುರೇನಿಯಂ ಮತ್ತು ಜಿ಼ರ್‌ಕೋನಿಯಂ ಖನಿಜಗಳು ಮತ್ತು ಖನಿಜ ಲವಣಗಳು. ಇವಲ್ಲದೆ ಯಥೇಚ್ಛವಾದ ಸಿಹಿ ನೀರು.
  2. ಭಾರವಾದ ಖನಿಜ ಮರಳು, ಕಬ್ಬಿಣದ ಮರಳು,[] ಸಿಲಿಕ ಮರಳು (silica sand), ಸುಣ್ಣದ ಮರಳು, ಮರಳು ಮತ್ತು ನೊರಜು, ಮ್ಯಾಂಗನೀಸ್ ಉಂಡೆಗಳು,[][] ರಂಜಕಯುಕ್ತ ಉಂಡೆಗಳು (phosphate nodules), ರಂಜಕ ಮರಳು, ಗ್ಲಾಕೊನೈಟ್ ಖನಿಜಗಳು[] ಸಮುದ್ರದ ದಂಡೆ ಮತ್ತು ತೀರ ಪ್ರದೇಶದ ಗರಸು ನಿಕ್ಷೇಪಗಳು. ಸಮುದ್ರದ ಅತಿ ಆಳ ಪ್ರದೇಶದ ತಳಭಾಗದಲ್ಲಿ ಕೆಂಪು ಸುದ್ದೆ, ಕ್ಯಾಲ್ಕೇರಿಯಸ್ ಊಜ಼್,[] ಸಿಲಿಕಾಂಶದ ಊಜ್[] ಮತ್ತು ಲೋಹಾಂಶದ ಊಜ್. ಇವೆಲ್ಲ ಗಟ್ಟಿಯಾಗದೆ ಸಮುದ್ರದ ತಳದ ಮೇಲೆ ಸಿಗುವ ಖನಿಜ ನಿಕ್ಷೇಪಗಳು. ಅದೇ ರೀತಿಯಲ್ಲಿ, ಆದರೆ ನದಿಯ ಗರಸು ನಿಕ್ಷೇಪಗಳಲ್ಲಿ ವಜ್ರ, ಚಿನ್ನ, ಪ್ಲಾಟಿನಂ, ತವರ,[] ಭಾರವಾದ ಖನಿಜಗಳಾದ ಮ್ಯಾಗ್ನಟೈಟ್, ಇಲ್ಮೆನೈಟ್, ರೂಟೈಲ್, ಜಿ಼ರ್‌ಕಾನ್, ಮೊನಜ಼ೈಟ್, ಕ್ರೋಮೈಟ್, ಮತ್ತು ವುಲ್‌ಫ್ರಮೈಟ್ ಇತ್ಯಾದಿ ಖನಿಜಗಳು ದೊರೆಯುತ್ತವೆ.
  3. ಕಲ್ಲಿದ್ದಲು, ಕಬ್ಬಿಣದ ಅದಿರು, ಸುಣ್ಣಶಿಲೆ, ಮ್ಯಾಂಗನೀಸ್ ಆಕ್ಸೈಡ್, ಕೋಬಾಲ್ಟ್, ನಿಕಲ್ ಇತ್ಯಾದಿ ಖನಿಜಗಳು ಹೊರಕಾಣುತ್ತಿರುವ ಪದರ ನಿಕ್ಷೇಪಗಳಾಗಿಯೂ, ಚಿನ್ನ, ತವರ, ಗಂಧಕ, ಉಪ್ಪುಗಳು ಮತ್ತು ಕಲ್ಲಿದ್ದಲು ನೆಲೆ ನಿಕ್ಷೇಪಗಳಾಗಿಯೂ ದೊರೆಯುತ್ತವೆ.

ಸಮುದ್ರಗಳಲ್ಲಿ ನಿಕ್ಷೇಪಗಳ ಅನ್ವೇಷಣೆ

[ಬದಲಾಯಿಸಿ]

ಸಮುದ್ರದ ಖನಿಜ ನಿಕ್ಷೇಪಗಳನ್ನು ಕಂಡುಹಿಡಿಯುವುದು, ಅವುಗಳ ರೀತಿ, ಮೌಲ್ಯವನ್ನು ಲೆಕ್ಕಾಚಾರ ಮಾಡುವುದು, ಗಣಿಗಾರಿಕೆ ಹಾಗೂ ಉಪಯೋಗಾರ್ಹವಾಗಿ ಅವನ್ನು ಸಂಸ್ಕರಿಸಿ ಮಾರುವವರೆಗಿನ ಕಾರ್ಯದ ಎಲ್ಲ ಹಂತಗಳೂ ಭೂಭಾಗದ ನಿಕ್ಷೇಪಗಳಂತೆಯೇ ನಡೆಯುತ್ತದೆ. ನಿಕ್ಷೇಪಗಳ ಅನ್ವೇಷಣೆಗೆ ಮೊದಲು ಭೂ ಭಾಗದ ಮುಂಚಾಚು ಮತ್ತು ಅದರ ಅಕ್ಕ ಪಕ್ಕದ ತೀರಗಳ ಸೂಕ್ಷ್ಮ ಪರಿಶೀಲನೆ ಮತ್ತು ಭೂವಿಜ್ಞಾನ ವೃತ್ತಾಂತ, ಅಲ್ಲದೇ ಖನಿಜಗಳ ಹಂಚಿಕೆಯ ಅರಿವು ಅವಶ್ಯ. ಇದರಿಂದ ಕೆಲವು ಕಡೆ ಸೀಮಿತವಾಗಿರುವ ಖನಿಜ ನಿಕ್ಷೇಪಗಳ ಮತ್ತು ಸ್ಥೂಲ ಪರಿಶೀಲನೆಗೆ ಅವಕಾಶವಾಗುವುದು. ಅನಂತರ ಭೂಭೌತ ಮತ್ತು ಇತರ ರೀತಿಯಲ್ಲಿ ನಿಕ್ಷೇಪಗಳನ್ನು ಪರಿಶೀಲಿಸಬಹುದು. ಹಲವಾರು ವೇಳೆ ಸಮುದ್ರದಲ್ಲಿ ಬೇರೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುವಾಗ ಆಕಸ್ಮಿಕವಾಗಿ ಖನಿಜ ನಿಕ್ಷೇಪಗಳನ್ನು ಕಂಡುಹಿಡಿಯುವುದೂ ಉಂಟು. ಸಮುದ್ರದಲ್ಲಿ ಇವನ್ನು ಕಂಡುಹಿಡಿಯುವುದಕ್ಕೆ ಮೊದಲು ಅಥವಾ ಅನಂತರ ಮೂರು ಮುಖ್ಯ ಕಾರ್ಯಗಳುಂಟು. ಅವು ನೌಕಾಯಾನ, ಸಮೀಕ್ಷೆ ಮತ್ತು ಖನಿಜ ಮಾದರಿಗಳ ಪರಿಶೀಲನೆ. ನಿತ್ಯ ಉಪಯೋಗಿಸುತ್ತಿರುವ ನೌಕೆಗಳಲ್ಲಿಯೇ ಅನ್ವೇಷಕ ಸಾಧನಸಲಕರಣೆಗಳನ್ನು ಅಳವಡಿಸಿ ಕಾರ್ಯ ನಡೆಸಲಾಗುತ್ತದೆ. ಸಾಗರದಲ್ಲಿ ಮುಳುಗಿಸಿ ಕಾರ್ಯನಡೆಸುವ ಸಲಕರಣೆಗಳು ಮುಂದೆ ಹೆಚ್ಚು ಫಲಪ್ರದವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಈ ಸಲಕರಣೆಗಳು ಇನ್ನೂ ಅಷ್ಟು ಪರಿಷ್ಕಾರವಾಗದಿರುವುದರಿಂದ ಹೆಚ್ಚು ಬಳಕೆಯಲ್ಲಿಲ್ಲ. ಸಾಗರದಡಿಯಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಲು ಮುಖ್ಯ ಸಾಧನವೆಂದರೆ ವ್ಯವಸ್ಥಿತವಾದ ನೌಕಾಯಾನ. ಖನಿಜ ನಿಕ್ಷೇಪಗಳನ್ನು ಸಂಪೂರ್ಣವಾಗಿ ನಿರ್ಧರಿಸಬೇಕು. ನಡೆಸಬೇಕಾದ ಸಮೀಕ್ಷೆ ಕಾರ್ಯರೂಪದ ಸ್ಥಿತಿಯನ್ನು ಆಧರಿಸುತ್ತದೆ. ಆಳವನ್ನು ನಿರ್ಧರಿಸುವಾಗ ಸುಮಾರು 1000' ಗಳ ವರೆಗಿನ ವ್ಯತ್ಯಾಸವನ್ನು ಆರಂಭದಲ್ಲಿ ಬಿಡಬಹುದು. ಆದರೆ ನಿಕ್ಷೇಪವಿರುವುದು ತಿಳಿದ ಬಳಿಕ 100' ಗಳಿಗಿಂತಲೂ ಕಡಿಮೆ ವ್ಯತ್ಯಾಸವಿರುವಂತೆ ನಿರ್ಧರಿಸುವುದು ಅನುಕೂಲ. ಈ ವ್ಯತ್ಯಾಸ ಕೊನೆಗೆ ಸೂಕ್ಷ್ಮ ಪರಿಶೀಲನೆಯಲ್ಲಿ ಕೆಲವು ಅಡಿಗಳಷ್ಟಕ್ಕೆ ನಿಲ್ಲುವುದು.

ನೌಕಾಯಾನಕ್ಕೆ ಹಲವಾರು ಎಲೆಕ್ಟ್ರಾನಿಕ್ ಸಾಧನಗಳಿವೆ. ಇವನ್ನು 3' - 3000' ಆಳದಲ್ಲೂ ನಿಖರವಾಗಿ ಉಪಯೋಗಿಸಬಹುದು. ಪ್ರಪಂಚದ ಹಲವಾರು ಕಡೆ ಇಂಥ ಸಾಧನಗಳನ್ನು ಖಾಯಂ ಆಗಿ ಇರಿಸಲಾಗಿದೆ. ಇದೇ ರೀತಿ ಸಾಗಿಸಲು ಅನುಕೂಲವಾದ ಸಣ್ಣ ಯಂತ್ರಗಳೂ ಇವೆ. ಇವು ಕೂಡ ನಿಖರವಾಗಿ ಕೆಲಸಮಾಡುವಂಥವು. ಇತ್ತೀಚೆಗೆ ಆಳ ಸಾಗರದ ಸಮೀಕ್ಷೆ ನಡೆಸುವ ದಿಶೆಯಲ್ಲಿ ಕೃತಕ ಉಪಗ್ರಹಗಳ ನೆರವನ್ನು ವಿಶೇಷವಾಗಿ ಪಡೆಯಲಾಗುತ್ತದೆ. ಇಂಥ ಒಂದು ಸಮಶ್ಚರ ಉಪಗ್ರಹ ಆಕಾಶದಲ್ಲಿ ಒಂದೇ ಕಡೆ ನಿಂತು ಸಮುದ್ರದ ಸೀಮಿತ ವಲಯವನ್ನು ಸಾಕಷ್ಟು ಕಾಲ ವೀಕ್ಷಿಸಿ ವಿವರಗಳನ್ನು ಸಂಗ್ರಹಿಸಬಲ್ಲುದು.

ಗಣಿಗಾರಿಕೆಯ ವೇಳೆಯಲ್ಲಿ ನೌಕೆಯನ್ನು ಭದ್ರವಾಗಿ ಒಂದು ಕಡೆ ನಿಲ್ಲಿಸಿರುವುದು ತೀರ ಅಗತ್ಯ. ಕಡಿಮೆ ಅಲುಗಾಟ ಇರುವ ಸಮುದ್ರ ಭಾಗಗಳಲ್ಲಿ ಸೋನಾರ್ ಟ್ರಾನ್ಸ್‌ಪಾಂಡರುಗಳನ್ನು ಮುಳುಗಿಸಿ ನೌಕೆಯನ್ನು ನಿಲ್ಲಿಸಬಹುದು. ಅಥವಾ ಸಮುದ್ರ ತೀರದ ತಾಣಗಳಲ್ಲಿಯೇ ಅದನ್ನು ಬಂಧಿಸಿ ಇಡಬಹುದು. ಇಂಥ ಒಂದು ನೌಕೆಯ ಕಾರ್ಯವನ್ನು ಗಣಕದಿಂದ ನಿರ್ದೇಶಿಸುವುದು ಕೂಡ ಸಾಧ್ಯ.

ಸಮುದ್ರ ತಳದಲ್ಲಿ ಖನಿಜ ನಿಕ್ಷೇಪಗಳ ಅನ್ವೇಷಣೆ ಮಾಡಲು ಮುಖ್ಯ ಸಲಕರಣೆಗಳೆಂದರೆ ಆಳವನ್ನು ಅಳೆಯುವ ಯಂತ್ರಗಳು, ಸಮುದ್ರತಳದ ಹೊರ ರೇಖಾಕೃತಿ ಚಿತ್ರಣಯಂತ್ರಗಳು, ಕಾಂತ ಬಲಮಾಪಕಗಳು ಮತ್ತು ಆಳದಲ್ಲಿನ ನಿಕ್ಷೇಪ ಮಾದರಿಗಳನ್ನು ತೆಗೆಯುವ ಸಲಕರಣೆಗಳು. ಇವುಗಳ ಉಪಯೋಗ ಅದುರಿನ ನಿಕ್ಷೇಪವನ್ನು ಅನುಸರಿಸಿರುತ್ತದೆ. ಉದಾಹರಣೆಗೆ, ಭಾರ ಖನಿಜದ ಗರಸು ನಿಕ್ಷೇಪಗಳನ್ನು ಗುರುತಿಸುವಾಗ ಹೊರ ರೇಖಾಚಿತ್ರಣ ಯಂತ್ರಗಳು (ಪ್ರೊಫೈಲರ್ಸ್) ಅತಿಮುಖ್ಯ ಸಾಧನಗಳು. ಕಂಪನ ರೇಖಾಚಿತ್ರಣ ಯಂತ್ರಗಳು ಕಲ್ಲೆಣ್ಣೆಯ ಅನ್ವೇಷಣೆಯಲ್ಲಿ ಉಪಯುಕ್ತವಾಗಿವೆ. ಅದೇ ರೀತಿ ವಿದ್ಯುತ್ ಕಿಡಿ, ಒತ್ತಡಗಾಳಿ, ಅನಿಲಸಿಡಿಕೆ ಮತ್ತು ವಿದ್ಯುದ್ಯಾಂತ್ರಿಕ ಸ್ಫೋಟನೆ (electromechanical explosion) ಮುಂತಾದವನ್ನು ಈ ಕಾರ್ಯದಲ್ಲಿ ಬಳಸಲಾಗುತ್ತಿದೆ. ಇದರಿಂದ ಹೊರಟ ಶಕ್ತಿ ಸಮುದ್ರ ತಳವನ್ನು ಸೇರಿ ಅಲ್ಲಿಯ ವಸ್ತುಗಳಿಂದ ಪ್ರತಿಫಲನ ಹೊಂದಿ ಬಂದಾಗ ಅವುಗಳ ನೆಲೆಯನ್ನು ನಿರ್ಧರಿಸಿ ಸಮುದ್ರತಳದಲ್ಲಿರುವ ಮಣ್ಣಿನ ಪದರ, ತಳಬಂಡೆಯ ಬಾಹ್ಯಾಕಾರ, ಸ್ತರಭಂಗಗಳು ಮುಂತಾದ ಲಕ್ಷಣಗಳನ್ನು ಬಹು ಸುಲಭವಾಗಿ ತಿಳಿಯಬಹುದು. ಹಾಗೆಯೇ ಸಮುದ್ರತಳದಲ್ಲಿರುವ ನಿಕ್ಷೇಪಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ. ಈ ರೀತಿಯ ಸ್ಫೋಟನೆಗಳ ಶಕ್ತಿ ಅಲೆ ಅಲೆಯಾಗಿ ಸಮುದ್ರತಳದಿಂದ ಹಲವು ಮೈಲಿಗಳವರೆಗೆ ಪ್ರಸರಿಸುತ್ತದೆ.

ಈ ಪ್ರಸರಣೆ ಸಿಡಿತದ ಕಂಪನವು ಕಾಲ ಮತ್ತು ಅಲೆಗಳ ಪ್ರಸಾರ ವೇಗವನ್ನು ಆಧರಿಸುತ್ತದೆ. ಮತ್ತೊಂದು ಸಿಡಿತಕ್ಕೆ ಮೊದಲೇ ಪ್ರತಿಫಲನದ ಅಲೆಗಳನ್ನು ಗ್ರಹಿಸಬೇಕು. ಇತ್ತೀಚೆಗೆ ಕಂಡುಹಿಡಿದ ಫ್ಲಕ್ಸ್‌ಗೇಟ್ (fluxgate), ಪ್ರೋಟಾನ್ ಪ್ರಿಸೆಷನ್ ಮತ್ತು ರುಬಿಡಿಯಂ ಕಾಂತ ಬಲಮಾಪಕ (rubidium magnetic dynamometer) ಮುಂತಾದವು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗದಲ್ಲಿವೆ.

ನಮೂನೆ ತೆಗೆಯುವುದು

[ಬದಲಾಯಿಸಿ]

ಖನಿಜ ನಿಕ್ಷೇಪವನ್ನು ಕಂಡುಹಿಡಿದ ಬಳಿಕ ಮುಂದಿನ ಕಾರ್ಯವೆಂದರೆ ಅದರ ನಮೂನೆ ತೆಗೆಯುವುದು. ಇದರಲ್ಲಿ ಎರಡು ವಿಧಾನಗಳಿವೆ:

  1. ಅನ್ವೇಷಣೆ ಅಥವಾ ಗುಣಾತ್ಮಕವಾದ ನಮೂನೆ ಪಡೆಯುವುದು. ಇದರಲ್ಲಿ ಸ್ನಾಪರ್, ಡ್ರಾಪ್ ಕೋರ್ಸ್, ಡ್ರಾಗ್ ಡ್ರೆಜರ್ಸ್ ಮತ್ತು ಡೈವರ್ಸ್ (ಮುಳುಗಿ) ಮುಂತಾದ ಸುಲಭ ನಮೂನೆ ಪಡೆಯುವ ವಿಧಾನಗಳನ್ನು ಬಳಸುತ್ತಾರೆ.
  2. ಗುಣಾತ್ಮಕ ನಮೂನೆ: ಇದಕ್ಕೆ ಆಧುನಿಕ ಯಂತ್ರ ಸಲಕರಣೆ ಇದ್ದರೆ ಉತ್ತಮ. ಈಗಿರುವ ಸಲಕರಣೆಗಳಿಂದಲೇ ಕಾರ್ಯ ನಡೆಸಲೂಬಹುದು. ಸಮುದ್ರತಳದ ಪರಿಸರಕ್ಕೆ ಅನುಸಾರವಾಗಿ ಸಮುದ್ರದಲ್ಲಿ ಮುಳುಗಿ ಪಡೆಯುವ ಸಲಕರಣೆಗಳ ಕಡೆಯೇ ಹೆಚ್ಚು ಗಮನವಿದೆ. ಈ ದಿಶೆಯಲ್ಲಿ ಗೋರುವುದು ಮತ್ತು ಛಾಯಾಗ್ರಹಣೆ ಬಳಕೆಯಲ್ಲಿವೆ.

ಪ್ರಪಂಚದಲ್ಲಿ ಸಮುದ್ರಗತ ಗಣಿಗಾರಿಕೆ ಮತ್ತು ಇದರ ಭವಿಷ್ಯ

[ಬದಲಾಯಿಸಿ]

ಇಲ್ಲಿಯವರೆಗೆ ಸಮುದ್ರಗತ ಗಣಿಗಾರಿಕೆಯಲ್ಲಿ ಹೆಚ್ಚು ಆಸಕ್ತಿ ಉಂಟಾಗಿದ್ದರೂ ಹೊಸಹೊಸ ಚಟುವಟಿಕೆಗಳು ಮಾತ್ರ ಹೆಚ್ಚಾಗಿ ಅನ್ವೇಷಣೆ ಮತ್ತು ಭಾವನಾತ್ಮಕ ಅಧ್ಯಯನದಲ್ಲಿ ಮಾತ್ರ ಇವೆ. ಆದ್ದರಿಂದ ಉತ್ಪಾದನೆಯಲ್ಲಿ ಸ್ವಲ್ಪ ವ್ಯತ್ಯಾಸವೂ ಕಾಣುವುದಿಲ್ಲ. ಇದುವರೆಗೆ ಬಂದಿರುವ ಖನಿಜ ಉತ್ಪಾದನೆಯೆಲ್ಲ ತೀರ ಪ್ರದೇಶದಿಂದ ಸಮುದ್ರದ ನೀರು, ದಡ, ಮತ್ತು ಅಂಚಿನಲ್ಲಿರುವ ಗರಸು ನಿಕ್ಷೇಪ ಮತ್ತು ಸ್ವಲ್ಪ ನೀರನ್ನು ಗಟ್ಟಿಯಾದ ರಾಸಾಯನಿಕವಾಗಿ ಹೆಪ್ಪುಗಟ್ಟಿಸುವುದು, ಶೋಧಿಸುವುದು, ಸೂರ್ಯ ರಶ್ಮಿಯಿಂದ ಆವಿಯಾಗಿಸುವುದು. ಇದರಿಂದ ಮೆಗ್ನೀಷಿಯಂ ಹಾಗೂ ಬ್ರೋಮಿನ್ ಉಪ್ಪುಗಳು ಮತ್ತು ಅಡುಗೆ ಉಪ್ಪುಗಳು ಉತ್ಪಾದನೆಯಾಗುತ್ತವೆ.[] ಆದರೆ ಇತ್ತೀಚಿನ ಬೃಹತ್ ಪ್ರಮಾಣದ ಕಾರ್ಯವೆಂದರೆ ಸಮುದ್ರದ ನೀರಿನಿಂದ ಸಿಹಿ ನೀರನ್ನು ಉತ್ಪಾದಿಸುವುದು.[][೧೦]: 24  ಈ ದಿಶೆಯಲ್ಲಿ ಸಂಶೋಧನೆಗಳನ್ನು ನಡೆಸುವಾಗ ಇತರ ಖನಿಜಗಳನ್ನು ಹೊರ ತೆಗೆಯುವುದನ್ನೂ ಸಾಧಿಸಲಾಗಿದೆ. ಉಪ್ಪಿನ ಉತ್ಪತ್ತಿ ವರ್ಷಕ್ಕೆ ಸರಾಸರಿ 450,000,000 ರೂಪಾಯಿಗಳಷ್ಟು ಎಂದು ತಿಳಿದುಬಂದಿದೆ. ಇದೇ ರೀತಿ ಮೆಗ್ನೀಷಿಯಂ (1964 ರಲ್ಲಿ 300,000ಟನ್ನು), ಬ್ರೋಮಿನ್ (1964ರಲ್ಲಿ 75,000 ಟನ್ನು), ಸಿಹಿ ನೀರು (1964ರಲ್ಲಿ 15,850,000,000 ಗ್ಯಾಲನ್) ಉತ್ಪಾದನೆಯಾಗಿವೆ.

ಖನಿಜಗಳಲ್ಲೆಲ್ಲ ಸೋಡಿಯಂ, ಮೆಗ್ನೀಸಿಯಮ್ ಮತ್ತು ಬ್ರೋಮಿನ್‍ಗಳದೇ ಅಧಿಕ ಉತ್ಪತ್ತಿ. ತೀರದಿಂದ ದೂರದಲ್ಲಿರುವ ಈ ನಿಕ್ಷೇಪಗಳ ಗಣಿಗಾರಿಕೆ, ಸಮುದ್ರಗತ ಗಣಿಗಾರಿಕೆಯಲ್ಲಿ ಅತಿ ಪ್ರಚಲಿತವಾಗಲು ಕಾರಣವೆಂದರೆ ಇಲ್ಲಿ ಸಿಗುವ ಮ್ಯಾಂಗನೀಸ್ ಉಂಡೆಗಳು ಮತ್ತು ನೈಋತ್ಯ ಆಫ್ರಿಕದ ಸಮುದ್ರದೊಳಗಿನಿಂದ ಹೊರತೆಗೆಯಲಾದ ವಜ್ರಗಳು. ಇದರಲ್ಲಿ ಉಪಯೋಗಿಸುವ ಸಾಧನಗಳೆಂದರೆ ಗೋರುವುದು, ಕಾಮ್‌ಶೆಲ್ಸ್, ಗೋರುವ ಬಾಲ್ದಿ, ನೀರಿನ ಒತ್ತಡದ ಗೋರುಯಂತ್ರ ಅಥವಾ ವಾಯುವಿನಿಂದ ಎತ್ತುವ ಯಂತ್ರಗಳು. ಇವುಗಳಿಂದ 200' - 300' ಆಳದ ವರೆಗೆ ಅಗೆಯಲು ಸಾಧ್ಯವಾಗಿದೆ. 1968ರಲ್ಲಿ 70ಕ್ಕೂ ಹೆಚ್ಚು ಗೋರು ಕಾರ್ಯಗಳಲ್ಲಿ ತೀರದಿಂದಾಚೆಗೆ ಗಟ್ಟಿಯಾದ ಮರಳು ಮತ್ತು ನುರುಜು ಹೊರತೆಗೆಯಬೇಕಾಯ್ತು. ಈ ಉತ್ಪಾದನೆಯ ಒಟ್ಟು ಖರ್ಚನ್ನು ಭೂಮಿಯ ಮೇಲಿನ ಗಣಿಗಾರಿಕೆಗೆ ಹೋಲಿಸಿದರೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ಆದರೂ ಆದಷ್ಟು ಶೀಘ್ರವಾಗಿ ಈ ನಿಕ್ಷೇಪಗಳನ್ನು ಹೊರತೆಗೆಯಬೇಕಾಗುತ್ತದೆ. ಕಾರಣ ಭೂಮಿಯ ಮೇಲಿನ ಖನಿಜ ಸಂಪತ್ತು ಎಲ್ಲ ದೇಶಗಳಲ್ಲಿಯೂ ಅನಿರ್ಬಂಧಿತವಾಗಿ ಸದಾಕಾಲ ಸಿಗಲು ಸಾಧ್ಯವೇ ಇಲ್ಲ. ಇದಕ್ಕಾಗಿಯೇ ಹಲವಾರು ರಾಷ್ಟ್ರಗಳು ತೀರದಿಂದಾಚೆಗೆ ಸಮುದ್ರತಳದಲ್ಲಿರುವ ನಿಕ್ಷೇಪಗಳ ಅನ್ವೇಷಣೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿವೆ. ಅದಕ್ಕೆ ಅನುಸಾರವಾಗಿ ಹಲವಾರು ಕಾಯಿದೆ ಕಾನೂನುಗಳನ್ನು ಕೂಡ ರೂಪಿಸುತ್ತಿವೆ. ಈಗಲೂ ನಡೆಯುತ್ತಿರುವ ಮುಖ್ಯವಾದ ಉತ್ಪಾದನೆ ವಜ್ರಗಳು. ಪ್ರಪಂಚದ 70%ಕ್ಕೂ ಹೆಚ್ಚು ಭಾಗದ ಭಾರ ಖನಿಜ ಉತ್ಪಾದನೆ ತೀರ ಪ್ರದೇಶದ ನಿಕ್ಷೇಪಗಳಿಂದಾಗಿದೆ. ಇದು ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಭಾರತದ ತೀರಪ್ರದೇಶಗಳಿಂದ. ಇದರಂತೆಯೇ ಇಂಡೋನೇಷ್ಯಾ, ಥೈಲೆಂಡ್, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನ, ಐಸ್‌ಲೆಂಡ್, ಬ್ರಿಟನ್, ಫಿನ್‌ಲೆಂಡ್, ನ್ಯೂ ಫೌಂಡ್‌ಲೆಂಡ್, ನೊವಸ್ಕೋಷಿಯ, ಟೈವಾನ್ ಮತ್ತು ಟರ್ಕಿ ದೇಶಗಳೂ ಹಲವಾರು ರೀತಿಯಲ್ಲಿ ಸಮುದ್ರಗತ ಗಣಿಗಾರಿಕೆಯಲ್ಲಿ ಆಸಕ್ತಿ ವಹಿಸುತ್ತಿವೆ.

ಗಟ್ಟಿಯಾದ ಖನಿಜ ನಿಕ್ಷೇಪಗಳಲ್ಲಿ ಬಹು ಮುಖ್ಯವಾದದ್ದು ಕಲ್ಲಿದ್ದಲು. ಜಪಾನಿನ ಕಲ್ಲಿದ್ದಲಿನ ಒಟ್ಟು ಉತ್ಪಾದನೆಯಲ್ಲಿ 30% ಭಾಗ ಸಮುದ್ರತಳದಿಂದ ಬರುತ್ತಿದೆ. ಬ್ರಿಟನ್ನಿನಲ್ಲಿ ಇದು ಸುಮಾರು 10%. ಈ ರೀತಿಯ ಉತ್ಪಾದನೆಯಲ್ಲಿ ಹೆಚ್ಚಿನ ಖರ್ಚು ತಗಲುವುದು ಕೇವಲ ಅನ್ವೇಷಣೆಗಾಗಿ ಮಾತ್ರ. ಉಳಿದ ಕಾರ್ಯ ಹಾಗೂ ವೆಚ್ಚ ಭೂಮಿಯ ಮೇಲೆ ಆಗುವಂತೆಯೇ ಇವೆ. ಜಪಾನ್, ನೊವಸ್ಕೋಷಿಯ, ಟೈವಾನ್, ಬ್ರಿಟನ್, ಟರ್ಕಿ ರಾಷ್ಟ್ರಗಳು 1965 ರಲ್ಲಿ 33,500,000 ಟನ್ನು ಕಲ್ಲಿದ್ದಲನ್ನು ಉತ್ಪಾದಿಸಿದವು. ಫಿನ್‌ಲೆಂಡ್ ಮತ್ತು ನ್ಯೂ ಫೌಂಡ್‌ಲೆಂಡ್ 1965 ರಲ್ಲಿ 1,700,000 ಟನ್ನು ಕಬ್ಬಿಣದ ಅದುರನ್ನು ಹೊರತೆಗೆದವು. ಅಮೆರಿಕ ಸಂಯುಕ್ತ ಸಂಸ್ಥಾನ 1965 ರಲ್ಲಿ 600,000 ಟನ್ನಿನಷ್ಟು ಗಂಧಕವನ್ನು ಉತ್ಪಾದಿಸಿತು. ಸ್ತರ ನಿಕ್ಷೇಪಗಳನ್ನು ಹೊರತೆಗೆಯಲು ಸಾಧಾರಣವಾಗಿ ಗಣಿ ಒಳಕ್ಕೆ ಇಳಿಯಲು ಕೋಡುದಾರಿಯನ್ನು ಕೊರೆದು ಅಲ್ಲಿಂದ ಅಡ್ಡಲಾಗಿ ಸಮುದ್ರ ಕೆಳಗಡೆ ನಿಕ್ಷೇಪದವರೆಗೆ ಸುರಂಗ ತೋಡಬೇಕಾಗುತ್ತದೆ. ಹಾಗೆಯೇ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿಂದ ಕೋಡುದಾರಿಯನ್ನು ಕೊರೆದು ಗಣಿಗಾರಿಕೆಯನ್ನೂ ಮಾಡುವುದುಂಟು. ಈ ಎರಡು ಬಗೆಯಲ್ಲೂ ಮೇಲ್ಚಾವಣಿಯ ಭದ್ರತೆ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು; ಇನ್ನುಳಿದ ಗಣಿ ಕಾರ್ಯಗಳೆಲ್ಲ ಭೂಭಾಗದ ವಿಧಾನಗಳಂತಿರುತ್ತವೆ. ತೀರದಿಂದಾಚೆ ನಡೆಸಿರುವ ತೈಲಾನ್ವೇಷಣೆಯ ಕಾರ್ಯಗಳಲ್ಲಿ ಸಾಮಾನ್ಯವಾಗಿ ಕೃತಕ ದ್ವೀಪಗಳನ್ನು ಸೃಷ್ಟಿಸಿ ಅಲ್ಲಿಂದ ಭೂ ಕೊರೆತ ನಡೆಸಿರುವುದೇ ಹೆಚ್ಚು. ಮತ್ತೊಂದು ರೀತಿಯ ತೈಲಾನ್ವೇಷಣೆಯೆಂದರೆ ಸಮುದ್ರದ ನೀರಿನ ಮೇಲೆ ತೇಲು ತೆಪ್ಪಗಳನ್ನು ಕಟ್ಟಿ ಅಥವಾ ತೇಲುತ್ತಿರುವ ಭೂಕೊರೆತದ ಯಂತ್ರಗಳಿಂದ.

ಸಮುದ್ರಗತ ಗಣಿಗಾರಿಕೆಯ ಪಾರಿಸರಿಕ ಪ್ರಭಾವ ವಿವಾದಾತ್ಮಕವಾಗಿದೆ.[೧೧][೧೨] ಸಮುದ್ರತಳ ಗಣಿಗಾರಿಕೆಯು ಆಳದ ಸಮುದ್ರದ ಪರಿಸರ ವ್ಯವಸ್ಥೆಗಳನ್ನು ನಾಶಮಾಡುವ ಮತ್ತು ಭಾರ ಲೋಹ ಹೊತ್ತ ತುರಾಯಿಗಳು ಮಾಲಿನ್ಯವನ್ನು ಹರಡುವ ಸಾಮರ್ಥ್ಯ ಹೊಂದಿದೆ ಎಂದು ಗ್ರೀನ್‍ಪೀಸ್ ಮತ್ತು ದ ಡೀಪ್ ಸೀ ಮೈನಿಂಗ್ ಕ್ಯಾಂಪೇನ್‍ನಂತಹ[೧೩] ಪಾರಿಸರಿಕ ಸಮರ್ಥನಾ ಗುಂಪುಗಳು ವಾದಿಸಿದವು.[೧೪] ಟೀಕಾಕಾರರು ತಾತ್ಕಾಲಿಕ ನಿಷೇಧಗಳು ಅಥವಾ ಶಾಶ್ವತ ನಿಷೇಧಗಳಿಗಾಗಿ ವಿನಂತಿಸಿಕೊಂಡಿದ್ದಾರೆ.[೧೫][೧೬][೧೭]

ಉಲ್ಲೇಖಗಳು

[ಬದಲಾಯಿಸಿ]
  1. Science and Civilisation in China: Volume 5 by Joseph Needham -- Page 343--347
  2. Callender, E.; Bowser, C. (1976). "Freshwater Ferromanganese Deposits". Au, U, Fe, Mn, Hg, Sb, W, and P Deposits. Vol. 7. Elsevier Scientific Publishing Community. pp. 341–394. ISBN 9780444599438.
  3. Fike, D.A.; Grotzinger, J.P.; Pratt, L.M.; Summons, R.E. (2006). "Oxidation of the Ediacaran Ocea". Nature. 444 (7120): 744–747. Bibcode:2006Natur.444..744F. doi:10.1038/nature05345. PMID 17151665. S2CID 4337003.
  4. Smith, S. A., and Hiscott, R. N. (1987). Latest Precambrian to Early Cambrian basin evolution, Fortune Bay, Newfoundland fault–bounded basin to platform. Canadian Journal of Earth Sciences 21:1379–1392.
  5. "Oozes". Geosciences LibreTexts: Miracosta Oceanography 101. LibreTexts Libraries. Retrieved 15 February 2024.
  6. Mulder, Thierry; Hüneke, Heiko; Van Loon, A.J. (2011), "Progress in Deep-Sea Sedimentology", Deep-Sea Sediments, Elsevier, pp. 1–24, doi:10.1016/b978-0-444-53000-4.00001-9, ISBN 9780444530004
  7. Dube, RK (September 2006). "Interrelation between gold and tin: A historical perspective". Gold Bulletin. 39 (3): 103–113. doi:10.1007/BF03215537.
  8. "¿Cómo es el proceso de la elaboración de sal?". www.foodunfolded.com (in ಸ್ಪ್ಯಾನಿಷ್). Retrieved 2022-05-01.
  9. Cohen, Yoram (2021). "Advances in Water Desalination Technologies". Materials and Energy. Vol. 17. WORLD SCIENTIFIC. doi:10.1142/12009. ISBN 978-981-12-2697-7. ISSN 2335-6596. S2CID 224974880.
  10. Alix, Alexandre; Bellet, Laurent; Trommsdorff, Corinne; Audureau, Iris, eds. (2022). Reducing the Greenhouse Gas Emissions of Water and Sanitation Services: Overview of emissions and their potential reduction illustrated by utility know-how (in ಇಂಗ್ಲಿಷ್). IWA Publishing. doi:10.2166/9781789063172. ISBN 978-1-78906-317-2. S2CID 250128707.
  11. Kim, Rakhyun E. (August 2017). "Should deep seabed mining be allowed?". Marine Policy. 82: 134–137. Bibcode:2017MarPo..82..134K. doi:10.1016/j.marpol.2017.05.010. hdl:1874/358248.
  12. Costa, Corrado; Fanelli, Emanuela; Marini, Simone; Danovaro, Roberto; Aguzzi, Jacopo (2020). "Global Deep-Sea Biodiversity Research Trends Highlighted by Science Mapping Approach". Frontiers in Marine Science. 7: 384. doi:10.3389/fmars.2020.00384. hdl:10261/216646.
  13. Rosenbaum, Dr. Helen (November 2011). "Out of Our Depth: Mining the Ocean Floor in Papua New Guinea". Deep Sea Mining Campaign. MiningWatch Canada, CELCoR, Packard Foundation. Archived from the original on 13 December 2019. Retrieved 2 May 2020.
  14. Halfar, Jochen; Fujita, Rodney M. (18 May 2007). "Danger of Deep-Sea Mining". Science. 316 (5827): 987. doi:10.1126/science.1138289. PMID 17510349. S2CID 128645876.
  15. "Collapse of PNG deep-sea mining venture sparks calls for moratorium". the Guardian (in ಇಂಗ್ಲಿಷ್). 2019-09-15. Archived from the original on 2021-04-11. Retrieved 2021-04-02.
  16. "David Attenborough calls for ban on 'devastating' deep sea mining". the Guardian (in ಇಂಗ್ಲಿಷ್). 2020-03-12. Archived from the original on 2021-09-06. Retrieved 2021-09-06.
  17. "Google, BMW, Volvo, and Samsung SDI sign up to WWF call for temporary ban on deep-sea mining". Reuters (in ಇಂಗ್ಲಿಷ್). 2021-03-31. Archived from the original on 2021-09-06. Retrieved 2021-09-06.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: