ಸದಸ್ಯ:Sribvr/sandbox

ವಿಕಿಪೀಡಿಯ ಇಂದ
Jump to navigation Jump to search

ಸಾಲದ ಕಂತುಗಳ ಮುಂಪಾವತಿ(Pre payment)

ಇತ್ತೀಚೆಗೆ ಹಲವರು ತಾವು ಪಡೆದು ಕೊಂಡ ವೈಯುಕ್ತಿಕ ಸಾಲಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮರುಪಾವತಿ ಮಾಡುವ ಸಂದರ್ಭ ಒದಗಿಬಂದಾಗ ಸಾಕಷ್ಟು ಗೊಂದಲಕ್ಕೀಡಾಗುತ್ತಾರೆ. ಅನೇಕ ಪ್ರಶ್ನೆಗಳಿಗೆ ಸೂಕ್ತ ಪರಿಹಾರ ದೊರಕುವುದಿಲ್ಲ. ಈ ಬಗ್ಗೆ ಮಾಹಿತಿಗಳನ್ನು ಈ ಲೇಖನದಲ್ಲಿ ಒದಗಿಸುವ ಪ್ರಯತ್ನ ಮಾಡಲಾಗಿದೆ.

ಏನೀ ಮುಂಪಾವತಿ? ಸಾಲಗಾರನು ತಾನು ತೆಗೆದುಕೊಂಡ ಸಾಲವನ್ನು ಅವಧಿಗೆ ಮುನ್ನ ಭಾಗಶಃ ಅಥವಾ ಸಂಪೂರ್ಣವಾಗಿ ಮರುಪಾವತಿ ಮಾಡುವುದೇ ಮುಂಪಾವತಿ. ಇಲ್ಲಿ ವೈಯುಕ್ತಿಕ ಸಾಲಗಳಾದ ಗೃಹ ಸಾಲ, ವಾಹನ ಸಾಲ ಹಾಗೂ ವೈಯುಕ್ತಿಕ ಸಾಲಗಳ ಮುಂಪಾವತಿ ಬಗ್ಗೆ ವಿಶ್ಲೇಷಿಸಲಾಗಿದೆ. ಇವೆಲ್ಲ ಸಾಲಗಳೂ ಸಮಗೊಳಿಸಿದ ಮಾಸಿಕ ಕಂತುಗಳಲ್ಲಿ (EMI) ಪಾವತಿಸುವ ದೀರ್ಘಾವಧಿ ಸಾಲಗಳಾಗಿವೆ. ಸಾಲದ ಒಟ್ಟು ಅವಧಿಗೆ ತಗಲುವ ಬಡ್ಡಿ ಹಾಗೂ ಅಸಲನ್ನು ಸಮಾನ ಕಂತುಗಳಲ್ಲಿ ತಿಂಗಳಿಗೊಮ್ಮೆ ಸಾಲಗಾರನು ಸಾಲಿಗನಿಗೆ ಪಾವತಿಮಾಡುವ ಮೊತ್ತವೇ ಈ ಕಂತು. ಈ ಕಂತುಗಳು ನಿಯಮಿತವಾಗಿ ಪಾವತಿಯಾಗುವ ವ್ಯವಸ್ಥೆ ಕೂಡ ನಿರ್ಧಾರವಾಗಿರುತ್ತದೆ. ಹಲವೊಮ್ಮೆ ಅನೇಕ ಕಾರಣಗಳಿಂದಾಗಿ, ಸಾಲಗಾರನು ಅವಧಿಗೆ ಮುನ್ನ ಭಾಗಶಃ ಅಥವಾ ಸಂಪೂರ್ಣವಾಗಿ ಮರುಪಾವತಿ ಮಾಡುವ ಸಂದರ್ಭಗಳು ಬರಬಹುದು. ಯಾಕೀ ಮುಂಪಾವತಿ? ಸಾಮಾನ್ಯವಾಗಿ ಈ ಕೆಳಕಂಡ ಸಂದರ್ಭಗಳು ಸಾಲ ಮುಂಪಾವತಿಸಲು ಕಾರಣವಾಗುತ್ತವೆ. • ಹೆಚ್ಚುವರಿ ಆದಾಯದಿಂದಾಗಿ ಅಥವಾ ಬೇರೆ ಯಾವುದೇ ಕಾರಣದಿಂದ ಸಂಚಯಿತಗೊಂಡ ಹಣವನ್ನು ಬಳಸಿ ಒಟ್ಟು ಸಾಲದ ಅಥವಾ ಮಾಸಿಕ ಕಂತುಗಳ ( ವಿಮಾ ಶುಲ್ಕದ ಕಂತು ಸಹ) ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶ • ಮನೆ ಅಥವಾ ವಾಹನವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಆಸ್ತಿಯನ್ನು ಸಾಲಮುಕ್ತ ವಾಗಿ ಮಾಡಿಕೊಳ್ಳುವ ಉದ್ದೇಶ • ಪ್ರಸಕ್ತ ಸಾಲಿಗ ಸಂಸ್ಥೆ ವಿಧಿಸುತ್ತಿರುವ ಬಡ್ಡಿ ದರ ಹೆಚ್ಚಾಗಿದ್ದು ಸಾಲವನ್ನು ಬೇರೆ ಸಂಸ್ಥೆ ಕಡಿಮೆ ದರದಲ್ಲಿ ಕೊಡಲು ಒಪ್ಪಿರುವಾಗ

ಮುಂಪಾವತಿಗೆ ವಿವಿಧ ಬ್ಯಾಂಕುಗಳು ಬೇರೆಬೇರೆಯಾದ ನೀತಿಯನ್ನು ಅನುಸರಿಸುತ್ತವೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ 2012 ರ ಜೂನ್ ನಲ್ಲಿ ಹೊರಡಿಸಿದ ಸುತ್ತೋಲೆ ಅನ್ವಯ ಫ್ಲೋಟಿಂಗ್ ದರದ ಎಲ್ಲಾ ಗೃಹಸಾಲಗಳ ಮುಂಪಾವತಿಗೆ ಬ್ಯಾಂಕುಗಳು ಯಾವುದೇ ದಂಡ ವಿಧಿಸುವಂತಿಲ್ಲ. ಮೇ, 2014 ರಲ್ಲಿ ಈ ನಿರ್ದೇಶನವನ್ನು ಫ್ಲೋಟಿಂಗ್ ದರದ ಎಲ್ಲಾ ದೀರ್ಘಾವಧಿ ಸಾಲಗಳಿಗೂ ವಿಸ್ತರಿಸಿತು. ಬಹುತೇಕ ಖಾಸಗಿ ವಲಯದ ಬ್ಯಾಂಕುಗಳು ಈ ನಿರ್ದೇಶವನ್ನು ಫ್ಲೋಟಿಂಗ್ ದರದ ಗೃಹಸಾಲಗಳಿಗಷ್ಟೇ ಜಾರಿಗೆ ತಂದು ವಾಹನ ಹಾಗೂ ಇತರೆ ಸಾಲಗಳನ್ನು ಫಿಕ್ಸೆಡ್ ಬಡ್ಡಿದರದಲ್ಲಿ ಕೊಡತೊಡಗಿವೆ. ಹೀಗಾಗಿ ಈ ಸಾಲಗಳ ಮುಂಪಾವತಿಗೆ ಅನೇಕ ನಿಯಮಗಳನ್ನೂ ಶುಲ್ಕವನ್ನೂ ಜಾರಿಮಾಡಿವೆ. ಹಲವನ್ನು ಉದಾಹರಣೆಗೆ ಕೆಳಗೆ ಕೊಡಲಾಗಿದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ : ವಾಹನ ಸಾಲ : ಮೊದಲ ಆರು ತಿಂಗಳಲ್ಲಿ ಪೂರ್ಣ ಮರುಪಾವತಿ ಸಾಧ್ಯವಿಲ್ಲ. ನಂತರ ಶೇ. 6, 5, ಹಾಗೂ 3 ರಂತೆ ಕ್ರಮವಾಗಿ ಒಂದು, ಎರಡು ಹಾಗೂ ಎರಡು ವರ್ಷಗಳ ನಂತರದ ಪೂರ್ಣ ಮರುಪಾವತಿಗೆ ಬಾಕಿ ಇರುವ ಮೊತ್ತದ ಮೇಲೆ ದಂಡ ವಿಧಿಸುತ್ತವೆ. ಭಾಗಶಃ ಮರುಪಾವತಿ ಮೊದಲ 12 ತಿಂಗಳು ಸಾಧ್ಯವಿಲ್ಲ. ಉಳಿದಂತೆ ಮೇಲಿನಂತೆಯೇ ಶೇ. 5 ಹಾಗೂ 3 ರ ದಂಡ ಅನ್ವಯಿಸುತ್ತದೆ. ಶೇ. 25 ರಷ್ಟು ಮಾತ್ರ ಭಾಗಶಃ ಮರುಪಾವತಿ ಮಾಡಬಹುದು. ಐ ಸಿ ಐ ಸಿ ಐ ಬ್ಯಾಂಕ್ : ವಾಹನ ಸಾಲದ ಭಾಗಶಃ ಮರುಪಾವತಿಗೆ ಅವಕಾಶವಿಲ್ಲ. ಪೂರ್ಣ ಮರುಪಾವತಿಗೆ ಬಾಕಿ ಇರುವ ಮೊತ್ತದ ಮೇಲೆ ಶೇ. 5 ಅಥವಾ ಉಳಿದಮರುಪಾವತಿಯ ಅವಧಿಗೆ ತಗಲುವ ಬಡ್ಡಿ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ದಂಡ ವಿಧಿಸುತ್ತದೆ. (ಉಳಿದ ಖಾಸಗಿ ಬ್ಯಾಂಕುಗಳ ಶುಲ್ಕ ಹಾಗೂ ನಿಯಮಕ್ಕಾಗಿ ಅವುಗಳ ಜಾಲತಾಣಗಳನ್ನು ನೋಡಬಹುದು) ಸಾರ್ವಜನಿಕ ವಲಯದ ಬ್ಯಾಂಕುಗಳು ಈ ವಿಷಯದಲ್ಲಿ ಮೃದು ಧೋರಣೆ ಹೊಂದಿವೆ. ಗೃಹಸಾಲಗಳಂತೆಯೇ (ಫಿಕ್ಸೆಡ್ ಬಡ್ಡಿದರದಲ್ಲಿ ಕೊಡಮಾಡಿದ ಗೃಹಸಾಲದ ಹೊರತು ) ಇತರ ಸಾಲಗಳ ಮೇಲೂ ಯಾವುದೇ ಮುಂಪಾವತಿ ದಂಡ ವಿಧಿಸುತ್ತಿಲ್ಲ. ವೈಯುಕ್ತಿಕ ಸಾಲ ಕ್ಷೇತ್ರದಲ್ಲೂ ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿಯ ಮಟ್ಟ ಹೆಚ್ಚುತ್ತಿರುವುದು ಸಹ ಮುಂಪಾವತಿಯನ್ನು ಉತ್ತೇಜಿಸಲು ಕಾರಣವಾಗಿರಬಹುದು. ಮುಂಪಾವತಿಗೆ ಮುನ್ನ ಗಮನಿಸಬೇಕಾದ ಅಂಶಗಳೇನು? ಮುಂಪಾವತಿಯ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿಕೊಳ್ಳಬೇಕು. ಶುಲ್ಕಬೀಳುವ ಸಂದರ್ಭದಲ್ಲಂತೂ ಶುಲ್ಕದ ಮೊತ್ತಕ್ಕೂ ಉಳಿತಾಯವಾಗಬಹುದಾದ ಮೊತ್ತಕ್ಕೂ ತಾಳೆಹಾಕಿ ನೋಡಿಕೊಳ್ಳುವುದು ಒಳ್ಳೆಯದು. ಕಡಿಮೆ ಬಡ್ಡಿದರದ ಕಾರಣಕ್ಕಾಗಿ ಬೇರೆ ಸಂಸ್ಥೆಗೆ ಸಾಲ ವರ್ಗಾಯಿಸುವ ಸಂದರ್ಭದಲ್ಲಿ ಆಧಾರವಾಗಿರುವ ಮನೆ, ವಾಹನ ಮುಂತಾದವು ಗಳ ದಾಖಲೆಗಳಲ್ಲಿ ಬದಲಾವಣೆ, ರಿಜಿಸ್ಟ್ರೇಷನ್ ಗೆ ಸಂಬಂಧಪಟ್ಟ ಖರ್ಚುಗಳನ್ನು ಸಹಾ ಗಮನದಲ್ಲಿಟ್ಟುಕೊಳ್ಳಬೇಕು. ಗೃಹಸಾಲದ ವಿಷಯದಲ್ಲಿ ಅಸಲು ಹಾಗೂ ಪಾವತಿಸುವ ಬಡ್ಡಿಯ ಮೇಲೆ ದೊರೆಯುವ ಆದಾಯ ತೆರಿಗೆ ವಿನಾಯ್ತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಮಾಸಿಕ ಕಂತುಗಳಲ್ಲಿ ಆಗುವ ಕಡಿತ/ಉಳಿತಾಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆಯೂ ಪೂರ್ವಾಲೋಚನೆ ಅಗತ್ಯ. ಇವೆಲ್ಲ ಅಂಶಗಳನ್ನೂ ಗಮನಿಸಿಕೊಂಡು ಮುಂಪಾವತಿಯ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.