ವಿಷಯಕ್ಕೆ ಹೋಗು

ಸದಸ್ಯ:Shakthi9239

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ರಂಗಲೋಕ

[ಬದಲಾಯಿಸಿ]

ಕನ್ನಡ ರಂಗಭೂಮಿ

ಕನ್ನಡ ರಂಗಭೂಮಿಯ ಪರಂಪರೆ ಅತಿ ಪ್ರಾಚೀನವಾದದ್ದೆಂಬುದರಲ್ಲಿ ಸಂದೇಹವಿಲ್ಲ. ಕನ್ನಡ ರಂಗಭೂಮಿಯ ಪ್ರಕಾರಗಳಲ್ಲಿ ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ ದಶಾವತಾರ ಎಂದು ಕರೆಯುವ ಯಕ್ಷಗಾನದ ಆಟಗಳು (ಅದರ ತೆಂಕು ಬಡಗು ಎಂಬ ಪ್ರಭೇದ), ದೊಡ್ಡಾಟ(ಮೂಡಲಪಾಯ ಎನ್ನುವುದು ಅಧ್ಯಯನಕ್ಕೆ ಇಟ್ಟ ಹೆಸರು), ಘಟ್ಟದಕೋರೆ, ಶನಿಕಥೆ ಆಟ, ಕೃಷ್ಣಪಾರಿಜಾತ ಎನ್ನುವ ದೊಡ್ಡಾಟದ ಪ್ರಕಾರಗಳು ಮತ್ತು ನಾಟಕಗಳು ಪ್ರಮುಖವಾಗಿವೆ. ಪಾರ್ತಿಸುಬ್ಬನ ರಾಮಾಯಣದ ಯಕ್ಷಗಾನದ ಪ್ರಸಂಗಗಳು (ಸೀತಾಪಹಾರ, ವಾಲೀ ವಧಾ, ರಾವಣಾ ವಧಾ) ಸುಮಾರು ೧೬ನೇ ಶತಮಾನದವು. ಪ್ರಾಯಶ: ಇವು ಕನ್ನಡ ರಂಗಭೂಮಿಯ ಪ್ರಾಚೀನ ಕೃತಿಗಳು. ಪುರಂದರದಾಸರು ಬರೆದ ಅನಸೂಯಾ ಚರಿತ್ರೆ ಯಕ್ಷಗಾನವು ಸುಮಾರು ಅದೇ ಕಾಲದ್ದು ಎನ್ನಲಾಗಿದೆ. ಕನ್ನಡ ನಾಟಕಗಳಲ್ಲಿ ತುಂಬ ಹಳೆಯದು ಚಿಕ್ಕದೇವರಾಜರ ಆಸ್ಥಾನದಲ್ಲಿದ್ದ ಸಿಂಗರಾರ್ಯ ರಚಿಸಿದ ‘ಮಿತ್ರವಿಂದಾ ಗೋವಿಂದ’. ಇದು 17ನೆಯ ಶತಮಾನದ ಅಂತ್ಯಭಾಗದಲ್ಲಿ ರಚಿತವಾದ ಕೃತಿ; ಶ್ರೀಹರ್ಷನ ರತ್ನಾವಳೀ ನಾಟಕದ ಕನ್ನಡ ರೂಪ. ಒಂದು ದೃಷ್ಟಿಯಿಂದ, ಇದು ಮೂಲಕೃತಿಯಷ್ಟೂ ತೃಪ್ತಿಕೊಡಲಾರದ ಕನ್ನಡರೂಪವೆಂದು ಹೇಳಬಹುದು. ಇದಕ್ಕಿಂತ ಪ್ರಾಚೀನವಾದ ಕನ್ನಡ ನಾಟಕ ದೊರೆತಿಲ್ಲ ಎನ್ನುವುದರಿಂದಲೇ ಇದಕ್ಕೆ ಹಿರಿಮೆ ಪ್ರಾಪ್ತವಾಗಿದೆ. ದೊರೆತಿಲ್ಲ ಎಂದರೆ ಇರಲಿಲ್ಲ ಎಂದು ಹೇಳಿದಂತಲ್ಲ. ಪ್ರಾಚೀನ ಕನ್ನಡ ಸಾಹಿತ್ಯದ ಶಾಸನಗಳಲ್ಲಿ ನಾಟಕದ ಪ್ರಸ್ತಾಪ ಮತ್ತೆ ಮತ್ತೆ ಕಾಣಸಿಗುತ್ತದೆ.

ಕನ್ನಡ ರಂಗಭೂಮಿ ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ವಿಕೀಕರಣದ ನಂತರ ಈ ಟೆಂಪ್ಲೇಟನ್ನು ತೆಗೆದುಹಾಕಿ.

ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ.

ಪರಿವಿಡಿ ಯಕ್ಷಗಾನಗಳು ಬದಲಾಯಿಸಿ ಸುಮಾರು ಮೂರು ಸಾವಿರಕ್ಕು ಹೆಚ್ಚು ಯಕ್ಷಗಾನ ಪ್ರಸಂಗಗಳಿದ್ದು, ಸುಮಾರು ೧೨ನೇ ಶತಮಾನದಿಂದಲೇ ಯಕ್ಷಗಾನ ಕನ್ನಡ ರಂಗಭೂಮಿ ಬೆರೆದು ಬಂದಿದೆ ಎಂದು ಊಹಿಸಲಾಗಿದೆ.

ಪ್ರಾಚೀನ ನಾಟಕಶಾಲೆಗಳು ಬದಲಾಯಿಸಿ ಕನ್ನಡ ನಾಡಿನಲ್ಲಿ ಹಿಂದೆ ಅನೇಕ ನಾಟಕ ಶಾಲೆಗಳಿದ್ದುವೆಂದು ತಿಳಿಯಲು ಆಧಾರಗಳಿವೆ. ಮೈಸೂರಿನ ಕಂಠೀರವ ನರಸರಾಜರ (1638-59) ಅರಮನೆಯಲ್ಲಿ ಮನೋಹರವಾದ ನಾಟಕಶಾಲೆ ಇತ್ತೆಂದು ಆ ರಾಜರ ಚರಿತ್ರೆಯನ್ನು ರಚಿಸಿದ ಗೋವಿಂದವ್ಯೆದ್ಯ ತನ್ನ ಕಾವ್ಯದಲ್ಲಿ ಹೇಳಿದ್ದಾನೆ. ಕೆಳದಿಯ ವೆಂಕಟಪ್ಪ ನಾಯಕ (1582-1620) ತನ್ನ ಇಕ್ಕೇರಿಯರಮನೆಯೊಳ್ ಚಿತ್ರಕರ ರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮಿಸಿದನ್’ ಎಂದು ಲಿಂಗಣ್ಣ ಕವಿಯ ಕೆಳದಿನೃಪವಿಜಯದಲ್ಲಿ ಖಚಿತವಾದ ಮಾತಿದೆ. ಅದಕ್ಕಿಂತ ನೂರು ವರ್ಷಗಳ ಹಿಂದೆ, ಕವಿ ರತ್ನಾಕರವರ್ಣಿ ತನ್ನ ಭರತೇಶವೈಭವ ಕಾವ್ಯದ ಪುರ್ವನಾಟಕ ಸಂಧಿ, ಉತ್ತರನಾಟಕ ಸಂಧಿಗಳಲ್ಲಿ ಶೃಂಗಾರಮಯವಾದ ನಾಟಕಶಾಲೆಯ ವರ್ಣನೆಯನ್ನು ಕೊಡುತ್ತಾನೆ. ವಿಜಯನಗರ ಸಾಮ್ರಾಜ್ಯದ ಸಂಪತ್ಸಮೃದ್ಧಿಯ ಕಾಲದಲ್ಲಿಯಂತೂ ಕೃಷ್ಣದೇವರಾಯನ ರಾಜಧಾನಿಯಲ್ಲಿದ್ದ ಪಟ್ಟದ ನಾಟಕಶಾಲೆಯಲ್ಲದೆ ಇಕ್ಕೇರಿ, ತಂಜಾವೂರು ಮೊದಲಾದ ಪ್ರಾದೇಶಿಕ ಕೇಂದ್ರಗಳಲ್ಲೂ ರತ್ನಖಚಿತವಾದ ಅಲಂಕಾರಗಳನ್ನು ಹೊಂದಿದ್ದ ನಾಟಕಶಾಲೆಗಳಿದ್ದುವೆಂದು ಬಿ.ಎ. ಸಾಲೆತೊರೆಯವರು ಹೇಳಿದ್ದಾರೆ. ಇದೆಲ್ಲಕ್ಕಿಂತ ಹಿಂದೆ 1045ರಲ್ಲಿ ಧಾರವಾಡದ ಸಮೀಪದ ಮುಳಗುಂದದಲ್ಲಿ (ಇಂದು ಮುಗದ ಎಂಬ ಹಳ್ಳಿ) ನಿಲ್ಲಿಸಿ ಇಂದಿಗೂ ಬಿಸಿಲು ಮಳೆಗಾಳಿಗಳಿಗೆ ಮೈಯೊಡ್ಡಿ ನಿಂತಿರುವ ದೊಡ್ಡದೊಂದು ಶಿಲಾಫಲಕ - ಶ್ರೀಮನ್ಮಹಾಸಾಮನ್ತಂ ಮಾರ್ತಾನ್ಡಯ್ಯಂ ತಮ್ಮ ಮುತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕಶಾಲೆಯಂ ಮಾಡಿಸಿ, ತನ್ನ ಕೀರ್ತಿಶಿಲಾಸ್ತಂಭಮಂ ಆಚಂದ್ರಾರ್ಕತಾರಂಬರಂ ನಿಲಿಸಿದಂ ಎಂದು 11ನೆಯ ಶತಮಾನದ ಕನ್ನಡ ನಾಟಕಶಾಲೆಯ ಕತೆಯನ್ನು ಹೇಳುತ್ತಿದೆ.

ನಾಟಕದ ಪ್ರಾಚೀನತೆ ಬದಲಾಯಿಸಿ ನಾಟಕ ಎಂಬ ಮಾತೂ ಕನ್ನಡನಾಡಿನಲ್ಲಿ ತುಂಬ ಹಳೆಯದು. ಗೋವಿಂದವೈದ್ಯ, ರತ್ನಾಕರವರ್ಣಿಗಳ ಕೃತಿಗಳಲ್ಲಿ ನಾಟಕ ಎಂಬ ಪದವೂ ನಾಟಕದ ವರ್ಣನೆಯೂ ಕಂಡುಬರುತ್ತವೆ. 17ನೆಯ ಶತಮಾನದ ಆದಿಭಾಗದಲ್ಲಿದ್ದ ಭಟ್ಟಾಕಳಂಕ. ಕಾವ್ಯನಾಟಕಾಲಂಕಾರಕಲಾಶಾಸ್ತ್ರ ವಿಷಯಾಣಾಂಚ ಬಹೂನಾಂ ಗ್ರಂಥಾನಾಮಪಿ ಭಾಷಾಕೃತಾನಮುಷಲಭ್ಯಮಾನತ್ವಾತ್’-ಎಂದು ಬರೆದಿದ್ದಾನೆ. ಕುಮಾರವ್ಯಾಸ ಕವಿ ನಾಟಕ ಎಂಬ ಮಾತನ್ನು ಅನೇಕ ಕಡೆಗಳಲ್ಲಿ ಉಪಯೋಗಿಸಿದ್ದಾನೆ. ಬಸವಪುರಾಣವನ್ನು ರಚಿಸಿದ ಭೀಮಕವಿ, ‘ಶೃಂಗಾರಗೊಂಡು ಒಡವೆಗಳಿಂದ ಅಲಂಕೃತವಾಗಿ ನಾಟಕಕ್ಕಳವಟ್ಟು ರೀತಿಯೊಳೊಪ್ಪಿ ನಡೆತಂದ ಚದುರೆ’ ಸೋಮಲದೇವಿಯನ್ನು ವರ್ಣಿಸಿದ್ದಾನೆ. ಶೃಂಗಾರ ರತ್ನಾಕರವನ್ನು ರಚಿಸಿದ ಕವಿ ಕಾಮದೇವನೂ ಪೇಳ್ದಭಿನಯಿಸಿ ನಾಟಕಂಗಳನಂತುಂ ಪಡೆದಲ್ಲದೆ ಬರ್ಕುಮೆ ಎಂದು ನಾಟಕದ ಬಗ್ಗೆ ನುಡಿದಿದ್ದಾನೆ. ಮಹಾದೇವಿ, ರೂಪಾದೇವಿ ಎಂಬ ರಾಣಿಯರು ಸೀತೆ-ರಾಮರಾಗಿ ಕೃತಕ ನಾಟಕವನ್ನಾಡಿದ ರೀತಿಯನ್ನು ಪಂಚತಂತ್ರ ಕೃತಿಕಾರ ದುರ್ಗಸಿಂಹ ತಿಳಿಸಿದ್ದಾನೆ. ಹೆಸರಾಂತ ಹೊಯ್ಸಳ ದೊರೆ ವೀರಬಲ್ಲಾಳ ಕಲಾವಂತನಾದ ನಟನಾಗಿದ್ದನೆಂದು ಸೊರಬದ ಶಿಲಾಶಾಸನದಲ್ಲಿ (1208) ಹೇಳಿದೆ. ನೀಲಾಂಜನೆ ನಾಟಕ ಮಾಡಿದುದರ ಬಣ್ಣನೆ ಪಂಪನ ಆದಿಪುರಾಣದಲ್ಲಿದೆ. ಪೊನ್ನಕವಿ ತನ್ನ ಶಾಂತಿಪುರಾಣದಲ್ಲಿ ಚಂದ್ರೋದಯವನ್ನು ನಾಟಕಾರಂಭಕ್ಕೆ ಹೋಲಿಸುತ್ತ, ನಕ್ಷತ್ರಗಳು ಸೂತ್ರಧಾರ ಪುಸಿದ ಪುಷ್ಪಗಳೆಂದೂ ಸರಿದು ಹೋಗುತ್ತಿರುವ ಕತ್ತಲೆಯ ಮೇಲೇರುತಿರುವ ತೆರೆಯೆಂದೂ ರಾತ್ರಿಯ ನಾಲ್ಕು ಪ್ರಹರಗಳು ನಾಟಕದ ನಾಲ್ಕು ಅಂಕಗಳು ಎಂದೂ ವರ್ಣಿಸಿದ್ದಾನೆ. ಅಜಿತಪುರಾಣದ ಕರ್ತೃ ರನ್ನ ಕವಿಯ ಕಾವ್ಯದಲ್ಲಿ ನಾಟಕವಿಧಿಯ ವಿವರಣೆಯನ್ನು ನೋಡಬಹುದು. ನಾಟಕವೆಂಬ ಹೆಸರಿನ ಮನೋರಂಜನೆಯು ಕನ್ನಡ ನಾಡಿನಲ್ಲಿ 10ನೆಯ ಶತಮಾನದಿಂದಲಾದರೂ ಇದ್ದಿತೆಂದು ನಂಬಲು ಇವೆಲ್ಲ ಆಧಾರಗಳುಂಟು. ಭಾರತದ ಉಳಿದ ಭಾಷೆಗಳಲ್ಲಿ ನಾಟಕದ ಹಳಮೆಯ ಬಗೆಗೆ ಇಷ್ಟೊಂದು ಖಚಿತವಾದ ಆಧಾರ ಸಿಕ್ಕಿಲ್ಲ.

ಪ್ರಾಚೀನ ನಾಟಕಗಳ ಸ್ವರೂಪ ಬದಲಾಯಿಸಿ ಅಂದಿನ ಆ ನಾಟಕಗಳ ರೂಪುರೇಷೆಗಳೇನು ಎಂಬ ಪ್ರಶ್ನೆಗೆ ನಿಶ್ಚಿತವಾದ ಉತ್ತರವಿನ್ನೂ ದೊರೆತಿಲ್ಲ. ಗೋವಿಂದವೈದ್ಯನ ಅಥವಾ ರತ್ನಾಕರವರ್ಣಿ ಬಣ್ಣಿಸಿದ ನಾಟಕದ ವರ್ಣನೆಯನ್ನು ಗಮನಿಸಿದರೆ, ಅದು ನಾಟ್ಯ ಅಥವಾ ಭಾವಪ್ರಧಾನವಾದ ನೃತ್ಯದ ವರ್ಣನೆಯೇನೋ ಎನಿಸುತ್ತದೆ. ರತ್ನಾಕರ ಚಿತ್ರಿಸಿದ ತಾಳ ಹಿಡಿದ ಸೂತ್ರಧಾರನೂ ಬಸವಪುರಾಣದ ನಾಟಕ ಪಂಡಿತನಂತೆ ಇಂದಿನ ಯಕ್ಷಗಾನದ ಭಾಗವತನನ್ನೇ ಹೋಲುತ್ತಾನೆ. ಇಟ್ಟು ಜಡೆಬೊಲ್ಲ ಹವಮರ್ದಿರೆ, ತೊಟ್ಟು ಕಂಚುಕಮಂ ದುಕೂಲವನುಟ್ಟು, ಚಲ್ಲಣಮಂ ರಚಿಸಿ, ಮಣಿಖಚಿತ ಸಿಂಜಿನಿಯ ಕಟ್ಟಿಕೊಂಡು-ಬಸವಪುರಾಣದಲ್ಲಿ ನಾಟಕವಾಡಿದ ಸೋಮಲದೇವಿಯ ವರ್ಣಿಕೆಯ ಅಲಂಕಾರವೂ ಆಕೆ ನರ್ತಕಿ ಎಂದೇ ಸೂಚಿಸುತ್ತವೆ. ಕವಿ ಕಾಮದೇವನೂ ನಾಟಕವೆಂದರೆ ಅಭಿನಯ ಪ್ರಧಾನವಾದ ನೃತ್ಯಕಲೆಯೆಂದು ಸೂಚಿಸುವಂತಿದೆ. ಆದಿಪಂಪ ನೀಲಾಂಜನೆಯ ನೃತ್ಯವನ್ನು ಬಣ್ಣಿಸುವಾಗ ನಾಟಕ ಎಂಬ ಪದವನ್ನು ಪ್ರಯೋಗಿಸುತ್ತಾನೆ. ‘ಕೃತಾನುಕರಣಮೆ ನಾಟಕಮಪ್ಪುದು’ ಎಂದು ಆತ ಹೇಳಿದರೂ ಆ ಅನುಕರಣದಲ್ಲಿ ಪಾತ್ರಕ್ಕೆ ಆಡುವ ಮಾತಿದೆಯೇ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಎಲ್ಲದರಿಂದಾಗಿ, ಭರತೇಶವೈಭವ ಕಾವ್ಯದ ಜಲಕನ್ನಿಕಾನಾಟ್ಯ, ದಿಕ್ಕನ್ನಿಕಾನಾಟ್ಯಗಳಂತೆ ಅಭಿನಯ ಪ್ರಧಾನವಾದ ನೃತ್ಯಗಳೇ ಕನ್ನಡದ ಪ್ರಾಚೀನ ನಾಟಕಗಳಾಗಿದ್ದಿರಬೇಕು ಎನಿಸುತ್ತದೆ. ಅಭಿನವ ಮಂಗರಾಜನ ಅಭಿನವಾಭಿದಾನ ಎಂಬ ನಿಘಂಟಿನಲ್ಲಿಯೂ (1378) ನಾಟಕಕ್ಕೆ ಇದೇ ಅರ್ಥವನ್ನು ತರುವ ವಿವರಣೆ ಇದೆ: ನೃತ್ಯದೊಳು ಹಸ್ತಾಂಗ ದೃಷ್ಟಿಗತಿ ಪದ್ಧತಿಯೊಳಾಡೆ ನಾಟಕಮೆನಿಕ್ಕು. ಈ ಎಲ್ಲ ಮಾತುಗಳನ್ನೂ ವಿವೇಚಿಸಿದಾಗ, ಕೆ. ಜಿ. ಕುಂದಣಗಾರರು ಬರೆದಂತೆ, ಕನ್ನಡನಾಡಿನ ಪ್ರಾಚೀನ ನಾಟಕ ಇಂದಿನ ಕಥಕ್ಕಳಿಯಂತೆ, ಭಾವ ಮತ್ತು ಗೀತ ಪ್ರಧಾನವಾದ ಆಡುಮಾತಿಲ್ಲದ ಒಂದು ನೃತ್ಯ ಪ್ರಕಾರವಾಗಿರಬೇಕು ಎನಿಸುತ್ತದೆ. ಅಂದಿನ ರಂಗಭೂಮಿಗೆ ಆಶ್ರಯವಿತ್ತ ರಾಜಾಸ್ಥಾನಗಳಲ್ಲಿ ಸಂಕೇತ ಪ್ರಧಾನವಾದ ಇಂಥ ಪ್ರಯೋಗಗಳೇ ಹೆಚ್ಚು ಪ್ರಿಯವಾಗಿ, ಆಡುಮಾತಿನ ನಾಟಕಗಳು ಕಡಿಮೆ ಇದ್ದಿರಬೇಕು. ಇದರ ಜೊತೆಗೆ ಕನ್ನಡ ರಾಯರ ಆಸ್ಥಾನಗಳಲ್ಲಿ ಆಡುಮಾತಿನ ನಾಟಕಗಳನ್ನೂ ಆಡುತ್ತಿದ್ದರು ಎನ್ನುವುದಕ್ಕೆ ಕೆಲವೊಂದು ಆಧಾರಗಳಿವೆ. ಚಿಕ್ಕದೇವರಾಜರ ಆಸ್ಥಾನದಲ್ಲಿ ಮಿತ್ರವಿಂದಾ ಗೋವಿಂದ ಪ್ರದರ್ಶಿತವಾಯಿತು. ಸಂಸ್ಕೃತದಲ್ಲೂ ಆಡುಮಾತಿನ ನಾಟಕಗಳು ಇನ್ನೂ ಹಿಂದಿನ ಕಾಲದಿಂದಲೂ ಆಸ್ಥಾನಗಳಲ್ಲಿ ಪ್ರದರ್ಶಿತವಾಗುತ್ತಿದ್ದುವು. ವಿಜಯನಗರದ ಅರಸ ಕೃಷ್ಣದೇವರಾಯ ಸಂಸ್ಕೃತದಲ್ಲಿ ರಚಿಸಿದ ಜಾಂಬವತೀಕಲ್ಯಾಣಂ ಎಂಬ ನಾಟಕವನ್ನು ಚೈತ್ರೋತ್ಸವದಂದು ನೆರೆದ ಮಹಾಪ್ರಜೆಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಜ್ಯೋತಿರೇಶ್ವರ ಕವಿ ವೇಬರಾಚಾರ್ಯರ ಧೂರ್ತಸಮಾಗಮ ಪ್ರಹಸನವೂ ಆಸ್ಥಾನವನ್ನು ರಂಜಿಸಿದ ಸಂಸ್ಕೃತ ನಾಟಕವೇ. ಆಡುಮಾತಿನ ಕನ್ನಡ ನಾಟಕಗಳು ಅಂದು ಇದ್ದುವೆ ಎಂಬ ವಿಷಯವನ್ನು ಎಂ. ಗೋವಿಂದಪೈಯವರು ಪರಿಶೀಲಿಸುತ್ತಾ ಕೇಶೀರಾಜನ ಶಬ್ದಮಣಿದರ್ಪಣದಲ್ಲಿ ಸೂಚಿತವಾದ ಸುಭದ್ರಾಹರಣ ಮತ್ತು ಪ್ರಭೋದಚಂದ್ರ ಇವು ಕನ್ನಡ ನಾಟಕಗಳಾಗಿದ್ದಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಎರಡನೆಯ ನಾಗವರ್ಮನ ಕಾವ್ಯಾವಲೋಕನದಲ್ಲಿ ಕಾಳಿದಾಸನ ವಿಕ್ರಮೋರ್ವಶೀಯದ ಒಂದು ಪದ್ಯದ (ಅಂಕ 1 ಪದ್ಯ 3) ಹಾಗೂ ಶ್ರೀಹರ್ಷನ ನಾಗಾನಂದದ ಮತ್ತು ಭವಭೂತಿಯ ಮಾಲತೀಮಾಧವದ ಕೆಲವು ಪದ್ಯಗಳ ಕನ್ನಡ ರೂಪಗಳಿವೆ. ಛಂದಾನುಶಾಸನದ ಕರ್ತೃ ಜಯಕೀರ್ತಿ ಹೇಳಿದ ಪ್ರತಿಥಂ ಕರ್ಣಾಟಮಾಲತೀಮಾಧವ ಪ್ರಭೃತಿಕಾವ್ಯೇ ಎಂಬ ಮಾತಿನಿಂದ ಭವಭೂತಿಯ ಆ ನಾಟಕ ಕನ್ನಡಕ್ಕೆ ಅನುವಾದವಾಗಿದ್ದಿರಬಹುದೆಂದು ಸಂಶೋಧಕರು ಭಾವಿಸುತ್ತಾರೆ. ಹೀಗೆ 10ನೆಯ ಶತಮಾನದಿಂದ ಬಳಕೆಗೆ ಬಂದ ನಾಟಕ ರಾಜಾಸ್ಥಾನದಲ್ಲಿ ತುಂಬ ಪ್ರಿಯವೆನಿಸಿದ್ದ ನೃತ್ಯಪ್ರಕಾರಗಳನ್ನಲ್ಲದೆ ಸಂಸ್ಕೃತನಾಟಕಗಳ ಕನ್ನಡ ರೂಪಗಳನ್ನು ಒಳಗೊಂಡಿದ್ದಿರಬೇಕು. ದೇಸೀಪರಂಪರೆ : ಹಿಂದೆ ಹೇಳಿದ್ದು ರಾಜಾಶ್ರಯದಲ್ಲಿದ್ದ ರಂಗಭೂಮಿಯ ನಾಟಕಗಳ ಮಾತು; ಆದರೆ ಜನಪದ ರಂಗಭೂಮಿ ಅದಕ್ಕಿಂತ ಹಳೆಯದು. ಮೆಟ್ಟಲು ಮೆಟ್ಟಲಾಗಿ ಕಾಲಮಾನದಲ್ಲಿ ಹಿಂದೆ ಹಿಂದೆ ಹೋಗಿ ಪರೀಕ್ಷಿಸಿದರೆ ಕನ್ನಡ ನಾಡಿನ ಜನಪದ ರಂಗಭೂಮಿ ಸಾವಿರ ವರ್ಷಕ್ಕಿಂತ ಹಿಂದಿನದು ಎಂದು ತಿಳಿಯುತ್ತದೆ. ದಶಾವತಾರದ ಮಾತನ್ನೇ ಎತ್ತಿಕೊಳ್ಳೋಣ. 1812ರಲ್ಲಿ ಧರ್ಮಸ್ಥಳದ ಯಕ್ಷಗಾನಮೇಳವೊಂದು ಮೈಸೂರಿನ ಮುಮ್ಮಡಿ ಕೃಷ್ಣರಾಜರ ಆಸ್ಥಾನದಲ್ಲಿದ್ದ ರಾಜಾಶ್ರಯ ಪಡೆಯಿತು. ಅದಕ್ಕಿಂತ ಹಿಂದೆ, 17ನೆಯ ಶತಮಾನದ ಉತ್ತರಾರ್ಧದಲ್ಲಿ ಬಿದನೂರಿನ ವೀರಭದ್ರನಾಯಕ ದಶಾವತಾರ ನಾಟಕವೊಂದನ್ನು ಬಿಜಾಪುರದ ಬಾದಷಹಾನ ಸಮ್ಮುಖದಲ್ಲಿ ಆಡಿತೋರಿಸಿ, ರಂಜನೆಗೊಂಡ ಆತನಿಂದ ತನ್ನ ಶತ್ರುಗಳನ್ನು ಓಡಿಸಲು; ಸಹಾಯ ಪಡೆದನಂತೆ, 1648ರಲ್ಲಿ ಗೋವಿಂದವೈದ್ಯ ಕವಿ ರಚಿಸಿದ ಕಂಠೀರವ ನರಸರಾಜವಿಜಯದಲ್ಲಿ ‘ದಶಾವತಾರ’ದ ಮಾತಿದೆ. ಯಕ್ಷಗಾನ ಒಂದು ವಿಶಿಷ್ಟ ಸಂಗೀತಪದ್ಧತಿ ಎಂಬುದಾಗಿ ಗೋವಿಂದ ದೀಕ್ಷಿತರು 1628ರಲ್ಲಿ ರಚಿಸಿದ ಸಂಗೀತ ಸುಧೆಯಲ್ಲಿ ಉಲ್ಲೇಖವಿದೆ. 1577ರಲ್ಲಿ ರಚಿತವಾದ ಭರತೇಶವೈಭವದಲ್ಲಿ ಬರುವ ಎಕ್ಕಡಿಗರು ಯಕ್ಷಗಾನಕಲಾವಿದರಿದ್ದಿರಬೇಕೆಂದು ಸಂಶೋಧಕರ ಅಭಿಪ್ರಾಯ. ಕವಿ ಕುಮಾರವ್ಯಾಸ ‘ನಾಡಾಡಿಗಳ ನಾಟಕ’ದ ಮಾತು ಹೇಳಿದ್ದಾನೆ. ನಿಜಗುಣ ಶಿವಯೋಗಿ ಹೇಳಿದ ನಾಟಕದಲ್ಲಿ ‘ದಿನದಿನಕ್ಕಭಿನಯಿಸಲ್ತಕ್ಕ ರಸ ಭಾವ ಸಂವಿಧಾನ ಆಶ್ರಯಗಳೆಂಬ ಚತುರ್ವಿಧ ಪ್ರಬಂಧಾಂಶಂಗಳಂ, ಮುಖ ದೃಷ್ಟಿ ಹಸ್ತ ಪಾದಂಗಳಭಿನಯಿಪ ಲಕ್ಷಣಂ ತಪ್ಪದೆ. ಚತುರ್ವಿಧ ಮೋಹವಂ ಮೆಯ್ವೆತ್ತು ಶುದ್ಧದೇಶೀಯವೆಂಬ ದ್ವಯಮಾ’ ವಿವರಗೊಂಡ ನಾಟಕದ ರೀತಿಯನ್ನು ಓದಿದ್ದರೆ ಅದು ಇಂದಿನ ಯಕ್ಷಗಾನದ ಹಳೆಯ ರೂಪವನ್ನು ಕುರಿತು ಹೇಳಿದ ಮಾತೇನೊ ಎನ್ನಿಸುತ್ತದೆ. ದೇಗುಲಗಳ ಆವಾರಗಳಲ್ಲಿದ್ದ ಜಾನಪದ ರಂಗಮಂಟಪಗಳ ಬಗೆಗೆ 1125ರಿಂದ ಮಾಹಿತಿ ಕಾಣಸಿಕ್ಕುವುದೆಂದು ಬಿ.ಎ. ಸಾಲೆತೊರೆಯವರು ಆಧಾರಸಹಿತವಾಗಿ ಬರೆದಿದ್ದಾರೆ. ನೃಪತುಂಗ ಹೇಳಿದ ನಾಪಿಗರಣವೆಂದರೆ ಕನ್ನಡ ಜಾನಪದರಂಗಭೂಮಿಯ ಒಂದು ಪ್ರಕಾರ. 8ನೆಯ ಶತಮಾನದ ಪಟ್ಟದಕಲ್ ಶಿಲಾಶಾಸನದಲ್ಲಿ ಇನ್ನಾತನೆ ನರ್ತಕಂ, ನಟರೊಳಗ್ಗಳಂ ಈ ಭುವನಾಸ್ತ ರಂಗದೊಳೆ ಎಂದು ಕೀರ್ತಿಗೊಂಡ ನಟಸೇವ್ಯ, ಕನ್ನಡ ಜಾನಪದ ರಂಗ ಭೂಮಿಯ ಹೆಸರಾಂತ ಕಲಾವಿದನಿದ್ದಿರಬೇಕೆಂದು ಸಂಶೋಧಕರ ಮತ. ಇವೆಲ್ಲಕ್ಕಿಂತ ಹಿಂದೆ ಸಿಕ್ಕುವ ಆಧಾರವೆಂದರೆ, ಭಾಗವತದ ಹರಿವಂಶಪುರಾಣದಲ್ಲಿ (200-400?) ವಜ್ರನಾಭಾಸುರನ ಸಂಹಾರಕ್ಕಾಗಿ ಕಟ್ಟಿದ ಆಟದ ಅಂಗವಾಗಿ, ಭದ್ರನಟನ ನಾಯಕತ್ವದಲ್ಲಿ ನಡೆದ ಭಾಗವತ ಮೇಳದ ಮಾತು ಎಂದು ಕೆರೋಡಿ ಸುಬ್ಬರಾಯರು ಸೂಚಿಸಿದ್ದಾರೆ. ಕನ್ನಡ ಜಾನಪದದ ಕಲಾವಂತಿಕೆಯ ಮಾತು ಪ್ರಾಚೀನ ತಮಿಳು ಸಾಹಿತ್ಯದಲ್ಲೂ ಬರುತ್ತದೆ. ಪ್ರಸಕ್ತಶಕದ ಮೊದಲ ವರ್ಷಗಳಲ್ಲಿ ರಚಿತವಾದ ಶಿಲಪ್ಪದಿಗಾರಂ ಕಾವ್ಯದಲ್ಲಿ ಚೇರರಾಜನಾದ ಶೆಂಗುಟ್ಟುವನ್ ನೀಲಗಿರಿಗೆ ಬಂದಾಗ, ಅವನ ಮನೋರಂಜನೆಗಾಗಿ ಕರುನಾಟಕದ ನಟಿ ನರ್ತಕಿಯರು ಆಡಿದ ಗೀತಾನೃತ್ಯದ ವರ್ಣನೆಯಿದೆ. ಇಷ್ಟು ಪ್ರಾಚೀನವೂ ವೈಭವಯುಕ್ತವೂ ಆದ ನಮ್ಮ (ದ್ರಾವಿಡರ) ಜನಪದ ರಂಗಭೂಮಿಯ ಪ್ರಭಾವ ಭರತನ ನಾಟ್ಯಶಾಸ್ತ್ರದ ಮೇಲೆ ಬಿದ್ದಿರಬೇಕೆಂದು ಕೃಷ್ಣಶಾಸ್ತ್ರೀಯವರು, ಶ್ರೀರಂಗರು ಅಭಿಪ್ರಾಯಪಟ್ಟಿದ್ದಾರೆ. ಹಳೆಮೆಯೊಂದೇ ಕನ್ನಡ ರಂಗಭೂಮಿಯ ಹಿರಿಮೆಯಲ್ಲ ಎಂದು, ಕಳೆದ 100-150 ವರ್ಷಗಳ ಕಾಲಾವಧಿಯಲ್ಲಿ ಅದರ ಇತಿಹಾಸವನ್ನು ವಿವೇಚಿಸಿದಾಗ ತಿಳಿದು ಬರುತ್ತದೆ. ಕನ್ನಡ ರಂಗಭೂಮಿ ಮೂರು ಮುಖ ತಳೆದು; ಜನಪದ ರಂಗಭೂಮಿ ಯಲ್ಲಿಯೂ ವೃತ್ತಿನಿರತ (ಪ್ರೊಫೆಷನಲ್) ರಂಗಭೂಮಿಯಲ್ಲಿಯೂ ವಿಲಾಸ (ಅಮೆಚೂರ್) ರಂಗಭೂಮಿಯಲ್ಲಿಯೂ ತನ್ನ ವೈಶಿಷ್ಟ್ಯವನ್ನು ಕಾಯ್ದುಕೊಂಡು ಬೆಳೆದು ಬಂದಿದೆ.

ಜನಪದ ರಂಗಭೂಮಿ ಬದಲಾಯಿಸಿ ಕನ್ನಡ ಜನಪದ ರಂಗಭೂಮಿಯ ಮೂಲ ಅಂಶಗಳೂ ದೈವಾರಾಧನೆಯಲ್ಲಿಯೇ ಕಂಡುಬರುತ್ತದೆ. ದೈವವನ್ನೋ ದೆವ್ವವನ್ನೋ ತೃಪ್ತಿಪಡಿಸಿ, ಅದರಲ್ಲಿ ತಮ್ಮ ಏಳಿಗೆಯನ್ನು ಕಂಡುಕೊಳ್ಳುತ್ತಿದ್ದ ಹಳ್ಳಿಗರ ಆರಾಧನೆಯಲ್ಲಿ ಆ ದೈವ ಅಥವಾ ದೆವ್ವದ ಅನುಕರಣ ಅನಿವಾರ್ಯವಾಯಿತು. ಇಂಥ ಅನುಕರಣ ಇಂದಿಗೂ ಕನ್ನಡನಾಡಿನ ಕರಾವಳಿಯ ಹಳ್ಳಿಗಳಲ್ಲಿರುವ ಭೂತಸ್ಥಾನಗಳಲ್ಲಿ ಕೋಲ ಮೊದಲಾದ ಉತ್ಸವಗಳಲ್ಲಿ ಕಂಡುಬರುತ್ತದೆ. ಈ ಅನುಕರಣ ಜನ ನಂಬುವಷ್ಟು ಪ್ರಭಾವಶಾಲಿಯಾಗುವಂತೆ ಮಾಡುವ ಸಲುವಾಗಿ ಬಳಸಿದ ಮುಖವರ್ಣಿಕೆ, ವೇಷಭೂಷಣ, ಅಲಂಕಾರ, ಆಯುಧಾದಿಗಳಿಂದ ಹಿಡಿದು, ಮಾತು ಗೀತೆ ಕುಣಿತಗಳವರೆಗೆ ಎಲ್ಲವೂ ನಾಟಕದ ಮೂಲ ಅಂಶಗಳೇ. ಕನ್ನಡನಾಡಿನಲ್ಲಿ ನಾಟಕದ ಮೂಲಪ್ರಕಾರವೆನಿಸುವ ವೈದ್ಯರ ಕುಣಿತ, ನಾಗನೃತ್ಯಗಳು ಇಂದಿಗೂ ಕರಾವಳಿಯ ಹಳ್ಳಿಗಳಲ್ಲಿ ಆಗಾಗ ನೋಡಸಿಗುತ್ತವೆ