ಸದಸ್ಯ:Shiju/FAQ booklet
ವಿಕಿಪೀಡಿಯದ ಬಗ್ಗೆ
[ಬದಲಾಯಿಸಿ]ವಿಕಿಪೀಡಿಯ ಎಂದರೇನು?
[ಬದಲಾಯಿಸಿ]ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ. ಇದರಲ್ಲಿನ ಮಾಹಿತಿ ಜಗತ್ತಿನಾದ್ಯಂತ ಹರಡಿರುವ ಲಕ್ಷಾಂತರ ಮಂದಿ ಸ್ವಯಂ ಸೇವಕರಿಂದ ಸೇರಿಸಲ್ಪಟ್ಟಿದೆ. ಮಾಹಿತಿಯ ಬಳಕೆದಾರರೇ ಇದಕ್ಕೆ ಮಾಹಿತಿಯನ್ನು ಸೇರಿಸಬಹುದು, ಬದಲಾಯಿಸಬಹುದು. ಸಮುದಾಯದ ಸಹಯೋಗದಿಂದ ಕಾರ್ಯ ನಿರ್ವಹಿಸುವ ವಿಕಿಪೀಡಿಯವು ೩೫ ಲಕ್ಷಕ್ಕಿಂತ ಹೆಚ್ಚು ಬರಹಗಳನ್ನು ಶೇಖರಿಸಿಟ್ಟಿದೆ. ಜಗತ್ತಿನ ೨೮೦ಕ್ಕಿಂತ ಹೆಚ್ಚು ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಕನ್ನಡವೂ ಸೇರಿದಂತೆ ಭಾರತದ ಇಪ್ಪತ್ತು ಭಾಷೆಗಳಲ್ಲಿ ವಿಕಿಪೀಡಿಯ ಸೇವೆಯನ್ನು ಹೊಂದಿದೆ.
ವಿಕಿಪೀಡಿಯ ಸಂಸ್ಥಾಪಕರಲ್ಲಿ ಒಬ್ಬರಾದ ಜಿಮ್ಮಿ ವೇಲ್ಸ್ ವಿಕಿಪೀಡಿಯವನ್ನು ವಿವರಿಸುವುದು ಹೀಗೆ: “ಈ ಗ್ರಹದ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ಮಾನವನ ಸಮಸ್ತ ಜ್ಞಾನವನ್ನು ನಿರ್ಬಂಧಿತವಾಗಿ ಲಭಿಸುವಂತೆ ಮಾಡುವಂತಹ ಕನಸು”. ಮಾಹಿತಿಯನ್ನು ಬಳಕೆದಾರರಿಗೆ ಯಾವುದೇ ಖರ್ಚಿಲ್ಲದೆ ತಲುಪಿಸುವುದು ವಿಕಿಪೀಡಿಯದ ಉದ್ದೇಶ.
ವಿಕಿ ಎಂದರೆ?
[ಬದಲಾಯಿಸಿ]ಸಾಮಾನ್ಯವಾಗಿ ಅಂತರಜಾಲ ತಾಣಗಳಿಗೆ ಮಾಹಿತಿಯನ್ನು ಸೇರಿಸುವುದಕ್ಕೆ ಉನ್ನತವಾದ ತಾಂತ್ರಿಕ ಪರಿಣಿತಿ ಮತ್ತು ಮಾಲೀಕರ ಅನುಮತಿ ಬೇಕಾಗುತ್ತದೆ. ಇಂತಹ ಮಿತಿಗಳನ್ನು ನಿವಾರಿಸಿ ಆಸಕ್ತರು ತಾಂತ್ರಿಕ ಪರಿಣಿತಿ ಇಲ್ಲದಿದ್ದರೂ ಸುಲಭವಾಗಿ, ಸ್ವತಂತ್ರವಾಗಿ ಮಾಹಿತಿಯನ್ನು ಸೇರಿಸಲು, ಬದಲಿಸಲು ಹಾಗೂ ಅಳಿಸಲು ಅನುವು ಮಾಡಿಕೊಡುವ ತಂತ್ರಾಂಶವೇ ‘ವಿಕಿ’. ಈ ತಂತ್ರಾಂಶವನ್ನು ಬಳಸುವುದು ತುಂಬ ಸುಲಭವಾದ್ದರಿಂದ ಸಾಮುದಾಯಿಕ ಸಹಭಾಗಿತ್ವದ ಮಾಹಿತಿ ಶೇಖರಣೆಗೆ ಇದು ಅತ್ಯುಪಯುಕ್ತ ಸಾಧನವಾಗಬಲ್ಲದು.
ಈ ಕ್ರಾಂತಿಕಾರಿ ತಂತ್ರಾಂಶವನ್ನು ೧೯೯೪ರಲ್ಲಿ ವಾರ್ಡ್ ಕನ್ನಿಂಗಾಮ್ ಅಭಿವೃದ್ಧಿ ಪಡಿಸಿದರು. ಮಾರ್ಚ್ ೨೫, ೧೯೯೫ ರಲ್ಲಿ ವಿಕಿವಿಕಿವೆಬ್ ಹೆಸರಿನಲ್ಲಿ ಈ ತಂತ್ರಾಂಶವನ್ನು www.c2.com ತಾಣದಲ್ಲಿ ಪ್ರಕಟಿಸಿದರು. ಅನಂತರ ಆತನೇ ಈ ತಂತ್ರಾಂಶಕ್ಕೆ ವಿಕಿ ಎಂಬ ಹೆಸರನ್ನು ಸೂಚಿಸಿದರು. ಹವಾಯಿ ಭಾಷೆಯಲ್ಲಿ ವಿಕಿ ಎಂದರೆ ವೇಗ ಎಂದರ್ಥ. ಸೇರಿಸಿದ ಮಾಹಿತಿ ಕ್ಷಣಾರ್ಧದಲ್ಲಿ ಜಗತ್ತಿನ ಪ್ರತಿಯೊಬ್ಬ ಬಳಕೆದಾರನಿಗೆ ಲಭ್ಯವಾಗುವ ಪ್ರಕ್ರಿಯೆಯಲ್ಲಿನ ವೇಗವನ್ನು ‘ವಿಕಿ’ ಸೂಚಿಸುತ್ತದೆ.
ವಿಕಿ ಹಾಗೂ ವಿಕಿಪೀಡಿಯ ಎರಡೂ ಸಮಾನವೇ?
[ಬದಲಾಯಿಸಿ]ವಿಕಿ ಹಾಗೂ ವಿಕಿಪೀಡಿಯ ಎರಡೂ ಒಂದೇ ಅಲ್ಲ. ವಿಕಿ ಹಾಗೂ ವಿಕಿಪೀಡಿಯ ಪರಸ್ಪರ ಸಂಬಂಧಿಸಿದವಾದರೂ ಇವೆರಡರ ನಡುವೆ ವ್ಯತ್ಯಾಸವಿದೆ. ವಿಕಿ ಎನ್ನುವುದು ಒಂದು ತಂತ್ರಾಂಶ. ವಿಕಿಪೀಡಿಯ, ವಿಕಿ ತಂತ್ರಾಂಶವನ್ನು ಬಳಸಿಕೊಂಡು ಸಾಮುದಾಯಿಕ ಸಹಭಾಗಿತ್ವದಲ್ಲಿ ರೂಪುಗೊಂಡಿರುವ ಅಂತರಜಾಲ ತಾಣ. ವಾಸ್ತವವಾಗಿ, ವಿಕಿ ತಂತ್ರಾಂಶಗಳನ್ನು ಬಳಸಿಕೊಂಡು ನಿರ್ಮಾಣಗೊಂಡಿರುವ ಅನೇಕ ತಾಣಗಳಲ್ಲಿ ವಿಕಿಪೀಡಿಯ ಕೂಡ ಒಂದು. ವಿಕಿಪೀಡಿಯ ಅತ್ಯಂತ ಜನಪ್ರಿಯವಾದ ಹಾಗೂ ಮಾಹಿತಿಭರಿತವಾದ ಅಂತರಜಾಲ ತಾಣ. ವಿಕಿ ಹಾಗೂ ವಿಕಿಪೀಡಿಯ ಎರಡರ ನಡುವೆ ವ್ಯತ್ಯಾಸವಿಲ್ಲ ಎನ್ನುವುದು ಒಂದು ಸಾಮಾನ್ಯವಾದ ತಪ್ಪು ಕಲ್ಪನೆ.
ವಿಕಿಲೀಕ್ಸ್ ವಿಕಿಪೀಡಿಯಾಗೆ ಸಂಬಂಧಿಸಿದ್ದೇ?
[ಬದಲಾಯಿಸಿ]ಇಲ್ಲ. ಪ್ರಶ್ನೆ ೧ ಹಾಗೂ ೩ ರಲ್ಲಿ ತಿಳಿಸಿರುವಂತೆ ವಿಕಿಪೀಡಿಯ ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ವಿಶ್ವಕೋಶ. ಕಳೆದ ಕೆಲವು ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿರುವ ವಿಕಿಲೀಕ್ಸ್ ವಿಕಿಪೀಡಿಯಗೆ ಯಾವುದೇ ರೀತಿಯಲ್ಲೂ ಸಂಬಂಧಿಸಿದ್ದಲ್ಲ. ವಿಕಿಲೀಕ್ಸ್ ಸಂಸ್ಥಾಪಕ ಜುಲಿಯನ್ ಅಸ್ಸಾಂಜೆ ವಿಕಿಮೀಡಿಯ ಫೌಂಡೇಶನ್‌ನೊಂದಿಗೆ ಯಾವ ಸಂಬಂಧವನ್ನೂ ಹೊಂದಿಲ್ಲ.
ವಿಕಿಪೀಡಿಯದಲ್ಲಿ ಸಂಪಾದಿಸುವುದು
[ಬದಲಾಯಿಸಿ]ವಿಕಿಪೀಡಿಯಾದ ಹಿನ್ನೆಲೆಯೇನು?
[ಬದಲಾಯಿಸಿ]ಬಳಕೆದಾರರೆಲ್ಲರೂ ಸಂಪಾದಿಸಬಹುದಾದ ವಿಶ್ವಕೋಶವೊಂದರ ಯೋಜನೆಯನ್ನು ಮೊದಲಿಗೆ ಸಿದ್ಧಪಡಿಸಿದ್ದು ರಿಕ್ ಗೇಟ್ಸ್. ‘ಇಂಟರ್‌ಪೀಡಿಯ’ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟ ಈ ಯೋಜನೆ ಕಾರ್ಯರೂಪಕ್ಕೆ ಇಳಿಯಲೇ ಇಲ್ಲ. ಮುಂದೆ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ಸ್ ‘ನುಪೀಡಿಯ’ ಎನ್ನುವ ಹೆಸರಿನಲ್ಲಿ ಸ್ವತಂತ್ರ ವಿಶ್ವಕೋಶವನ್ನು ಅಭಿವೃದ್ಧಿ ಪಡಿಸಿದರು. ನುರಿತ ಬರಹಗಾರರನ್ನು ನೆಚ್ಚಿಕೊಂಡ ನುಪಿಡೀಯದಲ್ಲಿ ಮಾಹಿತಿ ಸಂಪಾದನೆ ವೇಗ ಕುಂಠಿತವಾಗಿತ್ತು. ಹೆಚ್ಚಿನ ವೇಗದಲ್ಲಿ ಮಾಹಿತಿ ಸಂಪಾದನೆ ಸಾಧ್ಯವಾಗುವಂತೆ ಮಾಡುವುದಕ್ಕೆ ವೇಲ್ಸ್ ಹಾಗೂ ಸ್ಯಾಂಗರ್ ಎಲ್ಲರೂ ಸಂಪಾದಿಸಬಹುದಾದ ವಿಕಿಪೀಡಿಯವನ್ನು ಪ್ರಾರಂಭಿಸಿದರು. ಕ್ರಮೇಣ ವಿಕಿಪೀಡಿಯ ತನ್ನ ಮಾತೃ ಯೋಜನೆಯಾದ ನುಪೀಡಿಯವನ್ನು ಮಾಹಿತಿ ಹಾಗೂ ಜನಪ್ರಿಯತೆಯಲ್ಲಿ ಹಿಂದಿಕ್ಕಿತು.
ವಿಕಿಮೀಡಿಯ ಫೌಂಡೇಶನ್ ಎಂಬ ಸ್ವಯಂ-ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಿಪೀಡಿಯ ಇಂದು ವಿಶ್ವಕೋಶ ಪದಕ್ಕೆ ಪರ್ಯಾಯ ಪದವಾಗಿ ಬೆಳೆದುನಿಂತಿದೆ.
ವಿಕಿಪೀಡಿಯ ಯೋಜನೆ ರಾಜ್ಯ ಇಲ್ಲವೇ ಕೇಂದ್ರ ಸರಕಾರದ ಅನುದಾನವನ್ನು ಪಡೆಯುತ್ತಿದೆಯೇ?
[ಬದಲಾಯಿಸಿ]ವಿಕಿಪೀಡಿಯ ಸ್ವಯಂ-ಸೇವಾ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‍ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರಕಾರಿ ಸಂಸ್ಥೆಯಲ್ಲ, ಸರಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯುತ್ತಿಲ್ಲ. ಈ ಯೋಜನೆಗೆ ಆವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ಸಂಗ್ರಹಿಸಲಾಗಿದೆ. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರಕಾರಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಧನ ಸಹಾಯ.
ವಿಕಿಪೀಡಿಯದಲ್ಲಿ ನಾನು ಸೇರಿಸುವ ಬರಹದ ಬಗ್ಗೆ ನನಗೆ ಆಳವಾದ ತಿಳುವಳಿಕೆ ಇರಬೇಕೆ?
[ಬದಲಾಯಿಸಿ]ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವುದು ಒಂದು ತಪ್ಪು ಕಲ್ಪನೆ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಲೇಬೇಕೆಂಬ ಕಟ್ಟಳೆಯಿಲ್ಲ. ವಾಸ್ತವವಾಗಿ, ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ.
ಒಂದು ಉದಾಹರಣೆಯ ಮೂಲಕ ಇದನ್ನು ವಿಸ್ತರಿಸೋಣ. ಧಾರವಾಡದಲ್ಲಿರುವ ಶಾಲಾ ಬಾಲಕನೊಬ್ಬ ಎಲೆಕ್ಟ್ರಿಕ್ ಬಲ್ಬಿನ ಕುರಿತು ಬರೆಯುವುದಕ್ಕೆ ಇಚ್ಛಿಸುತ್ತಾನೆ ಎಂದುಕೊಳ್ಳಿ. ಆತ ತನಗೆ ಗೊತ್ತಿರುವ ಅಲ್ಪ ಮಾಹಿತಿಯನ್ನು ಸೇರಿಸಿ ಒಂದು ಪುಟವನ್ನು ಪ್ರಾರಂಭಿಸುತ್ತಾನೆ. ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಈ ಪುಟಕ್ಕೆ ಹೆಚ್ಚಿನ ಮಾಹಿತಿಯನ್ನು ಸೇರಿಸುತ್ತಾನೆ. ಇವರು ಸೇರಿಸಿದ ಮಾಹಿತಿಯ ನಿಖರತೆಯನ್ನು ಓರಗೆ ಹಚ್ಚುವ ಅಮೇರಿಕಾ ನಿವಾಸಿ ವಿಜ್ಞಾನಿ ಸೂಕ್ತ ಬದಲಾವಣೆಗಳನ್ನು ಮಾಡಿಯೋ ಇಲ್ಲವೇ ಇನ್ನೂ ಹೆಚ್ಚಿನ ಮಾಹಿತಿಯನ್ನು ಸೇರಿಸಿಯೋ ಪುಟವನ್ನು ಬೆಳೆಸುತ್ತಾನೆ. ಇನ್ಯಾವುದೋ ಪ್ರದೇಶದ ಶಿಕ್ಷಕನೊಬ್ಬ ಅಂದವಾದ ಚಿತ್ರಗಳನ್ನು ಸೇರಿಸಿ ಬಲ್ಬಿನ ಕಾರ್ಯನಿರ್ವಹಣೆಯನ್ನು ವಿವರಿಸುತ್ತಾನೆ. ಇನ್ಯಾವುದೋ ಕಂಪೆನಿಯ ನೌಕರ ವಿವಿಧ ಬಗೆಯ ಬಲ್ಬುಗಳ ಮಾಹಿತಿ ದೊರೆಯುವ ಅಂತರಜಾಲ ತಾಣದ ಕೊಂಡಿಯನ್ನು ಸೇರಿಸುತ್ತಾನೆ. ಹೀಗೆ ಬೀಜರೂಪವಾಗಿದ್ದ ಒಂದು ವಿಷಯದ ಕುರಿತ ವಿಕಿಪೀಡಿಯಾದ ಪುಟ, ಅನೇಕ ಮಂದಿಯ ಸಾಮೂಹಿಕ ಸಹಭಾಗಿತ್ವದಿಂದ ಮಾಹಿತಿಭರಿತ ಲೇಖನವಾಗುತ್ತದೆ.
ವಿಕಿಪೀಡಿಯದಲ್ಲಿ ಪ್ರಕಟವಾಗುವ ಪ್ರತಿಯೊಂದು ಬರಹವೂ ಇದೇ ಪ್ರಕ್ರಿಯೆಯನ್ನು ಹಾದುಬರುತ್ತದೆ. ನೀವೂ ಕೂಡ ಈ ಬೃಹತ್ ಬಳಗದಲ್ಲಿ ಪಾಲ್ಗೊಳ್ಳಬಹುದು. ವಿಕಿಪೀಡಿಯದಲ್ಲಿ ಹೊಸ ಬರಹಗಳನ್ನು ಸೇರಿಸುವ ಹಾಗೂ ಅಸ್ತಿತ್ವದಲ್ಲಿರುವ ಬರಹಗಳನ್ನು ವೃದ್ಧಿಸುವ ಪ್ರಯತ್ನಕ್ಕೆ ನೀವೂ ಕೈಜೋಡಿಸಬಹುದು.
ಯಾವುದರ ಕುರಿತು ಬರೆಯಬೇಕು, ಯಾವ ವಿಷಯದ ಕುರಿತು ಬರೆಯಬಾರದು ಎನ್ನುವುದಕ್ಕೆ ಸಂಹಿತೆಯೇನಾದರೂ ಇದೆಯೇ?
[ಬದಲಾಯಿಸಿ]ನೀವು ಯಾವುದೇ ವಿಷಯವನ್ನು ಕುರಿತ ಬರಹಗಳನ್ನು ವಿಕಿಪೀಡಿಯಾಗೆ ಸೇರಿಸಬಹುದು. ಆದರೆ ಬರಹದ ಮಾಹಿತಿ ವಿಶ್ವಕೋಶದ ಬರಹಗಳ ಮಾದರಿಯಲ್ಲಿರಬೇಕು ಎನ್ನುವುದು ಒಂದು ನಿಬಂಧನೆ. ವಿಶ್ವಕೋಶದ ಮಾದರಿಯಲ್ಲಿ ಮಾಹಿತಿಯನ್ನು ಪ್ರಕಟಿಸುವುದಕ್ಕೆ ವಿಕಿಪೀಡಿಯ ಕೆಲವು ಸಂಹಿತೆಗಳನ್ನು ರೂಪಿಸಿಕೊಂಡಿದೆ. ಅವುಗಳನ್ನು ತಿಳಿದುಕೊಂಡು ಬರೆಯುವುದು ಸೂಕ್ತ.
ನಾನು ಸೇರಿಸಿದ ಬರಹವನ್ನು ಇತರರು ಬದಲಿಸಿದ್ದಾರೆ. ಯಾಕೆ ಹೀಗೆ?
[ಬದಲಾಯಿಸಿ]ವಿಕಿಪೀಡಿಯಾಗೆ ಸೇರಿಸಿದ ಬರಹದ ಮಾಲೀಕತ್ವ ಯಾವುದೇ ಒಬ್ಬ ವ್ಯಕ್ತಿಯದಲ್ಲ. ಇದು ಸಾಮೂಹಿಕ ಪ್ರಯತ್ನ, ಬರಹಗಳು ಇಡೀ ಸಮುದಾಯದ ಹಕ್ಕು. ಹೀಗಾಗಿ ಸೇರಿಸಿದ ಬರಹದ ಮೇಲೆ ಭಾಗಶಃ ಅಥವಾ ಸಂಪೂರ್ಣವಾದ ಹಕ್ಕು ಯಾವ ವ್ಯಕ್ತಿಗಳಿಗೂ ಇರುವುದಿಲ್ಲ. ಬರಹಗಳನ್ನು ತಿದ್ದುವ, ಬದಲಿಸುವ, ಹೆಚ್ಚಿನ ಮಾಹಿತಿ ಸೇರಿಸುವ, ಅಪ್ರಸ್ತುತ ಮಾಹಿತಿಯನ್ನು ಅಳಿಸಿಹಾಕುವ ಪ್ರಕ್ರಿಯೆಗೆ ಎಲ್ಲಾ ಬರಹಗಳು ಒಳಗಾಗುತ್ತವೆ. ಯಾರು ಬೇಕಾದರೂ ಬರಹಗಳನ್ನು ಸೇರಿಸಬಹುದು, ತಿದ್ದಬಹುದು, ಆದರೆ ಉಪಯುಕ್ತ ಬದಲಾವಣೆಗಳನ್ನು ಪೋಷಿಸಿ ವಿಕಿಪೀಡಿಯ ಆರೋಗ್ಯಕರವಾಗಿ ಬೆಳೆಯುವುದಕ್ಕೆ ಅವಶ್ಯಕವಾದ ಕೆಲವು ನಿಯಮ ಹಾಗೂ ಕಟ್ಟಳೆಗಳು ಜಾರಿಯಲ್ಲಿವೆ.
ವಿಕಿಪೀಡಿಯದಲ್ಲಿ ಯಾರೆಲ್ಲ ಬರೆಯಬಹುದು?
[ಬದಲಾಯಿಸಿ]ಬರೆಯುವುದರಲ್ಲಿ, ನಿರ್ದಿಷ್ಟ ವಿಷಯಗಳನ್ನು ಕುರಿತು ಮಾಹಿತಿಯನ್ನು ಸಂಪಾದಿಸುವುದರಲ್ಲಿ ಆಸಕ್ತಿಯಿರುವ ಯಾರಾದರೂ ವಿಕಿಪೀಡಿಯದಲ್ಲಿ ಬರೆಯಬಹುದು. ಜಾತಿ, ದೇಶ, ಭಾಷೆ, ಉದ್ಯೋಗ, ರಾಜಕೀಯ ನಿಲುವು ಹೀಗೆ ಯಾರ ಹಂಗಿಲ್ಲದೆ ಯಾರು ಬೇಕಾದರೂ ಭಾಗವಹಿಸಬಹುದು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಮಾಜಿ ಯೋಧರು, ರೈತರು, ಗೃಹಿಣಿಯರು, ಸಾಫ್ಟ್‌ವೇರ್ ತಂತ್ರಜ್ಞರು, ಸರಕಾರಿ ನೌಕರರು ಹೀಗೆ ಯಾರು ಬೇಕಾದರೂ ಬರೆಯಲು ಅವಕಾಶವಿದೆ. ವಿವಿಧ ಅನುಭವಗಳ ಹಿನ್ನೆಲೆಯಿರುವ ಜನರು ಒಟ್ಟಾಗಿ ಜ್ಞಾನವನ್ನು ಸೃಷ್ಟಿಸುವ ಹಾಗೂ ಪಸರಿಸುವ, ಆ ಮೂಲಕ ಹೆಚ್ಚು ತಿಳಿದುಕೊಳ್ಳುವ ವೇದಿಕೆಯಾಗಿ ವಿಕಿಪೀಡಿಯ ನೆರವಾಗುತ್ತದೆ. ವಿಕಿಪೀಡಿಯದಲ್ಲಿ ಈ ಕಾಲದ ಜ್ಞಾನವನ್ನು ಸಂಗ್ರಹಿಸುವ ಮೂಲಕ ನಾವು ಮುಂದಿನ ಪೀಳಿಗೆಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ.
ಇಂಗ್ಲೀಷ್ ಅಲ್ಲದೆ ಬೇರೆ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆಯೇ? ಕನ್ನಡದಲ್ಲೂ ವಿಕಿಪೀಡಿಯ ಸೌಲಭ್ಯವಿದೆಯೇ?
[ಬದಲಾಯಿಸಿ]ವಿಕಿಪೀಡಿಯ ೨೮೦ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಕನ್ನಡದಲ್ಲೂ ವಿಕಿಪೀಡಿಯ ಲಭ್ಯವಿದೆ. ೨೦೦೧ ಜನವರಿ ೧೫ರಲ್ಲಿ ಇಂಗ್ಲೀಷಿನಲ್ಲಿ ಮೊದಲು ವಿಕಿಪೀಡಿಯ ಪ್ರಾರಂಭವಾಯಿತು. ಮುಂದಿನ ಎರಡು ತಿಂಗಳ ಸಮಯದಲ್ಲಿ ಜರ್ಮನ್ ಭಾಷೆಯಲ್ಲಿಯೂ ವಿಕಿಪೀಡಿಯ ಪ್ರಾರಂಭವಾಯಿತು. ಕ್ರಮೇಣ ಫ್ರೆಂಚ್, ಚೀನಿ, ಡಚ್, ಹಿಬ್ರೂ, ಇಟಾಲಿಯನ್, ರಶಿಯನ್ ಭಾಷೆಗಳಲ್ಲೂ ವಿಕಿಪೀಡಿಯ ಪ್ರಾರಂಭವಾಯಿತು.
ಪ್ರಾರಂಭದ ಮೊದಲ ವರ್ಷದಲ್ಲಿ ಭಾರತದ ಯಾವ ಭಾಷೆಯಲ್ಲಿಯೂ ವಿಕಿಪೀಡಿಯ ಸೌಲಭ್ಯವಿರಲಿಲ್ಲ. ೨೦೦೨ ಜೂನ್‌ನಲ್ಲಿ ಪಂಜಾಬಿ, ಅಸ್ಸಾಮಿ ಹಾಗೂ ಒರಿಯಾ ಭಾಷೆಗಳಲ್ಲಿ ಅಸ್ತಿತ್ವಕ್ಕೆ ಬಂದಿತು. ತಾಂತ್ರಿಕವಾಗಿ ಇಂಗ್ಲೀಷ್ ವಿಕಿಪೀಡಿಯಕ್ಕಿಂತ ಯಾವ ವಿಧದಲ್ಲಿಯೂ ಕಡಿಮೆಯಿಲ್ಲದ ಕನ್ನಡ ವಿಕಿಪೀಡಿಯ ೨೦೦೪ರಲ್ಲಿ ಪ್ರಾರಂಭವಾಯಿತು. ಅದೇ ವರ್ಷದ ಆಸುಪಾಸಿನಲ್ಲಿ ಭಾರತದ ಇತರ ಭಾಷೆಗಳಲ್ಲಿಯೂ ವಿಕಿಪೀಡಿಯ ಪ್ರಾರಂಭವಾಯಿತು. ಸಂಸ್ಕೃತ, ಪಾಲಿ ಮೊದಲಾದ ಭಾಷೆಗಳಲ್ಲಿಯೂ ವಿಕಿಪೀಡಿಯ ಸೌಲಭ್ಯವಿದೆ.
ಬರಹಗಳ ಸಂಖ್ಯೆಯಲ್ಲಿ ಇಂಗ್ಲೀಷ್ ವಿಕಿಪೀಡಿಯ ಮುಂದಿದೆ. ೨೦೧೧ ಮೇನಲ್ಲಿ ೩೫ ಲಕ್ಷಕ್ಕೂ ಹೆಚ್ಚು ಬರಹಗಳು ಇಂಗ್ಲೀಷ್ ವಿಕಿಪೀಡಿಯದಲ್ಲಿದ್ದರೆ, ಕನ್ನಡದಲ್ಲಿ ೧೦,೭೮೪ ಬರಹಗಳಿವೆ.
ನನಗೆ ನಿರರ್ಗಳವಾದ ಇಂಗ್ಲೀಷ್ ಬರುತ್ತದೆ. ಕನ್ನಡದಲ್ಲಿ ಯಾಕೆ ಬರೆಯಬೇಕು?
[ಬದಲಾಯಿಸಿ]ಇಂಗ್ಲೀಷ್ ನಿರರ್ಗಳವಾಗಿ ಬಂದ ಕಾರಣಕ್ಕೆ ಮಾತೃ ಭಾಷೆಯನ್ನು ಮರೆಯಬೇಕಿಲ್ಲ ಅಲ್ಲವೇ? ಇಂಗ್ಲೀಷ್ ತಿಳುವಳಿಕೆಯಿಂದ ಜಗತ್ತಿನ ವಿವಿಧ ಶಾಖೆಗಳಲ್ಲಿನ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಇಂಗ್ಲೀಷ್ ಬಾರದ ನಮ್ಮ ನಾಡಿನ ಜನರಿಗೆ ಅರ್ಥವಾಗುವ ಮಾತೃ ಭಾಷೆಯಲ್ಲಿ ವಿವರಿಸುವುದಕ್ಕಿಂತ ಹೆಚ್ಚಿನ ಸಂತೋಷ ಯಾವುದರಲ್ಲಿದೆ? ಜಗತ್ತಿನ ಜ್ಞಾನವನ್ನೆಲ್ಲ ಕನ್ನಡದಲ್ಲಿ ಸೃಷ್ಟಿ ಮಾಡುವುದಕ್ಕಿಂತ ಹೆಚ್ಚಿನ ಯಾವ ಸೇವೆಯನ್ನು ನಾವು ಹುಟ್ಟಿದ ನಾಡಿಗೆ ಸಲ್ಲಿಸಬಲ್ಲೆವು?
ಅಷ್ಟೇ ಅಲ್ಲದೆ ಭಾಷೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಒಡ್ಡುವ ಮಿತಿಗಳಿಂದ ಕನ್ನಡದ ಸ್ಥಳೀಯ ಜ್ಞಾನ ಭಂಡಾರವೂ ಎಲ್ಲೂ ದಾಖಲಾಗದೆ ಅಥವಾ ಇಂಗ್ಲೀಷಿನಲ್ಲಿ ಸಮರ್ಪಕವಾಗಿ ದಾಖಲಾಗದೆ ಉಳಿದಿವೆ. ಸ್ಥಳೀಯ ಹಾಗೂ ಜನಪದ ಜ್ಞಾನ ಭಂಡಾರವನ್ನು ಇಂಗ್ಲೀಷ್ ಅಥವಾ ಬೇರಾವುದೇ ಭಾಷೆಯಲ್ಲಿ ದಾಖಲಿಸುವುದಕ್ಕಿಂತ ಕನ್ನಡದಲ್ಲೇ ದಾಖಲಿಸುವುದು ತುಂಬಾ ಸುಲಭ. ಕನ್ನಡನೆಲದ ಜ್ಞಾನವನ್ನು ಇಂಗ್ಲೀಷಿನಲ್ಲಿ ದಾಖಲಿಸಿ ಅದನ್ನು ಪುನಃ ಕನ್ನಡಕ್ಕೆ ಭಾಷಾಂತರಿಸುವ ಆತಂಕಕಾರಿ ಕ್ರಿಯೆಯಲ್ಲಿ ಎಷ್ಟೋ ಸತ್ವ ಕಳೆದು ಹೋಗುವ ಸಾಧ್ಯತೆಯಿದೆ. ಕನ್ನಡ ಬಲ್ಲ ನಾವು ನಮ್ಮದೇ ನೆಲದ ಜ್ಞಾನಭಂಡಾರವನ್ನು ನಿಖರವಾಗಿ ದಾಖಲಿಸಿ ಕನ್ನಡಿಗರು ಕನ್ನಡದಲ್ಲೇ ಮಾಹಿತಿಯನ್ನು ಪಡೆಯಲು ಲಭ್ಯವಿರುವ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಎಷ್ಟು ಚೆನ್ನ ಅಲ್ಲವೇ?
ವಿಕಿಪೀಡಿಯದಲ್ಲಿ ಬರೆಯುವುದರಿಂದ ನನಗೆ ಆರ್ಥಿಕವಾಗಿ ಲಾಭವಿದೆಯೇ?
[ಬದಲಾಯಿಸಿ]ವಿಕಿಪೀಡಿಯದಲ್ಲಿ ಬರೆಯುವುದರಿಂದ ಆರ್ಥಿಕವಾಗಿ ಯಾವ ಲಾಭವೂ ಇರುವುದಿಲ್ಲ. ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಜಾನಪದ ಗಾದೆಯಂತೆ ನಾವು ಒಬ್ಬೊಬ್ಬರು ಸೇರಿಸುವ ಮಾಹಿತಿಯು ಬಹುದೊಡ್ಡ ಜ್ಞಾನ ಭಂಡಾರದ ಸೃಷ್ಟಿಗೆ ನೆರವಾಗುತ್ತದೆ. ನಾವು ವಿಕಿಪೀಡಿಯಾಗೆ ಕೊಡುವುದಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವುದು ಸಾಧ್ಯವಿದೆ. ಸಮುದಾಯವೊಂದರ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಂತ ಉಪಯುಕ್ತ ಜ್ಞಾನಕೋಶದ ಕೆಲಸದಲ್ಲಿ ಕೈಜೋಡಿಸುವುದು, ನಾವು ಎಲ್ಲವನ್ನು ಪಡೆದುಕೊಂಡ ಸಮುದಾಯಕ್ಕೆ ಹಿಂದಿರುಗಿಸುವ ಅವಕಾಶವಾಗಿ ನಮಗೆ ಸಿಗುತ್ತದೆ.